Revised Common Lectionary (Complementary)
ರಚನೆಗಾರ: ದಾವೀದ.
28 ಯೆಹೋವನೇ, ನೀನೇ ನನ್ನ ಬಂಡೆ.
ಸಹಾಯಕ್ಕಾಗಿ ನಾನು ನಿನ್ನನ್ನು ಕೂಗಿಕೊಳ್ಳುತ್ತಿದ್ದೇನೆ.
ನನ್ನ ಪ್ರಾರ್ಥನೆಗಳಿಗೆ ಕಿವಿಗಳನ್ನು ಮುಚ್ಚಿಕೊಳ್ಳಬೇಡ.
ಇಲ್ಲವಾದರೆ ಸತ್ತು ಸಮಾಧಿಯಲ್ಲಿರುವವರಂತೆ
ಜನರು ನನ್ನನ್ನು ಪರಿಗಣಿಸುವರು.
2 ಮಹಾಪವಿತ್ರ ಸ್ಥಳದ ಕಡೆಗೆ ಕೈಯೆತ್ತಿ ಪ್ರಾರ್ಥಿಸುವೆನು.
ನಾನು ನಿನ್ನನ್ನು ಕೂಗಿಕೊಳ್ಳುವಾಗ ನನಗೆ ಕಿವಿಗೊಟ್ಟು ಕರುಣಿಸು.
3 ನನ್ನನ್ನು ಆ ಕೆಟ್ಟವರೊಂದಿಗೆ ಲೆಕ್ಕಿಸಬೇಡ.
ಅವರು ತಮ್ಮ ನೆರೆಯವರಿಗೆ “ಸಮಾಧಾನವಾಗಲಿ” ಎಂದು ಹರಸಿದರೂ ಅವರ ವಿರೋಧವಾಗಿ ಸಂಚುಗಳನ್ನು ಮಾಡುತ್ತಾರೆ.[a]
4 ಅವರು ನೆರೆಯವರಿಗೆ ಕೇಡುಗಳನ್ನು ಮಾಡುವರು.
ಆದ್ದರಿಂದ ಅವರಿಗೇ ಕೇಡಾಗುವಂತೆ ಮಾಡು.
ಅವರಿಗೆ ತಕ್ಕ ದಂಡನೆಯನ್ನು ಕೊಡು.
5 ಯೆಹೋವನ ಕಾರ್ಯಗಳನ್ನೂ ಆತನ ಕೈಕೆಲಸಗಳನ್ನೂ
ಕೆಡುಕರು ವಿವೇಚಿಸಿ ತಿಳಿದುಕೊಳ್ಳುವುದಿಲ್ಲ.
ಆದ್ದರಿಂದ ಆತನು ಅವರನ್ನು ದಂಡಿಸಿ
ನಿತ್ಯನಾಶಮಾಡುವನು.
6 ಯೆಹೋವನಿಗೆ ಸ್ತೋತ್ರವಾಗಲಿ!
ಆತನು ನನ್ನ ಪ್ರಾರ್ಥನೆಯನ್ನು ಕೇಳಿದ್ದಾನೆ.
7 ಯೆಹೋವನೇ ನನಗೆ ಬಲವೂ ಗುರಾಣಿಯೂ ಆಗಿದ್ದಾನೆ.
ನಾನು ಆತನಲ್ಲಿ ಭರವಸವಿಟ್ಟಿರುವುದರಿಂದ ಆತನು ನನಗೆ ಸಹಾಯಮಾಡಿದನು.
ಆದಕಾರಣ ನನ್ನ ಹೃದಯವು ಹರ್ಷಿಸುವುದು;
ನಾನು ಸ್ತುತಿಗೀತೆಗಳನ್ನು ಹಾಡುತ್ತಾ ಆತನನ್ನು ಕೊಂಡಾಡುವೆನು.
8 ಯೆಹೋವನು ತನ್ನ ಜನರಿಗೆ ಬಲವೂ
ತಾನು ಆರಿಸಿಕೊಂಡ ಅರಸನಿಗೆ ಆಶ್ರಯದುರ್ಗವೂ ಆಗಿದ್ದಾನೆ.
9 ಯೆಹೋವನೇ, ನಿನ್ನ ಜನರನ್ನು ರಕ್ಷಿಸು,
ನಿನ್ನ ಸ್ವಕೀಯ ಪ್ರಜೆಯನ್ನು ಆಶೀರ್ವದಿಸು!
ಅವರಿಗೆ ಕುರುಬನಾಗಿದ್ದು ಸದಾಕಾಲ ಅವರನ್ನು ಪರಿಪಾಲಿಸು.
ಸಂಸೋನನ ಮದುವೆ
14 ಸಂಸೋನನು ತಿಮ್ನಾ ನಗರಕ್ಕೆ ಹೋದನು. ಅವನು ಅಲ್ಲಿ ಒಬ್ಬ ಫಿಲಿಷ್ಟಿಯರ ತರುಣಿಯನ್ನು ನೋಡಿದನು. 2 ಅವನು ಮನೆಗೆ ಹಿಂದಿರುಗಿ ತನ್ನ ತಂದೆತಾಯಿಗಳಿಗೆ, “ನಾನು ತಿಮ್ನಾ ನಗರದಲ್ಲಿ ಒಬ್ಬ ಫಿಲಿಷ್ಟಿಯರ ಸ್ತ್ರೀಯನ್ನು ನೋಡಿದ್ದೇನೆ. ನೀವು ಅವಳನ್ನು ನನಗೆ ಮದುವೆ ಮಾಡಿಸಿಕೊಡಿ” ಎಂದು ಕೇಳಿದನು.
3 ಅವನ ತಂದೆತಾಯಿಗಳು, “ಇಸ್ರೇಲರಲ್ಲಿಯೇ ಒಬ್ಬ ಸ್ತ್ರೀ ಇದ್ದಾಳೆ. ನೀನು ಅವಳನ್ನು ಮದುವೆಯಾಗು. ನೀನು ಫಿಲಿಷ್ಟಯರ ಹೆಣ್ಣನ್ನು ಮದುವೆಯಾಗುವುದೇಕೆ? ಅವರು ಸುನ್ನತಿಯನ್ನು ಮಾಡಿಸಿಕೊಂಡವರಲ್ಲ” ಎಂದರು.
ಆದರೆ ಸಂಸೋನನು, “ನನಗೆ ಆಕೆಯೊಡನೇ ಮದುವೆಮಾಡಿಸಿ. ನಾನು ಆಕೆಯನ್ನೇ ಮೆಚ್ಚಿಕೊಂಡಿದ್ದೇನೆ” ಎಂದನು. 4 ಇದು ಯೆಹೋವನ ಚಿತ್ತವೆಂಬುದು ಸಂಸೋನನ ತಂದೆತಾಯಿಗಳಿಗೆ ತಿಳಿದಿರಲಿಲ್ಲ. ಫಿಲಿಷ್ಟಿಯರಿಗೆ ಕೇಡುಮಾಡಲು ಯೆಹೋವನು ತಕ್ಕಮಾರ್ಗವನ್ನು ಹುಡುಕುತ್ತಿದ್ದನು. ಆ ಸಮಯದಲ್ಲಿ ಫಿಲಿಷ್ಟಿಯರು ಇಸ್ರೇಲರ ಮೇಲೆ ಆಳ್ವಿಕೆ ಮಾಡುತ್ತಿದ್ದರು.
5 ಸಂಸೋನನು ತನ್ನ ತಂದೆತಾಯಿಗಳೊಂದಿಗೆ ತಿಮ್ನಾ ನಗರಕ್ಕೆ ಹೋದನು. ಅವರು ನಗರದ ಸಮೀಪದ ದ್ರಾಕ್ಷಿತೋಟಗಳವರೆಗೆ ಹೋದರು. ಅಲ್ಲಿ ಹಠಾತ್ತಾಗಿ ಒಂದು ಪ್ರಾಯದ ಸಿಂಹವು ಘರ್ಜಿಸಿ ಸಂಸೋನನ ಮೇಲೆರಗಿತು. 6 ಯೆಹೋವನ ಆತ್ಮವು ಸಂಸೋನನ ಮೇಲೆ ಪ್ರಬಲವಾಗಿ ಬಂದುದರಿಂದ ಅವನು ಬರಿಗೈಯಿಂದಲೇ ಹೋತದ ಮರಿಯನ್ನೋ ಎಂಬಂತೆ ಅದನ್ನು ಎರಡು ಹೋಳಾಗಿ ಸೀಳಿಬಿಟ್ಟನು. ಆದರೆ ಸಂಸೋನನು ಇದನ್ನು ತನ್ನ ತಂದೆತಾಯಿಗಳಿಗೆ ಹೇಳಲಿಲ್ಲ.
7 ಸಂಸೋನನು ನಗರಕ್ಕೆ ಹೋಗಿ ಆ ಫಿಲಿಷ್ಟಿಯ ಸ್ತ್ರೀಯೊಂದಿಗೆ ಮಾತನಾಡಿ ಅವಳನ್ನು ಇಷ್ಟಪಟ್ಟನು. 8 ಕೆಲವು ದಿನಗಳಾದ ಮೇಲೆ ಸಂಸೋನನು ಆ ಫಿಲಿಷ್ಟಿಯ ಸ್ತ್ರೀಯನ್ನು ಮದುವೆಯಾಗುವುದಕ್ಕೋಸ್ಕರ ತಿರುಗಿ ಹೋಗುತ್ತಿದ್ದನು. ದಾರಿಯಲ್ಲಿ ಅವನು ಆ ಸತ್ತಸಿಂಹವನ್ನು ನೋಡುವುದಕ್ಕೆ ಹೋದನು. ಅವನು ಆ ಸತ್ತಸಿಂಹದ ದೇಹದಲ್ಲಿ ಒಂದು ಜೇನುಗೂಡನ್ನು ಕಂಡನು. ಅದರಲ್ಲಿ ಜೇನುತುಪ್ಪವಿತ್ತು. 9 ಸಂಸೋನನು ತನ್ನ ಕೈಯಿಂದ ಸ್ವಲ್ಪ ಜೇನುತುಪ್ಪವನ್ನು ತೆಗೆದುಕೊಂಡು ಅದನ್ನು ತಿನ್ನುತ್ತಾ ನಡೆದನು. ತಂದೆತಾಯಿಗಳ ಹತ್ತಿರ ಬಂದು ಅವರಿಗೆ ಸ್ವಲ್ಪ ಜೇನುತುಪ್ಪವನ್ನು ಕೊಟ್ಟನು. ಅವರೂ ತಿಂದರು. ಆದರೆ ಆ ಸತ್ತಸಿಂಹದ ದೇಹದಿಂದ ಜೇನುತುಪ್ಪವನ್ನು ತೆಗೆದುಕೊಂಡ ಸಂಗತಿಯನ್ನು ಸಂಸೋನನು ಅವರಿಗೆ ಹೇಳಲಿಲ್ಲ.
10 ಸಂಸೋನನ ತಂದೆಯು ಈ ಫಿಲಿಷ್ಟಿಯ ಸ್ತ್ರೀಯನ್ನು ನೋಡುವುದಕ್ಕೆಂದು ಹೋದನು. ಮದುವೆಯ ಗಂಡು ಒಂದು ಔತಣವನ್ನು ಕೊಡುವ ಪದ್ಧತಿ ಇತ್ತು. ಆದ್ದರಿಂದ ಸಂಸೋನನು ಒಂದು ಔತಣವನ್ನು ಏರ್ಪಡಿಸಿದನು. 11 ಅವನು ಔತಣದ ಏರ್ಪಾಟು ಮಾಡಿದ್ದನ್ನು ಕಂಡು ಫಿಲಿಷ್ಟಿಯರು ಅವನ ಸಂಗಡ ಇರುವುದಕ್ಕೆ ಮೂವತ್ತು ಜನರನ್ನು ಕಳುಹಿಸಿದರು.
12 ಆಗ ಸಂಸೋನನು ಆ ಮೂವತ್ತು ಜನರಿಗೆ, “ನಾನು ನಿಮಗೊಂದು ಒಗಟನ್ನು ಹೇಳಬಯಸುತ್ತೇನೆ. ಈ ಔತಣವು ಏಳು ದಿನ ಮುಂದುವರಿಯುತ್ತದೆ. ಈ ಅವಧಿಯಲ್ಲಿ ನೀವು ಉತ್ತರವನ್ನು ಹೇಳುವ ಪ್ರಯತ್ನ ಮಾಡಿರಿ. ನೀವು ಈ ಅವಧಿಯಲ್ಲಿ ಒಗಟುಗಳ ಅರ್ಥ ಹೇಳಿದರೆ ನಾನು ನಿಮಗೆ ಮೂವತ್ತು ನಾರುಬಟ್ಟೆಯ ಅಂಗಿಗಳನ್ನು ಮತ್ತು ಮೂವತ್ತು ವಿಶೇಷ ವಸ್ತ್ರಗಳನ್ನು ಕೊಡುತ್ತೇನೆ. 13 ಆದರೆ ಉತ್ತರ ಹೇಳಲು ನಿಮಗೆ ಸಾಧ್ಯವಾಗದಿದ್ದರೆ ನೀವು ನನಗೆ ಮೂವತ್ತು ನಾರುಬಟ್ಟೆಯ ಅಂಗಿಗಳನ್ನು ಮತ್ತು ಮೂವತ್ತು ವಿಶೇಷ ವಸ್ತ್ರಗಳನ್ನು ಕೊಡಬೇಕು” ಎಂದು ಹೇಳಿದನು. ಆ ಮೂವತ್ತು ಜನರು, “ನಮಗೆ ನಿನ್ನ ಒಗಟನ್ನು ಹೇಳು, ನಾವು ಅದನ್ನು ಕೇಳಬಯಸುತ್ತೇವೆ” ಎಂದರು.
14 ಸಂಸೋನನು ಅವರಿಗೆ ಈ ಒಗಟನ್ನು ಹೇಳಿದನು:
“ತಿಂದುಬಿಡುವಂಥದರಿಂದ ತಿನ್ನತಕ್ಕದ್ದು ದೊರಕಿತು.
ಕ್ರೂರವಾದದ್ದರಿಂದ ಮಧುರವಾದದ್ದು ಸಿಕ್ಕಿತು.”
ಆ ಮೂವತ್ತು ಜನರು ಮೂರು ದಿನಗಳವರೆಗೆ ಒಗಟಿನ ಅರ್ಥವನ್ನು ಕಂಡುಹಿಡಿಯಲು ಪ್ರಯತ್ನ ಮಾಡಿದರು. ಆದರೆ ಅವರಿಂದ ಸಾಧ್ಯವಾಗಲಿಲ್ಲ.
15 ನಾಲ್ಕನೆಯ ದಿನ[a] ಅವರು ಸಂಸೋನನ ಹೆಂಡತಿಯಲ್ಲಿಗೆ ಬಂದು, “ನೀನು ನಮ್ಮನ್ನು ಬಡವರನ್ನಾಗಿ ಮಾಡಲು ಇಲ್ಲಿಗೆ ಕರೆದಿರುವಿಯಾ? ನೀನು ನಿನ್ನ ಗಂಡನನ್ನು ಮರುಳುಗೊಳಿಸಿ ನಮಗೆ ಒಗಟಿನ ಅರ್ಥವನ್ನು ಹೇಳುವಂತೆ ಮಾಡು. ನೀನು ನಮಗೆ ಒಗಟಿನ ಅರ್ಥವನ್ನು ಹೇಳದಿದ್ದರೆ ನಾವು ನಿನ್ನನ್ನು ಮತ್ತು ನಿನ್ನ ತಂದೆಯ ಮನೆಯಲ್ಲಿರುವ ಎಲ್ಲರನ್ನೂ ಸುಟ್ಟುಹಾಕುತ್ತೇವೆ” ಎಂದರು.
16 ಸಂಸೋನನ ಹೆಂಡತಿಯು ಅವನ ಹತ್ತಿರ ಹೋಗಿ ಅಳುವುದಕ್ಕೆ ಪ್ರಾರಂಭಿಸಿದಳು. ಅವಳು, “ನೀನು ನನ್ನನ್ನು ನಿಜವಾಗಿ ಪ್ರೀತಿಸುವುದಿಲ್ಲ, ನನ್ನನ್ನು ದ್ವೇಷಿಸುತ್ತಿ; ನೀನು ನಮ್ಮ ಜನರಿಗೆ ಒಗಟನ್ನು ಹೇಳಿರುವೆ; ಆದರೆ ಅದರ ಅರ್ಥವನ್ನು ನನಗೆ ಹೇಳಿಲ್ಲ” ಎಂದು ಗೋಳಾಡತೊಡಗಿದಳು.
ಅದಕ್ಕೆ ಸಂಸೋನನು, “ನಾನು ನನ್ನ ತಂದೆತಾಯಿಯರಿಗೆ ಅದನ್ನು ತಿಳಿಸಲಿಲ್ಲ, ನಿನಗೆ ತಿಳಿಸುವೆನೋ?” ಎಂದನು.
17 ಸಂಸೋನನ ಹೆಂಡತಿಯು ಔತಣದ ಏಳು ದಿನಗಳೆಲ್ಲಾ ಅಳುತ್ತಿದ್ದಳು. ಆದ್ದರಿಂದ ಏಳನೆಯ ದಿನ ಅವನು ಒಗಟಿನ ಅರ್ಥವನ್ನು ಅವಳಿಗೆ ಹೇಳಿದನು. ಅವಳು ಪೀಡಿಸಿದ್ದರಿಂದ ಅವನು ಹೇಳಿದನು. ಆಗ ಅವಳು ತನ್ನ ಜನರಲ್ಲಿಗೆ ಹೋಗಿ ಆ ಒಗಟಿನ ಅರ್ಥವನ್ನು ತಿಳಿಸಿದಳು.
18 ಔತಣದ ಏಳನೆಯ ದಿನ ಸೂರ್ಯಾಸ್ತಮಾನಕ್ಕಿಂತ ಮುಂಚೆ ಫಿಲಿಷ್ಟಿಯರಿಗೆ ಅರ್ಥ ಗೊತ್ತಾಯಿತು. ಅವರು ಸಂಸೋನನಲ್ಲಿಗೆ ಬಂದು ಅವನಿಗೆ,
“ಜೇನಿಗಿಂತ ಸಿಹಿಯಾದದ್ದು ಯಾವುದು;
ಸಿಂಹಕ್ಕಿಂತ ಕ್ರೂರವಾದದ್ದು ಯಾವುದು”
ಎಂದರು.
ಅದಕ್ಕೆ ಸಂಸೋನನು ಅವರಿಗೆ,
“ನೀವು ನನ್ನ ಹಸುವಿನಿಂದ ನೇಗಿಲು ಹೊಡೆಯದ್ದಿದ್ದರೆ
ಒಗಟನ್ನು ಬಿಡಿಸುವುದು ನಿಮ್ಮಿಂದ ಆಗುತ್ತಿರಲಿಲ್ಲ”
ಎಂದನು.
19 ಸಂಸೋನನು ಬಹಳ ಕೋಪಗೊಂಡನು. ಯೆಹೋವನ ಆತ್ಮವು ಸಂಸೋನನ ಮೇಲೆ ಪ್ರಬಲವಾಗಿ ಬಂತು. ಅವನು ಅಷ್ಕೆಲೋನ್ ನಗರಕ್ಕೆ ಧಾವಿಸಿದನು. ಆ ನಗರದಲ್ಲಿ ಅವನು ಮೂವತ್ತು ಜನ ಫಿಲಿಷ್ಟಿಯರನ್ನು ಕೊಂದನು. ಆಮೇಲೆ ಅವನು ಹೆಣಗಳ ಮೇಲಿನ ಎಲ್ಲ ಬಟ್ಟೆಗಳನ್ನೂ ಸ್ವತ್ತನ್ನೂ ಸುಲಿದುಕೊಂಡನು. ಆ ಬಟ್ಟೆಗಳನ್ನು ತಂದು ಒಗಟಿನ ಅರ್ಥ ಹೇಳಿದ ಜನರಿಗೆ ಕೊಟ್ಟನು. ಬಳಿಕ ಅವನು ತನ್ನ ತಂದೆಯ ಮನೆಗೆ ಹೋದನು. 20 ಸಂಸೋನನು ತನ್ನ ಹೆಂಡತಿಯನ್ನು ಕರೆದುಕೊಂಡು ಹೋಗಲಿಲ್ಲ. ಆಕೆಯ ತಂದೆ ಮೂವತ್ತು ಜನರಲ್ಲಿದ್ದ ಉತ್ತಮ ಪುರುಷನೊಬ್ಬನಿಗೆ ಅವಳನ್ನು ಕೊಟ್ಟು ಮದುವೆಮಾಡಿದನು.
ಪೌಲನ ಪ್ರಾರ್ಥನೆ
3 ನಾನು ನಿಮ್ಮನ್ನು ಜ್ಞಾಪಿಸಿಕೊಂಡಾಗಲೆಲ್ಲಾ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. 4 ನಾನು ನಿಮ್ಮೆಲ್ಲರಿಗಾಗಿ ಯಾವಾಗಲೂ ಆನಂದದಿಂದ ಪ್ರಾರ್ಥಿಸುತ್ತೇನೆ. 5 ನನ್ನ ಸುವಾರ್ತಾಸೇವೆಯಲ್ಲಿ ನೀವು ಪಾಲುಗಾರರಾದ ಕಾರಣ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ನೀವು ನಂಬಿಕೊಂಡಂದಿನಿಂದ ಇಲ್ಲಿಯವರೆಗೂ ನನಗೆ ಸಹಾಯ ಮಾಡಿದಿರಿ. 6 ದೇವರು ನಿಮ್ಮಲ್ಲಿ ಒಳ್ಳೆಯ ಕಾರ್ಯವನ್ನು ಆರಂಭಿಸಿ ನಡೆಸಿಕೊಂಡು ಬರುತ್ತಿದ್ದಾನೆ. ಯೇಸು ಕ್ರಿಸ್ತನು ಮತ್ತೆ ಬಂದಾಗ ದೇವರು ಆ ಕಾರ್ಯವನ್ನು ಸಂಪೂರ್ಣಗೊಳಿಸುವನೆಂದು ನನಗೆ ಭರವಸೆ ಇದೆ.
7 ನಿಮ್ಮೆಲ್ಲರ ವಿಷಯದಲ್ಲಿ ಈ ರೀತಿ ಆಲೋಚಿಸುವುದು ನ್ಯಾಯಬದ್ಧವಾದದ್ದೆಂದು ನನಗೆ ಗೊತ್ತಿದೆ. ನೀವು ನನ್ನ ಹೃದಯದಲ್ಲಿರುವುದರಿಂದ, ನಾನು ನಿಮಗೆ ತುಂಬ ಸಮೀಪಸ್ಥನಾಗಿದ್ದೇನೆಂದು ಭಾವಿಸುತ್ತೇನೆ. ನೀವೆಲ್ಲರೂ ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾದ ಕಾರಣ ನೀವು ನನಗೆ ಸಮೀಪರಾಗಿದ್ದೀರಿ. ನಾನು ಸೆರೆಯಲ್ಲಿರುವಾಗಲೂ ಸುವಾರ್ತೆಯನ್ನು ಪ್ರತಿಪಾದಿಸುವಾಗಲೂ ನಿರೂಪಿಸುವಾಗಲೂ ನೀವು ನನ್ನೊಂದಿಗೆ ದೇವರ ಕೃಪೆಯಲ್ಲಿ ಪಾಲುಗಾರರಾಗಿದ್ದೀರಿ. 8 ನಾನು ನಿಮ್ಮನ್ನು ನೋಡಲು ಬಹು ತವಕಪಡುತ್ತಿದ್ದೇನೆಂಬುದು ದೇವರಿಗೆ ಗೊತ್ತಿದೆ. ಯೇಸು ಕ್ರಿಸ್ತನಿಂದ ತೋರಿಬಂದ ಪ್ರೀತಿಯಿಂದ ನಾನು ನಿಮ್ಮೆಲ್ಲರನ್ನು ಪ್ರೀತಿಸುತ್ತೇನೆ.
9 ನಿಮಗಾಗಿ ನಾನು ಪ್ರಾರ್ಥಿಸುವುದೇನೆಂದರೆ:
ನೀವು ಪ್ರೀತಿಯಲ್ಲಿ ವೃದ್ಧಿಯಾಗುತ್ತಾ ಜ್ಞಾನವಂತರೂ ತಿಳುವಳಿಕೆಯುಳ್ಳವರೂ ಆಗಬೇಕು. 10 ಒಳಿತುಕೆಡಕುಗಳಿಗಿರುವ ವ್ಯತ್ಯಾಸವನ್ನು ಅರಿತುಕೊಂಡು ಒಳ್ಳೆಯದನ್ನೇ ಆರಿಸಿಕೊಳ್ಳುವಂಥವರಾಗಬೇಕು; ಕ್ರಿಸ್ತನ ಬರುವಿಕೆಯಲ್ಲಿ ನೀವು ಪರಿಶುದ್ಧರಾಗಿಯೂ ನಿರ್ದೋಷಿಗಳಾಗಿಯೂ ಇರಬೇಕು. 11 ಕ್ರಿಸ್ತನ ಸಹಾಯದಿಂದ ದೇವರಿಗೆ ಘನತೆಯನ್ನೂ ಸ್ತೋತ್ರವನ್ನೂ ಉಂಟುಮಾಡುವುದಕ್ಕಾಗಿ ನೀವು ಅನೇಕ ಕಾರ್ಯಗಳನ್ನು ಮಾಡುವಂಥವರಾಗಬೇಕು.
ಪೌಲನ ಕಷ್ಟಗಳು ಸುವಾರ್ತಾ ಸೇವೆಗೆ ಸಹಾಯಕವಾಗಿವೆ
12 ಸಹೋದರ ಸಹೋದರಿಯರೇ, ನನಗೆ ಸಂಭವಿಸಿದ ಕಷ್ಟಗಳು ಸುವಾರ್ತೆಯನ್ನು ಹಬ್ಬಿಸಲು ಸಹಾಯಕವಾದವೆಂದು ನಿಮಗೆ ತಿಳಿದಿರಬೇಕೆಂಬುದಾಗಿ ಅಪೇಕ್ಷಿಸುತ್ತೇನೆ. 13 ನಾನು ಏಕೆ ಸೆರೆಮನೆಯಲ್ಲಿದ್ದೇನೆಂಬುದು ಸ್ಪಷ್ಟವಾಗಿಯೇ ಇದೆ. ನಾನು ಕ್ರಿಸ್ತ ವಿಶ್ವಾಸಿಯಾಗಿರುವುದರಿಂದ ಸೆರೆಮನೆಯಲ್ಲಿದ್ದೇನೆ. ಇಲ್ಲಿಯ ಕಾವಲುಗಾರರಿಗೂ ಅರಮನೆಯ ಇತರ ಜನರೆಲ್ಲರಿಗೂ ಇದು ಗೊತ್ತಿದೆ. 14 ನಾನಿನ್ನೂ ಸೆರೆಮನೆಯಲ್ಲಿದ್ದೇನೆ. ಆದರೆ ನನ್ನ ಈ ಸ್ಥಿತಿಯಿಂದ ಅನೇಕ ವಿಶ್ವಾಸಿಗಳು ಪ್ರೋತ್ಸಾಹಿತರಾಗಿ ಕ್ರಿಸ್ತನ ವಿಷಯವಾದ ಸಂದೇಶವನ್ನು ಮತ್ತಷ್ಟು ಧೈರ್ಯದಿಂದ ಜನರಿಗೆ ಹೇಳುತ್ತಿದ್ದಾರೆ.
Kannada Holy Bible: Easy-to-Read Version. All rights reserved. © 1997 Bible League International