Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 17

ಪ್ರಾರ್ಥನೆ. ರಚನೆಗಾರ: ದಾವೀದ.

17 ಯೆಹೋವನೇ, ನ್ಯಾಯವಾದ ನನ್ನ ಪ್ರಾರ್ಥನೆಗೆ ಕಿವಿಗೊಡು.
    ನನ್ನ ಮೊರೆಯನ್ನು ಆಲೈಸು, ನನ್ನ ಯಥಾರ್ಥವಾದ ಪ್ರಾರ್ಥನೆಗೆ ಕಿವಿಗೊಡು.
ನನ್ನ ಕುರಿತಾಗಿ ನ್ಯಾಯವಾದ ತೀರ್ಪು ನಿನ್ನಿಂದಲೇ ಬರಲಿ.
    ನೀನು ಸತ್ಯವನ್ನು ನೋಡಬಲ್ಲಾತನಾಗಿರುವೆ.
ನೀನು ನನ್ನ ಅಂತರಾಳವನ್ನು ರಾತ್ರಿಯೆಲ್ಲಾ ಪರೀಕ್ಷಿಸಿರುವೆ.
    ನೀನು ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದಾಗ
ನನ್ನಲ್ಲಿ ಯಾವ ದೋಷವೂ ಕಂಡುಬರಲಿಲ್ಲ.
    ನಾನು ಯಾವ ತಪ್ಪನ್ನೂ ಮಾಡಿರಲಿಲ್ಲ.
ನಿನ್ನ ಆಜ್ಞೆಗಳಿಗೆ ವಿಧೇಯನಾಗಲು
    ನನ್ನಿಂದಾದಷ್ಟು ಪ್ರಯತ್ನಿಸಿದ್ದೇನೆ.
ನಿನ್ನ ಜೀವಮಾರ್ಗದಲ್ಲೇ ಹೆಜ್ಜೆಯಿಡುತ್ತಾ ನಡೆಯುತ್ತಿದ್ದೇನೆ.
    ನನ್ನ ಪಾದವು ತಪ್ಪು ದಾರಿಗೆ ಹೋಗಲಿಲ್ಲ.
ದೇವರೇ, ನಾನು ನಿನ್ನನ್ನು ಕರೆದಾಗಲ್ಲೆಲ್ಲಾ, ನೀನು ನನಗೆ ಉತ್ತರಿಸಿದೆ.
    ಆದ್ದರಿಂದ ಈಗಲೂ ನನಗೆ ಕಿವಿಗೊಡು.
ದೇವರೇ, ನಿನ್ನಲ್ಲಿ ಭರವಸೆಯಿಟ್ಟಿರುವ ಭಕ್ತರಿಗೆ
    ನೀನು ಸಹಾಯಮಾಡುವೆ;
ಅವರು ನಿನ್ನ ಬಲಗಡೆಯಲ್ಲಿ ಸುರಕ್ಷಿತವಾಗಿರುವರು.
    ಆದ್ದರಿಂದ ನಿನ್ನ ಭಕ್ತನಾದ ನನ್ನ ಪ್ರಾರ್ಥನೆಗೂ ಕಿವಿಗೊಡು.
ನಿನ್ನ ಕಣ್ಣಿನ ಗುಡ್ಡೆಯಂತೆ ನನ್ನನ್ನು ಸಂರಕ್ಷಿಸು.
    ನಿನ್ನ ರೆಕ್ಕೆಗಳ ಮರೆಯಲ್ಲಿ ನನ್ನನ್ನು ಅಡಗಿಸಿಕೊ.
ಯೆಹೋವನೇ, ನನ್ನನ್ನು ನಾಶಮಾಡಬೇಕೆಂದಿರುವ ದುಷ್ಟರಿಂದ ನನ್ನನ್ನು ತಪ್ಪಿಸಿ ಕಾಪಾಡು.
    ನನಗೆ ಕೇಡುಮಾಡಬೇಕೆಂದು ಸುತ್ತುಗಟ್ಟಿರುವ ಜನರಿಂದ ನನ್ನನ್ನು ಸಂರಕ್ಷಿಸು.
10 ಆ ದುಷ್ಟರು ಗರ್ವಿಷ್ಠರಾಗಿದ್ದಾರೆ.
    ಅವರು ಜಂಬಕೊಚ್ಚಿಕೊಳ್ಳುತ್ತಾರೆ.
11 ಅವರು ನನ್ನನ್ನು ಬೆನ್ನಟ್ಟಿ ಬಂದು ಸುತ್ತುಗಟ್ಟಿದ್ದಾರೆ;
    ಆಕ್ರಮಣಮಾಡಲು ಸಿದ್ಧರಾಗಿದ್ದಾರೆ.[a]
12 ಅವರು ಬೇಟೆಗಾಗಿ ಕಾಯುತ್ತಿರುವ ಸಿಂಹಗಳಂತಿದ್ದಾರೆ;
    ಅಡಗಿಕೊಂಡು ಹೊಂಚುಹಾಕುತ್ತಿರುವ ಪ್ರಾಯದ ಸಿಂಹಗಳಂತಿದ್ದಾರೆ.

13 ಯೆಹೋವನೇ, ಎದ್ದೇಳು,[b] ವೈರಿಗಳ ಬಳಿಗೆ ಹೋಗು.
    ಅವರನ್ನು ಶರಣಾಗತರನ್ನಾಗಿ ಮಾಡು.
    ನಿನ್ನ ಖಡ್ಗವನ್ನು ಪ್ರಯೋಗಿಸಿ ದುಷ್ಟರಿಂದ ನನ್ನನ್ನು ರಕ್ಷಿಸು.
14 ಯೆಹೋವನೇ, ಈ ಲೋಕಕ್ಕಾಗಿಯೇ ಜೀವಿಸುವ ಜನರಿಂದ
    ನನ್ನನ್ನು ತಪ್ಪಿಸಿ ಕಾಪಾಡು.
ನಿನ್ನ ಸಹಾಯಕ್ಕಾಗಿ ಮೊರೆಯಿಡುವ ಅನೇಕರು ಕೊರತೆಯಲ್ಲಿದ್ದಾರೆ.
    ಅವರಿಗೆ ಆಹಾರವನ್ನು ಹೇರಳವಾಗಿ ದಯಪಾಲಿಸು.
    ಅವರ ಮಕ್ಕಳಿಗೂ ಮೊಮ್ಮಕ್ಕಳಿಗೂ ಬೇಕಾದದ್ದನ್ನೆಲ್ಲಾ ಒದಗಿಸಿಕೊಡು.

15 ನಾನು ನ್ಯಾಯಕ್ಕಾಗಿ ಪ್ರಾರ್ಥಿಸಿದ್ದರಿಂದ ನನಗೆ ನಿನ್ನ ಮುಖದ ದರ್ಶನವಾಗುವುದು.
    ಎಚ್ಚೆತ್ತಾಗ ನಿನ್ನ ಸ್ವರೂಪ ದರ್ಶನದಿಂದ ತೃಪ್ತನಾಗಿರುವೆನು.

ಯೆರೆಮೀಯ 17:5-18

ಜನರಲ್ಲಿ ನಂಬಿಕೆ, ದೇವರಲ್ಲಿ ನಂಬಿಕೆ

ಯೆಹೋವನು ಹೀಗೆ ಹೇಳಿದನು:
“ಕೇವಲ ಜನರನ್ನು ನಂಬಿದವರಿಗೆ ಕೇಡಾಗುವುದು.
    ಮನುಷ್ಯರ ಬಲವನ್ನು ಆತುಕೊಂಡವರಿಗೆ ಕೇಡಾಗುವುದು.
ಯಾಕೆಂದರೆ ಅಂಥವರು ಯೆಹೋವನಲ್ಲಿ ನಂಬಿಕೆ ಇಡುವದನ್ನು ಬಿಟ್ಟುಬಿಟ್ಟಿರುತ್ತಾರೆ.
ಆ ಜನರು ನಿರ್ಜನವಾದ ಪ್ರದೇಶದಲ್ಲಿದ್ದ,
    ಸುಡುವ ಬರಡು ಭೂಮಿಯಲ್ಲಿದ್ದ, ಬಂಜರು ಭೂಮಿಯಲ್ಲಿ ಬೆಳೆದ,
ದೇವರು ನೀಡಬಹುದಾದ ಒಳ್ಳೆಯ ವಸ್ತುಗಳ ಬಗ್ಗೆ
    ಏನೂ ಅರಿಯದ ಒಂದು ಪೊದೆಯಂತಿರುತ್ತಾರೆ.
ಆದರೆ ಯೆಹೋವನಲ್ಲಿ ನಂಬಿಕೆಯುಳ್ಳ ಮನುಷ್ಯನು ದೇವರ ಕೃಪೆಗೆ ಪಾತ್ರನಾಗುವನು.
    ಏಕೆಂದರೆ ತಾನು ನಂಬಿಕೆಯುಳ್ಳವನೆಂದು ಅವನು ಯೆಹೋವನಿಗೆ ತೋರಿಸಿಕೊಡುವನು.
ಆ ಮನುಷ್ಯನು ನೀರಿನ ಸಮೀಪದಲ್ಲಿ ನೆಟ್ಟಿರುವ,
    ಆಳವಾಗಿ ಬೇರೂರಿ ನೀರಿನ ಸೆಲೆಗಳನ್ನು ತಲುಪಿರುವ,
ಉಷ್ಣಕ್ಕೆ ಹೆದರದ, ಯಾವಾಗಲೂ
    ಹಸಿರೆಲೆಗಳಿಂದ ಸೊಂಪಾದ,
ಮಳೆ ಬೀಳದ ವರ್ಷದಲ್ಲಿಯೂ ಚಿಂತಿಸದ,
    ಯಾವಾಗಲೂ ಫಲಭರಿತವಾಗಿರುವ ಮರದಂತೆ ಇರುವನು.

“ಮನುಷ್ಯನ ಬುದ್ಧಿಯು ವಂಚನೆ ಮಾಡುತ್ತದೆ.
    ಆ ಬುದ್ಧಿಯು ಅತೀ ವ್ಯಾಧಿಗ್ರಸ್ತವಾಗಿರಬಹುದು,
    ಯಾರಿಂದಲೂ ಬುದ್ಧಿಯ ನಿಜವಾದ ಸ್ವರೂಪವನ್ನರಿಯಲಾಗುವದಿಲ್ಲ.
10 ನಾನೇ ಯೆಹೋವನು,
    ನಾನು ಮನುಷ್ಯನ ಹೃದಯದ ಆಳವನ್ನು ನೋಡಬಲ್ಲೆ,
ಮನುಷ್ಯನ ಬುದ್ಧಿಯನ್ನು ಪರೀಕ್ಷಿಸಬಲ್ಲೆ.
ಆದ್ದರಿಂದ ಪ್ರತಿಯೊಬ್ಬ ಮನುಷ್ಯನಿಗೆ ತಕ್ಕ ಪ್ರತಿಫಲವನ್ನು ನಾನು ನಿರ್ಧರಿಸಬಲ್ಲೆ.
    ಪ್ರತಿಯೊಬ್ಬ ಮನುಷ್ಯನಿಗೆ ಅವನ ಕೆಲಸಕ್ಕೆ ತಕ್ಕಂತೆ ಸರಿಯಾಗಿ ಫಲವನ್ನು ಕೊಡುವೆನು.
11 ಕೆಲವು ಸಲ ಪಕ್ಷಿಯು
    ತಾನು ಇಡದ ಮೊಟ್ಟೆಗೆ ಕಾವು ಕೊಡುತ್ತದೆ.
ಹಣಕ್ಕಾಗಿ ಮೋಸಮಾಡುವ ಮನುಷ್ಯನು
    ಆ ಪಕ್ಷಿಯಂತಿರುವನು,
ಅವನು ತನ್ನ ಮಧ್ಯಪ್ರಾಯದಲ್ಲಿ
    ತನ್ನ ಹಣವನ್ನೆಲ್ಲಾ ಕಳೆದುಕೊಳ್ಳುವನು.
ಅವನು ತನ್ನ ಅಂತ್ಯಕಾಲದಲ್ಲಿ
    ಮೂರ್ಖನಾಗಿ ಕಂಡುಬರುವನು.”

12 ಆದಿಯಿಂದ ನಮ್ಮ ಪವಿತ್ರಾಲಯವು[a]
    ಯೆಹೋವನ ಮಹತ್ವದ ಸಿಂಹಾಸವಾಗಿದೆ.
    ಅದೊಂದು ಬಹಳ ಪ್ರಮುಖವಾದ ಸ್ಥಳವಾಗಿದೆ.
13 ಯೆಹೋವನೇ, ನೀನು ಇಸ್ರೇಲಿನ ಆಶಾಕಿರಣ,
    ಯೆಹೋವನೇ, ನೀನು ಜೀವಜಲದ ಬುಗ್ಗೆಯಂತಿರುವೆ,
ಯಾರಾದರೂ ಯೆಹೋವನ ಅನುಸರಣೆಯನ್ನು ತ್ಯಜಿಸಿದರೆ
    ಅವರ ಜೀವನ ಬಹಳ ಮೊಟಕಾಗುತ್ತದೆ.

ಯೆರೆಮೀಯನ ಮೂರನೆ ದೂರು

14 ಯೆಹೋವನೇ, ನೀನು ನನ್ನನ್ನು ವಾಸಿಮಾಡಿದರೆ
    ನಿಜವಾಗಿಯೂ ನಾನು ಗುಣಹೊಂದುತ್ತೇನೆ.
ನನ್ನನ್ನು ರಕ್ಷಿಸು,
    ಆಗ ನಿಜವಾಗಿಯೂ ರಕ್ಷಣೆ ಹೊಂದಿದವನಾಗುವೆನು.
ಯೆಹೋವನೇ, ನಾನು ನಿನ್ನನ್ನು ಸ್ತುತಿಸುತ್ತೇನೆ.
15 ಯೆಹೂದದ ಜನರು ನನಗೆ ಪ್ರಶ್ನೆಗಳನ್ನು ಕೇಳುತ್ತಿರುತ್ತಾರೆ.
    “ಯೆರೆಮೀಯನೇ, ಯೆಹೋವನ ಸಂದೇಶ ಎಲ್ಲಿದೆ?
    ಆ ಸಂದೇಶವು ಸತ್ಯವಾಗುವುದನ್ನು ನಾವು ಈಗಲೇ ನೋಡೋಣ” ಎಂದು ಅವರನ್ನುತ್ತಾರೆ.

16 ಯೆಹೋವನೇ, ನಾನು ನಿನ್ನನ್ನು ಬಿಟ್ಟು ಓಡಿಹೋಗಲಿಲ್ಲ,
    ನಾನು ನಿನ್ನನ್ನು ಅನುಸರಿಸಿದೆನು.
    ನೀನು ಹೇಳಿದಂತೆ ನಾನು ಕುರುಬನಾದೆ.[b]
ಆ ಭಯಂಕರ ದಿನವು ಬರಲೆಂದು ನಾನು ಬಯಸಲಿಲ್ಲ.[c]
    ಯೆಹೋವನೇ, ನಾನು ಹೇಳಿದ್ದೆಲ್ಲ ನಿನಗೆ ಗೊತ್ತಿದೆ.
    ಈಗ ನಡೆಯುತ್ತಿರುವುದನ್ನೆಲ್ಲಾ ನೀನು ನೋಡುತ್ತಿರುವೆ.
17 ಯೆಹೋವನೇ, ನನ್ನನ್ನು ಹಾಳುಮಾಡಬೇಡ.
    ಕಷ್ಟ ಕಾಲದಲ್ಲಿ ನಾನು ನಿನ್ನನ್ನೇ ಅವಲಂಭಿಸಿರುತ್ತೇನೆ.
18 ಜನರು ನನ್ನನ್ನು ಹಿಂಸಿಸುತ್ತಿದ್ದಾರೆ.
ಆ ಜನರು ಲಜ್ಜೆಪಡುವಂತೆ ಮಾಡು.
    ನನ್ನನ್ನು ನಿರಾಶೆಗೊಳಿಸಬೇಡ.
ಆ ಜನರಿಗೆ ಭೀತಿಯುಂಟಾಗಲಿ,
    ಆದರೆ ನನಗೆ ಭಯವಾಗುವಂತೆ ಮಾಡಬೇಡ.
ನನ್ನ ವೈರಿಗಳಿಗೆ ಭಯಂಕರವಾದ ವಿನಾಶದ ದಿನವು ಬರುವಂತೆ ಮಾಡು.
    ಅವರನ್ನು ಮುರಿದುಬಿಡು, ಮತ್ತೆಮತ್ತೆ ಮುರಿದುಬಿಡು.

ಮತ್ತಾಯ 12:22-32

ಯೇಸುವಿನ ಅಧಿಕಾರ ದೇವರದೇ

(ಮಾರ್ಕ 3:20-30; ಲೂಕ 11:14-23; 12:10)

22 ಆಗ ಕೆಲವು ಜನರು ಒಬ್ಬನನ್ನು ಯೇಸುವಿನ ಬಳಿಗೆ ತಂದರು. ಅವನಲ್ಲಿ ದೆವ್ವವಿದ್ದುದರಿಂದ ಅವನು ಕುರುಡನಾಗಿದ್ದನು ಮತ್ತು ಮೂಕನಾಗಿದ್ದನು. ಯೇಸು ಆ ಮನುಷ್ಯನನ್ನು ಗುಣಪಡಿಸಿದ್ದರಿಂದ ಮಾತನಾಡುವುದಕ್ಕೂ ನೋಡುವುದಕ್ಕೂ ಸಾಧ್ಯವಾಯಿತು. 23 ಜನರೆಲ್ಲರೂ ಬೆರಗಾದರು. “ದೇವರು ಕಳುಹಿಸಿಕೊಡುವುದಾಗಿ ನಮಗೆ ವಾಗ್ದಾನಮಾಡಿದ್ದ ದಾವೀದನ ಕುಮಾರನು ಈತನೇ (ಯೇಸು) ಆಗಿರಬಹುದು” ಎಂದು ಮಾತಾಡಿಕೊಂಡರು.

24 ಜನರು ಹೀಗೆ ಮಾತಾಡುತ್ತಿದ್ದುದನ್ನು ಕೇಳಿಸಿಕೊಂಡ ಫರಿಸಾಯರು, “ಯೇಸು ಬೆಲ್ಜೆಬೂಲನ ಶಕ್ತಿಯ ಮೂಲಕ ಜನರನ್ನು ದೆವ್ವಗಳಿಂದ ಬಿಡಿಸುತ್ತಾನೆ. ಬೆಲ್ಜೆಬೂಲನು ದೆವ್ವಗಳ ಅಧಿಪತಿ” ಎಂದರು.

25 ಫರಿಸಾಯರು ಆಲೋಚಿಸುತ್ತಿದ್ದ ಸಂಗತಿಗಳು ಯೇಸುವಿಗೆ ತಿಳಿದಿದ್ದವು. ಆದ್ದರಿಂದ ಯೇಸು ಅವರಿಗೆ, “ತನಗೆ ವಿರೋಧವಾಗಿ ತಾನೇ ಹೋರಾಡುವ ರಾಜ್ಯವು ನಾಶವಾಗುವುದು. ಅಂತಃಕಲಹದಿಂದ ಒಡೆದುಹೋಗಿರುವ ಪ್ರತಿಯೊಂದು ರಾಜ್ಯವು ಸ್ಥಿರವಾಗಿರುವುದಿಲ್ಲ. ಭೇದಭಾವ ಹೊಂದಿರುವ ಪ್ರತಿಯೊಂದು ಕುಟುಂಬವು ಅಭಿವೃದ್ಧಿಯಾಗುವುದಿಲ್ಲ. 26 ಹೀಗಿರಲು ಸೈತಾನನು ತನ್ನ ಸ್ವಂತ ದೆವ್ವಗಳನ್ನೇ ಹೊರಗೆ ಓಡಿಸಿದರೆ ಅವನು ತನ್ನಲ್ಲಿಯೇ ಒಡಕನ್ನು ಮಾಡಿದಂತಾಯಿತು. ಆಗ ಅವನು ಮತ್ತು ಅವನ ರಾಜ್ಯವು ಸ್ಥಿರವಾಗಿರಲು ಹೇಗೆ ಸಾಧ್ಯ? 27 ನಾನು ಸೈತಾನನ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತೇನೆ ಎಂದು ನೀವು ಹೇಳುತ್ತೀರಿ. ಅದು ನಿಜವಾದರೆ, ನಿಮ್ಮ ಜನರು ಯಾವ ಶಕ್ತಿಯಿಂದ ದೆವ್ವಗಳನ್ನು ಬಿಡಿಸುತ್ತಾರೆ? ಆದ್ದರಿಂದ ನಿಮ್ಮ ಸ್ವಂತ ಜನರೇ ನಿಮ್ಮನ್ನು ತಪ್ಪಿತಸ್ಥರೆಂದು ನಿರೂಪಿಸುತ್ತಾರೆ. 28 ಆದರೆ ನಾನು ದೇವರಾತ್ಮನ ಶಕ್ತಿಯ ಮೂಲಕ ದೆವ್ವಗಳನ್ನು ಬಿಡಿಸುತ್ತೇನೆ. ದೇವರ ರಾಜ್ಯವು ನಿಮ್ಮ ಬಳಿಗೆ ಬಂದಿದೆ ಎಂಬುದನ್ನು ಇದು ತೋರ್ಪಡಿಸುತ್ತದೆ. 29 ಒಬ್ಬ ವ್ಯಕ್ತಿಯು ಬಲಿಷ್ಠನೊಬ್ಬನ ಮನೆಗೆ ನುಗ್ಗಿ ಅವನ ಸ್ವತ್ತನ್ನು ಕದಿಯಬೇಕಿದ್ದರೆ, ಮೊದಲು ಅವನು ಆ ಬಲಿಷ್ಠನನ್ನು ಕಟ್ಟಿಹಾಕಬೇಕು. ಆಗ ಆ ಬಲಿಷ್ಠನ ಮನೆಯ ಸ್ವತ್ತನ್ನು ಕದಿಯಲು ಅವನಿಗೆ ಸಾಧ್ಯವಾಗುವುದು. 30 ನನ್ನೊಂದಿಗೆ ಇಲ್ಲದವನು ನನಗೆ ವಿರೋಧಿಯಾಗಿದ್ದಾನೆ. ನನ್ನೊಂದಿಗೆ ಶೇಖರಿಸದವನು ಚದರಿಸುವವನಾಗಿದ್ದಾನೆ.

31 “ಆದ್ದರಿಂದ ನಾನು ನಿಮಗೆ ಹೇಳುವುದೇನೆಂದರೆ, ಜನರು ಮಾಡುವ ಪ್ರತಿಯೊಂದು ಪಾಪಕ್ಕೂ ಹೇಳುವ ಪ್ರತಿಯೊಂದು ದೂಷಣೆ ಮಾತಿಗೂ ಕ್ಷಮಾಪಣೆ ಉಂಟು. ಆದರೆ ಪವಿತ್ರಾತ್ಮ ದೂಷಣೆಗೆ ಕ್ಷಮಾಪಣೆ ಇಲ್ಲವೇ ಇಲ್ಲ. 32 ಮನುಷ್ಯಕುಮಾರನಿಗೆ ವಿರೋಧವಾಗಿ ಮಾತನಾಡಿದರೂ ಅದಕ್ಕೆ ಕ್ಷಮಾಪಣೆ ಉಂಟು. ಆದರೆ ಪವಿತ್ರಾತ್ಮನಿಗೆ ವಿರೋಧವಾಗಿ ಮಾತನಾಡಿದರೆ ಅದಕ್ಕೆ ಕ್ಷಮಾಪಣೆಯು ಇಹದಲ್ಲಾಗಲಿ ಪರದಲ್ಲಾಗಲಿ ಇಲ್ಲವೇ ಇಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International