Revised Common Lectionary (Complementary)
65 ಯೆಹೋವನೇ, ನಿನ್ನ ವಾಗ್ದಾನಕ್ಕೆ ತಕ್ಕಂತೆ
ನಿನ್ನ ಸೇವಕನಿಗೆ ಒಳ್ಳೆಯದನ್ನೇ ಮಾಡಿರುವೆ.
66 ಜ್ಞಾನದ ನಿರ್ಧಾರಗಳನ್ನು ಮಾಡಲು ನನಗೆ ಜ್ಞಾನವನ್ನು ಕೊಡು.
ನಾನು ನಿನ್ನ ಆಜ್ಞೆಗಳಲ್ಲಿ ಭರವಸವಿಟ್ಟಿರುವೆ.
67 ನಾನು ಸಂಕಟಪಡುವುದಕ್ಕಿಂತ ಮೊದಲು ಅನೇಕ ಕೆಟ್ಟಕಾರ್ಯಗಳನ್ನು ಮಾಡಿದೆ;
ಈಗಲಾದರೋ ನಾನು ನಿನ್ನ ಆಜ್ಞೆಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು.
68 ನೀನು ಒಳ್ಳೆಯವನೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ ಆಗಿರುವೆ.
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
69 ಗರ್ವಿಷ್ಠರು ನನಗೆ ವಿರೋಧವಾಗಿ ಸುಳ್ಳು ಹೇಳಿದರು.
ನಾನಾದರೋ ನಿನ್ನ ಆಜ್ಞೆಗಳಿಗೆ ಪೂರ್ಣಹೃದಯದಿಂದ ವಿಧೇಯನಾಗಿರುವೆ.
70 ಅವರು ಬಹು ಮೂಢರು.
ನಾನಾದರೋ ನಿನ್ನ ಉಪದೇಶಗಳನ್ನು ಕಲಿಯುವುದರಲ್ಲಿ ಆನಂದಿಸುವೆ.
71 ನಿನ್ನ ಕಟ್ಟಳೆಗಳನ್ನು ಕಲಿಯಲು
ನಾನು ಪಟ್ಟ ಪ್ರಯಾಸವು ಒಳ್ಳೆಯದಾಯಿತು.
72 ನಿನ್ನ ಉಪದೇಶಗಳು ನನಗೆ ಒಳ್ಳೆಯದಾಗಿವೆ.
ಅವು ಹತ್ತುಸಾವಿರ ಬೆಳ್ಳಿಬಂಗಾರಗಳ ನಾಣ್ಯಗಳಿಗಿಂತಲೂ ಅಮೂಲ್ಯವಾಗಿವೆ.
ದೋಷಪರಿಹಾರಕ ದಿನ
16 ಆರೋನನ ಇಬ್ಬರು ಪುತ್ರರು ಯೆಹೋವನಿಗೆ ಆತನು ಆಜ್ಞಾಪಿಸದೇ ಇದ್ದ ಧೂಪವನ್ನು ಅರ್ಪಿಸುತ್ತಿದ್ದಾಗ ಸತ್ತರು. ಅದಾದ ನಂತರ ಯೆಹೋವನು ಮೋಶೆಯೊಡನೆ ಮಾತಾಡಿದನು. 2 ಆತನು ಹೇಳಿದ್ದೇನೆಂದರೆ: “ನಿನ್ನ ಸಹೋದರನಾದ ಆರೋನನೊಡನೆ ಮಾತಾಡು. ಅವನು ತನಗೆ ಇಷ್ಟಬಂದಾಗಲೆಲ್ಲಾ ತೆರೆಯ ಹಿಂದಿರುವ ಮಹಾ ಪವಿತ್ರಸ್ಥಳದೊಳಕ್ಕೆ ಹೋಗಬಾರದೆಂದು ಅವನಿಗೆ ಹೇಳು. ಆ ತೆರೆಯ ಹಿಂದೆ ಇರುವ ಕೋಣೆಯೊಳಗೆ ಪವಿತ್ರ ಪೆಟ್ಟಿಗೆಯು ಇರುತ್ತದೆ. ಕೃಪಾಸನವು ಪವಿತ್ರ ಪೆಟ್ಟಿಗೆಯ ಮೇಲ್ಭಾಗದಲ್ಲಿರುತ್ತದೆ. ಕೃಪಾಸನದ ಮೇಲೆ ಮೇಘದಲ್ಲಿ ನಾನು ಕಾಣಿಸಿಕೊಳ್ಳುತ್ತೇನೆ. ಆರೋನನು ಆ ಕೋಣೆಯೊಳಗೆ ಹೋದರೆ ಸಾಯುವನು!
3 “ದೋಷಪರಿಹಾರಕ ದಿನದಲ್ಲಿ ಆರೋನನು ಮಹಾ ಪವಿತ್ರಸ್ಥಳದೊಳಗೆ ಪ್ರವೇಶಿಸುವ ಮೊದಲು ಪಾಪಪರಿಹಾರಕ ಯಜ್ಞವಾಗಿ ಹೋರಿಯನ್ನೂ ಸರ್ವಾಂಗಹೋಮವಾಗಿ ಟಗರನ್ನೂ ಅರ್ಪಿಸಬೇಕು. 4 ಆರೋನನು ತನ್ನ ಪೂರ್ಣಶರೀರವನ್ನು ನೀರಿನಿಂದ ತೊಳೆದುಕೊಳ್ಳಬೇಕು. ಬಳಿಕ ಅವನು ಈ ಬಟ್ಟೆಗಳನ್ನು ಹಾಕಿಕೊಳ್ಳಬೇಕು. ಆರೋನನು ಪವಿತ್ರ ನಾರಿನ ನಿಲುವಂಗಿಯನ್ನೂ ನಾರಿನ ಚಡ್ಡಿಯನ್ನೂ ಧರಿಸಿಕೊಂಡಿರಬೇಕು. ಅವನು ನಾರಿನ ನಡುಕಟ್ಟನ್ನು ಕಟ್ಟಿಕೊಳ್ಳಬೇಕು; ನಾರಿನ ಮುಂಡಾಸವನ್ನು ಇಟ್ಟುಕೊಳ್ಳಬೇಕು. ಇವುಗಳು ಪವಿತ್ರವಾದವುಗಳಾಗಿವೆ.
5 “ಆರೋನನು ಇಸ್ರೇಲರಿಂದ ಪಾಪಪರಿಹಾರಕ ಯಜ್ಞಕ್ಕಾಗಿ ಎರಡು ಹೋತಗಳನ್ನು ಮತ್ತು ಸರ್ವಾಂಗಹೋಮಕ್ಕಾಗಿ ಒಂದು ಟಗರನ್ನು ತೆಗೆದುಕೊಳ್ಳಬೇಕು.
20 “ಹೀಗೆ ಆರೋನನು ಮಹಾ ಪವಿತ್ರಸ್ಥಳವನ್ನೂ ದೇವದರ್ಶನಗುಡಾರವನ್ನೂ ಯಜ್ಞವೇದಿಕೆಯನ್ನೂ ಶುದ್ಧೀಕರಿಸುವನು. ಬಳಿಕ ಆರೋನನು ಜೀವಂತವಾಗಿರುವ ಹೋತವನ್ನು ಯೆಹೋವನ ಬಳಿಗೆ ತರುವನು. 21 ಆರೋನನು ಸಜೀವವಾದ ಹೋತದ ತಲೆಯ ಮೇಲೆ ತನ್ನ ಎರಡು ಕೈಗಳನ್ನಿಟ್ಟು ಇಸ್ರೇಲರು ಮಾಡಿದ ಪಾಪಗಳನ್ನು ಮತ್ತು ದ್ರೋಹಗಳನ್ನು ಅರಿಕೆಮಾಡುವನು. ಹೀಗೆ ಆರೋನನು ಜನರ ಪಾಪಗಳನ್ನು ಹೋತದ ತಲೆಯ ಮೇಲೆ ಹೊರಿಸುವನು. ಬಳಿಕ ಅವನು ಹೋತವನ್ನು ಮರುಭೂಮಿಗೆ ಕಳುಹಿಸಿಬಿಡುವನು. ಒಬ್ಬ ಮನುಷ್ಯನು ಹೋತವನ್ನು ನಡಿಸಿಕೊಂಡು ಹೋಗಲು ಸಿದ್ಧನಾಗಿ ನಿಂತಿರುವನು. 22 ಹೀಗೆ ಹೋತವು ಜನರ ಪಾಪಗಳನ್ನು ಹೊತ್ತುಕೊಂಡು ಬರಿದಾದ ಮರುಭೂಮಿಗೆ ಹೋಗುವುದು. ಹೋತವನ್ನು ನಡಿಸಿಕೊಂಡು ಹೋಗುವ ಮನುಷ್ಯನು ಮರುಭೂಮಿಯಲ್ಲಿ ಅದನ್ನು ಬಿಟ್ಟುಬಿಡುವನು.
23 “ಬಳಿಕ ಆರೋನನು ದೇವದರ್ಶನಗುಡಾರವನ್ನು ಪ್ರವೇಶಿಸುವನು. ಅವನು ಪವಿತ್ರಸ್ಥಳದೊಳಗೆ ಹೋಗಿದ್ದಾಗ ಧರಿಸಿಕೊಂಡಿದ್ದ ನಾರುಬಟ್ಟೆಯನ್ನು ತೆಗೆದುಹಾಕುವನು. ಅವನು ಈ ಬಟ್ಟೆಗಳನ್ನು ಅಲ್ಲಿಯೇ ಬಿಡಬೇಕು. 24 ಅವನು ತನ್ನ ಶರೀರವನ್ನು ಪವಿತ್ರಸ್ಥಳದಲ್ಲಿ ನೀರಿನಿಂದ ತೊಳೆದುಕೊಳ್ಳುವನು. ಬಳಿಕ ಅವನು ತನ್ನ ಇತರ ವಿಶೇಷ ಬಟ್ಟೆಗಳನ್ನು ಧರಿಸಿಕೊಳ್ಳುವನು. ಅವನು ಹೊರಗೆ ಬಂದು, ತನ್ನ ಸರ್ವಾಂಗಹೋಮವನ್ನು ಮತ್ತು ಜನರ ಸರ್ವಾಂಗಹೋಮವನ್ನು ಅರ್ಪಿಸುವನು. ಅವನು ತನಗಾಗಿಯೂ ಜನರಿಗಾಗಿಯೂ ಪ್ರಾಯಶ್ಚಿತ್ತ ಮಾಡುವನು. 25 ಬಳಿಕ ಅವನು ಪಾಪಪರಿಹಾರಕ ಯಜ್ಞದ ಕೊಬ್ಬನ್ನು ವೇದಿಕೆಯ ಮೇಲೆ ಹೋಮಮಾಡುವನು.
26 “ಅಜಾಜೇಲನಿಗೆ ಹೋತವನ್ನು ನಡೆಸಿಕೊಂಡು ಹೋದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಿಂದ ತನ್ನ ಪೂರ್ಣಶರೀರವನ್ನು ತೊಳೆದುಕೊಳ್ಳಬೇಕು. ಬಳಿಕ ಅವನು ಪಾಳೆಯದೊಳಗೆ ಬರಬಹುದು.
27 “ಪಾಪಪರಿಹಾರಕ ಯಜ್ಞಕ್ಕಾಗಿ ಇರುವ ಹೋರಿಯನ್ನು ಮತ್ತು ಹೋತವನ್ನು ಪಾಳೆಯದ ಹೊರಗೆ ತೆಗೆದುಕೊಂಡು ಹೋಗಬೇಕು. (ಆ ಪಶುಗಳ ರಕ್ತವನ್ನು, ಪವಿತ್ರವಸ್ತುಗಳನ್ನು ಶುದ್ಧೀಕರಿಸುವುದಕ್ಕೆ ಪವಿತ್ರಸ್ಥಳಕ್ಕೆ ತರಲಾಯಿತು.) ಯಾಜಕರು ಆ ಪಶುಗಳ ಚರ್ಮ, ಮಾಂಸ ಮತ್ತು ದೇಹದ ಕಲ್ಮಶವನ್ನೆಲ್ಲಾ ಬೆಂಕಿಯಿಂದ ಸುಟ್ಟುಹಾಕಿಸಬೇಕು. 28 ಬಳಿಕ ಅವುಗಳನ್ನು ಸುಡುವ ವ್ಯಕ್ತಿ ತನ್ನ ಬಟ್ಟೆಗಳನ್ನು ತೊಳೆದುಕೊಂಡು ತನ್ನ ಪೂರ್ಣದೇಹವನ್ನು ನೀರಿನಿಂದ ತೊಳೆದುಕೊಳ್ಳಬೇಕು. ಬಳಿಕ ಅವನು ಪಾಳೆಯದೊಳಗೆ ಬರಬಹುದು.
ನಂಬಿಕೆಗಿರುವ ಶಕ್ತಿ
(ಮಾರ್ಕ 11:12-14,20-24)
18 ಮರುದಿನ ಮುಂಜಾನೆ ಯೇಸು ಪಟ್ಟಣಕ್ಕೆ ಹಿಂತಿರುಗಿ ಹೋಗುತ್ತಿದ್ದನು. ಆತನಿಗೆ ಹಸಿವಾಯಿತು. 19 ಆತನು ದಾರಿಯ ಪಕ್ಕದಲ್ಲಿದ್ದ ಒಂದು ಅಂಜೂರದ ಮರವನ್ನು ನೋಡಿ ಹಣ್ಣನ್ನು ತಿನ್ನಲು ಅದರ ಬಳಿಗೆ ಹೋದನು. ಆದರೆ ಮರದಲ್ಲಿ ಬರೀ ಎಲೆಗಳೇ ಇದ್ದವು. ಆದ್ದರಿಂದ ಯೇಸು ಆ ಮರಕ್ಕೆ, “ಇನ್ನು ಮೇಲೆ ನೀನೆಂದಿಗೂ ಹಣ್ಣುಬಿಡದಂತಾಗಲಿ!” ಎಂದನು. ಆ ಕೂಡಲೇ ಅಂಜೂರದ ಮರ ಒಣಗಿಹೋಯಿತು.
20 ಶಿಷ್ಯರು ಇದನ್ನು ನೋಡಿ ಬಹಳ ಆಶ್ಚರ್ಯಪಟ್ಟು, “ಈ ಅಂಜೂರದ ಮರವು ಅಷ್ಟು ಬೇಗನೆ ಹೇಗೆ ಒಣಗಿ ಹೋಯಿತು?” ಎಂದು ಕೇಳಿದರು.
21 ಯೇಸು, “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನೀವು ಸಂಶಯಪಡದೆ ನಂಬಿದರೆ ನಾನು ಈ ಮರಕ್ಕೆ ಮಾಡಿದಂತೆ ನೀವೂ ಮಾಡಲು ಸಾಧ್ಯ. ಅಲ್ಲದೆ ಇನ್ನೂ ಹೆಚ್ಚಾಗಿ ಮಾಡಲು ಸಾಧ್ಯ. ನೀವು ಈ ಬೆಟ್ಟಕ್ಕೆ, ‘ನೀನು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಪೂರ್ಣ ನಂಬಿಕೆಯಿಂದ ಹೇಳಿದರೆ ಅಂತೆಯೇ ಸಂಭವಿಸುವುದು. 22 ನೀವು ನಂಬಿ, ಪ್ರಾರ್ಥನೆಯಲ್ಲಿ ಏನನ್ನೇ ಕೇಳಿದರೂ ನಿಮಗೆ ಅದು ದೊರೆಯುವುದು” ಎಂದು ಉತ್ತರಕೊಟ್ಟನು.
Kannada Holy Bible: Easy-to-Read Version. All rights reserved. © 1997 Bible League International