Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 133

ದೇವಾಲಯಕ್ಕೆ ಹೋಗುವಾಗ ಹಾಡುವ ಗೀತೆ. ರಚನೆಗಾರ: ದಾವೀದ.

133 ಆಹಾ, ಸಹೋದರರು ಅನ್ಯೋನ್ಯತೆಯಿಂದಿರುವುದು
    ಎಷ್ಟೋ ಒಳ್ಳೆಯದು, ಎಷ್ಟೋ ರಮ್ಯವಾದದ್ದು.
ಅದು ಯಾಜಕನ ತಲೆಯ ಮೇಲೆ ಹಾಕಲ್ಪಟ್ಟು ಆರೋನನ ಗಡ್ಡಕ್ಕೂ
    ಅಲ್ಲಿಂದ ಅವನ ಉಡುಪುಗಳ ಮೇಲೆಯೂ ಇಳಿದುಬರುವ ಪರಿಮಳ ತೈಲದಂತಿರುವುದು;
ಅದು ಹೆರ್ಮೋನ್ ಪರ್ವತದಿಂದ ಹುಟ್ಟಿ ಚೀಯೋನ್ ಪರ್ವತದ ಮೇಲೆ ಬೀಳುವ ದಟ್ಟವಾದ ಮಂಜಿನಂತಿರುವುದು.
    ಯೆಹೋವನು ನಿತ್ಯಜೀವವೆಂಬ ತನ್ನ ಆಶೀರ್ವಾದವನ್ನು ಅನುಗ್ರಹಿಸಿದ್ದು ಚೀಯೋನಿನಲ್ಲಿಯೇ.

ಆದಿಕಾಂಡ 48:8-22

ಆಮೇಲೆ ಇಸ್ರೇಲನು ಯೋಸೇಫನ ಗಂಡುಮಕ್ಕಳನ್ನು ನೋಡಿ, “ಈ ಹುಡುಗರು ಯಾರು?” ಎಂದು ಕೇಳಿದನು.

ಯೋಸೇಫನು ತನ್ನ ತಂದೆಗೆ, “ಇವರು ನನ್ನ ಮಕ್ಕಳು. ದೇವರು ನನಗೆ ಕೊಟ್ಟಿರುವ ಗಂಡುಮಕ್ಕಳೇ ಇವರು” ಎಂದು ಹೇಳಿದನು.

ಇಸ್ರೇಲನು, “ಅವರನ್ನು ನನ್ನ ಬಳಿಗೆ ಕರೆದುಕೊಂಡು ಬಾ, ನಾನು ಅವರನ್ನು ಆಶೀರ್ವದಿಸುತ್ತೇನೆ” ಎಂದು ಹೇಳಿದನು.

10 ಇಸ್ರೇಲನಿಗೆ ತುಂಬ ವಯಸ್ಸಾಗಿತ್ತು. ಅವನಿಗೆ ಕಣ್ಣು ಸರಿಯಾಗಿ ಕಾಣುತ್ತಿರಲಿಲ್ಲ. ಆದ್ದರಿಂದ ಯೋಸೇಫನು ಅವರನ್ನು ತಂದೆಯ ಬಳಿಗೆ ಕರೆದುಕೊಂಡು ಬಂದನು. ಇಸ್ರೇಲನು ಆ ಹುಡುಗರನ್ನು ಅಪ್ಪಿಕೊಂಡು ಮುದ್ದಿಟ್ಟನು. 11 ಬಳಿಕ ಇಸ್ರೇಲನು ಯೋಸೇಫನಿಗೆ, “ನಾನು ಮತ್ತೆ ನಿನ್ನ ಮುಖವನ್ನು ನೋಡುತ್ತೇನೆ ಎಂದು ಯೋಚಿಸಿರಲಿಲ್ಲ. ಆದರೆ ನಾನು ನಿನ್ನನ್ನೂ ನಿನ್ನ ಮಕ್ಕಳನ್ನೂ ನೋಡುವಂತೆ ದೇವರು ಅನುಗ್ರಹಿಸಿದ್ದಾನೆ” ಎಂದು ಹೇಳಿದನು.

12 ಆಗ ಯೋಸೇಫನು ಇಸ್ರೇಲನ ತೊಡೆಯ ಮೇಲೆ ಕುಳಿತಿದ್ದ ತನ್ನ ಗಂಡುಮಕ್ಕಳನ್ನು ಎತ್ತಿಕೊಂಡನು. ಬಳಿಕ ಅವರು ಇಸ್ರೇಲನ ಮುಂದೆ ಅಡ್ಡಬಿದ್ದು ನಮಸ್ಕರಿಸಿದರು. 13 ಯೋಸೇಫನು ಎಫ್ರಾಯೀಮನನ್ನು ತನ್ನ ಬಲಭಾಗದಲ್ಲಿಯೂ ಮನಸ್ಸೆಯನ್ನು ತನ್ನ ಎಡಭಾಗದಲ್ಲಿಯೂ ಕುಳ್ಳಿರಿಸಿದನು. (ಆದ್ದರಿಂದ ಎಫ್ರಾಯೀಮನು ಇಸ್ರೇಲನ ಎಡಭಾಗದಲ್ಲಿಯೂ ಮನಸ್ಸೆಯು ಬಲಭಾಗದಲ್ಲಿಯೂ ಇದ್ದರು.) 14 ಆದರೆ ಇಸ್ರೇಲನು ತನ್ನ ಕೈಗಳನ್ನು ವಾರೆ ಮಾಡಿ ತನ್ನ ಬಲಗೈಯನ್ನು ಚಿಕ್ಕ ಮಗನಾದ ಎಫ್ರಾಯೀಮನ ತಲೆಯ ಮೇಲಿಟ್ಟು ಎಡಗೈಯನ್ನು ದೊಡ್ಡ ಮಗನಾದ ಮನಸ್ಸೆಯ ತಲೆಯ ಮೇಲಿಟ್ಟನು. ಮನಸ್ಸೆಯು ಹಿರಿಯ ಮಗನಾಗಿದ್ದರೂ ಇಸ್ರೇಲನು ಮನಸ್ಸೆಯ ತಲೆಯ ಮೇಲೆ ಎಡಗೈಯನ್ನಿಟ್ಟನು. 15 ಬಳಿಕ ಇಸ್ರೇಲನು ಯೋಸೇಫನನ್ನು ಆಶೀರ್ವದಿಸಿ ಹೀಗೆಂದನು:

“ನನ್ನ ಪೂರ್ವಿಕರಾದ ಅಬ್ರಹಾಮನೂ ಇಸಾಕನೂ ನಮ್ಮ ದೇವರನ್ನು ಆರಾಧಿಸಿದರು.
    ಆ ದೇವರೇ ನನ್ನನ್ನು ನನ್ನ ಜೀವಮಾನವೆಲ್ಲಾ ನಡೆಸಿದನು.
16 ನನ್ನನ್ನು ಎಲ್ಲಾ ತೊಂದರೆಗಳಿಂದ ಕಾಪಾಡಿದ ದೂತನೇ ಆತನು.
    ಈ ಹುಡುಗರನ್ನು ಆಶೀರ್ವದಿಸಬೇಕೆಂದು ನಾನು ಆತನಲ್ಲಿ ಪ್ರಾರ್ಥಿಸುವೆನು.
ಇಂದಿನಿಂದ ಈ ಮಕ್ಕಳು ನನ್ನ ಹೆಸರನ್ನೇ ಹೊಂದಿಕೊಳ್ಳುವರು.
    ನನ್ನ ಪೂರ್ವಿಕರಾದ ಅಬ್ರಹಾಮ್ ಮತ್ತು ಇಸಾಕರ ಹೆಸರನ್ನು ಇವರು ಹೊಂದಿಕೊಳ್ಳುವರು.
ಇವರು ಭೂಮಿಯ ಮೇಲೆ ಬೆಳೆದು ದೊಡ್ಡ ಕುಟುಂಬಗಳಾಗುವಂತೆಯೂ
    ದೊಡ್ಡ ಜನಾಂಗಗಳಾಗುವಂತೆಯೂ ನಾನು ಪ್ರಾರ್ಥಿಸುವೆನು.”

17 ಇಸ್ರೇಲನು ತನ್ನ ಬಲಗೈಯನ್ನು ಎಫ್ರಾಯೀಮನ ತಲೆಯ ಮೇಲಿಟ್ಟಿದ್ದರಿಂದ ಯೋಸೇಫನು ಅಸಮಾಧಾನದಿಂದ ನೋಡಿ ತಂದೆಯ ಕೈಯನ್ನು ಹಿಡಿದುಕೊಂಡನು; ಅಲ್ಲದೆ ತಂದೆಯ ಕೈಯನ್ನು ಎಫ್ರಾಯೀಮನ ತಲೆಯ ಮೇಲಿಂದ ತೆಗೆದುಕೊಂಡು ಮನಸ್ಸೆಯ ತಲೆಯ ಮೇಲೆ ಇಡಬೇಕೆಂದಿದ್ದನು. 18 ಯೋಸೇಫನು ತನ್ನ ತಂದೆಗೆ, “ನೀನು ನಿನ್ನ ಬಲಗೈಯನ್ನು ತಪ್ಪಾಗಿ ಎಫ್ರಾಯೀಮನ ಮೇಲೆ ಇಟ್ಟಿರುವೆ. ಮೊದಲು ಹುಟ್ಟಿದವನು ಮನಸ್ಸೆ” ಎಂದು ಹೇಳಿದನು.

19 ಅದಕ್ಕೆ ಅವನ ತಂದೆಯು, “ನನಗೆ ಗೊತ್ತು ಮಗನೇ, ನನಗೆ ಗೊತ್ತು. ಮನಸ್ಸೆ ಮೊದಲು ಹುಟ್ಟಿದವನು. ಅವನು ಮಹಾವ್ಯಕ್ತಿಯಾಗುವನು. ಅವನು ಅನೇಕ ಜನರಿಗೆ ತಂದೆಯಾಗುವನು. ಆದರೆ ತಮ್ಮನು ಅಣ್ಣನಿಗಿಂತ ಮಹಾವ್ಯಕ್ತಿಯಾಗುವನು. ಅವನ ಕುಟುಂಬವು ತುಂಬ ದೊಡ್ಡದಾಗುವುದು” ಎಂದು ಹೇಳಿದನು.

20 ಅಂದು ಇಸ್ರೇಲನು ಅವರನ್ನು ಆಶೀರ್ವದಿಸಿ,

“ಇಸ್ರೇಲರು ನಿಮ್ಮ ಹೆಸರುಗಳ ಮೂಲಕ
    ಬೇರೆಯವರನ್ನು ಆಶೀರ್ವದಿಸುವರು.
‘ದೇವರು ನಿನ್ನನ್ನು ಎಫ್ರಾಯೀಮನಂತೆಯೂ
    ಮನಸ್ಸೆಯಂತೆಯೂ ಮಾಡಲಿ’ ಎಂದು ಹೇಳುವರು” ಎಂದನು.

ಹೀಗೆ, ಇಸ್ರೇಲನು ಎಫ್ರಾಯೀಮನನ್ನು ಮನಸ್ಸೆಗಿಂತ ದೊಡ್ಡವನನ್ನಾಗಿ ಮಾಡಿದನು.

21 ಬಳಿಕ ಇಸ್ರೇಲನು ಯೋಸೇಫನಿಗೆ, “ನೋಡು, ನಾನು ಸಾಯುವ ಕಾಲ ಸಮೀಪಿಸಿದೆ. ಆದರೆ ದೇವರು ಇನ್ನೂ ನಿನ್ನ ಸಂಗಡವಿರುವನು. ಅವನು ನಿನ್ನನ್ನು ನಿನ್ನ ಪೂರ್ವಿಕರ ದೇಶಕ್ಕೆ ಹಿಂತಿರುಗಿಸುವನು. 22 ನಾನು ನಿನ್ನ ಸಹೋದರರಿಗೆ ಕೊಟ್ಟ ಪಾಲಿಗಿಂತ ಹೆಚ್ಚಾಗಿ ಬೇರೊಂದನ್ನು ನಿನಗೆ ಕೊಟ್ಟಿದ್ದೇನೆ. ನಾನು ಅಮೋರಿಯರಿಂದ ಗೆದ್ದುಕೊಂಡಿರುವ ಬೆಟ್ಟವನ್ನು ನಿನಗೆ ಕೊಡುವೆನು. ನಾನು ಅವರೊಂದಿಗೆ ಖಡ್ಗಗಳಿಂದಲೂ ಬಿಲ್ಲುಗಳಿಂದಲೂ ಹೋರಾಡಿ ಆ ಬೆಟ್ಟವನ್ನು ವಶಪಡಿಸಿಕೊಂಡಿದ್ದೇನೆ” ಎಂದು ಹೇಳಿದನು.

ಇಬ್ರಿಯರಿಗೆ 11:23-29

23 ಮೋಶೆಯು ಹುಟ್ಟಿದಾಗ ಅವನ ತಂದೆತಾಯಿಗಳು ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳವರೆಗೆ ಅಡಗಿಸಿಟ್ಟರು. ಮಗುವಾಗಿದ್ದ ಮೋಶೆಯ ಸೌಂದರ್ಯವನ್ನು ಅವರು ಕಂಡದ್ದರಿಂದ ರಾಜನಾದ ಫರೋಹನ ಆಜ್ಞೆಗೂ ಅವಿಧೇಯರಾಗಲು ಹಿಂಜರಿಯಲಿಲ್ಲ.

24 ಮೋಶೆಯು ಬೆಳೆದು ದೊಡ್ಡವನಾದನು. ಅವನು ಫರೋಹನ ಮಗಳ ಮಗನೆಂದು ಕರೆಸಿಕೊಳ್ಳಲು ಒಪ್ಪಲಿಲ್ಲ. 25 ಅವನು ಪಾಪಗಳಿಂದ ಸಿಗುವ ಸುಖವನ್ನು ಆರಿಸಿಕೊಳ್ಳಲಿಲ್ಲ. ಆ ಸುಖಗಳು ಬೇಗನೆ ಕೊನೆಗೊಳ್ಳುತ್ತವೆ. ಆದ್ದರಿಂದ ಅವನು ದೇವಜನರೊಂದಿಗೆ ಕಷ್ಟಪಡುವುದನ್ನೇ ಆರಿಸಿಕೊಂಡನು. ಅವನಲ್ಲಿದ್ದ ನಂಬಿಕೆಯೇ ಇದಕ್ಕೆ ಕಾರಣ. 26 ಈಜಿಪ್ಟಿನ ಭಂಡಾರವನ್ನೆಲ್ಲ ಪಡೆಯುವುದಕ್ಕಿಂತ ಕ್ರಿಸ್ತನಿಗಾಗಿ ಸಂಕಟವನ್ನು ಅನುಭವಿಸುವುದು ಶ್ರೇಯಸ್ಕರವೆಂದು ಅವನು ಭಾವಿಸಿದನು. ದೇವರು ತನಗೆ ನೀಡುವ ಪ್ರತಿಫಲಕ್ಕಾಗಿ ಅವನು ಕಾಯುತ್ತಿದ್ದನು.

27 ಅವನು ಈಜಿಪ್ಟನ್ನು ಬಿಟ್ಟುಹೋದದ್ದು ನಂಬಿಕೆಯಿಂದಲೇ. ಫರೋಹನ ಸಿಟ್ಟಿಗೆ ಅವನು ಭಯಪಡಲಿಲ್ಲ. ಯಾರಿಗೂ ಕಾಣದ ದೇವರು ತನಗೆ ಕಾಣುತ್ತಿರುವನೋ ಎಂಬಂತೆ ಅವನು ದೃಢಚಿತ್ತನಾಗಿದ್ದನು; 28 ಪಸ್ಕಹಬ್ಬವನ್ನು ಆಚರಿಸಿ, ಬಾಗಿಲುಗಳ ಮೇಲೆ ರಕ್ತವನ್ನು ಹಚ್ಚಿದನು. ಯೆಹೂದ್ಯ ಜನರ ಚೊಚ್ಚಲು ಮಕ್ಕಳನ್ನು ಮರಣದೂತನು ಸಂಹರಿಸಿದಂತೆ ರಕ್ತವನ್ನು ಬಾಗಿಲುಗಳ ಮೇಲೆ ಹಚ್ಚಲಾಯಿತು. ಅವನು ತನ್ನಲ್ಲಿದ್ದ ನಂಬಿಕೆಯಿಂದಲೇ ಹೀಗೆ ಮಾಡಿದನು.

29 ಮೋಶೆಯಿಂದ ಮುನ್ನಡೆಸಲ್ಪಟ್ಟ ಜನರು ಕೆಂಪುಸಮುದ್ರವನ್ನು ಒಣಭೂಮಿಯೋ ಎಂಬಂತೆ ದಾಟಿದ್ದು ನಂಬಿಕೆಯಿಂದಲೇ. ಆದರೆ ಈಜಿಪ್ಟ್ ದೇಶದವರು ಕೆಂಪುಸಮುದ್ರವನ್ನು ದಾಟಲು ಪ್ರಯತ್ನಿಸಿ, ಮುಳುಗಿಹೋದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International