Revised Common Lectionary (Complementary)
65 ಯೆಹೋವನೇ, ನಿನ್ನ ವಾಗ್ದಾನಕ್ಕೆ ತಕ್ಕಂತೆ
ನಿನ್ನ ಸೇವಕನಿಗೆ ಒಳ್ಳೆಯದನ್ನೇ ಮಾಡಿರುವೆ.
66 ಜ್ಞಾನದ ನಿರ್ಧಾರಗಳನ್ನು ಮಾಡಲು ನನಗೆ ಜ್ಞಾನವನ್ನು ಕೊಡು.
ನಾನು ನಿನ್ನ ಆಜ್ಞೆಗಳಲ್ಲಿ ಭರವಸವಿಟ್ಟಿರುವೆ.
67 ನಾನು ಸಂಕಟಪಡುವುದಕ್ಕಿಂತ ಮೊದಲು ಅನೇಕ ಕೆಟ್ಟಕಾರ್ಯಗಳನ್ನು ಮಾಡಿದೆ;
ಈಗಲಾದರೋ ನಾನು ನಿನ್ನ ಆಜ್ಞೆಗಳಿಗೆ ಎಚ್ಚರಿಕೆಯಿಂದ ವಿಧೇಯನಾಗುವೆನು.
68 ನೀನು ಒಳ್ಳೆಯವನೂ ಒಳ್ಳೆಯ ಕಾರ್ಯಗಳನ್ನು ಮಾಡುವವನೂ ಆಗಿರುವೆ.
ನಿನ್ನ ಕಟ್ಟಳೆಗಳನ್ನು ನನಗೆ ಉಪದೇಶಿಸು.
69 ಗರ್ವಿಷ್ಠರು ನನಗೆ ವಿರೋಧವಾಗಿ ಸುಳ್ಳು ಹೇಳಿದರು.
ನಾನಾದರೋ ನಿನ್ನ ಆಜ್ಞೆಗಳಿಗೆ ಪೂರ್ಣಹೃದಯದಿಂದ ವಿಧೇಯನಾಗಿರುವೆ.
70 ಅವರು ಬಹು ಮೂಢರು.
ನಾನಾದರೋ ನಿನ್ನ ಉಪದೇಶಗಳನ್ನು ಕಲಿಯುವುದರಲ್ಲಿ ಆನಂದಿಸುವೆ.
71 ನಿನ್ನ ಕಟ್ಟಳೆಗಳನ್ನು ಕಲಿಯಲು
ನಾನು ಪಟ್ಟ ಪ್ರಯಾಸವು ಒಳ್ಳೆಯದಾಯಿತು.
72 ನಿನ್ನ ಉಪದೇಶಗಳು ನನಗೆ ಒಳ್ಳೆಯದಾಗಿವೆ.
ಅವು ಹತ್ತುಸಾವಿರ ಬೆಳ್ಳಿಬಂಗಾರಗಳ ನಾಣ್ಯಗಳಿಗಿಂತಲೂ ಅಮೂಲ್ಯವಾಗಿವೆ.
27 “ಸಾಮಾನ್ಯ ಜನರಲ್ಲಿ ಒಬ್ಬನು ಯೆಹೋವನು ನಿಷೇಧಿಸಿದವುಗಳಲ್ಲಿ ಯಾವುದಾದರೊಂದನ್ನು ತಿಳಿಯದೆ ಮಾಡಿದರೆ ಅವನು ದೋಷಿಯಾಗಿದ್ದಾನೆ. 28 ಆ ವ್ಯಕ್ತಿ ತನ್ನ ಪಾಪದ ಕುರಿತು ತಿಳಿದುಕೊಂಡರೆ, ಆಗ ಅವನು ಅಂಗದೋಷವಿಲ್ಲದ ಒಂದು ಆಡನ್ನು ತರಬೇಕು. ಅದು ಅವನ ಪಾಪಪರಿಹಾರಕ ಯಜ್ಞವಾಗಿದೆ. ಅವನು ತಾನು ಮಾಡಿದ ಪಾಪಕ್ಕಾಗಿ ಆಡನ್ನು ತರಬೇಕು. 29 ಅವನು ತನ್ನ ಕೈಯನ್ನು ಅದರ ತಲೆಯ ಮೇಲಿಟ್ಟು ಸರ್ವಾಂಗಹೋಮಮಾಡುವ ಸ್ಥಳದಲ್ಲಿ ಅದನ್ನು ವಧಿಸಬೇಕು. 30 ಬಳಿಕ ಯಾಜಕನು ಅದರ ರಕ್ತದಲ್ಲಿ ಸ್ವಲ್ಪವನ್ನು ತನ್ನ ಬೆರಳಿನಲ್ಲಿ ತೆಗೆದುಕೊಂಡು ಸರ್ವಾಂಗಹೋಮ ಮಾಡುವ ವೇದಿಕೆಯ ಮೂಲೆಗಳಿಗೆ ಹಚ್ಚಬೇಕು. ಬಳಿಕ ಯಾಜಕನು ಆಡಿನ ಉಳಿದ ರಕ್ತವನ್ನು ವೇದಿಕೆಯ ಬುಡದಲ್ಲಿ ಸುರಿಯಬೇಕು. 31 ಯಾಜಕನು ಸಮಾಧಾನಯಜ್ಞಗಳಲ್ಲಿ ಕೊಬ್ಬನ್ನು ಪ್ರತ್ಯೇಕಿಸಿದಂತೆಯೇ ಆಡಿನ ಕೊಬ್ಬನ್ನೆಲ್ಲಾ ಪ್ರತ್ಯೇಕಿಸಿ ಅದನ್ನು ಯೆಹೋವನಿಗೆ ಸುಗಂಧವಾಸನೆಯ ಹೋಮವಾಗಿ ವೇದಿಕೆಯ ಮೇಲೆ ಅರ್ಪಿಸಬೇಕು. ಹೀಗೆ ಯಾಜಕನು ಆ ವ್ಯಕ್ತಿಯನ್ನು ಶುದ್ಧಿಗೊಳಿಸುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು.
14 ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: 15 “ಒಬ್ಬನು ಯೆಹೋವನ ಪರಿಶುದ್ಧ ವಸ್ತುಗಳ ವಿಷಯದಲ್ಲಿ ಮೀರಿ ನಡೆದು ತಿಳಿಯದೆ ತಪ್ಪು ಮಾಡಿದರೆ ಅವನು ಅಂಗದೋಷವಿಲ್ಲದ ಟಗರನ್ನು ತರಬೇಕು. ಇದು ಅವನಿಗಾಗಿ ಯೆಹೋವನಿಗೆ ಸಮರ್ಪಣೆಯಾಗುವ ದೋಷಪರಿಹಾರಕ ಯಜ್ಞ. ನೀವು ಅಧಿಕೃತ ಅಳತೆಯನ್ನು ಉಪಯೋಗಿಸಿ ಟಗರಿನ ಬೆಲೆಯನ್ನು ಗೊತ್ತುಮಾಡಬೇಕು.” 16 ಆ ವ್ಯಕ್ತಿಯೂ ಪರಿಶುದ್ಧ ವಸ್ತುಗಳ ವಿಷಯದಲ್ಲಿ ಮಾಡಿದ ಪಾಪಕ್ಕಾಗಿ ಈ ಬೆಲೆಯನ್ನು ತೆರಬೇಕು. ಇದಲ್ಲದೆ ಆ ಬೆಲೆಯ ಐದನೆಯ ಒಂದು ಭಾಗವನ್ನು ಸೇರಿಸಿ ಆ ಹಣವನ್ನು ಯಾಜಕನಿಗೆ ಕೊಡಬೇಕು. ಈ ರೀತಿಯಾಗಿ ಯಾಜಕನು ಟಗರನ್ನು ದೋಷಪರಿಹಾರಕ ಯಜ್ಞವಾಗಿ ಅರ್ಪಿಸುವುದರ ಮೂಲಕ ಅವನನ್ನು ಶುದ್ಧಿಮಾಡುವನು. ಆಗ ದೇವರು ಆ ವ್ಯಕ್ತಿಯನ್ನು ಕ್ಷಮಿಸುವನು.
ದೇವರಿಗಾಗಿ ಜೀವಿಸಿ
11 ಪ್ರಿಯ ಸ್ನೇಹಿತರೇ, ನೀವು ಈ ಲೋಕದಲ್ಲಿ ಪ್ರವಾಸಿಗಳಂತೆ ಮತ್ತು ಪರದೇಶದವರಂತೆ ಇದ್ದೀರಿ. ಆದ್ದರಿಂದ ನಿಮ್ಮ ದೇಹಗಳಿಗೆ ಇಷ್ಟವಾದ ಕೆಟ್ಟಸಂಗತಿಗಳಿಂದ ದೂರವಾಗಿರಿ. ಇವು ನಿಮ್ಮ ಜೀವಾತ್ಮಕ್ಕೆ ವಿರುದ್ಧವಾಗಿ ಹೋರಾಡುತ್ತವೆ. 12 ನಂಬಿಕೆಯಿಲ್ಲದ ಜನರು ನಿಮ್ಮ ಸುತ್ತಮುತ್ತಲೆಲ್ಲಾ ವಾಸಿಸುತ್ತಿದ್ದಾರೆ. ನೀವು ತಪ್ಪು ಮಾಡುತ್ತಿರುವಿರೆಂದು ಅವರು ಹೇಳುವ ಸಾಧ್ಯತೆಯಿದೆ. ಆದ್ದರಿಂದ ಒಳ್ಳೆಯವರಾಗಿ ಬಾಳಿರಿ. ನೀವು ಮಾಡುವ ಒಳ್ಳೆಯ ಕಾರ್ಯಗಳನ್ನು ಅವರು ನೋಡುವರು ಮತ್ತು ದೇವರು ಪ್ರತ್ಯಕ್ಷನಾದ ದಿನದಂದು ಆತನನ್ನು ಕೊಂಡಾಡುವರು.
ಈ ಲೋಕದ ಪ್ರತಿಯೊಬ್ಬ ಅಧಿಕಾರಿಗೂ ವಿಧೇಯರಾಗಿರಿ
13 ಈ ಲೋಕದ ಅಧಿಕಾರಿಗಳಿಗೆ ವಿಧೇಯರಾಗಿರಿ. ಪ್ರಭುವಿಗಾಗಿ ಇದನ್ನು ಮಾಡಿರಿ. ಸರ್ವಾಧಿಕಾರಿಯಾದ ರಾಜನಿಗೆ ವಿಧೇಯರಾಗಿರಿ. 14 ರಾಜನು ಕಳುಹಿಸುವ ಅಧಿಕಾರಿಗಳಿಗೆ ವಿಧೇಯರಾಗಿರಿ. ತಪ್ಪು ಮಾಡಿದವರನ್ನು ದಂಡಿಸಲೂ ಒಳ್ಳೆಯದನ್ನು ಮಾಡಿದವರನ್ನು ಹೊಗಳಲೂ ಅವರನ್ನು ಕಳುಹಿಸಲಾಗಿದೆ. 15 ನೀವು ಒಳ್ಳೆಯದನ್ನು ಮಾಡುವಾಗ ನಿಮ್ಮನ್ನು ಕುರಿತು ಕೆಟ್ಟಮಾತುಗಳನ್ನು ಆಡಲು ಮೂಢರಿಗೆ ಸಾಧ್ಯವಾಗುವುದಿಲ್ಲ. ದೇವರ ಅಪೇಕ್ಷೆಯೂ ಇದೇ ಆಗಿದೆ. 16 ಸ್ವತಂತ್ರ ಹೊಂದಿದವರಂತೆ ಜೀವಿಸಿರಿ. ಆದರೆ ನೀವು ಮಾಡುವ ಕೆಟ್ಟಕಾರ್ಯಗಳನ್ನು ಮರೆಮಾಡಲು ಆ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿ. ನೀವು ದೇವರ ಸೇವೆಯನ್ನು ಮಾಡುತ್ತಾ ಜೀವಿಸಿರಿ. 17 ಜನರೆಲ್ಲರಿಗೂ ಗೌರವವನ್ನು ತೋರಿಸಿರಿ. ದೇವರ ಕುಟುಂಬದ ಸಹೋದರ ಸಹೋದರಿಯರೆಲ್ಲರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ ಮತ್ತು ರಾಜನನ್ನು ಗೌರವಿಸಿರಿ.
Kannada Holy Bible: Easy-to-Read Version. All rights reserved. © 1997 Bible League International