Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 106:1-12

106 ಯೆಹೋವನನ್ನು ಸ್ತುತಿಸಿರಿ!
ಆತನು ಒಳ್ಳೆಯವನು! ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
    ಆತನ ಪ್ರೀತಿಯು ಶಾಶ್ವತವಾದದ್ದು!
ಯೆಹೋವನ ಮಹತ್ವವನ್ನು ಸಂಪೂರ್ಣವಾಗಿ ವರ್ಣಿಸಲು ಯಾರಿಗೂ ಆಗದು;
    ಆತನನ್ನು ಸಂಪೂರ್ಣವಾಗಿ ಸ್ತುತಿಸುವುದಕ್ಕೂ ಯಾರಿಗೂ ಸಾಧ್ಯವಿಲ್ಲ.
ದೇವರ ಆಜ್ಞೆಗಳಿಗೆ ವಿಧೇಯರಾಗಿರುವವರು ಭಾಗ್ಯವಂತರೇ ಸರಿ!
    ಅವರು ಸತ್ಕಾರ್ಯಗಳನ್ನು ಯಾವಾಗಲೂ ಮಾಡುತ್ತಿರುವರು.

ಯೆಹೋವನೇ, ನಿನ್ನ ಜನರಿಗೆ ದಯೆತೋರುವಾಗ ನನ್ನನ್ನು ಜ್ಞಾಪಿಸಿಕೊಂಡು ದಯೆತೋರು.
    ನಿನ್ನ ಜನರನ್ನು ರಕ್ಷಿಸುವಾಗ ನನ್ನನ್ನು ನೆನಪು ಮಾಡಿಕೊಂಡು ರಕ್ಷಿಸು.
ಯೆಹೋವನೇ, ನಿನ್ನ ಜನರಿಗೋಸ್ಕರ ನೀನು ಮಾಡುವ
    ಒಳ್ಳೆಯವುಗಳಲ್ಲಿ ನನಗೂ ಪಾಲು ದೊರೆಯಲಿ.
ನಿನ್ನ ಜನರೊಂದಿಗೆ ನಾನೂ ಸಂತೋಷಪಡುವಂತೆ ಮಾಡು.
    ನಿನ್ನ ಜನರೊಂದಿಗೆ ನಾನೂ ನಿನ್ನ ಬಗ್ಗೆ ಹೆಮ್ಮೆಪಡುವಂತಾಗಲಿ.

ನಮ್ಮ ಪೂರ್ವಿಕರು ಪಾಪಮಾಡಿದಂತೆಯೇ ನಾವು ಪಾಪ ಮಾಡಿದೆವು.
    ನಾವು ಅಪರಾಧಿಗಳಾಗಿದ್ದೆವು; ದುಷ್ಕೃತ್ಯಗಳನ್ನು ಮಾಡಿದೆವು!
ನೀನು ಈಜಿಪ್ಟಿನಲ್ಲಿ ಮಾಡಿದ ಮಹತ್ಕಾರ್ಯಗಳಿಂದ
    ನಮ್ಮ ಪೂರ್ವಿಕರು ಏನೂ ಕಲಿತುಕೊಳ್ಳಲಿಲ್ಲ.
ಕೆಂಪು ಸಮುದ್ರದ ಬಳಿಯಲ್ಲಿ
    ನಮ್ಮ ಪೂರ್ವಿಕರು ನಿನಗೆ ವಿರೋಧವಾಗಿ ತಿರುಗಿದರು.

ಆದರೆ ಆತನು ತನ್ನ ಹೆಸರಿನ ನಿಮಿತ್ತವಾಗಿ ನಮ್ಮ ಪೂರ್ವಿಕರನ್ನು ರಕ್ಷಿಸಿದನು;
    ತನ್ನ ಮಹಾಶಕ್ತಿಯನ್ನು ತೋರಿಸುವುದಕ್ಕಾಗಿ ಅವರನ್ನು ರಕ್ಷಿಸಿದನು.
ಆತನು ಆಜ್ಞಾಪಿಸಲು ಕೆಂಪು ಸಮುದ್ರವು ಒಣಗಿಹೋಯಿತು.
    ಆತನು ಆಳವಾದ ಸಮುದ್ರವನ್ನು ಇಬ್ಭಾಗ ಮಾಡಿ ಮರಳುಗಾಡಿನಂತೆ ಒಣಗಿಹೋಗಿದ್ದ ಭೂಮಿಯ ಮೇಲೆ ನಮ್ಮ ಪೂರ್ವಿಕರನ್ನು ನಡೆಸಿದನು.
10 ನಮ್ಮ ಪೂರ್ವಿಕರನ್ನು ಅವರ ಶತ್ರುಗಳಿಂದ ರಕ್ಷಿಸಿದನು!
    ವೈರಿಗಳಿಂದ ಪಾರುಮಾಡಿದನು!
11 ಅವರ ಶತ್ರುಗಳನ್ನು ಸಮುದ್ರದಲ್ಲಿ ಮುಳುಗಿಸಿಬಿಟ್ಟನು.
    ಅವರ ಶತ್ರುಗಳಲ್ಲಿ ಒಬ್ಬರೂ ತಪ್ಪಿಸಿಕೊಳ್ಳಲಾಗಲಿಲ್ಲ!

12 ನಮ್ಮ ಪೂರ್ವಿಕರು ಆತನ ಆಜ್ಞೆಗಳನ್ನು
    ನಂಬಿ ಆತನನ್ನು ಸಂಕೀರ್ತಿಸಿದರು.

ಆದಿಕಾಂಡ 28:10-17

ದೇವರ ಮನೆ—ಬೇತೇಲ್

10 ಯಾಕೋಬನು ಬೇರ್ಷೆಬವನ್ನು ಬಿಟ್ಟು ಹಾರಾನಿಗೆ ಹೋದನು. 11 ಯಾಕೋಬನು ಪ್ರಯಾಣ ಮಾಡುತ್ತಿರುವಾಗ ಸೂರ್ಯಾಸ್ತವಾಯಿತು. ಆದ್ದರಿಂದ ಯಾಕೋಬನು ಆ ರಾತ್ರಿ ಇಳಿದುಕೊಳ್ಳಲು ಒಂದು ಸ್ಥಳಕ್ಕೆ ಹೋದನು. ಯಾಕೋಬನು ಆ ಸ್ಥಳದಲ್ಲಿ ಒಂದು ಕಲ್ಲನ್ನು ಕಂಡು ಅದರ ಮೇಲೆ ತಲೆಯಿಟ್ಟು ಮಲಗಿಕೊಂಡನು. 12 ಯಾಕೋಬನಿಗೆ ಒಂದು ಕನಸಾಯಿತು. ಆ ಕನಸಿನಲ್ಲಿ ಒಂದು ಏಣಿ ನೆಲದ ಮೇಲೆ ನಿಂತಿತ್ತು, ಅದರ ತುದಿ ಆಕಾಶವನ್ನು ಮುಟ್ಟಿತ್ತು. ದೇವದೂತರು ಅದರಲ್ಲಿ ಮೇಲೆರುತ್ತಾ ಕೆಳಗಿಳಿಯುತ್ತಾ ಇರುವುದನ್ನು ಯಾಕೋಬನು ಕಂಡನು. 13 ಯೆಹೋವನು ಏಣಿಯ ತುದಿಯಲ್ಲಿ ನಿಂತಿರುವುದನ್ನು ಯಾಕೋಬನು ಕಂಡನು. ಯೆಹೋವನು ಅವನಿಗೆ, “ನಿನ್ನ ತಾತನಾದ ಅಬ್ರಹಾಮನ ದೇವರಾಗಿರುವ ಯೆಹೋವನೇ ನಾನು. ನಾನು ಇಸಾಕನ ದೇವರು. ಈಗ ನೀನು ಮಲಗಿಕೊಂಡಿರುವ ದೇಶವನ್ನು ನಾನು ನಿನಗೆ ಕೊಡುವೆನು. ನಾನು ಈ ದೇಶವನ್ನು ನಿನಗೂ ನಿನ್ನ ಮಕ್ಕಳಿಗೂ ಕೊಡುವೆನು. 14 ಭೂಮಿಯ ಮೇಲೆ ಧೂಳಿನ ಕಣಗಳಿರುವಂತೆ ನಿನಗೆ ಅನೇಕಾನೇಕ ಸಂತತಿಗಳಿರುವರು. ಅವರು ಪೂರ್ವಪಶ್ಚಿಮಗಳಿಗೂ ಉತ್ತರದಕ್ಷಿಣಗಳಿಗೂ ಹರಡಿಕೊಳ್ಳುವರು. ನಿನ್ನ ಮೂಲಕವೂ ನಿನ್ನ ಸಂತತಿಯವರ ಮೂಲಕವೂ ಭೂಮಿಯ ಮೇಲಿರುವ ಎಲ್ಲಾ ಕುಲಗಳವರು ಆಶೀರ್ವಾದ ಹೊಂದುವರು.

15 “ನಾನು ನಿನ್ನ ಸಂಗಡವಿದ್ದು ನೀನು ಹೋಗುವ ಪ್ರತಿಯೊಂದು ಸ್ಥಳದಲ್ಲಿಯೂ ನಿನ್ನನ್ನು ಕಾಪಾಡುವೆನು; ನಿನ್ನನ್ನು ಈ ಸ್ಥಳಕ್ಕೆ ಮತ್ತೆ ಕರೆದುಕೊಂಡು ಬರುವೆನು. ನಾನು ವಾಗ್ದಾನ ಮಾಡಿದ್ದನ್ನು ನೆರವೇರಿಸುವ ತನಕ ನಾನು ನಿನ್ನನ್ನು ಬಿಟ್ಟು ಹೋಗುವುದಿಲ್ಲ” ಎಂದು ಹೇಳಿದನು.

16 ಆಗ ಯಾಕೋಬನು ನಿದ್ರೆಯಿಂದ ಎಚ್ಚೆತ್ತು, “ಖಂಡಿತವಾಗಿಯೂ ಈ ಸ್ಥಳದಲ್ಲಿ ದೇವರಿದ್ದಾನೆ, ಆದರೆ ಅದು ನನಗೆ ಗೊತ್ತಿರಲಿಲ್ಲ” ಎಂದು ಹೇಳಿದನು.

17 ಯಾಕೋಬನಿಗೆ ಭಯವಾಗಿತ್ತು. ಅವನು, “ಇದು ತುಂಬ ಮಹತ್ವವಾದ ಸ್ಥಳ. ಇದು ದೇವರ ಮನೆ. ಇದು ಸ್ವರ್ಗಕ್ಕೆ ಬಾಗಿಲು” ಎಂದು ಹೇಳಿದನು.

ರೋಮ್ನಗರದವರಿಗೆ 16:17-20

17 ಸಹೋದರ ಸಹೋದರಿಯರೇ, ನಿಮ್ಮಲ್ಲಿ ಒಡಕುಗಳನ್ನು ಉಂಟುಮಾಡುವ ಜನರ ವಿಷಯದಲ್ಲಿ ನೀವು ಬಹು ಜಾಗ್ರತೆಯಿಂದ ಇರಬೇಕೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಇತರರ ನಂಬಿಕೆಯನ್ನು ಕೆಡಿಸುವಂಥವರ ಬಗ್ಗೆ ಬಹು ಎಚ್ಚರದಿಂದಿರಿ. ನೀವು ಕಲಿತಿರುವ ಉಪದೇಶಕ್ಕೆ ಅವರು ವಿರುದ್ಧವಾಗಿದ್ದಾರೆ. ನೀವು ಅವರಿಂದ ದೂರವಿರಿ. 18 ಅಂಥ ಜನರು ನಮ್ಮ ಪ್ರಭುವಾದ ಕ್ರಿಸ್ತನ ಸೇವೆ ಮಾಡುತ್ತಿಲ್ಲ. ಅವರು ಕೇವಲ ತಮ್ಮ ಸುಖಕ್ಕಾಗಿ ಈ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೆಟ್ಟದರ ಬಗ್ಗೆ ತಿಳಿದಿಲ್ಲದ ಜನರ ಮನಸ್ಸುಗಳನ್ನು ಮೋಸಗೊಳಿಸುವುದಕ್ಕಾಗಿ ಅವರು ನಯನಾಜುಕಿನ ನುಡಿಗಳನ್ನಾಡುತ್ತಾರೆ ಮತ್ತು ಮುಖಸ್ತುತಿಯ ಮಾತುಗಳನ್ನಾಡುತ್ತಾರೆ. 19 ನಿಮ್ಮ ವಿಧೇಯತ್ವವು ಎಲ್ಲಾ ವಿಶ್ವಾಸಿಗಳಿಗೆ ತಿಳಿದಿದೆ. ಆದ್ದರಿಂದ ನಿಮ್ಮ ವಿಷಯದಲ್ಲಿ ನಾನು ಬಹು ಸಂತೋಷಪಡುತ್ತೇನೆ. ಆದರೆ ಒಳ್ಳೆಯ ಸಂಗತಿಗಳ ಬಗ್ಗೆ ನೀವು ವಿವೇಕಿಗಳಾಗಿರಬೇಕೆಂದು ಮತ್ತು ಕೆಟ್ಟಸಂಗತಿಗಳ ಬಗ್ಗೆ ಏನೂ ತಿಳಿದಿಲ್ಲದವರಾಗಿರಬೇಕೆಂದು ನಾನು ಅಪೇಕ್ಷಿಸುತ್ತೇನೆ.

20 ಶಾಂತಿಯನ್ನು ಕೊಡುವ ದೇವರು ಬೇಗನೆ ಸೈತಾನನನ್ನು ಸೋಲಿಸಿ, ಅವನ ಮೇಲೆ ನಿಮಗೆ ಅಧಿಕಾರವನ್ನು ಕೊಡುವನು.

ನಮ್ಮ ಪ್ರಭುವಾದ ಯೇಸುವಿನ ಕೃಪೆಯು ನಿಮ್ಮೊಂದಿಗಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International