Revised Common Lectionary (Complementary)
ರಚನೆಗಾರ: ದಾವೀದ.
5 ಯೆಹೋವನೇ, ನನ್ನ ಮಾತುಗಳಿಗೆ ಕಿವಿಗೊಡು.
ನನ್ನ ಆಲೋಚನೆಗಳಿಗೆ ಗಮನಕೊಡು.
2 ನನ್ನ ರಾಜನೇ, ನನ್ನ ದೇವರೇ, ನಿನಗೇ ಮೊರೆಯಿಡುವೆನು.
ನನ್ನ ಪ್ರಾರ್ಥನೆಯನ್ನು ಆಲೈಸು.
3 ಯೆಹೋವನೇ, ಪ್ರತಿಮುಂಜಾನೆ ನಿನಗೆ ಕಾಣಿಕೆಗಳನ್ನು ಅರ್ಪಿಸಿ ಸಹಾಯಕ್ಕಾಗಿ ಎದುರುನೋಡುವೆನು;
ಪ್ರತಿಮುಂಜಾನೆ ನೀನು ನನ್ನ ಪ್ರಾರ್ಥನೆಗಳಿಗೆ ಕಿವಿಗೊಡುವೆ.
4 ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ.
ನಿನ್ನ ಸನ್ನಿಧಿಯಲ್ಲಿ ದುಷ್ಟರು ಇರಲಾರರು.
5 ನಿನ್ನನ್ನು ನಂಬದವರು ನಿನ್ನ ಬಳಿಗೆ ಬರಲಾರರು;
ದುಷ್ಟರನ್ನು ನೀನು ದ್ವೇಷಿಸುವೆ.
6 ಸುಳ್ಳಾಡುವವರನ್ನು ನೀನು ನಾಶಪಡಿಸುವೆ.
ಕೊಲೆಗಾರರನ್ನೂ ಮೋಸಗಾರರನ್ನೂ ಯೆಹೋವನು ದ್ವೇಷಿಸುವನು.
7 ನಾನಂತೂ ನಿನ್ನ ಮಹಾಕೃಪೆಯನ್ನು ಹೊಂದಿದವನಾಗಿ ನಿನ್ನ ಆಲಯಕ್ಕೆ ಬರುವೆನು,
ನಿನ್ನಲ್ಲಿ ಭಯಭಕ್ತಿಯುಳ್ಳವನಾಗಿ ನಿನ್ನ ಪವಿತ್ರ ಆಲಯದ ಕಡೆಗೆ ಅಡ್ಡಬೀಳುವೆನು.
8 ಯೆಹೋವನೇ, ವೈರಿಗಳು ನನ್ನನ್ನು ಗಮನಿಸುತ್ತಿರುವುದರಿಂದ
ನಿನ್ನ ನೀತಿಯ ಮಾರ್ಗವನ್ನು ನನಗೆ ತೋರಿಸಿ,
ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
9 ಅವರ ಮಾತುಗಳಲ್ಲಿ ಸತ್ಯವೆಂಬುದೇ ಇಲ್ಲ.
ಅವರ ಬಾಯಿಗಳು ಸವಿಮಾತುಗಳನ್ನಾಡಿದರೂ
ಅವರ ಹೃದಯಗಳು ನಾಶಕರವಾದ ಗುಂಡಿಯಾಗಿವೆ.
ಅವರ ಗಂಟಲು ತೆರೆದ ಸಮಾಧಿಗಳಂತಿವೆ.
10 ದೇವರೇ, ಅವರನ್ನು ದಂಡಿಸು!
ಅವರು ತಮ್ಮ ಬಲೆಗಳಿಗೇ ಸಿಕ್ಕಿಕೊಳ್ಳಲಿ.
ಅವರು ನಿನಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.
ಅವರ ಅನೇಕ ಅಪರಾಧಗಳ ನಿಮಿತ್ತ ಅವರನ್ನು ದಂಡಿಸು.
11 ದೇವರಲ್ಲಿ ಭರವಸವಿಟ್ಟಿರುವ ಜನರೆಲ್ಲರೂ ಸದಾಕಾಲ ಸಂತೋಷವಾಗಿರಲಿ.
ನಿನ್ನ ಹೆಸರನ್ನು ಪ್ರೀತಿಸುವ ಜನರನ್ನು ಕಾಪಾಡಿ ಅವರಿಗೆ ಶಕ್ತಿಯನ್ನು ದಯಪಾಲಿಸು.
12 ಯೆಹೋವನೇ, ನೀನು ನೀತಿವಂತರಿಗೆ ಒಳ್ಳೆಯದನ್ನೇ ಮಾಡುವೆ;
ನೀನು ಅವರನ್ನು ವಿಶಾಲವಾದ ಗುರಾಣಿಯಂತೆ ಸಂರಕ್ಷಿಸುವೆ.
ಪ್ರಧಾನ ಯಾಜಕನಾದ ಯೆಹೋಶುವನು ಕಿರೀಟ ಹೊಂದುವನು
9 ಆಗ ತಿರುಗಿ ನಾನು ಯೆಹೋವನಿಂದ ಸಂದೇಶವನ್ನು ಪಡಕೊಂಡೆನು. 10 ಆತನು ಹೇಳಿದ್ದೇನೆಂದರೆ, “ಹೆಲ್ದಾಯ, ತೋಬೀಯ ಮತ್ತು ಯೆದಾಯ ಇವರು ಬಾಬಿಲೋನಿನಿಂದ ಸೆರೆಯಾಳುಗಳಾಗಿ ಬಂದಿರುತ್ತಾರೆ. ಅವರಿಂದ ಬೆಳ್ಳಿಬಂಗಾರವನ್ನು ತೆಗೆದುಕೊಂಡು ಚೆಫನ್ಯನ ಮಗನಾದ ಯೋಷೀಯನ ಮನೆಗೆ ಹೋಗಿರಿ. 11 ಆ ಬೆಳ್ಳಿಬಂಗಾರಗಳಿಂದ ಒಂದು ಕಿರೀಟವನ್ನು ಮಾಡಿ ಯೆಹೋಶುವನ ತಲೆಯ ಮೇಲಿಟ್ಟು ಅವನಿಗೆ ಹೀಗೆ ಹೇಳಿರಿ: (ಯೆಹೋಶುವನು ಪ್ರಧಾನ ಯಾಜಕನಾಗಿದ್ದನು. ಇವನ ತಂದೆ ಯೆಹೋಜಾದಾಕನು.) 12 ಸರ್ವಶಕ್ತನಾದ ಯೆಹೋವನು ಹೀಗೆನ್ನುತ್ತಾನೆ,
“ಕೊಂಬೆ ಎಂಬ ಒಬ್ಬಾತನು ಇದ್ದಾನೆ.
ಆತನು ಬೆಳೆದು ಬಲಿಷ್ಠನಾಗುವನು.
ಆತನು ದೇವಾಲಯವನ್ನು ಕಟ್ಟುವನು.
13 ಆತನು ದೇವಾಲಯವನ್ನು ಕಟ್ಟುವನು
ಮತ್ತು ಗೌರವವನ್ನು ಹೊಂದುವನು.
ತನ್ನ ಸಿಂಹಾಸನದ ಮೇಲೆ ಕುಳಿತುಕೊಂಡು ರಾಜ್ಯವನ್ನು ಆಳುವನು.
ಒಬ್ಬ ಯಾಜಕನು ಆತನ ಸಿಂಹಾಸನದ ಬಳಿಯಲ್ಲಿ ನಿಂತುಕೊಂಡಿರುವನು.
ಅವರಿಬ್ಬರೂ ಸಮಾಧಾನದಿಂದ ಕೆಲಸ ಮಾಡುವರು.
14 ಜನರು ಸ್ಮರಿಸಿಕೊಳ್ಳುವಂತೆ ಅವರು ಆ ಕಿರೀಟವನ್ನು ಆಲಯದೊಳಗೆ ಇಡುವರು. ಅದು ಹೆಲ್ದಾಯ, ತೋಬೀಯ, ಯೆದಾಯ ಮತ್ತು ಚೆಫನ್ಯನ ಮಗನಾದ ಹೇನ್‌ನಿಗೆ ಘನತೆಯನ್ನು ತರುವುದು.”
15 ದೂರದಲ್ಲಿ ವಾಸಿಸುವ ಜನರು ಬಂದು ಆಲಯವನ್ನು ಕಟ್ಟುವರು. ಆಗ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ನೀವು ತಿಳಿಯುವಿರಿ. ಯೆಹೋವನು ಹೇಳಿದಂತೆ ನೀವು ಮಾಡಿದರೆ ಇವೆಲ್ಲಾ ನೆರವೇರುವುದು.
ಜೀವಂತವಾದ ನಿರೀಕ್ಷೆ
3 ನಮ್ಮ ಪ್ರಭುವಾಗಿರುವ ಯೇಸು ಕ್ರಿಸ್ತನ ತಂದೆಯಾದ ದೇವರಿಗೆ ಸ್ತೋತ್ರವಾಗಲಿ. ದೇವರು ಮಹಾ ಕರುಣಾಳುವಾಗಿದ್ದಾನೆ. ಆತನು ತನ್ನ ಕರುಣೆಯಿಂದಲೇ ನಮಗೆ ಹೊಸ ಜೀವವನ್ನು ನೀಡಿದನು. ಸತ್ತವರೊಳಗಿಂದ ಎದ್ದುಬಂದ ಯೇಸು ಕ್ರಿಸ್ತನ ಮೂಲಕ ಅದು ನಮಗೆ ಒಂದು ಜೀವಂತ ನಿರೀಕ್ಷೆಯನ್ನು ತರುತ್ತದೆ. 4 ದೇವರು ತನ್ನ ಮಕ್ಕಳಿಗೆ ನೀಡುವ ಆಶೀರ್ವಾದಗಳಲ್ಲಿ ಈಗ ನಮಗೆ ನಿರೀಕ್ಷೆಯಿದೆ. ಅವು ನಿಮಗಾಗಿ ಪರಲೋಕದಲ್ಲಿ ಇಡಲ್ಪಟ್ಟಿವೆ. ಅವು ಹಾಳಾಗುವುದಿಲ್ಲ, ನಾಶವಾಗುವುದಿಲ್ಲ ಮತ್ತು ಸೌಂದರ್ಯವನ್ನು ಕಳೆದುಕೊಳ್ಳುವುದಿಲ್ಲ.
5 ದೇವರ ಶಕ್ತಿಯು ನಿಮ್ಮ ನಂಬಿಕೆಯ ಮೂಲಕ ನಿಮ್ಮನ್ನು ಕಾಯುತ್ತದೆ. ನಿಮಗೆ ರಕ್ಷಣೆಯಾಗುವವರೆಗೆ ನಿಮ್ಮನ್ನು ಸುರಕ್ಷಿತವಾಗಿಡುತ್ತದೆ. ಸಿದ್ಧವಾಗಿರುವ ಆ ರಕ್ಷಣೆಯು ಅಂತ್ಯಕಾಲದಲ್ಲಿ ನಿಮಗೆ ದೊರೆಯುವುದು. 6 ಇದು ನಿಮ್ಮನ್ನು ಬಹಳ ಸಂತೋಷಗೊಳಿಸುತ್ತದೆ. ಆದರೆ ಈಗ ಸ್ವಲ್ಪಕಾಲ ಅನೇಕ ವಿಧವಾದ ತೊಂದರೆಗಳು ನಿಮ್ಮಲ್ಲಿ ದುಃಖವನ್ನು ಉಂಟುಮಾಡಬಹುದು. 7 ನಿಮ್ಮ ನಂಬಿಕೆಯು ಪರಿಶುದ್ಧವಾಗಿದೆ ಎಂಬುದನ್ನು ಪ್ರಕಟಿಸಲು ಈ ತೊಂದರೆಗಳು ಸಂಭವಿಸುತ್ತವೆ. ನಿಮ್ಮ ನಂಬಿಕೆಯ ಪರಿಶುದ್ಧತೆಯು ಬಂಗಾರದ ಮೌಲ್ಯಕ್ಕಿಂತಲೂ ಹೆಚ್ಚಿನದಾಗಿದೆ. ಬಂಗಾರವು ನಶಿಸಿಹೋಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಲ್ಲಿ ಪುಟ ಹಾಕಿ ಅದರ ಪರಿಶುದ್ಧತೆಯನ್ನು ಶೋಧಿಸುವರು. ಯೇಸು ಕ್ರಿಸ್ತನು ಪ್ರತ್ಯಕ್ಷನಾದಾಗ, ನಿಮ್ಮ ನಂಬಿಕೆಯ ಪರಿಶುದ್ಧತೆಯು ನಿಮಗೆ ಕೀರ್ತಿ, ಪ್ರಭಾವ ಮತ್ತು ಗೌರವಗಳನ್ನು ತರುತ್ತದೆ.
8 ನೀವು ಕ್ರಿಸ್ತನನ್ನು ನೋಡದಿದ್ದರೂ ಆತನನ್ನು ಪ್ರೀತಿಸುವಿರಿ. ಈಗ ಆತನನ್ನು ನೋಡದಿದ್ದರೂ ಆತನಲ್ಲಿ ನಂಬಿಕೆಯಿಟ್ಟಿದ್ದೀರಿ. ನಿಮ್ಮಲ್ಲಿ ಹೇಳಲಾಗದಷ್ಟು ಆನಂದವು ತುಂಬಿಕೊಂಡಿದೆ. ಆ ಆನಂದವು ಪ್ರಭಾವಪೂರ್ಣವಾಗಿದೆ. 9 ನಿಮ್ಮ ನಂಬಿಕೆಗೆ ಒಂದು ಗುರಿಯಿದೆ. ನಿಮ್ಮ ಆತ್ಮವನ್ನು ರಕ್ಷಿಸಬೇಕೆಂಬುದೇ ಆ ಗುರಿ. ನಿಮ್ಮ ಗುರಿಯಾಗಿರುವ ರಕ್ಷಣೆಯನ್ನು ಹೊಂದಿಕೊಳ್ಳುವಿರಿ.
Kannada Holy Bible: Easy-to-Read Version. All rights reserved. © 1997 Bible League International