Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 19:7-14

ಯೆಹೋವನ ಉಪದೇಶಗಳು ನಿಷ್ಕಳಂಕವಾಗಿವೆ.
    ಅವು ದೇವಜನರಿಗೆ ಬಲವನ್ನು ಕೊಡುತ್ತವೆ.
ಯೆಹೋವನ ಕಟ್ಟಳೆಯು ಭರವಸೆಗೆ ಯೋಗ್ಯವಾಗಿದೆ.
    ಅದು ಮೂಢರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ.
ಯೆಹೋವನ ನಿಯಮಗಳು ನೀತಿಯ ಕಟ್ಟಳೆಗಳಾಗಿವೆ.
    ಅವು ಮನುಸ್ಸನ್ನು ಸಂತೋಷಗೂಳಿಸುತ್ತವೆ.
ಯೆಹೋವನ ಆಜ್ಞೆಗಳು ಒಳ್ಳೆಯ ಆಜ್ಞೆಗಳಾಗಿವೆ.
    ಅವು ಕಣ್ಣುಗಳಿಗೆ ಬೆಳಕನ್ನು ನೀಡುತ್ತವೆ.

ಯೆಹೋವನಲ್ಲಿಡುವ ಭಯಭಕ್ತಿಯು ಪರಿಶುದ್ಧವಾಗಿದೆ;
    ಅದು ಶಾಶ್ವತವಾದದ್ದು.
ಯೆಹೋವನ ವಿಧಿಗಳು ಯಥಾರ್ಥವಾಗಿವೆ;
    ಅವು ಯಾವಾಗಲೂ ನ್ಯಾಯಾನುಸಾರವಾಗಿವೆ.
10 ಆತನ ಉಪದೇಶಗಳು ಬಂಗಾರಕ್ಕಿಂತಲೂ ಅಮೂಲ್ಯವಾಗಿವೆ;
    ಅಪ್ಪಟವಾದ ಜೇನುತುಪ್ಪಕ್ಕಿಂತಲೂ ಮಧುರವಾಗಿವೆ.
11 ಆತನ ಉಪದೇಶಗಳು ಆತನ ಸೇವಕನನ್ನು ಎಚ್ಚರಿಸುತ್ತವೆ;
    ಅವುಗಳನ್ನು ಕೈಕೊಂಡು ನಡೆದರೆ ಒಳ್ಳೆಯದಾಗುವುದು.

12 ಯೆಹೋವನೇ, ಯಾವನೂ ತನ್ನ ತಪ್ಪುಗಳನ್ನೆಲ್ಲಾ ತಿಳಿದುಕೊಳ್ಳುವುದಿಲ್ಲ.
    ಆದ್ದರಿಂದ ಗುಪ್ತ ಪಾಪಗಳನ್ನು ಮಾಡಲು ನನ್ನನ್ನು ಬಿಟ್ಟುಬಿಡಬೇಡ.
13 ನನ್ನ ಇಷ್ಟಾನುಸಾರ ಪಾಪಮಾಡಲು ನನ್ನನ್ನು ಬಿಟ್ಟುಬಿಡಬೇಡ.
    ಆ ಪಾಪಗಳು ನನ್ನನ್ನು ಆಳದಿರಲಿ.
ನೀನು ಸಹಾಯಮಾಡಿದರೆ
    ನಾನು ಪರಿಶುದ್ಧನಾಗಿಯೂ ಪಾಪದಿಂದ ವಿಮುಕ್ತನಾಗಿಯೂ ಇರಲು ಸಾಧ್ಯ.
14 ನನ್ನ ಮಾತುಗಳೂ ನನ್ನ ಆಲೋಚನೆಗಳೂ ನಿನಗೆ ಮೆಚ್ಚಿಕೆಯಾಗಿರಲಿ.
    ಯೆಹೋವನೇ, ನೀನೇ ನನ್ನ ಬಂಡೆಯಾಗಿರುವೆ.[a] ನನ್ನನ್ನು ರಕ್ಷಿಸುವಾತನು ನೀನೇ.

ವಿಮೋಚನಕಾಂಡ 18:13-27

13 ಮರುದಿನ ಮೋಶೆಯು ಜನರಿಗೆ ನ್ಯಾಯನಿರ್ಣಯ ಮಾಡಲು ತನ್ನ ಆಸನದ ಮೇಲೆ ಕುಳಿತುಕೊಂಡನು. ಅಲ್ಲಿ ಬಹಳ ಜನರಿದ್ದರು, ಆದ್ದರಿಂದ ಅವರು ಮುಂಜಾನೆಯಿಂದ ಸಾಯಂಕಾಲದವರೆಗೆ ಅವನ ಸುತ್ತಲೂ ನಿಂತುಕೊಂಡಿದ್ದರು.

14 ಮೋಶೆಯು ಜನರ ನ್ಯಾಯತೀರಿಸುವುದನ್ನು ಇತ್ರೋನನು ನೋಡಿ, “ನೀನು ಯಾಕೆ ಹೀಗೆ ಮಾಡುತ್ತಿರುವೆ? ನೀನೊಬ್ಬನೇ ಯಾಕೆ ನ್ಯಾಯತೀರಿಸಬೇಕು? ಜನರು ದಿನವೆಲ್ಲಾ ನಿನ್ನ ಬಳಿಗೆ ಯಾಕೆ ಬರಬೇಕು?” ಎಂದು ಕೇಳಿದನು.

15 ಆಗ ಮೋಶೆ ತನ್ನ ಮಾವನಿಗೆ, “ಜನರು ನನ್ನ ಬಳಿಗೆ ಬಂದು ದೇವರ ತೀರ್ಮಾನವನ್ನು ಕೇಳಬಯಸುತ್ತಾರೆ. 16 ಅವರೊಳಗೆ ವ್ಯಾಜ್ಯವಿದ್ದರೆ ಅವರು ನನ್ನ ಬಳಿಗೆ ಬರುತ್ತಾರೆ. ಯಾವನು ನ್ಯಾಯವಂತನೆಂದು ನಾನು ತೀರ್ಮಾನಿಸುತ್ತೇನೆ. ಈ ರೀತಿಯಾಗಿ ನಾನು ದೇವರ ಕಟ್ಟಳೆಗಳನ್ನು ಮತ್ತು ಬೋಧನೆಗಳನ್ನು ಜನರಿಗೆ ಬೋಧಿಸುತ್ತೇನೆ” ಅಂದನು.

17 ಆದರೆ ಮೋಶೆಯ ಮಾವನು ಅವನಿಗೆ, “ನೀನು ಹೀಗೆ ಮಾಡುತ್ತಿರುವುದು ಒಳ್ಳೆಯದಲ್ಲ. 18 ಈ ಕೆಲಸ ನೀನೊಬ್ಬನೇ ಮಾಡುವುದು ಬಹಳ ಪ್ರಯಾಸಕರ. ಇದು ನಿನ್ನನ್ನೂ ಆಯಾಸಗೊಳಿಸುತ್ತದೆ; ಜನರನ್ನೂ ಆಯಾಸಗೊಳಿಸುತ್ತದೆ. ನಿನ್ನೊಬ್ಬನಿಂದಲೇ ಈ ಕೆಲಸವನ್ನು ಮಾಡಲಾಗದು. 19 ಕೇಳು, ನಾನು ನಿನಗೆ ಕೆಲವು ಸಲಹೆಗಳನ್ನು ಕೊಡುವೆನು. ಯೆಹೋವನು ನಿನ್ನೊಡನೆ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನೀನು ಮಾಡಬೇಕಾದದ್ದು ಇವೇ: ಜನರ ವ್ಯಾಜ್ಯಗಳನ್ನು ನೀನು ಕೇಳುವುದನ್ನು ಮುಂದುವರಿಸಬೇಕು; ಈ ಸಂಗತಿಗಳ ಬಗ್ಗೆ ನೀನು ದೇವರೊಂದಿಗೆ ಮಾತಾಡುವುದನ್ನೂ ಮುಂದುವರಿಸಬೇಕು; 20 ನೀನು ದೇವರ ಕಟ್ಟಳೆಗಳನ್ನು ಮತ್ತು ಬೋಧನೆಗಳನ್ನು ಜನರಿಗೆ ಬೋಧಿಸಬೇಕು; ನಿಬಂಧನೆಗಳನ್ನು ಉಲ್ಲಂಘಿಸದಂತೆ ಅವರನ್ನು ಎಚ್ಚರಿಸಬೇಕು; ಜೀವಿಸಲು ಸರಿಯಾದ ಮಾರ್ಗವನ್ನು ಅವರಿಗೆ ಬೋಧಿಸಬೇಕು; ಅವರು ಮಾಡಬೇಕಾದದ್ದನ್ನು ಅವರಿಗೆ ತಿಳಿಸಬೇಕು. 21 ಆದರೆ ನೀನು ಜನರೊಳಗೆ ದೇವಭಕ್ತರೂ ಲಂಚಮುಟ್ಟದವರೂ ಆಗಿರುವವರನ್ನು ಆರಿಸಿಕೊಳ್ಳಬೇಕು. ಅವರನ್ನು ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸಬೇಕು. 22 ಈ ಅಧಿಕಾರಿಗಳು ಜನರಿಗೆ ನ್ಯಾಯತೀರಿಸಲಿ. ಬಹಳ ಪ್ರಾಮುಖ್ಯವಾದ ವ್ಯಾಜ್ಯವಿದ್ದರೆ, ತೀರ್ಮಾನಕ್ಕಾಗಿ ಅವರು ನಿನ್ನ ಬಳಿಗೆ ಬರಬಹುದು. ಆದರೆ ಇತರ ವ್ಯಾಜ್ಯಗಳನ್ನು ಅವರೇ ತೀರ್ಮಾನಿಸಿಕೊಳ್ಳಬಹುದು. ಈ ರೀತಿಯಾಗಿ ಮಾಡಿದರೆ, ಅದು ನಿನಗೆ ಸುಲಭವಾಗುವುದು. ಮಾತ್ರವಲ್ಲದೆ, ಈ ಜನರು ನಿನ್ನ ಕೆಲಸವನ್ನು ತಮ್ಮೊಳಗೆ ಹಂಚಿಕೊಳ್ಳುವರು. 23 ನೀನು ಈ ಸಂಗತಿಗಳನ್ನು ಮಾಡಿದರೆ, ಯೆಹೋವನ ಚಿತ್ತವಿದ್ದರೆ, ನೀನು ನಿನ್ನ ಕೆಲಸವನ್ನು ಮಾಡುತ್ತಾ ಮುಂದುವರಿಯಲು ಶಕ್ತನಾಗುವೆ ಮತ್ತು ಅದೇ ಸಮಯದಲ್ಲಿ ಜನರೆಲ್ಲರೂ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಂಡು ಮನೆಗೆ ಹೋಗಬಹುದು” ಎಂದು ಹೇಳಿದನು.

24 ಮೋಶೆಯು ತನ್ನ ಮಾವನಾದ ಇತ್ರೋನನು ಹೇಳಿದಂತೆ ಮಾಡಿದನು. 25 ಮೋಶೆಯು ಇಸ್ರೇಲರೊಳಗಿಂದ ನೀತಿವಂತರನ್ನು ಆರಿಸಿಕೊಂಡು ಅವರನ್ನು ಹೀಗೆ ಸಾವಿರ ಜನರ ಮೇಲೆಯೂ ನೂರು ಜನರ ಮೇಲೆಯೂ ಐವತ್ತು ಜನರ ಮೇಲೆಯೂ ಹತ್ತು ಜನರ ಮೇಲೆಯೂ ಅಧಿಕಾರಿಗಳನ್ನಾಗಿ ಮಾಡಿದನು 26 ಈ ಅಧಿಕಾರಿಗಳು ಜನರ ನ್ಯಾಯಾಧಿಪತಿಗಳಾಗಿದ್ದರು. ಜನರು ತಮ್ಮ ವ್ಯಾಜ್ಯಗಳನ್ನು ಈ ಅಧಿಕಾರಿಗಳ ಬಳಿಗೆ ಯಾವಾಗಲೂ ತರಬಹುದಾಗಿತ್ತು. ಮೋಶೆಯು ಬಹು ಪ್ರಾಮುಖ್ಯವಾದ ವ್ಯಾಜ್ಯಗಳನ್ನು ಮಾತ್ರ ತೀರ್ಮಾನಿಸುತ್ತಿದ್ದನು.

27 ಸ್ವಲ್ಪ ಸಮಯದ ನಂತರ ಮೋಶೆಯು ತನ್ನ ಮಾವನಾದ ಇತ್ರೋನನನ್ನು ಬೀಳ್ಕೊಟ್ಟನು; ಇತ್ರೋನನು ತನ್ನ ಸ್ವದೇಶಕ್ಕೆ ಹಿಂತಿರುಗಿಹೋದನು.

ಅಪೊಸ್ತಲರ ಕಾರ್ಯಗಳು 4:13-31

13 ಪೇತ್ರ ಮತ್ತು ಯೋಹಾನರಿಗೆ ವಿಶೇಷವಾದ ಯಾವ ತರಬೇತಿಯಾಗಲಿ ವಿದ್ಯೆಯಾಗಲಿ ಇಲ್ಲವೆಂಬುದು ಯೆಹೂದ್ಯನಾಯಕರಿಗೆ ಗೊತ್ತಿತ್ತು. ಅಲ್ಲದೆ ಅವರು ಹೆದರದೆ ಮಾತಾಡುವುದನ್ನು ಸಹ ನಾಯಕರು ಗಮನಿಸಿದರು. ಆದ್ದರಿಂದ ಆ ನಾಯಕರಿಗೆ ಬಹಳ ಆಶ್ಚರ್ಯವಾಯಿತು. ಪೇತ್ರ ಮತ್ತು ಯೋಹಾನರು ಯೋಸುವಿನೊಂದಿಗೆ ಇದ್ದರೆಂಬುದನ್ನು ಅವರು ಆ ಬಳಿಕ ಗ್ರಹಿಸಿಕೊಂಡರು. 14 ಈ ಇಬ್ಬರು ಅಪೊಸ್ತಲರ ಪಕ್ಕದಲ್ಲೇ ನಿಂತುಕೊಂಡಿದ್ದ ಕುಂಟನನ್ನು ಅವರು ನೋಡಿದರು. ಅವನಿಗೆ ಗುಣವಾಗಿರುವುದನ್ನು ಅವರು ಕಂಡರು. ಆದ್ದರಿಂದ ಅಪೊಸ್ತಲರ ಮಾತಿಗೆ ವಿರುದ್ಧವಾಗಿ ಅವರೇನೂ ಹೇಳಲಾಗಲಿಲ್ಲ.

15 ಯೆಹೂದ್ಯನಾಯಕರು ಅಪೊಸ್ತಲರನ್ನು ಸಭೆಯಿಂದ ಹೊರಗೆ ಕಳುಹಿಸಿ, 16 “ಇವರಿಗೆ ನಾವೇನು ಮಾಡೋಣ? ಇವರು ದೊಡ್ಡ ಅದ್ಭುತಕಾರ್ಯ ಮಾಡಿರುವುದು ಜೆರುಸಲೇಮಿನಲ್ಲಿರುವ ಪ್ರತಿಯೊಬ್ಬರಿಗೂ ಗೊತ್ತಿದೆ. ಈ ಅದ್ಭುತಕಾರ್ಯವು ಸ್ಪಷ್ಟವಾಗಿರುವುದರಿಂದ ಅದನ್ನು ಅಸತ್ಯವೆಂದು ಹೇಳಲಾಗದು. 17 ಆದರೆ ಈ ಮನುಷ್ಯನ (ಯೇಸುವಿನ) ಬಗ್ಗೆ ಜನರಿಗೆ ಹೇಳದಂತೆ ನಾವು ಅವರನ್ನು ಬೆದರಿಸಬೇಕು. ಆಗ ಈ ಸಮಾಚಾರ ಜನರ ಮಧ್ಯದಲ್ಲಿ ಹರಡುವುದಿಲ್ಲ” ಎಂದು ಅವರು ಮಾತಾಡಿಕೊಂಡರು.

18 ಆದ್ದರಿಂದ ಯೆಹೂದ್ಯನಾಯಕರು ಪೇತ್ರ ಮತ್ತು ಯೋಹಾನರನ್ನು ಮತ್ತೆ ಒಳಗೆ ಕರೆಸಿ, ಯೇಸುವಿನ ಹೆಸರಿನಲ್ಲಿ ಏನೂ ಹೇಳಬಾರದೆಂದೂ, ಏನೂ ಬೋಧಿಸಬಾರದೆಂದೂ ಎಚ್ಚರಿಕೆ ಕೊಟ್ಟರು. 19 ಆದರೆ ಪೇತ್ರ ಮತ್ತು ಯೋಹಾನ ಅವರಿಗೆ, “ನಾವು ನಿಮಗೆ ವಿಧೇಯರಾಗಬೇಕೇ ಅಥವಾ ದೇವರಿಗೆ ವಿಧೇಯರಾಗಬೇಕೇ? ಇದರಲ್ಲಿ ಯಾವುದು ದೇವರಿಗೆ ಅಪೇಕ್ಷೆಯಾದದು? ನೀವೇ ಹೇಳಿ. 20 ನಾವಂತೂ ಸುಮ್ಮನಿರಲಾರೆವು. ನಾವು ಕಂಡ ಮತ್ತು ಕೇಳಿದ ಸಂಗತಿಗಳ ಬಗ್ಗೆ ಜನರಿಗೆ ಹೇಳಲೇಬೇಕು” ಎಂದು ಉತ್ತರಕೊಟ್ಟರು.

21-22 ಯೆಹೂದ್ಯನಾಯಕರಿಗೆ ಅಪೊಸ್ತಲರನ್ನು ದಂಡಿಸಲು ಯಾವ ಮಾರ್ಗವೂ ತೋಚಲಿಲ್ಲ, ಯಾಕೆಂದರೆ ಸಂಭವಿಸಿದ ಕಾರ್ಯಕ್ಕಾಗಿ ಜನರೆಲ್ಲರೂ ದೇವರನ್ನು ಕೊಂಡಾಡುತ್ತಿದ್ದರು. (ಈ ಸೂಚಕಕಾರ್ಯದಿಂದ ಗುಣಹೊಂದಿದ ವ್ಯಕ್ತಿಗೆ ನಲವತ್ತು ವರ್ಷಕ್ಕಿಂತಲೂ ಹೆಚ್ಚು ವಯಸ್ಸಾಗಿತ್ತು.) ಆದ್ದರಿಂದ ಯೆಹೂದ್ಯನಾಯಕರು ಅಪೊಸ್ತಲರನ್ನು ಮತ್ತೆ ಎಚ್ಚರಿಸಿ ಕಳುಹಿಸಿಬಿಟ್ಟರು.

ಪೇತ್ರ ಮತ್ತು ಯೋಹಾನರು ಹಿಂತಿರುಗಿದರು

23 ಪೇತ್ರ ಮತ್ತು ಯೋಹಾನರು ಯೆಹೂದ್ಯನಾಯಕರ ಸಭೆಯಿಂದ ಹೊರಟು ತಮ್ಮ ಸಮುದಾಯಕ್ಕೆ ಹೋದರು. ಮಹಾಯಾಜಕರು ಮತ್ತು ಯೆಹೂದ್ಯರ ಹಿರಿಯ ನಾಯಕರು ತಮಗೆ ಹೇಳಿದ ಪ್ರತಿಯೊಂದನ್ನು ಅವರು ತಮ್ಮ ಸಮುದಾಯದವರಿಗೆ ತಿಳಿಸಿದರು. 24 ಇದನ್ನು ಕೇಳಿದಾಗ ವಿಶ್ವಾಸಿಗಳು ಏಕಮನಸ್ಸಿನಿಂದ ದೇವರಲ್ಲಿ ಪ್ರಾರ್ಥಿಸಿದರು: ಅವರೆಲ್ಲರಲ್ಲಿ ಒಂದೇ ಮನಸ್ಸಿತ್ತು. “ಒಡೆಯನೇ, ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಮತ್ತು ಲೋಕದಲ್ಲಿರುವ ಪ್ರತಿಯೊಂದನ್ನೂ ನಿರ್ಮಿಸಿದಾತನು ನೀನೇ. 25 ನಮ್ಮ ಪಿತೃವಾದ ದಾವೀದನು ನಿನ್ನ ಸೇವಕನಾಗಿದ್ದನು. ಅವನು ಪವಿತ್ರಾತ್ಮನ ಸಹಾಯದಿಂದ ಈ ಮಾತುಗಳನ್ನು ಬರೆದನು:

‘ಜನಾಂಗಗಳು ಕೂಗಾಡುವುದೇಕೆ?
ಈ ಲೋಕದ ಜನರು ದೇವರಿಗೆ ವಿರೋಧವಾಗಿ ಕಾರ್ಯಗಳನ್ನು ಯೋಚಿಸುತ್ತಿರುವುದೇಕೆ? ಇದರಿಂದ ಪ್ರಯೋಜನವೇನೂ ಇಲ್ಲ!

26 ‘ಭೂಲೋಕದ ರಾಜರು ಹೋರಾಡಲು ಸಿದ್ಧರಾಗಿದ್ದಾರೆ;
    ಪ್ರಭುವಿಗೂ ಆತನ ಕ್ರಿಸ್ತನಿಗೂ ವಿರೋಧವಾಗಿ ಅಧಿಪತಿಗಳೆಲ್ಲರೂ ಒಟ್ಟಾಗಿ ಸೇರಿದ್ದಾರೆ.’(A)

27 ಹೆರೋದರಾಜನು, ಪೊಂತಿಯಸ್ ಪಿಲಾತನು, ಜನಾಂಗಗಳು ಮತ್ತು ಯೆಹೂದ್ಯರು ಈ ಪಟ್ಟಣದಲ್ಲಿ ಒಟ್ಟಾಗಿ ಸೇರಿಕೊಂಡು ಯೇಸುವನ್ನು ವಿರೋಧಿಸಿದಾಗ ಈ ಸಂಗತಿಗಳು ನಿಜವಾಗಿಯೂ ನೆರವೇರಿದವು. ಯೇಸು ನಿನ್ನ ಪವಿತ್ರ ಸೇವಕನಾಗಿದ್ದಾನೆ. ನೀನು ಆತನನ್ನು ಅಭಿಷೇಕಿಸಿದೆ. 28 ಯೇಸುವಿನ ವಿರುದ್ಧ ಒಟ್ಟಾಗಿ ಬಂದ ಈ ಜನರು ನಿನ್ನ ಯೋಜನೆ ನೆರವೇರುವಂತೆ ಮಾಡಿದರು. ನಿನ್ನ ಶಕ್ತಿಯಿಂದಲೂ ನಿನ್ನ ಚಿತ್ತದಿಂದಲೂ ಇದು ನೆರವೇರಿತು. 29 ಪ್ರಭುವೇ, ಈಗ ಅವರು ಹೇಳುತ್ತಿರುವುದನ್ನು ಕೇಳು. ಅವರು ನಮ್ಮನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ! ಪ್ರಭುವೇ ನಾವು ನಿನ್ನ ಸೇವಕರು. ನಿನ್ನ ವಾಕ್ಯವನ್ನು ಭಯವಿಲ್ಲದೆ ಹೇಳಲು ನೀನೇ ಸಹಾಯ ಮಾಡು. 30 ನಿನ್ನ ಕೈಚಾಚಿ ಯೇಸುವಿನ ಹೆಸರಿನ ಮೂಲಕ ರೋಗಿಗಳನ್ನು ಗುಣಪಡಿಸು; ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡು” ಎಂದು ಅವರು ಪ್ರಾರ್ಥಿಸಿದರು.

31 ಹೀಗೆ ವಿಶ್ವಾಸಿಗಳು ಪ್ರಾರ್ಥಿಸುತ್ತಿದ್ದಾಗ, ಅವರು ಸಭೆ ಸೇರಿದ್ದ ಸ್ಥಳವು ನಡುಗಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ದೇವರ ವಾಕ್ಯವನ್ನು ಭಯವಿಲ್ಲದೆ ಪ್ರಕಟಿಸಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International