Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 146

146 ಯೆಹೋವನಿಗೆ ಸ್ತೋತ್ರವಾಗಲಿ!
    ನನ್ನ ಮನವೇ, ಯೆಹೋವನನ್ನು ಸ್ತುತಿಸು!
ನನ್ನ ಜೀವಮಾನವೆಲ್ಲಾ ಯೆಹೋವನನ್ನು ಸ್ತುತಿಸುವೆನು;
    ಆತನನ್ನು ಸಂಕೀರ್ತಿಸುವೆನು.
ಸಹಾಯಕ್ಕಾಗಿ ನಿಮ್ಮ ನಾಯಕರುಗಳನ್ನು ಅವಲಂಬಿಸಿಕೊಳ್ಳಬೇಡಿ.
    ಮನುಷ್ಯರಲ್ಲಿ ಭರವಸವಿಡಬೇಡಿ, ಅವರು ನಿಮ್ಮನ್ನು ರಕ್ಷಿಸಲಾರರು.
ಮನುಷ್ಯರು ಸತ್ತು ಸಮಾಧಿಗೆ ಸೇರುವರು;
    ಆಗ ನಿಮಗೆ ಸಹಾಯಮಾಡಬೇಕೆಂಬ ಅವರ ಆಲೋಚನೆಗಳೆಲ್ಲಾ ಅಳಿದುಹೋಗುತ್ತವೆ.
ಯಾರಿಗೆ ದೇವರು ಸಹಾಯಕನೋ,
    ಯಾರು ತಮ್ಮ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದಾರೋ, ಅವರೇ ಭಾಗ್ಯವಂತರು.
ಯೆಹೋವನು ಆಕಾಶವನ್ನೂ ಭೂಮಿಯನ್ನೂ
    ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದನು.
ಆತನು ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವನು.
ಹಿಂಸೆಗೆ ಗುರಿಯಾಗಿರುವವರಿಗೆ ನ್ಯಾಯವನ್ನೂ;
    ಹಸಿದವರಿಗೆ ಆಹಾರವನ್ನೂ ಕೊಡುವವನು ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುವನು.
    ಯೆಹೋವನು ಕುರುಡರಿಗೆ ದೃಷ್ಟಿಕೊಡುವನು.
ಯೆಹೋವನು ಕುಗ್ಗಿಹೋದವರನ್ನು ಉದ್ಧರಿಸುವನು.
    ಯೆಹೋವನು ನೀತಿವಂತರನ್ನು ಪ್ರೀತಿಸುವನು.
ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ.
    ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ.
    ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು.
10 ಯೆಹೋವನು ಸದಾಕಾಲ ಆಳುವನು!
    ಚೀಯೋನೇ, ನಿನ್ನ ದೇವರು ಶಾಶ್ವತವಾಗಿ ಆಳುವನು!

ಯೆಹೋವನಿಗೆ ಸ್ತೋತ್ರವಾಗಲಿ!

ಯೆಶಾಯ 33:1-9

ದುಷ್ಟತನವು ಹೆಚ್ಚಿನ ದುಷ್ಟತನಕ್ಕೆ ಕಾರಣ

33 ನೀವು ಯುದ್ಧಮಾಡಿ ಇತರರಿಂದ ಸುಲಿದುಕೊಳ್ಳುತ್ತೀರಿ. ಆದರೆ ಅವರು ನಿಮ್ಮಿಂದ ಏನೂ ಕದ್ದುಕೊಳ್ಳಲಿಲ್ಲ. ನೀವು ಜನರಿಗೆ ವಿರುದ್ಧವಾಗಿ ತಿರುಗುತ್ತೀರಿ. ಆದರೆ ಅವರು ನಿಮಗೆ ವಿರುದ್ಧವಾಗಲಿಲ್ಲ. ಆದ್ದರಿಂದ ನೀವು ಕದ್ದುಕೊಳ್ಳುವದನ್ನು ಬಿಟ್ಟಾಗ ಇತರರು ನಿಮ್ಮದನ್ನು ಕದ್ದುಕೊಳ್ಳುತ್ತಾರೆ. ನೀವು ಇತರರಿಗೆ ಹಾನಿ ಮಾಡುವದನ್ನು ನಿಲ್ಲಿಸಿದಾಗ ಇತರರು ನಿಮಗೆ ಹಾನಿ ಮಾಡುವರು. ಆಗ ನೀವು ಹೀಗೆ ಹೇಳುವಿರಿ:

“ಯೆಹೋವನೇ, ನಮಗೆ ದಯೆತೋರು.
    ನಾವು ನಿನ್ನ ಸಹಾಯಕ್ಕಾಗಿ ಎದುರುನೋಡುತ್ತಿದ್ದೇವೆ.
ಯೆಹೋವನೇ, ಪ್ರತಿಮುಂಜಾನೆ ನಮಗೆ ಶಕ್ತಿ ದಯಪಾಲಿಸು,
    ಕಷ್ಟದಲ್ಲಿರುವಾಗ ನಮ್ಮನ್ನು ರಕ್ಷಿಸು.
ನಿನ್ನ ಬಲಯುತವಾದ ಸ್ವರವು ಜನರಿಗೆ ಹೆದರಿಕೆಯನ್ನು ಉಂಟುಮಾಡುತ್ತದೆ, ಅವರು ನಿನ್ನಿಂದ ಓಡಿಹೋಗುವರು.
ನಿನ್ನ ಮಹೋನ್ನತೆಯು ಜನಾಂಗಗಳನ್ನು ದಿಕ್ಕಾಪಾಲಾಗಿ ಮಾಡುತ್ತದೆ.”

ನೀವು ಯುದ್ಧದಲ್ಲಿ ದೋಚಿಕೊಂಡಿದ್ದೀರಿ. ಅವುಗಳು ನಿಮ್ಮಿಂದ ತೆಗೆಯಲ್ಪಡುವವು. ಅನೇಕಾನೇಕ ಜನರು ಬಂದು ನಿಮ್ಮ ಸಂಪತ್ತನ್ನು ದೋಚಿಕೊಳ್ಳುವರು. ಮಿಡತೆಗಳು ನಿಮ್ಮ ಬೆಳೆಯನ್ನು ತಿಂದು ನಾಶಮಾಡಿದಂತೆ ಅದಿರುವದು.

ಯೆಹೋವನೇ ಉನ್ನತೋನ್ನತನು. ಆತನು ಬಹು ಉನ್ನತವಾದ ಸ್ಥಳದಲ್ಲಿ ವಾಸಿಸುತ್ತಾನೆ. ಆತನು ಚೀಯೋನನ್ನು ನ್ಯಾಯನೀತಿಗಳಿಂದ ತುಂಬಿಸುವನು.

ಜೆರುಸಲೇಮೇ, ನೀನು ಐಶ್ವರ್ಯವಂತಳಾಗಿರುವೆ. ನೀನು ದೇವರ ವಿಷಯವಾದ ಜ್ಞಾನ, ತಿಳುವಳಿಕೆ ಮತ್ತು ರಕ್ಷಣೆಗಳಿಂದ ಐಶ್ವರ್ಯವಂತಳಾಗಿರುವೆ. ಯೆಹೋವನ ಮೇಲೆ ನಿನಗಿರುವ ಗೌರವವೇ ನಿನ್ನ ಭಂಡಾರವಾಗಿದೆ. ನೀನು ಹೀಗೆಯೇ ಮುಂದುವರಿಯುವೆ.

ಆದರೆ ಕಿವಿಗೊಟ್ಟು ಕೇಳಿಸಿಕೊ, ದೂತರು ಹೊರಗೆ ಅಳುತ್ತಿದ್ದಾರೆ. ಸಮಾಧಾನದ ಸಮಾಚಾರವನ್ನು ತರುವವರು ಗಟ್ಟಿಯಾಗಿ ರೋಧಿಸುತ್ತಿದ್ದಾರೆ. ರಸ್ತೆಗಳು ಹಾಳಾಗಿ ಯಾರೂ ಅದರಲ್ಲಿ ನಡಿಯುವದಿಲ್ಲ. ಜನರು ತಾವು ಮಾಡಿದ ಒಪ್ಪಂದವನ್ನು ನಡಿಸುತ್ತಿಲ್ಲ. ಸಾಕ್ಷಿಗಳ ಮಾತುಗಳನ್ನು ಜನರು ಗೌರವಿಸಲು ನಿರಾಕರಿಸುತ್ತಾರೆ. ಜನರು ಒಬ್ಬರನ್ನೊಬ್ಬರು ನಂಬುವದಿಲ್ಲ. ದೇಶವು ಅಸ್ವಸ್ಥತೆಯಿಂದ ಸಾಯುತ್ತಿದೆ. ಲೆಬನೋನ್ ನಾಚಿಗೊಂಡು ಒಣಗುತ್ತಿದೆ. ಶಾರೋನ್ ತಗ್ಗು ಒಣಗಿ ನಿರ್ಜನವಾಗಿದೆ. ಬಾಷಾನ್ ಮತ್ತು ಕರ್ಮೆಲ್ ಹಿಂದೆ ಬಹು ಅಂದವಾದ ಸಸಿಗಳನ್ನು ಬೆಳೆಯಿಸುತ್ತಿದ್ದವು. ಈಗ ಅವುಗಳು ಅಲ್ಲಿ ಬೆಳೆಯುವದಿಲ್ಲ.

ಮತ್ತಾಯ 15:21-31

ಯೆಹೂದ್ಯಳಲ್ಲದ ಸ್ತ್ರೀಗೆ ಯೇಸು ಮಾಡಿದ ಸಹಾಯ

(ಮಾರ್ಕ 7:24-30)

21 ಯೇಸು ಆ ಸ್ಥಳವನ್ನು ಬಿಟ್ಟು, ಟೈರ್ ಮತ್ತು ಸೀದೋನ್‌ಗಳ ಸುತ್ತಮುತ್ತಲಿನ ಪ್ರದೇಶಕ್ಕೆ ಹೋದನು. 22 ಆ ಸ್ಥಳದಿಂದ ಕಾನಾನ್ಯಳಾದ ಒಬ್ಬ ಸ್ತ್ರೀ ಯೇಸುವಿನ ಬಳಿಗೆ ಬಂದು, “ಪ್ರಭುವೇ, ದಾವೀದನ ಮಗನೇ, ದಯವಿಟ್ಟು ನನಗೆ ಕರುಣೆ ತೋರು! ನನ್ನ ಮಗಳಲ್ಲಿ ದೆವ್ವ ಸೇರಿಕೊಂಡಿದೆ ಮತ್ತು ಆಕೆ ಬಹಳ ಸಂಕಟಪಡುತ್ತಿದ್ದಾಳೆ” ಎಂದು ಗಟ್ಟಿಯಾಗಿ ಕೂಗಿಕೊಂಡಳು.

23 ಆದರೆ ಯೇಸು ಆ ಸ್ತ್ರೀಗೆ ಉತ್ತರ ಕೊಡಲಿಲ್ಲ. ಆದ್ದರಿಂದ ಶಿಷ್ಯರು ಯೇಸುವಿನ ಬಳಿಗೆ ಬಂದು, “ಆ ಸ್ತ್ರೀಗೆ ಹೊರಟುಹೋಗುವುದಕ್ಕೆ ಹೇಳು. ಆಕೆಯು ಕೂಗಿಕೊಂಡು ನಮ್ಮ ಹಿಂದೆಯೇ ಬರುತ್ತಿದ್ದಾಳೆ” ಎಂದು ಕೇಳಿಕೊಂಡರು.

24 ಯೇಸು, “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರೇಲರ ಬಳಿಗೆ ಮಾತ್ರ ದೇವರು ನನ್ನನ್ನು ಕಳುಹಿಸಿದನು” ಎಂದನು.

25 ಆಗ ಆ ಸ್ತ್ರೀಯು ಯೇಸುವಿನ ಬಳಿಗೆ ಬಂದು ಆತನ ಮುಂದೆ ಅಡ್ಡಬಿದ್ದು, “ಪ್ರಭುವೇ, ನನಗೆ ಸಹಾಯ ಮಾಡು” ಎಂದು ಕೇಳಿದಳು.

26 ಯೇಸು, “ಮಕ್ಕಳು ತಿನ್ನುವ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಕೊಡುವುದು ಸರಿಯಲ್ಲ” ಎಂದು ಉತ್ತರಕೊಟ್ಟನು.

27 ಆ ಸ್ತ್ರೀಯು, “ಹೌದು ಪ್ರಭುವೇ, ಆದರೂ ನಾಯಿಗಳು ತಮ್ಮ ಯಜಮಾನರ ಮೇಜಿನಿಂದ ಬೀಳುವ ಆಹಾರದ ತುಂಡುಗಳನ್ನು ತಿನ್ನುತ್ತವೆಯಲ್ಲಾ” ಎಂದಳು.

28 ಆಗ ಯೇಸು, “ಅಮ್ಮಾ, ನಿನ್ನ ನಂಬಿಕೆ ದೊಡ್ಡದು. ನಿನ್ನ ಕೋರಿಕೆಯನ್ನು ನಾನು ಈಡೇರಿಸುತ್ತೇನೆ” ಎಂದನು. ಆ ಕ್ಷಣದಲ್ಲೇ ಆಕೆಯ ಮಗಳು ಗುಣವಾದಳು.

ಯೇಸುವಿನಿಂದ ಅನೇಕರಿಗೆ ಸ್ವಸ್ಥತೆ

29 ಆಗ ಯೇಸು ಆ ಸ್ಥಳವನ್ನು ಬಿಟ್ಟು ಗಲಿಲಾಯ ಸರೋವರದ ದಡಕ್ಕೆ ಹೋಗಿ ಒಂದು ಬೆಟ್ಟದ ಮೇಲೆ ಕುಳಿತುಕೊಂಡನು.

30 ಜನರು ಗುಂಪುಗುಂಪಾಗಿ ಯೇಸುವಿನ ಬಳಿಗೆ ಬಂದರು. ಅವರು ಅನೇಕ ಬಗೆಯ ಕಾಯಿಲೆಯವರನ್ನು ಕರೆದುತಂದು, ಯೇಸುವಿನ ಪಾದಸನ್ನಿಧಿಯಲ್ಲಿ ಬಿಟ್ಟರು. ಅಲ್ಲಿ ಅಂಗವಿಕಲರು, ಕುರುಡರು, ಕುಂಟರು, ಕಿವುಡರು ಮತ್ತು ಇತರ ಅನೇಕ ಜನರಿದ್ದರು. ಆತನು ಇವರನ್ನೆಲ್ಲರನ್ನು ಗುಣಪಡಿಸಿದನು. 31 ಮೂಕರು ಮತ್ತೆ ಮಾತಾಡುವುದನ್ನೂ ಕುಂಟರು ನಡೆದಾಡುವುದನ್ನೂ ಅಂಗವಿಕಲರು ಸ್ವಸ್ಥರಾದದ್ದನ್ನೂ ಕುರುಡರಿಗೆ ಮತ್ತೆ ದೃಷ್ಟಿ ಬಂದದ್ದನ್ನೂ ಕಂಡು ಜನರೆಲ್ಲರೂ ಅತ್ಶಾಶ್ಚರ್ಯಪಟ್ಟು ಇಸ್ರೇಲರ ದೇವರನ್ನು ಕೊಂಡಾಡಿದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International