Revised Common Lectionary (Complementary)
10 ನಾನು ವೃದ್ಧನಾಗುವ ತನಕ ಬದುಕುವೆನೆಂದು ನಾನು ನನ್ನೊಳಗೆ ಅಂದುಕೊಂಡಿದ್ದೆನು.
ಆದರೆ ನಾನು ಮರಣದ್ವಾರದ ಮೂಲಕ ಹೋಗುವ ಸಮಯ ಬಂತು.
ನನ್ನ ಜೀವಮಾನವೆಲ್ಲ ಅಲ್ಲಿ ಕಳೆಯುವೆನು.
11 ಅದಕ್ಕೆ ನಾನೆಂದೆ: “ಇನ್ನು ಮೇಲೆ ಜೀವಿತರ ಲೋಕದಲ್ಲಿ ಇನ್ನು ದೇವರಾದ ಯೆಹೋವನನ್ನು ನೋಡುವದಿಲ್ಲ.
ಇನ್ನು ಮೇಲೆ ಜನರು ಲೋಕದಲ್ಲಿ ಜೀವಿಸುವದನ್ನು ನಾನು ನೋಡುವದಿಲ್ಲ.
12 ನನ್ನ ಮನೆಯು ಅಂದರೆ ನನ್ನ ಕುರುಬನ ಗುಡಾರವು ಕೀಳಲ್ಪಟ್ಟು ನನ್ನಿಂದ ತೆಗೆಯಲ್ಪಡುತ್ತಿದೆ.
ಒಬ್ಬನು ಮಗ್ಗದಲ್ಲಿ ಬಟ್ಟೆಯನ್ನು ಸುತ್ತಿ ಕತ್ತರಿಸಿಬಿಡುವಂತೆ ನಾನು ಕತ್ತರಿಸಲ್ಪಟ್ಟಿದ್ದೇನೆ.
ನನ್ನ ಆಯುಷ್ಯವನ್ನು ಚಿಕ್ಕ ವಯಸ್ಸಿನಲ್ಲಿಯೇ ಮುಗಿಸಿಬಿಟ್ಟಿರುವೆ.
13 ಇಡೀರಾತ್ರಿ ನಾನು ಸಿಂಹದಂತೆ ಗರ್ಜಿಸಿದೆನು.
ಆದರೆ ಸಿಂಹವು ಎಲುಬುಗಳನ್ನು ಜಗಿದು ಪುಡಿಮಾಡುವಂತೆ ನನ್ನ ನಿರೀಕ್ಷೆಯೆಲ್ಲಾ ಜಜ್ಜಿಹೋಯಿತು.
ನೀನು ನನ್ನ ಜೀವಿತವನ್ನು ಅಷ್ಟು ಅಲ್ಪಕಾಲಕ್ಕೇ ಕೊನೆಗೊಳಿಸಿದೆ!
14 ನಾನು ಪಾರಿವಾಳದಂತೆ ಕೂಗಿಕೊಂಡೆನು.
ಪಕ್ಷಿಯಂತೆ ಅರಚಿಕೊಂಡೆನು.
ನನ್ನ ಕಣ್ಣುಗಳು ಸ್ವರ್ಗದ ಕಡೆಗೆ
ನೋಡುತ್ತಾ ಆಯಾಸಗೊಂಡವು.
ನನ್ನ ಒಡೆಯನೇ, ನಾನು ತುಂಬಾ ಚಿಂತಾಕ್ರಾಂತನಾಗಿದ್ದೇನೆ.
ನೀನು ನನಗೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡು.”
15 ನಾನೇನು ಹೇಳಲಿ?
ನನಗೆ ಸಂಭವಿಸಲಿರುವುದನ್ನು ನನ್ನ ಒಡೆಯನು ತಿಳಿಸಿದ್ದಾನೆ.
ನನ್ನ ಒಡೆಯನು ಅದನ್ನು ನೆರವೇರಿಸುತ್ತಾನೆ.
ನನ್ನ ಆತ್ಮದಲ್ಲಿ ಸಂಕಟಗಳೆಲ್ಲಾ ತುಂಬಿವೆ.
ನಾನು ನನ್ನ ಜೀವಮಾನವೆಲ್ಲಾ ದೀನನಾಗುವೆನು.
16 ನನ್ನ ಒಡೆಯನೇ, ನನ್ನ ಆತ್ಮವು ಪುನರುಜ್ಜೀವಿಸುವಂತೆ ಮಾಡು.
ನನ್ನ ಆತ್ಮವು ಬಲಗೊಂಡು ಆರೋಗ್ಯದಾಯಕವಾಗುವಂತೆ ಸಹಾಯಮಾಡು.
ನಾನು ತಿರುಗಿ ಸ್ವಸ್ಥತೆ ಹೊಂದುವಂತೆ ಮಾಡು.
ನಾನು ಮತ್ತೆ ಜೀವಿಸುವಂತೆ ಮಾಡು.
17 ಇಗೋ, ನನ್ನ ಸಂಕಟವೆಲ್ಲಾ ಹೊರಟುಹೋಯಿತು.
ನನಗೀಗ ಸಮಾಧಾನವಿದೆ.
ನೀನು ನನ್ನನ್ನು ಬಹಳವಾಗಿ ಪ್ರೀತಿಸುವದರಿಂದ
ನನ್ನ ಶರೀರವು ಸಮಾಧಿಯಲ್ಲಿ ಕೊಳೆಯುವಂತೆ ಮಾಡಲಿಲ್ಲ.
ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
ನನ್ನ ಪಾಪಗಳನ್ನು ಬಹುದೂರ ಬಿಸಾಡಿದೆ.
18 ಸತ್ತವರು ನಿನ್ನನ್ನು ಸ್ತುತಿಸುವದಿಲ್ಲ.
ಪಾತಾಳದಲ್ಲಿರುವ ಜನರು ನಿನ್ನನ್ನು ಸ್ತುತಿಸುವದಿಲ್ಲ.
ಸತ್ತುಹೋದವರು ಸಹಾಯಕ್ಕಾಗಿ ನಿನ್ನ ಮೇಲೆ ಭರವಸವಿಡರು.
ಅವರು ಭೂಮಿಯಲ್ಲಿರುವ ಆಳವಾದ ಕುಣಿಗೆ ಸೇರುವರು.
ಅವರು ತಿರುಗಿ ಮಾತನಾಡುವದೇ ಇಲ್ಲ.
19 ನನ್ನ ಹಾಗೆ ಈ ದಿನ ಜೀವಿಸುವವರೆಲ್ಲಾ ನಿನ್ನನ್ನು ಕೊಂಡಾಡುವರು.
ತಂದೆಯು ತನ್ನ ಮಕ್ಕಳಿಗೆ ನಿನ್ನ ಮೇಲೆ ಭರವಸವಿಡಲು ಕಲಿಸುವರು.
20 ನಾನು ಹೇಳುವುದೇನೆಂದರೆ: “ಯೆಹೋವನು ನನ್ನನ್ನು ರಕ್ಷಿಸಿದನು.
ನಮ್ಮ ಜೀವಮಾನದ ಕಾಲವೆಲ್ಲಾ ಯೆಹೋವನ ಆಲಯದಲ್ಲಿ ನಾವು ಹಾಡುತ್ತಾ ವಾದ್ಯಬಾರಿಸುತ್ತಾ ಆತನನ್ನು ಸ್ತುತಿಸುವೆವು.”
9 ಆಗ ಫಿಲಿಷ್ಟಿಯರು ಯೆಹೂದಕ್ಕೆ ಹೋಗಿ, ಅವರು ಲೆಹೀ ಎಂಬ ಸ್ಥಳದ ಬಳಿ ಪಾಳೆಯಮಾಡಿಕೊಂಡರು ಮತ್ತು ಯುದ್ಧದ ಸಿದ್ಧತೆ ಮಾಡತೊಡಗಿದರು. 10 ಯೆಹೂದ್ಯರು ಅವರಿಗೆ, “ಫಿಲಿಷ್ಟಿಯರಾದ ನೀವು ನಮ್ಮ ಸಂಗಡ ಯುದ್ಧ ಮಾಡುವುದಕ್ಕೆ ಇಲ್ಲಿಗೇಕೆ ಬಂದಿದ್ದೀರಿ?” ಎಂದು ಕೇಳಿದರು.
ಅದಕ್ಕೆ ಅವರು, “ನಾವು ಸಂಸೋನನನ್ನು ಹಿಡಿಯಲು ಬಂದಿದ್ದೇವೆ. ನಾವು ಅವನನ್ನು ಬಂಧಿಸಬೇಕಾಗಿದೆ. ಅವನು ನಮ್ಮ ಜನರಿಗೆ ಮಾಡಿದ ದ್ರೋಹಕ್ಕಾಗಿ ಅವನನ್ನು ಶಿಕ್ಷಿಸಬೇಕು” ಎಂದು ಉತ್ತರಕೊಟ್ಟರು.
11 ಆಗ ಯೆಹೂದಕುಲದ ಮೂರು ಸಾವಿರ ಜನರು ಸಂಸೋನನಲ್ಲಿಗೆ ಹೋದರು. ಅವರು ಏಟಾಮಿನ ಬಂಡೆಯ ಬಳಿಯಲ್ಲಿದ್ದ ಗುಹೆಗೆ ಬಂದು ಅವನಿಗೆ, “ನೀನು ನಮಗೆ ಮಾಡಿರುವುದೇನು? ಫಿಲಿಷ್ಟಿಯರು ನಮ್ಮನ್ನು ಆಳುತ್ತಿದ್ದಾರೆ ಎಂಬುದು ನಿನಗೆ ಗೊತ್ತಿಲ್ಲವೇ?” ಎಂದು ಕೇಳಿದರು.
ಸಂಸೋನನು, “ಅವರು ನನಗೆ ಮಾಡಿದ ದ್ರೋಹಕ್ಕಾಗಿ ನಾನು ಅವರನ್ನು ಶಿಕ್ಷಿಸಿದೆ” ಎಂದನು.
12 ಆಗ ಅವರು ಸಂಸೋನನಿಗೆ, “ನಾವು ನಿನ್ನನ್ನು ಬಂಧಿಸಲು ಬಂದಿದ್ದೇವೆ. ನಾವು ನಿನ್ನನ್ನು ಫಿಲಿಷ್ಟಿಯರಿಗೆ ಕೊಡುತ್ತೇವೆ” ಎಂದರು.
ಸಂಸೋನನು ಯೆಹೂದ್ಯರಿಗೆ, “ನೀವು ನನ್ನನ್ನು ಕೊಲ್ಲುವುದಿಲ್ಲವೆಂದು ಆಣೆಮಾಡಿರಿ” ಅಂದನು.
13 ಯೆಹೂದ್ಯರು, “ಆಗಲಿ, ನಾವು ನಿನ್ನನ್ನು ಬಂಧಿಸಿ ಫಿಲಿಷ್ಟಿಯರಿಗೆ ಕೊಡುತ್ತೇವೆ. ನಾವು ನಿನ್ನನ್ನು ಕೊಲ್ಲುವುದಿಲ್ಲವೆಂದು ಆಣೆಮಾಡುತ್ತೇವೆ” ಎಂದು ಹೇಳಿದರು. ಅವರು ಸಂಸೋನನನ್ನು ಎರಡು ಹೊಸ ಹಗ್ಗಗಳಿಂದ ಬಂಧಿಸಿ ಗುಹೆಯಿಂದ ಹೊರ ಕರೆತಂದರು.
14 ಸಂಸೋನನನ್ನು ಲೆಹೀ ಎಂಬ ಸ್ಥಳಕ್ಕೆ ತಂದಾಗ ಫಿಲಿಷ್ಟಿಯರು ಅವನನ್ನು ನೋಡುವದಕ್ಕೆ ಬಂದರು. ಅವರು ಸಂತೋಷದಿಂದ ಆರ್ಭಟಿಸುತ್ತಿದ್ದರು. ಆಗ ಯೆಹೋವನ ಆತ್ಮವು ಪ್ರಬಲವಾಗಿ ಸಂಸೋನನ ಮೇಲೆ ಬಂದಿತು. ಸಂಸೋನನು ಹಗ್ಗಗಳನ್ನು ಸುಟ್ಟದಾರಗಳೊ ಎಂಬಂತೆ ಕಿತ್ತುಹಾಕಿದನು; ಕೈಗೆ ಕಟ್ಟಿದ್ದ ಹಗ್ಗಗಳು ಕಳಚಿಬಿದ್ದವು. 15 ಸಂಸೋನನು ಸತ್ತಕತ್ತೆಯ ದವಡೇ ಎಲುಬನ್ನು ಕಂಡನು. ಅವನು ಆ ದವಡೇ ಎಲುಬನ್ನು ತೆಗೆದುಕೊಂಡು ಅದರಿಂದ ಒಂದು ಸಾವಿರ ಫಿಲಿಷ್ಟಿಯರನ್ನು ಕೊಂದುಹಾಕಿದನು. 16 ಆಗ ಸಂಸೋನನು,
“ಕತ್ತೆಯ ದವಡೇ ಎಲುಬಿನಿಂದ
ನಾನು ಒಂದು ಸಾವಿರ ಜನರನ್ನು ಕೊಂದೆನು,
ಕತ್ತೆಯ ದವಡೇ ಎಲುಬಿನಿಂದ
ನಾನು ಹೆಣಗಳನ್ನು ರಾಶಿರಾಶಿಯಾಗಿ ಬೀಳಿಸಿದೆನು”
ಅಂದನು.
17 ಬಳಿಕ ಸಂಸೋನನು ದವಡೇ ಎಲುಬನ್ನು ಬಿಸಾಡಿದನು. ಆದ್ದರಿಂದ ಆ ಸ್ಥಳಕ್ಕೆ ರಾಮತ್ ಲೆಹೀ ಎಂದು ಹೆಸರಾಯಿತು.
18 ಸಂಸೋನನಿಗೆ ತುಂಬ ನೀರಡಿಕೆಯಾಗಿತ್ತು. ಅವನು ಯೆಹೋವನಿಗೆ, “ನಾನು ನಿನ್ನ ಸೇವಕನಾಗಿದ್ದೇನೆ. ನೀನು ನನಗೆ ಈ ಮಹಾವಿಜಯವನ್ನು ಕೊಟ್ಟಿರುವೆ. ದಯವಿಟ್ಟು ಈಗ ನಾನು ನೀರಡಿಕೆಯಿಂದ ಸಾಯಲು ಬಿಡಬೇಡ. ಸುನ್ನತಿ ಮಾಡಿಸಿಕೊಂಡಿಲ್ಲದವರು ನನ್ನನ್ನು ಹಿಡಿದುಕೊಡುವಂತೆ ಮಾಡಬೇಡ” ಎಂದು ಪ್ರಾರ್ಥಿಸಿದನು.
19 ಲೆಹೀಯ ನೆಲದಲ್ಲಿ ಒಂದು ಸುರಂಗವಿದೆ. ದೇವರು ಆ ಸುರಂಗವನ್ನು ಸೀಳಿ ಅದರೊಳಗಿಂದ ನೀರು ಬರುವಂತೆ ಮಾಡಿದನು. ಸಂಸೋನನು ನೀರು ಕುಡಿದು ಪುನಃ ಚೈತನ್ಯ ಪಡೆದನು. ಆದ್ದರಿಂದ ಅವನು ಆ ನೀರಿನ ಬುಗ್ಗೆಗೆ ಏನ್ ಹಕ್ಕೋರೇ ಎಂದು ಕರೆದನು. ಅದು ಇಂದಿಗೂ ಲೆಹೀ ನಗರದಲ್ಲಿ ಇದೆ.
20 ಸಂಸೋನನು ಇಪ್ಪತ್ತು ವರ್ಷ ಇಸ್ರೇಲರ ನ್ಯಾಯಾಧೀಶನಾಗಿದ್ದನು. ಅದು ಫಿಲಿಷ್ಟಿಯರ ಕಾಲವಾಗಿತ್ತು.
ಯೇಸುವಿನಿಂದ ಕಾಯಿಲೆಯ ಬಾಲಕನಿಗೆ ಸ್ವಸ್ಥತೆ
(ಮಾರ್ಕ 9:14-29; ಲೂಕ 9:37-43)
14 ಯೇಸು ಮತ್ತು ಆತನ ಶಿಷ್ಯರು ಜನರ ಬಳಿಗೆ ಹಿಂತಿರುಗಿ ಹೋದರು. ಒಬ್ಬನು ಯೇಸುವಿನ ಬಳಿಗೆ ಬಂದು ಆತನ ಮುಂದೆ ಅಡ್ಡಬಿದ್ದು, 15 “ಪ್ರಭುವೇ, ನನ್ನ ಮಗನಿಗೆ ದಯೆತೋರು. ಅವನು ಮೂರ್ಛಾರೋಗದಿಂದ ಬಹಳ ಬಾಧೆಪಡುತ್ತಿದ್ದಾನೆ. ಅವನು ಆಗಾಗ್ಗೆ ಬೆಂಕಿಯಲ್ಲಿ ಇಲ್ಲವೇ ನೀರಿನಲ್ಲಿ ಬೀಳುತ್ತಾನೆ. 16 ನಾನು ನನ್ನ ಮಗನನ್ನು ನಿನ್ನ ಶಿಷ್ಯರ ಬಳಿಗೆ ತಂದೆನು. ಆದರೆ ಅವನನ್ನು ಗುಣಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ” ಎಂದನು.
17 ಯೇಸು, “ಅಯ್ಯೋ, ವಿಶ್ವಾಸವಿಲ್ಲದ ವಕ್ರಸಂತತಿಯೇ, ಇನ್ನೆಷ್ಟು ಕಾಲ ನಾನು ನಿಮ್ಮೊಂದಿಗಿರಬೇಕು? ಇನ್ನೆಷ್ಟು ಕಾಲ ನಾನು ನಿಮ್ಮನ್ನು ಸಹಿಸಿಕೊಳ್ಳಲಿ? ಆ ಬಾಲಕನನ್ನು ಇಲ್ಲಿಗೆ ಕರೆತನ್ನಿ” ಎಂದು ಉತ್ತರಕೊಟ್ಟನು. 18 ಯೇಸು ಬಾಲಕನಲ್ಲಿದ್ದ ದೆವ್ವಕ್ಕೆ ಬಲವಾಗಿ ಗದರಿಸಲು ದೆವ್ವವು ಅವನನ್ನು ಬಿಟ್ಟುಹೋಯಿತು. ಅವನಿಗೆ ಆ ಕ್ಷಣದಲ್ಲೇ ಗುಣವಾಯಿತು.
19 ಆಗ ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಅವನನ್ನು ದೆವ್ವದಿಂದ ಬಿಡಿಸಲು ನಾವು ಪ್ರಯತ್ನಿಸಿದರೂ ನಮಗೇಕೆ ಸಾಧ್ಯವಾಗಲಿಲ್ಲ?” ಎಂದರು.
20 ಅದಕ್ಕೆ ಯೇಸು, “ನಿಮ್ಮ ಅಲ್ಪವಿಶ್ವಾಸವೇ ಅದಕ್ಕೆ ಕಾರಣ. ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನಿಮ್ಮ ನಂಬಿಕೆಯು ಸಾಸಿವೆ ಕಾಳಿನಷ್ಟಿದ್ದರೂ, ಈ ಪರ್ವತಕ್ಕೆ ‘ಇಲ್ಲಿಂದ ಅಲ್ಲಿಗೆ ಹೋಗು’ ಎಂದು ನೀವು ಹೇಳಿದರೂ ಅದು ಹೋಗುತ್ತದೆ. ನಿಮಗೆ ಅಸಾಧ್ಯವಾಗದ ಕಾರ್ಯಗಳೇ ಇರದು” ಎಂದನು. 21 [a]
Kannada Holy Bible: Easy-to-Read Version. All rights reserved. © 1997 Bible League International