Revised Common Lectionary (Complementary)
10 ನಾನು ವೃದ್ಧನಾಗುವ ತನಕ ಬದುಕುವೆನೆಂದು ನಾನು ನನ್ನೊಳಗೆ ಅಂದುಕೊಂಡಿದ್ದೆನು.
ಆದರೆ ನಾನು ಮರಣದ್ವಾರದ ಮೂಲಕ ಹೋಗುವ ಸಮಯ ಬಂತು.
ನನ್ನ ಜೀವಮಾನವೆಲ್ಲ ಅಲ್ಲಿ ಕಳೆಯುವೆನು.
11 ಅದಕ್ಕೆ ನಾನೆಂದೆ: “ಇನ್ನು ಮೇಲೆ ಜೀವಿತರ ಲೋಕದಲ್ಲಿ ಇನ್ನು ದೇವರಾದ ಯೆಹೋವನನ್ನು ನೋಡುವದಿಲ್ಲ.
ಇನ್ನು ಮೇಲೆ ಜನರು ಲೋಕದಲ್ಲಿ ಜೀವಿಸುವದನ್ನು ನಾನು ನೋಡುವದಿಲ್ಲ.
12 ನನ್ನ ಮನೆಯು ಅಂದರೆ ನನ್ನ ಕುರುಬನ ಗುಡಾರವು ಕೀಳಲ್ಪಟ್ಟು ನನ್ನಿಂದ ತೆಗೆಯಲ್ಪಡುತ್ತಿದೆ.
ಒಬ್ಬನು ಮಗ್ಗದಲ್ಲಿ ಬಟ್ಟೆಯನ್ನು ಸುತ್ತಿ ಕತ್ತರಿಸಿಬಿಡುವಂತೆ ನಾನು ಕತ್ತರಿಸಲ್ಪಟ್ಟಿದ್ದೇನೆ.
ನನ್ನ ಆಯುಷ್ಯವನ್ನು ಚಿಕ್ಕ ವಯಸ್ಸಿನಲ್ಲಿಯೇ ಮುಗಿಸಿಬಿಟ್ಟಿರುವೆ.
13 ಇಡೀರಾತ್ರಿ ನಾನು ಸಿಂಹದಂತೆ ಗರ್ಜಿಸಿದೆನು.
ಆದರೆ ಸಿಂಹವು ಎಲುಬುಗಳನ್ನು ಜಗಿದು ಪುಡಿಮಾಡುವಂತೆ ನನ್ನ ನಿರೀಕ್ಷೆಯೆಲ್ಲಾ ಜಜ್ಜಿಹೋಯಿತು.
ನೀನು ನನ್ನ ಜೀವಿತವನ್ನು ಅಷ್ಟು ಅಲ್ಪಕಾಲಕ್ಕೇ ಕೊನೆಗೊಳಿಸಿದೆ!
14 ನಾನು ಪಾರಿವಾಳದಂತೆ ಕೂಗಿಕೊಂಡೆನು.
ಪಕ್ಷಿಯಂತೆ ಅರಚಿಕೊಂಡೆನು.
ನನ್ನ ಕಣ್ಣುಗಳು ಸ್ವರ್ಗದ ಕಡೆಗೆ
ನೋಡುತ್ತಾ ಆಯಾಸಗೊಂಡವು.
ನನ್ನ ಒಡೆಯನೇ, ನಾನು ತುಂಬಾ ಚಿಂತಾಕ್ರಾಂತನಾಗಿದ್ದೇನೆ.
ನೀನು ನನಗೆ ಸಹಾಯ ಮಾಡುವುದಾಗಿ ವಾಗ್ದಾನ ಮಾಡು.”
15 ನಾನೇನು ಹೇಳಲಿ?
ನನಗೆ ಸಂಭವಿಸಲಿರುವುದನ್ನು ನನ್ನ ಒಡೆಯನು ತಿಳಿಸಿದ್ದಾನೆ.
ನನ್ನ ಒಡೆಯನು ಅದನ್ನು ನೆರವೇರಿಸುತ್ತಾನೆ.
ನನ್ನ ಆತ್ಮದಲ್ಲಿ ಸಂಕಟಗಳೆಲ್ಲಾ ತುಂಬಿವೆ.
ನಾನು ನನ್ನ ಜೀವಮಾನವೆಲ್ಲಾ ದೀನನಾಗುವೆನು.
16 ನನ್ನ ಒಡೆಯನೇ, ನನ್ನ ಆತ್ಮವು ಪುನರುಜ್ಜೀವಿಸುವಂತೆ ಮಾಡು.
ನನ್ನ ಆತ್ಮವು ಬಲಗೊಂಡು ಆರೋಗ್ಯದಾಯಕವಾಗುವಂತೆ ಸಹಾಯಮಾಡು.
ನಾನು ತಿರುಗಿ ಸ್ವಸ್ಥತೆ ಹೊಂದುವಂತೆ ಮಾಡು.
ನಾನು ಮತ್ತೆ ಜೀವಿಸುವಂತೆ ಮಾಡು.
17 ಇಗೋ, ನನ್ನ ಸಂಕಟವೆಲ್ಲಾ ಹೊರಟುಹೋಯಿತು.
ನನಗೀಗ ಸಮಾಧಾನವಿದೆ.
ನೀನು ನನ್ನನ್ನು ಬಹಳವಾಗಿ ಪ್ರೀತಿಸುವದರಿಂದ
ನನ್ನ ಶರೀರವು ಸಮಾಧಿಯಲ್ಲಿ ಕೊಳೆಯುವಂತೆ ಮಾಡಲಿಲ್ಲ.
ನೀನು ನನ್ನ ಪಾಪಗಳನ್ನು ಕ್ಷಮಿಸಿದೆ.
ನನ್ನ ಪಾಪಗಳನ್ನು ಬಹುದೂರ ಬಿಸಾಡಿದೆ.
18 ಸತ್ತವರು ನಿನ್ನನ್ನು ಸ್ತುತಿಸುವದಿಲ್ಲ.
ಪಾತಾಳದಲ್ಲಿರುವ ಜನರು ನಿನ್ನನ್ನು ಸ್ತುತಿಸುವದಿಲ್ಲ.
ಸತ್ತುಹೋದವರು ಸಹಾಯಕ್ಕಾಗಿ ನಿನ್ನ ಮೇಲೆ ಭರವಸವಿಡರು.
ಅವರು ಭೂಮಿಯಲ್ಲಿರುವ ಆಳವಾದ ಕುಣಿಗೆ ಸೇರುವರು.
ಅವರು ತಿರುಗಿ ಮಾತನಾಡುವದೇ ಇಲ್ಲ.
19 ನನ್ನ ಹಾಗೆ ಈ ದಿನ ಜೀವಿಸುವವರೆಲ್ಲಾ ನಿನ್ನನ್ನು ಕೊಂಡಾಡುವರು.
ತಂದೆಯು ತನ್ನ ಮಕ್ಕಳಿಗೆ ನಿನ್ನ ಮೇಲೆ ಭರವಸವಿಡಲು ಕಲಿಸುವರು.
20 ನಾನು ಹೇಳುವುದೇನೆಂದರೆ: “ಯೆಹೋವನು ನನ್ನನ್ನು ರಕ್ಷಿಸಿದನು.
ನಮ್ಮ ಜೀವಮಾನದ ಕಾಲವೆಲ್ಲಾ ಯೆಹೋವನ ಆಲಯದಲ್ಲಿ ನಾವು ಹಾಡುತ್ತಾ ವಾದ್ಯಬಾರಿಸುತ್ತಾ ಆತನನ್ನು ಸ್ತುತಿಸುವೆವು.”
6 ಜೆರಿಕೊ ಪಟ್ಟಣದ ಬಾಗಿಲನ್ನು ಮುಚ್ಚಲಾಗಿತ್ತು. ಇಸ್ರೇಲರು ಸಮೀಪದಲ್ಲೇ ಇದ್ದುದರಿಂದ ಪಟ್ಟಣದ ಜನರು ಹೆದರಿಕೊಂಡಿದ್ದರು. ಒಬ್ಬರಾದರೂ ಪಟ್ಟಣದಲ್ಲಿ ಪ್ರವೇಶ ಮಾಡಲಿಲ್ಲ; ಒಬ್ಬರಾದರೂ ಪಟ್ಟಣದಿಂದ ಹೊರ ಬರಲಿಲ್ಲ.
2 ಆಗ ಯೆಹೋವನು ಯೆಹೋಶುವನಿಗೆ, “ಇಗೋ ನೋಡು, ನೀನು ಜೆರಿಕೊ ನಗರವನ್ನು ಗೆಲ್ಲುವಂತೆ ಮಾಡುತ್ತೇನೆ. ನೀನು ಅರಸನನ್ನು ಮತ್ತು ನಗರದ ಎಲ್ಲ ಯೋಧರನ್ನು ಸೋಲಿಸುವೆ. 3 ಪ್ರತಿ ನಿತ್ಯ ಒಂದು ಸಲ ನಿನ್ನ ಸೇನೆಯೊಂದಿಗೆ ನಗರದ ಸುತ್ತಲೂ ಸುತ್ತಬೇಕು. ಹೀಗೆ ಆರು ದಿನಗಳವರೆಗೆ ಸುತ್ತಬೇಕು. 4 ಏಳು ಮಂದಿ ಯಾಜಕರಿಗೆ ಟಗರಿನ ಕೊಂಬಿನಿಂದ ಮಾಡಿದ ತುತ್ತೂರಿಗಳನ್ನು ಹಿಡಿದುಕೊಂಡು ಪವಿತ್ರ ಪೆಟ್ಟಿಗೆಯ ಮುಂದೆ ಹೋಗಲು ಹೇಳು. ಏಳನೆಯ ದಿನದಲ್ಲಿ ನಗರದ ಸುತ್ತಲೂ ನೀವು ಏಳುಸಲ ಸುತ್ತಬೇಕು. ಏಳನೆಯ ದಿನದಲ್ಲಿ ಸುತ್ತುವಾಗ ತುತ್ತೂರಿಯನ್ನು ಊದಬೇಕೆಂದು ಯಾಜಕರಿಗೆ ಹೇಳು. 5 ಯಾಜಕರ ತುತ್ತೂರಿ ಧ್ವನಿಯನ್ನು ಕೇಳಿದಾಗ ಜನರು ಆರ್ಭಟಿಸಬೇಕು. ಆಗ ನಗರದ ಗೋಡೆಗಳು ಬೀಳುವವು; ಆಗ ನೀವು ನೇರವಾಗಿ ನಗರದೊಳಗೆ ಹೋಗಿರಿ” ಅಂದನು.
ಜೆರಿಕೊವನ್ನು ಸ್ವಾಧೀನಪಡಿಸಿಕೊಂಡದ್ದು
6 ಆದ್ದರಿಂದ ನೂನನ ಮಗನಾದ ಯೆಹೋಶುವನು ಯಾಜಕರನ್ನು ಒಟ್ಟಿಗೆ ಕರೆದು, ಅವರಿಗೆ, “ಯೆಹೋವನ ಪವಿತ್ರ ಪೆಟ್ಟಿಗೆಯನ್ನು ತೆಗೆದುಕೊಂಡು ಹೋಗಿರಿ. ಏಳು ಮಂದಿ ಯಾಜಕರು ತುತ್ತೂರಿಗಳನ್ನು ತೆಗೆದುಕೊಂಡು ಪೆಟ್ಟಿಗೆಯ ಮುಂದೆ ನಡೆಯಬೇಕು” ಎಂದು ಹೇಳಿದನು.
7 ಬಳಿಕ ಯೆಹೋಶುವನು ಜನರಿಗೆ, “ಈಗ ನಗರದ ಸುತ್ತ ಪ್ರದಕ್ಷಿಣೆ ಹಾಕಿರಿ. ಆಯುಧಗಳನ್ನು ಹಿಡಿದುಕೊಂಡು ಯೋಧರು ಯೆಹೋವನ ಪವಿತ್ರಪೆಟ್ಟಿಗೆಯ ಮುಂದೆ ನಡೆಯಬೇಕು” ಎಂದು ಆಜ್ಞಾಪಿಸಿದನು.
8 ಯೆಹೋಶುವನು ಜನರೊಂದಿಗೆ ಮಾತನಾಡುವದನ್ನು ಮುಗಿಸಿದ ಮೇಲೆ, ಏಳು ಮಂದಿ ಯಾಜಕರು ಏಳು ತುತ್ತೂರಿಗಳನ್ನು ತೆಗೆದುಕೊಂಡು ಊದುತ್ತಾ ಯೆಹೋವನ ಮುಂದೆ ನಡೆಯಲು ಪ್ರಾರಂಭಿಸಿದರು. ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿದ್ದ ಯಾಜಕರು ಅವರನ್ನು ಹಿಂಬಾಲಿಸಿದರು. 9 ಆಯುಧಗಳನ್ನು ಹಿಡಿದುಕೊಂಡ ಯೋಧರು ಯಾಜಕರ ಮುಂದೆ ನಡೆದರು. ಪವಿತ್ರ ಪೆಟ್ಟಿಗೆಯ ಹಿಂದೆ ಜನರು ಕ್ರಮಬದ್ಧವಾಗಿ ಹೆಜ್ಜೆಯನ್ನು ಹಾಕುತ್ತಾ ತಮ್ಮ ತುತ್ತೂರಿಗಳನ್ನು ಊದುತ್ತಿದ್ದರು. 10 ಯೆಹೋಶುವನು ಜನರಿಗೆ, “ಆರ್ಭಟಿಸಬೇಡಿರಿ, ನಾನು ಹೇಳುವ ದಿನದವರೆಗೆ ಒಂದು ಶಬ್ದವನ್ನೂ ಉಚ್ಚರಿಸಬೇಡಿರಿ. ಆಮೇಲೆ ನೀವು ಆರ್ಭಟಿಸಬಹುದು” ಎಂದು ಹೇಳಿದನು.
11 ಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಹೊತ್ತುಕೊಂಡು ಒಂದು ಸಲ ನಗರವನ್ನು ಸುತ್ತಿದ ಮೇಲೆ ಪಾಳೆಯಕ್ಕೆ ಹಿಂತಿರುಗಿ ಬಂದು ಆ ರಾತ್ರಿ ಅಲ್ಲಿಯೇ ಉಳಿದುಕೊಂಡರು.
12 ಯೆಹೋಶುವನು ಮರುದಿನ ಬೆಳಿಗ್ಗೆ ಎದ್ದನು. ಯಾಜಕರು ಯೆಹೋವನ ಪವಿತ್ರ ಪೆಟ್ಟಿಗೆಯನ್ನು ಪುನಃ ಹೊತ್ತುಕೊಂಡು ಹೋದರು. 13 ಏಳುಮಂದಿ ಯಾಜಕರು ಏಳು ತುತ್ತೂರಿಗಳನ್ನು ತೆಗೆದುಕೊಂಡು ಯೆಹೋವನ ಪವಿತ್ರ ಪೆಟ್ಟಿಗೆಯ ಮುಂದೆ ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ತುತ್ತೂರಿಗಳನ್ನು ಊದುತ್ತಾ ನಡೆದರು. ಆಯಧ ಸನ್ನದ್ಧರಾದ ಸೈನಿಕರು ಅವರ ಮುಂದೆ ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ನಡೆದರು. ಯೆಹೋವನ ಪವಿತ್ರ ಪೆಟ್ಟಿಗೆಯ ಹಿಂಭಾಗದಲ್ಲಿ ಉಳಿದ ಜನರು ಕ್ರಮಬದ್ಧವಾಗಿ ಹೆಜ್ಜೆಹಾಕುತ್ತಾ ತುತ್ತೂರಿಗಳನ್ನು ಊದುತ್ತಾ ಪಟ್ಟಣದ ಸುತ್ತಲೂ ನಡೆದರು. 14 ಎರಡನೆಯ ದಿನ ಅವರೆಲ್ಲರು ನಗರವನ್ನು ಒಂದು ಸಲ ಕ್ರಮಬದ್ಧವಾಗಿ ಸುತ್ತಿ ಪಾಳೆಯಕ್ಕೆ ಹಿಂತಿರುಗಿದರು. ಹೀಗೆ ಅವರು ಆರು ದಿನಗಳವರೆಗೆ ಮಾಡಿದರು.
15 ಏಳನೆಯ ದಿನ ಸೂರ್ಯೋದಯವಾಗುತ್ತಲೇ ಅವರು ಎದ್ದರು. ಪಟ್ಟಣದ ಸುತ್ತಲು ಅವರು ಏಳು ಸಲ ಸುತ್ತಿದರು. ಅವರು ಮುಂಚಿನ ದಿನಗಳಲ್ಲಿ ನಡೆದ ಕ್ರಮದಲ್ಲಿಯೇ ನಡೆದರು. ಆದರೆ ಆ ದಿನ ಅವರು ನಗರದ ಸುತ್ತಲು ಏಳು ಸಲ ಸುತ್ತಿದರು. 16 ಏಳನೆಯ ಸಲ ಅವರು ನಗರವನ್ನು ಸುತ್ತುವಾಗ ಯಾಜಕರು ತುತ್ತೂರಿಗಳನ್ನು ಊದಿದರು. ಆಗ ಯೆಹೋಶುವನು ಜನರಿಗೆ, “ಈಗ ಆರ್ಭಟಿಸಿರಿ, ಯೆಹೋವನು ಈ ನಗರವನ್ನು ನಿಮಗೆ ಕೊಟ್ಟಿದ್ದಾನೆ. 17 ಈ ನಗರ ಮತ್ತು ಇದರಲ್ಲಿರುವದೆಲ್ಲವೂ ಯೆಹೋವನ ಸ್ವತ್ತಾಗಿದೆ. ವೇಶ್ಯೆಯಾದ ರಾಹಾಬಳು ಮತ್ತು ಅವಳ ಮನೆಯಲ್ಲಿರುವ ಎಲ್ಲ ಜನರು ಮಾತ್ರ ಜೀವಸಹಿತ ಉಳಿಯಲಿ, ಅವರನ್ನು ಕೊಲ್ಲಬಾರದು. ಏಕೆಂದರೆ ರಾಹಾಬಳು ನಮ್ಮ ಆ ಇಬ್ಬರು ಗೂಢಚಾರರಿಗೆ ಸಹಾಯ ಮಾಡಿದ್ದಾಳೆ. 18 ಅಲ್ಲದೆ ನಾವು ಉಳಿದೆಲ್ಲವನ್ನು ನಾಶಪಡಿಸಬೇಕೆಂಬುದನ್ನು ನೆನಪಿಡಿ. ಅವರ ವಸ್ತುಗಳನ್ನು ತೆಗೆದುಕೊಳ್ಳಬೇಡಿ. ನೀವು ಅವರ ವಸ್ತುಗಳನ್ನು ತೆಗೆದುಕೊಂಡರೆ ಮತ್ತು ಅವುಗಳನ್ನು ನಮ್ಮ ಪಾಳೆಯಕ್ಕೆ ತಂದರೆ ನೀವೇ ನಾಶವಾಗುವಿರಿ; ಇಸ್ರೇಲಿನ ಎಲ್ಲಾ ಜನರಿಗೆ ಕಷ್ಟವನ್ನುಂಟುಮಾಡುವಿರಿ. 19 ಬೆಳ್ಳಿ, ಬಂಗಾರ, ಕಂಚು ಮತ್ತು ಕಬ್ಬಿಣಗಳಿಂದ ಮಾಡಿದ ಎಲ್ಲಾ ವಸ್ತುಗಳು ಯೆಹೋವನ ಸ್ವತ್ತಾಗಿವೆ. ಆದ್ದರಿಂದ ಅವುಗಳನ್ನು ಆತನ ಭಂಡಾರಕ್ಕೆ ಸೇರಿಸಬೇಕು” ಎಂದು ಆಜ್ಞಾಪಿಸಿದನು.
20 ಯಾಜಕರು ತುತ್ತೂರಿಗಳನ್ನು ಊದಿದಾಗ ಜನರು ಆರ್ಭಟಿಸತೊಡಗಿದರು. ಆಗ ಗೋಡೆಗಳು ಬಿದ್ದವು; ಜನರು ನೇರವಾಗಿ ನಗರದೊಳಗೆ ನುಗ್ಗಿದರು. ಹೀಗೆ ಇಸ್ರೇಲರು ನಗರವನ್ನು ಸ್ವಾಧೀನಪಡಿಸಿಕೊಂಡರು. 21 ಅವರು ನಗರದಲ್ಲಿದ್ದ ಎಲ್ಲವನ್ನು ನಾಶಪಡಿಸಿದರು; ಅಲ್ಲಿದ್ದ ತರುಣರನ್ನು, ವೃದ್ಧರನ್ನು, ತರುಣಿಯರನ್ನು, ವೃದ್ಧೆಯರನ್ನು, ದನಕರುಗಳನ್ನು, ಕುರಿಗಳನ್ನು ಮತ್ತು ಕತ್ತೆಗಳನ್ನು ಕೊಂದುಹಾಕಿದರು.
29 ಮೋಶೆಯಿಂದ ಮುನ್ನಡೆಸಲ್ಪಟ್ಟ ಜನರು ಕೆಂಪುಸಮುದ್ರವನ್ನು ಒಣಭೂಮಿಯೋ ಎಂಬಂತೆ ದಾಟಿದ್ದು ನಂಬಿಕೆಯಿಂದಲೇ. ಆದರೆ ಈಜಿಪ್ಟ್ ದೇಶದವರು ಕೆಂಪುಸಮುದ್ರವನ್ನು ದಾಟಲು ಪ್ರಯತ್ನಿಸಿ, ಮುಳುಗಿಹೋದರು.
30 ದೇವಜನರ ನಂಬಿಕೆಯಿಂದಲೇ ಜೆರಿಕೊ ಪಟ್ಟಣದ ಗೋಡೆಗಳ ಸುತ್ತಲೂ ಏಳು ದಿನಗಳವರೆಗೆ ಸುತ್ತಿದಾಗ ಅವು ಬಿದ್ದುಹೋದವು.
31 ರಹಾಬಳೆಂಬ ವೇಶ್ಯೆಯು ಇಸ್ರೇಲಿನ ಗೂಢಚಾರರನ್ನು ಬರಮಾಡಿಕೊಂಡು, ಅವರನ್ನು ಸ್ನೇಹಿತರಂತೆ ನೋಡಿಕೊಂಡಳು. ನಂಬಲೊಲ್ಲದ ಜನರನ್ನು ಕೊಂದಾಗ ಅವಳನ್ನು ಕೊಲ್ಲದೆ ಹೋದದ್ದು ಅವಳಲ್ಲಿದ್ದ ಆ ನಂಬಿಕೆಯಿಂದಲೇ.
32 ನಾನು ನಿಮಗೆ ಮತ್ತಷ್ಟು ದೃಷ್ಟಾಂತಗಳನ್ನು ಹೇಳುವ ಅಗತ್ಯವಿದೆಯೋ? ನಾನು ಗಿದ್ಯೋನನ, ಬಾರಾಕನ, ಸಂಸೋನನ, ಯೆಫ್ತಾಹನ, ದಾವೀದನ, ಸಮುವೇಲನ ಮತ್ತು ಪ್ರವಾದಿಗಳ ಕುರಿತು ನಿಮಗೆ ಹೇಳುವಷ್ಟು ಸಮಯ ನನಗಿಲ್ಲ. 33 ಆ ಜನರೆಲ್ಲರೂ ಬಲವಾದ ನಂಬಿಕೆಯುಳ್ಳವರಾಗಿದ್ದರು. ಆ ನಂಬಿಕೆಯಿಂದಲೇ ರಾಜ್ಯಗಳನ್ನು ಸೋಲಿಸಿದರು. ಅವರು ಯೋಗ್ಯವಾದ ಕಾರ್ಯಗಳನ್ನು ಮಾಡಿದರು ಮತ್ತು ದೇವರು ವಾಗ್ದಾನ ಮಾಡಿದ್ದವುಗಳನ್ನು ಪಡೆದುಕೊಂಡರು. ಅವರಲ್ಲಿ ಕೆಲವರು ತಮ್ಮ ನಂಬಿಕೆಯಿಂದ ಸಿಂಹಗಳ ಬಾಯಿಗಳನ್ನು ಮುಚ್ಚಿದರು; 34 ಕೆಲವರು ಉರಿಯುವ ಬೆಂಕಿಯನ್ನು ನಂದಿಸಿದರು; ಇನ್ನು ಕೆಲವರು ಕತ್ತಿಗಳ ಬಾಯಿಂದ ಪಾರಾದರು; ದುರ್ಬಲರಾಗಿದ್ದವರು ತಮ್ಮ ನಂಬಿಕೆಯಿಂದ ಪ್ರಬಲರಾದರು; ಯುದ್ಧದಲ್ಲಿ ಶಕ್ತಿಶಾಲಿಗಳಾಗಿ ಶತ್ರುಗಳನ್ನು ಸೋಲಿಸಿದರು. 35 ಸತ್ತುಹೋಗಿದ್ದವರು ಸಾವಿನಿಂದ ಮೇಲೆದ್ದರು ಮತ್ತು ಅವರನ್ನು ಅವರವರ ಕುಟುಂಬಗಳ ಸ್ತ್ರೀಯರಿಗೆ ಒಪ್ಪಿಸಲಾಯಿತು. ಇತರ ಕೆಲವರು ಯಾತನೆಯನ್ನು ಅನುಭವಿಸುತ್ತಿದ್ದಾಗಲೂ ಪುನರುತ್ಥಾನದ ನಂತರವಿರುವ ಶ್ರೇಷ್ಠ ಜೀವಿತಕ್ಕಾಗಿ ಬಿಡುಗಡೆ ಹೊಂದಲು ಒಪ್ಪಲಿಲ್ಲ. 36 ಕೆಲವರು ಇತರರಿಂದ ಅಪಹಾಸ್ಯಕ್ಕೆ ಗುರಿಯಾದರು, ಪೆಟ್ಟುಗಳನ್ನು ಅನುಭವಿಸಿದರು, ಸೆರೆವಾಸದಲ್ಲಿದ್ದರು. 37 ಕೆಲವರನ್ನು ಕಲ್ಲೆಸೆದು ಕೊಂದರು, ಕೆಲವರನ್ನು ಅರ್ಧಕತ್ತರಿಸಿ ಎರಡು ಭಾಗ ಮಾಡಿದರು. ಕೆಲವರನ್ನು ಕತ್ತಿಗಳಿಂದ ಇರಿದುಕೊಂದರು. ಇವರಲ್ಲಿ ಕೆಲವರು ಕುರಿ ಮತ್ತು ಹೋತಗಳ ಚರ್ಮಗಳನ್ನು ತೊಟ್ಟುಕೊಂಡಿದ್ದರು; ಕೆಲವರು ಬಡವರಾಗಿದ್ದರು; ಹಿಂಸೆಗೆ ಒಳಗಾಗಿದ್ದರು ಮತ್ತು ಜನರ ಕ್ರೂರ ವರ್ತನೆಗೆ ಗುರಿಯಾಗಿದ್ದರು. 38 ಇವರಿಗೆ ಈ ಲೋಕವು ಯೋಗ್ಯವಾಗಿರಲಿಲ್ಲ. ಇವರು ಮರುಭೂಮಿಗಳಲ್ಲಿ, ಬೆಟ್ಟಗಳಲ್ಲಿ ಅಲೆಯುತ್ತಾ ಗುಹೆಗಳಲ್ಲಿಯೂ ನೆಲದ ಕುಣಿಗಳಲ್ಲಿಯೂ ವಾಸಿಸುತ್ತಿದ್ದರು.
39 ಇವರೆಲ್ಲರೂ ತಮ್ಮ ನಂಬಿಕೆಯ ವಿಷಯದಲ್ಲಿ ಪ್ರಸಿದ್ಧರಾಗಿದ್ದರು. ಆದರೆ ದೇವರ ದೊಡ್ಡ ವಾಗ್ದಾನವನ್ನು ಇವರಲ್ಲಿ ಯಾರೂ ಹೊಂದಿಕೊಳ್ಳಲಿಲ್ಲ. 40 ದೇವರು ನಮಗೆ ಶ್ರೇಷ್ಠವಾದದ್ದನ್ನು ಕೊಡಲು ಯೋಜನೆ ಮಾಡಿದನು. ನಮ್ಮೊಡನೆ ಮಾತ್ರ ಅವರು ಪರಿಪೂರ್ಣರಾಗಬೇಕೆಂಬುದೇ ಆ ಯೋಜನೆ.
ಯೇಸುವನ್ನೇ ಅನುಸರಿಸಿರಿ
12 ನಮ್ಮ ಸುತ್ತಲೂ ನಂಬಿಕೆಯುಳ್ಳ ಅನೇಕ ಜನರಿದ್ದಾರೆ. ನಂಬಿಕೆ ಎಂದರೇನೆಂದು ಅವರ ಜೀವಿತಗಳೇ ಸಾಕ್ಷಿ ಹೇಳುತ್ತವೆ. ಆದ್ದರಿಂದ ನಾವು ಅವರಂತಿರಬೇಕು. ನಮ್ಮ ಮುಂದಿರುವ ಗುರಿಯನ್ನು ಮುಟ್ಟಲು ಓಡಬೇಕು ಮತ್ತು ನಮ್ಮ ಪ್ರಯತ್ನವನ್ನು ನಿಲ್ಲಿಸಬಾರದು. ನಮ್ಮನ್ನು ತಡೆಯುವ ಎಲ್ಲಾ ವಿಷಯಗಳನ್ನೂ ನಮ್ಮ ಜೀವಿತದಿಂದ ತೆಗೆದುಹಾಕಬೇಕು. ನಮ್ಮನ್ನು ಸುಲಭವಾಗಿ ಹಿಡಿದುಕೊಳ್ಳುವ ಪಾಪದಿಂದ ಬಿಡಿಸಿಕೊಳ್ಳಬೇಕು. 2 ನಾವು ಯಾವಗಲೂ ಯೇಸುವನ್ನು ಮಾದರಿಯಾಗಿ ಇಟ್ಟುಕೊಂಡಿರಬೇಕು. ನಮ್ಮ ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆತನೇ. ಆತನು ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ ಅವಮಾನವನ್ನು ಅಲಕ್ಷ್ಯಮಾಡಿ ಶಿಲುಬೆಯ ಮರಣವನ್ನು ಸಹಿಸಿಕೊಂಡನು. ಈಗ ಆತನು ದೇವರ ಸಿಂಹಾಸನದ ಬಲಭಾಗದಲ್ಲಿ ಕುಳಿತಿರುವನು.
Kannada Holy Bible: Easy-to-Read Version. All rights reserved. © 1997 Bible League International