Revised Common Lectionary (Complementary)
4 ಜನರು ಭಯದಿಂದ ಗಲಿಬಿಲಿಗೊಂಡಿದ್ದಾರೆ. ಅವರಿಗೆ ಹೀಗೆ ಹೇಳು, “ಧೈರ್ಯಗೊಳ್ಳಿರಿ, ಭಯಪಡಬೇಡಿ.” ಇಗೋ, ನಿಮ್ಮ ದೇವರು ಬಂದು ನಿಮ್ಮ ವೈರಿಗಳನ್ನು ಶಿಕ್ಷಿಸುವನು. ಆತನು ಬಂದು ನಿಮಗೆ ಪ್ರತಿಫಲವನ್ನು ಕೊಡುವನು. ಯೆಹೋವನು ನಿಮ್ಮನ್ನು ಕಾಪಾಡುತ್ತಾನೆ. 5 ಆಗ ಕುರುಡರಿಗೆ ದೃಷ್ಟಿ ಬರುವದು. ಅವರ ಕಣ್ಣುಗಳು ತೆರೆಯಲ್ಪಡುವವು. ಆಗ ಕಿವುಡರು ಕೇಳಿಸಿಕೊಳ್ಳುವರು. ಅವರ ಕಿವಿಗಳು ತೆರೆಯಲ್ಪಡುವವು. 6 ಕುಂಟರು ಜಿಂಕೆಯಂತೆ ಜಿಗಿದಾಡುವರು. ಮಾತನಾಡಲು ಸಾಧ್ಯವಾಗದ ಜನರು ಆಗ ಹರ್ಷಗಾನವನ್ನು ಹಾಡುವರು. ಯಾವಾಗ ಮರುಭೂಮಿಯಲ್ಲಿ ತೊರೆಯ ನೀರು ಹರಿಯುವದೋ ಆಗ ಇವೆಲ್ಲಾ ಜರಗುವವು. ಒಣಭೂಮಿಯಲ್ಲಿ ಒರತೆಯ ನೀರು ಹರಿಯುವದು. 7 ಆಗ ಜನರು ಬಿಸುಲ್ಗುದುರೆಯನ್ನು ನೋಡಿ ನೀರು ಎಂದು ಭಾವಿಸುವರು. ಆದರೆ ಆಗ ನೀರಿನ ಕೊಳಗಳೇ ಇರುವವು. ಬೆಂಗಾಡಿನಲ್ಲಿ ಬಾವಿಗಳಿರುವವು. ನೆಲದೊಳಗಿಂದ ನೀರು ಉಕ್ಕುವುದು. ಒಂದು ಕಾಲದಲ್ಲಿ ಕಾಡುಪ್ರಾಣಿಗಳು ವಾಸವಾಗಿದ್ದ ಸ್ಥಳದಲ್ಲಿ ಎತ್ತರವಾದ ನೀರವಂಜಿಗಳು ಬೆಳೆಯುವವು.
146 ಯೆಹೋವನಿಗೆ ಸ್ತೋತ್ರವಾಗಲಿ!
ನನ್ನ ಮನವೇ, ಯೆಹೋವನನ್ನು ಸ್ತುತಿಸು!
2 ನನ್ನ ಜೀವಮಾನವೆಲ್ಲಾ ಯೆಹೋವನನ್ನು ಸ್ತುತಿಸುವೆನು;
ಆತನನ್ನು ಸಂಕೀರ್ತಿಸುವೆನು.
3 ಸಹಾಯಕ್ಕಾಗಿ ನಿಮ್ಮ ನಾಯಕರುಗಳನ್ನು ಅವಲಂಬಿಸಿಕೊಳ್ಳಬೇಡಿ.
ಮನುಷ್ಯರಲ್ಲಿ ಭರವಸವಿಡಬೇಡಿ, ಅವರು ನಿಮ್ಮನ್ನು ರಕ್ಷಿಸಲಾರರು.
4 ಮನುಷ್ಯರು ಸತ್ತು ಸಮಾಧಿಗೆ ಸೇರುವರು;
ಆಗ ನಿಮಗೆ ಸಹಾಯಮಾಡಬೇಕೆಂಬ ಅವರ ಆಲೋಚನೆಗಳೆಲ್ಲಾ ಅಳಿದುಹೋಗುತ್ತವೆ.
5 ಯಾರಿಗೆ ದೇವರು ಸಹಾಯಕನೋ,
ಯಾರು ತಮ್ಮ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದಾರೋ, ಅವರೇ ಭಾಗ್ಯವಂತರು.
6 ಯೆಹೋವನು ಆಕಾಶವನ್ನೂ ಭೂಮಿಯನ್ನೂ
ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದನು.
ಆತನು ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವನು.
7 ಹಿಂಸೆಗೆ ಗುರಿಯಾಗಿರುವವರಿಗೆ ನ್ಯಾಯವನ್ನೂ;
ಹಸಿದವರಿಗೆ ಆಹಾರವನ್ನೂ ಕೊಡುವವನು ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುವನು.
8 ಯೆಹೋವನು ಕುರುಡರಿಗೆ ದೃಷ್ಟಿಕೊಡುವನು.
ಯೆಹೋವನು ಕುಗ್ಗಿಹೋದವರನ್ನು ಉದ್ಧರಿಸುವನು.
ಯೆಹೋವನು ನೀತಿವಂತರನ್ನು ಪ್ರೀತಿಸುವನು.
9 ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ.
ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ.
ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು.
10 ಯೆಹೋವನು ಸದಾಕಾಲ ಆಳುವನು!
ಚೀಯೋನೇ, ನಿನ್ನ ದೇವರು ಶಾಶ್ವತವಾಗಿ ಆಳುವನು!
ಯೆಹೋವನಿಗೆ ಸ್ತೋತ್ರವಾಗಲಿ!
ಜನರೆಲ್ಲರನ್ನೂ ಪ್ರೀತಿಸಿ
2 ನನ್ನ ಪ್ರಿಯ ಸಹೋದರ ಸಹೋದರಿಯರೇ, ಮಹಿಮಾಪೂರ್ಣನಾದ ಪ್ರಭು ಯೇಸು ಕ್ರಿಸ್ತನಲ್ಲಿ ನೀವು ನಂಬಿಕೆಯಿಟ್ಟಿದ್ದೀರಿ. ಆದ್ದರಿಂದ ಕೆಲವರು ಇತರ ಜನರಿಗಿಂತ ಬಹಳ ಮುಖ್ಯರೆಂದು ಯೋಚಿಸಬೇಡಿ. 2 ನಿಮ್ಮ ಸಭೆಗೆ ಒಬ್ಬನು ಬರುತ್ತಾನೆಂದು ನೆನೆಸಿರಿ. ಅವನು ಒಳ್ಳೆಯ ವಸ್ತ್ರಗಳನ್ನೂ ಬಂಗಾರದ ಉಂಗುರವನ್ನೂ ಧರಿಸಿರುತ್ತಾನೆ. ಅದೇ ಸಮಯಕ್ಕೆ ಕೊಳೆಯಾದ ಮತ್ತು ಹಳೆಯದಾದ ವಸ್ತ್ರಗಳನ್ನು ಧರಿಸಿರುವ ಒಬ್ಬ ಬಡವನೂ ಬರುತ್ತಾನೆ. 3 ಒಳ್ಳೆಯ ವಸ್ತ್ರಗಳನ್ನು ಧರಿಸಿರುವವನಿಗೆ ವಿಶೇಷ ಗಮನವನ್ನು ನೀಡುವಿರಿ. “ಉತ್ತಮವಾದ ಈ ಸ್ಥಳದಲ್ಲಿ ನೀವು ಕುಳಿತುಕೊಳ್ಳಿ” ಎಂದು ಅವನಿಗೆ ಹೇಳುವಿರಿ. ಆದರೆ ಆ ಬಡ ಮನುಷ್ಯನಿಗೆ “ಅಲ್ಲೇ ನಿಂತುಕೊ!” ಎಂದಾಗಲಿ, “ನಮ್ಮ ಪಾದಗಳ ಬಳಿ ನೆಲದ ಮೇಲೆ ಕುಳಿತುಕೊ!” ಎಂದಾಗಲಿ ಹೇಳುವಿರಿ. 4 ನೀವು ಮಾಡುತ್ತಿರುವುದೇನು? ಕೆಲವರನ್ನು ಇತರ ಜನರಿಗಿಂತ ಬಹಳ ಮುಖ್ಯರೆಂದು ಪರಿಗಣಿಸುತ್ತಿರುವಿರಿ. ನಿಮ್ಮ ಈ ತೀರ್ಪು ದುರುದ್ದೇಶದಿಂದ ಕೂಡಿರುತ್ತದೆ.
5 ನನ್ನ ಪ್ರಿಯ ಸಹೋದರ ಸಹೋದರಿಯರೇ, ಕೇಳಿರಿ! ಈ ಲೋಕದಲ್ಲಿ ಬಡವರು ನಂಬಿಕೆಯಲ್ಲಿ ಶ್ರೀಮಂತರಾಗಿರಲೆಂದು ದೇವರು ಅವರನ್ನು ಆರಿಸಿಕೊಂಡಿದ್ದಾನೆ. ತನ್ನನ್ನು ಪ್ರೀತಿಸುವ ಜನರಿಗೆ ದೇವರು ವಾಗ್ದಾನಮಾಡಿದ ರಾಜ್ಯವನ್ನು ಹೊಂದಿಕೊಳ್ಳಲು ಆತನು ಅವರನ್ನು ಆರಿಸಿಕೊಂಡಿದ್ದಾನೆ. 6 ಆದರೆ ಬಡವನಿಗೆ ನೀವು ಗೌರವವನ್ನೇ ತೋರುವುದಿಲ್ಲ. ಶ್ರೀಮಂತ ಜನರು ಯಾವಾಗಲೂ ನಿಮ್ಮ ಬದುಕನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆಂಬುದು ನಿಮಗೆ ತಿಳಿದಿದೆ. ನಿಮ್ಮನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವವರು ಅವರೇ. 7 ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡಿರುವ ಯೇಸುವಿನ ಶ್ರೇಷ್ಠವಾದ ಹೆಸರಿಗೆ ವಿರುದ್ಧವಾಗಿ ಕೆಟ್ಟಮಾತುಗಳನ್ನು ಆಡುವವರು ಶ್ರೀಮಂತರೇ.
8 ಪವಿತ್ರ ಗ್ರಂಥದಲ್ಲಿ ಬರೆದಿರುವ, “ನಿನ್ನನ್ನು ಪ್ರೀತಿಸುವಂತೆ ಇತರರನ್ನೂ ಪ್ರೀತಿಸು”(A) ಎಂಬ ರಾಜಾಜ್ಞೆಗೆ ನೀವು ವಿಧೇಯರಾಗಿದ್ದರೆ ಸರಿಯಾದುದನ್ನೇ ಮಾಡುವವರಾಗಿದ್ದೀರಿ. 9 ಆದರೆ ನೀವು ಒಬ್ಬನನ್ನು ಇನ್ನೊಬ್ಬನಿಗಿಂತ ಮುಖ್ಯನೆಂದು ಪರಿಗಣಿಸಿ ಪಕ್ಷಪಾತ ಮಾಡಿದರೆ ಪಾಪವನ್ನು ಮಾಡುವವರಾಗಿದ್ದೀರಿ. ದೇವರ ಧರ್ಮಶಾಸ್ತ್ರವನ್ನು ಉಲ್ಲಂಘಿಸಿ ದೋಷಿಗಳಾಗಿದ್ದೀರೆಂದು ಆ ರಾಜಾಜ್ಞೆಯು ನಿರೂಪಿಸುತ್ತದೆ.
10 ಒಬ್ಬನು ದೇವರ ಎಲ್ಲಾ ಆಜ್ಞೆಗಳನ್ನು ಅನುಸರಿಸುತ್ತಿರಬಹುದು. ಆದರೆ ಅವನು ಒಂದು ಆಜ್ಞೆಗೆ ಅವಿಧೇಯನಾದರೆ ಅವನು ಧರ್ಮಶಾಸ್ತ್ರದ ಎಲ್ಲಾ ಆಜ್ಞೆಗಳನ್ನು ಮೀರಿದನೆಂಬ ಅಪರಾಧಕ್ಕೆ ಗುರಿಯಾಗುವನು.
11 “ವ್ಯಭಿಚಾರ ಮಾಡಬಾರದು”(A) ಎಂದು ದೇವರು ಹೇಳಿದನು. “ಕೊಲ್ಲಬಾರದು”(B) ಎಂದೂ ಅದೇ ದೇವರು ಹೇಳಿದನು. ಹೀಗಿರಲಾಗಿ, ನೀವು ವ್ಯಭಿಚಾರವನ್ನು ಮಾಡದಿದ್ದರೂ ಯಾರನ್ನೇ ಆಗಲಿ ಕೊಂದರೆ, ದೇವರ ಇಡೀ ಧರ್ಮಶಾಸ್ತ್ರವನ್ನೇ ಉಲ್ಲಂಘಿಸಿದವರಾಗಿದ್ದೀರಿ.
12 ಜನರನ್ನು ಬಿಡುಗಡೆ ಮಾಡುವ ಧರ್ಮಶಾಸ್ತ್ರದಿಂದಲೇ ನಿಮಗೆ ತೀರ್ಪಾಗುವುದು. ನೀವು ಕೇಳುವ ಮತ್ತು ಮಾಡುವ ಪ್ರತಿಯೊಂದರಲ್ಲಿಯೂ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ. 13 ಹೌದು, ಇತರರಿಗೆ ನೀವು ಕರುಣೆ ತೋರಬೇಕು. ಇಲ್ಲವಾದರೆ ದೇವರು ತೀರ್ಪು ನೀಡುವಾಗ ನಿಮಗೂ ಕರುಣೆ ತೋರನು. ಕರುಣೆ ತೋರುವವನು ದೇವರ ನ್ಯಾಯತೀರ್ಪಿನಲ್ಲಿ ಭಯವಿಲ್ಲದೆ ಇರುವನು.
ನಂಬಿಕೆ ಮತ್ತು ಉತ್ತಮ ಕಾರ್ಯಗಳು
14 ನನ್ನ ಸಹೋದರ ಸಹೋದರಿಯರೇ, ಒಬ್ಬ ವ್ಯಕ್ತಿಯು ತನ್ನಲ್ಲಿ ನಂಬಿಕೆಯಿದೆಯೆಂದು ಹೇಳಿಕೊಂಡರೂ ಅದನ್ನು ಕಾರ್ಯರೂಪಕ್ಕೆ ತರದಿದ್ದರೆ, ಅವನ ನಂಬಿಕೆಯಿಂದ ಪ್ರಯೋಜನವೇನೂ ಇಲ್ಲ. ಆ ರೀತಿಯ ನಂಬಿಕೆಯು ಅವನನ್ನು ರಕ್ಷಿಸಬಲ್ಲದೇ? ಇಲ್ಲ! 15 ಕ್ರಿಸ್ತನಲ್ಲಿ ಸಹೋದರನಾಗಿರುವವನಿಗೆ ಅಥವಾ ಸಹೋದರಿಯಾಗಿರುವವಳಿಗೆ ಬಟ್ಟೆಗಳು ಬೇಕಾಗಿರಬಹುದು ಅಥವಾ ತಿನ್ನಲು ಆಹಾರ ಬೇಕಾಗಿರಬಹುದು. 16 ಆದರೆ ನೀವು ಆ ವ್ಯಕ್ತಿಗೆ, “ದೇವರು ನಿನ್ನೊಂದಿಗಿರಲಿ! ಚಳಿಕಾಯಿಸಿಕೊಂಡು ತೃಪ್ತಿಯಾಗುವಷ್ಟು ಊಟ ಮಾಡು” ಎಂಬುದಾಗಿ ಹೇಳಿ ಬೇಕಾದವುಗಳನ್ನು ಅವನಿಗೆ ಕೊಡದೆ ಹೋದರೆ ನಿಮ್ಮ ಮಾತುಗಳಿಗೆ ಯಾವ ಬೆಲೆಯೂ ಇಲ್ಲ. 17 ಇದೇ ನಿಯಮ ನಂಬಿಕೆಗೂ ಅನ್ವಯಿಸುತ್ತದೆ. ಕ್ರಿಯೆಯಿಲ್ಲದ ನಂಬಿಕೆಯು ತನ್ನಲ್ಲಿಯೇ ಸತ್ತುಹೋಗಿದೆ.
ಯೆಹೂದ್ಯಳಲ್ಲದ ಸ್ತ್ರೀಗೆ ಯೇಸುವಿನ ಸಹಾಯ
(ಮತ್ತಾಯ 15:21-28)
24 ಯೇಸು ಆ ಸ್ಥಳವನ್ನು ಬಿಟ್ಟು ಟೈರ್ ಪಟ್ಟಣದ ಸುತ್ತಮುತ್ತಲಿನ ಪ್ರದೇಶಕ್ಕೆ ಹೋದನು. ಯೇಸು ಅಲ್ಲಿ ಒಂದು ಮನೆಯೊಳಕ್ಕೆ ಹೋದನು. ತಾನು ಅಲ್ಲಿರುವುದು ಅಲ್ಲಿಯ ಜನರಿಗೆ ತಿಳಿಯಬಾರದೆಂಬುದು ಆತನ ಅಪೇಕ್ಷೆಯಾಗಿತ್ತು. ಆದರೆ ಯೇಸುವಿಗೆ ಅಡಗಿಕೊಳ್ಳಲಿಕ್ಕಾಗಲಿಲ್ಲ. 25 ಯೇಸು ಅಲ್ಲಿರುವನೆಂಬುದು ಒಬ್ಬ ಸ್ತ್ರೀಗೆ ತಿಳಿಯಿತು. ಅವಳ ಕಿರಿಯ ಮಗಳಿಗೆ ದೆವ್ವ ಹಿಡಿದಿತ್ತು. ಆದ್ದರಿಂದ ಆ ಸ್ತ್ರೀಯು ಯೇಸುವಿನ ಬಳಿಗೆ ಬಂದು, ಆತನ ಪಾದಗಳ ಮುಂದೆ ಅಡ್ಡಬಿದ್ದು ನಮಸ್ಕರಿಸಿದಳು. 26 ಅವಳು ಸಿರಿಯ ಪ್ರದೇಶದ ಪೊಯಿನಿಕ್ಯದಲ್ಲಿ ಹುಟ್ಟಿದ್ದಳು ಮತ್ತು ಗ್ರೀಕಳಾಗಿದ್ದಳು. ಆ ಸ್ತ್ರೀಯು ತನ್ನ ಮಗಳಲ್ಲಿರುವ ದೆವ್ವವನ್ನು ಹೊರಗಟ್ಟಬೇಕೆಂದು ಯೇಸುವಿನಲ್ಲಿ ಬೇಡಿಕೊಂಡಳು.
27 ಯೇಸು ಆ ಸ್ತ್ರೀಗೆ, “ಮಕ್ಕಳಿಗೆ ಕೊಡುವ ರೊಟ್ಟಿಯನ್ನು ತೆಗೆದುಕೊಂಡು ನಾಯಿಗಳಿಗೆ ಕೊಡುವುದು ಸರಿಯಲ್ಲ. ತಮಗೆ ಬೇಕಾದುದನ್ನು ಮಕ್ಕಳು ಮೊದಲು ತಿನ್ನಲಿ” ಎಂದು ಹೇಳಿದನು.
28 ಆ ಸ್ತ್ರೀಯು, “ಅದು ನಿಜ ಪ್ರಭು. ಆದರೆ ಮಕ್ಕಳು ತಿನ್ನದೆ ಬಿಟ್ಟ ಆಹಾರದ ಚೂರುಗಳನ್ನು ಮೇಜಿನ ಕೆಳಗಿರುವ ನಾಯಿಗಳು ತಿನ್ನಬಹುದಲ್ಲವೇ?” ಎಂದು ಉತ್ತರಕೊಟ್ಟಳು.
29 ಆಗ ಯೇಸು ಆ ಸ್ತ್ರೀಗೆ, “ನೀನು ಒಳ್ಳೆಯ ಉತ್ತರ ಕೊಟ್ಟೆ. ಹೋಗು, ನಿನ್ನ ಮಗಳನ್ನು ದೆವ್ವವು ಬಿಟ್ಟುಹೋಗಿದೆ” ಎಂದು ಹೇಳಿದನು.
30 ಆ ಸ್ತ್ರೀಯು ಮನೆಗೆ ಹೋದಾಗ ತನ್ನ ಮಗಳು ಹಾಸಿಗೆಯಲ್ಲಿ ಮಲಗಿರುವುದನ್ನು ಕಂಡಳು. ದೆವ್ವವು ಅವಳನ್ನು ಬಿಟ್ಟುಹೋಗಿತ್ತು.
ಕಿವುಡನಿಗೆ ಸ್ವಸ್ಥತೆ
31 ನಂತರ ಯೇಸು ಟೈರ್ ಪಟ್ಟಣದ ಆ ಪ್ರದೇಶವನ್ನು ಬಿಟ್ಟು ಸಿದೋನ್ ಪಟ್ಟಣದ ಮಾರ್ಗವಾಗಿ ದೆಕಪೊಲಿ[a] ಪ್ರದೇಶವನ್ನು ಹಾದು ಗಲಿಲಾಯ ಸರೋವರಕ್ಕೆ ಹೋದನು. 32 ಆತನು ಅಲ್ಲಿದ್ದಾಗ, ಕೆಲವರು ಕಿವುಡನೂ ತೊದಲನೂ ಆಗಿದ್ದ ಒಬ್ಬನನ್ನು ಯೇಸುವಿನ ಬಳಿಗೆ ಕರೆದುತಂದು ಅವನ ಮೇಲೆ ಕೈಯಿಟ್ಟು ಗುಣಪಡಿಸಬೇಕೆಂದು ಬೇಡಿಕೊಂಡರು.
33 ಯೇಸು ಅವನನ್ನು ಜನರಿಂದ ಸ್ವಲ್ಪ ದೂರ ತನ್ನೊಂದಿಗೆ ಕರೆದೊಯ್ದು ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿಟ್ಟು ಉಗುಳಿ, ಅವನ ನಾಲಿಗೆಯನ್ನು ಮುಟ್ಟಿದನು. 34 ಬಳಿಕ ಆಕಾಶದ ಕಡೆಗೆ ನೋಡಿ, ನಿಟ್ಟುಸಿರು ಬಿಟ್ಟು, “ಎಪ್ಫಥಾ” ಎಂದು ಹೇಳಿದನು. (ಎಪ್ಫಥಾ ಎಂದರೆ “ತೆರೆಯಲಿ”) 35 ಆಗ ಅವನ ಕಿವಿಗಳು ತೆರೆದವು. ನಾಲಿಗೆ ಸಡಿಲಗೊಂಡಿತು. ಅವನು ಸ್ಪಷ್ಟವಾಗಿ ಮಾತಾಡಿದನು.
36 ಈ ಸಂಗತಿಯನ್ನು ತಿಳಿಸಕೂಡದೆಂದು ಯೇಸು ಜನರಿಗೆ ಆಜ್ಞಾಪಿಸಿದನು. ತನ್ನ ಬಗ್ಗೆ ಇತರ ಜನರಿಗೆ ತಿಳಿಸಕೂಡದಂತೆ ಯೇಸು ಯಾವಾಗಲೂ ಆಜ್ಞಾಪಿಸುತ್ತಿದ್ದನು. ಆದರೂ ಜನರು ಆತನ ಬಗ್ಗೆ ಇನ್ನೂ ಹೆಚ್ಚಾಗಿ ಹಬ್ಬಿಸಿದರು. 37 ಜನರು ನಿಜವಾಗಿಯೂ ಅತ್ಯಾಶ್ಚರ್ಯಗೊಂಡು, “ಯೇಸು ಎಲ್ಲವನ್ನೂ ಒಳ್ಳೆಯ ರೀತಿಯಲ್ಲಿ ಮಾಡುತ್ತಾನೆ. ಆತನು ಕಿವುಡರಿಗೆ ಕಿವಿ ಕೇಳಿಸುವಂತೆ ಮಾಡುತ್ತಾನೆ. ಮೂಕರು ಮಾತಾಡುವಂತೆ ಮಾಡುತ್ತಾನೆ” ಎಂದು ಹೇಳಿದರು.
Kannada Holy Bible: Easy-to-Read Version. All rights reserved. © 1997 Bible League International