Revised Common Lectionary (Complementary)
ರಚನೆಗಾರ: ದಾವೀದ.
68 ದೇವರೇ, ಎದ್ದೇಳು! ನಿನ್ನ ವೈರಿಗಳನ್ನು ಚದರಿಸಿಬಿಡು.
ಆತನ ಶತ್ರುಗಳೆಲ್ಲಾ ಆತನ ಬಳಿಯಿಂದ ಓಡಿಹೋಗಲಿ.
2 ಗಾಳಿ ಬಡಿದುಕೊಂಡು ಹೋಗುವ ಹೊಗೆಯಂತೆ
ನಿನ್ನ ಶತ್ರುಗಳು ಚದರಿಹೋಗಲಿ.
ಬೆಂಕಿಯಲ್ಲಿ ಕರಗಿಹೋಗುವ ಮೇಣದಂತೆ
ನಿನ್ನ ಶತ್ರುಗಳು ನಾಶವಾಗಲಿ.
3 ನೀತಿವಂತರಾದರೋ ದೇವರ ಸನ್ನಿಧಿಯಲ್ಲಿ ಹರ್ಷಿಸಲಿ;
ಅವರು ಉಲ್ಲಾಸಿಸುತ್ತಾ ಸಂತೋಷವಾಗಿರಲಿ!
4 ದೇವರಿಗೆ ಗಾಯನ ಮಾಡಿರಿ; ಆತನ ಹೆಸರನ್ನು ಕೊಂಡಾಡಿರಿ.
ಅರಣ್ಯದಲ್ಲಿ ರಥದ ಮೇಲೆ ಸವಾರಿ ಮಾಡುತ್ತಾ ಬರುವಾತನಿಗೆ ಹಾದಿಯನ್ನು ಸಿದ್ಧಗೊಳಿಸಿರಿ.
ಆತನ ಹೆಸರು ಯಾಹು.
ಆತನ ಹೆಸರನ್ನು ಕೊಂಡಾಡಿರಿ!
5 ದೇವರು ತನ್ನ ಪವಿತ್ರ ಆಲಯದಲ್ಲಿ,
ಅನಾಥರಿಗೆ ತಂದೆಯೂ ವಿಧವೆಯರಿಗೆ ಪಾಲಕನೂ ಆಗಿದ್ದಾನೆ.
6 ದೇವರು ಒಬ್ಬಂಟಿಗರಿಗೆ ಸಂಸಾರವನ್ನು ದಯಪಾಲಿಸುವನು.
ಆತನು ತನ್ನ ಜನರನ್ನು ಸೆರೆಯಿಂದ ಬಿಡಿಸಿ ಸಂತೋಷಗೊಳಿಸುವನು.
ದೇವದ್ರೋಹಿಗಳಾದರೋ ಉರಿಬಿಸಿಲಿನ ಸೆರೆಯಲ್ಲಿ ಉಳಿಯುವರು.
7 ದೇವರೇ, ನಿನ್ನ ಜನರನ್ನು ಈಜಿಪ್ಟಿನಿಂದ ನಡೆಸಿದೆ.
ನೀನು ಅರಣ್ಯದಲ್ಲಿ ಅವರ ಮುಂದೆ ಪ್ರಯಾಣ ಮಾಡುತ್ತಿರಲು,
8 ಭೂಮಿಯೇ ಕಂಪಿಸಿತು.
ಇಸ್ರೇಲರ ದೇವಾಧಿದೇವನು ಸೀನಾಯಿ ಬೆಟ್ಟಕ್ಕೆ ಬಂದಾಗ ಆಕಾಶವೇ ಕರಗಿಹೋಯಿತು.
9 ದೇವರೇ, ನೀನು ಮಳೆ ಸುರಿಸಿ,
ಒಣಗಿ ಕೃಶವಾಗಿದ್ದ ಭೂಮಿಯನ್ನು ಫಲವತ್ತು ಮಾಡಿದೆ.
10 ನಿನ್ನ ಜನರು ಆ ನಾಡಿನಲ್ಲಿ ನೆಲಸಿದರು.
ದೇವರೇ, ಅಲ್ಲಿಯ ಬಡಜನರಿಗೆ ನೀನು ಶ್ರೇಷ್ಠವಾದವುಗಳನ್ನೇ ನೀಡಿದೆ.
19 ನಮ್ಮ ಅನುದಿನದ ಭಾರವನ್ನು ಹೊರುವ ಯೆಹೋವನಿಗೆ ಸ್ತೋತ್ರವಾಗಲಿ!
ನಮ್ಮನ್ನು ರಕ್ಷಿಸುವವನು ಆತನೇ.
20 ಆತನೇ ನಮ್ಮ ದೇವರು. ನಮ್ಮನ್ನು ರಕ್ಷಿಸುವ ದೇವರು ಆತನೇ.
ನಮ್ಮ ದೇವರಾದ ಯೆಹೋವನು ನಮ್ಮನ್ನು ಮರಣದಿಂದ ರಕ್ಷಿಸುವನು.
ಯೆಫ್ತಾಹನ ಹರಕೆ
29 ಆಗ ಯೆಹೋವನ ಆತ್ಮವು ಯೆಫ್ತಾಹನ ಮೇಲೆ ಬಂತು. ಯೆಫ್ತಾಹನು ಗಿಲ್ಯಾದನ ಮತ್ತು ಮನಸ್ಸೆಯ ಪ್ರದೇಶಗಳಲ್ಲಿ ಸಂಚರಿಸಿದನು. ಅವನು ಗಿಲ್ಯಾದಿನ ಮಿಚ್ಛೆಗೆ ಬಂದನು. ಗಿಲ್ಯಾದಿನ ಮಿಚ್ಛೆಯ ನಗರದಿಂದ ಅವನು ಅಮ್ಮೋನಿಯರ ಪ್ರದೇಶಕ್ಕೆ ಹೋದನು.
30 ಯೆಫ್ತಾಹನು ಯೆಹೋವನಿಗೆ, “ನಾನು ಅಮ್ಮೋನಿಯರನ್ನು ಸೋಲಿಸುವಂತೆ ನೀನು ಮಾಡಿದರೆ 31 ನಾನು ಜಯಶಾಲಿಯಾಗಿ ಬರುವಾಗ ನನ್ನ ಮನೆಯಿಂದ ಹೊರ ಬರುವ ಮೊದಲನೆಯ ಜೀವಿಯನ್ನು ನಿನಗೆ ಕೊಡುತ್ತೇನೆ. ನಾನು ಅದನ್ನು ಯೆಹೋವನ ಸರ್ವಾಂಗಹೋಮಕ್ಕೆ ಆಹುತಿಯಾಗಿ ಕೊಡುವೆನು” ಎಂದು ಹರಕೆ ಮಾಡಿಕೊಂಡನು.
32 ಆಮೇಲೆ ಯೆಫ್ತಾಹನು ಅಮ್ಮೋನಿಯರ ದೇಶಕ್ಕೆ ಹೋಗಿ ಯುದ್ಧಮಾಡಿದನು. ಅವರನ್ನು ಸೋಲಿಸಲು ಯೆಹೋವನು ಯೆಫ್ತಾಹನಿಗೆ ಸಹಾಯ ಮಾಡಿದನು. 33 ಅವನು ಅವರನ್ನು ಸೋಲಿಸಿ ಅರೋಯೇರ್ ನಗರದಿಂದ ಮಿನ್ನೀತ್ ನಗರದವರೆಗೆ ಇಪ್ಪತ್ತು ನಗರಗಳನ್ನು ಗೆದ್ದುಕೊಂಡನು. ಆಮೇಲೆ ಅವನು ಅಮ್ಮೋನಿಯರ ಸಂಗಡ ಯುದ್ಧಮಾಡಿ ಅಬೇಲ್‌ಕೆರಾಮೀಮ್ ನಗರವನ್ನು ಗೆದ್ದುಕೊಂಡನು. ಇಸ್ರೇಲರು ಅಮ್ಮೋನಿಯರನ್ನು ಸೋಲಿಸಿದರು. ಅಮ್ಮೋನಿಯರಿಗೆ ಇದೊಂದು ದೊಡ್ಡ ಸೋಲಾಯಿತು.
34 ಯೆಫ್ತಾಹನು ಮಿಚ್ಛೆಗೆ ಹಿಂದಿರುಗಿದನು. ಯೆಫ್ತಾಹನು ತನ್ನ ಮನೆಗೆ ಹೋಗುತ್ತಿರಲು ಅವನನ್ನು ಎದುರುಗೊಳ್ಳಲು ಅವನ ಮಗಳು ಮನೆಯಿಂದ ಹೊರಗೆ ಬಂದಳು. ಅವಳು ದಮ್ಮಡಿ ಬಡಿಯುತ್ತ ನಾಟ್ಯವಾಡುತ್ತಿದ್ದಳು. ಅವಳು ಅವನ ಒಬ್ಬಳೇ ಮಗಳಾಗಿದ್ದಳು. ಯೆಫ್ತಾಹನಿಗೆ ಬೇರೆ ಗಂಡುಮಕ್ಕಳಾಗಲಿ ಹೆಣ್ಣುಮಕ್ಕಳಾಗಲಿ ಇರಲಿಲ್ಲ. ಯೆಫ್ತಾಹನು ಅವಳನ್ನು ತುಂಬ ಪ್ರೀತಿಸುತ್ತಿದ್ದನು. 35 ತನ್ನ ಮನೆಯಿಂದ ಹೊರ ಬರುವ ಜೀವಿಗಳಲ್ಲಿ ತನ್ನ ಮಗಳೇ ಮೊದಲನೆಯವಳಾದುದನ್ನು ಕಂಡು ಯೆಫ್ತಾಹನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನು. “ಅಯ್ಯೋ! ನನ್ನ ಮಗಳೇ, ನೀನು ನನ್ನನ್ನು ಹಾಳುಮಾಡಿದೆ. ನೀನು ನನಗೆ ಮಹಾಸಂಕಟವನ್ನು ಉಂಟುಮಾಡಿದೆ. ನಾನು ಯೆಹೋವನಿಗೆ ಒಂದು ಹರಕೆ ಹೊತ್ತಿದ್ದೇನೆ; ನಾನು ಅದನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಗೋಳಾಡಿದನು.
36 ಆಗ ಯೆಫ್ತಾಹನ ಮಗಳು ಅವನಿಗೆ, “ನನ್ನ ತಂದೆಯೇ, ನೀನು ಯೆಹೋವನಿಗೆ ಹರಕೆ ಹೊತ್ತಿರುವೆ. ನಿನ್ನ ಹರಕೆಯನ್ನು ಪೂರ್ಣಗೊಳಿಸು. ಏನು ಮಾಡುವೆನೆಂದು ಹೇಳಿದ್ದಿಯೋ ಅದನ್ನು ಮಾಡು. ನಿನ್ನ ಶತ್ರುಗಳಾದ ಅಮ್ಮೋನಿಯರನ್ನು ಸೋಲಿಸಲು ಯೆಹೋವನು ನಿನಗೆ ಸಹಾಯ ಮಾಡಿದ್ದಾನೆ” ಎಂದಳು.
37 ಯೆಫ್ತಾಹನ ಮಗಳು ತನ್ನ ತಂದೆಗೆ, “ನನಗೋಸ್ಕರ ಒಂದು ಕೆಲಸವನ್ನು ಮಾಡು. ಎರಡು ತಿಂಗಳುಗಳವರೆಗೆ ನನ್ನನ್ನು ಒಬ್ಬಂಟಿಗಳಾಗಿ ಇರಲು ಬಿಡು. ನಾನು ಬೆಟ್ಟಪ್ರದೇಶಕ್ಕೆ ಹೋಗುತ್ತೇನೆ. ನಾನು ಮದುವೆ ಮಾಡಿಕೊಳ್ಳುವುದಿಲ್ಲ ಮತ್ತು ಮಕ್ಕಳನ್ನು ಹೆರುವದಿಲ್ಲ. ನಾನು ಮತ್ತು ನನ್ನ ಗೆಳತಿಯರು ಹೋಗಿ ಒಟ್ಟಾಗಿ ಅಳುತ್ತೇವೆ” ಎಂದಳು.
38 ಯೆಫ್ತಾಹನು, “ಹೋಗು, ಹಾಗೆಯೇ ಮಾಡು” ಎಂದನು. ಯೆಫ್ತಾಹನು ಅವಳನ್ನು ಎರಡು ತಿಂಗಳುಗಳವರೆಗೆ ಕಳುಹಿಸಿಕೊಟ್ಟನು. ಯೆಫ್ತಾಹನ ಮಗಳು ಮತ್ತು ಆಕೆಯ ಗೆಳತಿಯರು ಬೆಟ್ಟಪ್ರದೇಶದಲ್ಲಿ ವಾಸಮಾಡಿದರು. ಅವಳು ಮದುವೆಯಾಗುವುದಿಲ್ಲ ಮತ್ತು ಮಕ್ಕಳನ್ನು ಹಡೆಯುವುದಿಲ್ಲ ಎಂಬ ಕಾರಣದಿಂದ ಅವರೆಲ್ಲರೂ ಗೋಳಾಡಿದರು.
39 ಎರಡು ತಿಂಗಳು ಗತಿಸಿದ ಮೇಲೆ ಯೆಫ್ತಾಹನ ಮಗಳು ತನ್ನ ತಂದೆಯಲ್ಲಿಗೆ ಬಂದಳು. ಯೆಫ್ತಾಹನು ದೇವರಿಗೆ ಹರಕೆ ಹೊತ್ತಂತೆ ಮಾಡಿದನು. ಯೆಫ್ತಾಹನ ಮಗಳು ಎಂದೂ ಯಾರೊಂದಿಗೂ ಲೈಂಗಿಕ ಸಂಬಂಧ ಹೊಂದಲಿಲ್ಲ. 40 ಪ್ರತಿವರ್ಷ ಇಸ್ರೇಲಿನ ಹೆಂಗಸರು ಗಿಲ್ಯಾದಿನ ಯೆಫ್ತಾಹನ ಮಗಳನ್ನು ಸ್ಮರಿಸುತ್ತಾರೆ. ಇಸ್ರೇಲಿನ ಹೆಂಗಸರು ಯೆಫ್ತಾಹನ ಮಗಳಿಗಾಗಿ ಪ್ರತಿವರ್ಷ ನಾಲ್ಕು ದಿನ ಅಳುತ್ತಾರೆ. ಇದು ಇಸ್ರೇಲಿನಲ್ಲಿ ಒಂದು ಪದ್ಧತಿಯಾಗಿದೆ.
ಪೇತ್ರನ ತಪ್ಪನ್ನು ಪೌಲನು ತೋರಿಸಿದನು
11 ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ, ಅವನು ತಪ್ಪಿತಸ್ಥನೆಂದು ಸ್ಪಷ್ಟವಾಗಿ ತೋರಿದ್ದರಿಂದ ನಾನು ಅವನನ್ನು ಮುಖಾಮುಖಿಯಾಗಿ ಖಂಡಿಸಿದೆನು. 12 ನಡೆದ ಸಂಗತಿ ಏನೆಂದರೆ: ಪೇತ್ರನು ಮೊದಲು ಅಂತಿಯೋಕ್ಯಕ್ಕೆ ಬಂದಾಗ ಅವನು ಯೆಹೂದ್ಯರಲ್ಲದವರೊಂದಿಗೆ ಊಟಮಾಡಿದನು ಮತ್ತು ಅನ್ಯೋನ್ಯತೆಯಿಂದಿದ್ದನು. ಆ ಬಳಿಕ ಯಾಕೋಬನಿಂದ ಕಳುಹಿಸಲ್ಪಟ್ಟಿದ್ದ ಕೆಲವು ಯೆಹೂದ್ಯರು ಬಂದರು. ಆಗ, ಪೇತ್ರನು ಯೆಹೂದ್ಯರಲ್ಲದವರೊಂದಿಗೆ ಊಟಮಾಡುವುದನ್ನು ನಿಲ್ಲಿಸಿದನು. ಪೇತ್ರನು ತನ್ನನ್ನು ಯೆಹೂದ್ಯರಲ್ಲದವರಿಂದ ಬೇರ್ಪಡಿಸಿಕೊಂಡನು. ಯೆಹೂದ್ಯರಲ್ಲದವರೆಲ್ಲರೂ ಸುನ್ನತಿ ಮಾಡಿಸಿಕೊಳ್ಳಬೇಕೆಂದು ನಂಬಿಕೊಂಡಿದ್ದ ಯೆಹೂದ್ಯರಿಗೆ ಅವನು ಹೆದರಿಕೊಂಡನು. 13 ಹೀಗೆ ಪೇತ್ರನು ಕಪಟತನದಿಂದ ವರ್ತಿಸಿದನು. ಯೆಹೂದ್ಯರಾದ ವಿಶ್ವಾಸಿಗಳು ಸಹ ಪೇತ್ರನನ್ನೇ ಅನುಸರಿಸಿ ಕಪಟತನದಿಂದ ವರ್ತಿಸಿದರು. ಇವರ ವರ್ತನೆಯಿಂದ ಬಾರ್ನಬನು ಸಹ ಪ್ರಭಾವಿತನಾದನು. 14 ಈ ಯೆಹೂದ್ಯರ ವರ್ತನೆಯನ್ನು ನಾನು ಗಮನಿಸಿದೆನು. ಅವರು ಸುವಾರ್ತೆಯ ಸತ್ಯವನ್ನು ಅನುಸರಿಸದೆ ಇರುವುದನ್ನು ಕಂಡು ಅಲ್ಲಿದ್ದ ಯೆಹೂದ್ಯರೆಲ್ಲರಿಗೂ ಕೇಳಿಸುವಂತೆ ನಾನು ಪೇತ್ರನಿಗೆ, “ನೀನು ಯೆಹೂದ್ಯನಾಗಿರುವೆ. ಆದರೆ ನೀನು ಯೆಹೂದ್ಯನಂತೆ ಜೀವಿಸುತ್ತಿಲ್ಲ. ನೀನು ಯೆಹೂದ್ಯನಲ್ಲದವನಂತೆ ಜೀವಿಸುತ್ತಿರುವೆ. ಹೀಗಿರಲು ನೀನು ಯೆಹೂದ್ಯರಲ್ಲದವರಿಗೆ ಯೆಹೂದ್ಯರಂತೆ ಜೀವಿಸಬೇಕೆಂದು ಒತ್ತಾಯಮಾಡುವುದೇಕೆ?” ಎಂದು ಕೇಳಿದೆನು.
Kannada Holy Bible: Easy-to-Read Version. All rights reserved. © 1997 Bible League International