Revised Common Lectionary (Complementary)
ರಚನೆಗಾರ: ದಾವೀದ.
68 ದೇವರೇ, ಎದ್ದೇಳು! ನಿನ್ನ ವೈರಿಗಳನ್ನು ಚದರಿಸಿಬಿಡು.
ಆತನ ಶತ್ರುಗಳೆಲ್ಲಾ ಆತನ ಬಳಿಯಿಂದ ಓಡಿಹೋಗಲಿ.
2 ಗಾಳಿ ಬಡಿದುಕೊಂಡು ಹೋಗುವ ಹೊಗೆಯಂತೆ
ನಿನ್ನ ಶತ್ರುಗಳು ಚದರಿಹೋಗಲಿ.
ಬೆಂಕಿಯಲ್ಲಿ ಕರಗಿಹೋಗುವ ಮೇಣದಂತೆ
ನಿನ್ನ ಶತ್ರುಗಳು ನಾಶವಾಗಲಿ.
3 ನೀತಿವಂತರಾದರೋ ದೇವರ ಸನ್ನಿಧಿಯಲ್ಲಿ ಹರ್ಷಿಸಲಿ;
ಅವರು ಉಲ್ಲಾಸಿಸುತ್ತಾ ಸಂತೋಷವಾಗಿರಲಿ!
4 ದೇವರಿಗೆ ಗಾಯನ ಮಾಡಿರಿ; ಆತನ ಹೆಸರನ್ನು ಕೊಂಡಾಡಿರಿ.
ಅರಣ್ಯದಲ್ಲಿ ರಥದ ಮೇಲೆ ಸವಾರಿ ಮಾಡುತ್ತಾ ಬರುವಾತನಿಗೆ ಹಾದಿಯನ್ನು ಸಿದ್ಧಗೊಳಿಸಿರಿ.
ಆತನ ಹೆಸರು ಯಾಹು.
ಆತನ ಹೆಸರನ್ನು ಕೊಂಡಾಡಿರಿ!
5 ದೇವರು ತನ್ನ ಪವಿತ್ರ ಆಲಯದಲ್ಲಿ,
ಅನಾಥರಿಗೆ ತಂದೆಯೂ ವಿಧವೆಯರಿಗೆ ಪಾಲಕನೂ ಆಗಿದ್ದಾನೆ.
6 ದೇವರು ಒಬ್ಬಂಟಿಗರಿಗೆ ಸಂಸಾರವನ್ನು ದಯಪಾಲಿಸುವನು.
ಆತನು ತನ್ನ ಜನರನ್ನು ಸೆರೆಯಿಂದ ಬಿಡಿಸಿ ಸಂತೋಷಗೊಳಿಸುವನು.
ದೇವದ್ರೋಹಿಗಳಾದರೋ ಉರಿಬಿಸಿಲಿನ ಸೆರೆಯಲ್ಲಿ ಉಳಿಯುವರು.
7 ದೇವರೇ, ನಿನ್ನ ಜನರನ್ನು ಈಜಿಪ್ಟಿನಿಂದ ನಡೆಸಿದೆ.
ನೀನು ಅರಣ್ಯದಲ್ಲಿ ಅವರ ಮುಂದೆ ಪ್ರಯಾಣ ಮಾಡುತ್ತಿರಲು,
8 ಭೂಮಿಯೇ ಕಂಪಿಸಿತು.
ಇಸ್ರೇಲರ ದೇವಾಧಿದೇವನು ಸೀನಾಯಿ ಬೆಟ್ಟಕ್ಕೆ ಬಂದಾಗ ಆಕಾಶವೇ ಕರಗಿಹೋಯಿತು.
9 ದೇವರೇ, ನೀನು ಮಳೆ ಸುರಿಸಿ,
ಒಣಗಿ ಕೃಶವಾಗಿದ್ದ ಭೂಮಿಯನ್ನು ಫಲವತ್ತು ಮಾಡಿದೆ.
10 ನಿನ್ನ ಜನರು ಆ ನಾಡಿನಲ್ಲಿ ನೆಲಸಿದರು.
ದೇವರೇ, ಅಲ್ಲಿಯ ಬಡಜನರಿಗೆ ನೀನು ಶ್ರೇಷ್ಠವಾದವುಗಳನ್ನೇ ನೀಡಿದೆ.
19 ನಮ್ಮ ಅನುದಿನದ ಭಾರವನ್ನು ಹೊರುವ ಯೆಹೋವನಿಗೆ ಸ್ತೋತ್ರವಾಗಲಿ!
ನಮ್ಮನ್ನು ರಕ್ಷಿಸುವವನು ಆತನೇ.
20 ಆತನೇ ನಮ್ಮ ದೇವರು. ನಮ್ಮನ್ನು ರಕ್ಷಿಸುವ ದೇವರು ಆತನೇ.
ನಮ್ಮ ದೇವರಾದ ಯೆಹೋವನು ನಮ್ಮನ್ನು ಮರಣದಿಂದ ರಕ್ಷಿಸುವನು.
ಅಬ್ರಹಾಮನೇ, ನಿನ್ನ ಮಗನನ್ನು ಯಜ್ಞವಾಗಿ ಅರ್ಪಿಸು
22 ಇವುಗಳಾದ ಮೇಲೆ, ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಲು ನಿರ್ಧರಿಸಿ, “ಅಬ್ರಹಾಮನೇ!” ಎಂದು ಕರೆದನು.
ಅಬ್ರಹಾಮನು, “ಇಗೋ ಇದ್ದೇನೆ” ಅಂದನು.
2 ಆಗ ದೇವರು ಅವನಿಗೆ, “ನಿನಗೆ ಪ್ರಿಯನಾಗಿರುವ ನಿನ್ನ ಒಬ್ಬನೇ ಮಗನಾದ ಇಸಾಕನನ್ನು ಮೊರೀಯ ದೇಶಕ್ಕೆ ಕರೆದುಕೊಂಡು ಹೋಗು. ನಾನು ನಿನಗೆ ತಿಳಿಸುವ ಬೆಟ್ಟದ ಮೇಲೆ ಅವನನ್ನು ಯಜ್ಞವನ್ನಾಗಿ ಅರ್ಪಿಸು” ಎಂದು ಹೇಳಿದನು.
3 ಮುಂಜಾನೆ ಅಬ್ರಹಾಮನು ಎದ್ದು ಕತ್ತೆಗೆ ತಡಿ ಹಾಕಿಸಿದನು; ಇಸಾಕನನ್ನೂ ಅವನೊಂದಿಗೆ ಇಬ್ಬರು ಸೇವಕರನ್ನೂ ಕರೆದುಕೊಂಡನು; ಯಜ್ಞಕ್ಕಾಗಿ ಕಟ್ಟಿಗೆಯನ್ನು ತೆಗೆದುಕೊಂಡನು. ಬಳಿಕ ದೇವರು ಹೇಳಿದ್ದ ಸ್ಥಳಕ್ಕೆ ಅವರು ಹೊರಟರು. 4 ಅವರು ಮೂರು ದಿನಗಳವರೆಗೆ ಪ್ರಯಾಣ ಮಾಡಿದರು. ಅಬ್ರಹಾಮನು ದೃಷ್ಟಿಸಿ ನೋಡಿದಾಗ ತಾವು ಹೋಗಲಿದ್ದ ಸ್ಥಳವು ದೂರದಲ್ಲಿ ಅವನಿಗೆ ಕಾಣಿಸಿತು. 5 ಆಮೇಲೆ ಅಬ್ರಹಾಮನು ತನ್ನ ಸೇವಕರಿಗೆ, “ನೀವು ಇಲ್ಲೇ ಕತ್ತೆಯೊಂದಿಗಿರಿ; ನಾನೂ ನನ್ನ ಮಗನೂ ಆ ಸ್ಥಳಕ್ಕೆ ಹೋಗಿ ಆರಾಧಿಸುತ್ತೇವೆ. ಬಳಿಕ ನಾವು ಹಿಂತಿರುಗಿ ನಿಮ್ಮ ಬಳಿಗೆ ಬರುತ್ತೇವೆ” ಎಂದು ಹೇಳಿದನು.
6 ಅಬ್ರಹಾಮನು ಯಜ್ಞಕ್ಕಾಗಿ ಕಟ್ಟಿಗೆಯನ್ನು ತೆಗೆದು ತನ್ನ ಮಗನ ಭುಜದ ಮೇಲೆ ಹೊರಿಸಿದನು. ಅಬ್ರಹಾಮನು ವಿಶೇಷವಾದ ಕತ್ತಿಯನ್ನು ಮತ್ತು ಬೆಂಕಿಯನ್ನು ತೆಗೆದುಕೊಂಡನು. ಅವರಿಬ್ಬರೂ ಆರಾಧಿಸುವುದಕ್ಕಾಗಿ ಆ ಸ್ಥಳಕ್ಕೆ ಹೊರಟರು.
7 ಇಸಾಕನು ತನ್ನ ತಂದೆಯಾದ ಅಬ್ರಹಾಮನಿಗೆ, “ಅಪ್ಪಾ” ಎಂದು ಕರೆದನು.
ಅಬ್ರಹಾಮನು, “ಏನು ಮಗನೇ?” ಎಂದು ಉತ್ತರಿಸಿದನು.
ಇಸಾಕನು, “ಕಟ್ಟಿಗೆ ಮತ್ತು ಬೆಂಕಿ ನನಗೆ ಕಾಣಿಸುತ್ತಿವೆ. ಆದರೆ ಯಜ್ಞಕ್ಕೆ ಬೇಕಾದ ಕುರಿಮರಿ ಎಲ್ಲಿ?” ಎಂದು ಕೇಳಿದನು.
8 ಅಬ್ರಹಾಮನು, “ಮಗನೇ, ಯಜ್ಞಕ್ಕೆ ಬೇಕಾದ ಕುರಿಮರಿಯನ್ನು ದೇವರೇ ಒದಗಿಸುವನು” ಎಂದು ಹೇಳಿದನು.
ಹೀಗೆ ಅಬ್ರಹಾಮನು ಮತ್ತು ಅವನ ಮಗನು ಆ ಸ್ಥಳಕ್ಕೆ ಹೊರಟು 9 ದೇವರು ತಿಳಿಸಿದ್ದ ಸ್ಥಳಕ್ಕೆ ಬಂದರು. ಅಲ್ಲಿ ಅಬ್ರಹಾಮನು ಒಂದು ಯಜ್ಞವೇದಿಕೆಯನ್ನು ಕಟ್ಟಿ ಅದರ ಮೇಲೆ ಕಟ್ಟಿಗೆಯನ್ನು ಜೋಡಿಸಿದನು; ಆಮೇಲೆ ಅವನು ತನ್ನ ಮಗನಾದ ಇಸಾಕನ ಕೈಕಾಲುಗಳನ್ನು ಕಟ್ಟಿ ಯಜ್ಞವೇದಿಕೆಯ ಮೇಲಿದ್ದ ಕಟ್ಟಿಗೆಯ ಮೇಲೆ ಮಲಗಿಸಿದನು. 10 ಬಳಿಕ ಅವನು ತನ್ನ ಮಗನನ್ನು ವಧಿಸಲು ಕತ್ತಿಯನ್ನು ಮೇಲೆತ್ತಲು.
11 ಯೆಹೋವನ ದೂತನು ಪರಲೋಕದಿಂದ, “ಅಬ್ರಹಾಮನೇ, ಅಬ್ರಹಾಮನೇ!” ಎಂದು ಕರೆದನು.
ಅಬ್ರಹಾಮನು, “ಇಗೋ ಇದ್ದೇನೆ” ಎಂದು ಉತ್ತರಿಸಿದನು.
12 ಯೆಹೋವನ ದೂತನು, “ನಿನ್ನ ಮಗನನ್ನು ವಧಿಸಬೇಡ. ಅವನಿಗೆ ನೋವು ಮಾಡಬೇಡ. ನೀನು ನನಗೋಸ್ಕರವಾಗಿ ನಿನ್ನ ಒಬ್ಬನೇ ಮಗನನ್ನು ಸಮರ್ಪಿಸುವುದಕ್ಕೂ ಹಿಂಜರಿಯಲಿಲ್ಲ; ಆದ್ದರಿಂದ ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂದು ಈಗ ತೋರಿಬಂದಿದೆ” ಎಂದು ಹೇಳಿದನು.
13 ಅಬ್ರಹಾಮನು ಕಣ್ಣೆತ್ತಿ ನೋಡಿದಾಗ ಒಂದು ಟಗರನ್ನು ಕಂಡನು. ಆ ಟಗರಿನ ಕೊಂಬುಗಳು ಒಂದು ಪೊದೆಗೆ ಸಿಕ್ಕಿಕೊಂಡಿದ್ದವು. ಕೂಡಲೇ ಅವನು ಹೋಗಿ, ಆ ಟಗರನ್ನು ಎಳೆದುಕೊಂಡು ಬಂದು ದೇವರಿಗೆ ತನ್ನ ಮಗನ ಬದಲಾಗಿ ಯಜ್ಞವಾಗಿ ಅರ್ಪಿಸಿದನು. 14 ಅಲ್ಲದೆ ಆ ಸ್ಥಳಕ್ಕೆ “ಯೆಹೋವ ಯೀರೆ” ಎಂದು ಹೆಸರಿಟ್ಟನು. ಇಂದಿಗೂ ಜನರು, “ಯೆಹೋವನ ಬೆಟ್ಟದಲ್ಲಿ ಒದಗಿಸಲ್ಪಡುವುದು” ಎಂದು ಹೇಳುತ್ತಾರೆ.
ಇತರ ಅಪೊಸ್ತಲರು ಪೌಲನನ್ನು ಸ್ವೀಕರಿಸಿಕೊಂಡರು
2 ಹದಿನಾಲ್ಕು ವರ್ಷಗಳ ನಂತರ ಬಾರ್ನಬನ ಜೊತೆಯಲ್ಲಿ ತೀತನನ್ನು ಕರೆದುಕೊಂಡು ಮತ್ತೆ ಜೆರುಸಲೇಮಿಗೆ ಹೋದೆನು. 2 ನಾನು ಹೋಗಲೇಬೇಕೆಂದು ದೇವರು ನನಗೆ ತಿಳಿಸಿದ್ದರಿಂದ ವಿಶ್ವಾಸಿಗಳ ನಾಯಕರಾದ ಈ ಜನರ ಬಳಿಗೆ ಹೋದೆನು. ನಾವಷ್ಟೇ ಇದ್ದಾಗ, ಯೆಹೂದ್ಯರಲ್ಲದವರಿಗೆ ಸಾರುವ ಸುವಾರ್ತೆಯನ್ನು ಇವರಿಗೆ ತಿಳಿಸಿದೆನು. ನಾನು ಮೊದಲು ಮಾಡಿದ ಸೇವೆ ಮತ್ತು ಈಗ ಮಾಡುತ್ತಿರುವ ಸೇವೆ ವ್ಯರ್ಥವಾಗಬಾರದೆಂಬ ಉದ್ದೇಶದಿಂದ ಇವರಿಗೆ ಅರ್ಥವಾಗುವಂತೆ ನನ್ನ ಸೇವೆಯ ಬಗ್ಗೆ ತಿಳಿಸಿದೆನು.
3-4 ತೀತನು ನನ್ನೊಂದಿಗಿದ್ದನು. ಅವನು ಗ್ರೀಕನಾಗಿದ್ದನು. ಆದರೆ ಅವನು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಯಾರೂ ಬಲವಂತ ಮಾಡಲಿಲ್ಲ. ಈ ಸಮಸ್ಯೆಗಳ ಬಗ್ಗೆ ನಾವು ಮಾತಾಡಲೇಬೇಕಿತ್ತು. ಏಕೆಂದರೆ ಕೆಲವು ಸುಳ್ಳು ಸಹೋದರರು ಬಂದು ನಮ್ಮ ಸಭೆಯೊಳಗೆ ಸೇರಿಕೊಂಡಿದ್ದರು. ಯೇಸು ಕ್ರಿಸ್ತನಲ್ಲಿ ನಮಗಿರುವ ಸ್ವಾತಂತ್ರ್ಯದ ಬಗ್ಗೆ ರಹಸ್ಯವಾಗಿ ತಿಳಿದುಕೊಳ್ಳಲು ಅವರು ಬಂದಿದ್ದರು. 5 ಆದರೆ ಆ ಸುಳ್ಳುಸಹೋದರರು ಬಯಸಿದ ಯಾವುದಕ್ಕೂ ನಾವು ಒಂದು ಕ್ಷಣವಾದರೂ ಒಪ್ಪಿಗೆ ಕೊಡಲಿಲ್ಲ. ಸುವಾರ್ತೆಯ ಸತ್ಯವು ನಿಮ್ಮಲ್ಲಿ ಸ್ಥಿರವಾಗಿರಬೇಕೆಂಬುದೇ ನಮ್ಮ ಅಪೇಕ್ಷೆಯಾಗಿತ್ತು.
6 ನಾನು ಬೋಧಿಸುವ ಸುವಾರ್ತೆಗೆ ಅವರೇನೂ ಸೇರಿಸಲಿಲ್ಲ. (ಅವರು ಪ್ರಮುಖರಾಗಿದ್ದರೊ ಪ್ರಮುಖರಾಗಿರಲಿಲ್ಲವೊ ಅದು ನನಗೆ ಮುಖ್ಯವಲ್ಲ. ದೇವರಿಗೆ ಎಲ್ಲಾ ಜನರು ಒಂದೇ ಆಗಿದ್ದಾರೆ.) 7 ಆದರೆ ಪೇತ್ರನಂತೆ ನನಗೂ ದೇವರು ವಿಶೇಷವಾದ ಕೆಲಸವನ್ನು ಕೊಟ್ಟಿದ್ದಾನೆಂಬುದನ್ನು ಈ ನಾಯಕರು ತಿಳಿದುಕೊಂಡರು. ಯೆಹೂದ್ಯರಿಗೆ ಸುವಾರ್ತೆಯನ್ನು ತಿಳಿಸಬೇಕೆಂಬ ಕೆಲಸವನ್ನು ದೇವರು ಪೇತ್ರನಿಗೆ ಕೊಟ್ಟನು. ಆದರೆ ಯೆಹೂದ್ಯರಲ್ಲದವರಿಗೆ ಸುವಾರ್ತೆಯನ್ನು ತಿಳಿಸಬೇಕೆಂಬ ಕೆಲಸವನ್ನು ದೇವರು ನನಗೆ ಕೊಟ್ಟನು. 8 ಯೆಹೂದ್ಯರಿಗೆ ಅಪೊಸ್ತಲನಾಗಿ ಕೆಲಸ ಮಾಡಲು ದೇವರು ಪೇತ್ರನಿಗೆ ವಹಿಸಿಕೊಟ್ಟಂತೆಯೇ ಯೆಹೂದ್ಯರಲ್ಲದವರಿಗೆ ಅಪೊಸ್ತಲನಾಗಿ ಕೆಲಸ ಮಾಡಲು ನನಗೂ ವಹಿಸಿ ಕೊಟ್ಟನು. 9 ದೇವರು ನನಗೆ ಈ ವಿಶೇಷವಾದ ವರವನ್ನು ಕೊಟ್ಟಿದ್ದಾನೆಂಬುದನ್ನು ನಾಯಕರೆನಿಸಿಕೊಂಡಿದ್ದ ಯಾಕೋಬ, ಪೇತ್ರ, ಯೋಹಾನರು ಕಂಡುಕೊಂಡರು. ಆದ್ದರಿಂದ ಅವರು ಬಾರ್ನಬನನ್ನು ಮತ್ತು ನನ್ನನ್ನು ಸ್ವೀಕರಿಸಿಕೊಂಡರು. ಅವರು ನಮಗೆ, “ಪೌಲ ಮತ್ತು ಬಾರ್ನಬರೇ, ನೀವು ಯೆಹೂದ್ಯರಲ್ಲದವರ ಬಳಿಗೆ ಹೋಗಿರಿ. ನಾವು ಯೆಹೂದ್ಯರ ಬಳಿಗೆ ಹೋಗುತ್ತೇವೆ” ಎಂದು ತಿಳಿಸಿದರು. 10 ಬಡಜನರನ್ನು ಜ್ಞಾಪಕದಲ್ಲಿಟ್ಟುಕೊಂಡು ಅವರಿಗೆ ಸಹಾಯಮಾಡಬೇಕೆಂಬ ಒಂದೇ ಒಂದು ಸಂಗತಿಯನ್ನು ಅವರು ನಮಗೆ ತಿಳಿಸಿದರು. ನಾನೂ ಈ ಕಾರ್ಯವನ್ನು ಮಾಡಬೇಕೆಂದುಕೊಂಡಿದ್ದೆನು.
Kannada Holy Bible: Easy-to-Read Version. All rights reserved. © 1997 Bible League International