Revised Common Lectionary (Complementary)
ರಚನೆಗಾರ: ದಾವೀದ.
5 ಯೆಹೋವನೇ, ನನ್ನ ಮಾತುಗಳಿಗೆ ಕಿವಿಗೊಡು.
ನನ್ನ ಆಲೋಚನೆಗಳಿಗೆ ಗಮನಕೊಡು.
2 ನನ್ನ ರಾಜನೇ, ನನ್ನ ದೇವರೇ, ನಿನಗೇ ಮೊರೆಯಿಡುವೆನು.
ನನ್ನ ಪ್ರಾರ್ಥನೆಯನ್ನು ಆಲೈಸು.
3 ಯೆಹೋವನೇ, ಪ್ರತಿಮುಂಜಾನೆ ನಿನಗೆ ಕಾಣಿಕೆಗಳನ್ನು ಅರ್ಪಿಸಿ ಸಹಾಯಕ್ಕಾಗಿ ಎದುರುನೋಡುವೆನು;
ಪ್ರತಿಮುಂಜಾನೆ ನೀನು ನನ್ನ ಪ್ರಾರ್ಥನೆಗಳಿಗೆ ಕಿವಿಗೊಡುವೆ.
4 ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ.
ನಿನ್ನ ಸನ್ನಿಧಿಯಲ್ಲಿ ದುಷ್ಟರು ಇರಲಾರರು.
5 ನಿನ್ನನ್ನು ನಂಬದವರು ನಿನ್ನ ಬಳಿಗೆ ಬರಲಾರರು;
ದುಷ್ಟರನ್ನು ನೀನು ದ್ವೇಷಿಸುವೆ.
6 ಸುಳ್ಳಾಡುವವರನ್ನು ನೀನು ನಾಶಪಡಿಸುವೆ.
ಕೊಲೆಗಾರರನ್ನೂ ಮೋಸಗಾರರನ್ನೂ ಯೆಹೋವನು ದ್ವೇಷಿಸುವನು.
7 ನಾನಂತೂ ನಿನ್ನ ಮಹಾಕೃಪೆಯನ್ನು ಹೊಂದಿದವನಾಗಿ ನಿನ್ನ ಆಲಯಕ್ಕೆ ಬರುವೆನು,
ನಿನ್ನಲ್ಲಿ ಭಯಭಕ್ತಿಯುಳ್ಳವನಾಗಿ ನಿನ್ನ ಪವಿತ್ರ ಆಲಯದ ಕಡೆಗೆ ಅಡ್ಡಬೀಳುವೆನು.
8 ಯೆಹೋವನೇ, ವೈರಿಗಳು ನನ್ನನ್ನು ಗಮನಿಸುತ್ತಿರುವುದರಿಂದ
ನಿನ್ನ ನೀತಿಯ ಮಾರ್ಗವನ್ನು ನನಗೆ ತೋರಿಸಿ,
ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
9 ಅವರ ಮಾತುಗಳಲ್ಲಿ ಸತ್ಯವೆಂಬುದೇ ಇಲ್ಲ.
ಅವರ ಬಾಯಿಗಳು ಸವಿಮಾತುಗಳನ್ನಾಡಿದರೂ
ಅವರ ಹೃದಯಗಳು ನಾಶಕರವಾದ ಗುಂಡಿಯಾಗಿವೆ.
ಅವರ ಗಂಟಲು ತೆರೆದ ಸಮಾಧಿಗಳಂತಿವೆ.
10 ದೇವರೇ, ಅವರನ್ನು ದಂಡಿಸು!
ಅವರು ತಮ್ಮ ಬಲೆಗಳಿಗೇ ಸಿಕ್ಕಿಕೊಳ್ಳಲಿ.
ಅವರು ನಿನಗೆ ವಿರೋಧವಾಗಿ ತಿರುಗಿಬಿದ್ದಿದ್ದಾರೆ.
ಅವರ ಅನೇಕ ಅಪರಾಧಗಳ ನಿಮಿತ್ತ ಅವರನ್ನು ದಂಡಿಸು.
11 ದೇವರಲ್ಲಿ ಭರವಸವಿಟ್ಟಿರುವ ಜನರೆಲ್ಲರೂ ಸದಾಕಾಲ ಸಂತೋಷವಾಗಿರಲಿ.
ನಿನ್ನ ಹೆಸರನ್ನು ಪ್ರೀತಿಸುವ ಜನರನ್ನು ಕಾಪಾಡಿ ಅವರಿಗೆ ಶಕ್ತಿಯನ್ನು ದಯಪಾಲಿಸು.
12 ಯೆಹೋವನೇ, ನೀನು ನೀತಿವಂತರಿಗೆ ಒಳ್ಳೆಯದನ್ನೇ ಮಾಡುವೆ;
ನೀನು ಅವರನ್ನು ವಿಶಾಲವಾದ ಗುರಾಣಿಯಂತೆ ಸಂರಕ್ಷಿಸುವೆ.
ದೇವರ ಕರುಣೆಯು ಯೋನನನ್ನು ಕೋಪಗೊಳ್ಳುವಂತೆ ಮಾಡಿತು
4 ದೇವರು ಆ ನಗರವನ್ನು ಕಾಪಾಡಿದನೆಂದು ಯೋನನಿಗೆ ಸಂತೋಷವಾಗಲಿಲ್ಲ. ಯೋನನಿಗೆ ಸಿಟ್ಟು ಬಂದಿತು. 2 ಯೋನನು ಯೆಹೋವನಿಗೆ ದೂರು ಹೇಳುತ್ತಾ, “ಇದು ಹೀಗಾಗುತ್ತದೆಯೆಂದು ನನಗೆ ಗೊತ್ತಿತ್ತು. ನಾನು ನನ್ನ ದೇಶದಲ್ಲಿದ್ದೆ. ಇಲ್ಲಿಗೆ ಬರಲು ನನಗೆ ಹೇಳಿದವನು ನೀನೇ. ಈ ದುಷ್ಟಪಟ್ಟಣದ ಜನರನ್ನು ನೀನು ಕ್ಷಮಿಸುತ್ತೀ ಎಂದು ನನಗೆ ಆಗಲೇ ಗೊತ್ತಿತ್ತು. ಆದ್ದರಿಂದ ನಾನು ತಾರ್ಷೀಷಿಗೆ ಓಡಿಹೋಗಲು ನಿರ್ಧರಿಸಿದೆನು. ನೀನು ದಯಾಪರನಾದ, ಕೃಪಾಪೂರ್ಣನಾದ, ಕೋಪಗೊಳ್ಳುವುದರಲ್ಲಿ ನಿಧಾನವಾದ ಮತ್ತು ಮಹಾಕನಿಕರವುಳ್ಳ ದೇವರೆಂದು ನನಗೆ ಗೊತ್ತಿತ್ತು. ಆ ಜನರು ಪಾಪ ಮಾಡುವದನ್ನು ನಿಲ್ಲಿಸಿದರೆ, ನೀನು ನಿನ್ನ ಯೋಜನೆಯಂತೆ ಅವರನ್ನು ನಾಶಮಾಡುವುದಿಲ್ಲ ಎಂದು ನನಗೆ ಗೊತ್ತಿತ್ತು. 3 ಆದ್ದರಿಂದ ನಾನು ಹೇಳುವುದೇನೆಂದರೆ ನನ್ನ ದೇವರೇ ನೀನು ನನ್ನನ್ನು ಕೊಂದುಬಿಡು. ನಾನು ಬದುಕುವದಕ್ಕಿಂತ ಸಾಯುವುದೇ ಮೇಲು.”
4 ಆಗ ಯೆಹೋವನು ಅವನಿಗೆ, “ನಾನು ಆ ಜನರನ್ನು ನಾಶಮಾಡದೆ ಹೋದುದರಿಂದ ನೀನು ಸಿಟ್ಟುಗೊಳ್ಳುವದು ಸರಿಯೋ?” ಎಂದು ಕೇಳಿದನು.
5 ಇವೆಲ್ಲಾ ಯೋನನನ್ನು ಇನ್ನೂ ಸಿಟ್ಟುಗೊಳಿಸಿದ್ದವು. ಅವನು ನಗರದ ಹೊರಗೆ ಪೂರ್ವದ ಕಡೆಗೆ ಹೋಗಿ ತನಗೊಂದು ಮಂಟಪವನ್ನು ಕಟ್ಟಿ ಅದರ ನೆರಳಿನಲ್ಲಿ ಕುಳಿತುಕೊಂಡು ನಗರಕ್ಕೆ ಏನಾಗುವದು ಎಂಬದನ್ನು ಕಾಯುತ್ತಾ ಕುಳಿತನು.
ಸೋರೆ ಗಿಡ ಮತ್ತು ಹುಳ
6 ದೇವರಾದ ಯೆಹೋವನು ಒಂದು ಸೋರೆ ಗಿಡವನ್ನು ಯೋನನ ಬಳಿಯಲ್ಲಿಯೇ ಶೀಘ್ರದಲ್ಲಿ ಬೆಳೆಯ ಮಾಡಿದನು. ಆ ಸೋರೆ ಗಿಡವು ಆ ಜಾಗವನ್ನು ತಂಪು ಮಾಡಿದ್ದರಿಂದ ಯೋನನಿಗೆ ತುಂಬಾ ಹಿತವಾಯಿತು ಮತ್ತು ತುಂಬಾ ಸಂತೋಷವಾಯಿತು.
7 ಮರುದಿನ ಮುಂಜಾನೆ, ದೇವರು ಆ ಗಿಡವನ್ನು ತಿನ್ನಲು ಒಂದು ಹುಳವನ್ನು ಕಳುಹಿಸಿದನು. ಆ ಹುಳವು ಗಿಡವನ್ನು ತಿಂದ ನಿಮಿತ್ತ ಅದು ಬಾಡಿಹೋಗಿ ಸತ್ತಿತ್ತು.
8 ಸೂರ್ಯನು ಆಕಾಶದಲ್ಲಿ ಏರಿ ಬಂದಾಗ ದೇವರು ಪೂರ್ವದ ಬಿಸಿಗಾಳಿ ಬೀಸುವಂತೆ ಮಾಡಿದನು. ಬಿಸಿಲಿನ ತಾಪವು ಯೋನನ ತಲೆಯ ಮೇಲೆ ಹೆಚ್ಚಾಯಿತು. ಯೋನನಿಗೆ ಶಾಖ ತಡೆಯಲಾಗಲಿಲ್ಲ. ಬಹಳ ಬಲಹೀನನಾದನು. ನನ್ನನ್ನು ಸಾಯಿಸು ಎಂದು ಯೋನನು ದೇವರನ್ನು ಬೇಡುತ್ತಾ, “ದೇವರೇ, ನಾನು ಬದುಕುವದಕ್ಕಿಂತ ಸಾಯುವುದೇ ಲೇಸು” ಅಂದನು.
9 ಆದರೆ ದೇವರು ಯೋನನಿಗೆ ಹೇಳಿದ್ದೇನೆಂದರೆ, “ಆ ಸೋರೆ ಗಿಡವು ಸತ್ತುಹೋದುದಕ್ಕೆ ನೀನು ಕೋಪಗೊಳ್ಳುವುದು ಸರಿಯೋ?”
ಅದಕ್ಕುತ್ತರವಾಗಿ ಯೋನನು, “ಹೌದು! ನಾನು ಕೋಪಗೊಂಡದ್ದು ನಿಜ. ನಾನು ಸಾಯುವಷ್ಟು ಕೋಪಗೊಂಡಿದ್ದೇನೆ” ಅಂದನು.
10 ಆಗ ಯೆಹೋವನು, “ನೀನು ಆ ಸೋರೆ ಗಿಡಕ್ಕಾಗಿ ಏನೂ ಮಾಡಲಿಲ್ಲ. ಅದು ಬೆಳೆಯುವಂತೆ ನೀನು ಮಾಡಲಿಲ್ಲ. ಅದು ರಾತ್ರಿಯಲ್ಲಿ ಬೆಳೆಯಿತು. ಮರುದಿನ ಅದು ಸತ್ತಿತ್ತು. ಈಗ ನೀನು ಅದಕ್ಕಾಗಿ ದುಃಖಪಡುತ್ತಿರುವೆ. 11 ಒಂದು ಗಿಡಕ್ಕಾಗಿ ನೀನು ಇಷ್ಟೊಂದು ದುಃಖಗೊಂಡರೆ, ನಿನೆವೆಯಂತಹ ಇಷ್ಟು ದೊಡ್ಡ ನಗರಕ್ಕಾಗಿ ನನಗೂ ಖಂಡಿತವಾಗಿ ದುಃಖವಾಗುತ್ತದೆ. ಈ ನಗರದಲ್ಲಿ ಅನೇಕಾನೇಕ ಜನರಿದ್ದಾರೆ! ಅನೇಕ ಪ್ರಾಣಿಗಳಿವೆ. ಈ ನಗರದಲ್ಲಿರುವ ಒಂದು ಲಕ್ಷದ ಇಪ್ಪತ್ತು ಸಾವಿರ ಮಂದಿ ಜನರಿಗೆ ತಾವು ತಪ್ಪು ಮಾಡುತ್ತಿರುವುದಾಗಿ ತಿಳಿದಿರಲಿಲ್ಲ” ಅಂದನು.
ಫಿಲಿಪ್ಪನು ಇಥಿಯೋಪಿಯದವನಿಗೆ ನೀಡಿದ ಉಪದೇಶ
26 ಪ್ರಭುವಿನ ದೂತನೊಬ್ಬನು ಫಿಲಿಪ್ಪನಿಗೆ, “ನೀನು ಸಿದ್ಧನಾಗಿ ದಕ್ಷಿಣದ ಕಡೆಗೆ ಅಂದರೆ ಜೆರುಸಲೇಮಿನಿಂದ ಗಾಜಾಕ್ಕೆ ಹೋಗುವ ಮರಳುಗಾಡಿನ ಮಾರ್ಗಕ್ಕೆ ಹೋಗು” ಎಂದು ಹೇಳಿದನು.
27 ಆದ್ದರಿಂದ ಫಿಲಿಪ್ಪನು ಸಿದ್ಧನಾಗಿ ಹೊರಟನು. ಇಥಿಯೋಪಿಯಾದ ಒಬ್ಬನನ್ನು ಅವನು ದಾರಿಯಲ್ಲಿ ಕಂಡನು. ಈ ಮನುಷ್ಯನು ನಪುಂಸಕನಾಗಿದ್ದನು. ಇಥಿಯೋಪಿಯದ ರಾಣಿಯಾದ ಕಂದಾಕೆಯ ಆಸ್ಥಾನದಲ್ಲಿ ಇವನು ಮುಖ್ಯಾಧಿಕಾರಿಯಾಗಿದ್ದನು. ಹಣವನ್ನೆಲ್ಲ ನೋಡಿಕೊಳ್ಳುವ ಜವಾಬ್ದಾರಿ ಇವನದೇ ಆಗಿತ್ತು. ಈ ಮನುಷ್ಯನು ಆರಾಧನೆಗಾಗಿ ಜೆರುಸಲೇಮಿಗೆ ಹೋಗಿದ್ದನು. 28 ಈಗ ಅವನು ತನ್ನ ಮನೆಗೆ ಮರಳಿ ಹೋಗುತ್ತಿದ್ದನು. ಅವನು ತನ್ನ ರಥದಲ್ಲಿ ಕುಳಿತುಕೊಂಡು ಯೆಶಾಯನ ಗ್ರಂಥವನ್ನು ಓದುತ್ತಿದ್ದನು.
29 ಪವಿತ್ರಾತ್ಮನು ಫಿಲಿಪ್ಪನಿಗೆ, “ರಥದ ಬಳಿಗೆ ಹೋಗಿ ಅದರ ಸಮೀಪದಲ್ಲಿ ನಿಂತುಕೊ” ಎಂದು ಹೇಳಿದನು. 30 ಅಂತೆಯೇ ಫಿಲಿಪ್ಪನು ರಥದ ಬಳಿಗೆ ಹೋದನು. ಆ ಮನುಷ್ಯನು ಓದುತ್ತಿರುವುದು ಅವನಿಗೆ ಕೇಳಿಸಿತು. ಅವನು ಯೆಶಾಯನ ಪ್ರವಾದನಾ ಗ್ರಂಥವನ್ನು ಓದುತ್ತಿದ್ದನು. ಫಿಲಿಪ್ಪನು ಅವನಿಗೆ, “ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೋ?” ಎಂದು ಕೇಳಿದನು.
31 ಆ ಅಧಿಕಾರಿಯು “ನಾನು ಹೇಗೆ ಅರ್ಥಮಾಡಿಕೊಳ್ಳಲಿ? ಬೇರೆ ಯಾರಾದರೂ ನನಗೆ ಅದನ್ನು ವಿವರಿಸಬೇಕು!” ಎಂದು ಉತ್ತರಕೊಟ್ಟನು. ಬಳಿಕ, ರಥವನ್ನು ಹತ್ತಿ ತನ್ನೊಂದಿಗೆ ಕುಳಿತುಕೊಳ್ಳುವಂತೆ ಅವನು ಫಿಲಿಪ್ಪನನ್ನು ಆಹ್ವಾನಿಸಿದನು. 32 ಅವನು ಓದುತ್ತಿದ್ದ ಪವಿತ್ರ ಗ್ರಂಥದ ಭಾಗವು ಇಂತಿದೆ:
“ವಧ್ಯಸ್ಥಾನಕ್ಕೆ ಒಯ್ದ ಕುರಿಯಂತೆ ಆತನಿದ್ದನು.
ಉಣ್ಣೆ ಕತ್ತರಿಸುವವನ ಮುಂದೆ ಮೌನವಾಗಿರುವ ಕುರಿಯಂತೆ ಆತನಿದ್ದನು.
ಆತನು ಬಾಯಿ ತೆರೆಯಲಿಲ್ಲ.
33 ಆತನಿಗೆ ಅವಮಾನ ಮಾಡಿದರು. ಆತನಿಗೆ ನ್ಯಾಯವು ದೊರೆಯಲಿಲ್ಲ.
ಆತನ ಜೀವವನ್ನು ಭೂಮಿಯ ಮೇಲಿನಿಂದ ತೆಗೆದುಬಿಟ್ಟರಲ್ಲಾ!
ಆತನ ಸಂತತಿಯವರ ಬಗ್ಗೆ ಯಾರು ಮಾತಾಡಬಲ್ಲರು?”(A)
34 ಅವನು ಫಿಲಿಪ್ಪನಿಗೆ, “ದಯವಿಟ್ಟು ನನಗೆ ಹೇಳು, ಯಾವ ಪ್ರವಾದಿಯ ಬಗ್ಗೆ ಇಲ್ಲಿ ಹೇಳುತ್ತಿದ್ದಾನೆ? ಅವನು ತನ್ನ ಬಗ್ಗೆ ಹೇಳುತ್ತಿದ್ದಾನೋ ಅಥವಾ ಬೇರೊಬ್ಬನ ಬಗ್ಗೆ ಹೇಳುತ್ತಿದ್ದಾನೋ?” ಎಂದು ಕೇಳಿದನು. 35 ಫಿಲಿಪ್ಪನು ಪವಿತ್ರ ಗ್ರಂಥದ ಈ ಭಾಗದಿಂದಲೇ ಆರಂಭಿಸಿ ಯೇಸುವಿನ ವಿಷಯವಾದ ಸುವಾರ್ತೆಯನ್ನು ಅವನಿಗೆ ತಿಳಿಸಿದನು.
36 ಅವರು ಪ್ರಯಾಣ ಮಾಡುತ್ತಾ ನೀರಿದ್ದ ಒಂದು ಸ್ಥಳಕ್ಕೆ ಬಂದಾಗ ಅಧಿಕಾರಿಯು, “ಇಗೋ! ಇಲ್ಲಿ ನೀರಿದೆ! ನಾನು ದೀಕ್ಷಾಸ್ನಾನ ತೆಗೆದುಕೊಳ್ಳಲು ಏನಾದರೂ ಅಡ್ಡಿಯಿದೆಯೇ?” ಎಂದು ಫಿಲಿಪ್ಪನನ್ನು ಕೇಳಿದನು. 37 [a] 38 ಬಳಿಕ ಅವನು ರಥವನ್ನು ನಿಲ್ಲಿಸಬೇಕೆಂದು ಆಜ್ಞಾಪಿಸಿದನು. ಅವರಿಬ್ಬರೂ ನೀರಿನೊಳಗೆ ಇಳಿದುಹೋದರು. ಫಿಲಿಪ್ಪನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು. 39 ಅವರು ನೀರಿನಿಂದ ಮೇಲಕ್ಕೆ ಬಂದಾಗ ಪ್ರಭುವಿನ ಆತ್ಮನಿಂದ ಫಿಲಿಪ್ಪನು ಎತ್ತಲ್ಪಟ್ಟನು. ಅವನು ಫಿಲಿಪ್ಪನನ್ನು ಮತ್ತೆಂದೂ ನೋಡಲಿಲ್ಲ. ಅವನು ಬಹಳ ಸಂತೋಷದಿಂದ ತನ್ನ ಪ್ರಯಾಣವನ್ನು ಮುಂದುವರಿಸಿದನು. 40 ಆದರೆ ಫಿಲಿಪ್ಪನು ಅಜೋತ್ ಎಂಬ ಪಟ್ಟಣದಲ್ಲಿ ಕಾಣಿಸಿಕೊಂಡು ಸೆಜರೇಯ ಎಂಬ ಪಟ್ಟಣಕ್ಕೆ ಹೋದನು. ಅಲ್ಲಿಗೆ ಹೋಗುವಾಗ ದಾರಿಯಲ್ಲಿ ಸಿಕ್ಕಿದ ಎಲ್ಲಾ ಊರುಗಳಲ್ಲಿಯೂ ಸುವಾರ್ತೆಯನ್ನು ಸಾರಿದನು.
Kannada Holy Bible: Easy-to-Read Version. All rights reserved. © 1997 Bible League International