Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 30

ದೇವಾಲಯದ ಪ್ರತಿಷ್ಠೆಗಾಗಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.

30 ಯೆಹೋವನೇ, ನನ್ನನ್ನು ಇಕ್ಕಟ್ಟುಗಳಿಂದ ಮೇಲೆತ್ತಿದವನು ನೀನೇ;
    ಶತ್ರುಗಳಿಗೆ ಸೋತುಹೋಗಿ ಅವರ ಹಾಸ್ಯಕ್ಕೆ ಗುರಿಯಾಗದಂತೆ ಮಾಡಿದವನು ನೀನೇ;
    ಆದ್ದರಿಂದ ನಿನ್ನನ್ನು ಕೊಂಡಾಡುವೆನು.
ನನ್ನ ದೇವರಾದ ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದಾಗ
    ನೀನು ನನ್ನನ್ನು ಗುಣಪಡಿಸಿದೆ.
ಯೆಹೋವನೇ, ನೀನು ನನ್ನನ್ನು ಸಾವಿನಿಂದ ಬದುಕಿಸಿದೆ;
    ಪಾತಾಳಕ್ಕೆ ಇಳಿದುಹೋಗದಂತೆ ನನ್ನನ್ನು ಕಾಪಾಡಿದೆ.[a]

ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ!
    ಆತನ ಪರಿಶುದ್ಧ ಹೆಸರನ್ನು[b] ಕೊಂಡಾಡಿರಿ.
ಆತನ ಕೋಪವು ಕ್ಷಣಮಾತ್ರವಿರುವುದು.
    ಆತನ ಪ್ರೀತಿಯಾದರೋ ಶಾಶ್ವತವಾದದ್ದು.
ನಾನು ಸಂಜೆಯಲ್ಲಿ ದುಃಖದಿಂದ ಮಲಗಿಕೊಂಡರೂ
    ಮುಂಜಾನೆ ಹರ್ಷದಿಂದ ಎಚ್ಚರಗೊಳ್ಳುವೆನು.

ನಾನು ಸುರಕ್ಷಿತವಾಗಿದ್ದಾಗ
    ನನಗೆ ಕೇಡೇ ಇಲ್ಲವೆಂದುಕೊಂಡೆನು.
ಯೆಹೋವನೇ, ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದಾಗ
    ನನ್ನನ್ನು ಯಾವುದೂ ಸೋಲಿಸಲಾರದು ಎಂದುಕೊಂಡೆನು.
ಆದರೆ ನೀನು ನನಗೆ ವಿಮುಖನಾದಾಗ
    ಭಯದಿಂದ ನಡುಗತೊಡಗಿದೆ.
ಯೆಹೋವನೇ, ನಾನು ನಿನಗೆ ಅಭಿಮುಖನಾಗಿ ಪ್ರಾರ್ಥಿಸಿದೆ;
    ಕರುಣೆತೋರು ಎಂದು ನಿನ್ನನ್ನು ಕೇಳಿಕೊಂಡೆ.
“ದೇವರೇ, ನಾನು ಸತ್ತು ಸಮಾಧಿಯೊಳಗೆ ಹೋದರೆ,
    ಅದರಿಂದ ಒಳ್ಳೆಯದೇನಾದೀತು?
ಸತ್ತವರು ಕೇವಲ ಮಣ್ಣಿನಲ್ಲಿ ಬಿದ್ದಿರುವರು!
    ಅವರು ನಿನ್ನನ್ನು ಸ್ತುತಿಸುವುದಿಲ್ಲ!
    ಶಾಶ್ವತವಾದ ನಿನ್ನ ನಂಬಿಗಸ್ತಿಕೆಯ ಕುರಿತು ಅವರು ಹೇಳುವುದಿಲ್ಲ.
10 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆತೋರು!
    ಯೆಹೋವನೇ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡೆನು.

11 ಆಗ ನೀನು ನನಗೆ ಸಹಾಯಮಾಡಿ ನನ್ನ ಗೋಳಾಟವನ್ನು
    ಸಂತೋಷದ ನರ್ತನವನ್ನಾಗಿ ಮಾರ್ಪಡಿಸಿದೆ.
ನನ್ನ ಶೋಕವಸ್ತ್ರಗಳನ್ನು ತೆಗೆದುಹಾಕಿ
    ಹರ್ಷವಸ್ತ್ರಗಳನ್ನು ಹೊದಿಸಿದೆ.
12 ನಾನು ಮೌನವಾಗಿರದೆ ಸದಾಕಾಲ ನಿನ್ನನ್ನು ಸ್ತುತಿಸುವೆನು.
    ನನ್ನ ದೇವರಾದ ಯೆಹೋವನೇ, ನಿನ್ನನ್ನು ಸದಾಕಾಲ ಸ್ತುತಿಸುವೆನು.

2 ಸಮುವೇಲನು 14:12-24

12 ಆ ಸ್ತ್ರೀಯು, “ರಾಜನಾದ ನನ್ನ ಒಡಯನೇ, ದಯವಿಟ್ಟು ನಾನು ನಿನಗೆ ಕೆಲವು ಮಾತುಗಳನ್ನು ಹೇಳಲು ಬಿಡು” ಎಂದಳು.

“ಹೇಳು” ಎಂದು ರಾಜನು ಹೇಳಿದನು.

13 ಆಗ ಆ ಸ್ತ್ರೀಯು, “ದೇವರ ಜನರ ವಿರುದ್ಧವಾಗಿ ನೀನು ಈ ಕಾರ್ಯಗಳನ್ನು ಮಾಡಲು ಯೋಚಿಸಿರುವುದಾದರೂ ಏಕೆ? ಹೌದು, ನೀನು ಕೊಟ್ಟ ತೀರ್ಪಿನ ಮೂಲಕ ನೀನು ನನ್ನನ್ನು ತಪ್ಪಿತಸ್ಥನೆಂದು ತೋರಿಸಿ ಕೊಟ್ಟಿರುವೆ. ಏಕೆಂದರೆ ನೀನು ಬಲಾತ್ಕಾರದಿಂದ ಮನೆ ಬಿಡಿಸಿದ ಮಗನನ್ನು ಮನೆಗೆ ಕರೆದು ತಂದಿಲ್ಲ. 14 ನಾವೆಲ್ಲ ಎಂದಾದರೂ ಒಂದು ದಿನ ಸಾಯುತ್ತೇವೆ ಎನ್ನುವುದು ನಿಜ. ನಾವೆಲ್ಲ ನೆಲದ ಮೇಲೆ ಚೆಲ್ಲಿದ ನೀರಿನಂತಿದ್ದೇವೆ. ಈ ನೀರನ್ನು ನೆಲದಿಂದ ಮತ್ತೆ ಒಟ್ಟುಗೂಡಿಸುವುದು ಯಾವ ವ್ಯಕ್ತಿಯಿಂದಲೂ ಸಾಧ್ಯವಿಲ್ಲ. ಆದರೆ ಜೀವವನ್ನು ತೆಗೆದುಬಿಡಲು ದೇವರು ಇಚ್ಛಿಸುವುದಿಲ್ಲ. ಬಲಾತ್ಕಾರವಾಗಿ ಹೊರಗೆ ನೂಕಲ್ಪಟ್ಟವನು ತಿರುಗಿ ತನ್ನ ಬಳಿಗೆ ಬರುವ ಹಾಗೆ ಆತನದೇ ಆದ ಉಪಾಯವಿದೆ. 15 ರಾಜನಾದ ನನ್ನ ಒಡೆಯನೇ, ನಾನು ಈ ಮಾತುಗಳನ್ನು ನಿನಗೆ ಹೇಳುವುದಕ್ಕೆಂದೇ ಬಂದೆನು. ಏಕೆಂದರೆ ಜನರು ನನ್ನನ್ನು ಹೆದರಿಸಿದರು. ನಾನು ನನ್ನೊಳಗೆ ಹೀಗೆಂದುಕೊಂಡೆನು. ‘ನಾನು ರಾಜನೊಂದಿಗೆ ಮಾತಾಡುತ್ತೇನೆ. ಬಹುಶಃ ರಾಜನು ನನ್ನ ಮಾತುಗಳನ್ನು ಕೇಳಿ ಸಹಾಯ ಮಾಡಬಹುದು. 16 ರಾಜನು ನನ್ನನ್ನೂ ನನ್ನ ಮಗನನ್ನೂ ಕೊಲ್ಲಲು ಇಚ್ಛಿಸುವ ವ್ಯಕ್ತಿಯಿಂದ ನಮ್ಮಿಬ್ಬರನ್ನೂ ರಕ್ಷಿಸಬಹುದು; ದೇವರು ನಮಗೆ ಕೊಟ್ಟಿರುವ ಸ್ವಾಸ್ತ್ಯವನ್ನು ನಮ್ಮಿಂದ ಕಸಿದುಕೊಳ್ಳದಂತೆ ಕಾಪಾಡಬಹುದು.’ 17 ರಾಜನಾದ ನನ್ನ ಒಡೆಯನ ಮಾತುಗಳು ನನಗೆ ವಿಶ್ರಾಂತಿಯನ್ನು ಕೊಡುತ್ತವೆ ಎಂದು ನನಗೆ ತಿಳಿದಿರುವುದರಿಂದ ನಿನ್ನ ಬಳಿಗೆ ಬಂದಿರುವೆನು. ಏಕೆಂದರೆ ನೀನು ದೇವದೂತನಂತಿರುವೆ. ಯಾವುದು ಒಳ್ಳೆಯದು, ಯಾವುದು ಕೆಟ್ಟದ್ದು ಎಂಬುದು ನಿನಗೆ ತಿಳಿದಿದೆ. ನಿನ್ನ ದೇವರಾದ ಯೆಹೋವನು ನಿನ್ನೊಂದಿಗಿರುವನು” ಎಂದು ಹೇಳಿದಳು.

18 ರಾಜನಾದ ದಾವೀದನು ಆ ಸ್ತ್ರೀಗೆ, “ನಾನು ಕೇಳುವ ಪ್ರಶ್ನೆಗೆ ನೀನು ಉತ್ತರವನ್ನು ಹೇಳಲೇಬೇಕು” ಎಂದು ಉತ್ತರಿಸಿದನು.

ಆ ಸ್ತ್ರೀಯು, “ರಾಜನಾದ ನನ್ನ ಒಡಯನೇ, ದಯವಿಟ್ಟು ನಿನ್ನ ಪ್ರಶ್ನೆಯನ್ನು ಕೇಳು” ಎಂದಳು.

19 ರಾಜನು, “ಈ ವಿಚಾರಗಳನ್ನೆಲ್ಲ ಹೇಳಲು ಯೋವಾಬನು ನಿನಗೆ ತಿಳಿಸಿದನಲ್ಲವೇ?” ಎಂದನು.

ಆ ಸ್ತ್ರೀಯು, “ರಾಜನಾದ ನನ್ನ ಒಡಯನೇ, ನಿಮ್ಮ ಆಣೆಯಾಗಿಯೂ, ನೀವು ಹೇಳಿದ್ದು ಸರಿ! ನಿಮ್ಮ ಸೇವಕನಾದ ಯೋವಾಬನು ಈ ವಿಷಯಗಳನ್ನು ಹೇಳಲು ನನಗೆ ತಿಳಿಸಿದನು. 20 ಈ ವಿಷಯಗಳ ಬಗ್ಗೆ ನಿಮ್ಮ ದೃಷ್ಟಿಯು ಬದಲಾಗಲೆಂಬುದಕ್ಕಾಗಿ ಯೋವಾಬನು ಹೀಗೆ ಮಾಡಿದನು. ನನ್ನ ಒಡೆಯನೇ, ನೀನು ದೇವದೂತನಂತೆ ಬುದ್ಧಿವಂತನಾಗಿರುವೆ. ಈ ಲೋಕದಲ್ಲಿ ನಡೆಯುತ್ತಿರುವುದೆಲ್ಲವನ್ನೂ ನೀನು ತಿಳಿದಿರುವೆ” ಎಂದಳು.

ಅಬ್ಷಾಲೋಮನು ಜೆರುಸಲೇಮಿಗೆ ಹಿಂದಿರುಗಿದ್ದು

21 ರಾಜನು ಯೋವಾಬನಿಗೆ, “ನೀನು ಕೇಳಿಕೊಂಡದ್ದನ್ನು ಅನುಗ್ರಹಿಸಿದ್ದೇನೆ. ಈಗ ಯುವಕನಾದ ಅಬ್ಷಾಲೋಮನನ್ನು ಹಿಂದಕ್ಕೆ ಕರೆದುಕೊಂಡು ಬಾ” ಎಂದು ಹೇಳಿದನು.

22 ಯೋವಾಬನು ಅರಸನಾದ ದಾವೀದನಿಗೆ ಸಾಷ್ಟಾಂಗನಮಸ್ಕಾರಮಾಡಿ, “ನಾನು ಕೇಳಿಕೊಂಡದ್ದನ್ನು ನೀನು ನೆರವೇರಿಸಿದ್ದರಿಂದ, ನೀನು ನನ್ನ ವಿಷಯದಲ್ಲಿ ಸಂತೋಷದಿಂದಿರುವೆ ಎಂಬುದು ಇಂದು ನನಗೆ ಗೊತ್ತಾಯಿತು” ಎಂದನು.

23 ನಂತರ ಯೋವಾಬನು ಮೇಲೆದ್ದು ಗೆಷೂರಿಗೆ ಹೋಗಿ ಅಬ್ಷಾಲೋಮನನ್ನು ಜೆರುಸಲೇಮಿಗೆ ಕರೆದುತಂದನು. 24 ಆದರೆ ರಾಜನಾದ ದಾವೀದನು, “ಅಬ್ಷಾಲೋಮನು ತನ್ನ ಸ್ವಂತ ಮನೆಗೆ ಹಿಂದಿರುಗಿ ಹೋಗಲಿ. ಅವನು ನನ್ನನ್ನು ನೋಡಲು ಬರುವುದು ಬೇಡ” ಎಂದನು. ಆದ್ದರಿಂದ ಅಬ್ಷಾಲೋಮನು ತನ್ನ ಸ್ವಂತ ಮನೆಗೆ ಹಿಂದಿರುಗಿಹೋದನು. ಅಬ್ಷಾಲೋಮನು ರಾಜನನ್ನು ನೋಡಲು ಹೋಗಲಿಲ್ಲ.

ಅಪೊಸ್ತಲರ ಕಾರ್ಯಗಳು 26:1-11

ರಾಜ ಅಗ್ರಿಪ್ಪನ ಮುಂದೆ ಪೌಲನು

26 ಅಗ್ರಿಪ್ಪನು ಪೌಲನಿಗೆ, “ಈಗ ನೀನು ನಿನ್ನ ಪರವಾಗಿ ಮಾತಾಡಬಹುದು” ಎಂದು ಹೇಳಿದನು. ಆಗ ಪೌಲನು ತನ್ನ ಕೈಯೆತ್ತಿ ಮಾತಾಡಲಾರಂಭಿಸಿ ಹೀಗೆಂದನು: “ರಾಜನಾದ ಅಗ್ರಿಪ್ಪನೇ, ಯೆಹೂದ್ಯರು ನನ್ನ ಮೇಲೆ ಹೊರಿಸುತ್ತಿರುವ ಆಪಾದನೆಗಳಿಗೆಲ್ಲಾ ನಾನು ಉತ್ತರಕೊಡುವೆನು. ಇಂದು ನಿನ್ನ ಮುಂದೆ ನಿಂತುಕೊಂಡು ಪ್ರತಿವಾದ ಮಾಡುವ ಅವಕಾಶ ದೊರೆತಿರುವುದು ನನ್ನ ಭಾಗ್ಯವೆಂದೇ ಎಣಿಸುತ್ತೇನೆ. ನಾನು ನಿನ್ನೊಂದಿಗೆ ಮಾತಾಡಲು ಬಹು ಸಂತೋಷಪಡುತ್ತೇನೆ. ಯಾಕೆಂದರೆ, ಯೆಹೂದ್ಯರ ಎಲ್ಲಾ ಸಂಪ್ರದಾಯಗಳ ಬಗ್ಗೆ ಮತ್ತು ಯೆಹೂದ್ಯರು ವಾದಿಸುತ್ತಿರುವ ಸಂಗತಿಗಳ ಬಗ್ಗೆ ನಿನಗೆ ಚೆನ್ನಾಗಿ ಗೊತ್ತಿದೆ. ಆದ್ದರಿಂದ ದಯವಿಟ್ಟು ನನ್ನ ಮಾತುಗಳನ್ನು ತಾಳ್ಮೆಯಿಂದ ಆಲಿಸು.

“ನನ್ನ ಇಡೀ ಜೀವಮಾನದ ಬಗ್ಗೆ ಎಲ್ಲಾ ಯೆಹೂದ್ಯರಿಗೆ ಗೊತ್ತಿದೆ. ನಾನು ಆರಂಭದಿಂದ ನನ್ನ ಸ್ವದೇಶದಲ್ಲಿಯೂ ಅನಂತರ ಜೆರುಸಲೇಮಿನಲ್ಲಿಯೂ ಜೀವಿಸಿದ ರೀತಿಯನ್ನು ಅವರು ಬಲ್ಲರು. ಈ ಯೆಹೂದ್ಯರು ಬಹುಕಾಲದಿಂದಲೂ ನನ್ನನ್ನು ತಿಳಿದಿದ್ದಾರೆ. ನೀನು ಅವರನ್ನು ಕೇಳುವುದಾದರೆ, ನಾನು ಒಳ್ಳೆಯ ಫರಿಸಾಯನಾಗಿದ್ದೆನೆಂದು ಅವರು ನಿನಗೆ ಹೇಳಬಲ್ಲರು. ಯೆಹೂದ್ಯರ ಇತರ ಯಾವುದೇ ಪಂಗಡಗಿಳಿಗಿಂತಲೂ ಹೆಚ್ಚು ಎಚ್ಚರಿಕೆಯಿಂದ ಫರಿಸಾಯರು ಯೆಹೂದ್ಯ ಧರ್ಮದ ಕಟ್ಟೆಳೆಗಳಿಗೆ ವಿಧೇಯರಾಗುತ್ತಾರೆ. ದೇವರು ನಮ್ಮ ಪಿತೃಗಳಿಗೆ ಮಾಡಿದ ವಾಗ್ದಾನವನ್ನು ನಾನು ನಿರೀಕ್ಷಿಸಿಕೊಂಡಿರುವುದರಿಂದಲೇ ಈಗ ವಿಚಾರಣೆಗೆ ಗುರಿಯಾಗಿದ್ದೇನೆ. ಈ ವಾಗ್ದಾನವು ಖಂಡಿತವಾಗಿ ನೆರವೇರುತ್ತದೆ ಎಂದು ಹನ್ನೆರಡು ಕುಲಗಳ ನಮ್ಮ ಜನರು ನಿರೀಕ್ಷಿಸಿಕೊಂಡಿದ್ದಾರೆ. ಯೆಹೂದ್ಯರು ಹಗಲಿರುಳು ದೇವರ ಸೇವೆ ಮಾಡುತ್ತಿರುವುದು ಈ ನಿರೀಕ್ಷೆಯಿಂದಲೇ. ನಾನು ಸಹ ಇದೇ ನಿರೀಕ್ಷೆಯನ್ನು ಹೊಂದಿರುವುದರಿಂದ ಇವರು ನನ್ನ ಮೇಲೆ ಆಪಾದನೆಗಳನ್ನು ಹೊರಿಸಿದ್ದಾರೆ! ಸತ್ತವರನ್ನು ದೇವರು ಜೀವಂತವಾಗಿ ಎಬ್ಬಿಸುತ್ತಾನೆ ಎಂಬುದು ನಂಬತಕ್ಕದ್ದಲ್ಲವೆಂದು ನೀವು ಭಾವಿಸಿಕೊಂಡಿರುವುದೇಕೆ?

“ನಾನು ಫರಿಸಾಯನಾಗಿದ್ದಾಗ ನಜರೇತಿನ ಯೇಸುವಿನ ಹೆಸರಿಗೆ ವಿರೋಧವಾಗಿ ಅನೇಕ ಕಾರ್ಯಗಳನ್ನು ಮಾಡಬೇಕೆಂದು ಆಲೋಚಿಸಿಕೊಂಡೆನು. 10 ಜೆರುಸಲೇಮಿನಲ್ಲಿ ವಿಶ್ವಾಸಿಗಳ ವಿರೋಧವಾಗಿ ಅನೇಕ ಕಾರ್ಯಗಳನ್ನು ಮಾಡಿದೆ. ಈ ವಿಶ್ವಾಸಿಗಳಲ್ಲಿ ಅನೇಕರನ್ನು ಸೆರೆಮನೆಗೆ ಹಾಕಲು ಮಹಾಯಾಜಕರು ನನಗೆ ಅಧಿಕಾರವನ್ನು ಕೊಟ್ಟರು. ಯೇಸುವಿನ ಶಿಷ್ಯರನ್ನು ಕೊಂದಾಗ ಅದಕ್ಕೆ ನಾನೂ ನನ್ನ ಸಮ್ಮತಿಯನ್ನು ಸೂಚಿಸಿದೆ. 11 ಪ್ರತಿಯೊಂದು ಸಭಾಮಂದಿರದಲ್ಲಿಯೂ ನಾನು ಅವರನ್ನು ದಂಡಿಸಿದೆನು. ಯೇಸುವಿನ ವಿರುದ್ಧ ದೂಷಣೆಯ ಮಾತುಗಳನ್ನು ಅವರ ಬಾಯಿಂದ ಹೊರಡಿಸಲು ನಾನು ಪ್ರಯತ್ನಿಸಿದೆನು. ಆ ವಿಶ್ವಾಸಿಗಳ ಮೇಲೆ ಬಹುಕೋಪವುಳ್ಳವನಾಗಿದ್ದು ಅವರನ್ನು ಹುಡುಕಿಹುಡುಕಿ ಹಿಂಸಿಸುವುದಕ್ಕಾಗಿ ವಿದೇಶದ ಪಟ್ಟಣಗಳಿಗೂ ಹೋದೆನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International