Revised Common Lectionary (Complementary)
96 ಯೆಹೋವನ ನೂತನ ಕಾರ್ಯಗಳ ಕುರಿತಾಗಿ ಹೊಸ ಹಾಡನ್ನು ಹಾಡಿರಿ!
ಭೂಲೋಕವೆಲ್ಲಾ ಯೆಹೋವನನ್ನು ಹಾಡಿಕೊಂಡಾಡಲಿ.
2 ಯೆಹೋವನಿಗೆ ಹಾಡಿರಿ! ಆತನ ಹೆಸರನ್ನು ಸ್ತುತಿಸಿರಿ!
ಶುಭವಾರ್ತೆಯನ್ನು ಹೇಳಿರಿ! ಆತನ ರಕ್ಷಣೆಯನ್ನು ಪ್ರತಿದಿನವೂ ಸಾರಿ ಹೇಳಿರಿ!
3 ಆತನ ಮಹಿಮೆಯನ್ನು ಜನಾಂಗಗಳಿಗೆ ಪ್ರಕಟಿಸಿರಿ.
ಆತನ ಅಮೋಘ ಕಾರ್ಯಗಳ ಕುರಿತು ಸಾರಿ ಹೇಳಿರಿ.
4 ಯೆಹೋವನು ದೊಡ್ಡವನೂ ಸ್ತುತಿಗೆ ಯೋಗ್ಯನೂ ಆಗಿದ್ದಾನೆ.
ಬೇರೆಲ್ಲ ದೇವರುಗಳಿಗಿಂತ ಆತನೇ ಭಯಂಕರನು.
5 ಅನ್ಯಜನಾಂಗಗಳ ದೇವರುಗಳೆಲ್ಲಾ ಕೇವಲ ಪ್ರತಿಮೆಗಳಾಗಿವೆ.
ನಮ್ಮ ಯೆಹೋವನಾದರೋ ಆಕಾಶಮಂಡಲವನ್ನು ಸೃಷ್ಟಿಸಿದಾತನು.
6 ಆತನ ಎದುರಿನಲ್ಲಿ ಮಹಿಮೆಯೂ ವೈಭವವೂ ಕಂಗೊಳಿಸುತ್ತಿವೆ.
ಆತನ ಪವಿತ್ರಾಲಯದಲ್ಲಿ ಶಕ್ತಿಯೂ ಸೌಂದರ್ಯವೂ ತುಂಬಿಕೊಂಡಿವೆ.
7 ಭೂಜನಾಂಗಗಳೇ, ಸ್ತುತಿಗೀತೆಗಳನ್ನು ಹಾಡುತ್ತಾ
ಯೆಹೋವನನ್ನು ಮಹಿಮೆಪಡಿಸಿರಿ.
8 ಯೆಹೋವನ ಹೆಸರನ್ನು ಸ್ತುತಿಸಿರಿ.
ನಿಮ್ಮ ಕಾಣಿಕೆಗಳನ್ನು ತೆಗೆದುಕೊಂಡು ದೇವಾಲಯಕ್ಕೆ ಹೋಗಿರಿ.
9 ಯೆಹೋವನನ್ನು ಆತನ ಸುಂದರವಾದ ಆಲಯದಲ್ಲಿ ಆರಾಧಿಸಿರಿ.
ಭೂನಿವಾಸಿಗಳೆಲ್ಲರೇ, ಆತನನ್ನೇ ಆರಾಧಿಸಿರಿ.
31 “ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಏನಾದರೂ ಕೆಟ್ಟದ್ದನ್ನು ಮಾಡಿದರೆ, ಅವನನ್ನು ಈ ಯಜ್ಞವೇದಿಕೆಯ ಬಳಿಗೆ ಕರೆದು ತರುತ್ತಾರೆ. ಆ ವ್ಯಕ್ತಿಯು ತಪ್ಪಿತಸ್ಥನಲ್ಲದಿದ್ದರೆ, ಅವನು ಬಂದು ತಾನು ನಿರಪರಾಧಿಯೆಂದು ಪ್ರಮಾಣ ಮಾಡುತ್ತಾನೆ. 32 ಪರಲೋಕದಲ್ಲಿರುವ ನೀನು ಅದನ್ನು ಕೇಳಿ, ಆ ವ್ಯಕ್ತಿಗೆ ತೀರ್ಪುನೀಡು. ಆ ವ್ಯಕ್ತಿಯು ತಪ್ಪಿತಸ್ಥನಾಗಿದ್ದರೆ, ಅವನು ತಪ್ಪಿತಸ್ಥನೆಂಬುದನ್ನು ನಮಗೆ ತೋರಿಸು. ಅವನು ನಿರಪರಾಧಿಯಾಗಿದ್ದರೆ ಅವನು ತಪ್ಪಿತಸ್ಥನಲ್ಲವೆಂಬುದನ್ನೂ ದಯವಿಟ್ಟು ನಮಗೆ ತೋರಿಸು.
33 “ಇಸ್ರೇಲಿನ ನಿನ್ನ ಜನರೂ ಕೆಲವು ಸಂದರ್ಭಗಳಲ್ಲಿ ನಿನ್ನ ವಿರುದ್ಧವಾಗಿ ಪಾಪಮಾಡುತ್ತಾರೆ. ಅವರನ್ನು ಅವರ ಶತ್ರುಗಳು ಸೋಲಿಸುತ್ತಾರೆ. ಆಗ ಜನರು ನಿನ್ನ ಹತ್ತಿರಕ್ಕೆ ಹಿಂದಿರುಗಿ ನಿನ್ನನ್ನು ಸ್ತುತಿಸುತ್ತಾರೆ. ಈ ಆಲಯದಲ್ಲಿ ಜನರು ನಿನಗೆ ಪ್ರಾರ್ಥಿಸುತ್ತಾರೆ. 34 ಪರಲೋಕದಲ್ಲಿಯೇ ಅವರ ಪ್ರಾರ್ಥನೆಗಳನ್ನು ಆಲಿಸಿ ನಿನ್ನ ಜನರಾದ ಇಸ್ರೇಲರ ಪಾಪಗಳನ್ನು ಕ್ಷಮಿಸಿ ಅವರ ದೇಶದಲ್ಲಿ ಅವರು ಮತ್ತೆ ನೆಲೆಸಲು ಅವಕಾಶ ಮಾಡಿಕೊಡು. ಈ ದೇಶವನ್ನು ಅವರ ಪೂರ್ವಿಕರಿಗೆ ದಯಪಾಲಿಸಿದವನು ನೀನೇ.
35 “ಅವರು ಕೆಲವು ಸಂದರ್ಭಗಳಲ್ಲಿ ನಿನ್ನ ವಿರುದ್ಧವಾಗಿ ಪಾಪಮಾಡುತ್ತಾರೆ. ಆಗ ನೀನು ಅವರ ಭೂಮಿಯ ಮೇಲೆ ಬೀಳುವ ಮಳೆಯನ್ನು ನಿಲ್ಲಿಸುವೆ. ಆಗ ಅವರು ಈ ಸ್ಥಳದ ಕಡೆಗೆ ತಿರುಗಿ ಪ್ರಾರ್ಥಿಸುತ್ತಾ, ನಿನ್ನ ಹೆಸರನ್ನು ಕೊಂಡಾಡುವರು. ನೀನು ಅವರನ್ನು ಬಳಲಿಸುವೆ. ಅವರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಟ್ಟು ಅವುಗಳಿಗೆ ವಿಮುಖರಾಗುತ್ತಾರೆ. 36 ಆಗ ಪರಲೋಕದಿಂದಲೇ ಅವರ ಪ್ರಾರ್ಥನೆಗಳನ್ನು ಆಲಿಸು; ಅವರ ಪಾಪಗಳನ್ನು ಕ್ಷಮಿಸು; ನೀತಿಮಾರ್ಗವನ್ನು ಅವರಿಗೆ ಕಲಿಸು. ಬಳಿಕ ನೀನು ಅವರಿಗೆ ದಯಪಾಲಿಸಿದ ಭೂಮಿಯ ಮೇಲೆ ಮಳೆಯನ್ನು ಸುರಿಸು.
37 “ಭೂಮಿಯು ಬಹಳ ಬರಡಾಗಿ ಅದರ ಮೇಲೆ ಬೆಳಗಳೇ ಬೆಳೆಯದಂತಾಗಬಹುದು, ಬಹುಶಃ ಘೋರವಾದ ವ್ಯಾಧಿಗಳು ಜನರಲ್ಲಿ ಹರಡಬಹುದು. ಬೆಳೆಯುವ ಬೆಳೆಗಳೆಲ್ಲ ಬಹುಶಃ ಕ್ರಿಮಿಕೀಟಗಳಿಂದ ನಾಶವಾಗಬಹುದು. ಇಲ್ಲವೆ ನಿನ್ನ ಜನರ ಮೇಲೆ ಕೆಲವು ನಗರಗಳಲ್ಲಿ ಅವರ ಶತ್ರುಗಳು ಆಕ್ರಮಣ ಮಾಡಬಹುದು. ನಿನ್ನ ಜನರಲ್ಲಿ ಅನೇಕರು ವ್ಯಾಧಿಗೆ ಒಳಗಾಗಬಹುದು. 38 ಈ ಕಾರ್ಯಗಳಲ್ಲಿ ಯಾವುದಾದರೊಂದು ಸಂಭವಿಸಿದಾಗ, ಒಬ್ಬ ಮನುಷ್ಯನು ಮಾತ್ರ ತನ್ನ ಪಾಪಕ್ಕಾಗಿ ಕ್ಷಮೆಯನ್ನು ಯಾಚಿಸಿ ಈ ಆಲಯದ ಕಡೆಗೆ ಕೈಗಳನ್ನೆತ್ತಿ ಪ್ರಾರ್ಥಿಸಿದರೆ, 39 ದಯವಿಟ್ಟು ಅವನ ಪ್ರಾರ್ಥನೆಯನ್ನು ನಿನ್ನ ನಿವಾಸವಾದ ಪರಲೋಕದಿಂದ ಆಲಿಸಿ, ಜನರನ್ನು ಕ್ಷಮಿಸಿ, ಅವರಿಗೆ ಸಹಾಯ ಮಾಡು. ಜನರು ನಿಜವಾಗಿ ಆಲೋಚಿಸುವ ಸಂಗತಿಗಳು ನಿನಗೆ ಮಾತ್ರ ತಿಳಿದಿವೆ. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಗೂ ತೀರ್ಪುನೀಡು ಮತ್ತು ಅವನಿಗೆ ನ್ಯಾಯವಾದದ್ದನ್ನು ಮಾಡು. 40 ನೀನು ಹೀಗೆ ಮಾಡಿದರೆ, ನೀನು ನಮ್ಮ ಪೂರ್ವಿಕರಿಗೆ ದಯಪಾಲಿಸಿರುವ ಈ ದೇಶದಲ್ಲಿ ಅವರು ವಾಸಿಸುವ ಎಲ್ಲಾ ಕಾಲದಲ್ಲೂ ನಿನ್ನಲ್ಲಿ ಭಯಭಕ್ತಿಯುಳ್ಳವರಾಗಿರುತ್ತಾರೆ.
ದೆವ್ವದಿಂದ ಪೀಡಿತನಾಗಿದ್ದವನಿಗೆ ಬಿಡುಗಡೆ
(ಮಾರ್ಕ 1:21-28)
31 ಯೇಸು ಗಲಿಲಾಯದ ಕಪೆರ್ನೌಮ್ ಎಂಬ ಊರಿಗೆ ಹೋದನು. ಸಬ್ಬತ್‌ದಿನದಂದು ಯೇಸು ಜನರಿಗೆ ಉಪದೇಶಿಸಿದನು. 32 ಯೇಸುವಿನ ಉಪದೇಶಕ್ಕೆ ಅವರು ಅತ್ಯಾಶ್ಚರ್ಯಪಟ್ಟರು. ಏಕೆಂದರೆ ಆತನು ಅಧಿಕಾರದಿಂದ ಮಾತಾಡಿದನು.
33 ಸಭಾಮಂದಿರದಲ್ಲಿ ದೆವ್ವದಿಂದ ಪೀಡಿತನಾದ ಒಬ್ಬ ಮನುಷ್ಯನಿದ್ದನು. ಅವನು ಗಟ್ಟಿಯಾದ ಧ್ವನಿಯಿಂದ, 34 “ನಜರೇತಿನ ಯೇಸುವೇ! ನಮ್ಮ ಗೊಡವೆ ನಿನಗೇಕೆ? ನಮ್ಮನ್ನು ನಾಶಮಾಡಲು ಇಲ್ಲಿಗೆ ಬಂದಿರುವೆಯಾ? ನೀನು ಯಾರೆಂದು ನಾನು ಬಲ್ಲೆನು. ನೀನು ದೇವರಿಂದ ಕಳುಹಿಸಲ್ಪಟ್ಟ ಪರಿಶುದ್ಧನು!” ಎಂದು ಕೂಗಿದನು. 35 ಆದರೆ ಯೇಸು ಆ ದೆವ್ವಕ್ಕೆ, “ಸುಮ್ಮನಿರು! ಇವನನ್ನು ಬಿಟ್ಟು ಹೊರಗೆ ಬಾ!” ಎಂದು ಆಜ್ಞಾಪಿಸಿದನು. ದೆವ್ವವು ಅವನನ್ನು ಜನರೆಲ್ಲರ ಎದುರಿನಲ್ಲಿಯೇ ಕೆಡವಿ ಯಾವ ಕೇಡೂ ಮಾಡದೆ ಬಿಟ್ಟು ಹೋಯಿತು.
36 ಜನರೆಲ್ಲರೂ ಬೆರಗಾಗಿ, “ಎಂಥಾ ಮಾತುಗಳಿವು! ಆತನು ಅಧಿಕಾರದಿಂದಲೂ ಶಕ್ತಿಯಿಂದಲೂ ದೆವ್ವಗಳಿಗೆ ಆಜ್ಞಾಪಿಸಲು, ಅವು ಬಿಟ್ಟುಹೋಗುತ್ತವೆಯಲ್ಲಾ” ಎಂದು ಮಾತಾಡಿಕೊಂಡರು. 37 ಹೀಗಾಗಿ ಯೇಸುವಿನ ಸುದ್ದಿಯು ಆ ಪ್ರಾಂತ್ಯದಲ್ಲೆಲ್ಲಾ ಹಬ್ಬಿಕೊಂಡಿತು.
Kannada Holy Bible: Easy-to-Read Version. All rights reserved. © 1997 Bible League International