Print Page Options
Previous Prev Day Next DayNext

Revised Common Lectionary (Complementary)

Daily Bible readings that follow the church liturgical year, with thematically matched Old and New Testament readings.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 30

ದೇವಾಲಯದ ಪ್ರತಿಷ್ಠೆಗಾಗಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.

30 ಯೆಹೋವನೇ, ನನ್ನನ್ನು ಇಕ್ಕಟ್ಟುಗಳಿಂದ ಮೇಲೆತ್ತಿದವನು ನೀನೇ;
    ಶತ್ರುಗಳಿಗೆ ಸೋತುಹೋಗಿ ಅವರ ಹಾಸ್ಯಕ್ಕೆ ಗುರಿಯಾಗದಂತೆ ಮಾಡಿದವನು ನೀನೇ;
    ಆದ್ದರಿಂದ ನಿನ್ನನ್ನು ಕೊಂಡಾಡುವೆನು.
ನನ್ನ ದೇವರಾದ ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದಾಗ
    ನೀನು ನನ್ನನ್ನು ಗುಣಪಡಿಸಿದೆ.
ಯೆಹೋವನೇ, ನೀನು ನನ್ನನ್ನು ಸಾವಿನಿಂದ ಬದುಕಿಸಿದೆ;
    ಪಾತಾಳಕ್ಕೆ ಇಳಿದುಹೋಗದಂತೆ ನನ್ನನ್ನು ಕಾಪಾಡಿದೆ.[a]

ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ!
    ಆತನ ಪರಿಶುದ್ಧ ಹೆಸರನ್ನು[b] ಕೊಂಡಾಡಿರಿ.
ಆತನ ಕೋಪವು ಕ್ಷಣಮಾತ್ರವಿರುವುದು.
    ಆತನ ಪ್ರೀತಿಯಾದರೋ ಶಾಶ್ವತವಾದದ್ದು.
ನಾನು ಸಂಜೆಯಲ್ಲಿ ದುಃಖದಿಂದ ಮಲಗಿಕೊಂಡರೂ
    ಮುಂಜಾನೆ ಹರ್ಷದಿಂದ ಎಚ್ಚರಗೊಳ್ಳುವೆನು.

ನಾನು ಸುರಕ್ಷಿತವಾಗಿದ್ದಾಗ
    ನನಗೆ ಕೇಡೇ ಇಲ್ಲವೆಂದುಕೊಂಡೆನು.
ಯೆಹೋವನೇ, ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದಾಗ
    ನನ್ನನ್ನು ಯಾವುದೂ ಸೋಲಿಸಲಾರದು ಎಂದುಕೊಂಡೆನು.
ಆದರೆ ನೀನು ನನಗೆ ವಿಮುಖನಾದಾಗ
    ಭಯದಿಂದ ನಡುಗತೊಡಗಿದೆ.
ಯೆಹೋವನೇ, ನಾನು ನಿನಗೆ ಅಭಿಮುಖನಾಗಿ ಪ್ರಾರ್ಥಿಸಿದೆ;
    ಕರುಣೆತೋರು ಎಂದು ನಿನ್ನನ್ನು ಕೇಳಿಕೊಂಡೆ.
“ದೇವರೇ, ನಾನು ಸತ್ತು ಸಮಾಧಿಯೊಳಗೆ ಹೋದರೆ,
    ಅದರಿಂದ ಒಳ್ಳೆಯದೇನಾದೀತು?
ಸತ್ತವರು ಕೇವಲ ಮಣ್ಣಿನಲ್ಲಿ ಬಿದ್ದಿರುವರು!
    ಅವರು ನಿನ್ನನ್ನು ಸ್ತುತಿಸುವುದಿಲ್ಲ!
    ಶಾಶ್ವತವಾದ ನಿನ್ನ ನಂಬಿಗಸ್ತಿಕೆಯ ಕುರಿತು ಅವರು ಹೇಳುವುದಿಲ್ಲ.
10 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆತೋರು!
    ಯೆಹೋವನೇ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡೆನು.

11 ಆಗ ನೀನು ನನಗೆ ಸಹಾಯಮಾಡಿ ನನ್ನ ಗೋಳಾಟವನ್ನು
    ಸಂತೋಷದ ನರ್ತನವನ್ನಾಗಿ ಮಾರ್ಪಡಿಸಿದೆ.
ನನ್ನ ಶೋಕವಸ್ತ್ರಗಳನ್ನು ತೆಗೆದುಹಾಕಿ
    ಹರ್ಷವಸ್ತ್ರಗಳನ್ನು ಹೊದಿಸಿದೆ.
12 ನಾನು ಮೌನವಾಗಿರದೆ ಸದಾಕಾಲ ನಿನ್ನನ್ನು ಸ್ತುತಿಸುವೆನು.
    ನನ್ನ ದೇವರಾದ ಯೆಹೋವನೇ, ನಿನ್ನನ್ನು ಸದಾಕಾಲ ಸ್ತುತಿಸುವೆನು.

2 ಸಮುವೇಲನು 14:1-11

ದಾವೀದನ ಬಳಿಗೆ ಒಬ್ಬ ಬುದ್ಧಿವಂತಳಾದ ಸ್ತ್ರೀಯನ್ನು ಕಳುಹಿಸಿದ್ದು

14 ರಾಜನಾದ ದಾವೀದನಿಗೆ ಅಬ್ಷಾಲೋಮನ ಅಗಲಿಕೆಯಿಂದಾದ ಯಾತನೆಯು ಚೆರೂಯಳ ಮಗನಾದ ಯೋವಾಬನಿಗೆ ತಿಳಿಯಿತು. ಆದ್ದರಿಂದ ಯೋವಾಬನು ಒಬ್ಬ ಬುದ್ಧಿವಂತ ಸ್ತ್ರೀಯನ್ನು ತೆಕೋವದಿಂದ ಕರೆತರಲು ಸಂದೇಶಕರನ್ನು ಅಲ್ಲಿಗೆ ಕಳುಹಿಸಿದನು. ಈ ಬುದ್ಧಿವಂತಳಾದ ಸ್ತ್ರೀಗೆ ಯೋವಾಬನು, “ದಯವಿಟ್ಟು ನಿನ್ನ ಚರ್ಮಕ್ಕಾಗಲಿ ತಲೆಕೂದಲಿಗಾಗಲಿ ಎಣ್ಣೆಯನ್ನು ಹಚ್ಚಿಕೊಳ್ಳಬೇಡ; ಚೆನ್ನಾಗಿರುವ ವಸ್ತ್ರಗಳನ್ನು ತೊಟ್ಟುಕೊಳ್ಳದೆ ಶೋಕಸೂಚಕ ವಸ್ತ್ರಗಳನ್ನು ಧರಿಸಿಕೋ. ಸತ್ತವನಿಗಾಗಿ ಅನೇಕ ದಿನಗಳಿಂದ ರೋಧಿಸುತ್ತಿರುವ ಸ್ತ್ರೀಯಂತೆ ನಟಿಸು. ರಾಜನ ಬಳಿಗೆ ಹೋಗಿ, ನಾನು ಹೇಳಿಕೊಟ್ಟ ಮಾತುಗಳನ್ನು ಅವನಿಗೆ ಹೇಳು” ಎಂದು ಹೇಳಿದನು. ಯೋವಾಬನು ಬುದ್ಧಿವಂತಳಾದ ಆ ಸ್ತ್ರೀಗೆ ಮಾತಾಡಬೇಕಾದದ್ದನ್ನು ಹೇಳಿಕೊಟ್ಟನು.

ತೆಕೋವದ ಆ ಸ್ತ್ರೀಯು ರಾಜನ ಬಳಿಗೆ ಬಂದಾಗ ಅವನಿಗೆ ಸಾಷ್ಟಾಂಗನಮಸ್ಕಾರ ಮಾಡಿ, “ರಾಜನೇ, ನನಗೆ ಸಹಾಯಮಾಡು” ಎಂದು ಹೇಳಿದಳು.

ರಾಜನಾದ ದಾವೀದನು ಅವಳಿಗೆ, “ನಿನ್ನ ಸಮಸ್ಯೆ ಏನು?” ಎಂದು ಕೇಳಿದನು.

ಆ ಸ್ತ್ರೀಯು, “ನಾನೊಬ್ಬ ವಿಧವೆ. ನನ್ನ ಗಂಡನು ತೀರಿಕೊಂಡಿದ್ದಾನೆ. ನನಗೆ ಇಬ್ಬರು ಗಂಡುಮಕ್ಕಳಿದ್ದರು. ಈ ಇಬ್ಬರು ಗಂಡುಮಕ್ಕಳು ಜಗಳಮಾಡುತ್ತಾ ಹೊರಗೆ ಮೈದಾನದಲ್ಲಿದ್ದರು. ಅವರನ್ನು ತಡೆಯುವ ಬೇರೊಬ್ಬನು ಅಲ್ಲಿರಲಿಲ. ಒಬ್ಬ ಮಗನು ಮತ್ತೊಬ್ಬನನ್ನು ಕೊಂದನು. ಈಗ ನಮ್ಮ ಕುಟುಂಬದವರೆಲ್ಲಾ ನನಗೆ ವಿರುದ್ಧವಾಗಿದ್ದಾರೆ. ಅವರು ನನಗೆ, ‘ತನ್ನ ಸೋದರನನ್ನೇ ಕೊಂದ ಮಗನನ್ನು ಕರೆದುಕೊಂಡು ಬಾ. ಅವನು ತನ್ನ ಸೋದರನನ್ನೇ ಕೊಂದುಹಾಕಿದ್ದರಿಂದ ಅವನನ್ನು ನಾವು ಕೊಂದುಹಾಕುತ್ತೇವೆ’ ಎಂದು ಹೇಳಿದರು. ನನ್ನ ಮಗನನ್ನು ಕೊಲ್ಲಲು ನಾನು ಅವರಿಗೆ ಬಿಟ್ಟುಕೊಟ್ಟರೆ, ತನ್ನ ತಂದೆಯ ಆಸ್ತಿಗೆ ವಾರಸುದಾರನಾದ ಮಗನನ್ನೇ ಕೊಂದುಹಾಕಿದಂತಾಗುತ್ತದೆ. ನನ್ನ ಮಗ ನನ್ನ ಬದುಕಿನ ಕೊನೆಯ ಆಶಾಕಿರಣ. ಆ ಕೊನೆಯ ಆಶಾಕಿರಣವು ಸುಟ್ಟು ನಾಶವಾಗಿಬಿಡುತ್ತದೆ. ನಂತರ ನನ್ನ ಸತ್ತ ಗಂಡನ ಆಸ್ತಿ ಬೇರೊಬ್ಬನಿಗೆ ಹೋಗುತ್ತದೆ ಮತ್ತು ಅವನ ಹೆಸರು ದೇಶದೊಳಗಿಂದ ತೆಗೆದುಹಾಕಲ್ಪಡುತ್ತದೆ” ಎಂದು ಹೇಳಿದಳು.

ಆಗ ರಾಜನು ಆ ಸ್ತ್ರೀಗೆ, “ಮನೆಗೆ ಹಿಂದಿರುಗು. ನಾನು ನಿನ್ನ ವಿಷಯದಲ್ಲಿ ಆಜ್ಞೆಗಳನ್ನು ಕೊಡುತ್ತೇನೆ” ಎಂದು ಹೇಳಿದನು.

ತೆಕೋವದ ಆ ಸ್ತ್ರೀಯು ರಾಜನಿಗೆ, “ರಾಜನಾದ ನನ್ನ ಒಡೆಯನೇ, ದೋಷವೆಲ್ಲವೂ ನನ್ನ ಮೇಲೆಯೇ ಬರಲಿ. ನನ್ನ ಒಡೆಯನಾದ ರಾಜನೇ, ನೀನೂ ನಿನ್ನ ರಾಜ್ಯವೂ ನಿರ್ದೋಷಿಗಳಾಗಿದ್ದೀರಿ” ಎಂದು ಹೇಳಿದಳು.

10 ರಾಜನಾದ ದಾವೀದನು “ನಿನ್ನನ್ನು ದೋಷಿ ಎಂದವರನ್ನು ನನ್ನ ಬಳಿಗೆ ಕರೆದುಕೊಂಡು ಬಾ. ಅವನು ನಿನಗೆ ಮತ್ತೆ ತೊಂದರೆ ಕೊಡದಂತೆ ನಾನು ನೋಡಿಕೊಳ್ಳುವೆ” ಎಂದು ಹೇಳಿದನು.

11 ಆ ಸ್ತ್ರೀಯು, “ಅವರು ನನಗೆ ತೊಂದರೆ ಕೊಡದಂತೆ ನೀನು ನೋಡಿಕೊಳ್ಳುವುದಾಗಿ ನಿನ್ನ ದೇವರಾದ ಯೆಹೋವನ ಮೇಲೆ ದಯವಿಟ್ಟು ಪ್ರಮಾಣ ಮಾಡು. ಆಗ ಕೊಲೆಗಾರರನ್ನು ದಂಡಿಸಲು ಇಚ್ಛಿಸುವ ಈ ಜನರು, ನನ್ನ ಮಗನನ್ನು ದಂಡಿಸುವುದಿಲ್ಲ” ಎಂದು ಹೇಳಿದಳು.

ದಾವೀದನು, “ಯೆಹೋವನಾಣೆ, ನಿನ್ನ ಮಗನನ್ನು ಯಾವ ವ್ಯಕ್ತಿಯೂ ತೊಂದರೆಗೊಳಿಸುವುದಿಲ್ಲ. ನಿನ್ನ ಮಗನ ತಲೆಯ ಮೇಲಿನ ಕೂದಲುಗಳಲ್ಲಿ ಒಂದಾದರೂ ನೆಲಕ್ಕೆ ಬೀಳುವುದಿಲ್ಲ” ಎಂದನು.

ಅಪೊಸ್ತಲರ ಕಾರ್ಯಗಳು 22:6-21

ಪೌಲನ ತನ್ನ ಮನಪರಿವರ್ತನೆಯ ಸಾಕ್ಷಿಯ ಕುರಿತು ಹೇಳಿಕೆ

“ನಾನು ಪ್ರಯಾಣ ಮಾಡುತ್ತಾ ದಮಸ್ಕದ ಸಮೀಪಕ್ಕೆ ಬಂದಾಗ ಒಂದು ಘಟನೆ ಸಂಭವಿಸಿತು. ಆಗ ಸುಮಾರು ಮಧ್ಯಾಹ್ನವಾಗಿತ್ತು. ಇದ್ದಕ್ಕಿದ್ದಂತೆ ಪ್ರಕಾಶಮಾನವಾದ ಬೆಳಕೊಂದು ನನ್ನ ಸುತ್ತಲೂ ಪ್ರಕಾಶಿಸಿತು. ನಾನು ನೆಲಕ್ಕೆ ಬಿದ್ದೆನು. ಆಗ ವಾಣಿಯೊಂದು ನನಗೆ, ‘ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸೆ ಪಡಿಸುತ್ತಿರುವೆ?’ ಎಂದು ಹೇಳಿತು.

“ನಾನು, ‘ಪ್ರಭುವೇ, ನೀನು ಯಾರು?’ ಎಂದು ಕೇಳಿದೆನು. ಆ ವಾಣಿಯು, ‘ನಾನು ನಜರೇತಿನ ಯೇಸು. ನೀನು ಹಿಂಸಿಸುತ್ತಿರುವುದು ನನ್ನನ್ನೇ’ ಎಂದು ಹೇಳಿತು. ನನ್ನೊಂದಿಗಿದ್ದ ಜನರು ನನ್ನ ಸಂಗಡ ಮಾತಾಡುತ್ತಿದ್ದ ವ್ಯಕ್ತಿಯ ಸ್ವರವನ್ನು ಕೇಳಲಿಲ್ಲ. ಆದರೆ ಅವರು ಬೆಳಕನ್ನು ನೋಡಿದರು.

10 “ನಾನು, ‘ಪ್ರಭುವೇ, ನಾನೇನು ಮಾಡಲಿ’ ಎಂದೆನು. ಪ್ರಭುವು ‘ಎದ್ದು ದಮಸ್ಕದೊಳಗೆ ಹೋಗು. ನಾನು ನಿನಗೆ ನೇಮಿಸಿರುವ ಕೆಲಸಗಳನ್ನೆಲ್ಲಾ ಅಲ್ಲಿ ನಿನಗೆ ತಿಳಿಸಲಾಗುವುದು’ ಎಂದು ಉತ್ತರಕೊಟ್ಟನು. 11 ಪ್ರಕಾಶಮಾನವಾದ ಆ ಬೆಳಕು ನನ್ನನ್ನು ಕುರುಡನನ್ನಾಗಿ ಮಾಡಿದ್ದರಿಂದ ನನಗೆ ಏನೂ ಕಾಣಲಿಲ್ಲ. ಆದ್ದರಿಂದ ಆ ಜನರು ನನ್ನನ್ನು ದಮಸ್ಕಕ್ಕೆ ಕೈಹಿಡಿದು ನಡೆಸಿಕೊಂಡು ಹೋದರು.

12 “ದಮಸ್ಕದಲ್ಲಿ ಅನನೀಯ ಎಂಬುವನು ನನ್ನ ಬಳಿಗೆ ಬಂದನು. ಅನನೀಯನು ಧಾರ್ಮಿಕ ವ್ಯಕ್ತಿಯಾಗಿದ್ದನು. ಅವನು ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯನಾಗಿದ್ದನು. ಅಲ್ಲಿ ವಾಸವಾಗಿದ್ದ ಯೆಹೂದ್ಯರೆಲ್ಲರು ಅವನನ್ನು ಗೌರವಿಸುತ್ತಿದ್ದರು. 13 ಅನನೀಯನು ನನ್ನ ಬಳಿಗೆ ಬಂದು, ‘ಸಹೋದರನಾದ ಸೌಲನೇ, ನಿನಗೆ ಮತ್ತೆ ದೃಷ್ಟಿ ಬರಲಿ!’ ಎಂದನು. ಆ ಕೂಡಲೇ ನನಗೆ ದೃಷ್ಟಿ ಬಂದಿತು ಮತ್ತು ನಾನು ಅವನನ್ನು ನೋಡಿದೆನು.

14 “ಅನನೀಯನು ನನಗೆ, ‘ನಮ್ಮ ಪಿತೃಗಳ ದೇವರು ಬಹುಕಾಲದ ಹಿಂದೆಯೇ ನಿನ್ನನ್ನು ಆರಿಸಿಕೊಂಡನು. ನೀನು ದೇವರ ಯೋಜನೆಯನ್ನು ತಿಳಿದುಕೊಳ್ಳಬೇಕೆಂತಲೂ ನೀತಿಸ್ವರೂಪನನ್ನು (ಯೇಸು) ನೋಡಬೇಕೆಂತಲೂ ಆತನ ವಾಕ್ಯಗಳನ್ನು ಕೇಳಬೇಕೆಂತಲೂ ದೇವರು ನಿನ್ನನ್ನು ಆರಿಸಿಕೊಂಡನು. 15 ನೀನು ಕಂಡ ಮತ್ತು ಕೇಳಿದ ಸಂಗತಿಗಳ ಬಗ್ಗೆ ಎಲ್ಲಾ ಜನರಿಗೆ ಸಾಕ್ಷಿಯಾಗಿರುವೆ. 16 ಈಗ ನೀನು ತಡಮಾಡುವುದೇಕೆ? ಎದ್ದೇಳು! ಆತನಲ್ಲಿ ನಂಬಿಕೆಯಿಟ್ಟು ದೀಕ್ಷಾಸ್ನಾನ ಮಾಡಿಸಿಕೊಂಡು ನಿನ್ನ ಪಾಪಗಳನ್ನು ತೊಳೆದುಕೊ’ ಎಂದು ಹೇಳಿದನು.

17 “ತರುವಾಯ ನಾನು ಜೆರುಸಲೇಮಿಗೆ ಹಿಂತಿರುಗಿದೆನು. ನಾನು ದೇವಾಲಯದ ಅಂಗಳದಲ್ಲಿ ಪ್ರಾರ್ಥಿಸುತ್ತಿದ್ದಾಗ ನನಗೊಂದು ದರ್ಶನವಾಯಿತು. 18 ನಾನು ಯೇಸುವನ್ನು ಕಂಡೆನು. ಆತನು ನನಗೆ, ‘ಬೇಗನೆ ಜೆರುಸಲೇಮಿನಿಂದ ಹೊರಡು! ನನ್ನ ಕುರಿತಾದ ಸಾಕ್ಷಿಯನ್ನು ಈ ಜನರು ಸ್ವೀಕರಿಸುವುದಿಲ್ಲ’ ಎಂದು ಹೇಳಿದನು.

19 “ನಾನು, ‘ಪ್ರಭುವೇ, ವಿಶ್ವಾಸಿಗಳನ್ನು ಸೆರೆಮನೆಗಳಿಗೆ ಹಾಕಿಸಿ ಹೊಡೆಸುತ್ತಿದ್ದವನು ನಾನೇ ಎಂಬುದು ಜನರಿಗೆ ಗೊತ್ತಿದೆ. ನಿನ್ನಲ್ಲಿ ನಂಬಿಕೆಯಿಟ್ಟಿರುವ ಜನರನ್ನು ಪತ್ತೆಹಚ್ಚಿ ಬಂಧಿಸುವುದಕ್ಕಾಗಿ ನಾನು ಎಲ್ಲಾ ಸಭಾಮಂದಿರಗಳಿಗೆ ಹೋಗಿದ್ದೇನೆ. 20 ನಿನ್ನ ಸಾಕ್ಷಿಯಾದ ಸ್ತೆಫನನು ಕೊಲ್ಲಲ್ಪಟ್ಟಾಗ ನಾನು ಅಲ್ಲಿದ್ದದ್ದು ಸಹ ಜನರಿಗೆ ಗೊತ್ತಿದೆ. ಸ್ತೆಫನನನ್ನು ಕೊಲ್ಲಲು ಅವರು ನಿರ್ಧರಿಸಿದಾಗ ನಾನೂ ಅದಕ್ಕೆ ಒಪ್ಪಿಗೆ ಸೂಚಿಸಿ ಅಲ್ಲೇ ನಿಂತುಕೊಂಡಿದ್ದೆನು. ಅಲ್ಲದೆ ಅವನನ್ನು ಕೊಲ್ಲುತ್ತಿದ್ದ ಜನರ ಮೇಲಂಗಿಗಳನ್ನು ಸಹ ನಾನು ಹಿಡಿದುಕೊಂಡಿದ್ದೆ!’ ಎಂದೆನು.

21 “ಆದರೆ ಯೇಸು ನನಗೆ, ‘ಈಗ ಹೊರಡು, ಬಹುದೂರದಲ್ಲಿರುವ ಯೆಹೂದ್ಯರಲ್ಲದ ಜನರ ಬಳಿಗೆ ನಾನು ನಿನ್ನನ್ನು ಕಳುಹಿಸುವೆನು’ ಎಂದು ಹೇಳಿದನು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International