Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 107:1-9

ಐದನೆಯ ಭಾಗ

(ಕೀರ್ತನೆಗಳು 107–150)

107 ಯೆಹೋವನಿಗೆ ಕೃತಜ್ಞತಾಸ್ತುತಿಮಾಡಿರಿ! ಆತನು ಒಳ್ಳೆಯವನು!
    ಆತನ ಪ್ರೀತಿ ಶಾಶ್ವತವಾದದ್ದು!
ಯೆಹೋವನಿಂದ ರಕ್ಷಿಸಲ್ಪಟ್ಟ ಪ್ರತಿಯೊಬ್ಬರೂ ಆತನಿಗೆ ಕೃತಜ್ಞತಾಸ್ತುತಿ ಮಾಡಲಿ.
    ಯೆಹೋವನು ಅವರನ್ನು ವೈರಿಗಳಿಂದ ಬಿಡಿಸಿದನು.
ಯೆಹೋವನು ತನ್ನ ಜನರನ್ನು ಅನೇಕ ದೇಶಗಳಿಂದ ಒಟ್ಟುಗೂಡಿಸಿದನು;
    ಪೂರ್ವಪಶ್ಚಿಮಗಳಿಂದಲೂ ಉತ್ತರ ದಕ್ಷಿಣಗಳಿಂದಲೂ ಬರಮಾಡಿದನು.

ಅವರಲ್ಲಿ ಕೆಲವರು ಮರುಭೂಮಿಯಲ್ಲಿ ಅಲೆದಾಡಿದರು.
    ತಾವು ನೆಲೆಸತಕ್ಕ ಪಟ್ಟಣಕ್ಕಾಗಿ ಅವರು ಹುಡುಕಿದರೂ ಅದು ಅವರಿಗೆ ಕಾಣಲಿಲ್ಲ.
ಅವರು ಹಸಿವೆಯಿಂದಲೂ
    ಬಾಯಾರಿಕೆಯಿಂದಲೂ ಬಲಹೀನರಾಗತೊಡಗಿದರು.
ಆಗ ಅವರು ಯೆಹೋವನಿಗೆ ಮೊರೆಯಿಡಲು
    ಆತನು ಅವರನ್ನು ಎಲ್ಲಾ ಆಪತ್ತುಗಳಿಂದ ರಕ್ಷಿಸಿದನು.
ಅವರು ನೆಲಸತಕ್ಕ ಪಟ್ಟಣಕ್ಕೆ ದೇವರು ಅವರನ್ನು ನೇರವಾಗಿ ನಡೆಸಿದನು.
ಯೆಹೋವನ ಪ್ರೀತಿಗಾಗಿಯೂ ತನ್ನ ಜನರಿಗೋಸ್ಕರ ಆತನು ಮಾಡುವ
    ಅದ್ಭುತಕಾರ್ಯಗಳಿಗಾಗಿಯೂ ಆತನಿಗೆ ಕೃತಜ್ಞತಾಸ್ತುತಿಮಾಡಿರಿ.
ಆತನು ಬಾಯರಿದವರನ್ನು ನೀರಿನಿಂದಲೂ
    ಹಸಿದವರನ್ನು ಮೃಷ್ಟಾನ್ನದಿಂದಲೂ ತೃಪ್ತಿಗೊಳಿಸುವನು.

ಕೀರ್ತನೆಗಳು 107:43

43 ಜ್ಞಾನಿಯು ಇವುಗಳನ್ನು ನೆನಪು ಮಾಡಿಕೊಂಡು
    ದೇವರ ನಿಜಪ್ರೀತಿಯನ್ನು ಅರ್ಥಮಾಡಿಕೊಳ್ಳುವನು.

ಹೋಶೇಯ 8

ವಿಗ್ರಹಾರಾಧನೆಯು ಇಸ್ರೇಲರ ನಾಶನಕ್ಕೆ ಕಾರಣ

“ಯೆಹೋವನಾಲಯದ ಕಾವಲುಗಾರನಂತೆ ತುತ್ತೂರಿಯನ್ನು ನಿನ್ನ ತುಟಿಗಳಲ್ಲಿಟ್ಟು ಊದು. ಇಸ್ರೇಲರು ನನ್ನ ಕಟ್ಟಳೆಗಳಿಗೆ ಅವಿಧೇಯರಾಗಿ ನನ್ನ ಒಡಂಬಡಿಕೆಯನ್ನು ಮುರಿದಿದ್ದಾರೆ. ‘ನಮ್ಮ ದೇವರೇ, ಇಸ್ರೇಲಿನಲ್ಲಿರುವ ನಾವು ನಿನ್ನನ್ನು ಅರಿತಿದ್ದೇವೆ’ ಎಂದು ಅವರು ಕಿರುಚುವರು. ಆದರೆ ಇಸ್ರೇಲ್ ಒಳ್ಳೇದನ್ನು ನಿರಾಕರಿಸಿತು. ಆದ್ದರಿಂದ ಶತ್ರುಗಳು ಅವರನ್ನು ಓಡಿಸಿದರು. ಇಸ್ರೇಲರು ತಮಗಾಗಿ ಅರಸನನ್ನು ಆರಿಸಿಕೊಂಡರು. ಆದರೆ ಸಲಹೆಗಳಿಗಾಗಿ ನನ್ನ ಬಳಿಗೆ ಬರಲಿಲ್ಲ. ಇಸ್ರೇಲರು ತಮ್ಮ ನಾಯಕರನ್ನು ಆರಿಸಿಕೊಂಡರು. ಆದರೆ ನಾನು ತಿಳಿದಿರುವ ನಾಯಕರನ್ನು ಆರಿಸಿಕೊಳ್ಳಲಿಲ್ಲ. ಇಸ್ರೇಲರು ತಮಗೆ ವಿಗ್ರಹಗಳನ್ನು ತಯಾರಿಸಲು ತಮ್ಮ ಬೆಳ್ಳಿಬಂಗಾರವನ್ನು ಉಪಯೋಗಿಸಿದರು. ಆದ್ದರಿಂದ ಅವರು ನಾಶವಾಗುವರು. 5-6 ಯೆಹೋವನು ನೀವು ಮಾಡಿಕೊಂಡ ಬಸವನನ್ನು ನಿರಾಕರಿಸಿದ್ದಾನೆ. ಸಮಾರ್ಯವೇ, ಯೆಹೋವನು ಹೇಳುವುದೇನೆಂದರೆ, ‘ನಾನು ಇಸ್ರೇಲರ ವಿರುದ್ಧವಾಗಿ ತುಂಬಾ ಕೋಪಗೊಂಡಿದ್ದೇನೆ.’ ಇಸ್ರೇಲಿನ ಜನರು ಅವರ ಪಾಪಗಳಿಗಾಗಿ ಶಿಕ್ಷಿಸಲ್ಪಡುವರು. ಶಿಲ್ಪಿಯು ಅವರ ವಿಗ್ರಹಗಳನ್ನು ಮಾಡಿದನು. ಅವು ದೇವರಲ್ಲ. ಸಮಾರ್ಯದ ಬಸವನ ವಿಗ್ರಹಗಳು ಚೂರುಚೂರಾಗಿ ಒಡೆಯಲ್ಪಡುವವು. ಇಸ್ರೇಲರು ಅಜ್ಞಾನದ ಕಾರ್ಯ ಮಾಡಿದರು. ಅವರು ಗಾಳಿಯನ್ನು ನೆಡಲು ಪ್ರಯತ್ನಿಸಿದರು. ಆದರೆ ಅವರಿಗೆ ತೊಂದರೆಗಳೇ ಪ್ರಾಪ್ತವಾಗುವದು. ಅವರು ಸುಂಟರಗಾಳಿಯನ್ನು ಕೊಯ್ಯುವರು. ಹೊಲದಲ್ಲಿ ಧಾನ್ಯವು ಬೆಳೆಯುವದು. ಆದರೆ ಅವು ಆಹಾರವನ್ನು ಕೊಡುವದಿಲ್ಲ. ಒಂದುವೇಳೆ ಅದು ಕೊಟ್ಟರೂ ಅಪರಿಚಿತರು ಅದನ್ನು ತಿನ್ನುವರು.

“ಇಸ್ರೇಲ್ ನಾಶವಾಯಿತು.
    ಅವರು ಯಾರಿಗೂ ಬೇಡವಾದ ಪಾತ್ರೆಯನ್ನು ಬಿಸಾಡಿದಂತೆ
    ಜನಾಂಗಗಳ ಮಧ್ಯದಲ್ಲಿ ಚದರಿಸಲ್ಪಟ್ಟರು.
ಎಫ್ರಾಯೀಮನು ತನ್ನ ಪ್ರೇಮಿಗಳ ಬಳಿಗೆ ಹೋದನು.
    ಕಾಡುಕತ್ತೆಯಂತೆ ಅಶ್ಶೂರ್ಯದ ಕಡೆಗೆ ಅಡ್ಡಾಡುತ್ತಾ ಹೋದನು.
10 ಜನಾಂಗಗಳ ಮಧ್ಯೆ ಇರುವ ತನ್ನ ಪ್ರಿಯತಮರ ಕಡೆಗೆ ಇಸ್ರೇಲು ಹೋದನು.
    ಆದರೆ ನಾನು ಇಸ್ರೇಲರನ್ನು ಒಟ್ಟುಸೇರಿಸುವೆನು.
ಆದರೆ ಅದರ ಮೊದಲು ಆ ಬಲಿಷ್ಠ ರಾಜನ ಕೈಯಿಂದ
    ಅವರ ಸಂಕಟ ಅನುಭವಿಸಬೇಕು.

ಇಸ್ರೇಲು ಯೆಹೋವನನ್ನು ಮರೆತು ವಿಗ್ರಹಗಳನ್ನು ಪೂಜಿಸಿದ್ದು

11 “ಎಫ್ರಾಯೀಮ್ ಹೆಚ್ಚೆಚ್ಚಾಗಿ ಯಜ್ಞವೇದಿಕೆಗಳನ್ನು ಕಟ್ಟಿಸಿದನು.
    ಅದು ಪಾಪವಾಗಿತ್ತು.
    ಆ ವೇದಿಕೆಗಳ ಮೇಲೆಯೇ ಅವರು ಪಾಪಮಾಡಿದರು.
12 ಎಫ್ರಾಯೀಮನಿಗೆ ನಾನು ಸಾವಿರಾರು ವಿಧಿನಿಯಮಗಳನ್ನು ಬರೆದರೂ
    ಅವನು ಅವುಗಳನ್ನು ಬೇರೆಯವರಿಗಾಗಿ ಬರೆದದೆ ಎಂದು ತಿಳಿದುಕೊಳ್ಳುವನು.
13 ಇಸ್ರೇಲರು ಯಜ್ಞವನ್ನು ಪ್ರೀತಿಸುತ್ತಾರೆ.
    ಅವರು ಮಾಂಸವನ್ನು ಯಜ್ಞಮಾಡಿ ತಿನ್ನುತ್ತಾರೆ.
ಯೆಹೋವನು ಅವರ ಯಜ್ಞವನ್ನು ಸ್ವೀಕರಿಸುವುದಿಲ್ಲ.
    ಅವರ ಪಾಪಗಳನ್ನು ತನ್ನ ನೆನಪಿಗೆ ತಂದು
ಅವರನ್ನು ಶಿಕ್ಷಿಸುವನು.
    ಅವರು ಈಜಿಪ್ಟಿಗೆ ಸೆರೆಯಾಳುಗಳಾಗಿ ಒಯ್ಯಲ್ಪಡುವರು.
14 ಇಸ್ರೇಲರು ರಾಜರ ಅರಮನೆಗಳನ್ನು ಕಟ್ಟಿದರು.
    ಆದರೆ ಅದರ ನಿರ್ಮಾಣಿಕನನ್ನು ಮರೆತರು.
ಯೆಹೂದವು ಕೋಟೆಗಳನ್ನು ಕಟ್ಟುತ್ತಾನೆ;
    ಆದರೆ ಯೆಹೂದದ ಪಟ್ಟಣಗಳ ಮೇಲೆ ನಾನು ಬೆಂಕಿಯನ್ನು ಕಳುಹಿಸುವೆನು.
    ಆ ಬೆಂಕಿಯು ಅರಮನೆಗಳನ್ನು ನಾಶಮಾಡುವದು.”

ರೋಮ್ನಗರದವರಿಗೆ 11:33-36

ದೇವರಿಗೆ ಸ್ತೋತ್ರವಾಗಲಿ

33 ಹೌದು, ದೇವರ ಐಶ್ವರ್ಯವು ಎಷ್ಟೋ ಅಪಾರವಾಗಿದೆ! ದೇವರ ವಿವೇಕಕ್ಕೂ ಜ್ಞಾನಕ್ಕೂ ಕೊನೆಯೇ ಇಲ್ಲ! ದೇವರು ನಿರ್ಧರಿಸುವ ಸಂಗತಿಗಳನ್ನು ಯಾವನೂ ವಿವರಿಸಲಾರನು. ದೇವರ ಮಾರ್ಗಗಳನ್ನು ಯಾವನೂ ಅರ್ಥಮಾಡಿಕೊಳ್ಳಲಾರನು. 34 ಪವಿತ್ರ ಗ್ರಂಥ ಹೇಳುವಂತೆ:

“ಪ್ರಭುವಿನ ಮನಸ್ಸನ್ನು ಯಾರು ಬಲ್ಲರು?
    ದೇವರಿಗೆ ಸಲಹೆಯನ್ನು ಯಾರು ಕೊಡಬಲ್ಲರು?”(A)

35 “ಮೊದಲು ದೇವರಿಗೆ ಕೊಟ್ಟು ಪ್ರತಿಫಲ ಪಡೆದವರ್ಯಾರು?
    ದೇವರು ಯಾರಿಗೂ ಸಾಲಗಾರನಾಗಿಲ್ಲ.”(B)

36 ಹೌದು, ದೇವರು ಸಮಸ್ತವನ್ನು ಸೃಷ್ಟಿಸಿದನು. ಸಮಸ್ತವು ದೇವರ ಮೂಲಕವಾಗಿಯೂ ದೇವರಿಗಾಗಿಯೂ ಮುಂದುವರಿಯುತ್ತಿದೆ. ದೇವರಿಗೆ ಸದಾಕಾಲವೂ ಸ್ತೋತ್ರ! ಆಮೆನ್.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International