Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
2 ರಾಜರುಗಳು 5:1-14

ನಾಮಾನನ ಸಮಸ್ಯೆ

ಅರಾಮ್ಯರ ರಾಜನ ಸೇನೆಯಲ್ಲಿ ನಾಮಾನನೆಂಬ ಸೇನಾಪತಿಯಿದ್ದನು. ನಾಮಾನನು ಅವನ ರಾಜನಿಗೆ ಬಹಳ ಪ್ರಾಮುಖ್ಯ ವ್ಯಕ್ತಿಯಾಗಿದ್ದನು. ಯೆಹೋವನು ನಾಮಾನನ ಮುಖಾಂತರ ಅರಾಮ್ಯರಿಗೆ ವಿಜಯವನ್ನು ತಂದುಕೊಟ್ಟಿದ್ದರಿಂದ ಅವನು ಪ್ರಮುಖನಾಗಿದ್ದನು. ನಾಮಾನನು ಮಹಾಪುರುಷನೂ ಶಕ್ತಿಶಾಲಿಯೂ ಆದ ಮನುಷ್ಯನಾಗಿದ್ದನು. ಆದರೆ ಅವನು ಕುಷ್ಠರೋಗ ಪೀಡಿತನಾಗಿದ್ದನು.

ಅರಾಮ್ಯರು ಇಸ್ರೇಲಿನಲ್ಲಿ ಹೋರಾಡಲು ಸೈನಿಕರ ಅನೇಕ ಗುಂಪುಗಳನ್ನು ಕಳುಹಿಸಿದರು. ಸೈನಿಕರು ಜನರನ್ನು ತಮ್ಮ ಗುಲಾಮರಂತೆ ಹಿಡಿದುತಂದರು. ಒಂದು ಸಲ ಚಿಕ್ಕ ಹುಡುಗಿಯೊಬ್ಬಳನ್ನು ಇಸ್ರೇಲ್ ದೇಶದಿಂದ ಹಿಡಿದುತಂದರು. ಈ ಚಿಕ್ಕ ಹುಡುಗಿಯು ನಾಮಾನನ ಪತ್ನಿಗೆ ಸೇವಕಿಯಾದಳು. ಈ ಹುಡುಗಿಯು ನಾಮಾನನ ಪತ್ನಿಗೆ, “ನನ್ನ ಒಡೆಯನಾದ ನಾಮಾನನು ಸಮಾರ್ಯದಲ್ಲಿ ವಾಸಿಸುವ ಪ್ರವಾದಿಯಾದ ಎಲೀಷನನ್ನು ಭೇಟಿಮಾಡಬೇಕೆಂದು ನಾನು ಆಶಿಸುತ್ತೇನೆ. ಆ ಪ್ರವಾದಿಯು ನಾಮಾನನ ಕುಷ್ಠರೋಗವನ್ನು ಗುಣಪಡಿಸಬಲ್ಲನು” ಎಂದು ಹೇಳಿದಳು.

ನಾಮಾನನು ತನ್ನ ಒಡೆಯನಾದ ಅರಾಮ್ಯರ ರಾಜನ ಬಳಿಗೆ ಹೋದನು. ಇಸ್ರೇಲಿನ ಹುಡುಗಿಯು ಹೇಳಿದ ಸಂಗತಿಗಳನ್ನು, ನಾಮಾನನು ಅರಾಮ್ಯರ ರಾಜನಿಗೆ ಹೇಳಿದನು.

ಆಗ ಅರಾಮ್ಯರ ರಾಜನು, “ಈಗಲೇ ಹೋಗು, ನಾನು ಇಸ್ರೇಲಿನ ರಾಜನಿಗೆ ಪತ್ರವೊಂದನ್ನು ಕಳುಹಿಸುತ್ತೇನೆ” ಎಂದು ಹೇಳಿದನು.

ನಾಮಾನನು ಇಸ್ರೇಲಿಗೆ ಹೋದನು. ನಾಮಾನನು ಮುನ್ನೂರ ನಲವತ್ತು ಕಿಲೋಗ್ರಾಂ ಬೆಳ್ಳಿ, ಆರುಸಾವಿರ ಚಿನ್ನದ ನಾಣ್ಯಗಳನ್ನು ಮತ್ತು ಹತ್ತು ಥಾನು ಬಟ್ಟೆಗಳನ್ನು ಕಾಣಿಕೆಯಾಗಿ ತೆಗೆದುಕೊಂಡು ಹೋದನು. ನಾಮಾನನು ಅರಾಮ್ಯರ ರಾಜನಿಂದ ಇಸ್ರೇಲ್ ರಾಜನಿಗೆ ಪತ್ರವೊಂದನ್ನು ತೆಗೆದುಕೊಂಡು ಹೋದನು. ಆ ಪತ್ರದಲ್ಲಿ, “…ನನ್ನ ಸೇವಕನಾದ ನಾಮಾನನನ್ನು ನಿಮ್ಮ ಬಳಿಗೆ ನಾನು ಕಳುಹಿಸುತ್ತಿದ್ದೇನೆ. ಅವನ ಕುಷ್ಠರೋಗವನ್ನು ಗುಣಪಡಿಸಿ” ಎಂದು ಬರೆದಿತ್ತು.

ಇಸ್ರೇಲಿನ ರಾಜನು ಪತ್ರವನ್ನು ಓದಿದಾಗ, ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡು, “ನಾನು ದೇವರೇನು? ಇಲ್ಲ! ಹುಟ್ಟು ಮತ್ತು ಸಾವುಗಳ ಮೇಲೆ ನನಗೆ ಯಾವ ಶಕ್ತಿಯೂ ಇಲ್ಲ. ಹೀಗಿರುವಾಗ ಅರಾಮ್ಯರ ರಾಜನು ಕುಷ್ಠರೋಗಪೀಡಿತನಾದ ಮನುಷ್ಯನನ್ನು ನನ್ನ ಬಳಿಗೆ ಗುಣಪಡಿಸಲು ಏಕೆ ಕಳುಹಿಸಿದನು? ಇದರ ಬಗ್ಗೆ ನೀವೇ ಯೋಚಿಸಿರಿ. ಇದು ಒಂದು ಕುತಂತ್ರವೆಂಬುದು ನಿಮಗೇ ತಿಳಿಯುತ್ತದೆ. ಅರಾಮ್ಯರ ರಾಜನು ಯುದ್ಧವನ್ನು ಆರಂಭಿಸಲು ಪ್ರಯತ್ನಿಸುತ್ತಿದ್ದಾನೆ!” ಎಂದು ಹೇಳಿದನು.

ಇಸ್ರೇಲಿನ ರಾಜನು ದುಃಖದಿಂದ ತನ್ನ ಬಟ್ಟೆಗಳನ್ನು ಹರಿದುಕೊಂಡನೆಂಬುದು ದೇವಮನುಷ್ಯನಾದ ಎಲೀಷನಿಗೆ ತಿಳಿಯಿತು. ಎಲೀಷನು ರಾಜನಿಗೆ ಈ ಸಂದೇಶವನ್ನು ಕಳುಹಿಸಿದನು: “ನೀನು ನಿನ್ನ ಬಟ್ಟೆಗಳನ್ನು ಹರಿದುಕೊಂಡಿದ್ದು ಏಕೆ? ನಾಮಾನನು ನನ್ನ ಬಳಿಗೆ ಬರಲಿ. ಇಸ್ರೇಲಿನಲ್ಲಿ ಒಬ್ಬ ಪ್ರವಾದಿ ಇದ್ದಾನೆಂಬುದು ಅವನಿಗೆ ತಿಳಿಯುತ್ತದೆ!”

ನಾಮಾನನು ತನ್ನ ಕುದುರೆಗಳೊಂದಿಗೆ ಮತ್ತು ರಥಗಳೊಂದಿಗೆ ಎಲೀಷನ ಮನೆಗೆ ಬಂದು, ಬಾಗಿಲಿನ ಹೊರಗಡೆ ನಿಂತುಕೊಂಡನು. 10 ಎಲೀಷನು ತನ್ನ ಸಂದೇಶಕನ ಮೂಲಕ ನಾಮಾನನಿಗೆ, “ಹೋಗಿ, ಜೋರ್ಡನ್ ನದಿಯಲ್ಲಿ ಏಳು ಸಲ ಸ್ನಾನಮಾಡು. ಆಗ ನಿನ್ನ ಚರ್ಮರೋಗವು ಗುಣವಾಗುವುದು. ನೀನು ಸಂಪೂರ್ಣ ಶುದ್ಧನಾಗುವೆ” ಎಂದು ತಿಳಿಸಿದನು.

11 ನಾಮಾನನು ಕೋಪಗೊಂಡು, “ಎಲೀಷನು ಕೊನೆಯ ಪಕ್ಷ ಬಂದು, ನನ್ನೆದುರು ನಿಂತು, ತನ್ನ ದೇವರಾದ ಯೆಹೋವನ ಹೆಸರಿನಲ್ಲಿ ನನ್ನನ್ನು ಕರೆಯುತ್ತಿದ್ದನೆಂದು ನಾನು ಭಾವಿಸಿದ್ದೆನು. ಅವನು ತನ್ನ ಕೈಗಳನ್ನು ನನ್ನ ದೇಹದ ಮೇಲೆ ಸವರಿ, ನನ್ನ ಕುಷ್ಠರೋಗವನ್ನು ಗುಣಪಡಿಸುವನೆಂದು ನಾನು ಭಾವಿಸಿದ್ದೆನು. 12 ದಮಸ್ಕದ ಅಬಾನಾ ಮತ್ತು ಪರ್ಪರ್ ನದಿಗಳು ಇಸ್ರೇಲಿನ ಎಲ್ಲಾ ನದಿಗಳಿಗಿಂತಲೂ ಉತ್ತಮ! ನಾನು ದಮಸ್ಕದ ಆ ನದಿಗಳಲ್ಲಿ ಸ್ನಾನಮಾಡಿ, ಶುದ್ಧನಾಗಬಾರದೇಕೆ?” ಎಂದುಕೊಂಡು ಕೋಪದಿಂದ ಹಿಂದಿರುಗಿ ಹೋದನು!

13 ಆಗ ನಾಮಾನನ ಸೇವಕರು ಅವನ ಬಳಿಗೆ ಬಂದು ಅವನಿಗೆ, “ತಂದೆಯೇ, ಪ್ರವಾದಿಯು ಒಂದು ಕಠಿಣವಾದ ಕಾರ್ಯವನ್ನು ಹೇಳಿದ್ದರೆ, ನೀವು ಅದನ್ನು ಮಾಡುತ್ತಿದ್ದಿರಿ! ಅಲ್ಲವೇ? ಹೀಗಿರಲು ಸುಲಭವಾದ ಒಂದು ಕಾರ್ಯವನ್ನು ಅವನು ನಿಮಗೆ ಹೇಳಿರುವಾಗ ನೀವು ಅವನಿಗೆ ವಿಧೇಯರಾಗಬಾರದೇಕೆ? ನೀವು ಸ್ನಾನಮಾಡಿದರೆ, ಶುಚಿಗೊಂಡು ಶುದ್ಧರಾಗುವಿರಿ” ಎಂದು ಹೇಳಿದರು.

14 ದೇವಮನುಷ್ಯನು (ಎಲೀಷನು) ಹೇಳಿದಂತೆಯೇ ನಾಮಾನನು ಜೋರ್ಡನ್ ನದಿಯಲ್ಲಿ ಇಳಿದು ಏಳುಸಾರಿ ಮುಳುಗಿ ಮೇಲೆದ್ದನು. ಆಗ ನಾಮಾನನು ಸಂಪೂರ್ಣ ಶುದ್ಧನಾದನು; ಅವನ ಚರ್ಮವು ಮಗುವಿನ ಚರ್ಮದಂತೆ ಕೋಮಲವಾಯಿತು.

ಕೀರ್ತನೆಗಳು 30

ದೇವಾಲಯದ ಪ್ರತಿಷ್ಠೆಗಾಗಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.

30 ಯೆಹೋವನೇ, ನನ್ನನ್ನು ಇಕ್ಕಟ್ಟುಗಳಿಂದ ಮೇಲೆತ್ತಿದವನು ನೀನೇ;
    ಶತ್ರುಗಳಿಗೆ ಸೋತುಹೋಗಿ ಅವರ ಹಾಸ್ಯಕ್ಕೆ ಗುರಿಯಾಗದಂತೆ ಮಾಡಿದವನು ನೀನೇ;
    ಆದ್ದರಿಂದ ನಿನ್ನನ್ನು ಕೊಂಡಾಡುವೆನು.
ನನ್ನ ದೇವರಾದ ಯೆಹೋವನೇ, ನಾನು ನಿನಗೆ ಪ್ರಾರ್ಥಿಸಿದಾಗ
    ನೀನು ನನ್ನನ್ನು ಗುಣಪಡಿಸಿದೆ.
ಯೆಹೋವನೇ, ನೀನು ನನ್ನನ್ನು ಸಾವಿನಿಂದ ಬದುಕಿಸಿದೆ;
    ಪಾತಾಳಕ್ಕೆ ಇಳಿದುಹೋಗದಂತೆ ನನ್ನನ್ನು ಕಾಪಾಡಿದೆ.[a]

ಯೆಹೋವನ ಭಕ್ತರೇ, ಆತನನ್ನು ಕೀರ್ತಿಸಿರಿ!
    ಆತನ ಪರಿಶುದ್ಧ ಹೆಸರನ್ನು[b] ಕೊಂಡಾಡಿರಿ.
ಆತನ ಕೋಪವು ಕ್ಷಣಮಾತ್ರವಿರುವುದು.
    ಆತನ ಪ್ರೀತಿಯಾದರೋ ಶಾಶ್ವತವಾದದ್ದು.
ನಾನು ಸಂಜೆಯಲ್ಲಿ ದುಃಖದಿಂದ ಮಲಗಿಕೊಂಡರೂ
    ಮುಂಜಾನೆ ಹರ್ಷದಿಂದ ಎಚ್ಚರಗೊಳ್ಳುವೆನು.

ನಾನು ಸುರಕ್ಷಿತವಾಗಿದ್ದಾಗ
    ನನಗೆ ಕೇಡೇ ಇಲ್ಲವೆಂದುಕೊಂಡೆನು.
ಯೆಹೋವನೇ, ನಾನು ನಿನ್ನ ಕೃಪೆಗೆ ಪಾತ್ರನಾಗಿದ್ದಾಗ
    ನನ್ನನ್ನು ಯಾವುದೂ ಸೋಲಿಸಲಾರದು ಎಂದುಕೊಂಡೆನು.
ಆದರೆ ನೀನು ನನಗೆ ವಿಮುಖನಾದಾಗ
    ಭಯದಿಂದ ನಡುಗತೊಡಗಿದೆ.
ಯೆಹೋವನೇ, ನಾನು ನಿನಗೆ ಅಭಿಮುಖನಾಗಿ ಪ್ರಾರ್ಥಿಸಿದೆ;
    ಕರುಣೆತೋರು ಎಂದು ನಿನ್ನನ್ನು ಕೇಳಿಕೊಂಡೆ.
“ದೇವರೇ, ನಾನು ಸತ್ತು ಸಮಾಧಿಯೊಳಗೆ ಹೋದರೆ,
    ಅದರಿಂದ ಒಳ್ಳೆಯದೇನಾದೀತು?
ಸತ್ತವರು ಕೇವಲ ಮಣ್ಣಿನಲ್ಲಿ ಬಿದ್ದಿರುವರು!
    ಅವರು ನಿನ್ನನ್ನು ಸ್ತುತಿಸುವುದಿಲ್ಲ!
    ಶಾಶ್ವತವಾದ ನಿನ್ನ ನಂಬಿಗಸ್ತಿಕೆಯ ಕುರಿತು ಅವರು ಹೇಳುವುದಿಲ್ಲ.
10 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಕೇಳಿ ನನಗೆ ಕರುಣೆತೋರು!
    ಯೆಹೋವನೇ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡೆನು.

11 ಆಗ ನೀನು ನನಗೆ ಸಹಾಯಮಾಡಿ ನನ್ನ ಗೋಳಾಟವನ್ನು
    ಸಂತೋಷದ ನರ್ತನವನ್ನಾಗಿ ಮಾರ್ಪಡಿಸಿದೆ.
ನನ್ನ ಶೋಕವಸ್ತ್ರಗಳನ್ನು ತೆಗೆದುಹಾಕಿ
    ಹರ್ಷವಸ್ತ್ರಗಳನ್ನು ಹೊದಿಸಿದೆ.
12 ನಾನು ಮೌನವಾಗಿರದೆ ಸದಾಕಾಲ ನಿನ್ನನ್ನು ಸ್ತುತಿಸುವೆನು.
    ನನ್ನ ದೇವರಾದ ಯೆಹೋವನೇ, ನಿನ್ನನ್ನು ಸದಾಕಾಲ ಸ್ತುತಿಸುವೆನು.

ಗಲಾತ್ಯದವರಿಗೆ 6:1-6

ಒಬ್ಬರಿಗೊಬ್ಬರು ಸಹಾಯ ಮಾಡಿರಿ

ಸಹೋದರ ಸಹೋದರಿಯರೇ, ನಿಮ್ಮ ಸಭೆಯಲ್ಲಿ ಯಾವನಾದರೂ ತಪ್ಪು ಮಾಡಿದರೆ, ಆತ್ಮಿಕರಾದ ನೀವು ಅವನ ಬಳಿಗೆ ಹೋಗಿ ಸೌಮ್ಯತೆಯಿಂದ ಅವನನ್ನು ತಿದ್ದಿ ಸರಿಪಡಿಸಬೇಕು. ಆದರೆ ಎಚ್ಚರಿಕೆಯಿಂದಿರಿ! ನೀವು ಸಹ ಶೋಧನೆಗೊಳಗಾಗಿ ಪಾಪಕ್ಕೆ ಬೀಳುವ ಸಾಧ್ಯವಿದೆ. ನಿಮ್ಮ ಭಾರವಾದ ಹೊರೆಗಳನ್ನು ಹೊರಲು ಒಬ್ಬರಿಗೊಬ್ಬರು ಸಹಾಯಮಾಡಿರಿ. ಹೀಗೆ ನೀವು ಕ್ರಿಸ್ತನ ಆಜ್ಞೆಯನ್ನು ನಿಜವಾಗಿಯೂ ಅನುಸರಿಸಿರಿ. ಯಾವನಾದರೂ ತಾನು ಪ್ರಾಮುಖ್ಯನಲ್ಲದಿದ್ದರೂ ತನ್ನನ್ನು ಪ್ರಾಮುಖ್ಯನೆಂದು ಭಾವಿಸಿಕೊಂಡರೆ ಅವನು ತನ್ನನ್ನೇ ಮೋಸಪಡಿಸಿಕೊಳ್ಳುತ್ತಾನೆ. ಒಬ್ಬನು ತನ್ನನ್ನು ಮತ್ತೊಬ್ಬನೊಡನೆ ಹೋಲಿಸಿಕೊಳ್ಳಕೂಡದು. ಪ್ರತಿಯೊಬ್ಬನು ತನ್ನ ನಡತೆಯನ್ನು ತಾನೇ ವಿಮರ್ಶಿಸಿಕೊಳ್ಳಲಿ. ಆಗ ತಾನೇನಾದರೂ ಹೆಚ್ಚಳಪಡುವಂತ ಕಾರ್ಯಗಳನ್ನು ಮಾಡಿದ್ದರೆ ಅವನಿಗೆ ತಿಳಿಯುವುದು. ಪ್ರತಿಯೊಬ್ಬನು ತನ್ನ ಜವಾಬ್ದಾರಿಕೆಯನ್ನು ತಾನೇ ಹೊತ್ತುಕೊಳ್ಳಬೇಕು.

ಜೀವನವು ಜಮೀನಿನಲ್ಲಿ ಬಿತ್ತುವಂತಿದೆ

ದೇವರ ವಾಕ್ಯವನ್ನು ಕಲಿತುಕೊಳ್ಳುವವನು, (ತನಗೆ) ಕಲಿಸುವವನಿಗೆ ತನ್ನಲ್ಲಿರುವ ಎಲ್ಲಾ ಒಳ್ಳೆತನಗಳಲ್ಲಿ ಪಾಲು ಕೊಡತಕ್ಕದ್ದು.

ಗಲಾತ್ಯದವರಿಗೆ 6:7-16

ಮೋಸಹೋಗಬೇಡಿರಿ! ನೀವು ದೇವರನ್ನು ವಂಚಿಸಲು ಸಾಧ್ಯವಿಲ್ಲ. ಒಬ್ಬನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯುತ್ತಾನೆ. ಒಬ್ಬನು ತನ್ನ ಶರೀರಭಾವವನ್ನು ತೃಪ್ತಿಪಡಿಸುವುದಕ್ಕಾಗಿ ಪಾಪ ಕಾರ್ಯಗಳನ್ನು ಮಾಡಿದರೆ ಆ ಶರೀರಭಾವವು ಅವನಿಗೆ ನಿತ್ಯನಾಶವನ್ನು ಬರಮಾಡುತ್ತದೆ. ಆದರೆ ಒಬ್ಬನು ಪವಿತ್ರಾತ್ಮನನ್ನು ಮೆಚ್ಚಿಸುವುದಕ್ಕಾಗಿ ಒಳ್ಳೆಯ ಕಾರ್ಯಗಳನ್ನು ಮಾಡುವುದಾಗಿದ್ದರೆ, ಅವನು ಪವಿತ್ರಾತ್ಮನಿಂದ ನಿತ್ಯಜೀವವನ್ನು ಹೊಂದಿಕೊಳ್ಳುವನು. ನಾವು ಒಳ್ಳೆಯ ಕಾರ್ಯ ಮಾಡುವುದರಲ್ಲಿ ಬೇಸರಗೊಳ್ಳಬಾರದು. ತಕ್ಕ ಸಮಯದಲ್ಲಿ ನಾವು ನಿತ್ಯಜೀವವೆಂಬ ಸುಗ್ಗಿಯನ್ನು ಪಡೆಯುವೆವು. ಆದ್ದರಿಂದ ಒಳ್ಳೆಯ ಕಾರ್ಯ ಮಾಡುವುದನ್ನು ನಾವು ಬಿಟ್ಟುಬಿಡಬಾರದು. 10 ಯಾರಿಗಾದರೂ ಒಳ್ಳೆಯದನ್ನು ಮಾಡಲು ಅವಕಾಶವಿರುವಾಗ ನಾವು ಮಾಡಲೇಬೇಕು. ಅದರಲ್ಲೂ ಒಂದೇ ಕುಟುಂಬದವರಂತಿರುವ ವಿಶ್ವಾಸಿಗಳ ಬಗ್ಗೆ ನಾವು ವಿಶೇಷವಾದ ಗಮನ ಕೊಡಬೇಕು.

ಪೌಲನ ಕಡೇ ಮಾತುಗಳು

11 ಇದನ್ನು ನಾನೇ ಕೈಯಾರೆ ಬರೆಯುತ್ತಿದ್ದೇನೆ. ನಾನು ಎಷ್ಟು ದೊಡ್ಡ ಅಕ್ಷರಗಳಲ್ಲಿ ಬರೆಯುತ್ತಿದ್ದೇನೆಂಬುದನ್ನು ನೋಡಿರಿ. 12 ನೀವು ಸುನ್ನತಿ ಮಾಡಿಸಿಕೊಳ್ಳಬೇಕೆಂದು ಕೆಲವರು ನಿಮ್ಮನ್ನು ಒತ್ತಾಯಿಸುತ್ತಿದ್ದಾರೆ. ತಮ್ಮನ್ನು (ಯೆಹೂದ್ಯರು) ಸ್ವೀಕರಿಸಿಕೊಳ್ಳಲಿ ಎಂಬುದೇ ಅವರ ಉದ್ದೇಶ. ಕ್ರಿಸ್ತನ ಶಿಲುಬೆಯ ದೆಸೆಯಿಂದ ತಾವು ಹಿಂಸೆಗೆ ಒಳಗಾಗಬಹುದೆಂಬ ಭಯದಿಂದ ಅವರು ಹೀಗೆ ಮಾಡುತ್ತಾರೆ. 13 ಸುನ್ನತಿ ಮಾಡಿಸಿಕೊಂಡಿರುವ ಅವರೇ ಧರ್ಮಶಾಸ್ತ್ರಕ್ಕೆ ವಿಧೇಯರಾಗುತ್ತಿಲ್ಲ. ಆದರೆ ನಿಮಗೂ ಸುನ್ನತಿ ಮಾಡಿಸಿ ಅದರ ಬಗ್ಗೆ ಹೆಚ್ಚಳಪಡಬೇಕೆಂಬುದೇ ಅವರ ಆಸೆ.

14 ಅಂಥ ವಿಷಯಗಳ ಬಗ್ಗೆ ನಾನು ಹೆಚ್ಚಳಪಡುವುದೇ ಇಲ್ಲ. ನಾನು ಹೆಮ್ಮೆಪಡಲು ನನಗಿರುವ ಒಂದೇ ಕಾರಣವೇನೆಂದರೆ ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಶಿಲುಬೆಯೊಂದೇ. ಶಿಲುಬೆಯ ಮೇಲೆ ಯೇಸುವಿಗಾದ ಮರಣದ ಮೂಲಕ ಲೋಕವು ನನ್ನ ಪಾಲಿಗೆ ಸತ್ತುಹೋಯಿತು. ನಾನು ಸಹ ಲೋಕದ ಪಾಲಿಗೆ ಸತ್ತುಹೋದೆನು. 15 ಒಬ್ಬನಿಗೆ ಸುನ್ನತಿಯಾಗಿದೆಯೋ ಸುನ್ನತಿಯಾಗಿಲ್ಲವೋ ಎಂಬುದು ಮುಖ್ಯವಲ್ಲ. ಆದರೆ ದೇವರಿಂದ ಹೊಸ ಸೃಷ್ಟಿಯಾಗಿರುವುದೇ ಮುಖ್ಯವಾದದ್ದು.[a] 16 ಈ ನಿಯಮವನ್ನು ಅನುಸರಿಸುವವರಿಗೆಲ್ಲ, ಅಂದರೆ ನಿಜ ಇಸ್ರೇಲರಾದ ದೇವ ಜನರಿಗೆಲ್ಲ ಶಾಂತಿಯೂ ಕರುಣೆಯೂ ಆಗಲಿ.

ಲೂಕ 10:1-11

ಸುವಾರ್ತಾಸೇವೆಗೆ ಹೊರಟ ಎಪ್ಪತ್ತೆರಡು ಮಂದಿ

10 ಇದಾದನಂತರ, ಯೇಸು ಇನೂ ಎಪ್ಪತ್ತೆರಡು[a] ಮಂದಿಯನ್ನು ಆರಿಸಿಕೊಂಡು ತಾನು ಹೋಗಬೇಕೆಂದು ಯೋಚಿಸಿದ ಪ್ರತಿಯೊಂದು ಪಟ್ಟಣಕ್ಕೂ ಸ್ಥಳಕ್ಕೂ ಅವರನ್ನು ಇಬ್ಬಿಬ್ಬರನ್ನಾಗಿ ಮುಂಚಿತವಾಗಿ ಕಳುಹಿಸಿದನು. ಯೇಸು ಅವರಿಗೆ, “ಬೆಳೆಯು ಬಹಳ, ಆದರೆ ಕೆಲಸಗಾರರು ಕೆಲವರೇ. ದೇವರೇ ಬೆಳೆಗೆ (ಜನರ) ಯಜಮಾನನು. ಬೆಳೆಯನ್ನು ಒಟ್ಟುಗೂಡಿಸುವುದಕ್ಕಾಗಿ ಹೆಚ್ಚು ಕೆಲಸಗಾರರನ್ನು ಕಳುಹಿಸಿಕೊಡುವಂತೆ ಯಜಮಾನನನ್ನು ಬೇಡಿಕೊಳ್ಳಿರಿ.

“ಈಗ ನೀವು ಹೋಗಬಹುದು. ಆದರೆ ನನ್ನ ಈ ಮಾತನ್ನು ಕೇಳಿರಿ! ತೋಳಗಳ ಮಧ್ಯೆ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನು ಕಳುಹಿಸುತ್ತಿದ್ದೇನೆ. ಕೈಚೀಲವನ್ನಾಗಲಿ ಹಣವನ್ನಾಗಲಿ ಅಥವಾ ಪಾದರಕ್ಷೆಗಳನ್ನಾಗಲಿ ತೆಗೆದುಕೊಂಡು ಹೋಗಬೇಡಿರಿ. ದಾರಿಯಲ್ಲಿ ನಿಂತುಕೊಂಡು ಜನರೊಡನೆ ಮಾತನಾಡಬೇಡಿ. ನೀವು ಮನೆಯೊಳಗೆ ಹೋಗುವ ಮೊದಲು, ‘ನಿಮಗೆ ಶುಭವಾಗಲಿ’ ಎಂದು ಹೇಳಿರಿ. ಆ ಮನೆಯಲ್ಲಿ ಶಾಂತಸ್ವಭಾವದ ಮನುಷ್ಯನಿದ್ದರೆ, ನಿಮ್ಮ ಆಶೀರ್ವಾದ ಅವನಿಗೆ ದೊರೆಯುವುದು. ಅವನು ಶಾಂತಸ್ವಭಾವದವನಾಗಿಲ್ಲದಿದ್ದರೆ ನಿಮ್ಮ ಆಶೀರ್ವಾದ ನಿಮಗೇ ಹಿಂತಿರುಗಿ ಬರುವುದು. ಆ ಮನೆಯಲ್ಲಿ ಇಳಿದುಕೊಂಡು ಅವರು ಕೊಡುವುದನ್ನು ತಿನ್ನಿರಿ, ಕುಡಿಯಿರಿ. ಕೆಲಸಗಾರನು ಸಂಬಳಕ್ಕೆ ಯೋಗ್ಯನಾಗಿದ್ದಾನೆ. ಆದ್ದರಿಂದ ಇಳಿದುಕೊಳ್ಳುವುದಕ್ಕಾಗಿ ಆ ಮನೆಯನ್ನು ಬಿಟ್ಟು ಇನ್ನೊಂದು ಮನೆಗೆ ಹೋಗಬೇಡಿರಿ.

“ನೀವು ಒಂದು ಊರಿಗೆ ಹೋದಾಗ ಆ ಊರಿನ ಜನರು ನಿಮ್ಮನ್ನು ಸ್ವಾಗತಿಸಿದರೆ, ಅವರು ಕೊಡುವ ಆಹಾರವನ್ನು ಊಟಮಾಡಿರಿ. ಅಲ್ಲಿಯ ರೋಗಿಗಳನ್ನು ವಾಸಿಮಾಡಿರಿ. ಅಲ್ಲಿಯ ಜನರಿಗೆ, ‘ದೇವರ ರಾಜ್ಯವು ಸಮೀಪಿಸುತ್ತಿದೆ!’ ಎಂದು ತಿಳಿಸಿರಿ.

10 “ಆದರೆ ನೀವು ಒಂದು ಊರಿಗೆ ಹೋದಾಗ, ಅಲ್ಲಿಯ ಜನರು ನಿಮ್ಮನ್ನು ಸ್ವಾಗತಿಸದಿದ್ದರೆ, ನೀವು ಆ ಊರಿನ ಬೀದಿಗಳಿಗೆ ಹೋಗಿ, 11 ‘ನಮ್ಮ ಕಾಲುಗಳಿಗೆ ಹತ್ತಿದ ನಿಮ್ಮ ಊರಿನ ಧೂಳನ್ನು ನಿಮಗೆ ವಿರುದ್ಧವಾಗಿ ಝಾಡಿಸಿಬಿಡುತ್ತೇವೆ. ದೇವರ ರಾಜ್ಯ ಸಮೀಪಿಸುತ್ತಿದೆ ಎಂಬುದು ನಿಮಗೆ ತಿಳಿದಿರಲಿ’ ಎಂದು ಹೇಳಿರಿ.

ಲೂಕ 10:16-20

16 “ನಿಮ್ಮ ಮಾತನ್ನು ಕೇಳುವವನು ನನ್ನ ಮಾತನ್ನೇ ಕೇಳುವವನಾಗಿದ್ದಾನೆ. ನಿಮ್ಮನ್ನು ಅಂಗೀಕರಿಸದವನು ನನ್ನನ್ನೇ ಅಂಗಿಕರಿಸದವನಾಗಿದ್ದಾನೆ. ನನ್ನನ್ನು ನಿರಾಕರಿಸುವವನು ನನ್ನನ್ನು ಕಳುಹಿಸಿದಾತನನ್ನೇ (ದೇವರು) ನಿರಾಕರಿಸುವವನಾಗಿದ್ದಾನೆ” ಎಂದು ಹೇಳಿದನು.

ಸೈತಾನನ ಬೀಳುವಿಕೆ

17 ಎಪ್ಪತ್ತೆರಡು ಮಂದಿ ಶಿಷ್ಯರು ತಮ್ಮ ಪ್ರವಾಸದಿಂದ ಹಿಂತಿರುಗಿ ಬಂದಾಗ ಬಹಳ ಸಂತೋಷವಾಗಿದ್ದರು. ಅವರು ಯೇಸುವಿಗೆ, “ಪ್ರಭುವೇ, ನಾವು ನಿನ್ನ ಹೆಸರನ್ನು ಹೇಳಿದಾಗ ದೆವ್ವಗಳು ಸಹ ನಮಗೆ ವಿಧೇಯವಾದವು!” ಎಂದು ಹೇಳಿದರು.

18 ಯೇಸು ಅವರಿಗೆ, “ಸೈತಾನನು ಮಿಂಚಿನೋಪಾದಿಯಲ್ಲಿ ಆಕಾಶದಿಂದ ಕೆಳಗೆ ಬೀಳುವುದನ್ನು ನಾನು ನೋಡಿದೆನು. 19 ಕೇಳಿರಿ! ಹಾವುಗಳ ಮತ್ತು ಚೇಳುಗಳ ಮೇಲೆ ನಡೆಯುವುದಕ್ಕೆ ನಿಮಗೆ ಅಧಿಕಾರ ಕೊಟ್ಟಿದ್ದೇನೆ. ವೈರಿಗಿರುವ ಅಧಿಕಾರಕ್ಕಿಂತಲೂ (ಸೈತಾನ) ಹೆಚ್ಚಿನ ಅಧಿಕಾರವನ್ನು ನಿಮಗೆ ಕೊಟ್ಟಿದ್ದೇನೆ. ಯಾವುದೂ ನಿಮಗೆ ಕೇಡು ಮಾಡುವುದಿಲ್ಲ. 20 ಹೌದು, ದೆವ್ವಗಳೂ ನಿಮಗೆ ವಿಧೇಯವಾಗುತ್ತವೆ. ಈ ಅಧಿಕಾರ ನಿಮಗಿದೆ ಎಂಬುದರ ನಿಮಿತ್ತ ಸಂತೋಷಪಡದೆ ನಿಮ್ಮ ಹೆಸರುಗಳು ಪರಲೋಕದಲ್ಲಿ ಬರೆಯಲ್ಪಟ್ಟಿವೆ ಎಂಬುದಕ್ಕಾಗಿ ಸಂತೋಷಪಡಿರಿ” ಅಂದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International