Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 82

ಸ್ತುತಿಗೀತೆ. ರಚನೆಗಾರ: ಆಸಾಫ.

82 ದೇವಾದಿದೇವನು ತನ್ನ ಸಭೆಯಲ್ಲಿ[a] ನಿಂತುಕೊಂಡು
    ದೇವರುಗಳಿಗೆ ನ್ಯಾಯತೀರ್ಪು ನೀಡುವನು.
ದೇವರು ಹೀಗೆನ್ನುತ್ತಾನೆ: “ಇನ್ನೆಷ್ಟರವರೆಗೆ ಅನ್ಯಾಯವಾಗಿ ತೀರ್ಪು ಕೊಡುತ್ತೀರಿ?
    ಇನ್ನೆಷ್ಟರವರೆಗೆ ದುಷ್ಟರನ್ನು ದಂಡಿಸದೆ ಬಿಡುಗಡೆ ಮಾಡುತ್ತೀರಿ?”

“ಅನಾಥರ ಮತ್ತು ಬಡಜನರ ಪರವಾಗಿ ವಾದಿಸಿರಿ.
    ಅನ್ಯಾಯಕ್ಕೆ ಒಳಗಾಗಿರುವ ಬಡವರ ಹಕ್ಕುಗಳನ್ನು ಸಂರಕ್ಷಿಸಿರಿ.
ಬಡವರಿಗೆ ಮತ್ತು ಅಸಹಾಯಕರಿಗೆ ಸಹಾಯ ಮಾಡಿರಿ.
    ಅವರನ್ನು ದುಷ್ಟರಿಂದ ರಕ್ಷಿಸಿರಿ.

“ಅವರಿಗೆ ಏನೂ ಗೊತ್ತಿಲ್ಲ.
    ಅವರಿಗೆ ಏನೂ ಅರ್ಥವಾಗುವುದಿಲ್ಲ!
ತಾವು ಮಾಡುತ್ತಿರುವುದೂ ಅವರಿಗೆ ತಿಳಿಯದು.
    ಅವರ ಪ್ರಪಂಚವು ಅವರ ಸುತ್ತಲೂ ಕುಸಿದುಬೀಳುತ್ತಿದೆ!”
ನಾಯಕರಾದ ನಿಮಗೆ ನಾನು ಹೇಳುವುದೇನೆಂದರೆ:
    “ನೀವು ದೇವರುಗಳು. ನೀವು ಮಹೋನ್ನತನಾದ ದೇವರ ಪುತ್ರರು.
ಆದರೆ ಎಲ್ಲಾ ಜನರಂತೆ ನೀವೂ ಸಾಯುವಿರಿ.
    ಬೇರೆಲ್ಲಾ ನಾಯಕರುಗಳಂತೆಯೇ ನೀವು ಸಾಯುವಿರಿ.”

ದೇವರೇ ಎದ್ದೇಳು! ನೀನೇ ನ್ಯಾಯಾಧೀಶನಾಗಿರು!
    ಎಲ್ಲಾ ಜನಾಂಗಗಳಿಗೆ ನೀನೇ ನಾಯಕನಾಗಿರು!

ಆಮೋಸ 2:12-3:8

12 “ಆದರೆ ನೀವು ನಾಜೀರರನ್ನು ದ್ರಾಕ್ಷಾರಸ ಕುಡಿಯುವಂತೆ ಮಾಡಿದಿರಿ. ಪ್ರವಾದಿಗಳನ್ನು ಪ್ರವಾದಿಸಬೇಡಿ ಎಂದು ಹೇಳಿದಿರಿ. 13 ನೀವು ನನಗೆ ಬಹು ಭಾರವಾಗಿದ್ದೀರಿ. ಬಂಡಿಯಲ್ಲಿ ಒತ್ತಿ ತುಂಬಿಸಿದಾಗ ಹೇಗೆ ಬಗ್ಗುತ್ತದೋ ಅದೇ ರೀತಿಯಲ್ಲಿ ನಾನು ಬಹುವಾಗಿ ಬಗ್ಗಿರುತ್ತೇನೆ. ಆದರೆ ನಾನು ನಿಮ್ಮನ್ನು ಅದೇ ರೀತಿಯಲ್ಲಿ ಬಗ್ಗಿಸುತ್ತೇನೆ.[a] 14 ಯಾರೂ ತಪ್ಪಿಸಿಕೊಳ್ಳಲಾರರು. ಅತಿ ವೇಗವಾದ ಓಟಗಾರರೂ ತಪ್ಪಿಸಿಕೊಳ್ಳಲಾರರು. ಬಲಶಾಲಿಗಳಿಗೂ ಶಕ್ತಿ ಸಾಲದು. ಸಿಪಾಯಿಗಳಿಗೂ ತಮ್ಮನ್ನು ಕಾಪಾಡಿಕೊಳ್ಳಲಾಗದು. 15 ಬಿಲ್ಲುಬಾಣ ಹಿಡಿದಿರುವವರೂ ಉಳಿಯರು. ವೇಗದ ಓಟಗಾರರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಕುದುರೆ ಮೇಲಿನ ಸವಾರರು ಜೀವಸಹಿತ ತಪ್ಪಿಸಿಕೊಳ್ಳುವುದಿಲ್ಲ. 16 ಆ ಸಮಯದಲ್ಲಿ ಅತಿ ಧೈರ್ಯಶಾಲಿಗಳೂ ರಣವೀರರೂ ಓಡಿಬಿಡುವರು. ತಮ್ಮ ಬಟ್ಟೆಗಳನ್ನು ಧರಿಸಿಕೊಳ್ಳಲೂ ಅವರಿಗೆ ಸಮಯವಿರುವುದಿಲ್ಲ.” ಇವು ಯೆಹೋವನ ನುಡಿ.

ಇಸ್ರೇಲಿಗೆ ಎಚ್ಚರಿಕೆಯ ಮಾತು

ಇಸ್ರೇಲಿನ ಜನರೇ, ಈ ಸಂದೇಶಕ್ಕೆ ಕಿವಿಗೊಡಿರಿ! ನಿಮ್ಮ ವಿಷಯವಾಗಿ ಯೆಹೋವನು ಹೀಗೆ ಹೇಳಿದ್ದಾನೆ. ಇಸ್ರೇಲೇ, ಇದು ನಾನು ಈಜಿಪ್ಟ್‌ನಿಂದ ಬಿಡಿಸಿಕೊಂಡು ಬಂದ ಎಲ್ಲಾ ಕುಟುಂಬಗಳವರ (ಇಸ್ರೇಲ್) ವಿಷಯವಾದ ಸಂದೇಶ. “ಈ ಭೂಮುಖದಲ್ಲಿ ಅನೇಕ ಕುಟುಂಬಗಳಿವೆ. ಅವರೆಲ್ಲರಲ್ಲಿ ನಿಮ್ಮನ್ನು ಮಾತ್ರವೇ ನಾನು ವಿಶೇಷ ರೀತಿಯಲ್ಲಿ ಬಲ್ಲೆನು. ಆದರೆ ನೀವು ನನಗೆ ವಿರುದ್ಧವಾದಿರಿ. ಆದ್ದರಿಂದ ನಾನು ನೀವು ಮಾಡಿದ ಪಾಪಗಳಿಗೆ ನಿಮ್ಮೆಲ್ಲರನ್ನು ಶಿಕ್ಷಿಸುವೆನು.”

ಇಸ್ರೇಲಿನ ಶಿಕ್ಷೆಯ ಕಾರಣ

ಇಬ್ಬರು ಒಟ್ಟಾಗಿ ನಡೆಯಬೇಕಾದರೆ
    ಅದಕ್ಕೆ ಅವರಿಬ್ಬರೂ ಒಪ್ಪಿಕೊಂಡಿರಲೇಬೇಕು.
ಅಡವಿಯಲ್ಲಿರುವ ಸಿಂಹವು
    ಪ್ರಾಣಿಯನ್ನು ಹಿಡಿದ ನಂತರವೇ ಗರ್ಜಿಸುವದು.
ಪ್ರಾಯದ ಸಿಂಹವು ತನ್ನ ಗವಿಯಲ್ಲಿ ಗರ್ಜಿಸಿದರೆ
    ಅದು ಒಂದು ಪ್ರಾಣಿಯನ್ನು ಹಿಡಿಯಿತು ಎಂದು ಅರ್ಥ.
ಬಲೆಯಲ್ಲಿ ಆಹಾರ ಹಾಕದಿದ್ದರೆ
    ಪಕ್ಷಿಯು ಬಲೆಯೊಳಗೆ ಸಿಕ್ಕಿಹಾಕಿಕೊಳ್ಳುವುದಿಲ್ಲ.
ಏನೂ ಸಿಕ್ಕಿಕೊಳ್ಳದೆ
    ಬೋನು ಮುಚ್ಚಿಕೊಳ್ಳುವುದೇ?
ತುತ್ತೂರಿಯ ಎಚ್ಚರಿಕೆಯ ಶಬ್ಧವನ್ನು ಕೇಳಿದ ಜನರು
    ಖಂಡಿತವಾಗಿ ಹೆದರಿ ನಡುಗುವರು.
ಒಂದು ಗಂಡಾಂತರವು ಪಟ್ಟಣಕ್ಕೆ ಬಂದಿರುವುದಾದರೆ
    ಅದನ್ನು ಬರಮಾಡಿದಾತನು ಯೆಹೋವನೇ.

ನನ್ನ ಒಡೆಯನಾದ ಯೆಹೋವನು ಒಂದು ಕಾರ್ಯವನ್ನು ಮಾಡಲು ನಿರ್ಧರಿಸಬಹುದು. ಆದರೆ ಆತನು ಹಾಗೆ ಮಾಡುವ ಮುಂಚಿತವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ಮುಂತಿಳಿಸುವನು. ಸಿಂಹವು ಗರ್ಜಿಸಿದಾಗ ಜನರಿಗೆ ಭಯವಾಗುವುದು. ಯೆಹೋವನು ಮಾತನಾಡಿದಾಗ ಪ್ರವಾದಿಗಳು ಪ್ರವಾದಿಸುವರು.

ಯೋಹಾನ 3:16-21

16 ಹೌದು, ದೇವರು ಲೋಕವನ್ನು ಎಷ್ಟೋ ಪ್ರೀತಿಸಿ ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಹೊಂದಬೇಕೆಂದು ಆತನನ್ನು ಕೊಟ್ಟನು. 17 ದೇವರು ತನ್ನ ಮಗನನ್ನು ಈ ಲೋಕಕ್ಕೆ ಕಳುಹಿಸಿದ್ದು, ಆತನ ಮೂಲಕವಾಗಿ ಈ ಲೋಕದ ಜನರನ್ನು ಅಪರಾಧಿಗಳೆಂದು ತೀರ್ಪು ಮಾಡುವುದಕ್ಕಾಗಿಯಲ್ಲ. ಈ ಲೋಕದವರು ರಕ್ಷಣೆ ಹೊಂದಿಕೊಳ್ಳಲೆಂದು ದೇವರು ಆತನನ್ನು ಕಳುಹಿಸಿಕೊಟ್ಟನು. 18 ದೇವರ ಮಗನಲ್ಲಿ ನಂಬಿಕೆ ಇಡುವವನಿಗೆ ತೀರ್ಪಾಗುವುದಿಲ್ಲ. ಆದರೆ ನಂಬದವನಿಗೆ ಆಗಲೇ ತೀರ್ಪಾಗಿದೆ. ಏಕೆಂದರೆ ಅವನು ದೇವರ ಒಬ್ಬನೇ ಮಗನಲ್ಲಿ ನಂಬಿಕೆ ಇಡಲಿಲ್ಲ. 19 ಆ ತೀರ್ಪು ಏನೆಂದರೆ: ಬೆಳಕು ಈ ಲೋಕಕ್ಕೆ ಬಂದಿದೆ, ಆದರೆ ಜನರು ಬೆಳಕನ್ನು ಅಪೇಕ್ಷಿಸದೆ ಕತ್ತಲೆಯನ್ನೇ ಬಯಸಿದರು. ಏಕೆಂದರೆ ಅವರು ದುಷ್ಕೃತ್ಯಗಳನ್ನು ಮಾಡುತ್ತಿದ್ದರು. 20 ಕೇಡನ್ನು ಮಾಡುವ ಪ್ರತಿಯೊಬ್ಬನೂ ಬೆಳಕನ್ನು ದ್ವೇಷಿಸುವನು. ಅವನು ಬೆಳಕಿಗೆ ಬರುವುದಿಲ್ಲ. ಏಕೆಂದರೆ ಅವನು ಮಾಡಿರುವ ಕೆಟ್ಟಕಾರ್ಯಗಳನ್ನೆಲ್ಲಾ ಬೆಳಕು ತೋರಿಸುತ್ತದೆ. 21 ಆದರೆ ಸತ್ಯಮಾರ್ಗವನ್ನು ಅನುಸರಿಸುವವನು ಬೆಳಕಿಗೆ ಬರುತ್ತಾನೆ. ಅವನು ಮಾಡಿರುವ ಕಾರ್ಯಗಳೆಲ್ಲಾ ದೇವರ ಮೂಲಕವಾಗಿ ಮಾಡಿದ ಕಾರ್ಯಗಳೆಂದು ಬೆಳಕು ತೋರಿಸುತ್ತದೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International