Revised Common Lectionary (Semicontinuous)
ಮಾಗಿದ ಹಣ್ಣಿನ ದರ್ಶನ
8 ಯೆಹೋವನು ನನಗೆ ಇದನ್ನು ತೋರಿಸಿದನು: ನಾನು ಒಂದು ಪುಟ್ಟಿ ಬೇಸಿಗೆಯ ಹಣ್ಣುಗಳನ್ನು ಕಂಡೆನು. 2 ಯೆಹೋವನು ನನಗೆ, “ಆಮೋಸನೇ, ನೀನು ಏನನ್ನು ನೋಡುತ್ತೀ?” ಎಂದು ಕೇಳಿದನು.
ಅದಕ್ಕೆ ನಾನು, “ಒಂದು ಪುಟ್ಟಿ ಬೇಸಿಗೆಯ ಹಣ್ಣುಗಳು” ಎಂದು ಹೇಳಿದೆನು.
ಆಗ ಯೆಹೋವನು ನನಗೆ, “ನನ್ನ ಜನರಾದ ಇಸ್ರೇಲರಿಗೆ ಅಂತ್ಯಕಾಲವು ಬಂದಿದೆ. ಇನ್ನು ಮೇಲೆ ನಾನು ಅವರನ್ನು ಸುಮ್ಮನೆ ಬಿಡುವುದಿಲ್ಲ. 3 ನನ್ನ ಆಲಯದಲ್ಲಿ ಹಾಡುವ ಹಾಡುಗಳು ಮರಣದ ಶೋಕಗೀತೆಗಳಾಗುವವು. ಇವು ಕರ್ತನಾದ ಯೆಹೋವನ ನುಡಿಗಳು. ಸತ್ತಹೆಣಗಳು ಎಲ್ಲೆಲ್ಲಿಯೂ ಬಿದ್ದುಕೊಂಡಿರುವವು. ಜನರು ಮೌನದಿಂದಿದ್ದು ಸತ್ತವರನ್ನು ಎತ್ತಿ ರಾಶಿಗೆ ಬಿಸಾಡುವರು.”
ಇಸ್ರೇಲಿನ ವರ್ತಕರಿಗೆ ಹಣ ಸಂಪಾದಿಸುವದೇ ಗುರಿ
4 ನನ್ನ ಮಾತುಗಳನ್ನು ಕೇಳಿರಿ! ಜನರೇ, ನೀವು ಬಡವರ ಮೇಲೆ ನಡೆದಾಡುತ್ತೀರಿ.
ಈ ದೇಶದ ಬಡಜನರನ್ನು ನಾಶಮಾಡುತ್ತೀರಿ.
5 ವರ್ತಕರಾದ ನೀವು ಹೇಳುವುದೇನೆಂದರೆ,
“ಅಮಾವಾಸ್ಯೆ ಯಾವಾಗ ಮುಗಿಯುವುದು?
ಆಗ ನಾವು ಧಾನ್ಯವನ್ನು ಮಾರಾಟ ಮಾಡುವೆವು.
ಸಬ್ಬತ್ ಯಾವಾಗ ಮುಗಿಯುವುದು?
ಆಗ ನಾವು ನಮ್ಮ ಗೋದಿಯನ್ನು ಮಾರಾಟ ಮಾಡಲು ತರುವೆವು.
ಅದರ ಬೆಲೆಯನ್ನು ಅಧಿಕಗೊಳಿಸಿ
ಅಳತೆಯನ್ನು ಕಡಿಮೆ ಮಾಡುವೆವು.
ತ್ರಾಸನ್ನು ಕಡಿಮೆ ಮಾಡಿ
ಜನರಿಗೆ ಮೋಸ ಮಾಡುವೆವು.
6 ಬಡಜನರಿಗೆ ಸಾಲ ಸಂದಾಯ ಮಾಡಲು ಸಾಧ್ಯವಾಗದಿರುವದರಿಂದ
ಅವರನ್ನು ನಾವು ಗುಲಾಮರನ್ನಾಗಿ ತೆಗೆದುಕೊಳ್ಳೋಣ.
ಒಂದು ಜೊತೆ ಚಪ್ಪಲಿಯ ಕ್ರಯಕೊಟ್ಟು
ಅವರನ್ನು ಖರೀದಿಸೋಣ.
ಮತ್ತು ನೆಲದಲ್ಲಿ ಬಿದ್ದ ಗೋದಿಯನ್ನು
ಒಟ್ಟುಗೂಡಿಸಿ ಮಾರೋಣ.”
7 ಯೆಹೋವನು “ಯಾಕೋಬನ ಮಹಿಮೆ” ಎಂಬ ತನ್ನ ಹೆಸರಿನ ಮೇಲೆ ಆಣೆಯಿಟ್ಟು ವಾಗ್ದಾನ ಮಾಡಿದ್ದಾನೆ.
“ಆ ಜನರು ಮಾಡಿದ ಕೃತ್ಯಗಳನ್ನು ನಾನು ಎಂದಿಗೂ ಮರೆಯುವುದಿಲ್ಲ.
8 ಅದರ ಸಲುವಾಗಿ ಇಡೀ ದೇಶವು ಅಲುಗಾಡುವದು.
ಸತ್ತವರಿಗಾಗಿ ದೇಶದ ಪ್ರತಿ ನಿವಾಸಿಯೂ ರೋಧಿಸುವನು.
ಈಜಿಪ್ಟಿನ ನೈಲ್ ನದಿಯ ರೀತಿಯಲ್ಲಿ ದೇಶವು ತಿರುಗುಮುರುಗಾಗುವುದು.”
9 ಯೆಹೋವನು ಹೀಗೆನ್ನುತ್ತಾನೆ,
“ಆ ದಿವಸಗಳಲ್ಲಿ ನಡುಮಧ್ಯಾಹ್ನದಲ್ಲಿಯೇ ಸೂರ್ಯನನ್ನು ಮುಳುಗುವಂತೆ ಮಾಡುವೆನು.
ಶುಭ್ರವಾದ ಹಗಲಿನಲ್ಲಿ ಕತ್ತಲು ಉಂಟಾಗುವಂತೆ ಮಾಡುವೆನು.
10 ನಿಮ್ಮ ಸಂತಸದ ದಿವಸಗಳನ್ನು ಸತ್ತವರಿಗಾಗಿ ರೋದಿಸುವ ದಿವಸಗಳನ್ನಾಗಿ ಮಾಡುವೆನು.
ನಿಮ್ಮ ಹಾಡುಗಳೆಲ್ಲಾ ಶೋಕಗೀತೆಯಾಗುವವು.
ಎಲ್ಲರೂ ಶೋಕಬಟ್ಟೆಯನ್ನು ಧರಿಸುವಂತೆ ಮಾಡುವೆನು.
ಪ್ರತಿ ತಲೆಯನ್ನು ಬೋಳು ತಲೆಯನ್ನಾಗಿ ಮಾಡುವೆನು.
ಒಬ್ಬನೇ ಮಗನನ್ನು ಕಳೆದುಕೊಳ್ಳುವಾಗ ರೋದಿಸುವ ಹಾಗೆ
ಗಟ್ಟಿಯಾಗಿ ರೋದಿಸುವಂತೆ ಮಾಡುತ್ತೇನೆ.
ಅದರ ಅಂತ್ಯ ಕಹಿಯಾಗಿರುವುದು.”
ದೇವರ ವಾಕ್ಯಕ್ಕಾಗಿ ಅತಿಯಾದ ಹಸಿವೆಯಿಂದ ಕೇಳುವ ದಿವಸಗಳು ಬರುವವು
11 ಯೆಹೋವನು ಹೇಳುವುದೇನೆಂದರೆ,
“ನಿಮ್ಮ ದೇಶದಲ್ಲಿ ಹಸಿವೆಯ
ದಿವಸಗಳನ್ನು ಬರಮಾಡುವೆನು.
ಜನರು ರೊಟ್ಟಿಗಾಗಿ ಹಸಿಯುವುದಿಲ್ಲ.
ನೀರಿಗಾಗಿ ಬಾಯಾರುವದಿಲ್ಲ.
ಇಲ್ಲ! ಜನರು ಯೆಹೋವನ ವಾಕ್ಯಕ್ಕಾಗಿ ಹಸಿವೆಯುಳ್ಳವರಾಗುವರು.
12 ಮೃತ್ಯುಸಮುದ್ರದಿಂದ ಮೆಡಿಟರೇನಿಯನ್ ಸಮುದ್ರದ ತನಕ,
ಉತ್ತರದಿಂದ ಪೂರ್ವದಿಕ್ಕಿನ ತನಕ ಜನರು
ಯೆಹೋವನ ಸಂದೇಶಕ್ಕಾಗಿ ಹಾತೊರೆಯುತ್ತಾ ಅಲೆದಾಡುವರು.
ಆದರೆ ಅವರು ಕಂಡುಕೊಳ್ಳುವುದಿಲ್ಲ.
ಎದೋಮ್ಯನಾದ ದೋಯೇಗನು ಸೌಲನ ಬಳಿಗೆ ಹೋಗಿ, “ದಾವೀದನು ಅಹೀಮೆಲೆಕನ ಮನೆಯಲ್ಲಿದ್ದಾನೆ” ಎಂದು ತಿಳಿಸಿದಾಗ ರಚಿಸಲ್ಪಟ್ಟ ಕೀರ್ತನೆಯಿದು. ರಚನೆಗಾರ: ದಾವೀದ.
52 ದುಷ್ಟಾಧಿಕಾರಿಯೇ, ನಿನ್ನ ದುಷ್ಕೃತ್ಯಗಳ ಕುರಿತು ಜಂಬಪಡುವುದೇಕೇ?
ದೇವರ ದೃಷ್ಟಿಗೆ ನೀನು ಅಸಹ್ಯಕರವಾಗಿರುವೆ.
2 ಮೋಸಗಾರನೇ, ನಿನ್ನ ನಾಲಗೆಯು ಹರಿತವಾದ ಕ್ಷೌರ ಕತ್ತಿಯಂತಿದ್ದು
ನಾಶನದ ಸಂಚುಗಳನ್ನೇ ಮಾಡುವುದು.
3 ಒಳ್ಳೆಯದಕ್ಕಿಂತಲೂ ಕೆಟ್ಟದ್ದನ್ನೇ ನೀನು ಹೆಚ್ಚು ಪ್ರೀತಿಸುವೆ.
ನಿನಗೆ ಸತ್ಯಕ್ಕಿಂತಲೂ ಸುಳ್ಳೇ ಇಷ್ಟ.
4 ಮೋಸದ ನಾಲಿಗೆಯೇ, ಹಾನಿಕರವಾದ ಮಾತುಗಳೇ ನಿನಗೆ ಇಷ್ಟ.
5 ದೇವರು ನಿನ್ನನ್ನು ಶಾಶ್ವತವಾಗಿ ನಾಶಮಾಡುವನು,
ಗಿಡವನ್ನು ಬೇರು ಸಹಿತ ಕಿತ್ತುಹಾಕುವಂತೆ ಆತನು ನಿನ್ನನ್ನು ಹಿಡಿದು ನಿನ್ನ ಮನೆಯೊಳಗಿಂದ[a] ಕಿತ್ತು ಬೀಸಾಡುವನು.
6 ಒಳ್ಳೆಯವರು ಇದನ್ನು ಕಂಡು
ದೇವರಲ್ಲಿ ಭಯಭಕ್ತಿಯುಳ್ಳವರಾಗುವರು.
ಅವರು ನಿಮ್ಮನ್ನು ನೋಡಿ ನಗುತ್ತಾ ಹೀಗೆನ್ನುವರು:
7 “ದೇವರ ಮೇಲೆ ಅವಲಂಬಿಸಿಕೊಳ್ಳದ ಇವನಿಗೆ ಏನಾಯಿತು?
ತನ್ನ ಐಶ್ವರ್ಯವೂ ಸುಳ್ಳುಗಳೂ ತನ್ನನ್ನು ಕಾಪಾಡುತ್ತವೆ ಎಂದು ಭಾವಿಸಿಕೊಂಡವನು ಇವನೇ.”
8 ನಾನಾದರೋ ದೇವರ ಆಲಯದ ಅಂಗಳದಲ್ಲಿ ಹಸಿರಸಿರಾಗಿ ಬೆಳೆಯುವ ಆಲೀವ್ ಮರದಂತಿದ್ದೇನೆ.
ನಾನು ದೇವರ ಶಾಶ್ವತವಾದ ಪ್ರೀತಿಯಲ್ಲೇ ಯಾವಾಗಲೂ ಭರವಸವಿಟ್ಟಿರುವೆ.
9 ದೇವರೇ, ನಿನ್ನ ಉಪಕಾರಗಳಿಗಾಗಿ ನಾನು ನಿನ್ನನ್ನು ಎಂದೆಂದಿಗೂ ಕೊಂಡಾಡುವೆನು.
ನಿನ್ನ ಹೆಸರಿನಲ್ಲೇ ಭರವಸವಿಟ್ಟಿರುವೆ; ಯಾಕೆಂದರೆ ನಿನ್ನ ಹೆಸರು ಎಷ್ಟೋ ಒಳ್ಳೆಯದು.
ನಿನ್ನ ಪವಿತ್ರ ಜನರ ಸನ್ನಿಧಿಯಲ್ಲಿ ನಿನ್ನನ್ನು ಕೊಂಡಾಡುವೆನು.
ನಾವು ಕ್ರಿಸ್ತನ ಕಡೆಗೆ ನೋಡುವಾಗ ದೇವರನ್ನೇ ಕಾಣುತ್ತೇವೆ
15 ದೇವರನ್ನು ನೋಡಲು ಯಾವ ವ್ಯಕ್ತಿಗೂ ಸಾಧ್ಯವಿಲ್ಲ.
ಆದರೆ ಯೇಸುವು ದೇವರ ಪ್ರತಿರೂಪಿಯಾಗಿದ್ದಾನೆ.
ಸೃಷ್ಟಿಸಲ್ಪಟ್ಟವುಗಳಿಗೆಲ್ಲಾ ಯೇಸು ಅಧಿಪತಿಯಾಗಿದ್ದಾನೆ.
16 ಭೂಲೋಕ ಮತ್ತು ಪರಲೋಕಗಳಲ್ಲಿರುವ ಎಲ್ಲವುಗಳು,
ದೃಶ್ಯ ಮತ್ತು ಅದೃಶ್ಯವಾದವುಗಳು, ಆತ್ಮಿಕ ಶಕ್ತಿಗಳು,
ಪ್ರಭುತ್ವಗಳು ಆತನ ಶಕ್ತಿಯಿಂದ ನಿರ್ಮಿತವಾಗಿವೆ. ಅಧಿಪತಿಗಳು ಮತ್ತು ಅಧಿಕಾರಿಗಳು ಆತನ ಶಕ್ತಿಯಿಂದ ನಿರ್ಮಿತರಾದರು.
ಸಮಸ್ತವೂ ಕ್ರಿಸ್ತನ ಮೂಲಕವಾಗಿ ಆತನಿಗೋಸ್ಕರ ಸೃಷ್ಟಿಸಲ್ಪಟ್ಟವು.
17 ಅವುಗಳಿಗಿಂತ ಮೊದಲೇ ಕ್ರಿಸ್ತನಿದ್ದನು.
ಸಮಸ್ತಕ್ಕೂ ಆತನೇ ಆಧಾರಭೂತನಾಗಿದ್ದಾನೆ.
18 ಕ್ರಿಸ್ತನು ದೇಹಕ್ಕೆ (ಸಭೆಯ) ಶಿರಸ್ಸಾಗಿದ್ದಾನೆ.
ಪ್ರತಿಯೊಂದೂ ಆತನಿಂದಲೇ ಬರುತ್ತದೆ.
ಮರಣದಿಂದ ಪ್ರಥಮವಾಗಿ ಎದ್ದುಬಂದವನು ಆತನೇ.
ಆದ್ದರಿಂದ ಎಲ್ಲಾದರಲ್ಲಿಯೂ ಯೇಸುವೇ ಅತ್ಯಂತ ಪ್ರಾಮುಖ್ಯನಾಗಿದ್ದಾನೆ.
19 ಆತನಲ್ಲಿ ತನ್ನ ಸರ್ವಸಂಪೂರ್ಣತೆಯು ನೆಲಸಿರಬೇಕೆಂಬುದೂ,
20 ಆತನು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ಸಮಾಧಾನವನ್ನು ಉಂಟುಮಾಡಿ
ಭೂಪರಲೋಕಗಳಲ್ಲಿರುವ ಸಮಸ್ತವನ್ನು
ತನಗೆ ಸಂಧಾನಪಡಿಸಿಕೊಳ್ಳಬೇಕೆಂಬುದೂ ದೇವರ ಚಿತ್ತವಾಗಿತ್ತು.
21 ಒಂದು ಕಾಲದಲ್ಲಿ ನೀವು ದೇವರಿಂದ ಬೇರ್ಪಟ್ಟಿದ್ದಿರಿ, ದುಷ್ಕೃತ್ಯಗಳನ್ನು ಮಾಡುತ್ತಾ ನಿಮ್ಮ ಮನಸ್ಸುಗಳಲ್ಲಿ ದೇವರಿಗೆ ಶತ್ರುಗಳಾಗಿದ್ದಿರಿ. 22 ಈಗಲಾದರೋ ಕ್ರಿಸ್ತನು ಶರೀರಧಾರಿಯಾಗಿ ಈ ಲೋಕದಲ್ಲಿದ್ದಾಗ ತನ್ನ ಪ್ರಾಣವನ್ನೇ ಕೊಡುವುದರ ಮೂಲಕ ನಿಮಗೂ ದೇವರಿಗೂ ಸಂಧಾನ ಮಾಡಿದ್ದಾನೆ. ನಿಮ್ಮನ್ನು ಪರಿಶುದ್ಧರನ್ನಾಗಿಯೂ ನಿಷ್ಕಳಂಕರನ್ನಾಗಿಯೂ ನಿರ್ದೋಷಿಗಳನ್ನಾಗಿಯೂ ದೇವರ ಸನ್ನಿಧಿಯಲ್ಲಿ ನಿಲ್ಲಿಸಬೇಕೆಂಬುದೇ ಕ್ರಿಸ್ತನ ಉದ್ದೇಶವಾಗಿತ್ತು. 23 ನೀವು ಕೇಳಿದ ಸುವಾರ್ತೆಯ ಮೇಲೆ ನಿಮಗಿರುವ ನಂಬಿಕೆಯಲ್ಲಿ ದೃಢವಾಗಿ ನೆಲೆಗೊಂಡಿದ್ದು ಅದರಿಂದುಂಟಾಗುವ ನಿರೀಕ್ಷೆಯನ್ನು ಬಿಟ್ಟು ಹೋಗದಿದ್ದರೆ ಇದು ಸಾಧ್ಯ. ಈ ಸುವಾರ್ತೆಯನ್ನು ಪ್ರಪಂಚದ ಜನರಿಗೆಲ್ಲ ಸಾರಲಾಗಿದೆ. ಪೌಲನಾದ ನಾನು ಈ ಸುವಾರ್ತೆಯನ್ನು ಸಾರುವ ಸೇವಕನಾದೆನು.
ಸಭೆಗಾಗಿ ಪೌಲನ ಕಾರ್ಯ
24 ನಾನು ನಿಮಗಾಗಿ ಅನುಭವಿಸಿದ ಬಾಧೆಗಳಿಂದ ನನಗೆ ಸಂತೋಷವಾಗಿದೆ. ಕ್ರಿಸ್ತನು ಸಭೆಯೆಂಬ ತನ್ನ ದೇಹದ ಮೂಲಕ ಇನ್ನೂ ಅನೇಕ ಸಂಕಟಗಳನ್ನು ಅನುಭವಿಸಬೇಕಾಗಿದೆ. ಈ ಸಂಕಟಗಳಲ್ಲಿ ನಾನು ಅನುಭವಿಸಬೇಕಾದವುಗಳನ್ನು ಆತನ ದೇಹಕ್ಕೋಸ್ಕರ ನನ್ನ ದೇಹದಲ್ಲಿ ಅನುಭವಿಸುತ್ತೇನೆ. 25 ನಾನು ಸಭೆಗೆ ಸೇವಕನಾದೆನು. ಏಕೆಂದರೆ ದೇವರು ನನಗೆ ವಿಶೇಷವಾದ ಕಾರ್ಯವನ್ನು ಮಾಡುವಂತೆ ಆಜ್ಞಾಪಿಸಿದನು. ಈ ಕಾರ್ಯವು ನಿಮಗೆ ಸಹಾಯ ಮಾಡುವುದು. ದೇವರ ಉಪದೇಶವನ್ನು ಸಂಪೂರ್ಣವಾಗಿ ತಿಳಿಸುವುದೇ ಆ ಕಾರ್ಯ. 26 ಆದಿಕಾಲದಿಂದಲೂ ಅಡಗಿಸಿಟ್ಟಿದ್ದ ರಹಸ್ಯಸತ್ಯವೇ ಈ ಉಪದೇಶ. ಈ ಸತ್ಯವನ್ನು ಎಲ್ಲಾ ಜನರಿಗೆ ಮರೆಮಾಡಲಾಗಿತ್ತು. ಈಗಲಾದರೋ ಈ ರಹಸ್ಯಸತ್ಯವನ್ನು ದೇವರ ಪವಿತ್ರ ಜನರಿಗೆ ತಿಳಿಸಲಾಗಿದೆ. 27 ಮಹಿಮಾತಿಶಯವಾದ ಈ ಸತ್ಯವನ್ನು ಎಲ್ಲಾ ಜನರಿಗೆ ತಿಳಿಸಲು ದೇವರು ತೀರ್ಮಾನಿಸಿದನು. ಈ ಮಹಾಸತ್ಯವು ಎಲ್ಲಾ ಜನರಿಗಾಗಿ ಪ್ರಕಟವಾಯಿತು. ನಿಮ್ಮಲ್ಲಿರುವ ಕ್ರಿಸ್ತನೇ ಆ ಸತ್ಯವಾಗಿದ್ದಾನೆ. ದೇವರ ಮಹಿಮೆಯಲ್ಲಿ ಪಾಲುಹೊಂದಲು ಆತನೇ ನಮಗಿರುವ ಏಕೈಕ ನಿರೀಕ್ಷೆ. 28 ಆದ್ದರಿಂದಲೇ ನಾವು ಕ್ರಿಸ್ತನ ಬಗ್ಗೆ ಜನರಿಗೆ ತಿಳಿಸುವವರಾಗಿದ್ದೇವೆ. ಪ್ರತಿಯೊಬ್ಬರನ್ನೂ ಬಲಪಡಿಸುವುದಕ್ಕಾಗಿ ಪ್ರತಿಯೊಬ್ಬರಿಗೂ ಉಪದೇಶಿಸುವುದಕ್ಕಾಗಿ ನಮ್ಮ ಜ್ಞಾನವನ್ನೆಲ್ಲಾ ಉಪಯೋಗಿಸುತ್ತೇವೆ. ಪ್ರತಿಯೊಬ್ಬರನ್ನು ಕ್ರಿಸ್ತನಲ್ಲಿ ಸಂಪೂರ್ಣ ಆತ್ಮಿಕರನ್ನಾಗಿ ಮಾಡಿ ದೇವರ ಸನ್ನಿಧಿಗೆ ತರಲು ಪ್ರಯತ್ನಿಸುತ್ತೇವೆ.
ಮರಿಯಳು ಮತ್ತು ಮಾರ್ಥಳು
38 ಯೇಸು ಮತ್ತು ಆತನ ಶಿಷ್ಯರು ಪ್ರಯಾಣ ಮಾಡುತ್ತಾ ಒಂದು ಊರಿಗೆ ಬಂದರು. ಮಾರ್ಥಳೆಂಬ ಸ್ತ್ರೀ ಯೇಸುವನ್ನು ತನ್ನ ಮನೆಗೆ ಆಮಂತ್ರಿಸಿದಳು. 39 ಆಕೆಗೆ ಮರಿಯಳೆಂಬ ತಂಗಿ ಇದ್ದಳು. ಮರಿಯಳು ಯೇಸುವಿನ ಪಾದಗಳ ಬಳಿ ಕುಳಿತುಕೊಂಡು ಆತನ ಉಪದೇಶವನ್ನು ಕೇಳುತ್ತಿದ್ದಳು. ಆದರೆ ಆಕೆಯ ಸಹೋದರಿಯಾದ ಮಾರ್ಥಳು ಅತಿಥಿಸತ್ಕಾರ ಮಾಡುತ್ತಿದ್ದಳು. 40 ಮನೆಯಲ್ಲಿ ಬಹಳ ಕೆಲಸವಿದ್ದುದರಿಂದ ಮಾರ್ಥಳು ಕೋಪಗೊಂಡು ಯೇಸುವಿನ ಬಳಿಗೆ ಬಂದು, “ಪ್ರಭುವೇ, ನನ್ನ ತಂಗಿಯು ಮನೆಯ ಕೆಲಸವನ್ನೆಲ್ಲಾ ನನಗೇ ಬಿಟ್ಟುಬಂದಿದ್ದಾಳೆ. ಇದರ ಬಗ್ಗೆ ನಿನಗೆ ಚಿಂತೆಯಿಲ್ಲವೋ? ನನಗೆ ಸಹಾಯ ಮಾಡಲು ಆಕೆಗೆ ಹೇಳು?” ಎಂದಳು.
41 ಆದರೆ ಪ್ರಭುವು ಅವಳಿಗೆ, “ಮಾರ್ಥಾ, ಮಾರ್ಥಾ, ನೀನು ಅನೇಕ ಕೆಲಸಗಳ ಬಗ್ಗೆ ಚಿಂತಿಸುತ್ತಾ ಗಲಿಬಿಲಿಯಾಗಿರುವೆ. 42 ಒಂದೇ ಒಂದು ಮುಖ್ಯವಾದದ್ದು. ಮರಿಯಳು ಮಾಡಿದ ಆಯ್ಕೆ ಸರಿಯಾದದ್ದು. ಆಕೆಯಿಂದ ಅದು ಎಂದಿಗೂ ತೆಗೆಯಲ್ಪಡುವುದಿಲ್ಲ” ಎಂದನು.
Kannada Holy Bible: Easy-to-Read Version. All rights reserved. © 1997 Bible League International