Revised Common Lectionary (Semicontinuous)
ಬೆನ್ಯಾಮೀನ್ ಕುಲದವನಾದ ಕೂಷನ ಮಾತುಗಳ ವಿಷಯದಲ್ಲಿ ರಚಿಸಲ್ಪಟ್ಟಿದೆ. ರಚನೆಗಾರ: ದಾವೀದ.
7 ನನ್ನ ದೇವರಾದ ಯೆಹೋವನೇ, ನಿನ್ನನ್ನೇ ಆಶ್ರಯಿಸಿಕೊಂಡಿರುವೆ.
ನನ್ನನ್ನು ಹಿಂದಟ್ಟುತ್ತಿರುವವರಿಂದ ನನ್ನನ್ನು ತಪ್ಪಿಸಿ ಕಾಪಾಡು!
2 ನೀನು ನನಗೆ ಸಹಾಯ ಮಾಡದಿದ್ದರೆ, ಸಿಂಹದ ಬಾಯಿಗೆ ಸಿಕ್ಕಿಕೊಂಡಿರುವ ಪ್ರಾಣಿಯಂತಾಗುವೆನು;
ರಕ್ಷಣೆಯೇ ಇಲ್ಲದವನಾಗಿ ಸೀಳಿಹಾಕಲ್ಪಡುವೆನು.
3 ನನ್ನ ದೇವರಾದ ಯೆಹೋವನೇ, ನಾನು ಯಾವುದೇ ಅಪರಾಧವನ್ನು ಮಾಡಿದ್ದರೆ,
4 ಸ್ನೇಹಿತನೊಬ್ಬನಿಗೆ ಕೆಟ್ಟದ್ದೇನಾದರೂ ಮಾಡಿದ್ದರೆ,
ಶತ್ರುವಿನಿಂದ ಅನ್ಯಾಯವಾಗಿ ಏನನ್ನಾದರೂ ದೋಚಿಕೊಂಡಿದ್ದರೆ,
5 ಇವುಗಳಲ್ಲಿ ನಾನು ಯಾವುದನ್ನೇ ಮಾಡಿದ್ದರೂ,
ಶತ್ರುವು ನನ್ನನ್ನು ಹಿಂದಟ್ಟಿ ಬಂದು ನನ್ನನ್ನು ಹಿಡಿದು ನೆಲಕ್ಕೆ ಕೆಡವಿ ತುಳಿಯಲಿ;
ನನ್ನ ಪ್ರಾಣವನ್ನು ಮಣ್ಣುಪಾಲು ಮಾಡಲಿ.
6 ಯೆಹೋವನೇ, ಎದ್ದೇಳು, ನಿನ್ನ ಕೋಪವನ್ನು ತೋರು!
ನನ್ನ ವೈರಿಯು ಕೋಪಗೊಂಡಿದ್ದಾನೆ. ಅವನಿಗೆ ವಿರೋಧವಾಗಿ ಎದ್ದುನಿಂತು ಹೋರಾಡು.
ನನ್ನ ದೇವರೇ, ಎದ್ದೇಳು, ನ್ಯಾಯಕ್ಕಾಗಿ ಒತ್ತಾಯಿಸು!
7 ಜನಾಂಗಗಳನ್ನು ನಿನ್ನ ಸುತ್ತಲೂ ಸೇರಿಸಿ
ನಿನ್ನ ಉನ್ನತಸ್ಥಾನದಲ್ಲಿ ಆಸೀನನಾಗು.
8 ಜನರಿಗೆ ನ್ಯಾಯತೀರಿಸು.
ಯೆಹೋವನೇ, ನನಗೆ ನ್ಯಾಯತೀರಿಸು.
ನನ್ನನ್ನು ನೀತಿವಂತನೆಂದೂ ನಿರಪರಾಧಿಯೆಂದೂ ನಿರೂಪಿಸು.
9 ಕೆಟ್ಟವರನ್ನು ದಂಡಿಸು,
ಒಳ್ಳೆಯವರಿಗೆ ಸಹಾಯಮಾಡು.
ದೇವರೇ ನೀನು ಒಳ್ಳೆಯವನು;
ಮನುಷ್ಯರ ಅಂತರಾಳವನ್ನು ನೀನು ಪರಿಶೋಧಿಸಬಲ್ಲೆ.
10 ನನ್ನ ಗುರಾಣಿಯು ದೇವರೇ.
ಆತನು ಯಥಾರ್ಥವಂತರನ್ನು ರಕ್ಷಿಸುವನು.
11 ದೇವರು ನೀತಿವಂತನಾದ ನ್ಯಾಯಾಧೀಶನಾಗಿದ್ದಾನೆ.
ಆತನು ದುಷ್ಟರ ವಿಷಯದಲ್ಲಿ ಯಾವಾಗಲೂ ಕೋಪವುಳ್ಳವನು.
12 ಆತನು ತಾನು ಮಾಡಿದ ತೀರ್ಮಾನವನ್ನು ಬದಲಾಯಿಸುವುದಿಲ್ಲ.
13 ದುಷ್ಟರನ್ನು ಶಿಕ್ಷಿಸಲು ಆತನು ಸಿದ್ಧನಾಗಿದ್ದಾನೆ.[a]
14 ಕೆಲವರು ದುಷ್ಕೃತ್ಯಗಳನ್ನು ಮಾಡುವುದಕ್ಕಾಗಿಯೇ ಆಲೋಚಿಸುತ್ತಿರುವರು.
ಅವರು ಸಂಚುಗಳನ್ನು ಮಾಡುತ್ತಾ ಸುಳ್ಳಾಡುವರು.
15 ಅವರು ಇತರರನ್ನು ಬಲೆಗೆ ಸಿಕ್ಕಿಸಿ ಕೇಡುಮಾಡಬೇಕೆಂದಿದ್ದಾರೆ;
ಆದರೆ ತಾವೇ ಆ ಬಲೆಗಳಿಗೆ ಸಿಕ್ಕಿಕೊಳ್ಳುವರು.
16 ಅವರು ತಮ್ಮ ಕುಯುಕ್ತಿಗೆ ತಕ್ಕ ದಂಡನೆಯನ್ನು ಹೊಂದುವರು.
ಅವರು ಇತರರ ವಿಷಯದಲ್ಲಿ ಕ್ರೂರವಾಗಿ ನಡೆದುಕೊಂಡರು.
ಅವರು ಮಾಡಿದ ಹಿಂಸೆಯು ಅವರಿಗೇ ಸಂಭವಿಸುವುದು.
17 ಯೆಹೋವನ ನ್ಯಾಯವಾದ ತೀರ್ಪಿಗಾಗಿ ಆತನನ್ನು ಕೊಂಡಾಡುವೆನು.
ಮಹೋನ್ನತನಾದ ಯೆಹೋವನ ಹೆಸರನ್ನು ಸ್ತುತಿಸುವೆನು.
9-10 ಅಷ್ಡೋದ್ ಮತ್ತು ಈಜಿಪ್ಟಿನ ಉನ್ನತ ಬುರುಜುಗಳ ಬಳಿಗೆ ಹೋಗಿ ಈ ಸಂದೇಶವನ್ನು ಸಾರಿರಿ, “ಸಮಾರ್ಯದ ಪರ್ವತಗಳ ಬಳಿಗೆ ಬನ್ನಿರಿ. ಅಲ್ಲಿ ಒಂದು ದೊಡ್ಡ ಗಲಿಬಿಲಿಯನ್ನು ನೋಡುವಿರಿ. ಯಾಕೆಂದರೆ ಜನರಿಗೆ ಸರಿಯಾಗಿ ಜೀವಿಸುವ ರೀತಿ ಗೊತ್ತಿಲ್ಲ. ಅವರು ಜನರೊಂದಿಗೆ ಕ್ರೂರವಾಗಿ ವರ್ತಿಸುವರು. ಬೇರೆ ಜನರಿಂದ ವಸ್ತುಗಳನ್ನು ತೆಗೆದುಕೊಂಡು ಅವುಗಳನ್ನು ಉನ್ನತ ಬುರುಜುಗಳಲ್ಲಿ ಅಡಗಿಸಿಡುವರು. ಯುದ್ಧದಲ್ಲಿ ಸೂರೆ ಮಾಡಿದ ವಸ್ತುಗಳಿಂದ ಅವರ ಖಜಾನೆಯು ತುಂಬಿರುವದು.”
11 ಆದ್ದರಿಂದ ಯೆಹೋವನು ಹೇಳುವುದೇನೆಂದರೆ, “ಆ ದೇಶಕ್ಕೆ ಒಬ್ಬ ಶತ್ರುವು ಬರುವನು. ಅವನು ನಿಮ್ಮ ಬಲವನ್ನೇ ಮುರಿಯುವನು. ನೀವು ಉನ್ನತ ಬುರುಜುಗಳಲ್ಲಿ ಅಡಿಗಿಸಿಟ್ಟಿದ್ದ ವಸ್ತುಗಳನ್ನು ಕಿತ್ತುಕೊಳ್ಳುವನು.”
12 ಯೆಹೋವನು ಹೇಳುವುದೇನೆಂದರೆ,
“ಒಂದುವೇಳೆ ಸಿಂಹವು ಒಂದು ಕುರಿಮರಿಯ ಮೇಲೆ ಎರಗಿದರೆ
ಕುರುಬನು ಅದನ್ನು ರಕ್ಷಿಸಲು ಪ್ರಯತ್ನಿಸಾನು.
ಆದರೆ ಕುರುಬನು ಆ ಕುರಿಮರಿಯ
ಒಂದು ಭಾಗವನ್ನು ಮಾತ್ರ ಕಾಪಾಡಿಯಾನು.
ಸಿಂಹದ ಬಾಯಿಂದ ಕುರಿಯ ಎರಡು ಕಾಲುಗಳನ್ನೋ
ಕಿವಿಯ ಒಂದು ಭಾಗವನ್ನೋ ಎಳೆದು ರಕ್ಷಿಸಿಯಾನು.
ಅದೇ ರೀತಿಯಲ್ಲಿ ಬಹುತೇಕ ಇಸ್ರೇಲರು ರಕ್ಷಿಸಲ್ಪಡುವದಿಲ್ಲ.
ಸಮಾರ್ಯದಲ್ಲಿರುವ ಜನರು ತಮ್ಮ ಹಾಸಿಗೆಯ ಒಂದು ಮೂಲೆಯನ್ನಾಗಲಿ
ಅಥವಾ ಮಂಚದ ಮೇಲಿನ ಬಟ್ಟೆಯ ಒಂದು ತುಂಡನ್ನಾಗಲಿ ಉಳಿಸಿಕೊಳ್ಳುವರು.”
13 ಸರ್ವಶಕ್ತನೂ ನನ್ನ ಒಡೆಯನೂ ಆಗಿರುವ ದೇವರಾದ ಯೆಹೋವನು ಹೀಗೆ ಹೇಳುತ್ತಾನೆ, “ಯಾಕೋಬನ ಕುಟುಂಬದವರಿಗೆ ಈ ವಿಷಯವನ್ನು ತಿಳಿಸು. 14 ಇಸ್ರೇಲು ಪಾಪಮಾಡಿದೆ. ಅದಕ್ಕಾಗಿ ನಾನು ಅದನ್ನು ಶಿಕ್ಷಿಸುವೆನು. ಬೇತೇಲಿನಲ್ಲಿರುವ ವೇದಿಕೆಗಳನ್ನು ನಾನು ನಾಶಮಾಡುವೆನು. ವೇದಿಕೆಯ ಕೊಂಬುಗಳು ಮುರಿಯಲ್ಪಟ್ಟು ನೆಲದ ಮೇಲೆ ಬೀಳುವವು. 15 ಬೇಸಿಗೆ ಕಾಲದ ಅರಮನೆಯೊಂದಿಗೆ ಚಳಿಗಾಲದ ಅರಮನೆಯನ್ನೂ ನಾಶಮಾಡುವೆನು. ದಂತದ ಭವನಗಳನ್ನು ನಾಶಮಾಡುವೆನು, ಇತರ ಎಷ್ಟೋ ಮನೆಗಳು ನಾಶವಾಗುವವು.” ಇವು ಯೆಹೋವನ ನುಡಿಗಳು.
ಸುಖವನ್ನು ಆಶಿಸುವ ಹೆಂಗಸರು
4 ಸಮಾರ್ಯದ ಪರ್ವತಗಳಲ್ಲಿರುವ ಬಾಷಾನಿನ ದನಗಳೇ, ನನ್ನ ಮಾತಿಗೆ ಕಿವಿಗೊಡಿರಿ. ನೀವು ಬಡ ಜನರನ್ನು ಹಿಂಸಿಸಿ ಜಜ್ಜುತ್ತೀರಿ. ನಿಮ್ಮ ಗಂಡಂದಿರ ಹತ್ತಿರ, “ನಮಗೆ ಕುಡಿಯಲಿಕ್ಕೆ ತಂದುಕೊಡು” ಎಂದು ಹೇಳುತ್ತೀರಿ.
2 ನನ್ನ ಒಡೆಯನಾದ ಯೆಹೋವನು ಒಂದು ವಾಗ್ದಾನ ಮಾಡಿರುತ್ತಾನೆ. ಆತನ ಪರಿಶುದ್ಧತೆಯ ಮೇಲೆ ಆಣೆಹಾಕಿ ವಾಗ್ದಾನ ಮಾಡಿರುತ್ತಾನೆ. ಏನೆಂದರೆ ನಿಮ್ಮ ಮೇಲೆ ಸಂಕಟಗಳು ಬರುವವು. ಜನರು ನಿಮಗೆ ಕೊಕ್ಕೆ ಸಿಕ್ಕಿಸಿ ಕೈದಿಗಳನ್ನಾಗಿ ಮಾಡಿ ಎಳೆದುಕೊಂಡು ಹೋಗುವರು. ನಿಮ್ಮ ಮಕ್ಕಳನ್ನು ಮೀನಿನ ಗಾಳಗಳಿಗೆ ಸಿಕ್ಕಿಸಿ ಎಳೆದುಕೊಂಡು ಹೋಗುವರು. 3 ನಿಮ್ಮ ಪಟ್ಟಣಗಳು ನಾಶವಾಗುವವು. ಗೋಡೆಯಲ್ಲಿರುವ ಬಿರುಕುಗಳ ಮೂಲಕ ಹೆಂಗಸರು ತಪ್ಪಿಸಿಕೊಂಡು ಹೋಗಿ ಹೆಣಗಳ ರಾಶಿಯ[a] ಮೇಲೆ ಬೀಳುವರು.
4 ಯೆಹೋವನು ಹೀಗೆ ಹೇಳುತ್ತಾನೆ, “ಬೇತೇಲಿನಲ್ಲಿ ಪಾಪ ಮಾಡಿರಿ. ಗಿಲ್ಗಾಲಿಗೆ ಹೋಗಿ ಇನ್ನೂ ಹೆಚ್ಚಾಗಿ ಪಾಪ ಮಾಡಿರಿ. ನಿಮ್ಮ ಯಜ್ಞವನ್ನು ಮುಂಜಾನೆ ಸಮರ್ಪಿಸಿರಿ. ಮೂರು ದಿವಸಗಳ ಹಬ್ಬಕ್ಕೆ ನಿಮ್ಮ ಬೆಳೆಯ ಹತ್ತನೆಯ ಒಂದು ಭಾಗವನ್ನು ತೆಗೆದುಕೊಂಡು ಬನ್ನಿ. 5 ಹುಳಿಹಾಕಿದ ರೊಟ್ಟಿಗಳನ್ನು ಕೃತಜ್ಞತಾ ಹೋಮಮಾಡಿರಿ. ಸ್ವೇಚ್ಚೆಯಿಂದ ಕೊಡುವ ಕಾಣಿಕೆ ಬಗ್ಗೆ ಎಲ್ಲರಿಗೂ ತಿಳಿಸಿರಿ. ಇಸ್ರೇಲರೇ ಅಂಥಾ ಕಾರ್ಯಗಳನ್ನು ಮಾಡಲು ನಿಮಗೆ ಇಷ್ಟ. ಆದ್ದರಿಂದ ಹೋಗಿ ಅದನ್ನು ಮಾಡಿರಿ.” ಇದು ಯೆಹೋವನ ನುಡಿ.
ಜನರೆಲ್ಲರನ್ನೂ ಪ್ರೀತಿಸಿ
2 ನನ್ನ ಪ್ರಿಯ ಸಹೋದರ ಸಹೋದರಿಯರೇ, ಮಹಿಮಾಪೂರ್ಣನಾದ ಪ್ರಭು ಯೇಸು ಕ್ರಿಸ್ತನಲ್ಲಿ ನೀವು ನಂಬಿಕೆಯಿಟ್ಟಿದ್ದೀರಿ. ಆದ್ದರಿಂದ ಕೆಲವರು ಇತರ ಜನರಿಗಿಂತ ಬಹಳ ಮುಖ್ಯರೆಂದು ಯೋಚಿಸಬೇಡಿ. 2 ನಿಮ್ಮ ಸಭೆಗೆ ಒಬ್ಬನು ಬರುತ್ತಾನೆಂದು ನೆನೆಸಿರಿ. ಅವನು ಒಳ್ಳೆಯ ವಸ್ತ್ರಗಳನ್ನೂ ಬಂಗಾರದ ಉಂಗುರವನ್ನೂ ಧರಿಸಿರುತ್ತಾನೆ. ಅದೇ ಸಮಯಕ್ಕೆ ಕೊಳೆಯಾದ ಮತ್ತು ಹಳೆಯದಾದ ವಸ್ತ್ರಗಳನ್ನು ಧರಿಸಿರುವ ಒಬ್ಬ ಬಡವನೂ ಬರುತ್ತಾನೆ. 3 ಒಳ್ಳೆಯ ವಸ್ತ್ರಗಳನ್ನು ಧರಿಸಿರುವವನಿಗೆ ವಿಶೇಷ ಗಮನವನ್ನು ನೀಡುವಿರಿ. “ಉತ್ತಮವಾದ ಈ ಸ್ಥಳದಲ್ಲಿ ನೀವು ಕುಳಿತುಕೊಳ್ಳಿ” ಎಂದು ಅವನಿಗೆ ಹೇಳುವಿರಿ. ಆದರೆ ಆ ಬಡ ಮನುಷ್ಯನಿಗೆ “ಅಲ್ಲೇ ನಿಂತುಕೊ!” ಎಂದಾಗಲಿ, “ನಮ್ಮ ಪಾದಗಳ ಬಳಿ ನೆಲದ ಮೇಲೆ ಕುಳಿತುಕೊ!” ಎಂದಾಗಲಿ ಹೇಳುವಿರಿ. 4 ನೀವು ಮಾಡುತ್ತಿರುವುದೇನು? ಕೆಲವರನ್ನು ಇತರ ಜನರಿಗಿಂತ ಬಹಳ ಮುಖ್ಯರೆಂದು ಪರಿಗಣಿಸುತ್ತಿರುವಿರಿ. ನಿಮ್ಮ ಈ ತೀರ್ಪು ದುರುದ್ದೇಶದಿಂದ ಕೂಡಿರುತ್ತದೆ.
5 ನನ್ನ ಪ್ರಿಯ ಸಹೋದರ ಸಹೋದರಿಯರೇ, ಕೇಳಿರಿ! ಈ ಲೋಕದಲ್ಲಿ ಬಡವರು ನಂಬಿಕೆಯಲ್ಲಿ ಶ್ರೀಮಂತರಾಗಿರಲೆಂದು ದೇವರು ಅವರನ್ನು ಆರಿಸಿಕೊಂಡಿದ್ದಾನೆ. ತನ್ನನ್ನು ಪ್ರೀತಿಸುವ ಜನರಿಗೆ ದೇವರು ವಾಗ್ದಾನಮಾಡಿದ ರಾಜ್ಯವನ್ನು ಹೊಂದಿಕೊಳ್ಳಲು ಆತನು ಅವರನ್ನು ಆರಿಸಿಕೊಂಡಿದ್ದಾನೆ. 6 ಆದರೆ ಬಡವನಿಗೆ ನೀವು ಗೌರವವನ್ನೇ ತೋರುವುದಿಲ್ಲ. ಶ್ರೀಮಂತ ಜನರು ಯಾವಾಗಲೂ ನಿಮ್ಮ ಬದುಕನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆಂಬುದು ನಿಮಗೆ ತಿಳಿದಿದೆ. ನಿಮ್ಮನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವವರು ಅವರೇ. 7 ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡಿರುವ ಯೇಸುವಿನ ಶ್ರೇಷ್ಠವಾದ ಹೆಸರಿಗೆ ವಿರುದ್ಧವಾಗಿ ಕೆಟ್ಟಮಾತುಗಳನ್ನು ಆಡುವವರು ಶ್ರೀಮಂತರೇ.
Kannada Holy Bible: Easy-to-Read Version. All rights reserved. © 1997 Bible League International