Revised Common Lectionary (Semicontinuous)
12 ದುಷ್ಟರು ನೀತಿವಂತರ ವಿರುದ್ಧ ದುರಾಲೋಚನೆಗಳನ್ನು ಮಾಡುವರು.
ನೀತಿವಂತರ ಮೇಲೆ ತಮಗಿರುವ ಕೋಪದಿಂದ ಅವರು ಹಲ್ಲುಕಡಿಯುವರು.
13 ಆದರೆ ನಮ್ಮ ಒಡೆಯನು ಆ ದುಷ್ಟರನ್ನು ನೋಡಿ ನಗುವನು.
ಅವರಿಗೆ ಬರಲಿರುವ ಆಪತ್ತುಗಳು ಆತನಿಗೆ ತಿಳಿದಿವೆ.
14 ಕೆಡುಕರು ಖಡ್ಗಗಳನ್ನು ಕೈಗೆತ್ತಿಕೊಳ್ಳುವರು; ತಮ್ಮ ಬಿಲ್ಲುಗಳಿಗೆ ಬಾಣಗಳನ್ನು ಹೂಡಿ ಗುರಿಯಿಡುವರು.
ಅವರು ಬಡವರನ್ನೂ ಅಸಹಾಯಕರನ್ನೂ ಒಳ್ಳೆಯವರನ್ನೂ ಯಥಾರ್ಥವಂತರನ್ನೂ ಕೊಲ್ಲಬೇಕೆಂದಿದ್ದಾರೆ.
15 ಆದರೆ ಅವರ ಬಿಲ್ಲುಗಳು ಮುರಿದುಹೋಗುತ್ತವೆ.
ಅವರ ಖಡ್ಗಗಳು ಅವರ ಹೃದಯಗಳಿಗೇ ನಾಟಿಕೊಳ್ಳುತ್ತವೆ.
16 ದುಷ್ಟನ ಶ್ರೀಮಂತಿಕೆಗಿಂತಲೂ
ನೀತಿವಂತನ ಬಡತನವೇ ಮೇಲು.
17 ಯಾಕೆಂದರೆ ದುಷ್ಟರು ನಾಶವಾಗುವರು.
ನೀತಿವಂತರನ್ನಾದರೋ ಯೆಹೋವನು ಪರಿಪಾಲಿಸುವನು.
18 ಯೆಹೋವನು ತನ್ನ ಭಕ್ತರನ್ನು ಅವರ ಜೀವಮಾನ ಪೂರ್ತಿ ಕಾಪಾಡುವನು.
ಅವರ ಭೂಮಿಯು ಸದಾಕಾಲ ಅವರದೇ ಆಗಿರುವುದು.
19 ಆಪತ್ಕಾಲದಲ್ಲಿ ನೀತಿವಂತರು ನಾಶವಾಗುವುದಿಲ್ಲ.
ಬರಗಾಲದಲ್ಲಿಯೂ ಅವರಿಗೆ ಕೊರತೆಯಿರುವುದಿಲ್ಲ.
20 ದುಷ್ಟರಾದರೋ ಯೆಹೋವನ ವೈರಿಗಳಾಗಿದ್ದಾರೆ.
ಅವರು ನಾಶವಾಗುವರು.
ಅವರ ಕಣಿವೆಗಳು ಒಳಗೆ ಸುಟ್ಟುಹೋಗುತ್ತವೆ;
ಅವರು ಹೊಗೆಯಂತೆ ಇಲ್ಲವಾಗುವರು.
21 ದುಷ್ಟನು ತಾನು ಮಾಡಿದ ಸಾಲವನ್ನು ತೀರಿಸುವುದಿಲ್ಲ.
ನೀತಿವಂತನಾದರೋ ಬೇರೆಯವರಿಗೆ ಉದಾರವಾಗಿ ಕೊಡುವನು.
22 ನೀತಿವಂತರು ಆಶೀರ್ವದಿಸಿದರೆ, ವಾಗ್ದಾನಮಾಡಲ್ಪಟ್ಟ ಭೂಮಿಯನ್ನು ಜನರು ಪಡೆದುಕೊಳ್ಳುವರು.
ಆದರೆ ಅವರು ಶಪಿಸಿದರೆ, ಜನರು ನಾಶವಾಗುವರು.
ಸೊಲೊಮೋನನ ಮರಣ
29 ಸೊಲೊಮೋನನು ಪ್ರಾರಂಭದಿಂದ ಅಂತ್ಯದ ತನಕ ಮಾಡಿದ ಎಲ್ಲಾ ವಿಷಯಗಳನ್ನು ಪ್ರವಾದಿಯಾದ ನಾತಾನನು ಬರೆದ ಲೇಖನಗಳಲ್ಲಿಯೂ, ಶೀಲೋವದ ಅಹೀಯನ ಪ್ರವಾದನೆಯಲ್ಲಿಯೂ ಮತ್ತು ದೇವದರ್ಶಿಯಾದ ಇದ್ದೋವಿನ ದರ್ಶನಗಳ ಪುಸ್ತಕದಲ್ಲಿಯೂ ಬರೆಯಲಾಗಿದೆ. ದೇವದರ್ಶಿಯಾದ ಇದ್ದೋ, ನೆಬಾಟನ ಮಗನಾದ ಯಾರೊಬ್ಬಾಮನ ವಿಷಯವಾಗಿಯೂ ಬರೆದಿದ್ದಾನೆ. 30 ಜೆರುಸಲೇಮಿನಲ್ಲಿ ಸೊಲೊಮೋನನು ನಲವತ್ತು ವರ್ಷಗಳ ಕಾಲ ಇಸ್ರೇಲರನ್ನು ಆಳಿದನು. 31 ಆ ಬಳಿಕ ಸೊಲೊಮೋನನು ತನ್ನ ಪೂರ್ವಿಕರೊಂದಿಗೆ ಸೇರಿದನು. ಅವನನ್ನು ದಾವೀದನಗರದಲ್ಲಿ ಹೂಳಿಟ್ಟರು. ಸೊಲೊಮೋನನ ನಂತರ ಅವನ ಮಗನಾದ ರೆಹಬ್ಬಾಮನು ಅರಸನಾದನು.
35 ಅಂದು ಬಹಳ ಹೊತ್ತಾಯಿತು. ಯೇಸುವಿನ ಶಿಷ್ಯರು ಆತನ ಬಳಿಗೆ ಬಂದು, “ಈ ಸ್ಥಳದಲ್ಲಿ ಯಾರೂ ವಾಸಿಸುತ್ತಿಲ್ಲ. ಈಗಾಗಲೇ ಬಹಳ ಹೊತ್ತಾಗಿದೆ. 36 ಆದ್ದರಿಂದ ಜನರನ್ನು ಕಳುಹಿಸಿಬಿಡು. ಅವರು ಸುತ್ತಮುತ್ತಲಿರುವ ತೋಟಗಳಿಗೂ ಪಟ್ಟಣಗಳಿಗೂ ಹೋಗಿ ಆಹಾರವನ್ನು ಕೊಂಡುಕೊಳ್ಳಲಿ” ಎಂದು ಹೇಳಿದರು.
37 ಆದರೆ ಯೇಸು, “ನೀವೇ ಅವರಿಗೆ ಊಟ ಕೊಡಿ” ಎಂದು ಉತ್ತರಕೊಟ್ಟನು.
ಶಿಷ್ಯರು ಯೇಸುವಿಗೆ, “ಈ ಜನರಿಗೆಲ್ಲ ಬೇಕಾಗುವಷ್ಟು ರೊಟ್ಟಿಯನ್ನು ನಾವು ಎಲ್ಲಿಂದ ತರೋಣ! ಅವರಿಗೆ ಬೇಕಾಗುವಷ್ಟು ರೊಟ್ಟಿಯನ್ನು ಕೊಂಡುಕೊಂಡು ಬರಬೇಕಾದರೆ ನಮಗೆ ಇನ್ನೂರು ದಿನಾರಿ ನಾಣ್ಯ[a] ಗಳಾದರೂ ಬೇಕು!” ಎಂದು ಹೇಳಿದರು.
38 ಯೇಸು ಶಿಷ್ಯರಿಗೆ, “ಈಗ ನಿಮ್ಮ ಬಳಿಯಲ್ಲಿ ಎಷ್ಟು ರೊಟ್ಟಿಗಳಿವೆ? ಹೋಗಿ ನೋಡಿ” ಎಂದು ಹೇಳಿದನು.
ಶಿಷ್ಯರು ಹೋಗಿ ರೊಟ್ಟಿಗಳನ್ನು ಎಣಿಸಿ ಬಂದು, “ನಮ್ಮ ಬಳಿ ಐದು ರೊಟ್ಟಿಗಳಿವೆ ಮತ್ತು ಎರಡು ಮೀನುಗಳಿವೆ” ಎಂದು ಹೇಳಿದರು.
39 ಆಗ ಯೇಸು ಶಿಷ್ಯರಿಗೆ, “ಹಸಿರು ಹುಲ್ಲಿನ ಮೇಲೆ ಸಾಲುಸಾಲಾಗಿ ಕುಳಿತುಕೊಳ್ಳಲು ಜನರಿಗೆ ತಿಳಿಸಿ” ಎಂದು ಹೇಳಿದನು. 40 ಅಂತೆಯೇ ಜನರೆಲ್ಲರೂ ಸಾಲುಸಾಲಾಗಿ ಕುಳಿತುಕೊಂಡರು. ಪ್ರತಿಯೊಂದು ಸಾಲಿನಲ್ಲಿಯೂ ಐವತ್ತರಿಂದ ನೂರು ಜನರಿದ್ದರು.
41 ಯೇಸು ಐದು ರೊಟ್ಟಿಗಳನ್ನು ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ, ರೊಟ್ಟಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿದನು. ಬಳಿಕ ರೊಟ್ಟಿಯನ್ನು ಮುರಿದು, ಅದನ್ನು ಶಿಷ್ಯರಿಗೆ ಕೊಟ್ಟು ಜನರಿಗೆಲ್ಲ ಹಂಚಲು ತಿಳಿಸಿದನು. ಅಂತೆಯೇ ಎರಡು ಮೀನುಗಳನ್ನು ಮುರಿದು ಜನರಿಗೆ ಹಂಚಬೇಕೆಂದು ಶಿಷ್ಯರಿಗೆ ಕೊಟ್ಟನು.
42 ಜನರೆಲ್ಲರೂ ಊಟಮಾಡಿ ತೃಪ್ತರಾದರು. 43 ಬಳಿಕ ಜನರು ತಿನ್ನಲಾರದೆ ಉಳಿಸಿದ ರೊಟ್ಟಿ ಮತ್ತು ಮೀನುಗಳನ್ನು ಶಿಷ್ಯರು ಶೇಖರಿಸಿದಾಗ ಹನ್ನೆರಡು ಬುಟ್ಟಿಗಳು ತುಂಬಿಹೋದವು. 44 ಅಂದು ಸುಮಾರು ಐದು ಸಾವಿರ ಜನ ಊಟಮಾಡಿದರು.
Kannada Holy Bible: Easy-to-Read Version. All rights reserved. © 1997 Bible League International