Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 68:24-35

24 ಇಗೋ, ದೇವರು ವಿಜಯದ ಮೆರವಣಿಗೆಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ.
    ನನ್ನ ರಾಜನಾದ ಪರಿಶುದ್ಧ ದೇವರು ವಿಜಯದ ಮೆರವಣಿಗೆಯನ್ನು ನಡೆಸಿಕೊಂಡು ಹೋಗುತ್ತಿದ್ದಾನೆ.
25 ಮುಂಭಾಗದಲ್ಲಿ ಗಾಯಕರೂ ಹಿಂಭಾಗದಲ್ಲಿ ವಾದ್ಯ ಬಾರಿಸುವವರೂ
    ಸುತ್ತಲು ದಮ್ಮಡಿ ಬಡಿಯುವ ಯುವತಿಯರೂ ಹೋಗುತ್ತಿದ್ದಾರೆ.
26 ಮಹಾಸಭೆಯಲ್ಲಿ ದೇವರಿಗೆ ಸ್ತೋತ್ರವಾಗಲಿ!
    ಇಸ್ರೇಲ್ ಜನರೇ, ಯೆಹೋವನಿಗೆ ಸ್ತೋತ್ರಮಾಡಿರಿ!
27 ಅವರನ್ನು ಮುನ್ನಡೆಸಿಕೊಂಡು ಹೋಗುವವರಲ್ಲಿ ಮೊದಲನೆಯದಾಗಿ ಬೆನ್ಯಾಮೀನನ ಚಿಕ್ಕ ಕುಲವಿದೆ;
    ಅದರ ನಂತರ ಯೆಹೂದನ ಮಹಾಕುಲವಿದೆ.
    ಅದರ ನಂತರ ಜೆಬುಲೂನ್ ಮತ್ತು ನಫ್ತಾಲಿ ಕುಲಗಳ ನಾಯಕರು ಇದ್ದಾರೆ.

28 ದೇವರೇ, ನಿನ್ನ ಬಲವನ್ನು ನಮಗೆ ತೋರಿಸು!
    ಹಿಂದಿನ ಕಾಲದಲ್ಲಿ ನಮಗಾಗಿ ಮಾಡಿದ ಬಲಪ್ರಯೋಗವನ್ನು ನಮಗೆ ತೋರಿಸು.
29 ರಾಜರುಗಳು ತಮ್ಮ ಕಾಣಿಕೆಗಳನ್ನು ತೆಗೆದುಕೊಂಡು
    ಜೆರುಸಲೇಮಿನ ನಿನ್ನ ಆಲಯಕ್ಕೆ ಬರುವರು.
30 ಕೋಲಿನಿಂದ ಬಡಿದು ನಿನಗೆ ಬೇಕಾದದ್ದನ್ನೆಲ್ಲಾ ಆ ಪ್ರಾಣಿಗಳಿಂದ ಮಾಡಿಸು.
    ಆ ಜನಾಂಗಗಳಲ್ಲಿರುವ “ಹೋರಿಗಳು” ಮತ್ತು “ಹಸುಗಳು” ನಿನಗೆ ವಿಧೇಯವಾಗಿರುವಂತೆ ಮಾಡು.
ನೀನು ಆ ಜನಾಂಗಗಳನ್ನು ಯುದ್ಧದಲ್ಲಿ ಸೋಲಿಸಿರುವುದರಿಂದ
    ಅವರು ನಿನಗೆ ಬೆಳ್ಳಿಯನ್ನು ತಂದುಕೊಡುವಂತೆ ಮಾಡು.
31 ಅವರು ಈಜಿಪ್ಟಿನಿಂದ ಐಶ್ವರ್ಯವನ್ನು ನಿನಗೆ ತಂದುಕೊಡುವಂತೆ ಮಾಡು.
    ದೇವರೇ, ಇಥಿಯೋಪಿಯದವರು ತಮ್ಮ ಐಶ್ವರ್ಯವನ್ನು ನಿನಗೆ ತಂದುಕೊಡುವಂತೆ ಮಾಡು.
32 ಭೂರಾಜರುಗಳೇ, ದೇವರಿಗೆ ಗಾಯನ ಮಾಡಿರಿ!
    ನಮ್ಮ ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡಿರಿ!

33 ದೇವರಿಗೆ ಗಾಯನ ಮಾಡಿರಿ!
ಅನಾದಿಕಾಲದಿಂದಿರುವ ಆತನು ಮಹೋನ್ನತವಾದ ಆಕಾಶದಲ್ಲಿ ರಥಾಶ್ವರೂಢನಾಗಿ ಸವಾರಿ ಮಾಡುವನು.
    ಆತನ ಗರ್ಜನೆಗೆ ಕಿವಿಗೊಡಿರಿ!
34 ದೇವರ ಬಲವನ್ನು ಕೊಂಡಾಡಿರಿ.
    ಆತನ ಗಾಂಭೀರ್ಯವು ಇಸ್ರೇಲರ ಆಶ್ರಯವಾಗಿದೆ.
    ಆತನ ಶಕ್ತಿಯು ಆಕಾಶಗಳಲ್ಲಿ ವ್ಯಾಪಿಸಿದೆ.
35 ದೇವರೇ, ನಿನ್ನ ಪರಿಶುದ್ಧಾಲಯದಲ್ಲಿರುವ ನೀನು ಅದ್ಭುತಸ್ವರೂಪನಾಗಿರುವೆ.
ಇಸ್ರೇಲರ ದೇವರು ತನ್ನ ಜನರಿಗೆ ಬಲವನ್ನೂ ಶಕ್ತಿಯನ್ನೂ ದಯಪಾಲಿಸುವನು.
ದೇವರಿಗೆ ಸ್ತೋತ್ರ!

2 ಸಮುವೇಲನು 6:6-12

ದಾವೀದನ ಜನರು ನಾಕೋನನ ಕಣಕ್ಕೆ ಬಂದಾಗ ಹಸುಗಳು ಮುಗ್ಗರಿಸಿದವು ಹಾಗೂ ದೇವರ ಪವಿತ್ರ ಪೆಟ್ಟಿಗೆಯು ಬಂಡಿಯಿಂದ ಕೆಳಗೆ ಬೀಳುವುದರಲ್ಲಿತ್ತು. ಪವಿತ್ರ ಪೆಟ್ಟಿಗೆಯು ಬೀಳದಂತೆ ಉಜ್ಜನು ಹಿಡಿದನು. ಯೆಹೋವನು ಉಜ್ಜನ ಮೇಲೆ ಕೋಪಗೊಂಡು ಅವನನ್ನು ಕೊಂದನು.[a] ಉಜ್ಜನು ದೇವರಿಗೆ ಗೌರವವನ್ನು ತೋರಿಸದೆ ಪವಿತ್ರ ಪೆಟ್ಟಿಗೆಯನ್ನು ಸ್ಪರ್ಶಿಸಿದನು. ದೇವರ ಪವಿತ್ರ ಪಟ್ಟಿಗೆಯ ಹತ್ತಿರದಲ್ಲೇ ಉಜ್ಜನು ಸತ್ತನು. ಯೆಹೋವನು ಉಜ್ಜನನ್ನು ಕೊಂದದ್ದರಿಂದ ದಾವೀದನು ತಳಮಳಗೊಂಡನು. ದಾವೀದನು ಆ ಸ್ಥಳವನ್ನು “ಪೆರೆಚುಜ್ಜಾ” ಎಂದು ಕರೆದನು. ಆ ಸ್ಥಳವನ್ನು ಇಂದಿಗೂ “ಪೆರೆಚುಜ್ಜಾ” ಎಂದೇ ಕರೆಯುತ್ತಾರೆ.

ಅಂದು ದಾವೀದನು ಯೆಹೋವನಿಗೆ ಭಯಪಟ್ಟು, “ದೇವರ ಪವಿತ್ರ ಪೆಟ್ಟಿಗೆಯನ್ನು ನಾನಿರುವಲ್ಲಿಗೆ ತೆಗೆದುಕೊಂಡು ಹೋಗುವುದು ಹೇಗೆ?” ಎಂದು ಯೋಚಿಸಿಕೊಂಡು 10 ಯೆಹೋವನ ಪವಿತ್ರ ಪೆಟ್ಟಿಗೆಯನ್ನು ದಾವೀದ ನಗರದೊಳಕ್ಕೆ ತರಲಿಲ್ಲ. ದಾವೀದನು ಪವಿತ್ರ ಪೆಟ್ಟಿಗೆಯನ್ನು ಗತ್‌ನ ಓಬೇದೆದೋಮನ ಮನೆಯಲ್ಲಿಟ್ಟನು. 11 ಓಬೇದೆದೋಮನ ಮನೆಯಲ್ಲಿ ಪವಿತ್ರ ಪೆಟ್ಟಿಗೆಯು ಮೂರು ತಿಂಗಳ ಕಾಲ ಇತ್ತು. ಓಬೇದೆದೋಮನನ್ನೂ ಅವನ ಕುಟುಂಬವನ್ನೂ ಯೆಹೋವನು ಆಶೀರ್ವದಿಸಿದನು.

12 ತರುವಾಯ ಜನರು ದಾವೀದನಿಗೆ, “ದೇವರ ಪವಿತ್ರ ಪೆಟ್ಟಿಗೆಯು ಓಬೇದೆದೋಮನ ಮನೆಯಲ್ಲಿರುವುದರಿಂದ ಯೆಹೋವನು ಅವನ ಕುಟುಂಬವನ್ನೂ ಅವನ ಸಮಸ್ತವನ್ನೂ ಆಶೀರ್ವದಿಸಿದನು.” ಎಂದು ಹೇಳಿದರು. ಆದ್ದರಿಂದ ದಾವೀದನು ಹೋಗಿ ಓಬೇದೆದೋಮನ ಮನೆಯಿಂದ ಪವಿತ್ರ ಪೆಟ್ಟಿಗೆಯನ್ನು ಸಂತೋಷದಿಂದ ತಂದನು.

ಅಪೊಸ್ತಲರ ಕಾರ್ಯಗಳು 21:27-39

27 ಆ ಏಳು ದಿನಗಳ ಅವಧಿ ಮುಗಿಯುವುದರಲ್ಲಿತ್ತು. ಆದರೆ ಏಷ್ಯಾದಿಂದ ಬಂದಿದ್ದ ಕೆಲವು ಯೆಹೂದ್ಯರು ಪೌಲನನ್ನು ಕಂಡು ಜನಸಮೂಹವನ್ನು ಉದ್ದೇಶಿಸಿ, 28 “ಯೆಹೂದ್ಯ ಜನರೇ, ನಮಗೆ ಸಹಾಯಮಾಡಿ! ಮೋಶೆಯ ಧರ್ಮಶಾಸ್ತ್ರಕ್ಕೂ ನಮ್ಮ ಜನರಿಗೂ ಮತ್ತು ಈ ಸ್ಥಳಕ್ಕೂ (ದೇವಾಲಯ) ವಿರೋಧವಾಗಿ ಎಲ್ಲಾ ಕಡೆಗಳಲ್ಲಿ ಜನರಿಗೆ ಉಪದೇಶಿಸುತ್ತಿದ್ದವನು ಇವನೇ. ಈಗ ಇವನು ಕೆಲವು ಗ್ರೀಕರನ್ನು ದೇವಾಲಯದೊಳಕ್ಕೆ ಕರೆದುಕೊಂಡು ಬಂದಿದ್ದಾನೆ! ಈ ಪವಿತ್ರ ಸ್ಥಳವನ್ನು ಇವನು ಅಶುದ್ಧಗೊಳಿಸಿದ್ದಾನೆ!” ಎಂದು ಕೂಗಿಹೇಳಿ ಗಲಿಬಿಲಿ ಮಾಡಿದರು. 29 (ಜೆರುಸಲೇಮಿನಲ್ಲಿ ಪೌಲನೊಂದಿಗಿದ್ದ ತ್ರೊಫಿಮ ಎಂಬವನನ್ನು ಆ ಯೆಹೂದ್ಯರು ನೋಡಿದ್ದರು. ಎಫೆಸದ ತ್ರೊಫಿಮನು ಗ್ರೀಕನಾಗಿದ್ದನು. ಪೌಲನು ಇವನನ್ನು ಪವಿತ್ರ ಸ್ಥಳದೊಳಗೆ ಕರೆದುಕೊಂಡು ಹೋಗಿದ್ದಾನೆಂದು ಅವರು ಭಾವಿಸಿಕೊಂಡರು.)

30 ಜೆರುಸಲೇಮಿನ ಜನರೆಲ್ಲರು ಬಹು ಕೋಪಗೊಂಡರು. ಅವರೆಲ್ಲರು ಓಡಿಹೋಗಿ ಪೌಲನನ್ನು ಹಿಡಿದು ದೇವಾಲಯದೊಳಗಿಂದ ಎಳೆದುಕೊಂಡು ಬಂದರು. ಆ ಕೂಡಲೇ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು. 31 ಅವರು ಪೌಲನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾಗ ಇಡೀ ಪಟ್ಟಣದಲ್ಲೇ ಗಲಭೆಯುಂಟಾಗಿದೆ ಎಂಬ ಸುದ್ದಿಯು ಜೆರುಸಲೇಮಿನಲ್ಲಿದ್ದ ರೋಮ್ ಸೇನಾಧಿಪತಿಗೆ ತಿಳಿಯಿತು. 32 ತಕ್ಷಣವೇ ಅವನು ಕೆಲವು ಸೇನಾಧಿಕಾರಿಗಳನ್ನು ಮತ್ತು ಸೈನಿಕರನ್ನು ತನ್ನೊಂದಿಗೆ ಕರೆದುಕೊಂಡು ಜನಸಮೂಹದ ಕಡೆಗೆ ಹೋದನು. ಸೇನಾಧಿಪತಿಯನ್ನು ಮತ್ತು ಅವನ ಸೈನಿಕರನ್ನು ಕಂಡ ಜನರು ಪೌಲನಿಗೆ ಹೊಡೆಯುವುದನ್ನು ನಿಲ್ಲಿಸಿದರು.

33 ಸೇನಾಧಿಪತಿಯು ಹೋಗಿ ಪೌಲನನ್ನು ಬಂಧಿಸಿ ಎರಡು ಸರಪಣಿಗಳಿಂದ ಅವನನ್ನು ಕಟ್ಟಲು ಸೈನಿಕರಿಗೆ ಹೇಳಿದನು. ಬಳಿಕ ಸೇನಾಧಿಪತಿಯು, “ಈ ಮನುಷ್ಯನು ಯಾರು? ಇವನು ಏನು ತಪ್ಪು ಮಾಡಿದನು?” ಎಂದು ವಿಚಾರಿಸಿದನು. 34 ಅಲ್ಲಿದ್ದ ಜನರಲ್ಲಿ ಕೆಲವರು ಒಂದು ವಿಷಯದ ಬಗ್ಗೆ ಬೊಬ್ಬೆಹಾಕುತ್ತಿದ್ದರೆ, ಉಳಿದವರು ಇತರ ವಿಷಯಗಳ ಬಗ್ಗೆ ಬೊಬ್ಬೆಹಾಕುತ್ತಿದ್ದರು. ಈ ಗಲಿಬಿಲಿಯಿಂದಾಗಿಯೂ ಕೂಗಾಟದಿಂದಾಗಿಯೂ ಏನು ನಡೆಯಿತೆಂಬುದರ ಬಗ್ಗೆ ಸತ್ಯವನ್ನು ತಿಳಿದುಕೊಳ್ಳಲಾಗಲಿಲ್ಲ. ಆದ್ದರಿಂದ ಸೇನಾಧಿಪತಿಯು ಪೌಲನನ್ನು ಸೈನ್ಯದ ಕೋಟೆಯೊಳಕ್ಕೆ ತೆಗೆದುಕೊಂಡು ಹೋಗಲು ಸೈನಿಕರಿಗೆ ತಿಳಿಸಿದನು. 35-36 ಎಲ್ಲಾ ಜನರು ಅವರನ್ನು ಹಿಂಬಾಲಿಸಿದರು. ಸೈನಿಕರು ಮೆಟ್ಟಿಲುಗಳ ಬಳಿಗೆ ಬಂದಾಗ ಪೌಲನನ್ನು ರಕ್ಷಿಸಲು ಹೊತ್ತುಕೊಂಡು ಹೋದರು. ಯಾಕೆಂದರೆ ಅವನಿಗೆ ಕೇಡುಮಾಡಲು ಸಿದ್ಧರಾಗಿದ್ದ ಜನರು, “ಅವನನ್ನು ಕೊಲ್ಲಿರಿ!” ಎಂದು ಕೂಗುತ್ತಿದ್ದರು.

37 ಸೈನಿಕರು ಪೌಲನನ್ನು ಸೈನ್ಯದ ಕೋಟೆಯೊಳಗೆ ಕೊಂಡೊಯ್ಯುತ್ತಿದ್ದಾಗ, ಪೌಲನು ಸೇನಾಧಿಪತಿಗೆ, “ನಾನು ನಿನ್ನೊಂದಿಗೆ ಸ್ವಲ್ಪ ಮಾತಾಡಬಹುದೇ?” ಎಂದು ಕೇಳಿದನು.

ಸೇನಾಧಿಪತಿಯು, “ಓಹೋ, ನಿನಗೆ ಗ್ರೀಕ್ ಭಾಷೆ ಗೊತ್ತಿದೆಯಾ? 38 ಹಾಗಾದರೆ, ನಾನು ಯೋಚಿಸಿದ ವ್ಯಕ್ತಿ ನೀನಲ್ಲ. ಸ್ವಲ್ಪಕಾಲದ ಹಿಂದೆ ಗಲಭೆ ಆರಂಭಿಸಿದ ಈಜಿಪ್ಟಿನವನೇ ನೀನೆಂದು ನಾನು ಭಾವಿಸಿದ್ದೆ. ಆ ಈಜಿಪ್ಟಿನವನು ನಾಲ್ಕುಸಾವಿರ ಮಂದಿ ಕೊಲೆಗಾರರನ್ನು ಮರಳುಗಾಡಿಗೆ ಕರೆದುಕೊಂಡು ಹೋದನು” ಎಂದು ಹೇಳಿದನು.

39 ಪೌಲನು, “ಇಲ್ಲ, ನಾನು ತಾರ್ಸದ ಯೆಹೂದ್ಯನು. ತಾರ್ಸವು ಸಿಲಿಸಿಯ ದೇಶದಲ್ಲಿದೆ. ನಾನು ಆ ಪ್ರಮುಖ ನಗರದ ಪ್ರಜೆ. ದಯವಿಟ್ಟು ಜನರೊಂದಿಗೆ ಮಾತಾಡಲು ನನಗೆ ಅಪ್ಪಣೆಯಾಗಲಿ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International