Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 37:12-22

12 ದುಷ್ಟರು ನೀತಿವಂತರ ವಿರುದ್ಧ ದುರಾಲೋಚನೆಗಳನ್ನು ಮಾಡುವರು.
    ನೀತಿವಂತರ ಮೇಲೆ ತಮಗಿರುವ ಕೋಪದಿಂದ ಅವರು ಹಲ್ಲುಕಡಿಯುವರು.
13 ಆದರೆ ನಮ್ಮ ಒಡೆಯನು ಆ ದುಷ್ಟರನ್ನು ನೋಡಿ ನಗುವನು.
    ಅವರಿಗೆ ಬರಲಿರುವ ಆಪತ್ತುಗಳು ಆತನಿಗೆ ತಿಳಿದಿವೆ.
14 ಕೆಡುಕರು ಖಡ್ಗಗಳನ್ನು ಕೈಗೆತ್ತಿಕೊಳ್ಳುವರು; ತಮ್ಮ ಬಿಲ್ಲುಗಳಿಗೆ ಬಾಣಗಳನ್ನು ಹೂಡಿ ಗುರಿಯಿಡುವರು.
    ಅವರು ಬಡವರನ್ನೂ ಅಸಹಾಯಕರನ್ನೂ ಒಳ್ಳೆಯವರನ್ನೂ ಯಥಾರ್ಥವಂತರನ್ನೂ ಕೊಲ್ಲಬೇಕೆಂದಿದ್ದಾರೆ.
15 ಆದರೆ ಅವರ ಬಿಲ್ಲುಗಳು ಮುರಿದುಹೋಗುತ್ತವೆ.
    ಅವರ ಖಡ್ಗಗಳು ಅವರ ಹೃದಯಗಳಿಗೇ ನಾಟಿಕೊಳ್ಳುತ್ತವೆ.
16 ದುಷ್ಟನ ಶ್ರೀಮಂತಿಕೆಗಿಂತಲೂ
    ನೀತಿವಂತನ ಬಡತನವೇ ಮೇಲು.
17 ಯಾಕೆಂದರೆ ದುಷ್ಟರು ನಾಶವಾಗುವರು.
    ನೀತಿವಂತರನ್ನಾದರೋ ಯೆಹೋವನು ಪರಿಪಾಲಿಸುವನು.
18 ಯೆಹೋವನು ತನ್ನ ಭಕ್ತರನ್ನು ಅವರ ಜೀವಮಾನ ಪೂರ್ತಿ ಕಾಪಾಡುವನು.
    ಅವರ ಭೂಮಿಯು ಸದಾಕಾಲ ಅವರದೇ ಆಗಿರುವುದು.
19 ಆಪತ್ಕಾಲದಲ್ಲಿ ನೀತಿವಂತರು ನಾಶವಾಗುವುದಿಲ್ಲ.
    ಬರಗಾಲದಲ್ಲಿಯೂ ಅವರಿಗೆ ಕೊರತೆಯಿರುವುದಿಲ್ಲ.
20 ದುಷ್ಟರಾದರೋ ಯೆಹೋವನ ವೈರಿಗಳಾಗಿದ್ದಾರೆ.
    ಅವರು ನಾಶವಾಗುವರು.
ಅವರ ಕಣಿವೆಗಳು ಒಳಗೆ ಸುಟ್ಟುಹೋಗುತ್ತವೆ;
    ಅವರು ಹೊಗೆಯಂತೆ ಇಲ್ಲವಾಗುವರು.
21 ದುಷ್ಟನು ತಾನು ಮಾಡಿದ ಸಾಲವನ್ನು ತೀರಿಸುವುದಿಲ್ಲ.
    ನೀತಿವಂತನಾದರೋ ಬೇರೆಯವರಿಗೆ ಉದಾರವಾಗಿ ಕೊಡುವನು.
22 ನೀತಿವಂತರು ಆಶೀರ್ವದಿಸಿದರೆ, ವಾಗ್ದಾನಮಾಡಲ್ಪಟ್ಟ ಭೂಮಿಯನ್ನು ಜನರು ಪಡೆದುಕೊಳ್ಳುವರು.
    ಆದರೆ ಅವರು ಶಪಿಸಿದರೆ, ಜನರು ನಾಶವಾಗುವರು.

2 ಸಮುವೇಲನು 11:22-27

22 ಯೋವಾಬನು ತಿಳಿಸಲು ಹೇಳಿದ್ದನ್ನೆಲ್ಲವನ್ನೂ ಸಂದೇಶಕನು ದಾವೀದನಿಗೆ ತಿಳಿಸಿದನು. 23 ಸಂದೇಶಕನು ದಾವೀದನಿಗೆ, “ಅಮ್ಮೋನಿಯರು ಮೈದಾನದಲ್ಲಿ ನಮ್ಮ ಮೇಲೆ ಆಕ್ರಮಣ ಮಾಡಿದರು. ಆದರೆ ನಾವು ಅವರೊಡನೆ ಹೋರಾಡಿ ನಗರದ ಬಾಗಿಲಿನವರೆಗೂ ಅಟ್ಟಿಸಿಕೊಂಡು ಹೋದೆವು. 24 ನಗರದ ಗೋಡೆಯ ಮೇಲಿದ್ದ ಜನರು ನಿಮ್ಮ ಸೈನಿಕರ ಮೇಲೆ ಬಾಣಗಳನ್ನು ಎಸೆದರು. ನಿಮ್ಮ ಸೈನಿಕರಲ್ಲಿ ಕೆಲವರನ್ನು ಕೊಂದರು. ಹಿತ್ತಿಯನಾದ ನಿನ್ನ ಸೈನಿಕ ಊರೀಯನೂ ಸಹ ಸತ್ತುಹೋದನು” ಎಂದು ಹೇಳಿದನು.

25 ದಾವೀದನು ಸಂದೇಶಕನಿಗೆ, “ನೀನು ಹೋಗಿ ಯೋವಾಬನಿಗೆ: ‘ಇದರಿಂದ ನೀನು ತಳಮಳಗೊಳ್ಳಬೇಡ. ಒಂದೇ ಖಡ್ಗವು ಈ ಹೊತ್ತು ಒಬ್ಬನನ್ನು ಕೊಂದರೆ, ಇನ್ನೊಂದು ದಿನ ಇನ್ನೊಬ್ಬನನ್ನು ಕೊಲ್ಲುವುದು. ರಬ್ಬ ನಗರದ ಮೇಲೆ ಧೈರ್ಯವಾಗಿ ಆಕ್ರಮಣಮಾಡು. ಆಗ ನೀನು ನಗರವನ್ನು ಗೆಲ್ಲುವೆ!’ ಈ ಮಾತುಗಳಿಂದ ಯೋವಾಬನನ್ನು ಹುರಿದುಂಬಿಸು” ಎಂಬುದಾಗಿ ಹೇಳಿದನು.

ದಾವೀದನು ಬತ್ಷೆಬೆಳನ್ನು ಮದುವೆಯಾದನು

26 ತನ್ನ ಗಂಡನಾದ ಊರೀಯನು ಸತ್ತನೆಂಬ ಸುದ್ದಿಯು ಬತ್ಷೆಬೆಳಿಗೆ ತಿಳಿಯಿತು. ಆಗ ಅವಳು ತನ್ನ ಗಂಡನಿಗಾಗಿ ಗೋಳಾಡಿದಳು. 27 ಅವಳು ತನ್ನ ಶೋಕಕಾಲವನ್ನು ಮುಗಿಸಿದ ನಂತರ, ಅವಳನ್ನು ತನ್ನ ಮನೆಗೆ ಕರೆತರಲು ದಾವೀದನು ಸೇವಕರನ್ನು ಕಳುಹಿಸಿದನು. ಅವಳು ದಾವೀದನ ಪತ್ನಿಯಾದಳು. ಅವಳು ದಾವೀದನಿಂದ ಒಂದು ಗಂಡುಮಗುವಿಗೆ ಜನ್ಮನೀಡಿದಳು. ದಾವೀದನು ಮಾಡಿದ ಈ ಕೆಟ್ಟಕಾರ್ಯವು ಯೆಹೋವನಿಗೆ ದುಃಖವನ್ನುಂಟುಮಾಡಿತು.

ರೋಮ್ನಗರದವರಿಗೆ 15:22-33

ರೋಮಿಗೆ ಹೋಗಲು ಪೌಲನ ಯೋಜನೆ

22 ಈ ಕಾರಣದಿಂದಲೇ, ನಿಮ್ಮ ಬಳಿಗೆ ಬಾರದಂತೆ ನನಗೆ ಅನೇಕ ಸಲ ಅಡಚಣೆ ಆಯಿತು.

23 ಆದರೆ ಈಗ ಈ ಪ್ರಾಂತ್ಯಗಳಲ್ಲಿ ನಾನು ಮಾಡಬೇಕಾಗಿದ್ದ ಸೇವೆಯನ್ನು ಮಾಡಿ ಮುಗಿಸಿದ್ದೇನೆ. ಅನೇಕ ವರ್ಷಗಳಿಂದ ನಾನು ನಿಮ್ಮ ಬಳಿಗೆ ಬರಬೇಕೆಂದಿದ್ದೆ. 24 ಆದ್ದರಿಂದ ನಾನು ಸ್ಪೇನಿಗೆ ಹೋಗುವಾಗ ನಿಮ್ಮನ್ನು ಸಂದರ್ಶಿಸುತ್ತೇನೆ. ಹೌದು, ನಾನು ಸ್ಪೇನಿಗೆ ಪ್ರಯಾಣ ಮಾಡುವಾಗ ನಿಮ್ಮನ್ನು ಸಂದರ್ಶಿಸಿ, ಸ್ವಲ್ಪಕಾಲ ನಿಮ್ಮೊಂದಿಗೆ ಸಂತೋಷವಾಗಿ ತಂಗಿರುತ್ತೇನೆಂಬ ನಿರೀಕ್ಷೆ ನನಗಿದೆ. ಬಳಿಕ ನೀವು ನನ್ನ ಪ್ರಯಾಣಕ್ಕೆ ಸಹಾಯ ಮಾಡಬಹದು.

25 ಈಗ ನಾನು ದೇವಜನರಿಗೆ ಸಹಾಯ ಮಾಡುವುಕ್ಕಾಗಿ ಜೆರುಸಲೇಮಿಗೆ ಹೋಗುತ್ತಿದ್ದೇನೆ. 26 ಅಲ್ಲಿನ ದೇವಜನರಲ್ಲಿ ಕೆಲವರು ಬಡವರಾಗಿದ್ದಾರೆ. ಮಕೆದೋನಿಯ ಮತ್ತು ಅಖಾಯದ ವಿಶ್ವಾಸಿಗಳು ಅಲ್ಲಿನ ಬಡಜನರಿಗಾಗಿ ಸಂತೋಷದಿಂದ ಧನಸಹಾಯ ಮಾಡಿದ್ದಾರೆ. 27 ಮಕೆದೋನಿಯ ಮತ್ತು ಅಖಾಯದ ವಿಶ್ವಾಸಿಗಳು ಸ್ವಂತ ಇಷ್ಟದಿಂದಲೇ ಈ ಕಾರ್ಯವನ್ನು ಮಾಡಿದ್ದಾರೆ. ಅದು ಅವರ ಕರ್ತವ್ಯವೂ ಹೌದು. ಯೆಹೂದ್ಯರಲ್ಲದ ಅವರು ಯೆಹೂದ್ಯರ ಆತ್ಮಿಕ ಅಶೀರ್ವಾದಗಳಲ್ಲಿ ಪಾಲು ಹೊಂದಿರುವುದರಿಂದ ಅವರು ತಮ್ಮಲ್ಲಿರುವಂಥವುಗಳ ಮೂಲಕ ಅವರಿಗೆ ನೆರವು ನೀಡುವುದು ಅವರ ಹೊಣೆಯಾಗಿದೆ. 28 ಜೆರುಸಲೇಮಿನ ಬಡಜನರಿಗೋಸ್ಕರ ಕೊಟ್ಟಿರುವ ಈ ಹಣವನ್ನೆಲ್ಲಾ ಸುರಕ್ಷಿತವಾಗಿ ಅವರಿಗೆ ತಲುಪಿಸಿದ ಮೇಲೆ ನಾನು ಸ್ಪೇನಿಗೆ ಹೊರಡುವೆನು.

ನಾನು ಸ್ಪೇನಿಗೆ ಪ್ರಯಾಣ ಮಾಡುವಾಗ (ರೋಮಿನಲ್ಲಿ) ಇಳಿದು ನಿಮ್ಮನ್ನು ಸಂದರ್ಶಿಸುವೆನು. 29 ನಾನು ನಿಮ್ಮ ಬಳಿಗೆ ಬರುವಾಗ ಕ್ರಿಸ್ತನ ಆಶೀರ್ವಾದವನ್ನು ಹೇರಳವಾಗಿ ತರುತ್ತೇನೆಂದು ಬಲ್ಲೆನು.

30 ಸಹೋದರ ಸಹೋದರಿಯರೇ, ನೀವು ನನಗೋಸ್ಕರ ದೇವರಲ್ಲಿ ಪ್ರಾರ್ಥಿಸುವುದರ ಮೂಲಕ ನನ್ನ ಸೇವೆಗೆ ಸಹಾಯ ಮಾಡಬೇಕೆಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನಮ್ಮ ಪ್ರಭುವಾದ ಯೇಸುವಿನ ನಿಮಿತ್ತವಾಗಿಯೂ ಪವಿತ್ರಾತ್ಮನು ನಮಗೆ ಕೊಡುವ ಪ್ರೀತಿಯ ನಿಮಿತ್ತವಾಗಿಯೂ ನೀವು ಪ್ರಾರ್ಥಿಸಿರಿ. 31 ಜುದೇಯದಲ್ಲಿರುವ ಅವಿಶ್ವಾಸಿಗಳ ಕೈಯಿಂದ ನಾನು ಪಾರಾಗುವಂತೆ ಪ್ರಾರ್ಥಿಸಿರಿ. ನಾನು ಜೆರುಸಲೇಮಿಗೆ ತೆಗೆದುಕೊಂಡು ಹೋಗುತ್ತಿರುವ ಈ ಸಹಾಯಧನವು ಅಲ್ಲಿರುವ ದೇವಮಕ್ಕಳಿಗೆ ಮೆಚ್ಚಿಕೆಯಾಗುವಂತೆ ಪ್ರಾರ್ಥಿಸಿರಿ. 32 ಅನಂತರ, ದೇವರು ಬಯಸುವುದಾದರೆ ನಾನು ನಿಮ್ಮ ಬಳಿಗೆ ಬರುತ್ತೇನೆ. ನಾನು ಸಂತೋಷದಿಂದ ಬಂದು ನಿಮ್ಮ ಸಂಗಡವಿದ್ದು ವಿಶ್ರಾಂತಿಯನ್ನು ಪಡೆಯುತ್ತೇನೆ. 33 ಶಾಂತಿಯನ್ನು ಕೊಡುವ ದೇವರು ನಿಮ್ಮೆಲ್ಲರೊಂದಿಗಿರಲಿ. ಆಮೆನ್.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International