Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 24

ರಚನೆಗಾರ: ದಾವೀದ.

24 ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದೇ.
    ಲೋಕವೂ ಅದರ ನಿವಾಸಿಗಳೂ ಆತನವೇ.
ಅದರ ಅಸ್ತಿವಾರವನ್ನು ಸಾಗರದ ಮೇಲೆ ಹಾಕಿದವನು ಆತನೇ.
    ಅದನ್ನು ಜಲರಾಶಿಗಳ ಮೇಲೆ ಕಟ್ಟಿದವನೂ ಆತನೇ.

ಯೆಹೋವನ ಪರ್ವತವನ್ನು ಹತ್ತುವವರು ಎಂಥವರಾಗಿರಬೇಕು?
    ಆತನ ಪವಿತ್ರ ಆಲಯದಲ್ಲಿ ನಿಂತುಕೊಳ್ಳುವವರು ಎಂಥವರಾಗಿರಬೇಕು?
ಅವರು ದುಷ್ಕೃತ್ಯಗಳನ್ನು ಮಾಡಿಲ್ಲದವರೂ
    ಶುದ್ಧ ಹೃದಯವುಳ್ಳವರೂ
ನನ್ನ ಹೆಸರಿನಲ್ಲಿ[a] ಮೋಸ ಪ್ರಮಾಣ ಮಾಡದವರೂ
    ವಿಗ್ರಹಗಳನ್ನು ಆರಾಧಿಸದವರೂ ಆಗಿರಬೇಕು.

ಅವರನ್ನು ಯೆಹೋವನು ಆಶೀರ್ವದಿಸಿ ಕಾಪಾಡುವನು;
    ದೇವರು ಅವರನ್ನು ನಿರಪರಾಧಿಗಳೆಂದು ಪ್ರಕಟಿಸುವನು.
ಆತನನ್ನು ಅನುಸರಿಸುವವರು ಇಂಥವರೇ.
    ಸಹಾಯಕ್ಕಾಗಿ ಯಾಕೋಬನ ದೇವರ ಬಳಿಗೆ ಹೋಗುವವರು ಇಂಥವರೇ.

ಹೆಬ್ಬಾಗಿಲುಗಳೇ, ಉನ್ನತವಾಗಿರಿ!
    ಪುರಾತನ ದ್ವಾರಗಳೇ, ತೆರದುಕೊಂಡಿರಿ.
    ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ.
ಮಹಿಮಾಸ್ವರೂಪನಾದ ಈ ರಾಜನು ಯಾರು?
    ಬಲಿಷ್ಠನೂ ಮಹಾಪರಾಕ್ರಮಿಯೂ ಆಗಿರುವ
    ಯೆಹೋವನೇ ಆತನು.

ಹೆಬ್ಬಾಗಿಲುಗಳೇ, ಉನ್ನತವಾಗಿರಿ!
    ಪುರಾತನ ದ್ವಾರಗಳೇ, ತೆರೆದುಕೊಂಡಿರಿ.
    ಮಹಿಮಾಸ್ವರೂಪನಾದ ರಾಜನು ಆಗಮಿಸುತ್ತಿದ್ದಾನೆ.
10 ಮಹಿಮಾಸ್ವರೂಪನಾದ ಈ ರಾಜನು ಯಾರು?
    ಸೇನಾಧೀಶ್ವರನಾದ ಯೆಹೋವನೇ ಆ ರಾಜನು.
    ಮಹಿಮಾಸ್ವರೂಪನಾದ ರಾಜನು ಆತನೇ.

ವಿಮೋಚನಕಾಂಡ 25:10-22

ಒಡಂಬಡಿಕೆಯ ಪೆಟ್ಟಿಗೆ

10 “ಜಾಲೀಮರದಿಂದ ಒಂದು ವಿಶೇಷ ಪೆಟ್ಟಿಗೆಯನ್ನು ಮಾಡಿಸು. ಈ ಪವಿತ್ರ ಪೆಟ್ಟಿಗೆಯು ಎರಡೂವರೆ ಮೊಳ ಉದ್ದ, ಒಂದೂವರೆ ಮೊಳ ಅಗಲ ಮತ್ತು ಒಂದೂವರೆ ಮೊಳ ಎತ್ತರ ಇರಬೇಕು. 11 ಅದರ ಹೊರಮೈಯನ್ನು ಮತ್ತು ಒಳಮೈಯನ್ನು ಅಪ್ಪಟ ಬಂಗಾರದಿಂದ ಹೊದಿಸಬೇಕು. ಪೆಟ್ಟಿಗೆಯ ಅಂಚುಗಳ ಸುತ್ತಲೂ ಚಿನ್ನದ ಗೋಟು ಕಟ್ಟಿಸಬೇಕು. 12 ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಅನುಕೂಲವಾಗುವಂತೆ ನಾಲ್ಕು ಚಿನ್ನದ ಬಳೆಗಳನ್ನು ಎರಕಹೊಯ್ಯಬೇಕು. ನಾಲ್ಕು ಮೂಲೆಗಳಲ್ಲಿ ಅಂದರೆ ಒಂದೊಂದು ಕಡೆಯಲ್ಲಿ ಎರಡೆರಡು ಬಳೆಗಳನ್ನು ಇಡಬೇಕು. 13 ಬಳಿಕ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಲು ಅನುಕೂಲವಾಗುವಂತೆ ಕಂಬಗಳನ್ನು ಮಾಡಬೇಕು. ಈ ಕಂಬಗಳನ್ನು ಜಾಲೀಮರದಿಂದ ಮಾಡಿ ಬಂಗಾರದಿಂದ ಹೊದಿಸಬೇಕು. 14 ಕಂಬಗಳನ್ನು ಪೆಟ್ಟಿಗೆ ಕೊನೆಗಳಲ್ಲಿರುವ ಬಳೆಗಳಲ್ಲಿ ಸೇರಿಸಿ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗಬೇಕು. 15 ಕಂಬಗಳು ಯಾವಾಗಲೂ ಪೆಟ್ಟಿಗೆಯ ಬಳೆಗಳಲ್ಲಿ ಇರಬೇಕು. ಕಂಬಗಳನ್ನು ಅವುಗಳಿಂದ ಹೊರಗೆ ತೆಗೆಯಬಾರದು.

16 “ನಾನು ನಿನಗೆ ಕೊಡುವ ಆಜ್ಞಾಶಾಸನವನ್ನು ಅದರೊಳಗೆ ಇಡು” ಎಂದು ಹೇಳಿದನು. 17 ಇದಲ್ಲದೆ ದೇವರು ಮೋಶೆಗೆ, “ಅಪ್ಪಟ ಬಂಗಾರದಿಂದ ಕೃಪಾಸನವನ್ನು ಮಾಡಿಸಬೇಕು. ಅದು ಎರಡೂವರೆ ಮೊಳ ಉದ್ದವಾಗಿರಬೇಕು. ಒಂದೂವರೆ ಮೊಳ ಅಗಲವಾಗಿರಬೇಕು. 18 ಬಳಿಕ ಕೆರೂಬಿಯರ ಎರಡು ಬಂಗಾರದ ಆಕಾರಗಳನ್ನು ಮಾಡಿಸಿ ಕೃಪಾಸನದ ಎರಡು ಕೊನೆಗಳಲ್ಲಿ ಇಡಬೇಕು. 19 ಕೃಪಾಸನದ ಒಂದು ಕೊನೆಯಲ್ಲಿ ಒಂದು ಕೆರೂಬಿಯನ್ನೂ ಇನ್ನೊಂದು ಕೊನೆಯಲ್ಲಿ ಇನ್ನೊಂದು ಕೆರೂಬಿಯನ್ನೂ ಜೋಡಿಸಬೇಕು. 20 ಅವುಗಳ ರೆಕ್ಕೆಗಳು ಆಕಾಶದ ಕಡೆಗೆ ಚಾಚಿರಬೇಕು; ಪೆಟ್ಟಿಗೆಯನ್ನು ಮುಚ್ಚಿಕೊಂಡಿರಬೇಕು. ಅವುಗಳ ಮುಖಗಳು ಎದುರುಬದುರಾಗಿ ಕೃಪಾಸನವನ್ನು ನೋಡುತ್ತಿರಬೇಕು.

21 “ನಾನು ನಿನಗೆ ಕೊಡುವ ಆಜ್ಞಾಶಾಸನವನ್ನು ಪೆಟ್ಟಿಗೆಯಲ್ಲಿಡಬೇಕು; ಕೃಪಾಸನವನ್ನು ಆ ಪೆಟ್ಟಿಗೆಯ ಮೇಲಿಡಬೇಕು. 22 ನಾನು ನಿನಗೆ ದರ್ಶನ ಕೊಡುವಾಗ ಒಡಂಬಡಿಕೆ ಪೆಟ್ಟಿಗೆಯ ಮೇಲಿರುವ ಕೆರೂಬಿಗಳ ಮಧ್ಯದಿಂದ ನಿನ್ನ ಸಂಗಡ ಮಾತಾಡುವೆನು; ಇಸ್ರೇಲರಿಗೆ ಆಜ್ಞಾಪಿಸಬೇಕಾದವುಗಳನ್ನು ನಿನಗೆ ತಿಳಿಸುವೆನು.

ಕೊಲೊಸ್ಸೆಯವರಿಗೆ 2:1-5

ನಿಮಗೆ ಸಹಾಯ ಮಾಡಲು ನಾನು ಬಹಳವಾಗಿ ಮಾಡುತ್ತಿರುವ ಪ್ರಯತ್ನ ನಿಮಗೆ ತಿಳಿದಿರಬೇಕೆಂಬುದು ನನ್ನ ಅಪೇಕ್ಷೆ ಇದಲ್ಲದೆ ಲವೊದಿಕೀಯದಲ್ಲಿರುವವರಿಗೆ ಮತ್ತು ನನ್ನನ್ನು ಎಂದೂ ನೋಡಿಲ್ಲದವರಿಗೆ ಸಹ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅವರೆಲ್ಲರೂ ಆಂತರ್ಯದಲ್ಲಿ ಉತ್ತೇಜಿತರಾಗಿ ಪ್ರೀತಿಯಿಂದ ಒಂದಾಗಿರಬೇಕೆಂದು ಮತ್ತು ತಿಳುವಳಿಕೆಯಿಂದ ಬರುವ ದೃಢನಂಬಿಕೆಯಲ್ಲಿ ಶ್ರೀಮಂತರಾಗಿರಬೇಕೆಂದು ಆಶಿಸುತ್ತೇನೆ. ಅಂದರೆ ದೇವರ ನಿಗೂಢ ಸತ್ಯವನ್ನು ಅವರು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಸ್ವತಃ ಕ್ರಿಸ್ತನೇ ಆ ಸತ್ಯ. ಕ್ರಿಸ್ತನಲ್ಲಿ ಸರ್ವಜ್ಞಾನವು ಮತ್ತು ತಿಳುವಳಿಕೆಯು ಬಚ್ಚಿಟ್ಟಿರುವ ನಿಕ್ಷೇಪಗಳಂತಿವೆ.

ಯಾವನೂ ನಿಮ್ಮನ್ನು ಸರಿಯೆನಿಸುವ ಸುಳ್ಳು ಮಾತುಗಳಿಂದ ಮೋಸಗೊಳಿಸದಂತೆ ಈ ಸಂಗತಿಗಳನ್ನು ನಿಮಗೆ ಹೇಳಿದ್ದೇನೆ. ಅಲ್ಲಿ ನಾನು ನಿಮ್ಮೊಡನೆ ಇರದಿದ್ದರೂ ನನ್ನ ಮನಸ್ಸು ನಿಮ್ಮೊಡನಿರುತ್ತದೆ. ನಿಮ್ಮ ಕ್ರಮಬದ್ಧವಾದ ನಡತೆಯನ್ನು ನೋಡಲು ಮತ್ತು ಕ್ರಿಸ್ತನಲ್ಲಿ ಇಟ್ಟಿರುವ ದೃಢನಂಬಿಕೆಯನ್ನು ಅರಿಯಲು ಬಹಳ ಸಂತೋಷಪಡುತ್ತೇನೆ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International