Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 18:1-6

ಯೆಹೋವನು ದಾವೀದನನ್ನು ಸೌಲನಿಂದಲೂ ಎಲ್ಲಾ ಶತ್ರು ಸೈನ್ಯಗಳಿಂದಲೂ ರಕ್ಷಿಸಿದಾಗ ರಚಿಸಲ್ಪಟ್ಟಿತು. ರಚನೆಗಾರ: ದಾವೀದ.

18 ನನ್ನ ಬಲವಾಗಿರುವ ಯೆಹೋವನೇ,
    ನಿನ್ನನ್ನೇ ಪ್ರೀತಿಸುವೆನು!

ಯೆಹೋವನು ನನ್ನ ಬಂಡೆಯೂ[a] ನನ್ನ ಕೋಟೆಯೂ
    ನನ್ನ ಆಶ್ರಯಗಿರಿಯೂ ನನ್ನ ಗುರಾಣಿಯೂ
    ನನ್ನ ರಕ್ಷಣಾಬಲವೂ ನನ್ನ ದುರ್ಗವೂ ಆಗಿದ್ದಾನೆ.

ಯೆಹೋವನಿಗೆ ಸ್ತೋತ್ರವಾಗಲಿ!
    ನಾನು ಆತನಿಗೆ ಮೊರೆಯಿಟ್ಟಾಗ ನನ್ನನ್ನು ವೈರಿಗಳಿಂದ ರಕ್ಷಿಸಿದನು.
ಮರಣಕರವಾದ ಹಗ್ಗಗಳು ನನ್ನನ್ನು ಬಿಗಿದುಕೊಂಡವು.
    ನಾಶಪ್ರವಾಹವು ನನ್ನನ್ನು ಪಾತಾಳಕ್ಕೆ ಕೊಚ್ಚಿಕೊಂಡು ಹೋಗುತ್ತಿತ್ತು.
ಪಾತಾಳದ ಹಗ್ಗಗಳು ನನ್ನನ್ನು ಬಿಗಿದುಕೊಂಡಿದ್ದವು.
    ಮರಣಕರವಾದ ಉರುಲುಗಳು ನನ್ನೆದುರಿನಲ್ಲಿದ್ದವು.
ಆಗ ನಾನು ಸಹಾಯಕ್ಕಾಗಿ ಯೆಹೋವನನ್ನು ಕೂಗಿಕೊಂಡೆನು;
    ನನ್ನ ದೇವರಿಗೆ ಮೊರೆಯಿಟ್ಟೆನು.
ಆತನು ತನ್ನ ಆಲಯದಲ್ಲಿ ನನ್ನ ಸ್ವರವನ್ನು ಕೇಳಿದನು;
    ನನ್ನ ಮೊರೆಗೆ ಕಿವಿಗೊಟ್ಟನು.

ಕೀರ್ತನೆಗಳು 18:43-50

43 ನನ್ನ ವಿರೋಧಿಗಳಿಂದ ನನ್ನನ್ನು ರಕ್ಷಿಸು.
    ಆ ಜನಾಂಗಗಳಿಗೆ ನನ್ನನ್ನು ನಾಯಕನನ್ನಾಗಿ ಮಾಡು.
    ನನಗೆ ಗೊತ್ತಿಲ್ಲದವರೂ ನನ್ನ ಸೇವೆಮಾಡುವರು.
44 ಅವರು ನನ್ನ ಕುರಿತಾಗಿ ಕೇಳಿದ ಕೂಡಲೇ ವಿಧೇಯರಾಗುವರು.
    ಆ ವಿದೇಶಿಯರು ನನ್ನ ವಿಷಯದಲ್ಲಿ ಭಯದಿಂದಿರುವರು.
45 ಆ ವಿದೇಶಿಯರು ಧೈರ್ಯವಿಲ್ಲದವರಾಗಿ ನಡುಗುತ್ತಾ
    ತಮ್ಮ ಕೋಟೆಗಳಿಂದ ಬರುವರು.

46 ಯೆಹೋವನು ಜೀವಸ್ವರೂಪನಾಗಿದ್ದಾನೆ.
    ನನ್ನ ಬಂಡೆಯಾಗಿರುವ ಆತನನ್ನು ಸ್ತುತಿಸುವೆನು.
    ನನ್ನನ್ನು ರಕ್ಷಿಸುವ ದೇವರು ಮಹೋನ್ನತನಾಗಿದ್ದಾನೆ.
47 ದೇವರು ನನ್ನ ವೈರಿಗಳನ್ನು ದಂಡಿಸಿ
    ಅವರನ್ನು ನನಗೆ ಅಧೀನಪಡಿಸಿದ್ದಾನೆ.
48     ಯೆಹೋವನೇ, ಶತ್ರುಗಳಿಂದ ನೀನು ನನ್ನನ್ನು ಕಾಪಾಡಿದೆ.

ನನ್ನ ವಿರೋಧಿಗಳನ್ನು ಸೋಲಿಸಲು ನೀನು ನನಗೆ ಸಹಾಯಮಾಡಿದೆ;
    ಕ್ರೂರಿಗಳಿಂದ ನನ್ನನ್ನು ರಕ್ಷಿಸಿದೆ.
49 ಯೆಹೋವನೇ, ಈ ಕಾರಣದಿಂದ ನಾನು ನಿನ್ನನ್ನು ಜನಾಂಗಗಳ ಮಧ್ಯದಲ್ಲಿ ಸ್ತುತಿಸುವೆನು;
    ನಿನ್ನ ಹೆಸರನ್ನು ಕುರಿತು ಹಾಡುಗಳನ್ನು ಹಾಡುವೆನು.

50 ಆತನು ತಾನು ನೇಮಿಸಿದ ರಾಜನಿಗೆ ಅನೇಕ ಯುದ್ಧಗಳಲ್ಲಿ ಜಯವನ್ನು ದಯಪಾಲಿಸುವನು;
    ತಾನು ಅಭಿಷೇಕಿಸಿದ ರಾಜನಿಗೆ ಶಾಶ್ವತವಾದ ಪ್ರೀತಿಯನ್ನು ತೋರುವನು.
    ಆತನು ದಾವೀದನಿಗೂ ಅವನ ಸಂತತಿಯವರಿಗೂ ಎಂದೆಂದಿಗೂ ನಂಬಿಗಸ್ತನಾಗಿರುವನು.

1 ಪೂರ್ವಕಾಲವೃತ್ತಾಂತ 10

ಅರಸನಾದ ಸೌಲನ ಮರಣ

10 ಫಿಲಿಷ್ಟಿಯರು ಇಸ್ರೇಲರ ವಿರೋಧವಾಗಿ ಕಾದಾಡಿದರು. ಆದರೆ ಇಸ್ರೇಲರು ಫಿಲಿಷ್ಟಿಯರ ಎದುರಿನಿಂದ ಓಡಿಹೋಗಬೇಕಾಯಿತು. ಇಸ್ರೇಲರಲ್ಲಿ ಬಹಳ ಮಂದಿ ಗಿಲ್ಬೋವ ಬೆಟ್ಟದ ಮೇಲೆ ಹತರಾದರು. ಫಿಲಿಷ್ಟಿಯರು ಸೌಲನನ್ನು ಬೆನ್ನಟ್ಟುತ್ತಾ ಹೋಗಿ ಕೊನೆಗೆ ಸೌಲನನ್ನೂ ಅವನ ಮಕ್ಕಳಾದ ಯೋನಾತಾನನನ್ನೂ ಅಬೀನಾದಾಬನನ್ನೂ ಮಲ್ಕೀಷೂವನನ್ನೂ ಕೊಂದರು. ಸೌಲನ ಸುತ್ತಲೂ ಯುದ್ಧವು ಬಹು ಘೋರವಾಗಿ ನಡೆಯಿತು. ಬಿಲ್ಲುಗಾರರು ತಮ್ಮ ಬಿಲ್ಲುಗಳಿಂದ ಸೌಲನ ಕಡೆಗೆ ಗುರಿಯಿಟ್ಟು ಹೊಡೆದು ಅವನನ್ನು ಗಾಯಪಡಿಸಿದರು.

ಆಗ ಸೌಲನು ತನ್ನ ಆಯುಧ ಹೊರುವವನಿಗೆ, “ನಿನ್ನ ಖಡ್ಗದಿಂದ ನನ್ನನ್ನು ಇರಿದು ಕೊಂದುಹಾಕು. ಆಗ ಪರದೇಶಿಯರು ಬಂದು ನನ್ನನ್ನು ಗಾಯಪಡಿಸಿ ಹಾಸ್ಯಮಾಡಲು ಸಾಧ್ಯವಾಗುವುದಿಲ್ಲ” ಎಂದನು.

ಆದರೆ ಅವನ ಆಯುಧಹೊರುವವನು ಅದಕ್ಕೆ ಒಪ್ಪಲಿಲ್ಲ; ಸೌಲನನ್ನು ಕೊಲ್ಲಲು ಅವನು ಹೆದರಿದನು. ಆಗ ಸೌಲನು ತನ್ನ ಖಡ್ಗದ ಮೇಲೆ ತಾನೇ ಬಿದ್ದು ಸತ್ತನು. ಅವನ ಆಯುಧ ಹೊರುವವನು ಸೌಲನು ಸತ್ತದ್ದನ್ನು ನೋಡಿ ತಾನೂ ಆತ್ಮಹತ್ಯೆ ಮಾಡಿಕೊಂಡನು. ಹೀಗೆ ಸೌಲನೂ ಅವನ ಮೂರು ಮಂದಿ ಮಕ್ಕಳೂ ಒಟ್ಟಿಗೆ ಸತ್ತರು.

ತಗ್ಗಿನಲ್ಲಿ ವಾಸಿಸುತ್ತಿದ್ದ ಇಸ್ರೇಲರು ತಮ್ಮ ಸೈನ್ಯವು ವೈರಿಗಳಿಂದ ಓಡಿಸಲ್ಪಡುವದನ್ನು ನೋಡಿದರು. ಅರಸನಾದ ಸೌಲನು ಮತ್ತು ಅವನ ಗಂಡುಮಕ್ಕಳು ಸತ್ತುಹೋಗಿರುವುದು ಅವರಿಗೆ ತಿಳಿಯಿತು. ಆಗ ಅವರೂ ತಮ್ಮತಮ್ಮ ಮನೆಗಳನ್ನು ಬಿಟ್ಟು ಓಡಿದರು. ಫಿಲಿಷ್ಟಿಯರು ಅವರ ಮನೆಗಳಿಗೆ ಬಂದಾಗ ಯಾರೂ ಇಲ್ಲದ್ದನ್ನು ನೋಡಿ ಅಲ್ಲಿಯೇ ವಾಸಿಸಿದರು.

ಮರುದಿವಸ ಫಿಲಿಷ್ಟಿಯರು ಹೆಣಗಳ ಮೇಲಿರುವ ಬೆಲೆಬಾಳುವ ವಸ್ತುಗಳನ್ನು ದೋಚಲು ಬಂದರು. ಆಗ ಅವರಿಗೆ ಗಿಲ್ಬೋವ ಬೆಟ್ಟದ ಮೇಲೆ ಸೌಲ ಮತ್ತು ಅವನ ಗಂಡುಮಕ್ಕಳ ಶರೀರಗಳು ದೊರಕಿದವು. ಸೌಲನ ಶರೀರದ ಮೇಲಿದ್ದ ಬೆಲೆಬಾಳುವ ವಸ್ತುಗಳನ್ನು ಅವರು ದೋಚಿಕೊಂಡರು; ಅವನ ತಲೆಯನ್ನೂ ಆಯುಧಗಳನ್ನೂ ತೆಗೆದುಕೊಂಡು ತಮ್ಮ ಊರಿನಲ್ಲಿದ್ದ ಜನರಿಗೂ ಅವರ ಸುಳ್ಳುದೇವರುಗಳಿಗೂ ತಿಳಿಸಲು ಸಂದೇಶಕರನ್ನು ಕಳುಹಿಸಿದರು. 10 ಫಿಲಿಷ್ಟಿಯರು ಸೌಲನ ಆಯುಧಗಳನ್ನು ತಮ್ಮ ದೇವರ ಆಲಯದಲ್ಲಿಟ್ಟರು. ಸೌಲನ ತಲೆಯನ್ನು ದಾಗೋನನ ದೇವಸ್ಥಾನದಲ್ಲಿ ತೂಗುಹಾಕಿದರು.

11 ಫಿಲಿಷ್ಟಿಯರು ಸೌಲನಿಗೆ ಮಾಡಿದ್ದು ಯಾಬೇಷ್ ಗಿಲ್ಯಾದಿನ ಜನರಿಗೆ ತಿಳಿಯಿತು. 12 ಆಗ ಯಾಬೇಷ್ ಗಿಲ್ಯಾದಿನ ರಣವೀರರು ಹೊರಟು ಸೌಲನ ಮತ್ತು ಅವನ ಗಂಡುಮಕ್ಕಳ ಶವಗಳನ್ನು ಯಾಬೇಷ್ ಗಿಲ್ಯಾದಿಗೆ ತಂದರು. ಆ ರಣವೀರರು ಸೌಲನ ಮತ್ತು ಅವನ ಗಂಡುಮಕ್ಕಳ ಎಲುಬುಗಳನ್ನು ಯಾಬೇಷಿನಲ್ಲಿದ್ದ ಒಂದು ದೊಡ್ಡ ಮರದ ಬುಡದಲ್ಲಿ ಹೂಳಿಟ್ಟರು. ಅನಂತರ ಏಳು ದಿವಸಗಳ ತನಕ ಅವರು ಶೋಕಿಸಿದರು.

13 ಸೌಲನು ಯೆಹೋವನಿಗೆ ಅವಿಧೇಯನಾಗಿದ್ದರಿಂದ ಸತ್ತನು. ಅವನು ಯೆಹೋವನ ಮಾತನ್ನು ಕೇಳದೆ ಹೋದನು. 14 ಅಲ್ಲದೆ ಅವನು ಯೆಹೋವನ ಸಲಹೆಯನ್ನು ಪಡೆದುಕೊಳ್ಳುವ ಬದಲಾಗಿ ಮಾಟಮಂತ್ರ ಮಾಡುವ ಹೆಂಗಸಿನ ಬಳಿಗೆ ಹೋದನು. ಆದ್ದರಿಂದಲೇ ಯೆಹೋವನು ರಾಜ್ಯವನ್ನು ಸೌಲನಿಂದ ತೆಗೆದು ಇಷಯನ ಮಗನಾದ ದಾವೀದನಿಗೆ ಕೊಟ್ಟನು.

ಮಾರ್ಕ 9:14-29

ಯೇಸುವಿನಿಂದ ಕಾಯಿಲೆ ಹುಡುಗನಿಗೆ ಸ್ವಸ್ಥತೆ

(ಮತ್ತಾಯ 17:14-20; ಲೂಕ 9:37-43)

14 ನಂತರ ಯೇಸು, ಪೇತ್ರ, ಯಾಕೋಬ ಮತ್ತು ಯೋಹಾನ ಇತರ ಶಿಷ್ಯರ ಬಳಿಗೆ ಹೋದರು. ಆ ಶಿಷ್ಯರ ಸುತ್ತಲೂ ಅನೇಕ ಜನರು ನೆರೆದಿದ್ದರು. ಧರ್ಮೋಪದೇಶಕರು ಅವರೊಡನೆ ವಾದ ಮಾಡುತ್ತಾ ಇದ್ದರು. 15 ಆ ಜನರು ಯೇಸುವನ್ನು ನೋಡಿದಾಗ ಬಹಳ ಆಶ್ಚರ್ಯಪಟ್ಟು ಆತನನ್ನು ಸ್ವಾಗತಿಸಲು ಆತನ ಬಳಿಗೆ ಬಂದರು.

16 ಯೇಸು, “ನೀವು ಯಾವುದರ ಬಗ್ಗೆ ವಾದಿಸುತ್ತಿದ್ದೀರಿ?” ಎಂದು ಕೇಳಿದನು.

17 ಒಬ್ಬನು, “ಗುರುವೇ, ನನ್ನ ಮಗನಿಗೆ ದೆವ್ವ ಹಿಡಿದಿದ್ದ ಕಾರಣ ನಾನು ಅವನನ್ನು ನಿನ್ನ ಶಿಷ್ಯರ ಬಳಿಗೆ ತಂದೆನು. ಅವನು ಮಾತಾಡಲಾರ. 18 ಆ ದೆವ್ವವು ಅವನ ಮೇಲೆ ಆಕ್ರಮಣ ಮಾಡಿದಾಗಲೆಲ್ಲಾ ಅವನನ್ನು ನೆಲಕ್ಕೆ ಕೆಡವುತ್ತದೆ. ನನ್ನ ಮಗನು ಬಾಯಿಂದ ನೊರೆ ಸುರಿಸುತ್ತಾ ಹಲ್ಲುಗಳನ್ನು ಕಟಕಟನೆ ಕಡಿಯುತ್ತಾನೆ ಮತ್ತು ಬಹಳ ಬಿರುಸಾಗುತ್ತಾನೆ. ಅವನನ್ನು ಆ ದೆವ್ವದಿಂದ ಬಿಡಿಸುವಂತೆ ನಾನು ನಿನ್ನ ಶಿಷ್ಯರನ್ನು ಕೇಳಿಕೊಂಡೆನು. ಆದರೆ ಅವರಿಗೆ ಸಾಧ್ಯವಾಗಲಿಲ್ಲ” ಎಂದು ಹೇಳಿದನು.

19 ಯೇಸು, “ವಿಶ್ವಾಸವಿಲ್ಲದ ಸಂತಾನವೇ, ನಾನು ನಿಮ್ಮೊಡನೆ ಇನ್ನೆಷ್ಟು ಕಾಲ ಇರಲಿ? ಇನ್ನೆಷ್ಟು ಕಾಲ ಸಹಿಸಿಕೊಳ್ಳಲಿ? ಆ ಹುಡುಗನನ್ನು ನನ್ನ ಬಳಿಗೆ ತನ್ನಿರಿ!” ಎಂದು ಉತ್ತರಿಸಿದನು.

20 ಆಗ ಶಿಷ್ಯರು ಆ ಹುಡುಗನನ್ನು ಯೇಸುವಿನ ಬಳಿಗೆ ತಂದರು. ಆ ದೆವ್ವವು ಯೇಸುವನ್ನು ನೋಡಿದ ಕೂಡಲೇ ಆ ಹುಡುಗನ ಮೇಲೆ ಆಕ್ರಮಣ ಮಾಡಿತು. ಆ ಹುಡುಗನು ಕೆಳಗೆ ಬಿದ್ದು, ಬಾಯಿಂದ ನೊರೆಯನ್ನು ಸುರಿಸುತ್ತಾ ಒದ್ದಾಡತೊಡಗಿದನು.

21 ಯೇಸು, “ಎಷ್ಟು ಕಾಲದಿಂದ ಹೀಗಾಗುತ್ತಿದೆ?” ಎಂದು ಆ ಹುಡುಗನ ತಂದೆಯನ್ನು ಕೇಳಿದನು.

ಅದಕ್ಕೆ ತಂದೆಯು, “ಬಾಲ್ಯದಿಂದಲೇ ಹೀಗಾಗುತ್ತಿದೆ. 22 ಆಗಿಂದಾಗ್ಗೆ ದೆವ್ವವು ಅವನನ್ನು ಕೊಲ್ಲಲು ಬೆಂಕಿಯೊಳಗೆ ಅಥವಾ ನೀರಿನೊಳಗೆ ಎಸೆಯುತ್ತದೆ. ನಿನಗೆ ಸಾಧ್ಯವಿರುವುದಾದರೆ, ದಯವಿಟ್ಟು ನಮ್ಮ ಮೇಲೆ ಕರುಣೆಯಿಟ್ಟು ಸಹಾಯಮಾಡು” ಎಂದು ಉತ್ತರಿಸಿದನು.

23 ಅದಕ್ಕೆ ಯೇಸು, “‘ನಿನಗೆ ಸಾಧ್ಯವಿರುವುದಾದರೆ’ ಎಂದು ನೀನು ಹೇಳುವುದೇಕೆ? ನಂಬಿಕೆಯಿಡುವ ವ್ಯಕ್ತಿಗೆ ಎಲ್ಲವೂ ಸಾಧ್ಯ” ಎಂದು ಹೇಳಿದನು.

24 ಆ ಹುಡುಗನ ತಂದೆಯು ಸಂತೋಷದಿಂದ, “ನಾನು ನಂಬುತ್ತೇನೆ. ಇನ್ನೂ ಹೆಚ್ಚಾಗಿ ನಂಬಲು ನನಗೆ ಸಹಾಯ ಮಾಡು” ಎಂದನು.

25 ಅಲ್ಲಿ ನಡೆಯುತ್ತಿರುವುದನ್ನು ನೋಡಲು ಜನರೆಲ್ಲರೂ ಓಡಿಬರುತ್ತಿರುವುದನ್ನು ಕಂಡ ಯೇಸು, ಆ ದೆವ್ವಕ್ಕೆ, “ಎಲೈ ಕಿವುಡು ಮೂಕ ದೆವ್ವವೇ, ಈ ಹುಡುಗನಿಂದ ಹೊರಗೆ ಬರುವಂತೆಯೂ ಇವನೊಳಗೆ ಇನ್ನೆಂದಿಗೂ ಪ್ರವೇಶಿಸದಂತೆಯೂ ನಾನು ನಿನಗೆ ಆಜ್ಞಾಪಿಸುತ್ತೇನೆ!” ಎಂದನು.

26 ಆ ದೆವ್ವವು ಅರಚಿತು. ಅದು ಆ ಹುಡುಗನನ್ನು ಮತ್ತೆ ನೆಲದ ಮೇಲೆ ಬೀಳಿಸಿ, ಒದ್ದಾಡಿಸಿ ಹೊರಬಂದಿತು. ಆ ಹುಡುಗನು ಸತ್ತವನಂತೆ ಬಿದ್ದಿದ್ದನು. ಅನೇಕ ಜನರು, “ಅವನು ಸತ್ತುಹೋದನು” ಎಂದರು. 27 ಆದರೆ ಯೇಸು ಆ ಹುಡುಗನ ಕೈ ಹಿಡಿದೆತ್ತಿ, ಎದ್ದುನಿಲ್ಲಲು ಅವನಿಗೆ ಸಹಾಯಮಾಡಿದನು.

28 ಯೇಸು ಮನೆಯೊಳಗೆ ಹೋದ ಮೇಲೆ ಆತನ ಶಿಷ್ಯರು ಪ್ರತ್ಯೇಕವಾದ ಸ್ಥಳದಲ್ಲಿ ಆತನಿಗೆ, “ಆ ದೆವ್ವವನ್ನು ಬಿಡಿಸಲು ನಮಗೆ ಏಕೆ ಸಾಧ್ಯವಾಗಲಿಲ್ಲ?” ಎಂದು ಕೇಳಿದರು.

29 ಯೇಸು, “ಈ ಬಗೆಯ ದೆವ್ವವನ್ನು ಪ್ರಾರ್ಥನೆಯಿಂದ ಮಾತ್ರ ಬಿಡಿಸಲು ಸಾಧ್ಯ” ಎಂದು ಉತ್ತರಿಸಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International