Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 21

ರಚನೆಗಾರ: ದಾವೀದ.

21 ಯೆಹೋವನೇ, ನಿನ್ನ ಬಲವು ರಾಜನನ್ನು ಸಂತೋಷಗೊಳಿಸುವುದು.
    ನಿನ್ನ ರಕ್ಷಣೆಯು ಅವನನ್ನು ಹರ್ಷಗೊಳಿಸುವುದು.
ರಾಜನು ನಿನ್ನಲ್ಲಿ ಪ್ರಾರ್ಥಿಸಿದಾಗ
    ನೀನು ಅವನ ಕೋರಿಕೆಗಳನ್ನೆಲ್ಲಾ ಈಡೇರಿಸಿದೆ.

ನೀನು ರಾಜನನ್ನು ಬಹಳವಾಗಿ ಆಶೀರ್ವದಿಸಿರುವೆ.
    ಅವನ ತಲೆಗೆ ಬಂಗಾರದ ಕಿರೀಟವನ್ನು ತೊಡಿಸಿರುವೆ.
ಅವನು ದೀರ್ಘಾಯುಷ್ಯವನ್ನು ಕೇಳಿಕೊಂಡಾಗ ನೀನು ದಯಪಾಲಿಸಿದೆ.
    ದೇವರೇ, ನೀನು ರಾಜನಿಗೆ ಶಾಶ್ವತವಾದ ಜೀವಿತವನ್ನು ಅನುಗ್ರಹಿಸಿದೆ.
ನೀನು ರಾಜನಿಗೆ ಜಯವನ್ನು ದೊರಕಿಸಿ
    ಅವನಿಗೆ ಗೌರವವನ್ನೂ ಹೊಗಳಿಕೆಯನ್ನೂ ಬರಮಾಡಿದೆ.
ನೀನು ರಾಜನಿಗೆ ಶಾಶ್ವತವಾದ ಆಶೀರ್ವಾದವನ್ನು ಕೊಟ್ಟಿರುವೆ.
    ಅವನು ನಿನ್ನ ಸನ್ನಿಧಿಯಲ್ಲಿ ಅತ್ಯಾನಂದಪಡುವನು.
ರಾಜನು ಯೆಹೋವನಲ್ಲಿಯೇ ಭರವಸವಿಟ್ಟಿದ್ದಾನೆ;
    ಮಹೋನ್ನತನಾದ ದೇವರು ಅವನನ್ನು ನಿರಾಶೆಗೊಳಿಸುವುದಿಲ್ಲ.
ದೇವರೇ, ನಿನ್ನ ಬಲಿಷ್ಠತನವನ್ನು ನಿನ್ನ ಶತ್ರುಗಳಿಗೆಲ್ಲ ನೀನು ತೋರಿಸುವೆ.
    ನೀನು ದ್ವೇಷಿಸುವವರನ್ನು ನಿನ್ನ ಶಕ್ತಿಯು ಸೋಲಿಸುವುದು.
ಯೆಹೋವನೇ, ನೀನು ರಾಜನೊಂದಿರುವಾಗ
    ಅವನು ಉರಿಯುವ ಕುಲಿಮೆಯಂತಿರುವನು.
ಅವನ ಕೋಪವು ಧಗಧಗಿಸುವ ಬೆಂಕಿಯಂತೆ ಸುಡುವುದು;
    ಅವನು ಶತ್ರುಗಳನ್ನು ನಾಶಮಾಡುವನು.
10 ಅವನ ಶತ್ರುಗಳ ಕುಟುಂಬಗಳು ನಾಶವಾಗುತ್ತವೆ;
    ಅವು ಭೂಮಿಯ ಮೇಲೆ ಇಲ್ಲವಾಗುತ್ತವೆ.
11 ಯಾಕೆಂದರೆ, ಅವರು ನಿನಗೆ ವಿರೋಧವಾಗಿ ದುರಾಲೋಚನೆಗಳನ್ನು ಮಾಡಿದರು.
    ಅವರು ಕುತಂತ್ರಗಳನ್ನು ಮಾಡಿದರೂ ಯಶಸ್ವಿಯಾಗಲಿಲ್ಲ.
12 ನಿನ್ನ ಬಿಲ್ಲುಗಳಿಂದ ಬಾಣಗಳನ್ನು ನೀನು ಎಸೆಯುವಾಗ
    ಅವರು ಬೆನ್ನುಕೊಟ್ಟು ಓಡಿಹೋಗುವರು.

13 ಯೆಹೋವನೇ, ನಿನ್ನ ಪರಾಕ್ರಮಕ್ಕಾಗಿ ನಿನ್ನನ್ನು ಕೊಂಡಾಡುವೆನು.
    ನಿನ್ನ ಮಹತ್ವದ ಬಗ್ಗೆ ವಾದ್ಯ ನುಡಿಸುತ್ತಾ ಹಾಡುವೆವು.

2 ಸಮುವೇಲನು 5:11-16

11 ತೂರಿನ ರಾಜನಾದ ಹೀರಾಮನು ದಾವೀದನ ಬಳಿಗೆ ಸಂದೇಶಕರನ್ನು ಕಳುಹಿಸಿದನು. ಹೀರಾಮನು ದೇವದಾರು ಮರಗಳನ್ನು, ಬಡಗಿಗಳನ್ನು ಮತ್ತು ಕಲ್ಲಿನಲ್ಲಿ ಕೆತ್ತನೆ ಮಾಡುವ ಶಿಲ್ಪಿಗಳನ್ನೂ ಸಹ ಕಳುಹಿಸಿದನು. ಅವರು ದಾವೀದನಿಗಾಗಿ ಒಂದು ಮನೆಯನ್ನು ಕಟ್ಟಿದರು. 12 ಯೆಹೋವನು ನಿಜವಾಗಿಯೂ ತನ್ನನ್ನು ಇಸ್ರೇಲಿನ ರಾಜನನ್ನಾಗಿ ಮಾಡಿದ್ದಾನೆಂಬುದನ್ನೂ ಆತನು ತನ್ನ ಜನರಾದ ಇಸ್ರೇಲರಿಗಾಗಿ ನನ್ನ ರಾಜ್ಯವನ್ನು ಸ್ಥಿರಪಡಿಸಿದ್ದಾನೆಂತಲೂ ದಾವೀದನು ಇದರ ಮೂಲಕ ತಿಳಿದುಕೊಂಡನು.

13 ದಾವೀದನು ಹೆಬ್ರೋನಿನಿಂದ ಜೆರುಸಲೇಮಿಗೆ ಹೋದನು. ದಾವೀದನಿಗೆ ಜೆರುಸಲೇಮಿನಲ್ಲಿ ಅನೇಕ ಪತ್ನಿಯರೂ ಉಪಪತ್ನಿಯರೂ ಇದ್ದರು. ಜೆರುಸಲೇಮಿನಲ್ಲಿ ದಾವೀದನಿಗೆ ಅನೇಕ ಮಕ್ಕಳು ಹುಟ್ಟಿದರು. 14 ಜೆರುಸಲೇಮಿನಲ್ಲಿ ದಾವೀದನಿಗೆ ಹುಟ್ಟಿದ ಗಂಡುಮಕ್ಕಳ ಹೆಸರುಗಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್, 15 ಇಬ್ಹಾರ್, ಎಲೀಷೂವ, ನೆಫೆಗ್, ಯಾಫೀಯ, 16 ಎಲೀಷಾಮ, ಎಲ್ಯಾದ, ಎಲೀಫೆಲೆಟ್.

ಯಾಕೋಬನು 5:7-12

ತಾಳ್ಮೆಯಿಂದಿರಿ

ಸಹೋದರ ಸಹೋದರಿಯರೇ, ತಾಳ್ಮೆಯಿಂದಿರಿ, ಪ್ರಭುವಾದ ಯೇಸು ಪ್ರತ್ಯಕ್ಷನಾಗುತ್ತಾನೆ. ಆದ್ದರಿಂದ ಅಲ್ಲಿಯವರೆಗೆ ತಾಳ್ಮೆಯಿಂದಿರಿ. ತನ್ನ ಅಮೂಲ್ಯ ಬೆಳೆಯು ಭೂಮಿಯಿಂದ ಬರುವ ತನಕ ರೈತನು ತಾಳ್ಮೆಯಿಂದ ಕಾಯುತ್ತಾನೆ. ಮೊದಲ ಹಾಗೂ ಕೊನೆಯ ಮಳೆಯು ತನ್ನ ಬೆಳೆಯ ಮೇಲೆ ಸುರಿಯುವ ತನಕ ರೈತನು ತಾಳ್ಮೆಯಿಂದ ಕಾದಿರುತ್ತಾನೆ. ನೀವೂ ತಾಳ್ಮೆಯಿಂದಿರಬೇಕು. ನಿಮ್ಮ ನಿರೀಕ್ಷೆಯನ್ನು ಬಿಡಬೇಡಿ. ಪ್ರಭು ಯೇಸು ಬೇಗನೆ ಪ್ರತ್ಯಕ್ಷನಾಗುವನು. ಸಹೋದರ ಸಹೋದರಿಯರೇ, ಒಬ್ಬರ ಮೇಲೊಬ್ಬರು ದೂರದಿರಿ. ನೀವು ದೂರುವುದನ್ನು ನಿಲ್ಲಿಸದಿದ್ದರೆ ದೋಷಿಗಳೆಂದು ನಿಮಗೆ ತೀರ್ಪು ನೀಡಲಾಗುವುದು. ನ್ಯಾಯಧಿಪತಿಯು ಬರಲು ಸಿದ್ಧನಾಗಿದ್ದಾನೆ!

10 ಸಹೋದರ ಸಹೋದರಿಯರೇ, ಪ್ರಭುವಿನ ಸಂದೇಶವನ್ನು ತಿಳಿಸಿದ ಪ್ರವಾದಿಗಳು ನಿಮಗೆ ಮಾದರಿಯಾಗಿರಲಿ. ಅವರು ಅನೇಕ ರೀತಿಯಲ್ಲಿ ಸಂಕಟವನ್ನು ಅನುಭವಿಸಿದರೂ ತಾಳ್ಮೆಯಿಂದಿದ್ದರು. 11 ತಾಳಿಕೊಂಡಿರುವವರನ್ನು ಧನ್ಯರೆಂದು ಹೇಳುತ್ತೇವಲ್ಲವೇ. ಯೋಬನ ತಾಳ್ಮೆಯ ಬಗ್ಗೆ ನಿಮಗೆ ತಿಳಿದಿದೆ. ಯೋಬನು ಎಲ್ಲಾ ಬಗೆಯ ಸಂಕಟಗಳನ್ನು ಅನುಭವಿಸಿದ ಮೇಲೆ ಪ್ರಭುವು ಅವನಿಗೆ ಸಹಾಯ ಮಾಡಿದನು. ಪ್ರಭುವು ದಯೆಯಿಂದಲೂ ಕರುಣೆಯಿಂದಲೂ ತುಂಬಿದ್ದಾನೆಂದು ಇದು ತೋರಿಸುತ್ತದೆ.

ಎಚ್ಚರಿಕೆಯಿಂದ ಮಾತಾಡಿರಿ

12 ನನ್ನ ಸಹೋದರ ಸಹೋದರಿಯರೇ, ನೀವು ವಾಗ್ದಾನ ಮಾಡುವಾಗ ಆಣೆ ಇಡಬೇಡಿರಿ. ಇದು ಬಹಳ ಮುಖ್ಯವಾದದ್ದು. ನಿಮ್ಮ ಹೇಳಿಕೆಯನ್ನು ನಿರೂಪಿಸಲು ಪರಲೋಕದ, ಭೂಲೋಕದ ಮತ್ತು ಬೇರಾವುದರ ಹೆಸರನ್ನೂ ಬಳಸಬೇಡಿ. ಹೌದಾಗಿದ್ದರೆ, “ಹೌದು” ಎನ್ನಿರಿ. ಇಲ್ಲವಾಗಿದ್ದರೆ, “ಇಲ್ಲ” ಎನ್ನಿರಿ. ನೀವು ಹೀಗೆ ಮಾಡಿದರೆ, ನಿಮಗೆ ದೋಷಿಗಳೆಂಬ ತೀರ್ಪಾಗುವುದಿಲ್ಲ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International