Revised Common Lectionary (Semicontinuous)
ರಚನೆಗಾರ: ದಾವೀದ.
5 ಯೆಹೋವನೇ, ನನ್ನ ಮಾತುಗಳಿಗೆ ಕಿವಿಗೊಡು.
ನನ್ನ ಆಲೋಚನೆಗಳಿಗೆ ಗಮನಕೊಡು.
2 ನನ್ನ ರಾಜನೇ, ನನ್ನ ದೇವರೇ, ನಿನಗೇ ಮೊರೆಯಿಡುವೆನು.
ನನ್ನ ಪ್ರಾರ್ಥನೆಯನ್ನು ಆಲೈಸು.
3 ಯೆಹೋವನೇ, ಪ್ರತಿಮುಂಜಾನೆ ನಿನಗೆ ಕಾಣಿಕೆಗಳನ್ನು ಅರ್ಪಿಸಿ ಸಹಾಯಕ್ಕಾಗಿ ಎದುರುನೋಡುವೆನು;
ಪ್ರತಿಮುಂಜಾನೆ ನೀನು ನನ್ನ ಪ್ರಾರ್ಥನೆಗಳಿಗೆ ಕಿವಿಗೊಡುವೆ.
4 ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ.
ನಿನ್ನ ಸನ್ನಿಧಿಯಲ್ಲಿ ದುಷ್ಟರು ಇರಲಾರರು.
5 ನಿನ್ನನ್ನು ನಂಬದವರು ನಿನ್ನ ಬಳಿಗೆ ಬರಲಾರರು;
ದುಷ್ಟರನ್ನು ನೀನು ದ್ವೇಷಿಸುವೆ.
6 ಸುಳ್ಳಾಡುವವರನ್ನು ನೀನು ನಾಶಪಡಿಸುವೆ.
ಕೊಲೆಗಾರರನ್ನೂ ಮೋಸಗಾರರನ್ನೂ ಯೆಹೋವನು ದ್ವೇಷಿಸುವನು.
7 ನಾನಂತೂ ನಿನ್ನ ಮಹಾಕೃಪೆಯನ್ನು ಹೊಂದಿದವನಾಗಿ ನಿನ್ನ ಆಲಯಕ್ಕೆ ಬರುವೆನು,
ನಿನ್ನಲ್ಲಿ ಭಯಭಕ್ತಿಯುಳ್ಳವನಾಗಿ ನಿನ್ನ ಪವಿತ್ರ ಆಲಯದ ಕಡೆಗೆ ಅಡ್ಡಬೀಳುವೆನು.
8 ಯೆಹೋವನೇ, ವೈರಿಗಳು ನನ್ನನ್ನು ಗಮನಿಸುತ್ತಿರುವುದರಿಂದ
ನಿನ್ನ ನೀತಿಯ ಮಾರ್ಗವನ್ನು ನನಗೆ ತೋರಿಸಿ,
ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.
ಅಹಾಬನ ವಿರುದ್ಧವಾಗಿ ಪ್ರವಾದನೆ
35 ಪ್ರವಾದಿಗಳಲ್ಲಿ ಒಬ್ಬನು ಮತ್ತೊಬ್ಬ ಪ್ರವಾದಿಗೆ, “ನನ್ನನ್ನು ಹೊಡಿ” ಎಂದು ಹೇಳಿದನು. ಹೀಗೆ ಹೇಳುವಂತೆ ಯೆಹೋವನೇ ಅವನಿಗೆ ಆಜ್ಞಾಪಿಸಿದ್ದನು. ಆದರೆ ಇನ್ನೊಬ್ಬ ಪ್ರವಾದಿಯು ಅವನನ್ನು ಹೊಡೆಯಲಿಲ್ಲ. 36 ಆದ್ದರಿಂದ ಮೊದಲನೆಯ ಪ್ರವಾದಿಯು, “ಯೆಹೋವನ ಆಜ್ಞೆಗೆ ನೀನು ವಿಧೇಯನಾಗಲಿಲ್ಲ. ನೀನು ಈ ಸ್ಥಳವನ್ನು ಬಿಟ್ಟು ಹೊರಟಾಗ ನಿನ್ನನ್ನು ಒಂದು ಸಿಂಹವು ಕೊಂದುಹಾಕುತ್ತದೆ” ಎಂದು ಹೇಳಿದನು. ಎರಡನೆಯ ಪ್ರವಾದಿಯು ಆ ಸ್ಥಳವನ್ನು ಬಿಟ್ಟು ಹೊರಟಾಗ ಒಂದು ಸಿಂಹವು ಅವನನ್ನು ಕೊಂದುಹಾಕಿತು.
37 ಮೊದಲನೆಯ ಪ್ರವಾದಿಯು ಇನ್ನೊಬ್ಬ ಮನುಷ್ಯನ ಹತ್ತಿರಕ್ಕೆ ಹೋಗಿ, “ನನ್ನನ್ನು ಹೊಡಿ!” ಎಂದು ಅವನಿಗೆ ಹೇಳಿದನು.
ಈ ಮನುಷ್ಯನು ಅವನನ್ನು ಹೊಡೆದನು. ಪ್ರವಾದಿಗೆ ಗಾಯವಾಯಿತು. 38 ಪ್ರವಾದಿಯು ತನ್ನ ಕಣ್ಣಿನ ಮೇಲೆ ಬಟ್ಟೆಯನ್ನು ಕಟ್ಟಿಕೊಂಡನು. ತನ್ನನ್ನು ಯಾರೂ ಗುರುತಿಸಬಾರದೆಂದು ಅವನು ಹೀಗೆ ಕಟ್ಟಿಕೊಂಡನು. ಬಳಿಕ ಆ ಪ್ರವಾದಿಯು ಹೋಗಿ, ರಾಜನಿಗಾಗಿ ರಸ್ತೆಯಂಚಿನಲ್ಲಿ ಕಾಯುತ್ತಿದ್ದನು. 39 ರಾಜನು ಅಲ್ಲಿಗೆ ಬಂದಾಗ, ಪ್ರವಾದಿಯು ಅವನಿಗೆ, “ನಾನು ಯುದ್ಧದಲ್ಲಿ ಹೋರಾಡುವುದಕ್ಕೆ ಹೋಗಿದ್ದೆನು. ನಿನ್ನವನಾದ ಒಬ್ಬ ಮನುಷ್ಯನು ಶತ್ರುವಿನ ಸೈನಿಕನೊಬ್ಬನನ್ನು ನನ್ನ ಬಳಿಗೆ ಕರೆದುಕೊಂಡು ಬಂದು, ‘ಈ ಮನುಷ್ಯನನ್ನು ರಕ್ಷಿಸು. ಇವನು ಓಡಿಹೋದರೆ, ಇವನ ಜೀವಕ್ಕೆ ಬದಲಾಗಿ ನಿನ್ನ ಜೀವವನ್ನು ಕೊಡಬೇಕಾಗುವುದು ಅಥವಾ ಬೆಳ್ಳಿಯ ಮೂವತ್ನಾಲ್ಕು ಕಿಲೋಗ್ರಾಂ ದಂಡ ಕೊಡಬೇಕಾಗುವುದು’ ಎಂದನು. 40 ಆದರೆ ನಾನು ಇತರ ಕೆಲಸಗಳಲ್ಲಿ ನಿರತನಾಗಿದ್ದಾಗ, ಆ ಮನುಷ್ಯನು ಓಡಿಹೋದನು” ಎಂದು ಹೇಳಿದನು.
ಇಸ್ರೇಲಿನ ರಾಜನು, “ಆ ಸೈನಿಕನು ತಪ್ಪಿಸಿಕೊಂಡು ಹೋಗಲು ಅವಕಾಶ ಮಾಡಿಕೊಟ್ಟ ನೀನು ನಿನ್ನನ್ನು ತಪ್ಪಿತಸ್ಥನೆಂದು ಒಪ್ಪಿಕೊಂಡಿರುವೆ. ಆದ್ದರಿಂದ, ಅದರ ಪರಿಹಾರವೂ ನಿನಗೆ ತಿಳಿದಿದೆ. ಆ ಮನುಷ್ಯನೇನು ಹೇಳಿದನೊ ಅದನ್ನು ನೀನು ಮಾಡಲೇಬೇಕು” ಎಂದು ಉತ್ತರಿಸಿದನು.
41 ಆಗ ಆ ಪ್ರವಾದಿಯು ತನ್ನ ಕಣ್ಣುಗಳ ಮೇಲಿನ ಬಟ್ಟೆಯನ್ನು ಸರಿಸಿದ್ದರಿಂದ ಅವನು ಪ್ರವಾದಿಗಳಲ್ಲಿ ಒಬ್ಬನೆಂಬುದು ಇಸ್ರೇಲಿನ ರಾಜನಿಗೆ ತಿಳಿಯಿತು. 42 ಬಳಿಕ ಪ್ರವಾದಿಯು ರಾಜನಿಗೆ, “ಯೆಹೋವನು ನಿನಗೆ ಹೀಗೆನ್ನುತ್ತಾನೆ, ‘ನಾನು ಸಂಹರಿಸೆಂದು ಹೇಳಿದ ಮನುಷ್ಯನನ್ನು ನೀನು ಸ್ವತಂತ್ರನಾಗಿಸಿದೆ. ಆದ್ದರಿಂದ ಅವನಿಗೆ ಸಂಭವಿಸಬೇಕಾದದ್ದು ನಿನಗೆ ಸಂಭವಿಸುವುದು. ನೀನು ಸಾಯುವೆ! ಶತ್ರುಗಳಿಗೆ ಸಂಭವಿಸಬೇಕಾದದ್ದು ನಿನ್ನ ಜನರಿಗೆ ಸಂಭವಿಸುವುದು. ನಿನ್ನ ಜನರು ಸಾಯುತ್ತಾರೆ!’” ಎಂದು ಹೇಳಿದನು.
43 ನಂತರ ರಾಜನು ಸಮಾರ್ಯದಲ್ಲಿದ್ದ ತನ್ನ ಅರಮನೆಗೆ ಹಿಂದಿರುಗಿದನು. ಅವನು ಬೇಸರಗೊಂಡಿದ್ದನು ಮತ್ತು ಕೋಪಗೊಂಡಿದ್ದನು.
ಯೇಸುವಿನಿಂದ ಗುಣಹೊಂದಿದ ಪಾರ್ಶ್ವವಾಯು ರೋಗಿ
(ಮತ್ತಾಯ 9:1-8; ಮಾರ್ಕ 2:1-12)
17 ಒಂದು ದಿನ ಯೇಸು ಜನರಿಗೆ ಬೋಧಿಸುತ್ತಿದ್ದನು. ಫರಿಸಾಯರು ಮತ್ತು ಧರ್ಮೋಪದೇಶಕರು ಸಹ ಅಲ್ಲಿ ಕುಳಿತುಕೊಂಡಿದ್ದರು. ಅವರು, ಗಲಿಲಾಯದಿಂದಲೂ ಜುದೇಯ ಪ್ರಾಂತ್ಯದ ಊರುಗಳಿಂದಲೂ ಜೆರುಸಲೇಮಿನಿಂದಲೂ ಬಂದಿದ್ದರು. ರೋಗಿಗಳನ್ನು ಗುಣಪಡಿಸಲು ಪ್ರಭುವಿನ ಶಕ್ತಿಯು ಆತನಲ್ಲಿತ್ತು. 18 ಒಬ್ಬ ಪಾರ್ಶ್ವವಾಯು ರೋಗಿ ಅಲ್ಲಿದ್ದನು. ಒಂದು ಚಿಕ್ಕ ಹಾಸಿಗೆಯಲ್ಲಿ ಅವನನ್ನು ಕೆಲವು ಮಂದಿ ಗಂಡಸರು ಹೊತ್ತುಕೊಂಡು ಬಂದು ಯೇಸುವಿನ ಮುಂದೆ ಇಡಲು ಪ್ರಯತ್ನಿಸಿದರು. 19 ಆದರೆ ಅಲ್ಲಿ ಬಹಳ ಜನ ಇದ್ದುದರಿಂದ ಯೇಸುವಿನ ಬಳಿಗೆ ಹೋಗಲು ಅವರಿಗೆ ಸಾಧ್ಯವಾಗಲಿಲ್ಲ. ಆದ್ದರಿಂದ ಅವರು ಮನೆಯ ಮೇಲೆ ಹತ್ತಿ ಹೆಂಚುಗಳನ್ನು ತೆಗೆದು ಪಾರ್ಶ್ವವಾಯು ರೋಗಿಯನ್ನು ಹಾಸಿಗೆಯ ಸಹಿತ ಯೇಸುವಿನ ಮುಂದೆ ಇಳಿಸಿದರು. 20 ಈ ಜನರ ನಂಬಿಕೆಯನ್ನು ನೋಡಿ ಯೇಸು ಆ ರೋಗಿಗೆ, “ಸ್ನೇಹಿತನೇ ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
21 ಯೆಹೂದ್ಯ ಧರ್ಮೋಪದೇಶಕರು ಮತ್ತು ಫರಿಸಾಯರು, “ಈ ಮನುಷ್ಯನು (ಯೇಸು) ಯಾರು? ಈತನು ದೇವರಿಗೆ ವಿರುದ್ಧವಾದ ಸಂಗತಿಗಳನ್ನು ಹೇಳುತ್ತಾನಲ್ಲಾ! ದೇವರೊಬ್ಬನೇ ಪಾಪಗಳನ್ನು ಕ್ಷಮಿಸಬಲ್ಲನು” ಎಂದು ತಮ್ಮತಮ್ಮೊಳಗೆ ಯೋಚಿಸಿದರು.
22 ಆದರೆ ಅವರ ಆಲೋಚನೆಯನ್ನು ತಿಳಿದಿದ್ದ ಯೇಸು ಅವರಿಗೆ, “ನೀವು ಆ ರೀತಿ ಯೋಚಿಸುವುದೇಕೆ? 23 ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಪಾರ್ಶ್ವವಾಯು ರೋಗಿಗೆ ಹೇಳುವುದೋ? ಅಥವಾ ‘ಎದ್ದುನಿಂತು ನಡೆ’ ಎನ್ನುವುದೋ? 24 ಆದರೆ ಮನುಷ್ಯಕುಮಾರನಿಗೆ[a] ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವ ಅಧಿಕಾರ ಉಂಟೆಂಬುದು ನಿಮಗೆ ಖಚಿತವಾಗಬೇಕು” ಎಂದು ಹೇಳಿ, ಪಾರ್ಶ್ವವಾಯು ರೋಗಿಗೆ, “ಏಳು! ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ಮನೆಗೆ ಹೋಗು!” ಎಂದು ಹೇಳಿದನು.
25 ಆ ಕೂಡಲೇ ಅವನು ಜನರು ಮುಂದೆ ಎದ್ದುನಿಂತು, ತನ್ನ ಹಾಸಿಗೆಯನ್ನು ಹೊತ್ತುಕೊಂಡು ದೇವರನ್ನು ಸ್ತುತಿಸುತ್ತಾ ಮನೆಗೆ ಹೋದನು. 26 ಜನರೆಲ್ಲರೂ ಬಹಳ ಆಶ್ಚರ್ಯಪಟ್ಟು ದೇವರನ್ನು ಸ್ತುತಿಸತೊಡಗಿದರು ಮತ್ತು ದೇವರಲ್ಲಿ ಭಯಭಕ್ತಿಯುಳ್ಳವರಾಗಿ, “ಈ ದಿನ ನಾವು ಆಶ್ಚರ್ಯಕರವಾದ ಸಂಗತಿಯನ್ನು ಕಂಡೆವು!” ಎಂದರು.
Kannada Holy Bible: Easy-to-Read Version. All rights reserved. © 1997 Bible League International