Revised Common Lectionary (Semicontinuous)
ಸ್ತುತಿಗೀತೆ. ರಚನೆಗಾರ: ಆಸಾಫ.
83 ದೇವರೇ, ಸುಮ್ಮನಿರಬೇಡ!
ನಿನ್ನ ಕಣ್ಣುಗಳನ್ನು ಮುಚ್ಚಿಕೊಳ್ಳಬೇಡ.
ದೇವರೇ, ದಯವಿಟ್ಟು ಮಾತನಾಡು.
2 ದೇವರೇ, ನಿನ್ನ ಶತ್ರುಗಳು ನಿನಗೆ ವಿರೋಧವಾಗಿ ಸಂಚು ಮಾಡುತ್ತಿದ್ದಾರೆ.
ಬಹುಬೇಗನೆ ಅವರು ಆಕ್ರಮಣ ಮಾಡಲಿದ್ದಾರೆ.
3 ನಿನ್ನ ಜನರಿಗೆ ವಿರೋಧವಾಗಿ ರಹಸ್ಯ ಯೋಜನೆಗಳನ್ನು ಮಾಡುತ್ತಿದ್ದಾರೆ.
ನಿನ್ನ ಪ್ರಿಯರ ವಿರೋಧವಾಗಿ ಅವರು ಸಂಚು ಮಾಡುತ್ತಿದ್ದಾರೆ.
4 ಅವರು ಹೀಗೆಂದುಕೊಳ್ಳುತ್ತಿದ್ದಾರೆ: “ಬನ್ನಿರಿ, ಅವರನ್ನು ಸಂಪೂರ್ಣವಾಗಿ ನಾಶಮಾಡೋಣ.
ಆಗ ‘ಇಸ್ರೇಲ್’ ಎಂಬ ಹೆಸರೇ ಅಳಿದುಹೋಗುವುದು.”
5 ನಿನಗೂ ನೀನು ನಮ್ಮೊಂದಿಗೆ ಮಾಡಿಕೊಂಡ ಒಪ್ಪಂದಕ್ಕೂ
ವಿರೋಧವಾಗಿ ಅವರೆಲ್ಲರೂ ಒಂದು ಗೂಡಿದ್ದಾರೆ.
6-7 ಅವರು ಯಾರೆಂದರೆ: ಎದೋಮ್ಯರು, ಇಷ್ಮಾಯೇಲ್ಯರು, ಮೋವಾಬ್ಯರು ಮತ್ತು ಹಗ್ರೀಯ ಸಂತತಿಯವರು,
ಗೆಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು,
ಫಿಲಿಷ್ಟಿಯರು ಮತ್ತು ತೂರ್ ಸಂಸ್ಥಾನದವರು.
ಇವರೆಲ್ಲರೂ ನಮಗೆ ವಿರೋಧವಾಗಿ ಸೇರಿಬಂದಿದ್ದಾರೆ.
8 ಅಶ್ಶೂರ್ಯದವರು ಸಹ ಅವರೊಡನೆ ಸೇರಿಕೊಂಡು
ಲೋಟನ ಸಂತತಿಯವರನ್ನು ಪ್ರಬಲರನ್ನಾಗಿ ಮಾಡಿದ್ದಾರೆ.
9 ನೀನು ಮಿದ್ಯಾನ್ಯರನ್ನೂ ಕೀಷೋನ್ ನದಿಯ ಸಮೀಪದಲ್ಲಿ
ಸೀಸೆರನನ್ನೂ ಯಾಬೀನನನ್ನೂ ಸೋಲಿಸಿದಂತೆ ಅವರನ್ನು ಸೋಲಿಸು.
10 ನೀನು ಅವರನ್ನು ಎಂದೋರಿನಲ್ಲಿ ಸೋಲಿಸಿದೆ.
ಅವರ ದೇಹಗಳು ನೆಲದ ಮೇಲೆ ಕೊಳೆತುಹೋದವು.
11 ದೇವರೇ, ಶತ್ರುಗಳ ನಾಯಕರುಗಳನ್ನು ಸೋಲಿಸು.
ನೀನು ಓರೇಬ್ ಮತ್ತು ಜೇಬ್ ಪ್ರಾಂತ್ಯಗಳಿಗೆ ಮಾಡಿದಂತೆಯೇ ಅವರಿಗೆ ಮಾಡು.
ನೀನು ಜೇಬಹ ಮತ್ತು ಚಲ್ಮುನ್ನ ಪ್ರಾಂತ್ಯಗಳಿಗೆ ಮಾಡಿದಂತೆಯೇ ಅವರಿಗೆ ಮಾಡು.
12 ನನ್ನ ದೇವರೇ, ಅವರು ನಿನ್ನ ನಾಡಿನಿಂದ ನಮ್ಮನ್ನು ಹೊರಗಟ್ಟಬೇಕೆಂದಿದ್ದರು.
13 ಗಾಳಿಗೆ ತೂರಿಹೋಗುವ ಮೊಟಕುಬೇರಿನ ಕಳೆಯಂತೆ ಅವರನ್ನು ಮಾಡು.
ಗಾಳಿಯು ಹೊಟ್ಟನ್ನು ಚದರಿಸುವಂತೆ ಅವರನ್ನು ಚದರಿಸು.
14 ಕಾಡನ್ನು ನಾಶಮಾಡುವ ಬೆಂಕಿಯಂತೆಯೂ
ಬೆಟ್ಟಗಳನ್ನು ಸುಟ್ಟುಹಾಕುವ ಅಗ್ನಿಜ್ವಾಲೆಯಂತೆಯೂ ಅವರನ್ನು ನಾಶಮಾಡು.
15 ಬಿರುಗಾಳಿಯಿಂದ ಕೊಚ್ಚಿಕೊಂಡು ಹೋಗುವ ಧೂಳಿನಂತೆ ಅವರನ್ನು ಬೆನ್ನಟ್ಟಿಹೋಗು.
ಸುಂಟರ ಗಾಳಿಯಂತೆ ಅವರನ್ನು ನಡುಗಿಸು.
16 ಯೆಹೋವನೇ, ತಾವು ನಿಜವಾಗಿಯೂ ಬಲಹೀನರೆಂಬುದನ್ನು ಅವರು ಕಲಿತುಕೊಳ್ಳುವಂತೆ ಮಾಡು;
ಆಗ ಅವರು ನಿನ್ನ ಹೆಸರನ್ನು ಆರಾಧಿಸಬೇಕೆನ್ನುವರು.
17 ಅವರನ್ನು ಭಯವೂ ನಾಚಿಕೆಯೂ ಕವಿದುಕೊಂಡೇ ಇರಲಿ.
ಅವರು ಅವಮಾನಗೊಂಡು ನಾಶವಾಗಲಿ.
18 ಆಗ ಅವರು ನೀನೊಬ್ಬನೇ ದೇವರೆಂದೂ
ನಿನ್ನ ಹೆಸರು ಯೆಹೋವನೆಂದೂ ತಿಳಿದುಕೊಳ್ಳುವರು.
ಭೂಲೋಕಕ್ಕೆಲ್ಲಾ ಮಹೋನ್ನತನಾದ ದೇವರೊಬ್ಬನೇ
ದೇವರೆಂದು ಅವರು ಅರಿತುಕೊಳ್ಳುವರು.
17 ಆದ್ದರಿಂದ ಯಾಕೋಬನು ತನ್ನ ಪ್ರಯಾಣಕ್ಕಾಗಿ ಸಿದ್ಧತೆ ಮಾಡಿದನು. ಅವನು ತನ್ನ ಗಂಡುಮಕ್ಕಳನ್ನು ಮತ್ತು ಹೆಂಡತಿಯರನ್ನು ಒಂಟೆಗಳ ಮೇಲೆ ಕುಳ್ಳಿರಿಸಿದನು. 18 ನಂತರ ಅವರೆಲ್ಲರೂ, ಯಾಕೋಬನ ತಂದೆ ವಾಸಿಸಿದ ಸ್ಥಳವಾದ ಕಾನಾನಿಗೆ ಮರಳಿ ಪ್ರಯಾಣ ಬೆಳೆಸಿದರು. ಯಾಕೋಬನು ಹೊಂದಿದ್ದ ಎಲ್ಲಾ ಆಡುಕುರಿಗಳ ಮಂದೆಗಳು ಅವರ ಮುಂದೆ ನಡೆದವು. ಅವನು ಪದ್ದನ್ಅರಾಮಿನಲ್ಲಿದ್ದಾಗ ಹೊಂದಿಕೊಂಡಿದ್ದ ಪ್ರತಿಯೊಂದನ್ನೂ ಅವರು ತೆಗೆದುಕೊಂಡು ಹೋದರು.
19 ಆ ಸಮಯದಲ್ಲಿ ಲಾಬಾನನು ತನ್ನ ಕುರಿಗಳ ಉಣ್ಣೆಯನ್ನು ಕತ್ತರಿಸಲು ಹೋಗಿದ್ದನು. ಅವನು ಇಲ್ಲದಿದ್ದಾಗ, ರಾಹೇಲಳು ಅವನ ಮನೆಯೊಳಗೆ ಹೋಗಿ, ತನ್ನ ತಂದೆಯ ವಿಗ್ರಹಗಳನ್ನು ಕದ್ದುಕೊಂಡಳು.
20 ಅರಾಮ್ಯನಾದ ಲಾಬಾನನಿಗೆ ಯಾಕೋಬನು ಮೋಸ ಮಾಡಿದನು. ತಾನು ಹೋಗುತ್ತಿರುವುದಾಗಿ ಯಾಕೋಬನು ಅವನಿಗೆ ತಿಳಿಸಲಿಲ್ಲ. 21 ಯಾಕೋಬನು ತನ್ನ ಕುಟುಂಬವನ್ನು ಕರೆದುಕೊಂಡು, ತನ್ನ ಪ್ರತಿಯೊಂದು ಸ್ವತ್ತನ್ನು ತೆಗೆದುಕೊಂಡು ಬೇಗನೆ ಅಲ್ಲಿಂದ ಹೊರಟನು. ಅವರು ಯೂಫ್ರೇಟೀಸ್ ಮಹಾನದಿಯನ್ನು ದಾಟಿ, ಬೆಟ್ಟಗಳ ಸೀಮೆಯಿಂದ ಗಿಲ್ಯಾದ್ ದೇಶದ ಕಡೆಗೆ ಪ್ರಯಾಣ ಮಾಡಿದರು.
22 ಯಾಕೋಬನು ಓಡಿಹೋದದ್ದು ಮೂರು ದಿನಗಳಾದ ಮೇಲೆ ಲಾಬಾನನಿಗೆ ತಿಳಿಯಿತು. 23 ಆದ್ದರಿಂದ ಲಾಬಾನನು ತನ್ನ ಜನರನ್ನು ಕರೆದುಕೊಂಡು ಯಾಕೋಬನನ್ನು ಬೆನ್ನಟ್ಟಿದನು. ಏಳು ದಿನಗಳಾದ ಮೇಲೆ ಲಾಬಾನನು ಯಾಕೋಬನನ್ನು ಬೆಟ್ಟದ ಸೀಮೆಯಾದ ಗಿಲ್ಯಾದಿನಲ್ಲಿ ಕಂಡನು. 24 ಆ ರಾತ್ರಿ ದೇವರು ಲಾಬಾನನಿಗೆ ಕನಸಿನಲ್ಲಿ ಕಾಣಿಸಿಕೊಂಡು, “ಎಚ್ಚರಿಕೆಯಾಗಿರು; ನೀನು ಯಾಕೋಬನಿಗೆ ಹೇಳುವ ಪ್ರತಿಯೊಂದು ಮಾತಿನ ಬಗ್ಗೆ ಎಚ್ಚರಿಕೆಯಾಗಿರು” ಎಂದು ಹೇಳಿದನು.
ಕದ್ದುಕೊಂಡು ಬಂದಿದ್ದ ವಿಗ್ರಹಗಳಿಗಾಗಿ ಹುಡುಕಾಟ
25 ಮರುದಿನ ಮುಂಜಾನೆ ಲಾಬಾನನು ಯಾಕೋಬನನ್ನು ಸಂಧಿಸಿದನು. ಯಾಕೋಬನು ಬೆಟ್ಟದ ಮೇಲೆ ಪಾಳೆಯ ಮಾಡಿಕೊಂಡಿದ್ದನು. ಆದ್ದರಿಂದ ಲಾಬಾನನು ಮತ್ತು ಅವನ ಜನರೆಲ್ಲರು ಬೆಟ್ಟದ ಸೀಮೆಯಾದ ಗಿಲ್ಯಾದಿನಲ್ಲಿ ಪಾಳೆಯ ಮಾಡಿಕೊಂಡರು.
26 ಲಾಬಾನನು ಯಾಕೋಬನಿಗೆ, “ನೀನು ನನಗೇಕೆ ಮೋಸ ಮಾಡಿದೆ? ಯುದ್ಧದಲ್ಲಿ ಸೆರೆ ಒಯ್ಯುವ ಸ್ತ್ರೀಯರಂತೆ, ನೀನು ನನ್ನ ಹೆಣ್ಣುಮಕ್ಕಳನ್ನು ಕರೆದುಕೊಂಡು ಬಂದದ್ದೇಕೆ? 27 ನೀನು ನನಗೆ ಹೇಳದೆ ಓಡಿಬಂದದ್ದೇಕೆ? ನೀನು ನನ್ನನ್ನು ಕೇಳಿದ್ದರೆ ನಾನು ನಿನಗಾಗಿ ಒಂದು ಔತಣಕೂಟವನ್ನೇರ್ಪಡಿಸುತ್ತಿದ್ದೆ. ಅಲ್ಲಿ ಗಾಯನ, ನೃತ್ಯ ಮತ್ತು ವಾದ್ಯಗೋಷ್ಠಿಗಳಿರುತ್ತಿದ್ದವು. 28 ನಾನು ನನ್ನ ಮೊಮ್ಮಕ್ಕಳಿಗೆ ಮುದ್ದಿಡುವುದಕ್ಕೂ ನನ್ನ ಹೆಣ್ಣುಮಕ್ಕಳನ್ನು ಬೀಳ್ಕೊಡುವುದಕ್ಕೂ ನೀನು ನನಗೆ ಅವಕಾಶ ಕೊಡಲಿಲ್ಲ. ನಿನ್ನ ಮೂಢತನದಿಂದ ಹೀಗೆ ಮಾಡಿರುವೆ. 29 ನಿನಗೆ ಕೇಡುಮಾಡಲು ನನಗೆ ಶಕ್ತಿಯಿದೆ. ಆದರೆ ಕಳೆದ ರಾತ್ರಿ ನಿನ್ನ ತಂದೆಯ ದೇವರು ಕನಸಿನಲ್ಲಿ ನನಗೆ ಕಾಣಿಸಿಕೊಂಡು, ನಿನಗೆ ಕೇಡುಮಾಡಕೂಡದೆಂದು ನನಗೆ ಎಚ್ಚರಿಕೆ ಕೊಟ್ಟನು. 30 ನೀನು ನಿನ್ನ ಮನೆಗೆ ಹಿಂತಿರುಗಿ ಹೋಗಬೇಕೆಂಬುದು ನಿನ್ನ ಅಪೇಕ್ಷೆ ಎಂದು ನನಗೆ ತಿಳಿದಿದೆ. ಆದ್ದರಿಂದಲೇ ನೀನು ಹೊರಟು ಬಂದೆ. ಆದರೆ ನೀನು ನನ್ನ ಮನೆಯಿಂದ ವಿಗ್ರಹಗಳನ್ನು ಕದ್ದುಕೊಂಡು ಬಂದದ್ದೇಕೆ?” ಎಂದು ಹೇಳಿದನು.
31 ಯಾಕೋಬನು, “ನಾನು ನಿನಗೆ ಹೇಳದೆ ಹೊರಟು ಬಂದೆ. ಯಾಕೆಂದರೆ ನನಗೆ ಭಯವಾಗಿತ್ತು; ನೀನು ನಿನ್ನ ಹೆಣ್ಣುಮಕ್ಕಳನ್ನು ನನ್ನಿಂದ ತೆಗೆದುಕೊಳ್ಳಬಹುದೆಂದು ನಾನು ಭಾವಿಸಿದೆ. 32 ಆದರೆ ನಾನು ನಿನ್ನ ವಿಗ್ರಹಗಳನ್ನು ಕದ್ದುಕೊಳ್ಳಲಿಲ್ಲ. ನಿನ್ನ ವಿಗ್ರಹಗಳನ್ನು ತೆಗೆದುಕೊಂಡಿರುವ ಯಾವ ವ್ಯಕ್ತಿಯನ್ನಾದರೂ ಇಲ್ಲಿ ಕಂಡರೆ ಆ ವ್ಯಕ್ತಿಯನ್ನು ಕೊಲ್ಲಲಾಗುವುದು. ನಿನ್ನ ಜನರೇ ನನಗೆ ಸಾಕ್ಷಿಗಳು. ನಿನಗೆ ಸೇರಿದ ಏನಾದರೂ ಇದೆಯೋ ಎಂದು ನೀನೇ ನೋಡಬಹುದು. ನಿನಗೆ ಸೇರಿದ ಯಾವುದಾದರೂ ಇದ್ದರೆ ತೆಗೆದುಕೊ” ಎಂದು ಹೇಳಿದನು. (ಲಾಬಾನನ ವಿಗ್ರಹಗಳನ್ನು ರಾಹೇಲಳು ಕದ್ದುಕೊಂಡಿರುವುದು ಯಾಕೋಬನಿಗೆ ತಿಳಿದಿರಲಿಲ್ಲ.)
33 ಆದ್ದರಿಂದ ಲಾಬಾನನು ಹೋಗಿ ಯಾಕೋಬನ ಪಾಳೆಯದಲ್ಲಿಯೂ ಗುಡಾರದಲ್ಲಿಯೂ ಲೇಯಳ ಗುಡಾರದಲ್ಲಿಯೂ ಹುಡುಕಿದನು. ಬಳಿಕ ಇಬ್ಬರು ಸೇವಕಿಯರಿದ್ದ ಗುಡಾರಕ್ಕೂ ಹೋಗಿ ಹುಡುಕಿದನು; ಅಲ್ಲಿಯೂ ಅವನಿಗೆ ಅವನ ವಿಗ್ರಹಗಳು ಸಿಕ್ಕಲಿಲ್ಲ. ಅಲ್ಲಿಂದ ರಾಹೇಲಳ ಗುಡಾರಕ್ಕೆ ಹೋದನು. 34 ರಾಹೇಲಳು ಆ ವಿಗ್ರಹಗಳನ್ನು ತನ್ನ ಒಂಟೆಯ ಸಬರದೊಳಗಿಟ್ಟು ಅದರ ಮೇಲೆ ಕುಳಿತುಕೊಂಡಿದ್ದಳು. ಲಾಬಾನನು ಇಡೀ ಗುಡಾರವನ್ನು ಹುಡುಕಿದರೂ ತನ್ನ ವಿಗ್ರಹಗಳನ್ನು ಕಂಡುಕೊಳ್ಳಲಿಲ್ಲ.
35 ಆಗ ರಾಹೇಲಳು ತನ್ನ ತಂದೆಗೆ, “ಅಪ್ಪಾ, ನನ್ನ ಮೇಲೆ ಕೋಪಗೊಳ್ಳಬೇಡ. ನಿನ್ನ ಮುಂದೆ ನಿಂತುಕೊಳ್ಳಲು ನನಗೆ ಸಾಧ್ಯವಿಲ್ಲ. ಯಾಕೆಂದರೆ ನಾನು ಮುಟ್ಟಾಗಿದ್ದೇನೆ” ಎಂದು ಹೇಳಿದಳು. ಲಾಬಾನನು ಪಾಳೆಯದಲ್ಲೆಲ್ಲಾ ಹುಡುಕಿದರೂ ತನ್ನ ವಿಗ್ರಹಗಳನ್ನು ಕಂಡುಕೊಳ್ಳಲಾಗಲಿಲ್ಲ.
ನಂಬಿಕೆಯ ಮೂಲಕ ದೇವರಾಶೀರ್ವಾದ
3 ಯೇಸು ಕ್ರಿಸ್ತನು ಶಿಲುಬೆಯ ಮೇಲೆ ಮರಣ ಹೊಂದಿದ್ದರ ಬಗ್ಗೆ ಗಲಾತ್ಯದಲ್ಲಿರುವ ನಿಮಗೆ ಬಹು ಸ್ಪಷ್ಟವಾಗಿ ತಿಳಿಸಲಾಯಿತು. ಆದರೆ ನೀವು ಬಹು ಬುದ್ಧಿಹೀನರಾಗಿದ್ದೀರಿ. ನಿಮ್ಮನ್ನು ಮೋಸಗೊಳಿಸಲು ಬೇರೊಬ್ಬನಿಗೆ ಅವಕಾಶ ಮಾಡಿಕೊಟ್ಟಿರಿ. 2 ಈ ವಿಷಯವೊಂದನ್ನು ನನಗೆ ತಿಳಿಸಿರಿ: ನೀವು ಪವಿತ್ರಾತ್ಮನನ್ನು ಹೊಂದಿಕೊಂಡದ್ದು ಹೇಗೆ? ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದ ಹೊಂದಿಕೊಂಡಿರೊ? ಇಲ್ಲ! ಸುವಾರ್ತೆಯನ್ನು ಕೇಳಿ ಅದರಲ್ಲಿ ನಂಬಿಕೆಯಿಟ್ಟದ್ದರಿಂದಲೇ ಪವಿತ್ರಾತ್ಮನನ್ನು ಹೊಂದಿಕೊಂಡಿರಿ. 3 ಕ್ರಿಸ್ತನಲ್ಲಿಯ ನಿಮ್ಮ ಜೀವಿತವನ್ನು ಪವಿತ್ರಾತ್ಮನೊಂದಿಗೆ ಆರಂಭಿಸಿದಿರಿ. ಈಗ ಅದನ್ನು ನಿಮ್ಮ ಸ್ವಂತ ಶಕ್ತಿಯೊಂದಿಗೆ ಮುಂದುವರಿಸಲು ಪ್ರಯತ್ನಿಸುತ್ತೀರೋ? ಅದು ಬುದ್ಧಿಹೀನತೆ! 4 ಅನೇಕ ಸಂಗತಿಗಳನ್ನು ಅನುಭವದಿಂದ ತಿಳಿದುಕೊಂಡಿದ್ದೀರಿ. ಆ ಅನುಭವಗಳೆಲ್ಲಾ ವ್ಯರ್ಥಗೊಂಡವೇ? 5 ದೇವರು ಪವಿತ್ರಾತ್ಮನನ್ನು ಕೊಡುವುದು ನೀವು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲೋ? ದೇವರು ಮಹತ್ಕಾರ್ಯಗಳನ್ನು ಮಾಡುವುದು ನೀವು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲೋ? ಇಲ್ಲ! ಸುವಾರ್ತೆಯನ್ನು ಕೇಳಿ ಅದನ್ನು ನಂಬಿಕೊಂಡದ್ದರಿಂದ ದೇವರು ನಿಮಗೆ ಪವಿತ್ರಾತ್ಮನನ್ನು ಕೊಡುತ್ತಾನೆ ಮತ್ತು ಮಹತ್ಕಾರ್ಯಗಳನ್ನು ಮಾಡುತ್ತಾನೆ.
6 ಪವಿತ್ರ ಗ್ರಂಥವು ಅಬ್ರಹಾಮನ ವಿಷಯವಾಗಿಯೂ ಇದನ್ನೇ ಹೇಳುತ್ತದೆ. “ಅಬ್ರಹಾಮನು ದೇವರನ್ನು ನಂಬಿದನು. ದೇವರು ಅವನ ನಂಬಿಕೆಯನ್ನು ಪರಿಗಣಿಸಿದ್ದರಿಂದ ನೀತಿವಂತನೆಂಬ ನಿರ್ಣಯ ಅವನಿಗೆ ದೊರೆಯಿತು.”(A) 7 ಆದ್ದರಿಂದ ನಂಬಿಕೆಯನ್ನು ಹೊಂದಿರುವ ಜನರೇ ಅಬ್ರಹಾಮನ “ನಿಜಮಕ್ಕಳು” ಎಂಬುದು ನಿಮಗೆ ತಿಳಿದಿರಬೇಕು. 8 ದೇವರು ಯೆಹೂದ್ಯರಲ್ಲದವರನ್ನು ಅವರ ನಂಬಿಕೆಯ ಮೂಲಕ ನೀತಿವಂತರನ್ನಾಗಿ ಮಾಡುತ್ತಾನೆ. “ಅಬ್ರಹಾಮನೇ, ನಿನ್ನ ಮೂಲಕ ದೇವರು ಭೂಮಿಯ ಮೇಲಿರುವ ಜನರನ್ನೆಲ್ಲ ಆಶೀರ್ವದಿಸುತ್ತಾನೆ”(B) ಎಂಬ ಸುವಾರ್ತೆಯನ್ನು ಅವನಿಗೆ ಮೊದಲೇ ತಿಳಿಸಲಾಯಿತೆಂದು ಪವಿತ್ರ ಗ್ರಂಥವು ಹೇಳುತ್ತದೆ. 9 ಅವನು ಇದನ್ನು ನಂಬಿದ್ದರಿಂದಲೇ ಆಶೀರ್ವಾದ ಹೊಂದಿದನು. ಇದೇ ನಿಯಮ ಇಂದಿಗೂ ಅನ್ವಯಿಸುತ್ತದೆ. ಅವನು ಆಶೀರ್ವಾದ ಹೊಂದಿದಂತೆಯೇ ನಂಬಿಕೆಯಿಡುವ ಜನರೆಲ್ಲರೂ ಆಶೀರ್ವಾದ ಹೊಂದುವರು.
Kannada Holy Bible: Easy-to-Read Version. All rights reserved. © 1997 Bible League International