Revised Common Lectionary (Semicontinuous)
20 ಇಸ್ರೇಲರೆಲ್ಲರನ್ನು ಮತ್ತು ಆ ಪ್ರವಾದಿಗಳನ್ನು ಕರ್ಮೆಲ್ ಬೆಟ್ಟಕ್ಕೆ ಅಹಾಬನು ಕರೆಸಿದನು. 21 ಜನರೆಲ್ಲರ ಹತ್ತಿರಕ್ಕೆ ಎಲೀಯನು ಬಂದು ಅವರಿಗೆ, “ನೀವು ಯಾರನ್ನು ಹಿಂಬಾಲಿಸಬೇಕೆಂಬುದನ್ನು ಯಾವಾಗ ತೀರ್ಮಾನಿಸುತ್ತೀರಿ? ಯೆಹೋವನು ನಿಜವಾದ ದೇವರಾಗಿದ್ದರೆ, ನೀವು ಆತನನ್ನು ಹಿಂಬಾಲಿಸಬೇಕು; ಬಾಳನೇ ನಿಜವಾದ ದೇವರಾಗಿದ್ದರೆ, ನೀವು ಅವನನ್ನೇ ಹಿಂಬಾಲಿಸಬೇಕು” ಎಂದನು.
ಜನರು ಏನನ್ನೂ ಹೇಳಲಿಲ್ಲ.
22 ಎಲೀಯನು, “ಯೆಹೋವನ ಪ್ರವಾದಿಯಾಗಿ ನಾನೊಬ್ಬನು ಮಾತ್ರ ಇಲ್ಲಿದ್ದೇನೆ. ಆದರೆ ಇಲ್ಲಿ ನಾನೂರೈವತ್ತು ಮಂದಿ ಬಾಳನ ಪ್ರವಾದಿಗಳಿದ್ದಾರೆ. 23 ಎರಡು ಹೋರಿಗಳನ್ನು ತನ್ನಿ. ಬಾಳನ ಪ್ರವಾದಿಗಳು ಒಂದು ಹೋರಿಯನ್ನು ತೆಗೆದುಕೊಳ್ಳಲಿ. ಅವರು ಅದನ್ನು ಕೊಂದು, ತುಂಡುತುಂಡಾಗಿ ಕತ್ತರಿಸಲಿ. ನಂತರ ಅವರು ಆ ಮಾಂಸವನ್ನು ಸೌದೆಯ ಮೇಲಿಡಲಿ. ಆದರೆ ಬೆಂಕಿಯನ್ನು ಹೊತ್ತಿಸುವುದು ಬೇಡ. ಆಗ ನಾನು ಮತ್ತೊಂದು ಹೋರಿಯನ್ನು ಅವರಂತೆಯೇ ಕತ್ತರಿಸುವೆನು. ನಾನೂ ಬೆಂಕಿಯನ್ನು ಹೊತ್ತಿಸುವುದಿಲ್ಲ. 24 ಬಾಳನ ಪ್ರವಾದಿಗಳಾದ ನೀವು ನಿಮ್ಮ ದೇವರನ್ನು ಪ್ರಾರ್ಥಿಸಿ. ನಾನು ಯೆಹೋವನನ್ನು ಪ್ರಾರ್ಥಿಸುತ್ತೇನೆ. ನಮ್ಮಲ್ಲಿ ಯಾರ ಪ್ರಾರ್ಥನೆಗೆ ಉತ್ತರವಾಗಿ ದೇವರು ಸೌದೆಯನ್ನು ಉರಿಯುವಂತೆ ಮಾಡುತ್ತಾನೋ ಆತನೇ ನಿಜವಾದ ದೇವರು” ಎಂದು ಹೇಳಿದನು.
ಜನರೆಲ್ಲರೂ ಇದು ಒಳ್ಳೆಯ ಆಲೋಚನೆಯೆಂದು ಒಪ್ಪಿಕೊಂಡರು.
25 ನಂತರ ಎಲೀಯನು ಬಾಳನ ಪ್ರವಾದಿಗಳಿಗೆ, “ನಿಮ್ಮಲ್ಲಿ ಬಹು ಜನರು ಇರುವುದರಿಂದ ಮೊದಲು ನೀವೇ ಹೋಗಿ ನಿಮ್ಮ ಹೋರಿಯನ್ನು ಆರಿಸಿಕೊಂಡು ಅದನ್ನು ಸಿದ್ಧಪಡಿಸಿ. ನಿಮ್ಮ ದೇವರಿಗೆ ಪ್ರಾರ್ಥಿಸಿ. ಆದರೆ ನೀವು ಬೆಂಕಿಯನ್ನು ಹೊತ್ತಿಸಬೇಡಿ” ಎಂದು ಹೇಳಿದನು.
26 ಪ್ರವಾದಿಗಳು ತಾವು ತಂದಿದ್ದ ಹೋರಿಯನ್ನು ತೆಗೆದುಕೊಂಡು ಸಿದ್ಧಪಡಿಸಿದರು. ಅವರು ಬಾಳನನ್ನು ಮಧ್ಯಾಹ್ನದವರೆಗೆ ಪ್ರಾರ್ಥಿಸಿದರು. “ಬಾಳನೇ, ದಯವಿಟ್ಟು ನಮಗೆ ಉತ್ತರ ನೀಡು!” ಎಂದು ಅವರು ಪ್ರಾರ್ಥಿಸಿದರು. ಆದರೆ ಯಾವ ಶಬ್ದವೂ ಆಗಲಿಲ್ಲ: ಯಾರೊಬ್ಬರೂ ಉತ್ತರಿಸಲಿಲ್ಲ; ಪ್ರವಾದಿಗಳು ತಾವು ನಿರ್ಮಿಸಿದ್ದ ಯಜ್ಞವೇದಿಕೆಯ ಸುತ್ತಲೂ ನರ್ತಿಸಿದರು. ಆದರೆ ಬೆಂಕಿಯು ಹೊತ್ತಿಕೊಳ್ಳಲೇ ಇಲ್ಲ.
27 ಮಧ್ಯಾಹ್ನವಾದಾಗ ಎಲೀಯನು ಅವರನ್ನು ಅಪಹಾಸ್ಯ ಮಾಡಲಾರಂಭಿಸಿದನು. ಎಲೀಯನು, “ಬಾಳನು ನಿಜವಾದ ದೇವರಾಗಿದ್ದರೆ, ನೀವು ಮತ್ತಷ್ಟು ಗಟ್ಟಿಯಾಗಿ ಪ್ರಾರ್ಥಿಸಿ! ಬಹುಶಃ ಅವನು ಯೋಚನಾನಿರತನಾಗಿರಬಹುದು! ಅಥವಾ ಕಾರ್ಯನಿರತನಾಗಿರಬಹುದು! ಅಥವಾ ಸಂಚಾರನಿರತನಾಗಿರಬಹುದು! ಅಥವಾ ನಿದ್ರಾಮಗ್ನನಾಗಿರಬಹುದು! ನೀವು ಮತ್ತಷ್ಟು ಗಟ್ಟಿಯಾಗಿ ಪ್ರಾರ್ಥಿಸಿ, ಅವನನ್ನು ಎಚ್ಚರಗೊಳಿಸಿ!” ಎಂದು ಹೇಳಿದನು. 28 ಪ್ರವಾದಿಗಳು ಮತ್ತಷ್ಟು ಗಟ್ಟಿಯಾಗಿ ಪ್ರಾರ್ಥಿಸಿದರು. ಅವರು ಖಡ್ಗ ಮತ್ತು ಬರ್ಜಿಗಳಿಂದ ತಮ್ಮನ್ನು ತಾವೇ ತಿವಿದುಕೊಂಡರು. (ಅವರು ಆರಾಧಿಸುವ ರೀತಿಯೇ ಇದು.) ರಕ್ತವು ತಮ್ಮ ದೇಹದ ಮೇಲೆ ಚಿಮ್ಮುವತನಕ ಅವರು ತಮ್ಮನ್ನು ತಾವು ತಿವಿದುಕೊಂಡರು. 29 ಮಧ್ಯಾಹ್ನದ ಸಮಯವು ಮೀರುತ್ತಾ ಬಂದರೂ ಬೆಂಕಿಯು ಹೊತ್ತಿಕೊಳ್ಳಲೇ ಇಲ್ಲ. ಸಾಯಂಕಾಲದ ಯಜ್ಞಗಳನ್ನು ಅರ್ಪಿಸುವ ಸಮಯ ಬರುವ ತನಕ ಪ್ರವಾದಿಗಳು ಗಟ್ಟಿಯಾಗಿ ಕೂಗುತ್ತಲೇ ಇದ್ದರು. ಆದರೂ ಬಾಳನಿಂದ ಉತ್ತರವೇ ಬರಲಿಲ್ಲ. ಯಾವ ಶಬ್ದವೂ ಆಗಲಿಲ್ಲ; ಅವರ ಕೂಗಾಟವನ್ನು ಯಾರೂ ಲಕ್ಷಿಸಲಿಲ್ಲ.
30 ಆಗ ಎಲೀಯನು ಜನರೆಲ್ಲರಿಗೂ, “ಈಗ ನನ್ನ ಬಳಿಗೆ ಬನ್ನಿ” ಎಂದನು. ಅವನ ಸುತ್ತಲೂ ಜನರೆಲ್ಲರೂ ಒಟ್ಟುಗೂಡಿದರು. ಯೆಹೋವನ ಯಜ್ಞವೇದಿಕೆಯು ಒಡೆದುಹೋಗಿತ್ತು. ಎಲೀಯನು ಅದನ್ನು ಸರಿಪಡಿಸಿದನು. 31 ಎಲೀಯನು ಇಸ್ರೇಲಿನ ಪ್ರತಿಯೊಂದು ಕುಲಕ್ಕೂ ಒಂದೊಂದು ಕಲ್ಲಿನಂತೆ ಹನ್ನೆರಡು ಕಲ್ಲುಗಳನ್ನು ತೆಗೆದುಕೊಂಡನು. ಯೆಹೋವನಿಂದ ಇಸ್ರೇಲನೆಂದು ಕರೆಸಿಕೊಂಡ ಯಾಕೋಬನ ಹನ್ನೆರಡು ಗಂಡುಮಕ್ಕಳ ಹೆಸರನ್ನೇ ಈ ಕುಲಗಳಿಗೆ ಕೊಡಲಾಗಿತ್ತು. 32 ಎಲೀಯನು ಯೆಹೋವನ ಗೌರವಾರ್ಥವಾಗಿ ಯಜ್ಞವೇದಿಕೆಯನ್ನು ಈ ಕಲ್ಲುಗಳಿಂದ ಸರಿಪಡಿಸಿದನು. ಎಲೀಯನು ಯಜ್ಞವೇದಿಕೆಯ ಸುತ್ತಲೂ ಹಳ್ಳವನ್ನು ತೋಡಿದನು. ಅದು ಹದಿನೈದು ಲೀಟರ್ ನೀರು ತುಂಬುವಷ್ಟು ಅಗಲವಾಗಿತ್ತು ಮತ್ತು ಆಳವಾಗಿತ್ತು. 33 ನಂತರ ಎಲೀಯನು ಸೌದೆಯನ್ನು ಯಜ್ಞವೇದಿಕೆಯ ಮೇಲೆ ಇಟ್ಟನು. ಅವನು ಹೋರಿಯನ್ನು ತುಂಡುತುಂಡಾಗಿ ಕತ್ತರಿಸಿದನು. ಅವನು ಆ ತುಂಡುಗಳನ್ನು ಸೌದೆಯ ಮೇಲಿಟ್ಟನು. 34 ಎಲೀಯನು, “ನಾಲ್ಕು ಕೊಡಗಳಲ್ಲಿ ನೀರನ್ನು ತುಂಬಿಸಿ. ಆ ಮಾಂಸದ ತುಂಡುಗಳ ಮೇಲೆ ಮತ್ತು ಸೌದೆಯ ಮೇಲೆ ಆ ನೀರನ್ನು ಸುರಿಯಿರಿ” ಎಂದು ಹೇಳಿದನು. ಎಲೀಯನು, “ಮತ್ತೆ ಅದೇ ರೀತಿ ಮಾಡಿ” ಎಂದನು, ಅವನು, “ಮೂರನೆಯ ಸಲ ಅದೇ ರೀತಿ ಮಾಡಿ” ಎಂದನು. 35 ಯಜ್ಞವೇದಿಕೆಯಿಂದ ಹರಿದ ನೀರೆಲ್ಲ ಹಳ್ಳವನ್ನು ತುಂಬಿಕೊಂಡಿತ್ತು.
36 ಅದು ಮಧ್ಯಾಹ್ನದ ಯಜ್ಞಗಳನ್ನು ಅರ್ಪಿಸುವ ಸಮಯ. ಪ್ರವಾದಿಯಾದ ಎಲೀಯನು ಯಜ್ಞವೇದಿಕೆಯ ಹತ್ತಿರಕ್ಕೆ ಹೋಗಿ, “ಅಬ್ರಹಾಮನ, ಇಸಾಕನ ಮತ್ತು ಯಾಕೋಬನ ದೇವರಾದ ಯೆಹೋವನೇ, ನೀನು ಇಸ್ರೇಲಿನಲ್ಲಿರುವ ದೇವರೆಂಬುದನ್ನು ರುಜುವಾತುಪಡಿಸಲು ನಾನೀಗ ನಿನ್ನನ್ನು ಪ್ರಾರ್ಥಿಸುತ್ತಿದ್ದೇನೆ. ನಾನು ನಿನ್ನ ಸೇವಕನೆಂಬುದನ್ನೂ ನೀನು ನಿರೂಪಿಸು. ಈ ಕಾರ್ಯಗಳನ್ನೆಲ್ಲಾ ನಾನು ಮಾಡುವಂತೆ ನೀನು ಆಜ್ಞಾಪಿಸಿದೆ ಎನ್ನುವುದನ್ನೂ ಈ ಜನರಿಗೆ ತೋರಿಸು. 37 ಯೆಹೋವನೇ, ನನ್ನ ಪ್ರಾರ್ಥನೆಗೆ ಕಿವಿಗೊಡು. ಯೆಹೋವನೇ, ನೀನು ದೇವರೆಂಬುದನ್ನು ಈ ಜನರಿಗೆಲ್ಲ ತೋರಿಸು. ಈ ಜನರನ್ನೆಲ್ಲ ಮತ್ತೆ ನೀನು ನಿನ್ನ ಬಳಿಗೆ ತರುತ್ತಿರುವೆ ಎಂಬುದನ್ನೂ ಈ ಜನರು ತಿಳಿದುಕೊಳ್ಳಲಿ” ಎಂದು ಪ್ರಾರ್ಥಿಸಿದನು.
38 ಕೂಡಲೇ ಯೆಹೋವನ ಕಡೆಯಿಂದ ಬೆಂಕಿಬಿದ್ದು ಯಜ್ಞಗಳನ್ನು, ಸೌದೆಯನ್ನು, ಕಲ್ಲುಗಳನ್ನು ಮತ್ತು ಯಜ್ಞವೇದಿಕೆಯ ಸುತ್ತಲಿನ ಮಣ್ಣನ್ನೆಲ್ಲ ದಹಿಸಿತು. ಆ ಹಳ್ಳದಲ್ಲಿದ್ದ ನೀರನ್ನೆಲ್ಲ ಬೆಂಕಿಯು ದಹಿಸಿ ಒಣಗಿಸಿತು. 39 ಈ ದೃಶ್ಯವನ್ನು ಜನರೆಲ್ಲರೂ ನೋಡಿದರು. ಜನರು ನೆಲಕ್ಕೆ ಬಾಗಿ ನಮಸ್ಕರಿಸುತ್ತಾ, “ಯೆಹೋವನೇ ದೇವರು! ಯೆಹೋವನೇ ದೇವರು!” ಎಂದು ಕೂಗಿದರು.
96 ಯೆಹೋವನ ನೂತನ ಕಾರ್ಯಗಳ ಕುರಿತಾಗಿ ಹೊಸ ಹಾಡನ್ನು ಹಾಡಿರಿ!
ಭೂಲೋಕವೆಲ್ಲಾ ಯೆಹೋವನನ್ನು ಹಾಡಿಕೊಂಡಾಡಲಿ.
2 ಯೆಹೋವನಿಗೆ ಹಾಡಿರಿ! ಆತನ ಹೆಸರನ್ನು ಸ್ತುತಿಸಿರಿ!
ಶುಭವಾರ್ತೆಯನ್ನು ಹೇಳಿರಿ! ಆತನ ರಕ್ಷಣೆಯನ್ನು ಪ್ರತಿದಿನವೂ ಸಾರಿ ಹೇಳಿರಿ!
3 ಆತನ ಮಹಿಮೆಯನ್ನು ಜನಾಂಗಗಳಿಗೆ ಪ್ರಕಟಿಸಿರಿ.
ಆತನ ಅಮೋಘ ಕಾರ್ಯಗಳ ಕುರಿತು ಸಾರಿ ಹೇಳಿರಿ.
4 ಯೆಹೋವನು ದೊಡ್ಡವನೂ ಸ್ತುತಿಗೆ ಯೋಗ್ಯನೂ ಆಗಿದ್ದಾನೆ.
ಬೇರೆಲ್ಲ ದೇವರುಗಳಿಗಿಂತ ಆತನೇ ಭಯಂಕರನು.
5 ಅನ್ಯಜನಾಂಗಗಳ ದೇವರುಗಳೆಲ್ಲಾ ಕೇವಲ ಪ್ರತಿಮೆಗಳಾಗಿವೆ.
ನಮ್ಮ ಯೆಹೋವನಾದರೋ ಆಕಾಶಮಂಡಲವನ್ನು ಸೃಷ್ಟಿಸಿದಾತನು.
6 ಆತನ ಎದುರಿನಲ್ಲಿ ಮಹಿಮೆಯೂ ವೈಭವವೂ ಕಂಗೊಳಿಸುತ್ತಿವೆ.
ಆತನ ಪವಿತ್ರಾಲಯದಲ್ಲಿ ಶಕ್ತಿಯೂ ಸೌಂದರ್ಯವೂ ತುಂಬಿಕೊಂಡಿವೆ.
7 ಭೂಜನಾಂಗಗಳೇ, ಸ್ತುತಿಗೀತೆಗಳನ್ನು ಹಾಡುತ್ತಾ
ಯೆಹೋವನನ್ನು ಮಹಿಮೆಪಡಿಸಿರಿ.
8 ಯೆಹೋವನ ಹೆಸರನ್ನು ಸ್ತುತಿಸಿರಿ.
ನಿಮ್ಮ ಕಾಣಿಕೆಗಳನ್ನು ತೆಗೆದುಕೊಂಡು ದೇವಾಲಯಕ್ಕೆ ಹೋಗಿರಿ.
9 ಯೆಹೋವನನ್ನು ಆತನ ಸುಂದರವಾದ ಆಲಯದಲ್ಲಿ ಆರಾಧಿಸಿರಿ.
ಭೂನಿವಾಸಿಗಳೆಲ್ಲರೇ, ಆತನನ್ನೇ ಆರಾಧಿಸಿರಿ.
10 ಯೆಹೋವನೇ ರಾಜನೆಂದು ಜನಾಂಗಗಳಿಗೆ ಪ್ರಕಟಿಸಿರಿ.
ಭೂಮಿಯು ಸ್ಥಿರವಾಗಿರುವುದು.
ಯೆಹೋವನೇ ನೀತಿಯಿಂದ ಅದನ್ನು ಆಳುವನು.
11 ಆಕಾಶಮಂಡಲವೇ, ಸಂತೋಷಪಡು!
ಭೂಮಿಯೇ, ಉಲ್ಲಾಸಪಡು! ಸಮುದ್ರವೇ ಮತ್ತು ಸಮುದ್ರದೊಳಗಿರುವ ಸರ್ವಸ್ವವೇ, ಆನಂದಘೋಷ ಮಾಡಿರಿ!
12 ಹೊಲಗಳೇ ಮತ್ತು ಅವುಗಳ ಮೇಲೆ ಬೆಳೆದಿರುವ ಸಮಸ್ತವೇ, ಸಂತೋಷದಿಂದಿರಿ!
ಅರಣ್ಯದ ಮರಗಳೇ, ಹಾಡಿರಿ ಮತ್ತು ಸಂತೋಷಪಡಿರಿ!
13 ಯಾಕೆಂದರೆ ಲೋಕವನ್ನು ಆಳಲು ಯೆಹೋವನು ಬರುತ್ತಿದ್ದಾನೆ.
ಆತನು ಲೋಕವನ್ನು ನ್ಯಾಯ ನೀತಿಗಳಿಂದ ಆಳುವನು.
1 ಅಪೊಸ್ತಲನಾದ ಪೌಲನು ಬರೆಯುವ ಪತ್ರ. ನನ್ನನ್ನು ಅಪೊಸ್ತಲನನ್ನಾಗಿ ಆರಿಸಿದವರು ಮನುಷ್ಯರಲ್ಲ. ನಾನು ಮನುಷ್ಯರಿಂದ ಕಳುಹಿಸಲ್ಪಟ್ಟವನಲ್ಲ. ನನ್ನನ್ನು ಅಪೊಸ್ತಲನನ್ನಾಗಿ ಮಾಡಿದವರು ಯಾರೆಂದರೆ, ಯೇಸು ಕ್ರಿಸ್ತನು ಮತ್ತು ತಂದೆಯಾದ ದೇವರು. ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದಾತನು ದೇವರೇ. 2 ನಾನು ಮತ್ತು ನನ್ನೊಂದಿಗಿರುವ ಎಲ್ಲಾ ಸಹೋದರರು ಈ ಪತ್ರವನ್ನು ಗಲಾತ್ಯದಲ್ಲಿರುವ ಸಭೆಗಳವರಿಗೆ ಬರೆದಿದ್ದೇವೆ.
3 ನಮ್ಮ ತಂದೆಯಾದ ದೇವರೂ ಪ್ರಭುವಾದ ಯೇಸು ಕ್ರಿಸ್ತನೂ ನಿಮಗೆ ಕೃಪೆ ತೋರಲಿ ಮತ್ತು ಶಾಂತಿಕೊಡಲಿ ಎಂದು ನಾವು ಪ್ರಾರ್ಥಿಸುತ್ತೇವೆ. 4 ನಾವು ವಾಸಿಸುತ್ತಿರುವ ಈ ಕೆಟ್ಟ ಲೋಕದೊಳಗಿಂದ ನಮ್ಮನ್ನು ಬಿಡುಗಡೆ ಮಾಡಬೇಕೆಂದು ಯೇಸು ನಮ್ಮ ಪಾಪಗಳಿಗಾಗಿ ತನ್ನನ್ನೇ ಕೊಟ್ಟುಬಿಟ್ಟನು. ಇದು ತಂದೆಯಾದ ದೇವರ ಚಿತ್ತವಾಗಿತ್ತು. 5 ಎಂದೆಂದಿಗೂ ದೇವರಿಗೆ ಮಹಿಮೆಯಾಗಲಿ. ಆಮೆನ್.
ಸತ್ಯಸುವಾರ್ತೆ ಒಂದೇ ಒಂದು
6 ಸ್ವಲ್ಪಕಾಲದ ಹಿಂದೆ ತನ್ನನ್ನು ಹಿಂಬಾಲಿಸುವುದಕ್ಕಾಗಿ ನಿಮ್ಮನ್ನು ಕರೆದಾತನು ದೇವರೇ. ಆತನು ನಿಮ್ಮನ್ನು ಯೇಸು ಕ್ರಿಸ್ತನ ಮೂಲಕವಾಗಿ ಬಂದ ತನ್ನ ಕೃಪೆಯ ಮೂಲಕ ಕರೆದನು. ಆದರೆ ಈಗ ನಾನು ನಿಮ್ಮೆಲ್ಲರ ವಿಷಯದಲ್ಲಿ ಆಶ್ಚರ್ಯಗೊಂಡಿದ್ದೇನೆ. ನೀವು ಈಗಾಗಲೇ ವಿಮುಖರಾಗಿ ಬೇರೊಂದು ಸುವಾರ್ತೆಯನ್ನು ನಂಬಿಕೊಂಡಿದ್ದೀರಿ. 7 ನಿಜವಾಗಿ ಹೇಳಬೇಕಾದರೆ, ಬೇರೊಂದು ಸತ್ಯಸುವಾರ್ತೆಯು ಇಲ್ಲವೇ ಇಲ್ಲ. ಆದರೆ ಕೆಲವು ಜನರು ನಿಮ್ಮನ್ನು ಗಲಿಬಿಲಿಗೊಳಿಸುತ್ತಿದ್ದಾರೆ. ಅವರು ಕ್ರಿಸ್ತನ ಸುವಾರ್ತೆಯನ್ನು ಬದಲಾಯಿಸಬೇಕೆಂದಿದ್ದಾರೆ. 8 ನಾವು ನಿಮಗೆ ಸತ್ಯಸುವಾರ್ತೆಯನ್ನು ತಿಳಿಸಿದೆವು. ಆದ್ದರಿಂದ ನಾವೇ ಆಗಲಿ, ಪರಲೋಕದ ದೇವದೂತರೇ ಆಗಲಿ ಮತ್ತೊಂದು ಸುವಾರ್ತೆಯನ್ನು ತಿಳಿಸಿದರೆ ಶಾಪಗ್ರಸ್ತರಾಗಲಿ. 9 ನಾನು ನಿಮಗೆ ಇದನ್ನು ಮೊದಲೇ ತಿಳಿಸಿದ್ದರೂ ಈಗ ಮತ್ತೆ ಹೇಳುತ್ತೇನೆ. ನೀವು ಈಗಾಗಲೇ ಸ್ವೀಕರಿಸಿಕೊಂಡಿರುವ ಸತ್ಯಸುವಾರ್ತೆಗೆ ವಿರುದ್ಧವಾದದ್ದನ್ನು ಯಾವನಾದರೂ ಸಾರಿದರೆ ಅವನು ಶಾಪಗ್ರಸ್ತನಾಗಲಿ.
10 ಮನುಷ್ಯರು ನನ್ನನ್ನು ಸ್ವೀಕರಿಸಿಕೊಳ್ಳುವಂತೆ ಮಾಡುವುದಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೆಂದು ನೀವು ಭಾವಿಸುತ್ತೀರೋ? ಇಲ್ಲ! ನಾನು ದೇವರನ್ನೇ ಮೆಚ್ಚಿಸಲು ಪ್ರಯತ್ನಿಸುತ್ತಿದ್ದೇನೆ. ಮನುಷ್ಯರನ್ನು ಮೆಚ್ಚಿಸುವುದಕ್ಕಾಗಿ ನಾನು ಪ್ರಯತ್ನಿಸುತ್ತಿದ್ದೇನೋ? ನಾನು ಮನುಷ್ಯರನ್ನು ಮೆಚ್ಚಿಸಬೇಕೆಂದಿದ್ದರೆ ಯೇಸು ಕ್ರಿಸ್ತನ ಸೇವಕನಾಗುತ್ತಿರಲಿಲ್ಲ.
ಪೌಲನ ಅಧಿಕಾರ ದೇವರಿಂದ ಬಂದದ್ದು
11 ಸಹೋದರರೇ, ನಾವು ಸಾರಿದ ಸುವಾರ್ತೆ ಮನುಷ್ಯರಿಂದ ಬಂದದ್ದಲ್ಲವೆಂಬುದು ನಿಮಗೆ ತಿಳಿದಿರಲಿ. 12 ನನಗೆ ಸುವಾರ್ತೆ ದೊರೆತದ್ದು ಮನುಷ್ಯರಿಂದಲ್ಲ. ಯಾವನೂ ನನಗೆ ಸುವಾರ್ತೆಯನ್ನು ಉಪದೇಶಿಸಲಿಲ್ಲ. ನಾನು ಜನರಿಗೆ ಉಪದೇಶಿಸಬೇಕಾದ ಸುವಾರ್ತೆಯನ್ನು ಯೇಸು ಕ್ರಿಸ್ತನೇ ನನಗೆ ಪ್ರಕಟಿಸಿದನು.
ಗುಣಹೊಂದಿದ ಸೇವಕ
(ಮತ್ತಾಯ 8:5-13; ಯೋಹಾನ 4:43-54)
7 ಯೇಸುವು ಜನರಿಗೆ ಈ ಸಂಗತಿಗಳೆಲ್ಲವನ್ನು ಹೇಳಿ ಮುಗಿಸಿದ ನಂತರ ಕಪೆರ್ನೌಮಿಗೆ ಹೋದನು. 2 ಅಲ್ಲಿ ಒಬ್ಬ ಸೇನಾಧಿಪತಿ[a] ಇದ್ದನು. ಅವನ ಪ್ರಿಯ ಸೇವಕನೊಬ್ಬನು ಕಾಯಿಲೆಯಿಂದ ಸಾಯುವ ಸ್ಥಿತಿಯಲ್ಲಿದ್ದನು. 3 ಯೇಸುವಿನ ಸುದ್ದಿಯನ್ನು ಕೇಳಿದಾಗ, ಅವನು ಕೆಲವು ಹಿರಿಯ ಯೆಹೂದ್ಯನಾಯಕರನ್ನು ಆತನ ಬಳಿಗೆ ಕಳುಹಿಸಿ ತನ್ನ ಸೇವಕನ ಪ್ರಾಣವನ್ನು ಉಳಿಸಿಕೊಡಬೇಕೆಂದು ಬೇಡಿಕೊಂಡನು. 4 ಆ ಜನರು ಯೇಸುವಿನ ಬಳಿಗೆ ಬಂದು, “ಈ ಸೇನಾಧಿಪತಿ ನಿನ್ನ ಸಹಾಯ ಹೊಂದುವುದಕ್ಕೆ ಯೋಗ್ಯನಾಗಿದ್ದಾನೆ. 5 ಅವನು ನಮ್ಮ ಜನರನ್ನು ಪ್ರೀತಿಸುತ್ತಾನೆ ಮತ್ತು ನಮಗೋಸ್ಕರ ಸಭಾಮಂದಿರವನ್ನು ಕಟ್ಟಿಸಿಕೊಟ್ಟಿದ್ದಾನೆ” ಎಂದು ಹೇಳಿ ಬಹಳವಾಗಿ ಬೇಡಿಕೊಂಡರು.
6 ಆದ್ದರಿಂದ ಯೇಸು ಅವರ ಜೊತೆ ಹೊರಟನು. ಯೇಸು ಮನೆಯ ಹತ್ತಿರ ಬರುತ್ತಿರುವಾಗ, ಆ ಅಧಿಕಾರಿಯು ಸ್ನೇಹಿತರನ್ನು, “ಪ್ರಭುವೇ, ನೀನು ನನ್ನ ಮನೆಗೆ ಬರುವಷ್ಟು ನಾನು ಯೋಗ್ಯನಲ್ಲ. 7 ನಿನ್ನ ಬಳಿಗೆ ಬರುವುದಕ್ಕೂ ನನಗೆ ಯೋಗ್ಯತೆ ಇಲ್ಲ. ನೀನು ಕೇವಲ ಒಂದು ಆಜ್ಞೆ ಕೊಟ್ಟರೆ ಸಾಕು, ನನ್ನ ಆಳು ಗುಣಹೊಂದುವನು. 8 ನಿನ್ನ ಅಧಿಕಾರವನ್ನು ನಾನು ತಿಳಿದುಕೊಂಡಿದ್ದೇನೆ. ನಾನೂ ಮತ್ತೊಬ್ಬರ ಅಧೀನದಲ್ಲಿದ್ದೇನೆ. ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ. ನಾನು ಒಬ್ಬ ಸೈನಿಕನಿಗೆ, ‘ಹೋಗು’ ಎಂದು ಹೇಳಿದರೆ, ಅವನು ಹೋಗುತ್ತಾನೆ. ಇನ್ನೊಬ್ಬ ಸೈನಿಕನಿಗೆ, ‘ಬಾ’ ಎಂದು ಹೇಳಿದರೆ, ಅವನು ಬರುತ್ತಾನೆ. ನನ್ನ ಆಳಿಗೆ, ‘ಇದನ್ನು ಮಾಡು’ ಎಂದು ಹೇಳಿದರೆ, ಅವನು ನನಗೆ ವಿಧೇಯನಾಗುತ್ತಾನೆ” ಎಂದು ಯೇಸುವಿಗೆ ಹೇಳಲು ಕಳುಹಿಸಿದನು.
9 ಯೇಸು ಇದನ್ನು ಕೇಳಿ ಆಶ್ಚರ್ಯಪಟ್ಟು ತನ್ನನ್ನು ಹಿಂಬಾಲಿಸುತ್ತಿದ್ದ ಜನರ ಕಡೆಗೆ ನೋಡಿ, “ಇಷ್ಟು ದೊಡ್ಡ ನಂಬಿಕೆಯಿರುವ ವ್ಯಕ್ತಿಯನ್ನು ನಾನು ಇಸ್ರೇಲಿನಲ್ಲಿಯೂ ನೋಡಲಿಲ್ಲ ಎಂದು ನಿಮಗೆ ಹೇಳುತ್ತೇನೆ” ಎಂದನು.
10 ಆ ಅಧಿಕಾರಿಯು ಕಳುಹಿಸಿದ್ದ ಜನರು ಯೇಸುವಿನ ಬಳಿಯಿಂದ ಹಿಂತಿರುಗಿ ಹೋದಾಗ, ಆ ಸೇವಕನಿಗೆ ಆಗಲೇ ಗುಣವಾಗಿರುವುದನ್ನು ಕಂಡರು.
Kannada Holy Bible: Easy-to-Read Version. All rights reserved. © 1997 Bible League International