Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
1 ರಾಜರುಗಳು 21:1-10

ನಾಬೋತನ ದ್ರಾಕ್ಷಿತೋಟ

21 ಸಮಾರ್ಯದ ರಾಜನಾದ ಅಹಾಬನಿಗೆ ಇಜ್ರೇಲಿನಲ್ಲಿ ಅರಮನೆಯಿತ್ತು. ಆ ಅರಮನೆಯ ಹಿತ್ತಲಿನಲ್ಲಿ ಒಂದು ದ್ರಾಕ್ಷಿತೋಟವಿತ್ತು. ಇಜ್ರೇಲಿನವನಾದ ನಾಬೋತನೆಂಬ ಹೆಸರಿನ ಮನುಷ್ಯನು ಆ ದ್ರಾಕ್ಷಿತೋಟದ ಒಡೆಯನಾಗಿದ್ದನು. ಒಂದು ದಿನ ಅಹಾಬನು ನಾಬೋತನಿಗೆ, “ನಿನ್ನ ದ್ರಾಕ್ಷಿತೋಟವನ್ನು ನನಗೆ ಕೊಡು. ನಾನು ಅದನ್ನು ತರಕಾರಿಯ ತೋಟವನ್ನಾಗಿ ಮಾಡುವೆನು. ನಿನ್ನ ದ್ರಾಕ್ಷಿತೋಟವು ನನ್ನ ಅರಮನೆಯ ಹತ್ತಿರದಲ್ಲಿದೆ. ನಾನು ಅದಕ್ಕೆ ಬದಲಾಗಿ ಒಂದು ಉತ್ತಮ ದ್ರಾಕ್ಷಿತೋಟವನ್ನು ನಿನಗೆ ಕೊಡುವೆನು. ನೀನು ಬಯಸಿದರೆ, ನಾನು ಅದರ ಬೆಲೆಯನ್ನು ಹಣದ ರೂಪದಲ್ಲಿ ಕೊಡುತ್ತೇನೆ” ಎಂದು ಹೇಳಿದನು.

ನಾಬೋತನು, “ನಾನು ನನ್ನ ಭೂಮಿಯನ್ನು ಎಂದಿಗೂ ನಿನಗೆ ಕೊಡುವುದಿಲ್ಲ. ಅದು ನನ್ನ ವಂಶಕ್ಕೆ ಸೇರಿದ್ದು” ಎಂದು ಉತ್ತರಿಸಿದನು.

ಅಹಾಬನು ಮನೆಗೆ ಹೋದನು. ಅವನು ನಾಬೋತನ ಮೇಲೆ ಕೋಪಗೊಂಡನು ಮತ್ತು ಬೇಸರಗೊಂಡನು. ಇಜ್ರೇಲಿನವನಾದ ನಾಬೋತನು ಹೇಳಿದ ಸಂಗತಿಗಳನ್ನು ಅವನು ಇಷ್ಟಪಡಲಿಲ್ಲ. “ನಾನು ನನ್ನ ವಂಶಕ್ಕೆ ಸೇರಿದ ದ್ರಾಕ್ಷಿತೋಟವನ್ನು ನಿನಗೆ ಕೊಡುವುದಿಲ್ಲ” ಎಂದು ನಾಬೋತನು ಹೇಳಿದ್ದನು. ಅಹಾಬನು ತನ್ನ ಹಾಸಿಗೆಯಲ್ಲಿ ಮಲಗಿ, ಮುಖವನ್ನು ಬೇರೆ ಕಡೆಗೆ ತಿರುಗಿಸಿಕೊಂಡನು. ಅವನು ಊಟಮಾಡಲಿಲ್ಲ.

ಅಹಾಬನ ಪತ್ನಿಯಾದ ಈಜೆಬೆಲಳು ಅವನ ಹತ್ತಿರ ಹೋದಳು. ಈಜೆಬೆಲಳು, “ನೀನೇಕೆ ತಳಮಳಗೊಂಡಿರುವೆ? ನೀನು ಏಕೆ ಊಟಮಾಡಲಿಲ್ಲ?” ಎಂದು ಅವನನ್ನು ಕೇಳಿದಳು.

ಅಹಾಬನು, “ನಾನು ಇಜ್ರೇಲಿನ ನಾಬೋತನಿಗೆ, ‘ನಿನ್ನ ತೋಟವನ್ನು ನನಗೆ ಕೊಡು. ಅದರ ಪೂರ್ಣ ಬೆಲೆಯನ್ನು ನಿನಗೆ ಕೊಡುತ್ತೇನೆ ಅಥವಾ ನೀನು ಬಯಸಿದರೆ, ನಿನಗೆ ಬೇರೊಂದು ತೋಟವನ್ನು ಕೊಡುತ್ತೇನೆ’ ಎಂದು ಹೇಳಿದೆನು. ಆದರೆ ನಾಬೋತನು ತನ್ನ ತೋಟವನ್ನು ನನಗೆ ಕೊಡಲಿಲ್ಲ” ಎಂದು ಉತ್ತರಿಸಿದನು.

ಈಜೆಬೆಲಳು, “ನೀನು ಇಸ್ರೇಲಿಗೆಲ್ಲ ರಾಜ! ನಿನ್ನ ಹಾಸಿಗೆಯಿಂದ ಎದ್ದು ಬಾ. ನೀನು ಸ್ವಲ್ಪ ಊಟಮಾಡಿ, ಸಂತೋಷದಿಂದಿರು. ನಾನು ನಿನಗೆ ನಾಬೋತನ ದ್ರಾಕ್ಷಿತೋಟವನ್ನು ಕೊಡಿಸುತ್ತೇನೆ” ಎಂದು ಹೇಳಿದಳು.

ನಂತರ ಈಜೆಬೆಲಳು ಕೆಲವು ಪತ್ರಗಳನ್ನು ಬರೆದಳು. ಅವಳು ಆ ಪತ್ರಗಳಿಗೆ ಅಹಾಬನ ಹೆಸರಿನ ಸಹಿಯನ್ನು ಮಾಡಿದಳು. ಅಹಾಬನ ಸ್ವಂತ ಮೊಹರನ್ನು ಅವಳು ಆ ಪತ್ರಗಳಿಗೆ ಹಾಕಿದಳು. ನಾಬೋತನು ಇದ್ದ ಆ ಪಟ್ಟಣದಲ್ಲಿ ವಾಸವಾಗಿದ್ದ ಮುಖ್ಯಜನರಿಗೂ ಹಿರಿಯರಿಗೂ ಅವಳು ಆ ಪತ್ರಗಳನ್ನು ಕಳುಹಿಸಿದಳು. ಆ ಪತ್ರದಲ್ಲಿ ಹೀಗೆ ಬರೆದಿತ್ತು:

“ಉಪವಾಸದ ಒಂದು ದಿನವನ್ನು ಗೊತ್ತುಮಾಡಿ, ಆ ದಿನವನ್ನು ಪ್ರಕಟಿಸಿ, ನಂತರ ಪಟ್ಟಣದ ಜನರನ್ನೆಲ್ಲ ಸಭೆ ಸೇರಿಸಿರಿ. 10 ನಾಬೋತನ ಬಗ್ಗೆ ಸುಳ್ಳುಹೇಳುವ ಕೆಲವು ಜನರನ್ನು ಪತ್ತೆಹಚ್ಚಿ, ನಾಬೋತನು ರಾಜನ ವಿರುದ್ಧವಾಗಿ ಮತ್ತು ದೇವರ ವಿರುದ್ಧವಾಗಿ ಮಾತನಾಡುವುದನ್ನು ನಾವು ಕೇಳಿಸಿಕೊಂಡೆವೆಂದು ಅವರು ಹೇಳಲೇಬೇಕು. ಆಗ ನಾಬೋತನನ್ನು ನಗರದಿಂದ ಹೊರಕ್ಕೆ ಕರೆದೊಯ್ದು ಅವನನ್ನು ಕಲ್ಲೆಸೆದು ಕೊಂದುಹಾಕಿರಿ.”

1 ರಾಜರುಗಳು 21:11-14

11 ಇಜ್ರೇಲಿನ ಹಿರಿಯರು ಮತ್ತು ಪ್ರಮುಖರಾದ ಜನರು ಆ ಆಜ್ಞೆಗನುಸಾರವಾಗಿ ಮಾಡಿದರು. 12 ನಾಯಕರು ಒಂದು ದಿನವನ್ನು ಉಪವಾಸದ ದಿನವಾಗಿ ಪ್ರಕಟಿಸಿದರು. ಆ ದಿನ ಅವರು ಜನರನ್ನೆಲ್ಲ ಸಭೆಸೇರಿಸಿದರು. ನಾಬೋತನನ್ನು ಜನರೆದುರಿಗೆ ಪ್ರಮುಖವಾದ ಒಂದು ಸ್ಥಳದಲ್ಲಿ ಅವರು ಕುಳ್ಳಿರಿಸಿದರು. 13 ನಾಬೋತನು ದೇವರ ವಿರುದ್ಧವಾಗಿಯೂ ರಾಜನ ವಿರುದ್ಧವಾಗಿಯೂ ಮಾತನಾಡಿದ್ದನ್ನು ತಾವು ಕೇಳಿರುವುದಾಗಿ ಇಬ್ಬರು ಅಲ್ಲಿನ ಜನರಿಗೆ ಹೇಳಿದರು. ಜನರು ನಾಬೋತನನ್ನು ನಗರದ ಹೊರಕ್ಕೆ ಕರೆದೊಯ್ದು ಅವನನ್ನು ಕಲ್ಲೆಸೆದು ಕೊಂದರು. 14 ನಾಯಕರು ಈಜೆಬೆಲಳಿಗೆ ಒಂದು ಸಂದೇಶವನ್ನು ಕಳುಹಿಸಿದರು. ಆ ಸಂದೇಶವು ಹೀಗಿತ್ತು: “ನಾಬೋತನನ್ನು ಕೊಂದುಹಾಕಲಾಗಿದೆ.”

1 ರಾಜರುಗಳು 21:15-21

15 ಇದನ್ನು ಕೇಳಿದ ಈಜೆಬೆಲಳು ಅಹಾಬನಿಗೆ, “ನಾಬೋತನು ಸತ್ತುಹೋದನು. ಈಗ ನೀನು ಹೋಗಿ, ನಿನಗೆ ಇಷ್ಟವಾದ ಆ ದ್ರಾಕ್ಷಿತೋಟವನ್ನು ತೆಗೆದುಕೊ” ಎಂದು ಹೇಳಿದಳು. 16 ಅಹಾಬನು ದ್ರಾಕ್ಷಿತೋಟಕ್ಕೆ ಹೋಗಿ ಅದನ್ನು ತನ್ನದನ್ನಾಗಿಸಿಕೊಂಡನು.

17 ಈ ಸಮಯದಲ್ಲಿ ಯೆಹೋವನು ಪ್ರವಾದಿಯೂ ತಿಷ್ಬೇ ಊರಿನವನೂ ಆದ ಎಲೀಯನ ಜೊತೆಯಲ್ಲಿ ಮಾತನಾಡಿದನು. ಯೆಹೋವನು ಹೀಗೆಂದನು: 18 “ಸಮಾರ್ಯದಲ್ಲಿ ಆಳುತ್ತಿರುವ ಇಸ್ರೇಲಿನ ರಾಜನಾದ ಅಹಾಬನ ಬಳಿಗೆ ಹೋಗು. ಅಹಾಬನು ಈಗ ನಾಬೋತನ ದ್ರಾಕ್ಷಿತೋಟದಲ್ಲಿದ್ದಾನೆ. ಆ ತೋಟವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಅವನು ಅಲ್ಲಿಗೆ ಹೋಗಿದ್ದಾನೆ. 19 ಯೆಹೋವನಾದ ನಾನು ಅವನಿಗೆ ಹೀಗೆ ಹೇಳಿದೆನೆಂದು ತಿಳಿಸು: ‘ಅಹಾಬನೇ! ನೀನು ನಾಬೋತನನ್ನು ಕೊಂದುಹಾಕಿದೆ. ಈಗ ನೀನು ಅವನ ದ್ರಾಕ್ಷಿತೋಟವನ್ನು ತೆಗೆದುಕೊಳ್ಳುತ್ತಿರುವೆ. ಆದ್ದರಿಂದ ನಾನಿದನ್ನು ನಿನಗೆ ಹೇಳುತ್ತೇನೆ! ನಾಬೋತನು ಸತ್ತ ಸ್ಥಳದಲ್ಲಿಯೇ ನೀನು ಸಹ ಸಾಯುವೆ. ನಾಯಿಗಳು ನಾಬೋತನ ರಕ್ತವನ್ನು ನೆಕ್ಕಿದ ಸ್ಥಳದಲ್ಲಿಯೇ ನಿನ್ನ ರಕ್ತವನ್ನೂ ನೆಕ್ಕುತ್ತವೆ!’”

20 ಎಲೀಯನು ಅಹಾಬನ ಹತ್ತಿರಕ್ಕೆ ಹೋದನು. ಅಹಾಬನು ಎಲೀಯನನ್ನು ಕಂಡು, “ನೀನು ನನ್ನನ್ನು ಮತ್ತೆ ಕಂಡುಹಿಡಿದೆ. ನೀನು ಯಾವಾಗಲೂ ನನಗೆ ವಿರೋಧವಾಗಿರುವೆ” ಎಂದನು.

ಎಲೀಯನು, “ಹೌದು, ನಾನು ನಿನ್ನನ್ನು ಮತ್ತೆ ಕಂಡುಹಿಡಿದೆ. ಯೆಹೋವನ ವಿರುದ್ಧ ಪಾಪಮಾಡಲು ನೀನು ನಿನ್ನ ಜೀವನವನ್ನು ಯಾವಾಗಲೂ ಉಪಯೋಗಿಸುತ್ತಿರುವೆ. 21 ಆದ್ದರಿಂದ ಯೆಹೋವನು ನಿನಗೆ, ‘ನಾನು ನಿನ್ನನ್ನು ನಾಶಪಡಿಸುತ್ತೇನೆ. ನಿನ್ನನ್ನು ಮತ್ತು ನಿನ್ನ ಕುಟುಂಬದ ಪ್ರತಿಯೊಬ್ಬ ಗಂಡಸರನ್ನು ನಾನು ಕೊಂದುಹಾಕುತ್ತೇನೆ.

ಕೀರ್ತನೆಗಳು 5:1-8

ರಚನೆಗಾರ: ದಾವೀದ.

ಯೆಹೋವನೇ, ನನ್ನ ಮಾತುಗಳಿಗೆ ಕಿವಿಗೊಡು.
    ನನ್ನ ಆಲೋಚನೆಗಳಿಗೆ ಗಮನಕೊಡು.
ನನ್ನ ರಾಜನೇ, ನನ್ನ ದೇವರೇ, ನಿನಗೇ ಮೊರೆಯಿಡುವೆನು.
    ನನ್ನ ಪ್ರಾರ್ಥನೆಯನ್ನು ಆಲೈಸು.
ಯೆಹೋವನೇ, ಪ್ರತಿಮುಂಜಾನೆ ನಿನಗೆ ಕಾಣಿಕೆಗಳನ್ನು ಅರ್ಪಿಸಿ ಸಹಾಯಕ್ಕಾಗಿ ಎದುರುನೋಡುವೆನು;
    ಪ್ರತಿಮುಂಜಾನೆ ನೀನು ನನ್ನ ಪ್ರಾರ್ಥನೆಗಳಿಗೆ ಕಿವಿಗೊಡುವೆ.

ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ.
    ನಿನ್ನ ಸನ್ನಿಧಿಯಲ್ಲಿ ದುಷ್ಟರು ಇರಲಾರರು.
ನಿನ್ನನ್ನು ನಂಬದವರು ನಿನ್ನ ಬಳಿಗೆ ಬರಲಾರರು;
    ದುಷ್ಟರನ್ನು ನೀನು ದ್ವೇಷಿಸುವೆ.
ಸುಳ್ಳಾಡುವವರನ್ನು ನೀನು ನಾಶಪಡಿಸುವೆ.
    ಕೊಲೆಗಾರರನ್ನೂ ಮೋಸಗಾರರನ್ನೂ ಯೆಹೋವನು ದ್ವೇಷಿಸುವನು.

ನಾನಂತೂ ನಿನ್ನ ಮಹಾಕೃಪೆಯನ್ನು ಹೊಂದಿದವನಾಗಿ ನಿನ್ನ ಆಲಯಕ್ಕೆ ಬರುವೆನು,
    ನಿನ್ನಲ್ಲಿ ಭಯಭಕ್ತಿಯುಳ್ಳವನಾಗಿ ನಿನ್ನ ಪವಿತ್ರ ಆಲಯದ ಕಡೆಗೆ ಅಡ್ಡಬೀಳುವೆನು.
ಯೆಹೋವನೇ, ವೈರಿಗಳು ನನ್ನನ್ನು ಗಮನಿಸುತ್ತಿರುವುದರಿಂದ
    ನಿನ್ನ ನೀತಿಯ ಮಾರ್ಗವನ್ನು ನನಗೆ ತೋರಿಸಿ,
ನಿನ್ನ ಚಿತ್ತಾನುಸಾರವಾಗಿ ನನ್ನನ್ನು ನಡೆಸು.

ಗಲಾತ್ಯದವರಿಗೆ 2:15-21

15 ನಾವಂತೂ ಹುಟ್ಟು ಯೆಹೂದ್ಯರು. ನಾವು ಪಾಪಿಗಳೆನಿಸಿಕೊಂಡಿರುವ ಅನ್ಯಜನರಲ್ಲ. 16 ಕೇವಲ ಧರ್ಮಶಾಸ್ತ್ರವನ್ನು ಅನುಸರಿಸುವುದರ ಮೂಲಕ ಒಬ್ಬನು ನೀತಿವಂತನಾಗಲು ಸಾಧ್ಯವಿಲ್ಲವೆಂಬುದು ನಮಗೆ ಗೊತ್ತಿದೆ. ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವುದರಿಂದಲೇ ಒಬ್ಬನು ನೀತಿವಂತನಾಗಲು ಸಾಧ್ಯ. ಆದ್ದರಿಂದ ನೀತಿವಂತರಾಗಲು ನಾವು ಯೇಸು ಕ್ರಿಸ್ತನಲ್ಲಿ ನಂಬಿಕೆ ಇಟ್ಟೆವು. ಹೀಗಿರಲಾಗಿ, ನಾವು ನೀತಿವಂತರಾದದ್ದು ಕ್ರಿಸ್ತನಲ್ಲಿ ನಂಬಿಕೆಯಿಟ್ಟಿದ್ದರಿಂದಲೇ ಹೊರತು ಧರ್ಮಶಾಸ್ತ್ರವನ್ನು ಅನುಸರಿಸಿದ್ದರಿಂದಲ್ಲ. ಇದು ಸತ್ಯ, ಏಕೆಂದರೆ ಧರ್ಮಶಾಸ್ತ್ರವನ್ನು ಅನುಸರಿಸುವುದರಿಂದ ಯಾರೂ ನೀತಿವಂತರಾಗಲು ಸಾಧ್ಯವಿಲ್ಲ.

17 ಯೆಹೂದ್ಯರಾದ ನಾವು ನೀತಿವಂತರಾಗಲು ಕ್ರಿಸ್ತನ ಬಳಿಗೆ ಬಂದೆವು. ಆದ್ದರಿಂದ ನಾವು ಸಹ ಪಾಪಿಗಳಾಗಿದ್ದೇವೆಂಬುದು ಸ್ಪಷ್ಟವಾಗಿದೆ. ಕ್ರಿಸ್ತನು ನಮ್ಮನ್ನು ಪಾಪಿಗಳನ್ನಾಗಿ ಮಾಡುತ್ತಾನೆಂಬುದು ಇದರ ಅರ್ಥವೇ? ಇಲ್ಲ. 18 ಆದರೆ ನಾನು ತೊರೆದುಬಿಟ್ಟ ಆ ಸಂಗತಿಗಳನ್ನು ಮತ್ತೆ ಬೋಧಿಸಲಾರಂಭಿಸಿದರೆ ನಿಜವಾಗಿಯೂ ತಪ್ಪು ಮಾಡಿದವನಾಗುತ್ತೇನೆ. 19 ನಾನು ಧರ್ಮಶಾಸ್ತ್ರಕ್ಕಾಗಿ ಜೀವಿಸುವುದನ್ನು ತೊರೆದುಬಿಟ್ಟೆನು. ನನ್ನನ್ನು ಧರ್ಮಶಾಸ್ತ್ರವೇ ಕೊಂದಿತು. ಈಗ ನಾನು ದೇವರಿಗಾಗಿ ಜೀವಿಸಬೇಕೆಂದು ಧರ್ಮಶಾಸ್ತ್ರದ ಪಾಲಿಗೆ ಸತ್ತುಹೋದೆನು. ನಾನು ಕ್ರಿಸ್ತನೊಂದಿಗೆ ಶಿಲುಬೆಗೇರಿಸಲ್ಪಟ್ಟೆನು. 20 ಆದ್ದರಿಂದ ಈಗ ನನ್ನೊಳಗೆ ಜೀವಿಸುತ್ತಿರುವವನು ನಿಜವಾಗಿಯೂ ನಾನಲ್ಲ, ಕ್ರಿಸ್ತನೇ ನನ್ನೊಳಗೆ ಜೀವಿಸುತ್ತಿದ್ದಾನೆ. ನಾನಿನ್ನೂ ದೇಹಾರೂಢನಾಗಿದ್ದೇನೆ. ಆದರೆ ನಾನು ಜೀವಿಸುತ್ತಿರುವುದು ದೇವರ ಮಗನ ಮೇಲೆ ನನಗಿರುವ ನಂಬಿಕೆಯಿಂದಲೇ. ನನ್ನನ್ನು ಪ್ರೀತಿಸಿದಾತನು ಯೇಸುವೇ ಮತ್ತು ನನ್ನನ್ನು ರಕ್ಷಿಸುವುದಕ್ಕಾಗಿ ಆತನು ತನ್ನನ್ನೇ ಕೊಟ್ಟುಬಿಟ್ಟನು. 21 ಇದು ದೇವರ ವರವಾಗಿದೆ ಮತ್ತು ನನಗೆ ಅತಿಮುಖ್ಯವಾದದ್ದಾಗಿದೆ. ಏಕೆಂದರೆ ಧರ್ಮಶಾಸ್ತ್ರವು ನಮ್ಮನ್ನು ನೀತಿವಂತರನ್ನಾಗಿ ಮಾಡಬಹುದಾಗಿದ್ದರೆ, ಕ್ರಿಸ್ತನು ಸಾಯುವ ಅಗತ್ಯವೇ ಇರಲಿಲ್ಲ.

ಲೂಕ 7:36-8:3

ಫರಿಸಾಯನಾದ ಸಿಮೋನನು

36 ಫರಿಸಾಯರಲ್ಲಿ ಒಬ್ಬನು ಯೇಸುವನ್ನು ಊಟಕ್ಕೆ ಬರಬೇಕೆಂದು ಕೇಳಿಕೊಂಡನು. ಆದ್ದರಿಂದ ಯೇಸು ಅವನ ಮನೆಗೆ ಹೋಗಿ ಊಟಕ್ಕೆ ಕುಳಿತುಕೊಂಡನು.

37 ಆ ಊರಿನಲ್ಲಿ ಪಾಪಿಷ್ಠಳಾದ ಒಬ್ಬ ಸ್ತ್ರೀ ಇದ್ದಳು. ಯೇಸುವು ಫರಿಸಾಯನ ಮನೆಯಲ್ಲಿ ಊಟಮಾಡುತ್ತಿದ್ದಾನೆಂದು ಆಕೆಗೆ ತಿಳಿಯಿತು. ಆದ್ದರಿಂದ ಆಕೆ ಭರಣಿಯಲ್ಲಿ[a] ಸ್ವಲ್ಪ ಪರಿಮಳತೈಲವನ್ನು ತೆಗೆದುಕೊಂಡು ಬಂದಳು. 38 ಆಕೆ ಯೇಸುವಿನ ಪಾದಗಳ ಬಳಿ ಅಳುತ್ತಾ, ತನ್ನ ಕಣ್ಣೀರಿನಿಂದ ಆತನ ಪಾದಗಳನ್ನು ತೇವ ಮಾಡಿ ತನ್ನ ತಲೆಯ ಕೂದಲಿನಿಂದ ಯೇಸುವಿನ ಪಾದಗಳನ್ನು ಒರೆಸಿದಳು. ಆಕೆ ಅನೇಕಸಲ ಆತನ ಪಾದಗಳಿಗೆ ಮುದ್ದಿಟ್ಟು ಪರಿಮಳತೈಲವನು ಹಚ್ಚಿದಳು.

39 ಯೇಸುವನ್ನು ತನ್ನ ಮನೆಗೆ ಊಟಕ್ಕೆ ಕರೆದಿದ್ದ ಫರಿಸಾಯನು ಇದನ್ನು ಕಂಡು ತನ್ನೊಳಗೆ, “ಯೇಸು ಪ್ರವಾದಿಯೇ ಆಗಿದ್ದರೆ, ತನ್ನನ್ನು ಮುಟ್ಟುತ್ತಿರುವ ಸ್ತ್ರೀಯು ಪಾಪಿಷ್ಠಳೆಂದು ತಿಳಿದುಕೊಳ್ಳುತ್ತಿದ್ದನು” ಎಂದುಕೊಂಡನು.

40 ಅದಕ್ಕೆ ಯೇಸು ಫರಿಸಾಯನಿಗೆ, “ಸಿಮೋನನೇ, ನಾನು ನಿನಗೆ ಒಂದು ವಿಷಯವನ್ನು ಹೇಳಬೇಕಾಗಿದೆ” ಎಂದನು.

ಸಿಮೋನನು, “ಗುರುವೇ, ಹೇಳು!” ಎಂದನು.

41 ಯೇಸು, “ಇಬ್ಬರು ಮನುಷ್ಯರಿದ್ದರು. ಅವರಿಬ್ಬರೂ ಒಬ್ಬನೇ ಸಾಹುಕಾರನಿಂದ ಹಣವನ್ನು ಬಡ್ಡಿಗೆ ತೆಗೆದುಕೊಂಡಿದ್ದರು. ಒಬ್ಬನು ಐನೂರು ಬೆಳ್ಳಿ ನಾಣ್ಯಗಳನ್ನು[b] ತೆಗೆದುಕೊಂಡಿದ್ದನು. ಇನ್ನೊಬ್ಬನು ಐವತ್ತು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡಿದ್ದನು. 42 ಅವರಲ್ಲಿ ಹಣವಿರಲಿಲ್ಲ. ಆದ್ದರಿಂದ ಅವರು ಸಾಲ ತೀರಿಸಲು ಆಗಲಿಲ್ಲ. ಸಾಹುಕಾರನು ಅವರಿಗೆ, ‘ನೀವು ಸಾಲ ತೀರಿಸಬೇಕಾಗಿಲ್ಲ’ ಎಂದು ಹೇಳಿದನು. ಆ ಇಬ್ಬರಲ್ಲಿ ಯಾರು ಹೆಚ್ಚಾಗಿ ಸಾಹುಕಾರನನ್ನು ಪ್ರೀತಿಸುವರು?” ಎಂದು ಕೇಳಿದನು.

43 ಸಿಮೋನನು, “ಹೆಚ್ಚು ಸಾಲ ತೆಗೆದುಕೊಂಡಿದ್ದವನೇ ಎಂದು ತೋರುತ್ತದೆ” ಎಂದನು.

ಯೇಸು ಸಿಮೋನನಿಗೆ, “ನೀನು ಸರಿಯಾಗಿ ಹೇಳಿದೆ” ಎಂದನು. 44 ಬಳಿಕ ಯೇಸು ಸ್ತ್ರೀಯ ಕಡೆಗೆ ನೋಡಿ ಸಿಮೋನನಿಗೆ, “ಈ ಸ್ತ್ರೀಯು ನಿನಗೆ ಕಾಣುತ್ತಿರುವಳೇ? ನಾನು ನಿನ್ನ ಮನೆಯೊಳಗೆ ಬಂದಾಗ ನೀನು ನನ್ನ ಪಾದಗಳಿಗೆ ನೀರು ಕೊಡಲಿಲ್ಲ. ಆದರೆ ಈಕೆ ತನ್ನ ಕಣ್ಣೀರಿನಿಂದ ನನ್ನ ಪಾದಗಳನ್ನು ತೇವ ಮಾಡಿ ತನ್ನ ತಲೆಯ ಕೂದಲಿಂದ ಒರೆಸಿದಳು. 45 ನೀನು ನನಗೆ ಮುದ್ದಿಡಲಿಲ್ಲ. ಈಕೆಯಾದರೋ ನಾನು ಒಳಗೆ ಬಂದಾಗಿನಿಂದ ನನ್ನ ಪಾದಗಳಿಗೆ ಮುದ್ದಿಡುತ್ತಿದ್ದಾಳೆ! 46 ನೀನು ನನ್ನ ತಲೆಗೆ ಎಣ್ಣೆಯನ್ನು ಹಚ್ಚಲಿಲ್ಲ. ಈಕೆಯಾದರೋ ನನ್ನ ಪಾದಗಳಿಗೆ ಪರಿಮಳತೈಲವನ್ನು ಹಚ್ಚಿದಳು. 47 ಈಕೆಯ ಅನೇಕ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ನಾನು ನಿನಗೆ ಹೇಳುತ್ತೇನೆ. ಏಕೆಂದರೆ ಈಕೆ ಅಧಿಕವಾದ ಪ್ರೀತಿಯನ್ನು ತೋರಿದಳು. ಆದರೆ ಸ್ವಲ್ಪ ಕ್ಷಮೆ ಹೊಂದುವವನು ಕೇವಲ ಸ್ವಲ್ಪ ಪ್ರೀತಿಯನ್ನೇ ತೋರುವನು” ಎಂದು ಹೇಳಿದನು.

48 ಬಳಿಕ ಯೇಸು ಆಕೆಗೆ, “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.

49 ಊಟಕ್ಕೆ ಕುಳಿತುಕೊಂಡಿದ್ದವರು, “ಇವನು (ಯೇಸು) ತನ್ನನ್ನು ಯಾರೆಂದುಕೊಂಡಿದ್ದಾನೆ? ಪಾಪಗಳನ್ನು ಕ್ಷಮಿಸಲು ಇವನಿಗೆ ಹೇಗೆ ಸಾಧ್ಯ?” ಎಂದು ತಮ್ಮೊಳಗೆ ಅಂದುಕೊಂಡರು.

50 ಯೇಸು ಆ ಸ್ತ್ರೀಗೆ, “ನಿನ್ನ ನಂಬಿಕೆಯಿಂದಲೇ ನಿನಗೆ ರಕ್ಷಣೆ ಆಯಿತು. ಸಮಾಧಾನದಿಂದ ಹೋಗು” ಎಂದು ಹೇಳಿದನು.

ಯೇಸುವಿನೊಂದಿಗಿದ್ದ ಜನರು

ಮರುದಿನ, ಯೇಸು ಕೆಲವು ನಗರಗಳ ಮತ್ತು ಊರುಗಳ ಮೂಲಕ ಪ್ರಯಾಣ ಮಾಡಿ ಜನರಿಗೆ ಬೋಧಿಸಿದನು ಮತ್ತು ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸಿದನು. ಹನ್ನೆರಡು ಮಂದಿ ಅಪೊಸ್ತಲರು ಆತನೊಡನೆ ಇದ್ದರು. ಕೆಲವು ಸ್ತ್ರೀಯರೂ ಆತನೊಡನೆ ಇದ್ದರು. ಈ ಸ್ತ್ರೀಯರು ಆತನಿಂದ ತಮ್ಮ ಕಾಯಿಲೆಗಳಿಂದ ಗುಣಹೊಂದಿದವರೂ ದೆವ್ವಗಳ ಕಾಟದಿಂದ ಬಿಡುಗಡೆ ಹೊಂದಿದವರೂ ಆಗಿದ್ದರು. ಈ ಸ್ತ್ರೀಯರಲ್ಲಿ ಒಬ್ಬಳ ಹೆಸರು ಮರಿಯಳು. ಆಕೆ ಮಗ್ದಲ ಎಂಬ ಊರಿನವಳು. ಯೇಸು ಆಕೆಯನ್ನು ಏಳು ದೆವ್ವಗಳಿಂದ ಬಿಡಿಸಿದನು. ಇದಲ್ಲದೆ ಕೂಜನ (ಹೆರೋದನ ಸಹಾಯಕ) ಹೆಂಡತಿಯಾದ ಯೋಹಾನಳು, ಸುಸನ್ನಳು ಮತ್ತು ಬೇರೆ ಅನೇಕ ಸ್ತ್ರೀಯರು ಇದ್ದರು. ಈ ಸ್ತ್ರೀಯರು ಯೇಸುವಿಗೂ ಆತನ ಅಪೊಸ್ತಲರಿಗೂ ತಮ್ಮ ಸ್ವಂತ ಹಣದಿಂದ ಸಹಾಯ ಮಾಡುತ್ತಿದ್ದರು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International