Print Page Options
Previous Prev Day Next DayNext

Revised Common Lectionary (Semicontinuous)

Daily Bible readings that follow the church liturgical year, with sequential stories told across multiple weeks.
Duration: 1245 days
Kannada Holy Bible: Easy-to-Read Version (KERV)
Version
ಕೀರ್ತನೆಗಳು 146

146 ಯೆಹೋವನಿಗೆ ಸ್ತೋತ್ರವಾಗಲಿ!
    ನನ್ನ ಮನವೇ, ಯೆಹೋವನನ್ನು ಸ್ತುತಿಸು!
ನನ್ನ ಜೀವಮಾನವೆಲ್ಲಾ ಯೆಹೋವನನ್ನು ಸ್ತುತಿಸುವೆನು;
    ಆತನನ್ನು ಸಂಕೀರ್ತಿಸುವೆನು.
ಸಹಾಯಕ್ಕಾಗಿ ನಿಮ್ಮ ನಾಯಕರುಗಳನ್ನು ಅವಲಂಬಿಸಿಕೊಳ್ಳಬೇಡಿ.
    ಮನುಷ್ಯರಲ್ಲಿ ಭರವಸವಿಡಬೇಡಿ, ಅವರು ನಿಮ್ಮನ್ನು ರಕ್ಷಿಸಲಾರರು.
ಮನುಷ್ಯರು ಸತ್ತು ಸಮಾಧಿಗೆ ಸೇರುವರು;
    ಆಗ ನಿಮಗೆ ಸಹಾಯಮಾಡಬೇಕೆಂಬ ಅವರ ಆಲೋಚನೆಗಳೆಲ್ಲಾ ಅಳಿದುಹೋಗುತ್ತವೆ.
ಯಾರಿಗೆ ದೇವರು ಸಹಾಯಕನೋ,
    ಯಾರು ತಮ್ಮ ದೇವರಾದ ಯೆಹೋವನಲ್ಲಿ ಭರವಸವಿಟ್ಟಿದ್ದಾರೋ, ಅವರೇ ಭಾಗ್ಯವಂತರು.
ಯೆಹೋವನು ಆಕಾಶವನ್ನೂ ಭೂಮಿಯನ್ನೂ
    ಸಮುದ್ರವನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಸಿದನು.
ಆತನು ಅವುಗಳನ್ನು ಶಾಶ್ವತವಾಗಿ ಸಂರಕ್ಷಿಸುವನು.
ಹಿಂಸೆಗೆ ಗುರಿಯಾಗಿರುವವರಿಗೆ ನ್ಯಾಯವನ್ನೂ;
    ಹಸಿದವರಿಗೆ ಆಹಾರವನ್ನೂ ಕೊಡುವವನು ಆತನೇ.
ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುವನು.
    ಯೆಹೋವನು ಕುರುಡರಿಗೆ ದೃಷ್ಟಿಕೊಡುವನು.
ಯೆಹೋವನು ಕುಗ್ಗಿಹೋದವರನ್ನು ಉದ್ಧರಿಸುವನು.
    ಯೆಹೋವನು ನೀತಿವಂತರನ್ನು ಪ್ರೀತಿಸುವನು.
ಯೆಹೋವನು ನಮ್ಮ ದೇಶದಲ್ಲಿ ವಾಸವಾಗಿರುವ ವಿದೇಶಿಯರನ್ನು ಕಾಪಾಡುತ್ತಾನೆ.
    ಆತನು ವಿಧವೆಯರನ್ನೂ ಅನಾಥರನ್ನೂ ಪರಿಪಾಲಿಸುತ್ತಾನೆ.
    ಆದರೆ ಆತನು ದುಷ್ಟರ ಆಲೋಚನೆಗಳನ್ನು ನಾಶಮಾಡುವನು.
10 ಯೆಹೋವನು ಸದಾಕಾಲ ಆಳುವನು!
    ಚೀಯೋನೇ, ನಿನ್ನ ದೇವರು ಶಾಶ್ವತವಾಗಿ ಆಳುವನು!

ಯೆಹೋವನಿಗೆ ಸ್ತೋತ್ರವಾಗಲಿ!

ವಿಮೋಚನಕಾಂಡ 29:1-9

ಯಾಜಕರನ್ನು ನೇಮಿಸುವ ಆಚಾರವಿಧಿ

29 ಬಳಿಕ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ: “ಆರೋನನು ಮತ್ತು ಅವನ ಗಂಡುಮಕ್ಕಳು ಅಭಿಷೇಕಿಸಲ್ಪಟ್ಟ ಮತ್ತು ಪ್ರತ್ಯೇಕಿಸಲ್ಪಟ್ಟ ಯಾಜಕರಾಗಿ ವಿಶೇಷವಾದ ರೀತಿಯಲ್ಲಿ ನನ್ನ ಸೇವೆಮಾಡಲು ಅವರು ಮಾಡತಕ್ಕದ್ದೇನೆಂಬುದನ್ನು ನಾನೀಗ ಹೇಳುವೆನು. ಯಾವ ಅಂಗದೋಷವಿಲ್ಲದ ಒಂದು ಹೋರಿಮರಿಯನ್ನು ಮತ್ತು ಎರಡು ಟಗರುಗಳನ್ನು ತೆಗೆದುಕೊ. ಬಳಿಕ ಹುಳಿಯಿಲ್ಲದ ರೊಟ್ಟಿಯನ್ನೂ ಆಲಿವ್ ಎಣ್ಣೆ ಮಿಶ್ರವಾದ ಹುಳಿಯಿಲ್ಲದ ಹೋಳಿಗೆಗಳನ್ನೂ ಎಣ್ಣೆ ಹಾಕಿದ ತೆಳುವಾದ ಕಡುಬುಗಳನ್ನೂ ಗೋಧಿಹಿಟ್ಟಿನಿಂದ ಮಾಡಿಸಿ ಒಂದೇ ಬುಟ್ಟಿಯಲ್ಲಿ ತುಂಬಿಸಬೇಕು. ಬಳಿಕ ಆ ಬುಟ್ಟಿಯನ್ನು ಆರೋನನಿಗೂ ಮತ್ತು ಅವನ ಪುತ್ರರಿಗೂ ಕೊಡು. ಅದೇ ಸಮಯದಲ್ಲಿ ಹೋರಿಯನ್ನು ಮತ್ತು ಎರಡು ಟಗರುಗಳನ್ನು ಅವರಿಗೆ ಕೊಡು.

“ತರುವಾಯ ಆರೋನನನ್ನೂ ಅವನ ಪುತ್ರರನ್ನೂ ದೇವದರ್ಶನಗುಡಾರದ ದ್ವಾರಕ್ಕೆ ಕರೆದುಕೊಂಡು ಬಾ. ಅವರನ್ನು ನೀರಿನಲ್ಲಿ ಸ್ನಾನಮಾಡಿಸು. ವಿಶೇಷವಾದ ಬಟ್ಟೆಗಳನ್ನು ಆರೋನನಿಗೆ ತೊಡಿಸು. ಹೆಣೆದ ಅಂಗಿಯನ್ನು ಮತ್ತು ಏಫೋದಿನೊಡನೆ ಧರಿಸತಕ್ಕ ದೈವನಿರ್ಣಯದ ಪದಕವನ್ನು ಅವನಿಗೆ ತೊಡಿಸು. ಬಳಿಕ ಅಂದವಾದ ನಡುಕಟ್ಟನ್ನು ಅವನಿಗೆ ಕಟ್ಟು. ಅವನ ತಲೆಗೆ ಮುಂಡಾಸನ್ನು ಇಡು ಮತ್ತು ಮುಂಡಾಸಕ್ಕೆ ವಿಶೇಷವಾದ ಕಿರೀಟವನ್ನು ಕಟ್ಟಿಸು. ಅಭಿಷೇಕತೈಲವನ್ನು ತೆಗೆದುಕೊಂಡು ಆರೋನನ ತಲೆಯ ಮೇಲೆ ಸುರಿ.

“ತರುವಾಯ ಆರೋನನ ಪುತ್ರರನ್ನು ಆ ಸ್ಥಳಕ್ಕೆ ಕರೆದುಕೊಂಡು ಬಾ. ಅವರಿಗೆ ಹೆಣೆದ ಅಂಗಿಗಳನ್ನು ತೊಡಿಸು. ಬಳಿಕ ಅವರ ಸೊಂಟಗಳಿಗೆ ನಡುಕಟ್ಟುಗಳನ್ನು ಸುತ್ತಿಸು. ಅಂದಿನಿಂದ ಅವರು ಯಾಜಕರಾಗಿರುವರು. ವಿಶೇಷವಾದ ಈ ಕಟ್ಟಳೆಯು ಶಾಶ್ವತವಾಗಿರುವುದರಿಂದ ಅವರು ಯಾಜಕರಾಗಿರುವರು. ಹೀಗೆ ಆರೋನನನ್ನೂ ಅವನ ಪುತ್ರರನ್ನೂ ನೀನು ಯಾಜಕರನ್ನಾಗಿ ಮಾಡುವೆ.

ಅಪೊಸ್ತಲರ ಕಾರ್ಯಗಳು 22:6-21

ಪೌಲನ ತನ್ನ ಮನಪರಿವರ್ತನೆಯ ಸಾಕ್ಷಿಯ ಕುರಿತು ಹೇಳಿಕೆ

“ನಾನು ಪ್ರಯಾಣ ಮಾಡುತ್ತಾ ದಮಸ್ಕದ ಸಮೀಪಕ್ಕೆ ಬಂದಾಗ ಒಂದು ಘಟನೆ ಸಂಭವಿಸಿತು. ಆಗ ಸುಮಾರು ಮಧ್ಯಾಹ್ನವಾಗಿತ್ತು. ಇದ್ದಕ್ಕಿದ್ದಂತೆ ಪ್ರಕಾಶಮಾನವಾದ ಬೆಳಕೊಂದು ನನ್ನ ಸುತ್ತಲೂ ಪ್ರಕಾಶಿಸಿತು. ನಾನು ನೆಲಕ್ಕೆ ಬಿದ್ದೆನು. ಆಗ ವಾಣಿಯೊಂದು ನನಗೆ, ‘ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸೆ ಪಡಿಸುತ್ತಿರುವೆ?’ ಎಂದು ಹೇಳಿತು.

“ನಾನು, ‘ಪ್ರಭುವೇ, ನೀನು ಯಾರು?’ ಎಂದು ಕೇಳಿದೆನು. ಆ ವಾಣಿಯು, ‘ನಾನು ನಜರೇತಿನ ಯೇಸು. ನೀನು ಹಿಂಸಿಸುತ್ತಿರುವುದು ನನ್ನನ್ನೇ’ ಎಂದು ಹೇಳಿತು. ನನ್ನೊಂದಿಗಿದ್ದ ಜನರು ನನ್ನ ಸಂಗಡ ಮಾತಾಡುತ್ತಿದ್ದ ವ್ಯಕ್ತಿಯ ಸ್ವರವನ್ನು ಕೇಳಲಿಲ್ಲ. ಆದರೆ ಅವರು ಬೆಳಕನ್ನು ನೋಡಿದರು.

10 “ನಾನು, ‘ಪ್ರಭುವೇ, ನಾನೇನು ಮಾಡಲಿ’ ಎಂದೆನು. ಪ್ರಭುವು ‘ಎದ್ದು ದಮಸ್ಕದೊಳಗೆ ಹೋಗು. ನಾನು ನಿನಗೆ ನೇಮಿಸಿರುವ ಕೆಲಸಗಳನ್ನೆಲ್ಲಾ ಅಲ್ಲಿ ನಿನಗೆ ತಿಳಿಸಲಾಗುವುದು’ ಎಂದು ಉತ್ತರಕೊಟ್ಟನು. 11 ಪ್ರಕಾಶಮಾನವಾದ ಆ ಬೆಳಕು ನನ್ನನ್ನು ಕುರುಡನನ್ನಾಗಿ ಮಾಡಿದ್ದರಿಂದ ನನಗೆ ಏನೂ ಕಾಣಲಿಲ್ಲ. ಆದ್ದರಿಂದ ಆ ಜನರು ನನ್ನನ್ನು ದಮಸ್ಕಕ್ಕೆ ಕೈಹಿಡಿದು ನಡೆಸಿಕೊಂಡು ಹೋದರು.

12 “ದಮಸ್ಕದಲ್ಲಿ ಅನನೀಯ ಎಂಬುವನು ನನ್ನ ಬಳಿಗೆ ಬಂದನು. ಅನನೀಯನು ಧಾರ್ಮಿಕ ವ್ಯಕ್ತಿಯಾಗಿದ್ದನು. ಅವನು ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯನಾಗಿದ್ದನು. ಅಲ್ಲಿ ವಾಸವಾಗಿದ್ದ ಯೆಹೂದ್ಯರೆಲ್ಲರು ಅವನನ್ನು ಗೌರವಿಸುತ್ತಿದ್ದರು. 13 ಅನನೀಯನು ನನ್ನ ಬಳಿಗೆ ಬಂದು, ‘ಸಹೋದರನಾದ ಸೌಲನೇ, ನಿನಗೆ ಮತ್ತೆ ದೃಷ್ಟಿ ಬರಲಿ!’ ಎಂದನು. ಆ ಕೂಡಲೇ ನನಗೆ ದೃಷ್ಟಿ ಬಂದಿತು ಮತ್ತು ನಾನು ಅವನನ್ನು ನೋಡಿದೆನು.

14 “ಅನನೀಯನು ನನಗೆ, ‘ನಮ್ಮ ಪಿತೃಗಳ ದೇವರು ಬಹುಕಾಲದ ಹಿಂದೆಯೇ ನಿನ್ನನ್ನು ಆರಿಸಿಕೊಂಡನು. ನೀನು ದೇವರ ಯೋಜನೆಯನ್ನು ತಿಳಿದುಕೊಳ್ಳಬೇಕೆಂತಲೂ ನೀತಿಸ್ವರೂಪನನ್ನು (ಯೇಸು) ನೋಡಬೇಕೆಂತಲೂ ಆತನ ವಾಕ್ಯಗಳನ್ನು ಕೇಳಬೇಕೆಂತಲೂ ದೇವರು ನಿನ್ನನ್ನು ಆರಿಸಿಕೊಂಡನು. 15 ನೀನು ಕಂಡ ಮತ್ತು ಕೇಳಿದ ಸಂಗತಿಗಳ ಬಗ್ಗೆ ಎಲ್ಲಾ ಜನರಿಗೆ ಸಾಕ್ಷಿಯಾಗಿರುವೆ. 16 ಈಗ ನೀನು ತಡಮಾಡುವುದೇಕೆ? ಎದ್ದೇಳು! ಆತನಲ್ಲಿ ನಂಬಿಕೆಯಿಟ್ಟು ದೀಕ್ಷಾಸ್ನಾನ ಮಾಡಿಸಿಕೊಂಡು ನಿನ್ನ ಪಾಪಗಳನ್ನು ತೊಳೆದುಕೊ’ ಎಂದು ಹೇಳಿದನು.

17 “ತರುವಾಯ ನಾನು ಜೆರುಸಲೇಮಿಗೆ ಹಿಂತಿರುಗಿದೆನು. ನಾನು ದೇವಾಲಯದ ಅಂಗಳದಲ್ಲಿ ಪ್ರಾರ್ಥಿಸುತ್ತಿದ್ದಾಗ ನನಗೊಂದು ದರ್ಶನವಾಯಿತು. 18 ನಾನು ಯೇಸುವನ್ನು ಕಂಡೆನು. ಆತನು ನನಗೆ, ‘ಬೇಗನೆ ಜೆರುಸಲೇಮಿನಿಂದ ಹೊರಡು! ನನ್ನ ಕುರಿತಾದ ಸಾಕ್ಷಿಯನ್ನು ಈ ಜನರು ಸ್ವೀಕರಿಸುವುದಿಲ್ಲ’ ಎಂದು ಹೇಳಿದನು.

19 “ನಾನು, ‘ಪ್ರಭುವೇ, ವಿಶ್ವಾಸಿಗಳನ್ನು ಸೆರೆಮನೆಗಳಿಗೆ ಹಾಕಿಸಿ ಹೊಡೆಸುತ್ತಿದ್ದವನು ನಾನೇ ಎಂಬುದು ಜನರಿಗೆ ಗೊತ್ತಿದೆ. ನಿನ್ನಲ್ಲಿ ನಂಬಿಕೆಯಿಟ್ಟಿರುವ ಜನರನ್ನು ಪತ್ತೆಹಚ್ಚಿ ಬಂಧಿಸುವುದಕ್ಕಾಗಿ ನಾನು ಎಲ್ಲಾ ಸಭಾಮಂದಿರಗಳಿಗೆ ಹೋಗಿದ್ದೇನೆ. 20 ನಿನ್ನ ಸಾಕ್ಷಿಯಾದ ಸ್ತೆಫನನು ಕೊಲ್ಲಲ್ಪಟ್ಟಾಗ ನಾನು ಅಲ್ಲಿದ್ದದ್ದು ಸಹ ಜನರಿಗೆ ಗೊತ್ತಿದೆ. ಸ್ತೆಫನನನ್ನು ಕೊಲ್ಲಲು ಅವರು ನಿರ್ಧರಿಸಿದಾಗ ನಾನೂ ಅದಕ್ಕೆ ಒಪ್ಪಿಗೆ ಸೂಚಿಸಿ ಅಲ್ಲೇ ನಿಂತುಕೊಂಡಿದ್ದೆನು. ಅಲ್ಲದೆ ಅವನನ್ನು ಕೊಲ್ಲುತ್ತಿದ್ದ ಜನರ ಮೇಲಂಗಿಗಳನ್ನು ಸಹ ನಾನು ಹಿಡಿದುಕೊಂಡಿದ್ದೆ!’ ಎಂದೆನು.

21 “ಆದರೆ ಯೇಸು ನನಗೆ, ‘ಈಗ ಹೊರಡು, ಬಹುದೂರದಲ್ಲಿರುವ ಯೆಹೂದ್ಯರಲ್ಲದ ಜನರ ಬಳಿಗೆ ನಾನು ನಿನ್ನನ್ನು ಕಳುಹಿಸುವೆನು’ ಎಂದು ಹೇಳಿದನು.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International