Add parallel Print Page Options

ಸ್ವಸ್ಥತೆಯನ್ನು ಹೊಂದಿದ ಪಾರ್ಶ್ವವಾಯು ರೋಗಿ

(ಮಾರ್ಕ 2:1-12; 5:17-26)

ಯೇಸು ದೋಣಿಯನ್ನು ಹತ್ತಿ ಸರೋವರವನ್ನು ದಾಟಿ ತನ್ನ ಸ್ವಂತ ಊರಿಗೆ ಹೋದನು. ಕೆಲವರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಯೇಸುವಿನ ಬಳಿಗೆ ತಂದರು. ಅವನು ತನ್ನ ಹಾಸಿಗೆಯ ಮೇಲೆ ಮಲಗಿದ್ದನು. ಯೇಸು ಈ ಜನರಲ್ಲಿದ್ದ ದೊಡ್ಡ ನಂಬಿಕೆಯನ್ನು ಕಂಡು ಪಾರ್ಶ್ವವಾಯು ರೋಗಿಗೆ, “ಯುವಕನೇ, ಸಂತೋಷಪಡು. ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.

ಅಲ್ಲಿದ್ದ ಧರ್ಮೋಪದೇಶಕರು ಇದನ್ನು ಕೇಳಿ, “ಇದು ದೇವದೂಷಣೆ” ಎಂದು ತಮ್ಮೊಳಗೆ ಅಂದುಕೊಂಡರು.

ಅವರು ಹೀಗೆ ಆಲೋಚಿಸುತ್ತಿರುವುದು ಯೇಸುವಿಗೆ ತಿಳಿದಿತ್ತು. ಆತನು ಅವರಿಗೆ, “ನೀವು ಏಕೆ ದುರಾಲೋಚನೆ ಮಾಡುತ್ತಿದ್ದೀರಿ? ಯಾವುದು ಸುಲಭ? ಈ ಪಾರ್ಶ್ವವಾಯು ರೋಗಿಗೆ, ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಹೇಳುವುದೇ ಅಥವಾ ‘ಮೇಲಕ್ಕೆದ್ದು ನಡೆ’ ಎಂದು ಹೇಳುವುದೇ? ಆದರೆ ಮನುಷ್ಯಕುಮಾರನಿಗೆ ಪಾಪಗಳನ್ನು ಕ್ಷಮಿಸಲು ಭೂಲೋಕದಲ್ಲಿ ಅಧಿಕಾರವಿದೆ ಎಂಬುದನ್ನು ನಾನು ನಿಮಗೆ ನಿರೂಪಿಸುತ್ತೇನೆ” ಎಂದನು. ನಂತರ ಯೇಸು ಪಾರ್ಶ್ವವಾಯು ರೋಗಿಗೆ, “ಎದ್ದು, ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಮನೆಗೆ ಹೋಗು” ಎಂದನು.

ಆಗ ಅವನು ಎದ್ದು ಮನೆಗೆ ಹೋದನು. ಜನರು ಇದನ್ನು ನೋಡಿ ಆಶ್ಚರ್ಯಚಕಿತರಾದರು. ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟಿದ್ದಕ್ಕಾಗಿ ಜನರು ದೇವರನ್ನು ಕೊಂಡಾಡಿದರು.

Read full chapter