ಮಾರ್ಕ 5:17-26
Kannada Holy Bible: Easy-to-Read Version
17 ಆಗ ಜನರು ತಮ್ಮ ಪ್ರಾಂತ್ಯವನ್ನು ಬಿಟ್ಟುಹೋಗಬೇಕೆಂದು ಯೇಸುವನ್ನು ಬೇಡಿಕೊಂಡರು.
18 ಯೇಸು ಅಲ್ಲಿಂದ ಹೋಗಲು ದೋಣಿ ಹತ್ತುವುದಕ್ಕೆ ಸಿದ್ಧನಾದಾಗ ದೆವ್ವಗಳಿಂದ ಬಿಡುಗಡೆ ಹೊಂದಿದ್ದ ಮನುಷ್ಯನು, “ನಾನೂ ನಿನ್ನ ಜೊತೆಯಲ್ಲಿ ಬರುತ್ತೇನೆ” ಎಂದು ಬೇಡಿಕೊಂಡನು. 19 ಆದರೆ ಯೇಸು ಅವನನ್ನು ಕರೆದುಕೊಂಡು ಹೋಗಲು ಒಪ್ಪದೆ, “ನಿನ್ನ ಮನೆಗೂ ನಿನ್ನ ಸ್ನೇಹಿತರ ಬಳಿಗೂ ಹೋಗು. ಪ್ರಭುವು ನಿನಗೆ ಮಾಡಿದ ಒಳ್ಳೆಯದನ್ನೂ ಆತನು ನಿನಗೆ ತೋರಿದ ಕರುಣೆಯನ್ನೂ ಅವರಿಗೆ ತಿಳಿಸು” ಎಂದು ಹೇಳಿದನು.
20 ಆಗ ಅವನು ಅಲ್ಲಿಂದ ಹೊರಟುಹೋದನು ಮತ್ತು ಯೇಸು ತನಗೆ ಮಾಡಿದ ಉಪಕಾರವನ್ನು ಹತ್ತು ಪಟ್ಟಣಗಳ ಪ್ರದೇಶದ ಜನರಿಗೆ ತಿಳಿಸಿದನು. ಆ ಜನರೆಲ್ಲರೂ ಅತ್ಯಾಶ್ಚರ್ಯಪಟ್ಟರು.
ಸತ್ತು ಹೋಗಿದ್ದ ಹುಡುಗಿಯೊಬ್ಬಳಿಗೆ ಜೀವದಾನ ಕಾಯಿಲೆಯ ಸ್ತ್ರೀಗೆ ಆರೋಗ್ಯದಾನ
(ಮತ್ತಾಯ 9:18-26; ಲೂಕ 8:40-56)
21 ಯೇಸು ದೋಣಿಯಲ್ಲಿ ಸರೋವರದ ಆಚೆ ದಡಕ್ಕೆ ಹೋದನು. ಸರೋವರದ ತೀರದಲ್ಲಿ ಅನೇಕ ಜನರು ಆತನ ಸುತ್ತಲೂ ಸೇರಿದರು. 22 ಸಭಾಮಂದಿರದ ಅಧಿಕಾರಿಯೊಬ್ಬನು ಆ ಸ್ಥಳಕ್ಕೆ ಬಂದನು. ಅವನ ಹೆಸರು ಯಾಯಿರ. ಅವನು ಯೇಸುವನ್ನು ಕಂಡು, ಆತನ ಮುಂದೆ ಅಡ್ಡಬಿದ್ದು ನಮಸ್ಕರಿಸಿ, 23 “ನನ್ನ ಚಿಕ್ಕಮಗಳು ಸಾಯುತ್ತಿದ್ದಾಳೆ. ದಯವಿಟ್ಟು ನೀನು ಬಂದು, ನಿನ್ನ ಕೈಗಳಿಂದ ಅವಳನ್ನು ಸ್ಪರ್ಶಿಸು. ಆಗ ಅವಳು ಗುಣವಾಗಿ ಬದುಕಿಕೊಳ್ಳುತ್ತಾಳೆ” ಎಂದು ಬಹಳವಾಗಿ ಬೇಡಿಕೊಂಡನು.
24 ಯೇಸು ಅಧಿಕಾರಿಯೊಂದಿಗೆ ಹೋದನು. ಅನೇಕ ಜನರು ಯೇಸುವನ್ನು ಹಿಂಬಾಲಿಸಿದರು. ಅವರು ಆತನ ಸುತ್ತಲೂ ನೂಕುತ್ತಾ ಹೋದರು.
25 ಆ ಜನರ ನಡುವೆ ಒಬ್ಬ ಸ್ತ್ರೀ ಇದ್ದಳು. ಆಕೆಗೆ ಹನ್ನೆರಡು ವರ್ಷಗಳಿಂದ ರಕ್ತಸ್ರಾವವಾಗುತ್ತಿತ್ತು. 26 ಆಕೆಯು ಬಹಳ ಸಂಕಟಪಟ್ಟಿದ್ದಳು. ಅವಳಿಗೆ ಸಹಾಯ ಮಾಡಲು ಅನೇಕ ವೈದ್ಯರು ಪ್ರಯತ್ನಿಸಿದ್ದರು. ಆಕೆಯಲ್ಲಿದ್ದ ಹಣವೆಲ್ಲವೂ ವೆಚ್ಚವಾಯಿತು. ಆದರೆ ಆಕೆಗೆ ವಾಸಿಯಾಗಲಿಲ್ಲ. ಅವಳ ಕಾಯಿಲೆಯು ಇನ್ನೂ ಹೆಚ್ಚಾಗುತ್ತಿತ್ತು.
Read full chapterKannada Holy Bible: Easy-to-Read Version. All rights reserved. © 1997 Bible League International