Revised Common Lectionary (Complementary)
18 ಆದ್ದರಿಂದ ಆದಿಯಲ್ಲಿ ನಡೆದ ಸಂಗತಿಗಳನ್ನು ಜ್ಞಾಪಕಮಾಡಿಕೊಳ್ಳಬೇಡ. ಬಹಳ ಕಾಲದ ಹಿಂದೆ ನಡೆದ ಸಂಗತಿಗಳನ್ನು ನೆನೆಸಬೇಡ. 19 ಯಾಕೆಂದರೆ, ನಾನು ಹೊಸ ಕಾರ್ಯಗಳನ್ನು ಮಾಡುವೆನು. ನೀವು ಹೊಸ ಸಸಿಯ ರೀತಿಯಲ್ಲಿ ಬೆಳೆಯುವಿರಿ. ಇದು ಸತ್ಯವೆಂದು ನಿಮಗೆ ಗೊತ್ತಿದೆ. ನಾನು ಮರುಭೂಮಿಯಲ್ಲಿ ಖಂಡಿತವಾಗಿಯೂ ರಸ್ತೆಯನ್ನು ಮಾಡುತ್ತೇನೆ; ಒಣನೆಲದಲ್ಲಿ ನದಿ ಹರಿಯುವಂತೆ ಮಾಡುತ್ತೇನೆ. 20 ವನ್ಯಜೀವಿಗಳೂ ನನಗೆ ಕೃತಜ್ಞತೆಯಿಂದ ಇರುತ್ತವೆ. ದೊಡ್ಡ ಗಾತ್ರದ ಪ್ರಾಣಿಗಳೂ ಪಕ್ಷಿಗಳೂ ನನ್ನನ್ನು ಗೌರವಿಸುವವು. ನಾನು ಮರುಭೂಮಿಯಲ್ಲಿ ನೀರನ್ನು ಬರಮಾಡುವಾಗ ಅವು ನನ್ನನ್ನು ಗೌರವಿಸುವವು. ನಾನು ಆರಿಸಿಕೊಂಡ ನನ್ನ ಜನರಿಗೆ ನೀರನ್ನು ಕೊಡುವುದಕ್ಕಾಗಿ ನಾನು ಇದನ್ನು ಮಾಡುವೆನು. 21 ನಾನು ನಿರ್ಮಿಸಿದ ಈ ಜನರು ನನಗೆ ಸ್ತೋತ್ರಗಾನ ಹಾಡುವರು.
22 “ಯಾಕೋಬೇ, ನೀನು ನನಗೆ ಪ್ರಾರ್ಥಿಸಲಿಲ್ಲ. ಇಸ್ರೇಲೇ, ನೀನು ನನ್ನ ವಿಷಯದಲ್ಲಿ ಆಯಾಸಗೊಂಡಿದ್ದೀ. 23 ನಿನ್ನ ಕುರಿಗಳನ್ನು ನನ್ನ ಬಳಿಗೆ ಯಜ್ಞಮಾಡುವದಕ್ಕಾಗಿ ತರಲಿಲ್ಲ. ನೀನು ನನ್ನನ್ನು ಸನ್ಮಾನಿಸಲಿಲ್ಲ. ನೀನು ನನಗೆ ಬಲಿಯರ್ಪಣೆ ಮಾಡಲಿಲ್ಲ. ನೀನು ಬಲಿಯರ್ಪಣೆ ಮಾಡಬೇಕೆಂದು ನಾನು ನಿನ್ನನ್ನು ಬಲವಂತಪಡಿಸಲಿಲ್ಲ. ನೀನು ಆಯಾಸಗೊಳ್ಳುವ ತನಕ ಧೂಪಹಾಕಬೇಕೆಂದು ನಾನು ನಿನ್ನನ್ನು ಒತ್ತಾಯಪಡಿಸಲಿಲ್ಲ. 24 ನೀನು ನನ್ನ ಗೌರವಾರ್ಥವಾಗಿ ಕಾಣಿಕೆಗಳನ್ನು ಮತ್ತು ಧೂಪವನ್ನು ಖರೀದಿ ಮಾಡಲು ನಿನ್ನ ಹಣವನ್ನು ಖರ್ಚು ಮಾಡಲಿಲ್ಲ. ಆದರೆ ನೀನು ನನ್ನನ್ನು ನಿನ್ನ ಗುಲಾಮನಾಗುವಂತೆ ಬಲವಂತಪಡಿಸಿದೆ. ನೀನು ನಿನ್ನ ಪಾಪಗಳಿಂದ ನನಗೆ ಭಾರವನ್ನುಂಟುಮಾಡಿರುವೆ ಮತ್ತು ನಿನ್ನ ಅಪರಾಧಗಳಿಂದ ನನ್ನನ್ನು ಕುಗ್ಗಿಸಿರುವೆ.
25 “ನಿಮ್ಮ ಪಾಪಗಳನ್ನೆಲ್ಲಾ ಅಳಿಸಿ ಹಾಕುವಾತನು ನಾನೇ. ನಾನು ಇದನ್ನು ನನಗೋಸ್ಕರವಾಗಿ ಮಾಡುತ್ತೇನೆ. ನಾನು ನಿಮ್ಮ ಪಾಪಗಳನ್ನು ಜ್ಞಾಪಿಸಿಕೊಳ್ಳುವುದಿಲ್ಲ.
ರಚನೆಗಾರ: ದಾವೀದ.
41 ಯಾವನು ಬಡಜನರನ್ನು[a] ಅಭಿವೃದ್ಧಿಪಡಿಸುವನೋ ಅವನೇ ಧನ್ಯನು.
ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು.
2 ಯೆಹೋವನು ಅವನ ಪ್ರಾಣವನ್ನು ಕಾಪಾಡಿ ರಕ್ಷಿಸುವನು.
ಅವನು ಭೂಮಿಯ ಮೇಲೆ ಧನ್ಯನೆನಸಿಕೊಳ್ಳುವನು.
ಯೆಹೋವನೇ, ಅವನನ್ನು ಶತ್ರುಗಳ ಕೈಗೆ ಕೊಡಬೇಡ.
3 ಅವನು ಕಾಯಿಲೆಯಿಂದ ಹಾಸಿಗೆಯಲ್ಲಿರುವಾಗ
ಯೆಹೋವನು ಅವನಿಗೆ ಬಲವನ್ನು ಕೊಡುವನು.
ಅವನು ಕಾಯಿಲೆಯಿಂದ ಹಾಸಿಗೆಯಲ್ಲಿದ್ದರೂ ಯೆಹೋವನು ಅವನನ್ನು ಗುಣಪಡಿಸುವನು!
4 ನಾನು ಆತನಿಗೆ, “ಯೆಹೋವನೇ, ನನಗೆ ದಯೆತೋರು.
ನಾನು ನಿನಗೆ ವಿರೋಧವಾಗಿ ಪಾಪಮಾಡಿದ್ದೇನೆ, ಆದರೂ ನನ್ನನ್ನು ಕ್ಷಮಿಸಿ ಗುಣಪಡಿಸು” ಎಂದು ಹೇಳಿದೆ.
5 ನನ್ನ ಶತ್ರುಗಳು ನನ್ನನ್ನು ದೂಷಿಸುತ್ತಾ “ಅವನು ಯಾವಾಗ ಸಾಯುತ್ತಾನೆ,
ಅವನ ಹೆಸರು ಯಾವಾಗ ಅಳಿದುಹೋಗುತ್ತದೆ” ಎಂದು ಹೇಳುತ್ತಿದ್ದಾರೆ.
6 ನನ್ನನ್ನು ನೋಡಲು ಬಂದವರು ಕಪಟದ ಮಾತನ್ನಾಡುವರು;
ಅವರು ನನ್ನ ಸಮಾಚಾರವನ್ನು ಸಂಗ್ರಹಿಸಿಕೊಂಡು ಸುಳ್ಳುಸುದ್ದಿಯನ್ನು ಹಬ್ಬಿಸುವರು.
7 ನನ್ನ ವೈರಿಗಳು ನನಗೆ ವಿರೋಧವಾಗಿ ಗುಟ್ಟಾಗಿ ಮಾತಾಡಿಕೊಳ್ಳುವರು;
ನನಗೆ ಕೇಡುಮಾಡಲು ಆಲೋಚಿಸುವರು.
8 “ಅವನು ಯಾವುದೋ ತಪ್ಪು ಮಾಡಿರುವುದರಿಂದ
ಅವನಿಗೆ ಕಾಯಿಲೆ ಬಂದಿದೆ,
ಅವನಿಗೆ ಗುಣವಾಗುವುದೇ ಇಲ್ಲ” ಎಂದು ಅವರು ಹೇಳುತ್ತಾರೆ.
9 ನನ್ನ ಆಪ್ತಸ್ನೇಹಿತನೊಂದಿಗೆ ಊಟಮಾಡುತ್ತಿದ್ದೆನು; ಅವನಲ್ಲಿ ಭರವಸವಿಟ್ಟಿದ್ದೆನು,
ಆದರೆ ಈಗ ಅವನೇ ನನಗೆ ವಿರೋಧವಾಗಿ ಎದ್ದಿದ್ದಾನೆ.
10 ಯೆಹೋವನೇ, ದಯವಿಟ್ಟು ನನಗೆ ದಯೆತೋರು;
ನನ್ನನ್ನು ಏಳಮಾಡು; ಆಗ ನಾನು ಅವರಿಗೆ ಮುಯ್ಯಿ ತೀರಿಸುವೆನು.
11 ನನಗೆ ಕೇಡುಮಾಡಲು ವೈರಿಗೆ ನೀನು ಅವಕಾಶ ಕೊಡದಿದ್ದರೆ,
ನೀನು ನನ್ನನ್ನು ಸ್ವೀಕರಿಸಿಕೊಂಡಿರುವೆ ಎಂದು ತಿಳಿದುಕೊಳ್ಳುವೆನು.
12 ನಿರಪರಾಧಿಯಾದ ನನಗೆ ಸಹಾಯಮಾಡು.
ನಿನ್ನ ಸನ್ನಿಧಿಯಲ್ಲಿ ಯಾವಾಗಲೂ ನಿನ್ನ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಡು.
13 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ!
ಆತನು ಯಾವಾಗಲೂ ಇದ್ದವನು; ಯಾವಾಗಲೂ ಇರುವವನು.
ಆಮೆನ್, ಆಮೆನ್!
18 ನೀವು ದೇವರನ್ನು ನಂಬಬಲ್ಲವರಾಗಿದ್ದರೆ, ನಾವು ನಿಮಗೆ ಏಕಕಾಲದಲ್ಲಿಯೇ “ಹೌದು” ಮತ್ತು “ಇಲ್ಲ” ಎಂದು ಹೇಳಲಿಲ್ಲವೆಂದು ನೀವು ನಂಬಬಲ್ಲಿರಿ. 19 ಸೀಲನು, ತಿಮೊಥೆಯನು ಮತ್ತು ನಾನು ನಿಮಗೆ ಬೋಧಿಸಿದ ದೇವರ ಮಗನಾದ ಯೇಸುಕ್ರಿಸ್ತನು ಹೌದೆಂತಲೂ ಅಲ್ಲವೆಂತಲೂ ಎರಡು ರೀತಿಯಲ್ಲಿರಲಿಲ್ಲ. ಕ್ರಿಸ್ತನಲ್ಲಿ ಯಾವಾಗಲೂ ಇರುವಂಥದ್ದು “ಹೌದು” ಎಂಬುದೇ. 20 ದೇವರು ಮಾಡಿದ ವಾಗ್ದಾನಗಳಿಗೆಲ್ಲ “ಹೌದು” ಎಂಬ ಉತ್ತರ ಕ್ರಿಸ್ತನೇ ಆಗಿದ್ದಾನೆ. ಆದ್ದರಿಂದಲೇ ನಾವು ದೇವರ ಮಹಿಮೆಗಾಗಿ ಕ್ರಿಸ್ತನ ಮೂಲಕ “ಆಮೆನ್” ಎಂದು ಹೇಳುತ್ತೇವೆ. 21 ನಿಮ್ಮನ್ನು ಮತ್ತು ನಮ್ಮನ್ನು ಕ್ರಿಸ್ತನಲ್ಲಿ ದೃಢಗೊಳಿಸುವಾತನು ದೇವರೇ. ದೇವರು ತನ್ನ ವಿಶೇಷವಾದ ಆಶೀರ್ವಾದವನ್ನು ನಮಗೆ ಕೊಟ್ಟಿದ್ದಾನೆ. 22 ನಾವು ಆತನವರೆಂಬುದನ್ನು ತೋರಿಸುವುದಕ್ಕಾಗಿ ಆತನು ನಮ್ಮ ಮೇಲೆ ಮುದ್ರೆಯನ್ನು ಹಾಕಿದ್ದಾನೆ. ಆತನು ತನ್ನ ಪವಿತ್ರಾತ್ಮನನ್ನು ನಮ್ಮ ಹೃದಯಗಳಲ್ಲಿ ನೆಲೆಗೊಳಿಸಿದ್ದಾನೆ. ಆತನು ನಮಗೆ ಮಾಡಿದ ವಾಗ್ದಾನವನ್ನು ನೆರವೇರಿಸುತ್ತಾನೆ ಎಂಬುದಕ್ಕೆ ಪವಿತ್ರಾತ್ಮನೇ ನಮಗೆ ಆಧಾರವಾಗಿದ್ದಾನೆ.
ಪಾರ್ಶ್ವವಾಯುರೋಗಿಗೆ ಸ್ವಸ್ಥತೆ
(ಮತ್ತಾಯ 9:1-8; ಲೂಕ 5:17-26)
2 ಕೆಲವು ದಿನಗಳ ತರುವಾಯ, ಯೇಸು ಕಪೆರ್ನೌಮಿಗೆ ಹಿಂದಿರುಗಿ ಬಂದನು. ಯೇಸು ಮನೆಯಲ್ಲಿದ್ದಾನೆಂಬ ಸುದ್ದಿಯು ಹಬ್ಬಿತು. 2 ಜನರು ಗುಂಪುಗುಂಪಾಗಿ ಯೇಸುವಿನ ಉಪದೇಶವನ್ನು ಕೇಳಲು ಒಟ್ಟುಗೂಡಿದರು. ಮನೆಯು ತುಂಬಿಹೋಯಿತು. ಅಲ್ಲಿ ನಿಲ್ಲಲು ಹೊರಗಡೆಯಲ್ಲಿಯೂ ಸ್ಥಳವಿರಲಿಲ್ಲ. ಯೇಸು ಉಪದೇಶಿಸುತ್ತಿದ್ದನು. 3 ಕೆಲವು ಜನರು ಒಬ್ಬ ಪಾರ್ಶ್ವವಾಯು ರೋಗಿಯನ್ನು ಆತನ ಬಳಿಗೆ ತಂದರು. ಅವನನ್ನು ನಾಲ್ಕು ಮಂದಿ ಹೊತ್ತುಕೊಂಡಿದ್ದರು. 4 ಮನೆಯು ಜನರಿಂದ ತುಂಬಿಹೋಗಿದ್ದುದರಿಂದ ಅವರು ಅವನನ್ನು ಯೇಸುವಿನ ಬಳಿಗೆ ತರಲಾಗಲಿಲ್ಲ. ಆದ್ದರಿಂದ ಅವರು ಯೇಸುವಿದ್ದ ಮನೆಯ ಮೇಲ್ಛಾವಣೆಯ ಮೇಲಕ್ಕೆ ಹೋಗಿ ಯೇಸುವಿದ್ದ ಸ್ಥಳದ ಮೇಲೆ ಹೆಂಚುಗಳನ್ನು ತೆಗೆದುಹಾಕಿದರು. ಹೀಗೆ ಅಲ್ಲಿ ಒಂದು ದ್ವಾರವನ್ನು ಮಾಡಿ ರೋಗಿಯನ್ನು ಹಾಸಿಗೆಯ ಸಮೇತ ಕೆಳಗಿಳಿಸಿದರು. 5 ಈ ಜನರ ದೊಡ್ಡ ನಂಬಿಕೆಯನ್ನು ಕಂಡ ಯೇಸು ರೋಗಿಗೆ, “ಯುವಕನೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
6 ಕೆಲವು ಮಂದಿ ಧರ್ಮೋಪದೇಶಕರು ಅಲ್ಲಿ ಕುಳಿತಿದ್ದರು. ಯೇಸು ಹೇಳಿದ್ದನ್ನು ಕೇಳಿದ ಅವರು, 7 “ಇವನು ಹೀಗೇಕೆ ಹೇಳುತ್ತಿದ್ದಾನೆ? ಇದು ದೇವದೂಷಣೆ! ದೇವರೊಬ್ಬನೇ ಪಾಪಗಳನ್ನು ಕ್ಷಮಿಸಲು ಸಾಧ್ಯ” ಎಂದು ತಮ್ಮ ಮನಸ್ಸಿನಲ್ಲಿ ಅಂದುಕೊಂಡರು.
8 ಧರ್ಮೋಪದೇಶಕರ ಆಲೋಚನೆಯನ್ನು ತಕ್ಷಣವೇ ಗ್ರಹಿಸಿಕೊಂಡ ಯೇಸು ಅವರಿಗೆ, “ನೀವು ಹೀಗೇಕೆ ಆಲೋಚಿಸುತ್ತೀರಿ? 9 ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ’ ಎಂದು ಹೇಳುವುದೋ? ಇಲ್ಲವೇ, ‘ಎದ್ದು ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಹೋಗು’ ಎಂದು ಹೇಳುವುದೋ? 10 ಆದರೆ ಮನುಷ್ಯಕುಮಾರನಿಗೆ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವ ಅಧಿಕಾರವಿದೆ ಎಂಬುದು ನಿಮಗೆ ತಿಳಿಯಬೇಕು” ಎಂದು ಹೇಳಿದನು. ಬಳಿಕ ಯೇಸು ರೋಗಿಗೆ, 11 “ನಾನು ನಿನಗೆ ಹೇಳುತ್ತಿದ್ದೇನೆ, ಎದ್ದು, ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಮನೆಗೆ ಹೋಗು” ಎಂದನು.
12 ಆ ಕೂಡಲೇ ರೋಗಿಯು ಎದ್ದುನಿಂತು, ತನ್ನ ಹಾಸಿಗೆಯನ್ನು ತೆಗೆದುಕೊಂಡು ಅಲ್ಲಿಂದ ಹೊರಗೆ ಹೋದನು. ಇದನ್ನು ಕಂಡ ಆ ಜನರೆಲ್ಲರೂ ಆಶ್ಚರ್ಯಚಕಿತರಾಗಿ, “ನಾವು ಹಿಂದೆಂದೂ ಇಂಥ ಸಂಗತಿಯನ್ನು ನೋಡಿಯೇ ಇಲ್ಲ” ಎಂದು ಹೇಳಿ ದೇವರನ್ನು ಕೊಂಡಾಡಿದರು.
Kannada Holy Bible: Easy-to-Read Version. All rights reserved. © 1997 Bible League International