Revised Common Lectionary (Complementary)
ರಚನೆಗಾರ: ದಾವೀದ.
41 ಯಾವನು ಬಡಜನರನ್ನು[a] ಅಭಿವೃದ್ಧಿಪಡಿಸುವನೋ ಅವನೇ ಧನ್ಯನು.
ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು.
2 ಯೆಹೋವನು ಅವನ ಪ್ರಾಣವನ್ನು ಕಾಪಾಡಿ ರಕ್ಷಿಸುವನು.
ಅವನು ಭೂಮಿಯ ಮೇಲೆ ಧನ್ಯನೆನಸಿಕೊಳ್ಳುವನು.
ಯೆಹೋವನೇ, ಅವನನ್ನು ಶತ್ರುಗಳ ಕೈಗೆ ಕೊಡಬೇಡ.
3 ಅವನು ಕಾಯಿಲೆಯಿಂದ ಹಾಸಿಗೆಯಲ್ಲಿರುವಾಗ
ಯೆಹೋವನು ಅವನಿಗೆ ಬಲವನ್ನು ಕೊಡುವನು.
ಅವನು ಕಾಯಿಲೆಯಿಂದ ಹಾಸಿಗೆಯಲ್ಲಿದ್ದರೂ ಯೆಹೋವನು ಅವನನ್ನು ಗುಣಪಡಿಸುವನು!
4 ನಾನು ಆತನಿಗೆ, “ಯೆಹೋವನೇ, ನನಗೆ ದಯೆತೋರು.
ನಾನು ನಿನಗೆ ವಿರೋಧವಾಗಿ ಪಾಪಮಾಡಿದ್ದೇನೆ, ಆದರೂ ನನ್ನನ್ನು ಕ್ಷಮಿಸಿ ಗುಣಪಡಿಸು” ಎಂದು ಹೇಳಿದೆ.
5 ನನ್ನ ಶತ್ರುಗಳು ನನ್ನನ್ನು ದೂಷಿಸುತ್ತಾ “ಅವನು ಯಾವಾಗ ಸಾಯುತ್ತಾನೆ,
ಅವನ ಹೆಸರು ಯಾವಾಗ ಅಳಿದುಹೋಗುತ್ತದೆ” ಎಂದು ಹೇಳುತ್ತಿದ್ದಾರೆ.
6 ನನ್ನನ್ನು ನೋಡಲು ಬಂದವರು ಕಪಟದ ಮಾತನ್ನಾಡುವರು;
ಅವರು ನನ್ನ ಸಮಾಚಾರವನ್ನು ಸಂಗ್ರಹಿಸಿಕೊಂಡು ಸುಳ್ಳುಸುದ್ದಿಯನ್ನು ಹಬ್ಬಿಸುವರು.
7 ನನ್ನ ವೈರಿಗಳು ನನಗೆ ವಿರೋಧವಾಗಿ ಗುಟ್ಟಾಗಿ ಮಾತಾಡಿಕೊಳ್ಳುವರು;
ನನಗೆ ಕೇಡುಮಾಡಲು ಆಲೋಚಿಸುವರು.
8 “ಅವನು ಯಾವುದೋ ತಪ್ಪು ಮಾಡಿರುವುದರಿಂದ
ಅವನಿಗೆ ಕಾಯಿಲೆ ಬಂದಿದೆ,
ಅವನಿಗೆ ಗುಣವಾಗುವುದೇ ಇಲ್ಲ” ಎಂದು ಅವರು ಹೇಳುತ್ತಾರೆ.
9 ನನ್ನ ಆಪ್ತಸ್ನೇಹಿತನೊಂದಿಗೆ ಊಟಮಾಡುತ್ತಿದ್ದೆನು; ಅವನಲ್ಲಿ ಭರವಸವಿಟ್ಟಿದ್ದೆನು,
ಆದರೆ ಈಗ ಅವನೇ ನನಗೆ ವಿರೋಧವಾಗಿ ಎದ್ದಿದ್ದಾನೆ.
10 ಯೆಹೋವನೇ, ದಯವಿಟ್ಟು ನನಗೆ ದಯೆತೋರು;
ನನ್ನನ್ನು ಏಳಮಾಡು; ಆಗ ನಾನು ಅವರಿಗೆ ಮುಯ್ಯಿ ತೀರಿಸುವೆನು.
11 ನನಗೆ ಕೇಡುಮಾಡಲು ವೈರಿಗೆ ನೀನು ಅವಕಾಶ ಕೊಡದಿದ್ದರೆ,
ನೀನು ನನ್ನನ್ನು ಸ್ವೀಕರಿಸಿಕೊಂಡಿರುವೆ ಎಂದು ತಿಳಿದುಕೊಳ್ಳುವೆನು.
12 ನಿರಪರಾಧಿಯಾದ ನನಗೆ ಸಹಾಯಮಾಡು.
ನಿನ್ನ ಸನ್ನಿಧಿಯಲ್ಲಿ ಯಾವಾಗಲೂ ನಿನ್ನ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಡು.
13 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ!
ಆತನು ಯಾವಾಗಲೂ ಇದ್ದವನು; ಯಾವಾಗಲೂ ಇರುವವನು.
ಆಮೆನ್, ಆಮೆನ್!
12 ಆ ಬಳಿಕ ಯೆಹೋವನು ರಾತ್ರಿಯಲ್ಲಿ ಸೊಲೊಮೋನನಿಗೆ ಕಾಣಿಸಿಕೊಂಡು,
“ಸೊಲೊಮೋನನೇ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ. ನಾನು ಈ ಆಲಯವನ್ನು ಯಜ್ಞಾಲಯಕ್ಕಾಗಿ ಆರಿಸಿಕೊಂಡಿರುತ್ತೇನೆ. 13 ನಾನು ಮಳೆ ಬಾರದಂತೆ ಆಕಾಶವನ್ನು ಮುಚ್ಚಿದರೆ, ಅಥವಾ ಮಿಡತೆಗಳಿಗೆ ದೇಶವನ್ನು ಹಾಳುಮಾಡಲು ಅಪ್ಪಣೆಕೊಟ್ಟರೆ ಅಥವಾ ಜನರಿಗೆ ರೋಗವನ್ನು ಬರಮಾಡಿದರೆ 14 ನನ್ನ ಹೆಸರಿನಿಂದ ಕರೆಯಲ್ಪಡುವ ನನ್ನ ಜನರು ದೀನತೆಯಿಂದ ಪ್ರಾರ್ಥಿಸಿ, ತಮ್ಮ ಪಾಪಗಳನ್ನು ಬಿಟ್ಟು ನನ್ನ ಕಡೆಗೆ ತಿರುಗಿದರೆ ನಾನು ಪರಲೋಕದಿಂದ ಅವರನ್ನು ಆಲೈಸಿ, ಅವರ ಪಾಪಗಳನ್ನು ಮನ್ನಿಸಿ ಅವರ ದೇಶವನ್ನು ಗುಣಪಡಿಸುವೆನು. 15 ನಿಮ್ಮನ್ನು ದೃಷ್ಟಿಸಿ ನಿಮ್ಮ ಪ್ರಾರ್ಥನೆಗಳಿಗೆ ಕಿವಿಗೊಡುವೆನು. 16 ನನ್ನ ನಾಮದ ಮಹತ್ವ ಶಾಶ್ವತವಾಗಿರಬೇಕೆಂದು ನಾನು ಈ ಆಲಯವನ್ನು ಆರಿಸಿಕೊಂಡು ಶುದ್ಧೀಕರಿಸಿದ್ದೇನೆ. ಹೌದು, ನನ್ನ ದೃಷ್ಟಿಯೂ ನನ್ನ ಹೃದಯವೂ ಸದಾಕಾಲ ಈ ಆಲಯದ ಮೇಲೆ ನೆಲೆಸಿರುತ್ತದೆ. 17 ಸೊಲೊಮೋನನೇ, ನಿನ್ನ ತಂದೆಯಾದ ದಾವೀದನು ಹೇಗೆ ಜೀವಿಸಿದನೋ ಅದೇ ಪ್ರಕಾರ ನೀನು ನನ್ನೆದುರಿನಲ್ಲಿ ಜೀವಿಸಿ, ನನ್ನ ಅಪ್ಪಣೆಗಳನ್ನು ಕೈಕೊಂಡು, ನನ್ನ ವಿಧಿನಿಯಮಗಳಿಗೆ ವಿಧೇಯನಾಗುವದಾದರೆ, 18 ನಾನು ನಿನ್ನನ್ನು ಬಲಿಷ್ಠನಾದ ಅರಸನನ್ನಾಗಿ ಮಾಡುವೆನು. ನಿನ್ನ ರಾಜ್ಯವು ಮಹಾರಾಜ್ಯವಾಗುವದು. ನಿನ್ನ ತಂದೆಯಾದ ದಾವೀದನಿಗೆ, ‘ದಾವೀದನೇ, ನಿನ್ನ ಕುಟುಂಬದವರಲ್ಲಿ ಒಬ್ಬನು ಯಾವಾಗಲೂ ಇಸ್ರೇಲಿನ ರಾಜನಾಗಿರುವನು’ ಎಂದು ನಾನು ವಾಗ್ದಾನ ಮಾಡಿದ್ದೇನೆ.
19 “ಆದರೆ ನಾನು ಕೊಟ್ಟ ಕಟ್ಟಳೆಗಳನ್ನು ಮತ್ತು ಆಜ್ಞೆಗಳನ್ನು ನೀನು ಮೀರಿ ಇತರ ದೇವರುಗಳನ್ನು ಪೂಜಿಸಿದರೆ, 20 ನಾನು ಇಸ್ರೇಲರನ್ನು ಅವರಿಗೆ ಕೊಟ್ಟಿರುವ ದೇಶದಿಂದ ತೆಗೆದುಹಾಕುವೆನು; ನನ್ನ ಹೆಸರಿಗೋಸ್ಕರ ಪವಿತ್ರ ಮಾಡಿದ ಈ ದೇವಾಲಯವನ್ನು ತೊರೆದುಬಿಡುವೆನು. ಈ ದೇವಾಲಯದ ಬಗ್ಗೆ ಲೋಕದ ಜನರು ಗೇಲಿಮಾಡುವಂತೆ ಮಾಡುವೆನು. 21 ಅತ್ಯಂತ ಪ್ರಸಿದ್ಧಿಹೊಂದಿದ ಈ ದೇವಾಲಯವನ್ನು ನೋಡುವ ಪ್ರತಿಯೊಬ್ಬನು, ‘ದೇವರು ಈ ದೇಶಕ್ಕೆ ಮತ್ತು ಈ ಆಲಯಕ್ಕೆ ಹೀಗೇಕೆ ಮಾಡಿದನು?’ ಎಂದು ಅಚ್ಚರಿಪಡುವಂತೆ ಮಾಡುವೆನು. 22 ಆಗ ಜನರು, ‘ಯಾಕೆಂದರೆ ಇಸ್ರೇಲರು ತಮ್ಮ ಪೂರ್ವಿಕರ ದೇವರಾದ ಯೆಹೋವನ ಆಜ್ಞೆಗಳಿಗೆ ವಿಧೇಯರಾಗಲಿಲ್ಲ. ಆತನು ಅವರನ್ನು ಈಜಿಪ್ಟಿನಿಂದ ಬಿಡಿಸಿ ಹೊರತಂದನು. ಆದರೆ ಅವರು ಬೇರೆ ದೇವರುಗಳನ್ನು ಪೂಜಿಸಿ ಅವುಗಳ ಸೇವೆಮಾಡಿದರು. ಆದ್ದರಿಂದಲೇ ಭಯಂಕರವಾದ ಈ ಸಂಕಟಗಳನ್ನೆಲ್ಲ ದೇವರು ಇಸ್ರೇಲರಿಗೆ ಬರಮಾಡಿದನು’ ಎಂದು ಹೇಳುವರು” ಅಂದನು.
2 ನನ್ನ ಪ್ರಿಯ ಸ್ನೇಹಿತನೇ, ನಿನ್ನ ಆತ್ಮವು ಅಭಿವೃದ್ಧಿ ಹೊಂದುತ್ತಿದೆ ಎಂಬುದು ನನಗೆ ತಿಳಿದಿದೆ. ನೀನು ಸರ್ವವಿಧದಲ್ಲಿಯೂ ಅಭಿವೃದ್ಧಿ ಹೊಂದಬೇಕೆಂದೂ ಆರೋಗ್ಯದಿಂದಿರಬೇಕೆಂದೂ ನಾನು ಪ್ರಾರ್ಥಿಸುತ್ತೇನೆ. 3 ಕ್ರಿಸ್ತನಲ್ಲಿ ಸಹೋದರರಾದ ಕೆಲವರು ಬಂದು, ನಿನ್ನ ಜೀವನದಲ್ಲಿರುವ ಸತ್ಯವನ್ನು ನನಗೆ ತಿಳಿಸಿದರು. ನೀನು ಸತ್ಯಮಾರ್ಗದಲ್ಲಿ ನಡೆಯುತ್ತಿರುವೆ ಎಂಬುದನ್ನು ಅವರು ನನಗೆ ಹೇಳಿದರು. ಇದು ನನಗೆ ಬಹಳ ಸಂತೋಷವನ್ನು ಉಂಟುಮಾಡಿತು. 4 ನನ್ನ ಮಕ್ಕಳು ಸತ್ಯಮಾರ್ಗದಲ್ಲಿ ನಡೆಯುತ್ತಿದ್ದಾರೆ ಎಂಬುದನ್ನು ಕೇಳುವಾಗಲೆಲ್ಲಾ ನನಗೆ ಬಹಳ ಸಂತೋಷವಾಗುತ್ತದೆ.
5 ನನ್ನ ಪ್ರಿಯ ಸ್ನೇಹಿತನೇ, ಕ್ರಿಸ್ತನಲ್ಲಿ ಸಹೋದರರಾದವರಿಗೆ ನೀನು ಸಹಾಯ ಮಾಡುತ್ತಿರುವುದು ಒಳ್ಳೆಯದೇ ಸರಿ. ನಿನಗೆ ಗೊತ್ತಿಲ್ಲದ ಸಹೋದರರಿಗೂ ನೀನು ಸಹಾಯ ಮಾಡುತ್ತಿರುವೆ! 6 ನಿನಗಿರುವ ಪ್ರೀತಿಯನ್ನು ಕುರಿತು ಈ ಸಹೋದರರು ಸಭೆಗೆ ತಿಳಿಸಿದರು. ಅವರು ತಮ್ಮ ಪ್ರವಾಸವನ್ನು ಮುಂದುವರಿಸಲು ದಯವಿಟ್ಟು ಅವರಿಗೆ ಸಹಾಯಮಾಡು. ದೇವರಿಗೆ ಮೆಚ್ಚಿಗೆಕರವಾದ ರೀತಿಯಲ್ಲಿ ಅವರಿಗೆ ಸಹಾಯಮಾಡು. 7 ಈ ಸಹೋದರರು ಕ್ರಿಸ್ತನ ಸೇವೆಗಾಗಿ ಪ್ರವಾಸಹೊರಟಿದ್ದಾರೆ. ಅವಿಶ್ವಾಸಿಗಳಿಂದ ಅವರು ಯಾವ ಸಹಾಯವನ್ನೂ ತೆಗೆದುಕೊಳ್ಳಲಿಲ್ಲ. 8 ಆದ್ದರಿಂದ ನಾವು ಈ ಸಹೋದರರಿಗೆ ಸಹಾಯ ಮಾಡಬೇಕು. ನಾವು ಅವರಿಗೆ ಸಹಾಯಮಾಡಿದಾಗ, ಸತ್ಯಕ್ಕೋಸ್ಕರ ಅವರು ಮಾಡುವ ಕಾರ್ಯದಲ್ಲಿ ನಾವೂ ಪಾಲುಗಾರರಾಗುತ್ತೇವೆ.
Kannada Holy Bible: Easy-to-Read Version. All rights reserved. © 1997 Bible League International