Revised Common Lectionary (Complementary)
ರಚನೆಗಾರ: ದಾವೀದ.
41 ಯಾವನು ಬಡಜನರನ್ನು[a] ಅಭಿವೃದ್ಧಿಪಡಿಸುವನೋ ಅವನೇ ಧನ್ಯನು.
ಯೆಹೋವನು ಅವನನ್ನು ಆಪತ್ಕಾಲದಲ್ಲಿ ರಕ್ಷಿಸುವನು.
2 ಯೆಹೋವನು ಅವನ ಪ್ರಾಣವನ್ನು ಕಾಪಾಡಿ ರಕ್ಷಿಸುವನು.
ಅವನು ಭೂಮಿಯ ಮೇಲೆ ಧನ್ಯನೆನಸಿಕೊಳ್ಳುವನು.
ಯೆಹೋವನೇ, ಅವನನ್ನು ಶತ್ರುಗಳ ಕೈಗೆ ಕೊಡಬೇಡ.
3 ಅವನು ಕಾಯಿಲೆಯಿಂದ ಹಾಸಿಗೆಯಲ್ಲಿರುವಾಗ
ಯೆಹೋವನು ಅವನಿಗೆ ಬಲವನ್ನು ಕೊಡುವನು.
ಅವನು ಕಾಯಿಲೆಯಿಂದ ಹಾಸಿಗೆಯಲ್ಲಿದ್ದರೂ ಯೆಹೋವನು ಅವನನ್ನು ಗುಣಪಡಿಸುವನು!
4 ನಾನು ಆತನಿಗೆ, “ಯೆಹೋವನೇ, ನನಗೆ ದಯೆತೋರು.
ನಾನು ನಿನಗೆ ವಿರೋಧವಾಗಿ ಪಾಪಮಾಡಿದ್ದೇನೆ, ಆದರೂ ನನ್ನನ್ನು ಕ್ಷಮಿಸಿ ಗುಣಪಡಿಸು” ಎಂದು ಹೇಳಿದೆ.
5 ನನ್ನ ಶತ್ರುಗಳು ನನ್ನನ್ನು ದೂಷಿಸುತ್ತಾ “ಅವನು ಯಾವಾಗ ಸಾಯುತ್ತಾನೆ,
ಅವನ ಹೆಸರು ಯಾವಾಗ ಅಳಿದುಹೋಗುತ್ತದೆ” ಎಂದು ಹೇಳುತ್ತಿದ್ದಾರೆ.
6 ನನ್ನನ್ನು ನೋಡಲು ಬಂದವರು ಕಪಟದ ಮಾತನ್ನಾಡುವರು;
ಅವರು ನನ್ನ ಸಮಾಚಾರವನ್ನು ಸಂಗ್ರಹಿಸಿಕೊಂಡು ಸುಳ್ಳುಸುದ್ದಿಯನ್ನು ಹಬ್ಬಿಸುವರು.
7 ನನ್ನ ವೈರಿಗಳು ನನಗೆ ವಿರೋಧವಾಗಿ ಗುಟ್ಟಾಗಿ ಮಾತಾಡಿಕೊಳ್ಳುವರು;
ನನಗೆ ಕೇಡುಮಾಡಲು ಆಲೋಚಿಸುವರು.
8 “ಅವನು ಯಾವುದೋ ತಪ್ಪು ಮಾಡಿರುವುದರಿಂದ
ಅವನಿಗೆ ಕಾಯಿಲೆ ಬಂದಿದೆ,
ಅವನಿಗೆ ಗುಣವಾಗುವುದೇ ಇಲ್ಲ” ಎಂದು ಅವರು ಹೇಳುತ್ತಾರೆ.
9 ನನ್ನ ಆಪ್ತಸ್ನೇಹಿತನೊಂದಿಗೆ ಊಟಮಾಡುತ್ತಿದ್ದೆನು; ಅವನಲ್ಲಿ ಭರವಸವಿಟ್ಟಿದ್ದೆನು,
ಆದರೆ ಈಗ ಅವನೇ ನನಗೆ ವಿರೋಧವಾಗಿ ಎದ್ದಿದ್ದಾನೆ.
10 ಯೆಹೋವನೇ, ದಯವಿಟ್ಟು ನನಗೆ ದಯೆತೋರು;
ನನ್ನನ್ನು ಏಳಮಾಡು; ಆಗ ನಾನು ಅವರಿಗೆ ಮುಯ್ಯಿ ತೀರಿಸುವೆನು.
11 ನನಗೆ ಕೇಡುಮಾಡಲು ವೈರಿಗೆ ನೀನು ಅವಕಾಶ ಕೊಡದಿದ್ದರೆ,
ನೀನು ನನ್ನನ್ನು ಸ್ವೀಕರಿಸಿಕೊಂಡಿರುವೆ ಎಂದು ತಿಳಿದುಕೊಳ್ಳುವೆನು.
12 ನಿರಪರಾಧಿಯಾದ ನನಗೆ ಸಹಾಯಮಾಡು.
ನಿನ್ನ ಸನ್ನಿಧಿಯಲ್ಲಿ ಯಾವಾಗಲೂ ನಿನ್ನ ಸೇವೆ ಮಾಡಲು ನನಗೆ ಅವಕಾಶ ಮಾಡಿಕೊಡು.
13 ಇಸ್ರೇಲರ ದೇವರಾದ ಯೆಹೋವನನ್ನು ಕೊಂಡಾಡಿರಿ!
ಆತನು ಯಾವಾಗಲೂ ಇದ್ದವನು; ಯಾವಾಗಲೂ ಇರುವವನು.
ಆಮೆನ್, ಆಮೆನ್!
ಜೆರುಸಲೇಮಿಗೆ ಎಚ್ಚರಿಕೆ
39 ಆ ಸಮಯದಲ್ಲಿ ಬಲದಾನ್ ಎಂಬವನ ಮಗನಾದ ಮೆರೋದಕಬಲದಾನ್ ಎಂಬವನು ಬಾಬಿಲೋನಿನ ಅರಸನಾಗಿದ್ದನು. ಅವನಿಗೆ ಹಿಜ್ಕೀಯನು ಅಸ್ವಸ್ಥನಾಗಿದ್ದಾನೆಂಬ ವರ್ತಮಾನ ತಲುಪಿದ್ದರಿಂದ ಅವನು ಹಿಜ್ಕೀಯನಿಗೆ ಒಂದು ಪತ್ರವನ್ನೂ ಜೊತೆಗೆ ಬಹುಮಾನಗಳನ್ನೂ ತನ್ನ ದೂತರ ಸಂಗಡ ಕಳುಹಿಸಿದನು. 2 ಅವುಗಳನ್ನು ನೋಡಿ ಹಿಜ್ಕೀಯನಿಗೆ ಬಹು ಸಂತೋಷವಾಯಿತು. ಅವನು ಬಾಬಿಲೋನಿನ ದೂತರಿಗೆ ತನ್ನ ಅರಮನೆಯ ಉಗ್ರಾಣದಲ್ಲಿದ್ದ ಎಲ್ಲಾ ಬೆಲೆಬಾಳುವ ವಸ್ತುಗಳನ್ನೂ ತಾನು ಕೊಡಿಸಿಟ್ಟಿದ್ದ ಬೆಳ್ಳಿಬಂಗಾರಗಳನ್ನೂ ಸಾಂಬಾರ ಪದಾರ್ಥಗಳನ್ನೂ ಮತ್ತು ಸುಗಂಧದ್ರವ್ಯಗಳನ್ನೂ ತೋರಿಸಿದನು. ಅಲ್ಲದೆ ಯುದ್ಧದಲ್ಲಿ ಉಪಯೋಗಿಸುವ ಖಡ್ಗಗಳನ್ನು, ಗುರಾಣಿಗಳನ್ನು ತೋರಿಸಿದನು; ಅಲ್ಲದೆ ತನ್ನ ರಾಜ್ಯದಲ್ಲಿರುವ ಪ್ರತಿಯೊಂದು ವಿಷಯಗಳನ್ನು ಅವರಿಗೆ ಪ್ರದರ್ಶಿಸಿದನು.
3 ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಹೋಗಿ, “ನಿನ್ನ ಬಳಿಗೆ ಬಂದವರು ಎಲ್ಲಿಯವರು? ಅವರು ಏನನ್ನು ಹೇಳಿದರು?” ಎಂದು ವಿಚಾರಿಸಿದನು.
ಅದಕ್ಕೆ ಹಿಜ್ಕೀಯನು, “ಇವರು ಬಹುದೂರ ದೇಶದಿಂದ ನನ್ನನ್ನು ಸಂಧಿಸಲು ಬಂದಿದ್ದಾರೆ. ಅವರ ದೇಶ ಬಾಬಿಲೋನ್” ಎಂದನು.
4 “ನಿನ್ನ ಮನೆಯಲ್ಲಿ ಅವರು ಏನು ನೋಡಿದರು?” ಎಂದು ತಿರುಗಿ ಯೆಶಾಯನು ಪ್ರಶ್ನಿಸಿದನು.
“ಅವರು ನನ್ನ ಅರಮನೆಯಲ್ಲಿರುವದನ್ನೆಲ್ಲಾ ನೋಡಿದರು. ನಾನು ನನ್ನ ಐಶ್ವರ್ಯವನ್ನೆಲ್ಲಾ ಅವರಿಗೆ ತೋರಿಸಿದೆನು” ಎಂದು ಹಿಜ್ಕೀಯನು ಉತ್ತರಿಸಿದನು.
5 ಆಗ ಯೆಶಾಯನು ಹಿಜ್ಕೀಯನಿಗೆ, “ಸರ್ವಶಕ್ತನಾದ ಯೆಹೋವನ ಮಾತುಗಳನ್ನು ಕೇಳು: 6 ‘ನಿನ್ನ ಮನೆಯಲ್ಲಿರುವ ಎಲ್ಲಾ ವಸ್ತುಗಳೂ ನಿನ್ನ ಪೂರ್ವಿಕರು ಕೂಡಿಟ್ಟಿದ್ದ ಎಲ್ಲಾ ವಸ್ತುಗಳೂ ಇಲ್ಲಿಂದ ಬಾಬಿಲೋನಿಗೆ ಒಯ್ಯುವ ಕಾಲವು ಬರುವದು. ಇಲ್ಲಿ ಏನೂ ಉಳಿಯುವದಿಲ್ಲ.’ ಇದು ಸರ್ವಶಕ್ತನಾದ ಯೆಹೋವನ ನುಡಿ. 7 ಬಾಬಿಲೋನಿನವರು ನಿನ್ನ ಗಂಡುಮಕ್ಕಳನ್ನು ತೆಗೆದುಕೊಂಡು ಹೋಗುವರು. ಅವರು ಬಾಬಿಲೋನಿನ ಅರಮನೆಗಳಲ್ಲಿ ಕಂಚುಕಿಯರಾಗಿ ಸೇವೆ ಮಾಡುವರು” ಎಂದು ಹೇಳಿದನು.
8 ಅದಕ್ಕೆ ಹಿಜ್ಕೀಯನು ಯೆಶಾಯನಿಗೆ, “ಯೆಹೋವನ ಮಾತುಗಳು ಒಳ್ಳೆಯವೇ ಸರಿ” ಎಂದು ಹೇಳಿದನು. (ಯಾಕೆಂದರೆ ತಾನು ಅರಸನಾಗಿರುವಷ್ಟು ಕಾಲ ದೇಶದಲ್ಲಿ ಸಮಾಧಾನವಿರುವುದೆಂದು ಅವನು ಯೋಚಿಸಿಕೊಂಡನು.)
ಯೇಸುವಿನಿಂದ ಗುಣಹೊಂದಿದ ಸ್ತ್ರೀ
(ಮತ್ತಾಯ 8:14-17; ಮಾರ್ಕ 1:29-34)
38 ಯೇಸು ಸಭಾಮಂದಿರದಿಂದ ಹೊರಟು ಸೀಮೋನನ[a] ಮನೆಗೆ ಹೋದನು. ಸೀಮೋನನ ಅತ್ತೆ ಬಹಳ ಜ್ವರದಿಂದ ನರಳುತ್ತಿದ್ದಳು. ಆಕೆಗೆ ಸಹಾಯ ಮಾಡಬೇಕೆಂದು ಅಲ್ಲಿದ್ದವರು ಆತನನ್ನು ಬೇಡಿಕೊಂಡರು. 39 ಯೇಸು ಆಕೆಯ ಬಳಿ ನಿಂತು, ಆಕೆಯನ್ನು ಬಿಟ್ಟುಹೋಗುವಂತೆ ಜ್ವರಕ್ಕೆ ಆಜ್ಞಾಪಿಸಿದನು. ಆ ಕೂಡಲೇ ಆಕೆಗೆ ಗುಣವಾಯಿತು. ಆಕೆ ಎದ್ದು ಅವರನ್ನು ಉಪಚರಿಸಿದಳು.
ಅನೇಕರಿಗೆ ಆರೋಗ್ಯದಾನ
40 ಸೂರ್ಯನು ಮುಳುಗಿದ ಮೇಲೆ, ಅಸ್ವಸ್ಥರಾದ ತಮ್ಮ ಸ್ನೇಹಿತರನ್ನು ಜನರು ಯೇಸುವಿನ ಬಳಿಗೆ ಕರೆದುಕೊಂಡು ಬಂದರು. ಅವರಿಗೆ ಅನೇಕ ತರಹದ ಕಾಯಿಲೆಗಳಿದ್ದವು. ಪ್ರತಿಯೊಬ್ಬ ರೋಗಿಯ ಮೇಲೂ ಯೇಸು ತನ್ನ ಕೈಯನ್ನಿಟ್ಟು ಗುಣಪಡಿಸಿದನು. 41 ಅನೇಕ ಜನರೊಳಗಿಂದ ದೆವ್ವಗಳು, “ನೀನು ದೇವಕುಮಾರ” ಎಂದು ಆರ್ಭಟಿಸುತ್ತಾ ಬಿಟ್ಟುಹೋದವು. ಆದರೆ ಯೇಸು ಆ ದೆವ್ವಗಳಿಗೆ, “ಮಾತಾಡಕೂಡದೆಂದು” ಬಲವಾಗಿ ಆಜ್ಞಾಪಿಸಿದನು. ಯೇಸುವೇ “ಕ್ರಿಸ್ತ”ನೆಂದು ದೆವ್ವಗಳಿಗೆ ತಿಳಿದಿತ್ತು.
Kannada Holy Bible: Easy-to-Read Version. All rights reserved. © 1997 Bible League International