Revised Common Lectionary (Complementary)
ಜ್ಞಾಪಕಾರ್ಥ ನೈವೇದ್ಯ ಸಮರ್ಪಣೆಯ ಹಾಡು. ರಚನೆಗಾರ: ದಾವೀದ.
38 ಯೆಹೋವನೇ, ಕೋಪದಿಂದ ನನ್ನನ್ನು ಶಿಕ್ಷಿಸಬೇಡ.
ರೋಷದಿಂದ ನನ್ನನ್ನು ಶಿಸ್ತುಗೊಳಿಸಬೇಡ.
2 ನಿನ್ನಿಂದ ನನಗೆ ನೋವಾಗಿದೆ.
ನಿನ್ನ ಬಾಣಗಳು ನನಗೆ ನಾಟಿಕೊಂಡಿವೆ.
3 ನೀನು ಶಿಕ್ಷಿಸಿದ್ದರಿಂದ ನನ್ನ ಇಡೀ ದೇಹ ಹುಣ್ಣಾಗಿದೆ.
ನಾನು ಪಾಪಮಾಡಿದ್ದರಿಂದ ನನ್ನ ಎಲುಬುಗಳೆಲ್ಲ ನೋಯುತ್ತಿವೆ.
4 ನಾನು ಅಪರಾಧಿಯಾಗಿದ್ದೇನೆ.
ನನ್ನ ಅಪರಾಧಗಳು ನನ್ನ ಭುಜಗಳ ಮೇಲೆ ಭಾರವಾದ ಹೊರೆಯಂತಿವೆ.
5 ನಾನೊಂದು ಮೂರ್ಖ ಕೆಲಸವನ್ನು ಮಾಡಿದೆನು.
ಈಗ ನನಗೆ ಕೀವು ಸೋರಿ ದುರ್ವಾಸನೆಯಿಂದಿರುವ ಹುಣ್ಣುಗಳಾಗಿವೆ.
6 ನಾನು ಬಾಗಿ ಕುಗ್ಗಿಹೋಗಿದ್ದೇನೆ.
ನಾನು ದಿನವೆಲ್ಲಾ ನಿರುತ್ಸಾಹನಾಗಿದ್ದೇನೆ.
7 ನನಗೆ ಜ್ವರವಿದೆ,
ನನ್ನ ಇಡೀ ದೇಹ ನೋಯುತ್ತಿದೆ.
8 ನನಗೆ ಬಹಳ ನೋವಿರುವುದರಿಂದ ಜೋಮು ಹಿಡಿದಂತಿದೆ.
ಹೃದಯದ ವೇದನೆಯಿಂದ ಅರಚಿಕೊಳ್ಳುತ್ತಾ ಇದ್ದೇನೆ.
9 ನನ್ನ ಒಡೆಯನೇ, ನೀನು ನನ್ನ ನರಳಾಟವನ್ನು ಕೇಳಿರುವೆ.
ನನ್ನ ನಿಟ್ಟುಸಿರು ನಿನಗೆ ಮರೆಯಾಗಿಲ್ಲ.
10 ನನ್ನ ಹೃದಯದ ವೇದನೆಯಿಂದ ಶಕ್ತಿಯು ಕುಂದಿಹೋಗಿದೆ;
ನನ್ನ ದೃಷ್ಟಿಯು ಹಿಂಗಿಹೋಗಿದೆ.
11 ನಾನು ಅಸ್ವಸ್ಥನಾಗಿರುವುದರಿಂದ
ನನ್ನ ಸ್ನೇಹಿತರಾಗಲಿ ನೆರೆಯವರಾಗಲಿ ನನ್ನನ್ನು ನೋಡಲು ಬರುವುದಿಲ್ಲ.
ನನ್ನ ಕುಟುಂಬದವರು ನನ್ನ ಸಮೀಪಕ್ಕೂ ಬರುವುದಿಲ್ಲ.
12 ನನ್ನ ವೈರಿಗಳು ಬಲೆಗಳನ್ನು ಒಡ್ಡಿದ್ದಾರೆ;
ನನ್ನ ನಾಶನದ ಕುರಿತು ಅವರು ಮಾತಾಡುತ್ತಿದ್ದಾರೆ;
ದಿನವೆಲ್ಲಾ ಕುತಂತ್ರವನ್ನು ಮಾಡುತ್ತಿದ್ದಾರೆ.
13 ಆದರೆ ನಾನು ಕಿವುಡನಂತೆ ಕೇಳದವನಾಗಿದ್ದೇನೆ.
ಮೂಕನಂತೆ ಮಾತಾಡದವನಾಗಿದ್ದೇನೆ.
14 ನಾನು ಕಿವಿಕೇಳಿಸದವನಂತೆಯೂ
ಪ್ರತ್ಯುತ್ತರ ಕೊಡಲಾರದವನಂತೆಯೂ ಆದೆನು.
15 ಯೆಹೋವನೇ, ನಿನ್ನನ್ನೇ ನಿರೀಕ್ಷಿಸಿಕೊಂಡಿದ್ದೇನೆ.
ನನ್ನ ಒಡೆಯನಾದ ದೇವರೇ, ನನಗೆ ಉತ್ತರ ನೀಡು.
16 ನಾನು ಏನೇ ಹೇಳಿದರೂ ವೈರಿಗಳು ನನ್ನನ್ನು ನೋಡಿ ನಗುವರು.
ನನ್ನ ಕಾಯಿಲೆಯು ಪಾಪದ ಫಲವೆಂದು ಹೇಳುವರು.
17 ನಾನು ಅಪರಾಧಿಯೆಂದು ನನಗೆ ಗೊತ್ತಿದೆ;
ನನ್ನ ನೋವನ್ನು ಮರೆಯಲಾರೆ.
18 ನನ್ನ ಅಪರಾಧಗಳನ್ನು ನಿನಗೆ ಅರಿಕೆ ಮಾಡಿಕೊಂಡಿದ್ದೇನೆ.
ನನ್ನ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟಿದ್ದೇನೆ.
19 ನನ್ನ ವೈರಿಗಳು ಚುರುಕಾಗಿಯೂ ಬಲಶಾಲಿಗಳಾಗಿಯೂ ಇದ್ದಾರೆ.
ಅವರು ಎಷ್ಟೋ ಸುಳ್ಳುಗಳನ್ನು ಹೇಳಿದರು.
20 ನಾನು ಉಪಕಾರವನ್ನು ಮಾಡಿದ್ದರೂ
ನನ್ನ ವೈರಿಗಳು ನನಗೆ ಅಪಕಾರವನ್ನೇ ಮಾಡುವರು.
ನಾನು ಒಳ್ಳೆಯದನ್ನು ಮಾಡಬೇಕೆಂದರೂ
ಅವರು ನನ್ನನ್ನು ವಿರೋಧಿಸುತ್ತಾರೆ.
21 ಯೆಹೋವನೇ, ನನ್ನನ್ನು ಕೈಬಿಡಬೇಡ!
ನನ್ನ ದೇವರೇ, ನನ್ನ ಸಮೀಪದಲ್ಲೇ ಇರು!
22 ಯೆಹೋವನೇ, ನನ್ನ ರಕ್ಷಕನೇ,
ಬೇಗನೆ ಬಂದು ನನಗೆ ಸಹಾಯಮಾಡು!
ದೇವರು ತನ್ನ ಜನರಿಗೆ ಸಹಾಯ ಮಾಡುವನು
18 ಯೆಹೋವನು ನಿಮಗೆ ಕರುಣೆ ತೋರಿಸಲು ಇಷ್ಟಪಡುತ್ತಾನೆ. ಆತನು ನಿಮ್ಮನ್ನು ಎದುರು ನೋಡುತ್ತಿದ್ದಾನೆ. ಆತನು ಎದ್ದು ನಿಮ್ಮನ್ನು ಸಂತೈಸಲು ಬಯಸುತ್ತಾನೆ. ದೇವರಾದ ಯೆಹೋವನು ನ್ಯಾಯವಂತನಾಗಿದ್ದಾನೆ. ಆತನ ಸಹಾಯವನ್ನು ನಿರೀಕ್ಷಿಸುವವರೆಲ್ಲರೂ ಆಶೀರ್ವದಿಸಲ್ಪಡುವರು.
19 ಚೀಯೋನ್ ಪರ್ವತದಲ್ಲಿರುವ ಜೆರುಸಲೇಮಿನಲ್ಲಿ ಯೆಹೋವನ ಜನರು ವಾಸಿಸುವರು. ನೀವು ಇನ್ನು ಮೇಲೆ ಅಳುವದಿಲ್ಲ. ಯೆಹೋವನು ನಿಮ್ಮ ಅಳುವಿಕೆಯನ್ನು ನೋಡಿ ನಿಮ್ಮನ್ನು ಆದರಿಸುವನು. ಆತನು ನಿಮ್ಮ ಮೊರೆಯನ್ನು ಕೇಳಿ ನಿಮಗೆ ಸಹಾಯಿಸುವನು.
20 ಹಿಂದಿನ ದಿವಸಗಳಲ್ಲಿ ನನ್ನ ಒಡೆಯನು ನಿಮಗೆ ದುಃಖವನ್ನೂ ಬೇನೆಯನ್ನೂ ಕೊಟ್ಟನು. ಅದು ನಿಮಗೆ ದಿನನಿತ್ಯ ತಿನ್ನುವಂಥ ರೊಟ್ಟಿಯಂತೆಯೂ ನೀರಿನಂತೆಯೂ ಇತ್ತು. ಆದರೆ ನಿಮ್ಮ ಬೋಧಕನಾದ ದೇವರು ನಿಮ್ಮಿಂದ ಎಂದಿಗೂ ಅಡಗಿಕೊಂಡಿರಲಾರನು. ನಿಮ್ಮ ಬೋಧಕನನ್ನು ನೀವು ಕಣ್ಣಾರೆ ಕಾಣುವಿರಿ. 21 ಆದರೆ ನೀವು ತಪ್ಪು ಕಾರ್ಯಮಾಡಿದರೆ, ದುಷ್ಟತ್ವದಲ್ಲಿ ಜೀವಿಸಿದರೆ ನಿಮ್ಮ ಹಿಂದಿನಿಂದ ಒಂದು ಸ್ವರ, “ಇದು ಸರಿಯಾದ ಮಾರ್ಗ. ಈ ಮಾರ್ಗದಲ್ಲಿ ಮುಂದುವರಿಯಿರಿ” ಎಂದು ಹೇಳುವುದು ಕೇಳಿಸುವದು.
22 ನಿಮ್ಮಲ್ಲಿ ಬೆಳ್ಳಿಬಂಗಾರಗಳ ವಿಗ್ರಹಗಳಿವೆ. ಆ ಸುಳ್ಳುದೇವರುಗಳು ನಿಮ್ಮನ್ನು ಹೊಲೆಯನ್ನಾಗಿ ಮಾಡಿವೆ. ನೀವು ಅವುಗಳ ಸೇವೆಯನ್ನು ನಿಲ್ಲಿಸುವಿರಿ. ಅವು ಹೊಲಸು ವಸ್ತುಗಳೋ ಎಂಬಂತೆ ಅವುಗಳನ್ನೆತ್ತಿ ಬಿಸಾಡಿಬಿಡುವಿರಿ.
23 ಆ ಸಮಯದಲ್ಲಿ ಯೆಹೋವನು ನಿಮಗಾಗಿ ಮಳೆ ಸುರಿಸುವನು. ನೀವು ಭೂಮಿಯಲ್ಲಿ ಬೀಜಬಿತ್ತಿದ್ದಾಗ ಫಸಲನ್ನು ಹೊಂದುವಿರಿ. ನಿಮಗೆ ಬಹುದೊಡ್ಡ ಸುಗ್ಗಿ ಆಗುವದು. ಹೊಲದಲ್ಲಿ ನಿಮ್ಮ ಪಶುಗಳಿಗೆ ಬೇಕಾದಷ್ಟು ಹುಲ್ಲು ಇರುವದು. ಮೇಯಲು ನಿಮ್ಮ ಕುರಿಗಳಿಗೆ ಬೇಕಾದಷ್ಟು ಬಯಲಿವೆ. 24 ನಿಮ್ಮ ದನಕರುಗಳಿಗೂ ಕತ್ತೆಗಳಿಗೂ ಬೇಕಾದಷ್ಟು ಮೇವಿದೆ. ಆಹಾರವು ಯಥೇಚ್ಛವಾಗಿರುವದು. ನಿಮ್ಮ ದನಕರುಗಳು ಮೊರದಿಂದಲೂ ಕವೇಕೋಲಿನಿಂದಲೂ ತೂರಿದ ಉಪ್ಪುಪ್ಪಾದ ಮೇವನ್ನು ತಿನ್ನುವವು. 25 ಪ್ರತಿಯೊಂದು ಬೆಟ್ಟದಲ್ಲಿಯೂ ಪರ್ವತದಲ್ಲಿಯೂ ಹರಿಯುವ ನೀರಿನ ತೊರೆಗಳಿರುವವು. ಇವೆಲ್ಲಾ ಅನೇಕ ಜನರು ಕೊಲ್ಲಲ್ಪಟ್ಟ ನಂತರವೂ ಬುರುಜುಗಳು ಕೆಡವಲ್ಪಟ್ಟ ನಂತರವೂ ಸಂಭವಿಸುವವು.
26 ಆ ಸಮಯದಲ್ಲಿ ಚಂದ್ರನ ಪ್ರಕಾಶವು ಸೂರ್ಯನಂತಿರುವದು. ಸೂರ್ಯನ ಪ್ರಕಾಶವು ಈಗ ಇರುವದಕ್ಕಿಂತ ಏಳರಷ್ಟು ಹೆಚ್ಚಾಗಿರುವದು. ಸೂರ್ಯನ ಒಂದು ದಿವಸದ ಬೆಳಕು ಒಂದು ವಾರದ ಬೆಳಕಿನಷ್ಟಿರುವದು. ಯೆಹೋವನು ತನ್ನ ಮುರಿದುಹೋದ ಜನರಿಗೆ ಆದ ಗಾಯದ ಪೆಟ್ಟುಗಳನ್ನು ಗುಣಪಡಿಸುವಾಗ ಇವೆಲ್ಲಾ ಸಂಭವಿಸುತ್ತವೆ.
ಲುಸ್ತ್ರ ಮತ್ತು ದರ್ಬೆಗಳಲ್ಲಿ ಪೌಲನು
8 ಲುಸ್ತ್ರದಲ್ಲಿ ಒಬ್ಬ ಮನುಷ್ಯನಿದ್ದನು. ಅವನ ಕಾಲುಗಳಲ್ಲಿ ಬಲವಿರಲಿಲ್ಲ. ಹುಟ್ಟುಕುಂಟನಾಗಿದ್ದ ಅವನು ಎಂದೂ ನಡೆದಿರಲಿಲ್ಲ. 9 ಈ ಮನುಷ್ಯನು ತಾನು ಕುಳಿತಲ್ಲೇ ಪೌಲನ ಮಾತನ್ನು ಆಲಿಸುತ್ತಿದ್ದನು. ಪೌಲನು ಅವನನ್ನು ದೃಷ್ಟಿಸಿ ನೋಡಿದನು. ದೇವರು ಗುಣಪಡಿಸಬಲ್ಲನೆಂಬ ನಂಬಿಕೆ ಅವನಲ್ಲಿರುವುದನ್ನು ಪೌಲನು ಕಂಡು, 10 ಅವನಿಗೆ, “ಎದ್ದೇಳು, ಕಾಲೂರಿ ನಿಂತುಕೊ!” ಎಂದು ಗಟ್ಟಿಯಾಗಿ ಹೇಳಿದನು. ಕೂಡಲೇ ಆ ಮನುಷ್ಯನು ಜಿಗಿದುನಿಂತು ನಡೆಯಲಾರಂಭಿಸಿದನು.
11 ಪೌಲನು ಮಾಡಿದ ಈ ಕಾರ್ಯವನ್ನು ಕಂಡ ಜನರು ತಮ್ಮ ಸ್ವಂತ ಲುಕವೋನಿಯ ಭಾಷೆಯಲ್ಲಿ “ದೇವರುಗಳು ಮನುಷ್ಯರೂಪ ಧರಿಸಿ ನಮ್ಮ ಬಳಿಗೆ ಇಳಿದು ಬಂದಿದ್ದಾರೆ!” ಎಂದು ಆರ್ಭಟಿಸಿದರು. 12 ಜನರು ಬಾರ್ನಬನನ್ನು “ಜೆಯುಸ್”[a] ದೇವರೆಂದೂ ಮುಖ್ಯ ಬೋಧಕನಾಗಿದ್ದ ಪೌಲನನ್ನು “ಹೆರ್ಮೆ”[b] ದೇವರೆಂದೂ ಕರೆದರು. 13 ಜೆಯುಸ್‌ನ ಗುಡಿಯು ಪಟ್ಟಣದ ಸಮೀಪದಲ್ಲಿತ್ತು. ಈ ಗುಡಿಯ ಅರ್ಚಕನು ಕೆಲವು ಹೋರಿಗಳನ್ನು ಮತ್ತು ಹೂವುಗಳನ್ನು ಪಟ್ಟಣದ ಬಾಗಿಲಿನ ಬಳಿಗೆ ತೆಗೆದುಕೊಂಡು ಬಂದನು. ಆ ಅರ್ಚಕನು ಮತ್ತು ಜನರು ಪೌಲ ಬಾರ್ನಬರಿಗೆ ಬಲಿಕೊಟ್ಟು ಅವರನ್ನು ಆರಾಧಿಸಬೇಕೆಂದಿದ್ದರು.
14 ಇದನ್ನು ಕೇಳಿದ ಪೌಲ ಬಾರ್ನಬರು ತಮ್ಮ ಬಟ್ಟೆಗಳನ್ನು ಹರಿದುಕೊಂಡು[c] ಜನಸಮೂಹದೊಳಕ್ಕೆ ಓಡಿಹೋಗಿ ಹೀಗೆಂದು ಕೂಗಿ ಹೇಳಿದರು: 15 “ಜನರೇ, ನೀವು ಈ ಕಾರ್ಯಗಳನ್ನು ಮಾಡುತ್ತಿರುವುದೇಕೆ? ನಾವು ದೇವರುಗಳಲ್ಲ. ನಾವು ನಿಮ್ಮಂತೆ ಕೇವಲ ಮನುಷ್ಯರು. ನಿಮಗೆ ಸುವಾರ್ತೆಯನ್ನು ಹೇಳುವುದಕ್ಕಾಗಿ ನಾವು ಬಂದೆವು. ವ್ಯರ್ಥವಾದ ಈ ಕಾರ್ಯಗಳನ್ನು ನೀವು ಬಿಟ್ಟುಬಿಡಿರಿ; ಜೀವಸ್ವರೂಪನಾದ ದೇವರ ಕಡೆಗೆ ತಿರುಗಿಕೊಳ್ಳಿರಿ. ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಮತ್ತು ಅವುಗಳಲ್ಲಿರುವ ಪ್ರತಿಯೊಂದನ್ನೂ ಸೃಷ್ಟಿಮಾಡಿದಾತನು ಆತನೇ.
16 “ಹಿಂದಿನ ಕಾಲದಲ್ಲಿ ದೇವರು ಎಲ್ಲಾ ಜನಾಂಗಗಳನ್ನು ಅವುಗಳ ಇಷ್ಟಕ್ಕನುಸಾರವಾಗಿ ನಡೆಯಲು ಬಿಟ್ಟುಕೊಟ್ಟನು. 17 ಆದರೆ ತಾನೊಬ್ಬನೇ ನಿಜದೇವರೆಂಬುದನ್ನು ಆತನು ತನ್ನ ಒಳ್ಳೆಯ ಕಾರ್ಯಗಳಿಂದ ನಿರೂಪಿಸುತ್ತಿದ್ದಾನೆ. ಆತನು ನಿಮಗೆ ಆಕಾಶದಿಂದ ಮಳೆಯನ್ನೂ ನಿಮ್ಮ ಆಹಾರಕೋಸ್ಕರ ಸಕಾಲದಲ್ಲಿ ಸುಗ್ಗಿಯನ್ನೂ ದಯಪಾಲಿಸಿ ನಿಮ್ಮ ಹೃದಯಗಳನ್ನು ಆನಂದದಿಂದ ತುಂಬಿಸುತ್ತಿದ್ದಾನೆ.”
18 ಪೌಲ ಬಾರ್ನಬರು ಇಷ್ಟೆಲ್ಲಾ ಹೇಳಿದರೂ ಯಜ್ಞವರ್ಪಿಸಿ ಆರಾಧಿಸದಂತೆ ಜನರನ್ನು ತಡೆಯಲು ಬಹಳ ಪ್ರಯಾಸಪಡಬೇಕಾಯಿತು.
Kannada Holy Bible: Easy-to-Read Version. All rights reserved. © 1997 Bible League International