Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಹೆಜ್ಕೇಲ 30-32

ಬಾಬಿಲೋನಿನ ಸೈನ್ಯವು ಈಜಿಪ್ಟಿನ ಮೇಲೆ ಯುದ್ಧಮಾಡುವದು

30 ತಿರುಗಿ ಯೆಹೋವನ ಸಂದೇಶ ನನಗೆ ಬಂತು, ಆತನು ಹೇಳಿದ್ದೇನೆಂದರೆ: “ನರಪುತ್ರನೇ, ನನ್ನ ಪರವಾಗಿ ಮಾತನಾಡು, ‘ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ’ ಎಂದು ಹೇಳು.

“‘ಅಳುತ್ತಾ,
    “ಭಯಂಕರ ದಿವಸಗಳು ಬರುತ್ತವೆ” ಎಂದು ಹೇಳು.
ಆ ದಿನವು ಹತ್ತಿರ ಬಂತು!
ಹೌದು, ದೇವರು ನ್ಯಾಯತೀರಿಸುವ ದಿನ ಹತ್ತಿರ ಬಂತು.
    ಅದು ಮೋಡ ಕವಿದ ದಿನವಾಗಿರುವುದು.
    ಅದು ಜನಾಂಗಗಳಿಗೆ ನ್ಯಾಯತೀರಿಸುವ ಸಮಯ.
ಈಜಿಪ್ಟಿಗೆ ವಿರುದ್ಧವಾಗಿ ಒಂದು ಖಡ್ಗವು ಬರುವದು!
    ಈಜಿಪ್ಟ್ ಬೀಳುವಾಗ ಇಥಿಯೋಪ್ಯವು ಭಯದಿಂದ ನಡುಗುವದು.
ಬಾಬಿಲೋನಿನ ಸೈನ್ಯವು ಈಜಿಪ್ಟಿನವರನ್ನು ಸೆರೆ ಹಿಡಿದುಕೊಂಡು ಹೋಗುವದು.
    ಈಜಿಪ್ಟಿನ ಅಡಿಪಾಯಗಳು ಒಡೆದುಹೋಗುವವು.

“‘ಅನೇಕ ದೇಶಗಳವರು ಈಜಿಪ್ಟಿನವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಇಥಿಯೋಪ್ಯ, ಪೂಟ್, ಲೂದ್, ಅರೇಬಿಯ, ಲಿಬ್ಯ ಮತ್ತು ಇಸ್ರೇಲಿನ ಜನರು[a] ಇವರೆಲ್ಲರೂ ನಾಶವಾಗುವರು.

“‘ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು:
ಈಜಿಪ್ಟಿಗೆ ಸಹಾಯ ಮಾಡುವವನು ಬೀಳುವನು.
    ಅವಳು ಹೆಮ್ಮೆಪಡುವ ಸಾಮರ್ಥ್ಯ ಅಂತ್ಯವಾಗುವದು.
ಈಜಿಪ್ಟಿನಲ್ಲಿರುವ ಜನರು ರಣರಂಗದಲ್ಲಿ ಮಿಗ್ದೋಲ್‌ನಿಂದ ಹಿಡಿದು ಅಸ್ವಾನ್ ತನಕ ಸಾಯುವರು.
ಇದು ನನ್ನ ಒಡೆಯನಾದ ಯೆಹೋವನ ನುಡಿ.
ನಾಶಮಾಡಲ್ಪಟ್ಟ ಬೇರೆ ದೇಶಗಳನ್ನು ಈಜಿಪ್ಟ್ ಸೇರಿಕೊಳ್ಳುವುದು.
    ಈಜಿಪ್ಟ್ ಬಂಜರು ದೇಶಗಳಲ್ಲೊಂದಾಗುವುದು.
ಬಾಬಿಲೋನಿನ ಸೈನ್ಯವು
    ಈಜಿಪ್ಟಿನ ಮೇಲೆ ಯುದ್ಧಮಾಡುವದು
ಈಜಿಪ್ಟಿನಲ್ಲಿ ನಾನು ಹೊತ್ತಿಸಿದ ಬೆಂಕಿಯು
    ಅದರ ಸಹಾಯಕರನ್ನು ದಹಿಸುವದು.
ಆಗ ನಾನು ಯೆಹೋವನೆಂದು ಅವರು ತಿಳಿಯುವರು.

“‘ಆ ಸಮಯದಲ್ಲಿ, ನಾನು ಸಂದೇಶವಾಹಕರನ್ನು ಕಳುಹಿಸುವೆನು. ಅವರು ಇಥಿಯೋಪ್ಯಕ್ಕೆ ಹಡಗಿನಲ್ಲಿ ಪ್ರಯಾಣ ಮಾಡಿ ಕೆಟ್ಟ ಸುದ್ದಿಯನ್ನು ಒಯ್ಯುವರು. ಇಥಿಯೋಪ್ಯ ಈಗ ಸುರಕ್ಷಿತವಾಗಿರುವುದು. ಆದರೆ ಈಜಿಪ್ಟ್ ಶಿಕ್ಷಿಸಲ್ಪಟ್ಟಾಗ ಇಥಿಯೋಪ್ಯದ ಜನರು ಭಯದಿಂದ ನಡುಗುವರು. ಆ ಸಮಯವು ಬರುವದು.’”

10 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ;
“ಈಜಿಪ್ಟಿನ ಜನರನ್ನು ನಾಶಮಾಡುವುದಕ್ಕಾಗಿ
    ನಾನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನನ್ನು ಉಪಯೋಗಿಸುವೆನು.
11 ಎಲ್ಲಾ ಜನಾಂಗಗಳಿಗಿಂತ ನೆಬೂಕದ್ನೆಚ್ಚರನು
    ಮತ್ತು ಅವನ ಸಿಪಾಯಿಗಳು ಅತ್ಯಂತ ಕ್ರೂರಿಗಳು.
    ಈಜಿಪ್ಟನ್ನು ನಾಶಮಾಡಲು ಅವರನ್ನು ಕರೆಹಿಸುವೆನು.
ಅವರು ತಮ್ಮ ಖಡ್ಗಗಳನ್ನು ಒರೆಯಿಂದ ತೆಗೆದು ಈಜಿಪ್ಟಿಗೆ ವಿರುದ್ಧವಾಗಿ ಉಪಯೋಗಿಸುವರು
    ಮತ್ತು ದೇಶವನ್ನು ಸತ್ತ ಹೆಣಗಳಿಂದ ತುಂಬಿಸುವರು.
12 ನೈಲ್ ನದಿಯನ್ನು ನಾನು ಒಣನೆಲವನ್ನಾಗಿ ಮಾಡುವೆನು.
    ಆ ಒಣನೆಲವನ್ನು ನಾನು ಕೆಟ್ಟ ಜನರಿಗೆ ಮಾರುವೆನು.
ಆ ದೇಶವನ್ನು ಬಂಜರು ಭೂಮಿಯನ್ನಾಗಿ ಮಾಡಲು ನಾನು ಪರದೇಶಸ್ಥರನ್ನು ಉಪಯೋಗಿಸುವೆನು.
    ನನ್ನ ಒಡೆಯನಾದ ಯೆಹೋವನು ಮಾತನಾಡಿದ್ದಾನೆ.”

ಈಜಿಪ್ಟಿನ ವಿಗ್ರಹಗಳು ನಾಶವಾಗುವವು

13 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:
“ಈಜಿಪ್ಟಿನಲ್ಲಿರುವ ವಿಗ್ರಹಗಳನ್ನು ನಾನು ನಾಶಮಾಡುವೆನು.
    ಮೆಂಫೀಸಿನ ವಿಗ್ರಹಗಳನ್ನು ತೆಗೆದುಬಿಡುವೆನು.
ಈಜಿಪ್ಟಿನಲ್ಲಿ ಇನ್ನು ಮುಂದೆ ರಾಜನಿರನು.
    ಅವರಲ್ಲಿ ಭಯವನ್ನು ಹುಟ್ಟಿಸುವೆನು.
14 ಪತ್ರೋಸನ್ನು ನಾನು ಬರಿದಾಗಿ ಮಾಡುವೆನು.
    ಸೋನಿನಲ್ಲಿ ಬೆಂಕಿಯನ್ನು ಬರಮಾಡುವೆನು.
    ತೆಬೆಸವನ್ನು ನಾನು ಶಿಕ್ಷಿಸುವೆನು.
15 ಈಜಿಪ್ಟಿನ ಕೋಟೆಯಾಗಿರುವ ಸೀನ್ ಪ್ರಾಂತ್ಯದ ಮೇಲೆ ನನ್ನ ಕೋಪವನ್ನು ಸುರಿಸುವೆನು.
ತೆಬೆಸದ ಜನರನ್ನು ನಾನು ನಾಶಮಾಡುವೆನು.
16 ಈಜಿಪ್ಟಿನಲ್ಲಿ ಬೆಂಕಿಯನ್ನು ಬರಮಾಡುವೆನು.
    ಸೀನ್ ನಗರವು ಭಯದಿಂದ ಕಂಗೆಡುವದು.
ಸೈನಿಕರು ತೆಬೆಸವನ್ನು ಧಾಳಿ ಮಾಡುವರು.
    ತೆಬೆಸದಲ್ಲಿ ಪ್ರತಿದಿವಸವೂ ಸಂಕಟವಿರುವುದು.
17 ಒನ್ ಮತ್ತು ಪೀಬೆಸೆತಿನ ಯುವಕರು ಯುದ್ಧದಲ್ಲಿ ಹತರಾಗುವರು.
    ಆ ನಗರದ ಜನರು ಹಿಡಿಯಲ್ಪಟ್ಟು ಒಯ್ಯಲ್ಪಡುವರು.
18 ನಾನು ಈಜಿಪ್ಟಿನ ನೊಗವನ್ನು ಮುರಿದಾಗ ತಹಪನೇಸ್‌ನಲ್ಲಿ ಕತ್ತಲೆಯ ದಿನವಾಗಿರುವುದು.
    ಈಜಿಪ್ಟಿನ ಅಧಿಕಾರಕ್ಕೆ ಅಂತ್ಯ ಬರುವುದು.
ಈಜಿಪ್ಟಿನ ಮೇಲೆ ಮೋಡವು ಕವಿಯುವುದು.
    ಅದರ ಪಟ್ಟಣಗಳ ಜನರು ಸೆರೆಹಿಡಿಯಲ್ಪಟ್ಟು ಒಯ್ಯಲ್ಪಡುವರು.
19 ನಾನು ಈಜಿಪ್ಟನ್ನು ಶಿಕ್ಷಿಸುವಾಗ
    ನಾನೇ ಒಡೆಯನಾದ ಯೆಹೋವನು ಎಂದು ಅವರು ತಿಳಿಯುವರು.”

ಈಜಿಪ್ಟ್ ನಿತ್ಯಕಾಲಕ್ಕೂ ಬಲಹೀನವಾಗುವದು

20 ಸೆರೆಹಿಡಿಯಲ್ಪಟ್ಟ ಹನ್ನೊಂದನೆಯ ವರ್ಷದ ಮೊದಲನೇ ತಿಂಗಳಿನ ಏಳನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 21 “ನರಪುತ್ರನೇ, ನಾನು ಈಜಿಪ್ಟಿನ ರಾಜನಾದ ಫರೋಹನ ಕೈಯ ಬಲವನ್ನು ಮುರಿದಿದ್ದೇನೆ. ಯಾರೂ ಅವನನ್ನು ಶೂಶ್ರೂಷೆ ಮಾಡಲಾರರು. ಅದು ಗುಣವಾಗದು. ಅವನ ಕೈಗೆ ಖಡ್ಗ ಹಿಡಿದುಕೊಳ್ಳುವಷ್ಟೂ ಬಲವಿರದು.”

22 ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ, “ನಾನು ಈಜಿಪ್ಟಿನ ರಾಜನಾದ ಫರೋಹನಿಗೆ ವಿರುದ್ಧವಾಗಿದ್ದೇನೆ. ಅವನ ಎರಡು ಕೈಗಳನ್ನೂ ಮುರಿಯುವೆನು. ಒಂದು ಕೈ ಮುರಿಯಲ್ಪಟ್ಟಿತ್ತು. ಇನ್ನೊಂದು ಸರಿಯಾಗಿದ್ದ ಕೈಯೂ ಮುರಿಯಲ್ಪಡುವದು. ಅವನ ಕೈಯಿಂದ ಖಡ್ಗವು ಬೀಳುವಂತೆ ಮಾಡುವೆನು. 23 ಈಜಿಪ್ಟಿನ ಜನರನ್ನು ದೇಶಾಂತರ ಚದರಿಸಿಬಿಡುವೆನು. 24 ಬಾಬಿಲೋನಿನ ರಾಜನ ಕೈಗಳನ್ನು ನಾನು ಬಲಪಡಿಸುವೆನು. ನನ್ನ ಖಡ್ಗವನ್ನು ನಾನು ಅವನ ಕೈಯಲ್ಲಿಡುವೆನು. ಆದರೆ ಫರೋಹನ ಕೈಗಳನ್ನು ನಾನು ಮುರಿಯುವೆನು. ಆಗ ನೋವಿನಿಂದ ಫರೋಹನು ಕಿರುಚುವನು. ಒಬ್ಬ ಸಾಯುವ ಮನುಷ್ಯನು ಕಿರುಚುವಂತೆ ಆ ಶಬ್ದವು ಇರುವುದು. 25 ನಾನು ಬಾಬಿಲೋನಿನ ರಾಜನ ಕೈಗಳನ್ನು ಬಲಪಡಿಸುವೆನು. ಫರೋಹನ ಕೈಗಳು ಜೋಲುಬೀಳುವವು. ಆಗ ಅವರು ನಾನೇ ಯೆಹೋವನೆಂದು ತಿಳಿಯುವರು.

“ನನ್ನ ಖಡ್ಗವನ್ನು ನಾನು ಬಾಬಿಲೋನ್ ರಾಜನ ಕೈಗಳಲ್ಲಿ ಇಡುವೆನು. ಆಗ ಅವನು ಈಜಿಪ್ಟಿನ ಕಡೆಗೆ ಅದನ್ನು ಚಾಚುವನು. 26 ನಾನು ಈಜಿಪ್ಟಿನ ಜನರನ್ನು ದೇಶಾಂತರ ಚದರಿಸಿಬಿಡುವೆನು. ಆಗ ನಾನು ಯೆಹೋವನೆಂದು ಅವರು ತಿಳಿದುಕೊಳ್ಳುವರು.”

ಅಶ್ಶೂರವು ದೇವದಾರು ಮರದಂತಿರುವದು

31 ಸೆರೆಹಿಡಿದ ಹನ್ನೊಂದನೇ ವರ್ಷದ ಮೂರನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಇದನ್ನು ಈಜಿಪ್ಟಿನ ರಾಜನಾದ ಫರೋಹನಿಗೂ ಅವನ ಜನರಿಗೂ ಹೇಳು:

“‘ನೀನು ಅತ್ಯಂತ ಪ್ರಭಾವಶಾಲಿ,
    ನಿನ್ನನ್ನು ಯಾರಿಗೆ ಹೋಲಿಸಲಿ?
ಅಶ್ಶೂರವು ಲೆಬನೋನಿನಲ್ಲಿರುವ ದೇವದಾರು ಮರದಂತೆ ಎತ್ತರವಾಗಿ,
    ಸುಂದರವಾದ ಕೊಂಬೆಗಳಿಂದಲೂ
    ಕಾಡಿನ ನೆರಳಿನಲ್ಲಿಯೂ ಶೋಭಿಸುತ್ತದೆ.
ಅದರ ಮೇಲಿನ ತುದಿಯು ಮುಗಿಲನ್ನು ಮುಟ್ಟುವದು.
ನೀರು ಆ ಮರವನ್ನು ಬೆಳೆಯುವಂತೆ ಮಾಡಿತು.
    ನದಿಯು ಅದನ್ನು ಎತ್ತರವಾಗುವಂತೆ ಮಾಡಿತು.
ಆ ಮರವು ನೆಡಲ್ಪಟ್ಟ ಸ್ಥಳದ ಸುತ್ತಲೂ ಹೊಳೆಯು ಹರಿಯುತ್ತಿದೆ.
    ಆ ಮರದಿಂದ ಬೇರೆ ಮರಗಳಿಗೆ ಸಣ್ಣ ಕಾಲುವೆಗಳು ಹೊರಡುತ್ತವೆ.
ಯಾಕೆಂದರೆ ಈ ಮರವು ಬೇರೆ ಮರಗಳಿಗಿಂತ ಉನ್ನತವಾಗಿ ಕಾಣಿಸಿಕೊಳ್ಳಲು,
    ಅದು ಅನೇಕ ಕೊಂಬೆಗಳನ್ನು ಬಿಟ್ಟಿತು.
ಅಲ್ಲಿ ಬೇಕಾದಷ್ಟು ನೀರು ಇದ್ದುದರಿಂದ
    ಕೊಂಬೆಗಳು ಉದ್ದವಾಗಿಯೂ ವಿಶಾಲವಾಗಿಯೂ ಬೆಳೆದವು.
ಅದರ ಕೊಂಬೆಗಳಲ್ಲಿ ಆಕಾಶದ ಪಕ್ಷಿಗಳು ಗೂಡುಗಳನ್ನು ಕಟ್ಟಿದವು.
    ಆ ಮರದ ಅಡಿಯಲ್ಲಿ ಪ್ರಾಣಿಗಳು ಮರಿಗಳನ್ನು ಈದವು.
ಆ ಮರದ ನೆರಳಿನಲ್ಲಿ
    ಎಲ್ಲಾ ದೊಡ್ಡ ಜನಾಂಗಗಳು ವಾಸಿಸಿದವು.
ಆ ಮರವು ಮನೋಹರವಾಗಿತ್ತು.
    ಅದು ದೊಡ್ಡದಾಗಿತ್ತು.
    ಅದರ ಕೊಂಬೆಗಳು ವಿಶಾಲವಾಗಿದ್ದವು.
    ಅದರ ಬೇರುಗಳಿಗೆ ಧಾರಾಳವಾದ ನೀರಿತ್ತು.
ದೇವರ ತೋಟದಲ್ಲಿರುವ ದೇವದಾರು ಮರಗಳೂ
    ಈ ಮರದಷ್ಟು ಎತ್ತರವಾಗಿರಲಿಲ್ಲ.
ಈ ಮಹಾ ಮರಕ್ಕಿರುವಷ್ಟು ಕೊಂಬೆಗಳು ಸೈಪ್ರಸ್ ಮರಗಳಿಗೂ ಇಲ್ಲ.
    ದೇವರ ತೋಟದಲ್ಲಿದ್ದ ಯಾವ ಮರವಾದರೂ ಇದರಷ್ಟು ಅಂದವಾಗಿರಲಿಲ್ಲ.
ನಾನು ಅದಕ್ಕೆ ಅನೇಕ ಕೊಂಬೆಗಳನ್ನು ಕೊಟ್ಟು
    ಅಂದವಾಗಿ ಕಾಣುವಂತೆ ಮಾಡಿದೆನು.
ದೇವರ ತೋಟವಾಗಿರುವ ಏದೆನಿನಲ್ಲಿರುವ
    ಮರಗಳೆಲ್ಲಾ ಅಸೂಯೆಪಡುತ್ತಿದ್ದವು.’”

10 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಆ ಮರವು ಎತ್ತರವಾಗಿ ಬೆಳೆಯಿತು. ಅದರ ತುದಿ ಮುಗಿಲನ್ನು ಮುಟ್ಟಿತು. ಇದು ಅದಕ್ಕೆ ಹೆಮ್ಮೆಯನ್ನು ತಂದಿತು. 11 ಆಗ ನಾನು ಒಬ್ಬ ಬಲಾಢ್ಯನಾದ ರಾಜನು ಬಂದು ಆ ಮರವನ್ನು ತೆಗೆದುಕೊಳ್ಳುವಂತೆ ಮಾಡಿದೆನು. ಆ ರಾಜನು ಮರವು ಮಾಡಿದ ದುಷ್ಕೃತ್ಯಗಳಿಗಾಗಿ ಅದನ್ನು ಶಿಕ್ಷಿಸಿದನು. ಆ ಮರವನ್ನು ನಾನು ನನ್ನ ತೋಟದಿಂದ ತೆಗೆದು ಹಾಕಿದೆನು. 12 ಪರದೇಶದ ಕ್ರೂರ ಜನರು ಅದನ್ನು ಕಡಿದು ಅದರ ರೆಂಬೆಗಳನ್ನೆಲ್ಲಾ ಬೆಟ್ಟ, ಬಯಲು, ತಗ್ಗುಗಳಲ್ಲಿ ಚದರಿಸಿಬಿಟ್ಟರು. ಅದರ ಮುರಿಯಲ್ಪಟ್ಟ ಕೊಂಬೆಗಳು ಆ ದೇಶದಲ್ಲಿ ಹರಿಯುವ ನದಿಯಲ್ಲಿ ತೇಲಿದವು. ಆ ಮರದಡಿಯಲ್ಲಿ ಈಗ ನೆರಳು ಇಲ್ಲ. ಆದ್ದರಿಂದ ಅಲ್ಲಿ ವಾಸವಾಗಿದ್ದ ಜನರೆಲ್ಲಾ ಅಲ್ಲಿಂದ ಹೊರಟುಹೋದರು. 13 ಕೆಳಗೆ ಬಿದ್ದ ಮರದ ಮೇಲೆ ಪಕ್ಷಿಗಳು ವಾಸಿಸಿದವು. ಕೆಳಗೆ ಬಿದ್ದ ಅದರ ಕೊಂಬೆಗಳ ಮೇಲೆ ಕಾಡುಪ್ರಾಣಿಗಳು ನಡೆದವು.

14 “ಈಗ ಆ ನೀರಿನ ಬಳಿಯಲ್ಲಿರುವ ಯಾವ ಮರಗಳೂ ಹೆಮ್ಮೆಪಡುವದಿಲ್ಲ. ಅವು ಮುಗಿಲನ್ನು ಮುಟ್ಟಲು ಪ್ರಯತ್ನಿಸುವದಿಲ್ಲ. ಚೆನ್ನಾಗಿ ಬೆಳೆದ ಮರಗಳು ಆ ನೀರನ್ನು ಕುಡಿದು ತಾನು ಉದ್ದವಾಗಿ ಬೆಳೆದಿದ್ದೇನೆ ಎಂದು ಕೊಚ್ಚಿಕೊಳ್ಳುವದಿಲ್ಲ. ಯಾಕೆಂದರೆ ಎಲ್ಲವೂ ಸಾಯುವುದಕ್ಕಾಗಿ ನೇಮಕಗೊಂಡಿವೆ. ಅವುಗಳೆಲ್ಲಾ ಮರಣದ ಸ್ಥಳವನ್ನು ಸೇರುವವು. ಅಲ್ಲಿ ಸತ್ತು, ಮರಣದ ಆ ಸ್ಥಳಕ್ಕೆ ಹೋಗಿ ಪಾತಾಳಕ್ಕೆ ಸೇರಿದವರನ್ನು ಸೇರುವವು.”

15 ನನ್ನ ಒಡೆಯನಾದ ಯೆಹೋವನು ಇದನ್ನು ನುಡಿದಿದ್ದಾನೆ: “ಆ ಮರವು ಪಾತಾಳಕ್ಕೆ ಹೋದ ದಿವಸದಲ್ಲಿ ನಾನು ಜನರನ್ನು ಅಳುವಂತೆ ಮಾಡಿದೆನು. ಅದನ್ನು ನಾನು ಆಳವಾದ ಸಾಗರದಿಂದ ಮುಚ್ಚಿಬಿಟ್ಟೆನು. ನಾನು ಅದರ ನದಿಗಳನ್ನೂ ಬೇರೆ ನೀರಿನ ತೊರೆಗಳನ್ನೂ ನಿಲ್ಲಿಸಿಬಿಟ್ಟೆನು. ಲೆಬನೋನ್ ಅದಕ್ಕಾಗಿ ಶೋಕಿಸುವಂತೆ ಮಾಡಿದೆನು. ಆ ದೊಡ್ಡ ಮರವು ಹೋದುದಕ್ಕಾಗಿ ಆ ಪ್ರಾಂತ್ಯದ ಬೇರೆ ಎಲ್ಲಾ ಮರಗಳು ದುಃಖದಿಂದ ಕಾಯಿಲೆಯಲ್ಲಿ ಬಿದ್ದವು. 16 ನಾನು ಆ ಮರವನ್ನು ಬೀಳಿಸಿದೆನು. ಬೀಳುವ ಅದರ ಶಬ್ದವನ್ನು ಕೇಳಿ ರಾಜ್ಯಗಳೆಲ್ಲಾ ಭಯದಿಂದ ನಡುಗಿದವು. ನಾನು ಆ ಮರವನ್ನು ಪಾತಾಳಕ್ಕೆ ಕಳುಹಿಸಿದೆನು. ಅದು ಹೋಗಿ ಅದಕ್ಕಿಂತ ಮೊದಲೇ ಆ ಆಳವಾದ ಗುಂಡಿಗೆ ಹೋಗಿರುವವರೊಂದಿಗೆ ಸೇರಿಕೊಂಡಿತು. ಗತಿಸಿದ ದಿವಸಗಳಲ್ಲಿ ಏದೆನಿನಲ್ಲಿದ್ದ ಎಲ್ಲಾ ಮರಗಳು, ಲೆಬನೋನಿನ ಉತ್ಕೃಷ್ಟ ಮರಗಳು ಆ ನೀರನ್ನು ಕುಡಿದಿದ್ದವು. ಅವೆಲ್ಲವೂ ಪಾತಾಳದಲ್ಲಿ ಸಂತೈಸಿಕೊಂಡವು. 17 ಹೌದು, ಆ ಮರವೂ ಅದರ ನೆರಳಿನ ಆಶ್ರಯವನ್ನು ಪಡೆದುಕೊಂಡಿದ್ದ ಅದರ ಎಲ್ಲಾ ಸಂತತಿಗಳವರೂ ಯುದ್ಧದಲ್ಲಿ ಸತ್ತುಹೋಗಿದ್ದ ಸೈನಿಕರೊಂದಿಗೆ ಇರುವದಕ್ಕಾಗಿ ಪಾತಾಳಕ್ಕೆ ಇಳಿದು ಹೋಗಿದ್ದವು.

18 “ಈಜಿಪ್ಟೇ, ಏದೆನಿನಲ್ಲಿ ಎಷ್ಟೋ ದೊಡ್ಡ, ಬಲಶಾಲಿಯಾಗಿರುವ ಮರಗಳಿವೆ. ಅದರ ಯಾವ ಮರಕ್ಕೆ ನಿನ್ನನ್ನು ಹೋಲಿಸಲಿ? ಅವೆಲ್ಲವೂ ಭೂಮಿಯ ಕೆಳಗೆ ಪಾತಾಳವನ್ನು ಸೇರಿದವು. ನೀನು ಕೂಡಾ ಆ ಪರದೇಶಸ್ಥರೊಂದಿಗೆ ಆ ಸ್ಥಳಕ್ಕೆ ಸೇರುವೆ. ರಣರಂಗದಲ್ಲಿ ಸತ್ತವರೊಂದಿಗೆ ನೀನು ಬಿದ್ದುಕೊಳ್ಳುವೆ.

“ಹೌದು, ಈ ರೀತಿಯಾಗಿ ಫರೋಹನಿಗೂ ಅವನೊಂದಿಗಿರುವ ಜನರ ಗುಂಪಿಗೂ ಆಗುವದು.” ಇದು ಒಡೆಯನಾದ ಯೆಹೋವನ ನುಡಿ.

ಫರೋಹನು ಮೃಗರಾಜನೋ, ಪೇರ್ಮೊಸಳೆಯೋ?

32 ಸೆರೆಹಿಡಿದ ಹನ್ನೆರಡನೇ ವರ್ಷದ, ಹನ್ನೆರಡನೇ ತಿಂಗಳಿನ ಮೊದಲನೇ ದಿವಸದಲ್ಲಿ ಯೆಹೋವನ ಸಂದೇಶ ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ಈಜಿಪ್ಟಿನ ರಾಜನಾದ ಫರೋಹನಿಗೆ ಈ ಶೋಕಗೀತೆಯನ್ನು ಹಾಡು. ಅವನಿಗೆ ಹೀಗೆ ಹೇಳು:

“‘ಜನಾಂಗಗಳ ಮಧ್ಯೆ ಹೆಮ್ಮೆಯಿಂದ ನಡೆದಾಡುತ್ತಿರುವ ಮೃಗರಾಜನಂತೆ ನೀನಿರುವೆ ಎಂದು ನೀನು ಭಾವಿಸಿದ್ದೆ.
    ಆದರೆ ನಿಜವಾಗಿಯೂ ನೀನು ಸರೋವರದಲ್ಲಿರುವ ಪೇರ್ಮೊಸಳೆಯಾಗಿರುವೆ.
ನೀರಿನ ಹೊಳೆಗಳಲ್ಲಿ ನೀನು ನಿನ್ನ ದಾರಿಯನ್ನು ಮಾಡುವೆ.
    ನಿನ್ನ ಕಾಲುಗಳಿಂದ ಆ ನೀರನ್ನು ನೀನು ಕೆಸರಾಗಿ ಮಾಡುವೆ.
    ನೀನು ಈಜಿಪ್ಟಿನ ಹೊಳೆಗಳನ್ನು ಕದಡಿಸುವೆ.’”

ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ:

“ಅನೇಕರನ್ನು ನಾನು ಒಟ್ಟುಗೂಡಿಸಿದ್ದೇನೆ.
    ಈಗ ನನ್ನ ಬಲೆಯನ್ನು ನಿನ್ನ ಮೇಲೆ ಬೀಸುವೆನು.
    ಆಗ ಅವರು ನಿನ್ನನ್ನು ಒಳಸೆಳೆಯುವರು.
ಆಮೇಲೆ ನಿನ್ನನ್ನು ಒಣನೆಲದ ಮೇಲೆ ಹಾಕುವೆನು.
    ಹೊಲದ ಮೇಲೆ ನಿನ್ನನ್ನು ಬಿಸಾಡುವೆನು.
ಎಲ್ಲಾ ಪಕ್ಷಿಗಳು ನಿನ್ನನ್ನು ತಿಂದುಬಿಡುವಂತೆ ಮಾಡುವೆನು.
    ಎಲ್ಲಾ ಕಡೆಗಳಿಂದ ಕಾಡುಮೃಗಗಳು ಬಂದು ನಿನ್ನನ್ನು ಹೊಟ್ಟೆತುಂಬಾ ತಿನ್ನುವಂತೆ ಮಾಡುವೆನು.
ಪರ್ವತಗಳ ಮೇಲೆ ನಿನ್ನ ದೇಹವನ್ನು ಬಿಸಾಡುವೆನು.
    ಬಯಲು ಪ್ರದೇಶವನ್ನು ನಿನ್ನ ಹೆಣಗಳಿಂದ ತುಂಬಿಸುವೆನು.
ನಿನ್ನ ರಕ್ತವನ್ನು ಪರ್ವತಗಳ ಮೇಲೆ ಚೆಲ್ಲುವೆನು,
    ಅದು ನೆಲವನ್ನು ಒದ್ದೆ ಮಾಡುವದು.
    ಹೊಳೆಗಳಲ್ಲಿ ನೀನು ತುಂಬಿರುವಿ.
ನೀನು ಕಾಣೆಯಾಗುವಂತೆ ನಾನು ಮಾಡುವೆನು.
    ಆಕಾಶವನ್ನು ಮುಚ್ಚಿ ನಕ್ಷತ್ರಗಳನ್ನು ಹೊಳೆಯದಂತೆ ಮಾಡುವೆನು.
ಸೂರ್ಯನನ್ನು ಮೋಡವು ಮುಚ್ಚುವಂತೆ ಮಾಡುವೆನು.
    ಚಂದ್ರನು ಪ್ರಕಾಶಿಸದಂತೆ ಮಾಡುವೆನು.
ನಿನ್ನ ಮೇಲೆ ಆಕಾಶದಲ್ಲಿ ಹೊಳೆಯುವ ಜ್ಯೋತಿಗಳನ್ನು ಮಂಕುಗೊಳಿಸುವೆನು;
    ನಿನ್ನ ದೇಶದಲ್ಲಿ ಕತ್ತಲನ್ನು ಬರಮಾಡುವೆನು”
ನನ್ನ ಒಡೆಯನಾದ ಯೆಹೋವನು ಇವುಗಳನ್ನು ಹೇಳಿದನು.

“ನಿನ್ನನ್ನು ನಾಶಮಾಡಲು ನಾನು ನಿನ್ನ ಶತ್ರುವನ್ನು ಬರಮಾಡುವಾಗ ಅನೇಕ ಜನರು ದುಃಖಿತರಾಗಿ ಗಲಿಬಿಲಿಗೊಳ್ಳುವರು. ನಿನ್ನನ್ನು ಅರಿಯದ ರಾಜ್ಯದವರೂ ಗಲಿಬಿಲಿಗೊಳ್ಳುವರು. 10 ಅನೇಕ ಮಂದಿ ನಿನಗೆ ಸಂಭವಿಸಿದ್ದನ್ನು ನೋಡಿ ಚಕಿತರಾಗುವರು. ನಾನು ನಿನ್ನ ಕಡೆಗೆ ಖಡ್ಗ ಬೀಸುವಾಗ ಅವರ ಅರಸರು ಬಹಳ ಭಯಗ್ರಸ್ತರಾಗುವರು; ನೀನು ಬೀಳುವ ದಿವಸದಲ್ಲಿ ಅರಸರು ಹೆದರಿ ನಡುಗುವರು. ಪ್ರತಿಯೊಬ್ಬ ರಾಜನು ತನ್ನ ಜೀವವನ್ನು ಉಳಿಸಿಕೊಳ್ಳಲು ಆತುರಪಡುವನು.”

11 ಯಾಕೆಂದರೆ ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ಬಾಬಿಲೋನಿನ ರಾಜನ ಖಡ್ಗವು ನಿನ್ನೊಂದಿಗೆ ಯುದ್ಧಮಾಡಲು ಬರುವದು. 12 ಕ್ರೂರ ರಾಷ್ಟ್ರಗಳ ಆ ಸೈನಿಕರಿಂದ ನಿನ್ನ ಜನರನ್ನು ಯುದ್ಧದಲ್ಲಿ ಹತಗೊಳಿಸುವೆನು. ಈಜಿಪ್ಟಿನ ಜನರನ್ನೂ ಅವರು ಹೆಮ್ಮೆಪಡುವಂತ ವಸ್ತುಗಳನ್ನೂ ಆ ಸೈನಿಕರು ನಾಶಗೊಳಿಸುವರು. 13 ಈಜಿಪ್ಟಿನ ಹೊಳೆಯ ತೀರದಲ್ಲಿ ಅನೇಕ ಪ್ರಾಣಿಗಳಿವೆ. ನಾನು ಅವುಗಳನ್ನು ನಾಶಮಾಡುವೆನು. ಜನರು ಹೊಳೆಯ ನೀರನ್ನು ತಮ್ಮ ಕಾಲುಗಳಿಂದ ಕೆಸರಾಗಿ ಇನ್ನು ಮಾಡಲಾರರು. ದನಗಳ ಗೊರಸುಗಳು ನೀರನ್ನು ಕೆಸರನ್ನಾಗಿ ಮಾಡುವದಿಲ್ಲ. 14 ನಾನು ಈಜಿಪ್ಟಿನ ನೀರನ್ನು ತಿಳಿಗೊಳಿಸುವೆನು; ಅದರ ನದಿಗಳು ಎಣ್ಣೆಯಷ್ಟೇ ನಯವಾಗಿ ಹರಿಯುವಂತೆ ಮಾಡುವೆನು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು. 15 “ಈಜಿಪ್ಟ್ ದೇಶವನ್ನು ನಾನು ಬರಿದುಮಾಡುವೆನು. ಆ ದೇಶವು ಎಲ್ಲವನ್ನು ಕಳೆದುಕೊಳ್ಳುವದು. ಈಜಿಪ್ಟಿನಲ್ಲಿ ವಾಸಿಸುವ ಎಲ್ಲಾ ಜನರನ್ನು ನಾನು ಶಿಕ್ಷಿಸುವೆನು. ಆಗ ನಾನು ಒಡೆಯನಾದ ಯೆಹೋವನು ಎಂದು ತಿಳುಕೊಳ್ಳುವರು.

16 “ಜನರು ಈಜಿಪ್ಟಿನ ಬಗ್ಗೆ ಈ ಶೋಕಗೀತೆಯನ್ನು ಹಾಡುವರು. ಬೇರೆ ದೇಶಗಳಲ್ಲಿರುವ ಹೆಣ್ಣುಮಕ್ಕಳು ಈ ಶೋಕಗೀತೆಯನ್ನು ಹಾಡುವರು. ಅವರು ಈಜಿಪ್ಟ್ ಮತ್ತು ಅದರ ಎಲ್ಲಾ ಜನರ ಕುರಿತು ಈ ಶೋಕಗೀತೆಯನ್ನು ಹಾಡುವರು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು.

ಈಜಿಪ್ಟ್ ನಾಶವಾಗಲಿದೆ

17 ಸೆರೆಹಿಡಿಯಲ್ಪಟ್ಟ ಹನ್ನೆರಡನೆ ವರ್ಷದ, ಹನ್ನೆರಡನೆ ತಿಂಗಳಿನ, ಹದಿನೈದನೆಯ ದಿನದಲ್ಲಿ ಯೆಹೋವನ ಮಾತುಗಳು ನನಗೆ ಬಂದವು. ಆತನು ಹೇಳಿದ್ದೇನೆಂದರೆ, 18 “ನರಪುತ್ರನೇ, ಈಜಿಪ್ಟಿನ ಜನರಿಗಾಗಿ ಗೋಳಾಡು. ಪಾತಾಳಕ್ಕೆ ಇಳಿದುಹೋಗಿರುವ ಇತರ ಎಲ್ಲರೊಡನೆ ಇರುವದಕ್ಕಾಗಿ ಈಜಿಪ್ಟನ್ನು ಮತ್ತು ಇತರ ಜನಾಂಗಗಳ ಉಳಿದ ಪಟ್ಟಣಗಳನ್ನು[b] ಸಮಾಧಿಗೆ ಕಳುಹಿಸು.

19 “ಈಜಿಪ್ಟೇ, ನೀನು ಬೇರೆಯವರಿಗಿಂತ ಉತ್ತಮಳೇನೂ ಅಲ್ಲ. ಮರಣದ ಸ್ಥಳಕ್ಕೆ ಹೋಗು. ಅಲ್ಲಿ ಪರದೇಶದವರೊಂದಿಗೆ ಹೋಗಿ ಬಿದ್ದುಕೊ. 20 ರಣರಂಗದಲ್ಲಿ ಮಡಿದ ಜನರೊಂದಿಗೆ ಈಜಿಪ್ಟ್ ಹೋಗುವದು. ಶತ್ರುಗಳು ಆಕೆಯನ್ನೂ ಆಕೆಯ ಜನರನ್ನೂ ಎಳೆದುಬಿಟ್ಟಿದ್ದಾರೆ.

21 “ಶೂರರು, ಬಲಶಾಲಿಗಳು ಯುದ್ಧದಲ್ಲಿ ಮಡಿದಿದ್ದಾರೆ, ಆ ಪರದೇಶಿಗಳು ಮರಣದ ಸ್ಥಳಕ್ಕೆ ಹೋದರು. ಅವರು ಅಲ್ಲಿದ್ದುಕೊಂಡು ಈಜಿಪ್ಟಿನವರೊಂದಿಗೆ ಮತ್ತು ಅದರ ಸಹಾಯಕರೊಂದಿಗೆ ಮಾತನಾಡುವರು.

22-23 “ಅಶ್ಶೂರವೂ ಅದರ ಎಲ್ಲಾ ಸೈನ್ಯವೂ ಆ ಪಾತಾಳದಲ್ಲಿರುವದು. ಅವರ ಸ್ಥಳವು ಆಳವಾದ ಗುಂಡಿಯಲ್ಲಿರುವದು. ಆ ಅಶ್ಶೂರದ ಸೈನಿಕರೆಲ್ಲಾ ರಣರಂಗದಲ್ಲಿ ಮಡಿದವರೇ. ಅವರ ಸಮಾಧಿಗಳು ಅಶ್ಶೂರದ ಸಮಾಧಿಯ ಸುತ್ತಮುತ್ತ ಇವೆ. ಅವರು ಜೀವಂತರಾಗಿರುವಾಗ ಜನರನ್ನು ಭೀತಿಗೊಳಿಸುತ್ತಿದ್ದರು. ಆದರೆ ಈಗ ಮೌನವಾಗಿದ್ದಾರೆ. ಅವರೆಲ್ಲಾ ಯುದ್ಧದಲ್ಲಿ ಸತ್ತರು.

24 “ಏಲಾಮು ಕೂಡಾ ಅಲ್ಲಿದೆ. ಆಕೆಯ ಸೈನ್ಯವೆಲ್ಲಾ ಆಕೆಯ ಸಮಾಧಿಯ ಸುತ್ತಲಿದೆ. ಅವರೆಲ್ಲಾ ಯುದ್ಧದಲ್ಲಿ ಮಡಿದರು. ಆ ಪರದೇಶದವರು ಪಾತಾಳವನ್ನು ಸೇರಿದರು. ಅವರು ಜೀವಿಸಿದ್ದಾಗ ಜನರನ್ನು ಭಯಗೊಳಿಸಿದರು. ಆದರೆ ಈಗ ನಾಚಿಕೆಯೊಂದಿಗೆ ಅವರು ಪಾತಾಳವನ್ನು ಸೇರಿದರು. 25 ಏಲಾಮ್ ಮತ್ತು ಯುದ್ಧದಲ್ಲಿ ಮಡಿದ ಅದರ ಎಲ್ಲಾ ಸೈನಿಕರಿಗೂ ಅಲ್ಲಿ ಅವರು ಹಾಸಿಗೆಯನ್ನು ಸಿದ್ಧಮಾಡಿದರು. ಏಲಾಮಿನ ಸೈನ್ಯವು ಅದರ ಸಮಾಧಿಯ ಸುತ್ತಲೂ ಇವೆ. ಅವರೆಲ್ಲಾ ರಣರಂಗದಲ್ಲಿ ಸತ್ತವರು. ಅವರು ಜೀವದಿಂದಿರುವಾಗ ಜನರನ್ನು ಹೆದರಿಸಿದ್ದರು. ಆದರೆ ಅವರೀಗ ತಮ್ಮ ನಾಚಿಕೆಯೊಂದಿಗೆ ಪಾತಾಳ ಸೇರಿದ್ದಾರೆ. ಅವರು ಸತ್ತವರೊಂದಿಗೆ ಸೇರಿರುತ್ತಾರೆ.

26 “ಮೆಷಕ್, ತೂಬಲ್ ಮತ್ತು ಅವರ ಎಲ್ಲಾ ಸೈನ್ಯದವರು ಅಲ್ಲಿದ್ದಾರೆ. ಅವರ ಸಮಾಧಿಗಳು ಸುತ್ತಲೂ ಇವೆ. ಅವರೆಲ್ಲಾ ಯುದ್ಧದಲ್ಲಿ ಸತ್ತವರು. ಅವರು ಜೀವಿಸಿದ್ದಾಗ ಜನರಿಗೆ ಹೆದರಿಕೆಯನ್ನು ಉಂಟುಮಾಡಿದ್ದರು. 27 ಈಗ ಅವರು ಬಹಳ ಕಾಲದ ಹಿಂದೆ ಸತ್ತ ವೀರರೊಂದಿಗೆ ಬಿದ್ದುಕೊಂಡಿದ್ದಾರೆ. ಅವರು ತಮ್ಮ ಆಯುಧಗಳೊಂದಿಗೆ ಹೂಣಿಡಲ್ಪಟ್ಟರು. ಅವರ ತಲೆಯ ಕೆಳಗೆ ಅವರ ಕತ್ತಿಯು ಇಡಲ್ಪಟ್ಟಿತ್ತು. ಆದರೆ ಅವರ ಪಾಪವು ಅವರ ಎಲುಬುಗಳಲ್ಲಿವೆ. ಯಾಕೆಂದರೆ ಅವರು ಜೀವಿಸಿದ್ದಾಗ ಜನರನ್ನು ಭಯಪಡಿಸಿದರು.

28 “ಈಜಿಪ್ಟೇ, ನೀನೂ ಸಹ ನಾಶಮಾಡಲ್ಪಡುವೆ. ನೀನೂ ಆ ಪರದೇಶದವರೊಂದಿಗೆ ಬಿದ್ದುಕೊಂಡಿರುವೆ. ಯುದ್ಧದಲ್ಲಿ ಸತ್ತ ಸೈನಿಕರೊಂದಿಗೆ ನೀನು ಮಲಗುವೆ.

29 “ಎದೋಮನೂ ಅಲ್ಲಿರುವನು. ಅವನ ರಾಜರೂ ಹಿರಿಯರೂ ಅಲ್ಲಿರುವರು. ಅವರೆಲ್ಲಾ ವೀರರಾಗಿದ್ದರೂ ಈ ಬೇರೆ ಜನರೊಂದಿಗೆ ಮಲಗಿದ್ದಾರೆ; ಆ ಪರದೇಶದವರೊಂದಿಗೆ ಪಾತಾಳದಲ್ಲಿ ಬಿದ್ದುಕೊಂಡಿದ್ದಾರೆ.

30 “ಉತ್ತರ ದೇಶದ ನಾಯಕರೆಲ್ಲಾ ಅಲ್ಲಿದ್ದಾರೆ. ಚೀದೋನಿನ ಸೈನಿಕರೂ ಅಲ್ಲಿದ್ದಾರೆ. ಅವರ ಬಲವು ಜನರನ್ನು ಭಯಗ್ರಸ್ತರನ್ನಾಗಿ ಮಾಡಿತ್ತು. ಅವರೂ ಈಗ ಯುದ್ಧದಲ್ಲಿ ಮಡಿದ ಇತರರೊಂದಿಗೆ ಬಿದ್ದುಕೊಂಡಿದ್ದಾರೆ. ತಮ್ಮ ನಾಚಿಕೆಯೊಂದಿಗೆ ಪಾತಾಳವನ್ನು ಸೇರಿದ್ದಾರೆ.

31 “ಪಾತಾಳಕ್ಕೆ ಸೇರಿದ ಜನರನ್ನು ಫರೋಹನು ನೋಡುವನು. ಅವನೂ ಅವನೊಂದಿಗಿರುವ ಜನರೂ ಸಮಾಧಾನ ಹೊಂದುವರು. ಹೌದು, ಫರೋಹನೂ ಅವನ ಎಲ್ಲಾ ಸೈನಿಕರೂ ಯುದ್ಧದಲ್ಲಿ ಸಾಯುವರು.” ಇದು ಒಡೆಯನಾದ ಯೆಹೋವನ ನುಡಿ.

32 “ಫರೋಹನು ತನ್ನ ಕಾಲದಲ್ಲಿ ಜನರನ್ನು ಭಯಗೊಳಿಸಿದ್ದನು. ಈಗಲಾದರೋ, ಫರೋಹನೂ ಅವನ ಸೈನಿಕರೂ ಪರದೇಶದವರೊಂದಿಗೆ ಮತ್ತು ಯುದ್ಧದಲ್ಲಿ ಹತರಾದವರೊಂದಿಗೆ ಬಿದ್ದುಕೊಳ್ಳುವರು.” ನನ್ನ ಒಡೆಯನಾದ ಯೆಹೋವನ ನುಡಿಗಳಿವು.

1 ಪೇತ್ರನು 4

ಮಾರ್ಪಾಟಾದ ಜೀವಿತ

ಕ್ರಿಸ್ತನು ದೇಹಾರೂಢನಾಗಿದ್ದಾಗ ಸಂಕಟಪಟ್ಟನು. ಆದ್ದರಿಂದ ಕ್ರಿಸ್ತನಲ್ಲಿದ್ದ ಮನೋಭಾವವನ್ನೇ ನೀವೂ ಹೊಂದಿದವರಾಗಿ ನಿಮ್ಮನ್ನು ಬಲಪಡಿಸಿಕೊಳ್ಳಿರಿ. ಶಾರೀರಿಕವಾಗಿ ಸಂಕಟವನ್ನು ಅನುಭವಿಸಿದ ವ್ಯಕ್ತಿಯು ಪಾಪದಿಂದ ಮುಕ್ತನಾಗಿದ್ದಾನೆ. ಆದ್ದರಿಂದ ಈ ಲೋಕದಲ್ಲಿ ನೀವು ಜನರ ಅಪೇಕ್ಷೆಗೆ ತಕ್ಕಂತೆ ಕೆಟ್ಟಕಾರ್ಯಗಳನ್ನು ಮಾಡದೆ, ದೇವರು ಅಪೇಕ್ಷಿಸುವಂಥ ಕಾರ್ಯಗಳನ್ನೇ ಮಾಡುತ್ತಾ ಜೀವಿಸಲು ನಿಮ್ಮನ್ನು ಬಲಪಡಿಸಿಕೊಳ್ಳಿರಿ. ಮೊದಲು, ನಂಬಿಕೆಯಿಲ್ಲದ ಜನರು ಮಾಡುವಂತಹ ಕಾರ್ಯಗಳನ್ನು ಮಾಡುತ್ತಾ ಬಹಳ ಕಾಲವನ್ನು ವ್ಯರ್ಥಗೊಳಿಸಿ ಬಿಟ್ಟಿರುವಿರಿ. ನೀವು ಲೈಂಗಿಕ ಪಾಪಗಳನ್ನು ಮಾಡುತ್ತಿದ್ದಿರಿ; ಇಷ್ಟವಾದ ಕೆಟ್ಟಕಾರ್ಯಗಳನ್ನು ಮಾಡುತ್ತಿದ್ದಿರಿ; ಕುಡುಕರಾಗಿದ್ದಿರಿ, ಕ್ರೂರಿಗಳಾಗಿದ್ದಿರಿ; ಅಸಹ್ಯಕರವಾದ ನಿರರ್ಥಕ ಗೋಷ್ಠಿಗಳನ್ನು ಮತ್ತು ಮದ್ಯಪಾನಗೋಷ್ಠಿಗಳನ್ನು ನಡೆಸುತ್ತಿದ್ದಿರಿ; ವಿಗ್ರಹಾರಾಧನೆ ಮಾಡುತ್ತಿದ್ದಿರಿ.

ನೀವು ಅಸಹ್ಯಕರವಾದ ನಿರರ್ಥಕಗೋಷ್ಠಿಗಳನ್ನು ಮಾಡದಿರುವುದನ್ನು ಕಂಡ ಅವಿಶ್ವಾಸಿಗಳು ನಿಮ್ಮ ವಿಷಯದಲ್ಲಿ ಆಶ್ಚರ್ಯಪಡುವರು. ಆದ್ದರಿಂದಲೇ ಅವರು ನಿಮ್ಮ ಬಗ್ಗೆ ಕೆಟ್ಟ ಸಂಗತಿಗಳನ್ನು ಹೇಳುವರು. ಆದರೆ ಅವಿಶ್ವಾಸಿಗಳು ತಾವು ಮಾಡುವ ಕಾರ್ಯಗಳ ಬಗ್ಗೆ ತಾವೇ ವಿವರಣೆಯನ್ನು ನೀಡಬೇಕಾಗುತ್ತದೆ. ಜೀವಂತವಾಗಿರುವ ಮತ್ತು ಸತ್ತಿರುವ ಜನರಿಗೆ ತೀರ್ಪು ನೀಡಲು ಸಿದ್ಧನಾಗಿರುವ ಕ್ರಿಸ್ತನಿಗೆ ಅವರು ವಿವರಣೆ ನೀಡಬೇಕಾಗುವುದು. ಸತ್ತುಹೋಗಿರುವ ಜನರಿಗೂ ಸುವಾರ್ತೆಯನ್ನು ಉಪದೇಶಿಸಲಾಯಿತು. ಅವರು ಶರೀರಸಂಬಂಧವಾಗಿ ಮರಣದಂಡನೆಗೆ ಗುರಿಯಾಗಿದ್ದರೂ ಸಹ ಆತ್ಮ ಸಂಬಂಧವಾಗಿ ದೇವರಂತೆ ಸದಾಕಾಲ ಜೀವಿಸಲೆಂದೇ ಅವರಿಗೆ ಉಪದೇಶಿಸಲಾಯಿತು.

ದೇವರ ವರಗಳಿಗೆ ಉತ್ತಮ ಕಾರ್ಯ ನಿರ್ವಾಹಕರಾಗಿರಿ

ಎಲ್ಲಾ ಸಂಗತಿಗಳೂ ಅಂತ್ಯಗೊಳ್ಳುವ ಕಾಲ ಸಮೀಪಿಸಿದೆ. ನೀವು ವಿವೇಕಿಗಳಾಗಿದ್ದು ನಿಮ್ಮನ್ನು ಹತೋಟಿಯಲ್ಲಿಟ್ಟು ಕೊಳ್ಳಿರಿ. ನೀವು ಪ್ರಾರ್ಥಿಸಲು ಇದು ಸಹಾಯ ಮಾಡುತ್ತದೆ. ನೀವು ಒಬ್ಬರನ್ನೊಬ್ಬರು ಎಡಬಿಡದೆ ಪ್ರೀತಿಸುವುದು ಬಹಳ ಮುಖ್ಯವಾದುದು. ಪ್ರೀತಿಯು ಅನೇಕ ಪಾಪಗಳನ್ನು ಅಡಗಿಸಿಬಿಡುತ್ತದೆ. ಗುಣುಗುಟ್ಟದೆ ಅತಿಥಿಸತ್ಕಾರ ಮಾಡಿರಿ. 10 ನಿಮ್ಮಲ್ಲಿ ಪ್ರತಿಯೊಬ್ಬರೂ ದೇವರಿಂದ ಆತ್ಮಿಕ ವರವನ್ನು ಪಡೆದುಕೊಂಡಿರಿ. ದೇವರು ನಿಮಗೆ ಅನೇಕ ವಿಧಗಳಲ್ಲಿ ತನ್ನ ಕೃಪೆಯನ್ನು ದಯಪಾಲಿಸಿರುವನು. ನೀವು ದೇವರ ವರಗಳನ್ನು ಉಪಯೋಗಿಸುವ ಜವಾಬ್ದಾರಿಯುತರಾದ ಸೇವಕರಾಗಿದ್ದೀರಿ. ಆದ್ದರಿಂದ ಒಳ್ಳೆಯ ಸೇವಕರಾಗಿರಿ; ಪರಸ್ಪರ ಸೇವೆ ಮಾಡಲು ನಿಮ್ಮ ವರಗಳನ್ನು ಉಪಯೋಗಿಸಿರಿ. 11 ಬೋಧಿಸುವವನು ದೇವರ ನುಡಿಗಳನ್ನೇ ಬೋಧಿಸಲಿ. ಸೇವೆ ಮಾಡುವವನು ದೇವರೇ ದಯಪಾಲಿಸಿದ ಶಕ್ತಿಯಿಂದ ಸೇವೆ ಮಾಡಲಿ. ನೀವು ಹೀಗೆ ಮಾಡಿದರೆ, ನೀವು ಮಾಡುವ ಪ್ರತಿಯೊಂದರಲ್ಲೂ ಯೇಸು ಕ್ರಿಸ್ತನ ಮೂಲಕ ದೇವರು ಸ್ತುತಿಸಲ್ಪಡುವನು. ಅಧಿಕಾರವೂ ಮಹಿಮೆಯೂ ಯುಗಯುಗಾಂತರಗಳಲ್ಲಿ ಆತನಿಗೆ ಸೇರಿದವುಗಳಾಗಿವೆ. ಆಮೆನ್.

ಕ್ರೈಸ್ತನಾಗಿ ಸಂಕಟಪಡುವುದು

12 ನನ್ನ ಸ್ನೇಹಿತರೇ, ನೀವು ಈಗ ಅನುಭವಿಸುತ್ತಿರುವ ಸಂಕಟಗಳ ವಿಷಯದಲ್ಲಿ ಆಶ್ಚರ್ಯಪಡದಿರಿ. ಅವು ನಿಮ್ಮ ನಂಬಿಕೆಯನ್ನು ಪರೀಕ್ಷಿಸುತ್ತಿವೆ. ವಿಪರೀತವಾದದ್ದು ನಿಮಗೆ ಸಂಭವಿಸುತ್ತಿದೆಯೆಂದು ಯೋಚಿಸದಿರಿ. 13 ಆದರೆ ನೀವು ಕ್ರಿಸ್ತನ ಸಂಕಟಗಳನ್ನು ಹಂಚಿಕೊಳ್ಳುತ್ತಿರುವುದರಿಂದ ಸಂತೋಷಿಸಿರಿ. ಕ್ರಿಸ್ತನು ತನ್ನ ಮಹಿಮೆಯನ್ನು ತೋರ್ಪಡಿಸುವಾಗ ನೀವು ಸಂತೋಷಪಡುವಿರಿ ಮತ್ತು ಆನಂದಿಸುವಿರಿ. 14 ನೀವು ಕ್ರಿಸ್ತನನ್ನು ಅನುಸರಿಸುತ್ತಿರುವುದರ ನಿಮಿತ್ತವಾಗಿ ನಿಮ್ಮ ಬಗ್ಗೆ ಜನರು ಕೆಟ್ಟದ್ದನ್ನು ನುಡಿದರೆ ನೀವು ಭಾಗ್ಯವಂತರಾಗಿದ್ದೀರಿ. ತೇಜೋಮಯವಾದ ಆತ್ಮನು ನಿಮ್ಮಲ್ಲಿ ನೆಲೆಗೊಂಡಿದ್ದಾನೆ. ಆತನು ದೇವರಾತ್ಮನಾಗಿದ್ದಾನೆ. 15 ನೀವು ಕೆಡುಕರಾಗಬಾರದು ಅಂದರೆ ಕೊಲೆಗಾರರಾಗಬಾರದು, ಕಳ್ಳರಾಗಬಾರದು ಮತ್ತು ಇತರರಿಗೆ ತೊಂದರೆ ಕೊಡಬಾರದು. ಇಂಥವುಗಳನ್ನು ಮಾಡುವವನು ಸಂಕಟಕ್ಕೆ ಒಳಗಾಗುವನು. ನಿಮ್ಮಲ್ಲಿ ಯಾರೂ ಆ ರೀತಿಯ ಸಂಕಟಕ್ಕೆ ಒಳಗಾಗಬಾರದು. 16 ನೀವು ಕ್ರೈಸ್ತರಾಗಿರುವುದರಿಂದ ಸಂಕಟಪಟ್ಟರೆ, ನಾಚಿಕೊಳ್ಳಬಾರದು. ಆ (ಕ್ರೈಸ್ತ) ಹೆಸರಿನ ನಿಮಿತ್ತ ನೀವು ದೇವರಿಗೆ ಸ್ತೋತ್ರ ಮಾಡಬೇಕು. 17 ನಿಮ್ಮ ನ್ಯಾಯನಿರ್ಣಯದ ಕಾಲ ಬಂದಿದೆ. ಅದು ದೇವರ ಕುಟುಂಬದಿಂದಲೇ ಆರಂಭವಾಗುವುದು. ನಮ್ಮಲ್ಲಿಯೇ ಅದು ಆರಂಭವಾದರೆ, ದೇವರ ಸುವಾರ್ತೆಗೆ ವಿಧೇಯರಾಗದ ಜನರಿಗೆ ಏನಾಗಬಹುದು?

18 “ನೀತಿವಂತನೇ ರಕ್ಷಣೆ ಹೊಂದಲು ಕಷ್ಟವಾದರೆ,
    ಭಕ್ತಿಹೀನನ ಮತ್ತು ಪಾಪಿಷ್ಠನ ಗತಿಯೇನು?”(A)

19 ಆದ್ದರಿಂದ ದೇವರ ಅಪೇಕ್ಷೆಯಂತೆ ಸಂಕಟಪಡುವವರು ತಮ್ಮ ಜೀವಾತ್ಮಗಳನ್ನು ಆತನಿಗೆ ಒಪ್ಪಿಸಿಕೊಡಬೇಕು. ಅವರನ್ನು ಸೃಷ್ಟಿಸಿದಾತನು ದೇವರೇ. ಆದ್ದರಿಂದ ಅವರು ಆತನಲ್ಲಿ ಭರವಸವಿಡತಕ್ಕದ್ದು. ಹೀಗಿರಲಾಗಿ ಅವರು ಒಳ್ಳೆಯದನ್ನು ಮಾಡುತ್ತಲೇ ಇರಬೇಕು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International