Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆರೆಮೀಯ 30-31

ಆಶಾದಾಯಕವಾದ ವಾಗ್ದಾನಗಳು

30 ಯೆಹೋವನಿಂದ ಯೆರೆಮೀಯನಿಗೆ ಈ ಸಂದೇಶ ಬಂದಿತು. ಇಸ್ರೇಲರ ದೇವರಾದ ಯೆಹೋವನು ಹೀಗೆ ಹೇಳಿದನು: “ಯೆರೆಮೀಯನೇ, ನಾನು ನಿನಗೆ ಹೇಳಿದ ಸಂಗತಿಗಳನ್ನು ಒಂದು ಪುಸ್ತಕದಲ್ಲಿ ಬರೆದಿಡು. ಈ ಪುಸ್ತಕವನ್ನು ನೀನೇ ಬರೆಯಬೇಕು. ಏಕೆಂದರೆ ನಾನು ನನ್ನ ಜನರಾದ ಇಸ್ರೇಲರನ್ನು ಮತ್ತು ಯೆಹೂದ್ಯರನ್ನು ಸೆರೆವಾಸದಿಂದ ಕರೆದುಕೊಂಡು ಬರುವ ದಿನಗಳು ಬರುತ್ತಿವೆ.” ಈ ಸಂದೇಶವು ಯೆಹೋವನಿಂದ ಬಂದದ್ದು. “ಆ ಜನರನ್ನು ನಾನು ಅವರ ಪೂರ್ವಿಕರಿಗೆ ಕೊಟ್ಟ ಪ್ರದೇಶದಲ್ಲಿ ನೆಲಸುವಂತೆ ಮಾಡುತ್ತೇನೆ. ಆಗ ನನ್ನ ಜನರು ಆ ಪ್ರದೇಶದ ಒಡೆತನ ಪಡೆಯುವರು.”

ಇಸ್ರೇಲಿನ ಮತ್ತು ಯೆಹೂದದ ಜನರ ಬಗ್ಗೆ ಯೆಹೋವನು ಈ ಸಂದೇಶವನ್ನು ಕೊಟ್ಟನು:

“ಜನರು ಭಯದಿಂದ ಗೋಳಿಡುವದನ್ನು ನಾವು ಕೇಳುತ್ತಿದ್ದೇವೆ.
    ಜನರು ಅಂಜಿಕೊಂಡಿದ್ದಾರೆ; ನೆಮ್ಮದಿಯಿಲ್ಲದವರಾಗಿದ್ದಾರೆ.

“ಈ ಪ್ರಶ್ನೆಯನ್ನು ಕೇಳಿ ಪರಿಶೀಲಿಸಿರಿ.
    ಪುರುಷನು ಮಗುವಿಗೆ ಜನ್ಮಕೊಡಬಲ್ಲನೆ? ಖಂಡಿತವಾಗಿಯೂ ಇಲ್ಲ.
ಹಾಗಾದರೆ ಪ್ರತಿಯೊಬ್ಬ ಬಲಿಷ್ಠನೂ ಪ್ರಸವವೇದನೆಪಡುತ್ತಿರುವ
    ಸ್ತ್ರೀಯಂತೆ ತನ್ನ ಹೊಟ್ಟೆಯನ್ನು ಏಕೆ ಹಿಡಿದುಕೊಂಡಿದ್ದಾನೆ?
ಪ್ರತಿಯೊಬ್ಬನ ಮುಖವು ಸತ್ತವನ ಮುಖದಂತೆ ಏಕೆ ಬಿಳಿಚಿದೆ?
    ಏಕೆಂದರೆ ಜನರು ಬಹಳ ಭಯಪಟ್ಟಿದ್ದಾರೆ.

“ಇದು ಯಾಕೋಬ್ಯರಿಗೆ ಬಹು ಮುಖ್ಯವಾದ ಸಮಯ.
    ಇದು ಬಹಳ ಕಷ್ಟದ ಸಮಯ.
ಎಂದೂ ಇಂಥ ಕಷ್ಟದ ಸಮಯ ಬರುವದಿಲ್ಲ.
    ಆದರೆ ಯಾಕೋಬ್ ಇದರಿಂದ ಪಾರಾಗುವುದು.”

ಇದು ಸರ್ವಶಕ್ತನಾದ ಯೆಹೋವನ ನುಡಿ. “ಆ ಸಮಯದಲ್ಲಿ ನಾನು ಇಸ್ರೇಲರ ಮತ್ತು ಯೆಹೂದ್ಯರ ಹೆಗಲ ಮೇಲಿನ ನೊಗವನ್ನು ಮುರಿದುಬಿಡುವೆನು. ನಿಮಗೆ ಕಟ್ಟಿರುವ ಹಗ್ಗಗಳನ್ನು ಕಿತ್ತುಹಾಕುವೆನು. ಪರದೇಶದವರು ಮತ್ತೆಂದಿಗೂ ನನ್ನ ಜನರನ್ನು ದಾಸರನ್ನಾಗಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಇಸ್ರೇಲರು ಮತ್ತು ಯೆಹೂದ್ಯರು ಪರದೇಶಿಯರ ಸೇವೆಮಾಡುವುದಿಲ್ಲ. ಅವರು ತಮ್ಮ ದೇವರಾದ ಯೆಹೋವನ ಸೇವೆಯನ್ನೇ ಮಾಡುವರು, ಅವರು ತಮ್ಮ ರಾಜನಾದ ದಾವೀದನ ಸೇವೆಮಾಡುವರು, ನಾನು ಆ ರಾಜನನ್ನು ಕಳುಹಿಸುವೆನು.”

10 ಯೆಹೋವನು ಹೀಗೆಂದನು:
    “ನನ್ನ ಸೇವಕನಾದ ಯಾಕೋಬನೇ, ಭಯಪಡಬೇಡ!
ಇಸ್ರೇಲೇ, ಅಂಜಬೇಡ,
    ನಾನು ನಿಮ್ಮನ್ನು ಆ ದೂರಪ್ರದೇಶದಿಂದ ರಕ್ಷಿಸುವೆನು.
ಆ ದೂರದೇಶದಲ್ಲಿ ನೀವು ಬಂಧಿಗಳಾಗಿದ್ದೀರಿ,
    ಆದರೆ ನಾನು ನಿಮ್ಮ ವಂಶದವರನ್ನು ರಕ್ಷಿಸುತ್ತೇನೆ.
    ಅವರನ್ನು ಆ ನಾಡಿನಿಂದ ಮತ್ತೆ ಕರೆದುತರುತ್ತೇನೆ.
ಯಾಕೋಬು ಮತ್ತೆ ನೆಮ್ಮದಿಯಿಂದ ಇರುವುದು.
    ಜನರು ಯಾಕೋಬನನ್ನು ಪೀಡಿಸುವದಿಲ್ಲ;
ನನ್ನ ಜನರನ್ನು ಹೆದರಿಸುವ ಶತ್ರುಗಳಿರುವದಿಲ್ಲ.”
ಇದು ಯೆಹೋವನ ನುಡಿ.
11 “ಇಸ್ರೇಲರೇ, ಯೆಹೂದ್ಯರೇ ನಾನು ನಿಮ್ಮೊಂದಿಗಿದ್ದೇನೆ.
ನಾನು ನಿಮ್ಮನ್ನು ರಕ್ಷಿಸುತ್ತೇನೆ.
ನಾನು ನಿಮ್ಮನ್ನು ಆ ಜನಾಂಗಗಳ ಬಳಿಗೆ ಕಳುಹಿಸಿದೆ.
    ಆದರೆ ನಾನು ಆ ಎಲ್ಲಾ ಜನಾಂಗಗಳನ್ನು ಸಂಪೂರ್ಣವಾಗಿ ನಾಶಮಾಡುವೆನು.
ಇದು ನಿಜ. ನಾನು ಆ ಜನಾಂಗಗಳನ್ನು ನಾಶಮಾಡುವೆನು.
    ಆದರೆ ನಾನು ನಿಮ್ಮನ್ನು ನಾಶಮಾಡುವದಿಲ್ಲ.
ನೀವು ಮಾಡಿದ ದುಷ್ಕೃತ್ಯಗಳಿಗಾಗಿ ನಿಮಗೆ ದಂಡನೆಯಾಗಲೇಬೇಕು.
    ನಾನು ನಿಮ್ಮನ್ನು ಸರಿಯಾಗಿ ಶಿಕ್ಷಿಸುತ್ತೇನೆ.”

12 ಯೆಹೋವನು ಹೀಗೆನ್ನುತ್ತಾನೆ:
“ಇಸ್ರೇಲಿನ ಮತ್ತು ಯೆಹೂದದ ಜನರಾದ ನಿಮಗೆ ಗುಣವಾಗದ ಗಾಯವಾಗಿದೆ.
    ನಿಮಗೆ ವಾಸಿಯಾಗದ ನೋವಾಗಿದೆ.
13 ನಿಮ್ಮನ್ನು ನೋಡಿಕೊಳ್ಳಲು ಯಾರೂ ಇಲ್ಲ.
    ಆದ್ದರಿಂದ ನಿಮ್ಮ ಗಾಯಗಳು ವಾಸಿಯಾಗುವದಿಲ್ಲ.
14 ನೀವು ಅನೇಕ ಜನಾಂಗಗಳೊಡನೆ ಸ್ನೇಹ ಮಾಡಿದಿರಿ.
    ಆದರೆ ಆ ಜನಾಂಗಗಳು ನಿಮ್ಮ ಕಡೆಗೆ ಗಮನಕೊಡುವದಿಲ್ಲ.
    ನಿಮ್ಮ ‘ಸ್ನೇಹಿತರು’ ನಿಮ್ಮನ್ನು ಮರೆತಿದ್ದಾರೆ.
ನಾನು ಶತ್ರುವಿನಂತೆ ನಿಮ್ಮನ್ನು ನೋಯಿಸಿದೆ.
    ನಾನು ನಿಮಗೆ ಬಹಳ ಕಠಿಣವಾದ ಶಿಕ್ಷೆಯನ್ನು ಕೊಟ್ಟೆ.
ನಿಮ್ಮ ಮಹಾಪರಾಧಗಳಿಗಾಗಿ ನಾನು ಹೀಗೆ ಮಾಡಿದೆ.
    ನಿಮ್ಮ ಅನೇಕ ಪಾಪಗಳಿಗಾಗಿ ನಾನು ಹೀಗೆ ಮಾಡಿದೆ.
15 ಇಸ್ರೇಲೇ, ಯೆಹೂದವೇ, ನೀವು ನಿಮ್ಮ ಗಾಯಗಳಿಗಾಗಿ ಏಕೆ ಅರಚುವಿರಿ?
    ನಿಮ್ಮ ಗಾಯಗಳು ಆಳವಾಗಿವೆ ಮತ್ತು ಅದಕ್ಕೆ ಔಷಧಿಯಿಲ್ಲ.
ಯೆಹೋವನಾದ ನಾನು ನಿಮ್ಮ ಮಹಾಪರಾಧಕ್ಕಾಗಿ ಹೀಗೆಲ್ಲ ಮಾಡಿದೆ.
    ನಾನು ನಿಮ್ಮ ಅನೇಕ ಪಾಪಗಳಿಗಾಗಿ ಹೀಗೆಲ್ಲ ಮಾಡಿದೆ.
16 ಆ ಜನಾಂಗಗಳು ನಿಮ್ಮನ್ನು ನಾಶಗೊಳಿಸಿದವು.
    ಆದರೆ ಈಗ ಆ ಜನಾಂಗಗಳನ್ನು ನಾಶಪಡಿಸಲಾಗಿದೆ.
ಇಸ್ರೇಲೇ, ಯೆಹೂದವೇ, ನಿಮ್ಮ ಶತ್ರುಗಳು ಬಂಧಿಗಳಾಗುತ್ತಾರೆ.
ಅವರು ನಿಮ್ಮ ವಸ್ತುಗಳನ್ನು ಕದ್ದುಕೊಂಡಿದ್ದಾರೆ.
    ಆದರೆ ಬೇರೆಯವರು ಅವರ ವಸ್ತುಗಳನ್ನು ಕದಿಯುವರು.
ಅವರು ಯುದ್ಧದಲ್ಲಿ ನಿಮ್ಮ ವಸ್ತುಗಳನ್ನು ತೆಗೆದುಕೊಂಡರು.
    ಆದರೆ ಬೇರೆಯವರು ಯುದ್ಧದಲ್ಲಿ ಅವರ ವಸ್ತುಗಳನ್ನು ತೆಗೆದುಕೊಳ್ಳುವರು.”
17 ಇದು ಯೆಹೋವನ ನುಡಿ:
    “ನಾನು ಪುನಃ ನಿಮಗೆ ಆರೋಗ್ಯವನ್ನು ಕೊಡುವೆನು; ನಿಮ್ಮ ಗಾಯಗಳನ್ನು ವಾಸಿಮಾಡುವೆನು.
ಏಕೆಂದರೆ ಚೀಯೋನ್ ಭ್ರಷ್ಟಳಾದಳೆಂದೂ
    ‘ಯಾರಿಗೂ ಬೇಡವಾದ ನಗರ’ವೆಂದೂ ಬೇರೆಯವರು ಹೇಳಿದರು.”

18 ಯೆಹೋವನು ಹೀಗೆನ್ನುತ್ತಾನೆ,
“ಯಾಕೋಬಿನ ಜನರು ಈಗ ಬಂಧಿಗಳಾಗಿದ್ದಾರೆ.
    ಆದರೆ ಅವರು ಹಿಂತಿರುಗಿ ಬರುವರು.
    ಯಾಕೋಬಿನ ಮನೆಗಳ ಮೇಲೆ ನಾನು ಕನಿಕರ ತೋರುವೆನು.
ನಗರವು ಈಗ ಕೇವಲ ಹಾಳುಬಿದ್ದ
    ಮನೆಗಳಿಂದ ಕೂಡಿದ ಒಂದು ದಿಬ್ಬವಾಗಿದೆ.
    ಆದರೆ ಆ ನಗರವು ಮತ್ತೆ ನಿರ್ಮಿಸಲ್ಪಡುವುದು.
ಮುಂಚೆ ಇದ್ದ ಸ್ಥಳದಲ್ಲಿ ಅರಮನೆಯನ್ನು ಕಟ್ಟಲಾಗುವುದು.
19 ಆ ಸ್ಥಳಗಳಲ್ಲಿ ಜನರು ಸ್ತೋತ್ರಗೀತೆಗಳನ್ನು ಹಾಡುವರು.
    ಅಲ್ಲಿ ನಗುವಿನ ಧ್ವನಿಯು ಕೇಳಿಬರುವುದು.
ನಾನು ಅವರಿಗೆ ಹಲವಾರು ಮಕ್ಕಳನ್ನು ಕೊಡುವೆನು.
    ಇಸ್ರೇಲ್ ಮತ್ತು ಯೆಹೂದ ಚಿಕ್ಕವುಗಳಾಗಿರುವದಿಲ್ಲ.
ನಾನು ಅವುಗಳಿಗೆ ಗೌರವವನ್ನು ತರುತ್ತೇನೆ.
    ಯಾರೂ ಅವುಗಳನ್ನು ಕೀಳಾಗಿ ಕಾಣುವದಿಲ್ಲ.
20 ಯಾಕೋಬಿನ ಸಂತಾನದವರು ಮೊದಲಿನ ಸ್ಥಿತಿಯನ್ನು ಹೊಂದುವರು.
ನಾನು ಇಸ್ರೇಲರನ್ನೂ ಯೆಹೂದ್ಯರನ್ನೂ ಬಲಶಾಲಿಗಳನ್ನಾಗಿ ಮಾಡುವೆನು.
    ಅವರನ್ನು ಪೀಡಿಸುವ ಜನರನ್ನು ಶಿಕ್ಷಿಸುವೆನು.
21 ಅವರಲ್ಲೇ ಒಬ್ಬನು ಅವರಿಗೆ ನಾಯಕನಾಗಿರುವನು.
    ಆ ನಾಯಕನು ನನ್ನ ಜನರಿಂದಲೇ ಬರುವನು.
ನಾನು ಹೇಳಿದರೆ ಮಾತ್ರ ಜನರು ನನ್ನ ಹತ್ತಿರಕ್ಕೆ ಬರಲು ಸಾಧ್ಯ.
ಆದ್ದರಿಂದ ನಾನು ಆ ನಾಯಕನನ್ನು ನನ್ನ ಹತ್ತಿರ ಬರಲು ಹೇಳುವೆನು.
    ಅವನು ನನಗೆ ತುಂಬಾ ಹತ್ತಿರದವನಾಗುವನು.
22 ನೀವು ನನ್ನ ಜನರಾಗುವಿರಿ
ಮತ್ತು ನಾನು ನಿಮ್ಮ ದೇವರಾಗುವೆನು.”

23 ಯೆಹೋವನು ಬಹಳ ಕೋಪ ತಾಳಿದ್ದನು.
    ಅವನು ಜನರನ್ನು ಶಿಕ್ಷಿಸಿದನು.
ಆ ಶಿಕ್ಷೆಯು ಒಂದು ಬಿರುಗಾಳಿಯಂತೆ ಬಂದಿತು.
    ಆ ಶಿಕ್ಷೆಯು ದುಷ್ಟಜನರ ಮೇಲೆ ತೂಫಾನಿನಂತೆ ಬಂದಿತು.
24 ಜನರನ್ನು ಸಂಪೂರ್ಣವಾಗಿ ಶಿಕ್ಷಿಸುವವರೆಗೆ
    ಯೆಹೋವನು ಕೋಪಿಷ್ಟನಾಗಿಯೇ ಇರುವನು.
ಯೆಹೂದದ ಜನರಾದ ನೀವು ಅದನ್ನು
    ಕೊನೆಯ ದಿನಗಳಲ್ಲಿ ತಿಳಿದುಕೊಳ್ಳುವಿರಿ.

ಇಸ್ರೇಲಿನ ನವನಿರ್ಮಾಣ

31 ಯೆಹೋವನು ಈ ವಿಷಯಗಳನ್ನು ಹೇಳಿದನು: “ಆ ಸಮಯದಲ್ಲಿ ನಾನು ಇಸ್ರೇಲಿನ ಎಲ್ಲಾ ಗೋತ್ರಗಳ ದೇವರಾಗಿರುವೆನು; ಅವರು ನನ್ನ ಪ್ರಜೆಗಳಾಗಿರುವರು.”

ಯೆಹೋವನು ಹೀಗೆನ್ನುತ್ತಾನೆ:
“ಶತ್ರುವಿನ ಖಡ್ಗಕ್ಕೆ ಕೆಲವು ಜನರು ಆಹುತಿಯಾಗಿಲ್ಲ.
    ಅವರಿಗೆ ಮರುಭೂಮಿಯಲ್ಲಿ ನೆಮ್ಮದಿ ದೊರೆಯುವುದು.
    ಇಸ್ರೇಲು ವಿಶ್ರಾಂತಿಯನ್ನು ಬಯಸಿ ಬರುವುದು.”
ದೂರದಿಂದ ಯೆಹೋವನು
    ತನ್ನ ಜನರಿಗೆ ದರ್ಶನವನ್ನು ಕೊಡುವನು.

ಯೆಹೋವನು ಹೀಗೆನ್ನುವನು, “ನಾನು ನಿಮ್ಮನ್ನು ಪ್ರೀತಿಸುತ್ತೇನೆ, ನನ್ನ ಪ್ರೇಮವು ಶಾಶ್ವತವಾದದ್ದು.
ನಾನು ಎಂದೆಂದಿಗೂ
    ನಿಮ್ಮ ಹಿತೈಷಿಯಾಗಿರುವೆನು.
ನನ್ನ ವಧುವಾದ ಇಸ್ರೇಲೇ, ನಾನು ನಿನ್ನನ್ನು ಮತ್ತೆ ನಿರ್ಮಿಸುವೆನು,
    ಆಗ ನೀನು ಮತ್ತೆ ಒಂದು ಜನಾಂಗವಾಗುವೆ.
ನೀನು ಮೊದಲಿನಂತೆ ನಿನ್ನ ದಮ್ಮಡಿಯನ್ನು ತೆಗೆದುಕೊಂಡು
    ಸಂತೋಷದಿಂದ ನೃತ್ಯ ಮಾಡುವವರೊಡನೆ ನೃತ್ಯ ಮಾಡುವೆ.
ಇಸ್ರೇಲಿನ ರೈತರಾದ ನೀವು ಮತ್ತೆ ದ್ರಾಕ್ಷಿತೋಟಗಳನ್ನು ಬೆಳೆಸುವಿರಿ.
ನೀವು ಸಮಾರ್ಯ ನಗರದ ಸುತ್ತಮುತ್ತಲಿನ
    ಬೆಟ್ಟಗಳಲ್ಲಿ ಆ ದ್ರಾಕ್ಷಿತೋಟವನ್ನು ಬೆಳೆಸುವಿರಿ.
ರೈತರಾದ ನೀವು
    ಅದರ ಫಲವನ್ನು ಅನುಭವಿಸುವಿರಿ.
ಒಂದು ಕಾಲ ಬರುವುದು,
    ಆಗ ಕಾವಲುಗಾರರು,
‘ಬನ್ನಿ, ನಮ್ಮ ದೇವರಾದ ಯೆಹೋವನನ್ನು ಆರಾಧಿಸಲು
    ಚೀಯೋನಿಗೆ ಹೋಗೋಣ’ ಎಂದು ಕೂಗುವರು.
ಎಫ್ರಾಯೀಮಿನ ಬೆಟ್ಟಪ್ರದೇಶದ ಕಾವಲುಗಾರರು ಸಹ ಹೀಗೆಯೇ ಕೂಗುವರು.”

ಯೆಹೋವನು ಹೀಗೆಂದನು:
“ಸಂತೋಷದಿಂದಿರಿ, ಯಾಕೋಬಿಗೋಸ್ಕರ ಹಾಡಿರಿ.
    ಮಹಾ ಜನಾಂಗವಾದ ಇಸ್ರೇಲಿಗೋಸ್ಕರ ಹರ್ಷಧ್ವನಿ ಮಾಡಿರಿ.
ಸ್ತೋತ್ರಗೀತೆಗಳನ್ನು ಹಾಡಿರಿ.
    ‘ಯೆಹೋವನು ತನ್ನ ಜನರನ್ನು ರಕ್ಷಿಸಿದನು.
    ಇಸ್ರೇಲ್ ಜನಾಂಗದಲ್ಲಿ ಅಳಿದುಳಿದ ಜನರನ್ನು ಆತನು ರಕ್ಷಿಸಿದನು’ ಎಂದು ಕೂಗಿರಿ.
ನಾನು ಇಸ್ರೇಲರನ್ನು
    ಉತ್ತರದ ದೇಶದಿಂದ ತರುವೆನು.
ನಾನು ಜಗತ್ತಿನ ದೂರದೂರದ ಸ್ಥಳಗಳಿಂದ
    ಇಸ್ರೇಲರನ್ನು ಒಟ್ಟುಗೂಡಿಸುವೆನೆಂದು ತಿಳಿದುಕೊಳ್ಳಿರಿ.
ಅವರಲ್ಲಿ ಕೆಲವರು ಕುರುಡರಾಗಿರುವರು; ಕುಂಟರಾಗಿರುವರು,
    ಕೆಲವು ಸ್ತ್ರೀಯರು ಗರ್ಭಿಣಿಯರಾಗಿದ್ದು ಹೆರಿಗೆಯ ದಿನಗಳು ತುಂಬಿದವರಾಗಿರುತ್ತಾರೆ.
    ಬಹಳಷ್ಟು ಜನರು ಹಿಂತಿರುಗಿಬರುತ್ತಾರೆ.
ಆ ಜನರು ಹಿಂತಿರುಗಿ ಬರುವಾಗ ಅಳುತ್ತಿರುವರು.
    ಆದರೆ ನಾನು ಅವರಿಗೆ ದಾರಿತೋರಿಸುವೆನು, ಸಮಾಧಾನಪಡಿಸುವೆನು.
ನಾನು ಅವರನ್ನು ನದಿ ದಾಟಿಸಿಕೊಂಡು ಬರುವೆನು.
ಅವರು ಎಡವದಂತೆ ಸಮವಾದ ಮಾರ್ಗದಲ್ಲಿ
    ನಡೆಸಿಕೊಂಡು ಬರುವೆನು.
ನಾನು ಇಸ್ರೇಲಿನ ತಂದೆ;
ಎಫ್ರಾಯೀಮ್ ನನ್ನ ಚೊಚ್ಚಲ ಮಗ.
    ಆದ್ದರಿಂದಲೇ ನಾನು ಅವರನ್ನು ನಡೆಸಿಕೊಂಡು ಬರುವೆನು.

10 “ಜನಾಂಗಗಳೇ, ಯೆಹೋವನ ಈ ಸಂದೇಶವನ್ನು ಕೇಳಿರಿ.
ಈ ಸಂದೇಶವನ್ನು ಸಮುದ್ರದಡದ ದೂರದೂರದ ಪ್ರದೇಶಗಳಲ್ಲಿ ತಿಳಿಸಿರಿ.
‘ಇಸ್ರೇಲರನ್ನು ಚದರಿಸಿದಾತನು
    ಅವರನ್ನು ಮತ್ತೆ ಒಟ್ಟುಗೂಡಿಸುವನು.
ಆತನು ತನ್ನ ಹಿಂಡನ್ನು ಕುರುಬನಂತೆ
    ನೋಡಿಕೊಳ್ಳುವನು’ ಎಂದು ಹೇಳಿರಿ.
11 ಯೆಹೋವನು ಯಾಕೋಬ್ಯರನ್ನು ಹಿಂದಕ್ಕೆ ಕರೆದುಕೊಂಡು ಬರುವನು.
    ಯೆಹೋವನು ತನ್ನ ಜನರನ್ನು ಅವರಿಗಿಂತಲೂ ಬಲಿಷ್ಠರಾದ ಜನರಿಂದ ರಕ್ಷಿಸುವನು.
12 ಇಸ್ರೇಲಿನ ಜನರು ಚೀಯೋನ್ ಶಿಖರಕ್ಕೆ ಬರುವರು;
    ಸಂತೋಷದಿಂದ ನಲಿದಾಡುವರು.
ದೇವರು ಅವರಿಗೆ ಅನುಗ್ರಹಿಸುವ ಎಲ್ಲಾ ಶ್ರೇಷ್ಠವಾದ ವಸ್ತುಗಳಿಂದ
    ಸಂತೋಷಚಿತ್ತರಾದ ಅವರ ಮುಖಗಳು ಪ್ರಕಾಶಮಾನವಾಗುವವು.
ಯೆಹೋವನು ಅವರಿಗೆ ಧಾನ್ಯ, ಹೊಸ ದ್ರಾಕ್ಷಾರಸ,
    ಎಣ್ಣೆ, ಕುರಿಮರಿಗಳು ಮತ್ತು ಹಸುಗಳನ್ನು ದಯಪಾಲಿಸುವನು.
ಅವರು ಸಾಕಷ್ಟು ನೀರಿರುವ ತೋಟದಂತೆ ಲವಲವಿಕೆಯಿಂದ ಇರುವರು.
    ಇಸ್ರೇಲರು ಇನ್ನು ಯಾವ ತೊಂದರೆಗೂ ಒಳಗಾಗುವುದಿಲ್ಲ.
13 ಆಗ ಇಸ್ರೇಲಿನ ತರುಣಿಯರು
    ಸಂತೋಷದಿಂದ ನರ್ತಿಸುವರು.
ತರುಣರು ಮತ್ತು ವೃದ್ಧರು
    ಆ ನರ್ತನದಲ್ಲಿ ಭಾಗವಹಿಸುವರು.
ನಾನು ಅವರ ದುಃಖವನ್ನು ಸಂತೋಷವಾಗಿ ಪರಿವರ್ತಿಸುವೆನು.
    ನಾನು ಇಸ್ರೇಲರನ್ನು ಸಂತೈಸುವೆನು.
    ಅವರ ದುಃಖವನ್ನು ಹೋಗಲಾಡಿಸಿ ಅವರನ್ನು ಸಂತೋಷಪಡಿಸುವೆನು.
14 ಯಾಜಕರು ತಮಗೆ ಬೇಕಾಗುವದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೈವೇದ್ಯಗಳನ್ನು ಪಡೆಯುವರು.
    ನಾನು ಅವರಿಗೆ ಕೊಡುವ ಉತ್ತಮ ವಸ್ತುಗಳನ್ನು ಮನದಣಿಯುವ ಹಾಗೆ ಅನುಭವಿಸಿ ನನ್ನ ಜನರು ತೃಪ್ತಿಪಡುವರು.”
ಇದು ಯೆಹೋವನ ನುಡಿ.

15 ಯೆಹೋವನು ಹೀಗೆನ್ನುತ್ತಾನೆ:
“ರಾಮದಲ್ಲಿ ಅತಿ ದುಃಖದಿಂದ ಗೋಳಾಡುವ
    ಒಂದು ಧ್ವನಿಯು ಕೇಳಿಬರುತ್ತದೆ.
ರಾಹೇಲಳು[a] ತನ್ನ ಮಕ್ಕಳಿಗಾಗಿ ಗೋಳಾಡುವಳು.
    ಅವಳ ಮಕ್ಕಳು ಸತ್ತುಹೋದುದರಿಂದ
    ರಾಹೇಲಳು ಸಮಾಧಾನ ಹೊಂದುವದಕ್ಕೆ ಒಪ್ಪಲಾರಳು.”

16 ಆದರೆ ಯೆಹೋವನು, “ಅಳುವದನ್ನು ನಿಲ್ಲಿಸು.
    ಕಣ್ಣಿನಲ್ಲಿ ನೀರು ತುಂಬಿಕೊಳ್ಳಬೇಡ.
ನಿನ್ನ ಕೆಲಸಕ್ಕಾಗಿ ನಿನಗೆ ಪ್ರತಿಫಲ ಸಿಕ್ಕುವುದು” ಎಂದು ಹೇಳುವನು.
ಇದು ಯೆಹೋವನ ನುಡಿ.
“ಇಸ್ರೇಲರು ತಮ್ಮ ಶತ್ರುಗಳ ಪ್ರದೇಶದಿಂದ ಹಿಂತಿರುಗಿ ಬರುವರು.
17 ಆದ್ದರಿಂದ ಇಸ್ರೇಲೇ, ನಿನ್ನ ಮಕ್ಕಳು
    ತಮ್ಮ ದೇಶಕ್ಕೆ ಹಿಂತಿರುಗಿ ಬರುವರೆಂಬ ನಿರೀಕ್ಷೆ ನಿನಗಿರಲಿ.”
ಇದು ಯೆಹೋವನ ನುಡಿ.
18 “ಎಫ್ರಾಯೀಮ್ ಅಳುವುದನ್ನು ನಾನು ಕೇಳಿದ್ದೇನೆ.
ಎಫ್ರಾಯೀಮು ಹೀಗೆ ಹೇಳುವದನ್ನು ನಾನು ಕೇಳಿದ್ದೇನೆ.
    ‘ಯೆಹೋವನೇ, ನೀನು ನಿಜವಾಗಿ ನನ್ನನ್ನು ದಂಡಿಸಿದೆ.
    ನಾನು ಪಾಠವನ್ನು ಕಲಿತೆನು.
    ನಾನು ತರಬೇತಿ ಹೊಂದದ ಒಂದು ಹೋರಿಯುಂತಿದ್ದೆನು.
ನನ್ನನ್ನು ದಂಡಿಸುವದನ್ನು ದಯವಿಟ್ಟು ನಿಲ್ಲಿಸು.
    ನಾನು ನಿನ್ನಲ್ಲಿಗೆ ಹಿಂದಿರುಗಿ ಬರುತ್ತೇನೆ.
    ನಿಜವಾಗಿಯೂ ನೀನೇ ನನ್ನ ದೇವರಾದ ಯೆಹೋವನು.
19 ಯೆಹೋವನೇ, ನಾನು ನಿನಗೆ ದೂರವಾಗಿ ಅಲೆದಾಡಿದೆನು.
    ಆದರೆ ನಾನು ಮಾಡಿದ ದುಷ್ಕೃತ್ಯಗಳ ಬಗ್ಗೆ ತಿಳಿದುಕೊಂಡೆನು.
    ಆದ್ದರಿಂದ ನಾನು ನನ್ನ ಮನಸ್ಸನ್ನೂ ಜೀವನವನ್ನೂ ಪರಿವರ್ತಿಸಿಕೊಂಡೆ.
ತಾರುಣ್ಯಾವಸ್ಥೆಯಲ್ಲಿ ನಾನು ಮಾಡಿದ ಮೂರ್ಖತನಕ್ಕಾಗಿ ಲಜ್ಜೆಗೊಂಡೆನು; ನಾಚಿಕೆಪಟ್ಟೆನು.’”
20 ಯೆಹೋವನು ಹೀಗೆನ್ನುತ್ತಾನೆ:
“ಎಫ್ರಾಯೀಮ್ ನನ್ನ ಪ್ರೀತಿಯ ಮಗನೆಂಬುದು ನೀನು ಬಲ್ಲೆ.
    ನಾನು ಆ ಮಗುವನ್ನು ಪ್ರೀತಿಸುತ್ತೇನೆ.
ಹೌದು, ನಾನು ಹಲವು ಸಲ ಎಫ್ರಾಯೀಮನ ವಿರುದ್ಧವಾಗಿ ಮಾತನಾಡುತ್ತೇನೆ.
    ಆದಾಗ್ಯೂ ನಾನು ಅವನನ್ನು ಜ್ಞಾಪಿಸಿಕೊಳ್ಳುತ್ತೇನೆ.
ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ.
    ನಾನು ನಿಜವಾಗಿಯೂ ಅವನನ್ನು ಸಂತೈಸಬಯಸುತ್ತೇನೆ.”
ಇದು ಯೆಹೋವನ ನುಡಿ.

21 “ಇಸ್ರೇಲರೇ, ದಾರಿತೋರುವ
    ಕಂಬಗಳನ್ನೂ ಕೈಮರಗಳನ್ನೂ ನೆಡಿರಿ.
ನೀವು ಪ್ರಯಾಣ ಮಾಡುತ್ತಿರುವ ರಸ್ತೆಯನ್ನು ಗಮನಿಸಿರಿ.
    ನಿಮ್ಮ ಊರುಗಳಿಗೆ ಹಿಂತಿರುಗಿ ಬನ್ನಿ.
ನನ್ನ ವಧುವಾದ ಇಸ್ರೇಲೇ, ಮನೆಗೆ ಬಾ.
22 ನೀನು ಅಪನಂಬಿಗಸ್ತಳಾದ ಮಗಳಾಗಿದ್ದೆ.
    ಆದರೆ ನೀನು ಬದಲಾವಣೆ ಹೊಂದಿದೆ.
    ಈಗ ನೀನು ಮನೆಗೆ ಹಿಂದಿರುಗಿ ಬರಲು ಎಷ್ಟು ಹೊತ್ತು ಕಾದುಕೊಂಡಿರುವೆ.

“ಯೆಹೋವನು ಲೋಕದಲ್ಲಿ ಅಪೂರ್ವವಾದದ್ದನ್ನು ಮಾಡಿದ್ದಾನೆ.
    ಹೆಂಗಸು ಗಂಡಸನ್ನು ಕಾಪಾಡುವಳು.”

23 ಇಸ್ರೇಲಿನ ದೇವರೂ ಸರ್ವಶಕ್ತನಾದ ಯೆಹೋವನೂ ಹೀಗೆನ್ನುತ್ತಾನೆ: “ನಾನು ಯೆಹೂದದ ಜನರಿಗಾಗಿ ಮತ್ತೆ ಒಳ್ಳೆಯದನ್ನು ಮಾಡುವೆನು. ಸೆರೆಯಾಳುಗಳಾಗಿ ಒಯ್ಯಲ್ಪಟ್ಟಿದ್ದವರನ್ನು ನಾನು ಮತ್ತೆ ಕರೆದುತರುವೆನು. ಆಗ ಅವರು ಯೆಹೂದನಾಡಿನಲ್ಲಿಯೂ ಅದರ ನಗರಗಳಲ್ಲಿಯೂ ಹೀಗೆನ್ನುವರು: ‘ನ್ಯಾಯವಾದ ನಿವಾಸವೇ, ಪವಿತ್ರ ಪರ್ವತವೇ, ಯೆಹೋವನು ನಿನ್ನನ್ನು ಆಶೀರ್ವದಿಸಲಿ.’

24 “ಯೆಹೂದದ ಎಲ್ಲಾ ಊರುಗಳಲ್ಲಿ ಜನರು ಪರಸ್ಪರ ಶಾಂತಿಯಿಂದ ವಾಸಿಸುವರು. ರೈತರೂ ದನಕುರಿಗಳನ್ನು ಮೇಯಿಸುವ ಜನರೂ ಶಾಂತಿಯಿಂದ ಯೆಹೂದದಲ್ಲಿ ವಾಸಿಸುವರು. 25 ದುಬರ್ಲಗೊಂಡ ಮತ್ತು ದಣಿದ ಜನರಿಗೆ ನಾನು ಶಕ್ತಿಯನ್ನೂ ವಿಶ್ರಾಂತಿಯನ್ನೂ ಕೊಡುವೆನು.”

26 ಆಗ ನಾನು ಎಚ್ಚೆತ್ತು ಸುತ್ತಮುತ್ತಲು ನೋಡಿದೆ. ಅದೊಂದು ಬಹಳ ಹಿತಕರವಾದ ನಿದ್ರೆಯಾಗಿತ್ತು.

27 ಯೆಹೋವನು ಹೀಗೆ ನುಡಿದನು: “ಇಸ್ರೇಲ್ ಮತ್ತು ಯೆಹೂದ ವಂಶಗಳು ಬೆಳೆಯುವದಕ್ಕೆ ನಾನು ಸಹಾಯ ಮಾಡುವ ದಿನಗಳು ಬರುತ್ತಿವೆ. ಸಸಿಗಳನ್ನು ನೆಟ್ಟ ಮೇಲೆ ಅವುಗಳನ್ನು ನೋಡಿಕೊಳ್ಳುವ ಹಾಗೆ ಅವರ ಮಕ್ಕಳು ಮತ್ತು ಅವರ ಪಶುಗಳು ಬೆಳೆಯುವದಕ್ಕೂ ನಾನು ಸಹಾಯ ಮಾಡುತ್ತೇನೆ. 28 ಪೂರ್ವಕಾಲದಲ್ಲಿ, ಇಸ್ರೇಲ್ ಮತ್ತು ಯೆಹೂದಗಳ ಮೇಲೆ ನಾನು ಗಮನವಿಟ್ಟಿದ್ದೆನು. ಆದರೆ ನಾನು ಅವರನ್ನು ತೆಗೆದುಹಾಕುವ ಸಮಯಕ್ಕಾಗಿ ಕಾದುಕೊಂಡಿದ್ದೆ. ನಾನು ಅವರನ್ನು ಕೆಡವಿದೆ; ಅವರನ್ನು ಹಾಳುಮಾಡಿದೆ. ಅವರಿಗೆ ಅನೇಕ ಕಷ್ಟಗಳನ್ನು ಕೊಟ್ಟೆ. ಆದರೆ ಈಗ ಅವರನ್ನು ಅಭಿವೃದ್ಧಿಪಡಿಸುವದಕ್ಕಾಗಿ ಅವರನ್ನು ಬಲಶಾಲಿಗಳನ್ನಾಗಿ ಮಾಡಲು ಅವರ ಕಡೆಗೆ ಗಮನಹರಿಸುತ್ತೇನೆ” ಇದು ಯೆಹೋವನ ನುಡಿ.

29 “‘ಹುಳಿದ್ರಾಕ್ಷಿ ತಿಂದವರು ತಂದೆತಾಯಿಗಳು!
    ರುಚಿ ಕಂಡದ್ದು ಅವರ ಮಕ್ಕಳು!’

ಎಂಬ ಗಾದೆಯನ್ನು ಆಗ ಜನರು ಬಳಸುವ ಅವಶ್ಯಕತೆ ಇರುವದಿಲ್ಲ. 30 ಪ್ರತಿಯೊಬ್ಬನು ತನ್ನ ಪಾಪದ ನಿಮಿತ್ತವೇ ಸಾಯುವನು. ಹುಳಿದ್ರಾಕ್ಷಿಯನ್ನು ತಿಂದವನೇ ಅದರ ರುಚಿಯನ್ನು ಕಾಣುವನು.”

ಹೊಸ ಒಡಂಬಡಿಕೆ

31 ಯೆಹೋವನು ಹೀಗೆಂದನು: “ನಾನು ಇಸ್ರೇಲರೊಂದಿಗೂ ಮತ್ತು ಯೆಹೂದ್ಯರೊಂದಿಗೂ ಒಂದು ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ಸಮಯ ಬರುತ್ತಿದೆ. 32 ಈ ಒಡಂಬಡಿಕೆ ನಾನು ಅವರ ಪೂರ್ವಿಕರೊಂದಿಗೆ ಮಾಡಿಕೊಂಡ ಒಡಂಬಡಿಕೆಯಂತಲ್ಲ. ನಾನು ಅವರ ಕೈಹಿಡಿದು ಈಜಿಪ್ಟಿನಿಂದ ಹೊರತಂದಾಗ ಮಾಡಿಕೊಂಡ ಒಡಂಬಡಿಕೆಯದು. ನಾನು ಅವರ ಒಡೆಯನಾಗಿದ್ದೆ. ಆದರೆ ಅವರು ಒಡಂಬಡಿಕೆಯನ್ನು ಮುರಿದರು.” ಇದು ಯೆಹೋವನ ನುಡಿ.

33 ಯೆಹೋವನು ಹೀಗೆನ್ನುತ್ತಾನೆ: “ಭವಿಷ್ಯದಲ್ಲಿ ಇಸ್ರೇಲಿನ ಜನರೊಂದಿಗೆ ನಾನು ಈ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ. ನಾನು ನನ್ನ ಉಪದೇಶವನ್ನು ಅವರ ಅಂತರಂಗದಲ್ಲಿ ಇಡುವೆನು; ಅವುಗಳನ್ನು ಅವರ ಹೃದಯಗಳ ಮೇಲೆ ಬರೆಯುವೆನು. ನಾನು ಅವರ ದೇವರಾಗಿರುವೆನು, ಅವರು ನನ್ನ ಜನರಾಗಿರುವರು. 34 ತಮ್ಮ ನೆರೆಮನೆಯವರಿಗೂ ತಮ್ಮ ಬಂಧುಬಳಗದವರಿಗೂ ಯಾರೂ ಯೆಹೋವನ ಬಗ್ಗೆ ಹೇಳಿಕೊಡಬೇಕಾಗಿಲ್ಲ. ಯಾಕೆಂದರೆ ಅತಿ ಕನಿಷ್ಠರಿಂದ ಅತಿ ಪ್ರಮುಖರವರೆಗೆ ಎಲ್ಲರೂ ನನ್ನನ್ನು ತಿಳಿದುಕೊಂಡಿರುವರು. ಅವರು ಮಾಡಿದ ದುಷ್ಕೃತ್ಯಗಳಿಗಾಗಿ ನಾನು ಅವರನ್ನು ಕ್ಷಮಿಸುವೆನು. ನಾನು ಅವರ ಪಾಪಗಳನ್ನು ಮರೆತುಬಿಡುವೆನು.” ಇದು ಯೆಹೋವನ ನುಡಿ.

ಯೆಹೋವನು ಇಸ್ರೇಲನ್ನು ಎಂದಿಗೂ ತ್ಯಜಿಸನು

35 ಯೆಹೋವನು ಹೀಗೆನ್ನುತ್ತಾನೆ:
“ಹಗಲಿನಲ್ಲಿ ಸೂರ್ಯನು ಪ್ರಕಾಶಿಸುವಂತೆ ಮಾಡುವಾತನೂ
    ರಾತ್ರಿಯಲ್ಲಿ ಚಂದ್ರನೂ ನಕ್ಷತ್ರಗಳೂ ಪ್ರಕಾಶಿಸುವಂತೆ ಮಾಡುವಾತನೂ
ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸುವಂತೆ ಸಮುದ್ರವನ್ನು ಕೆರಳಿಸುವಾತನೂ
    ಸರ್ವಶಕ್ತನಾದ ಯೆಹೋವನೆಂಬ ಹೆಸರಿನಿಂದ ಪ್ರಖ್ಯಾತನೂ ಆಗಿರುವ ಯೆಹೋವನು.”

36 ಯೆಹೋವನು ಹೀಗೆನ್ನುತ್ತಾನೆ:
“ಸೂರ್ಯ, ಚಂದ್ರ, ನಕ್ಷತ್ರ ಮತ್ತು ಸಮುದ್ರಗಳ ಮೇಲಿನ ಹತೋಟಿಯನ್ನು ನಾನು ಕಳೆದುಕೊಂಡಾಗ ಮಾತ್ರ
    ಇಸ್ರೇಲಿನ ಪೀಳಿಗೆಯು ಒಂದು ಜನಾಂಗವಾಗಿ ನಿಂತುಹೋಗುವುದು.”

37 ಯೆಹೋವನು ಹೀಗೆನ್ನುತ್ತಾನೆ: “ನಾನು ಇಸ್ರೇಲ್ ಸಂತತಿಯವರನ್ನು ತಿರಸ್ಕರಿಸುವುದೇ ಇಲ್ಲ.
    ಜನರಿಗೆ ಆಕಾಶಮಂಡಲವನ್ನು ಅಳೆಯಲೂ
    ಭೂಗರ್ಭದ ಪರಿಪೂರ್ಣ ರಹಸ್ಯವನ್ನು ಅರಿಯಲೂ ಸಾಧ್ಯವೇ?
ಒಂದುವೇಳೆ ಸಾಧ್ಯವಾದರೆ, ಇಸ್ರೇಲರು ಮಾಡಿದ ದುಷ್ಕೃತ್ಯಗಳಿಗಾಗಿ ನಾನು ಇಸ್ರೇಲರನ್ನು ನಿರಾಕರಿಸಿದರೂ ನಿರಾಕರಿಸಬಹುದು.”
ಇದು ಯೆಹೋವನ ಸಂದೇಶ.

ಹೊಸ ಜೆರುಸಲೇಮ್

38 ಇದು ಯೆಹೋವನ ನುಡಿ: “ಯೆಹೋವನಿಗಾಗಿ ಜೆರುಸಲೇಮ್ ನಗರವನ್ನು ಮತ್ತೆ ಕಟ್ಟುವ ಕಾಲ ಬರುತ್ತಿದೆ. ಹನನೇಲನ ಬುರುಜಿನಿಂದ ಮೂಲೆಯ ಬಾಗಿಲಿನವರೆಗೆ ಇಡೀ ಪಟ್ಟಣವನ್ನು ಮತ್ತೊಮ್ಮೆ ಕಟ್ಟಲಾಗುವುದು. 39 ಅಳತೆಯ ನೂಲು ಮೂಲೆಯ ಬಾಗಿಲಿನಿಂದ ಗಾರೇಬ್ ಗುಡ್ಡದ ನೇರವಾಗಿ ನೆಟ್ಟಗೆ ಎಳೆಯಲ್ಪಟ್ಟು ಗೋಯದ ಕಡೆಗೆ ತಿರುಗುವುದು. 40 ಹೆಣಗಳನ್ನು ಮತ್ತು ಬೂದಿಯನ್ನು ಚೆಲ್ಲುವ ಇಡೀ ಕಣಿವೆ ಪ್ರದೇಶ ಯೆಹೋವನಿಗೆ ಪವಿತ್ರಸ್ಥಳವಾಗುವುದು. ಕಿದ್ರೋನ್ ಹಳ್ಳ, ಪೂರ್ವದಿಕ್ಕಿನ ಕುದುರೆಬಾಗಿಲಿನ ಮೂಲೆ, ಇವುಗಳವರೆಗಿರುವ ಬೆಟ್ಟಪ್ರದೇಶ ಅದರಲ್ಲಿ ಸೇರುವುದು. ಆ ಪ್ರದೇಶವೆಲ್ಲ ಯೆಹೋವನಿಗೆ ಪವಿತ್ರಸ್ಥಳವಾಗುವುದು. ಜೆರುಸಲೇಮ್ ನಗರವು ಇನ್ನುಮೇಲೆ ಎಂದಿಗೂ ಕೆಡವಲ್ಪಡದು; ಹಾಳಾಗದು!”

ಫಿಲೆಮೋನನಿಗೆ

ಯೇಸು ಕ್ರಿಸ್ತನ ನಿಮಿತ್ತ ಸೆರೆಯಲ್ಲಿರುವ ಪೌಲನೂ ಸಹೋದರನಾದ ತಿಮೊಥೆಯನೂ ನಮಗೆ ಪ್ರಿಯನಾದ ಮತ್ತು ನಮ್ಮ ಜೊತೆಕೆಲಸದವನಾದ ಫಿಲೆಮೋನನಿಗೆ, ಸಹೋದರಿಯಾದ ಅಪ್ಫಿಯಳಿಗೆ, ನಮ್ಮ ಜೊತೆಸೈನಿಕನಾದ ಅರ್ಖಿಪ್ಪನಿಗೆ ಮತ್ತು ಫಿಲೆಮೋನನ ಮನೆಯಲ್ಲಿ ಸೇರಿಬರುವ ಸಭೆಯವರೆಲ್ಲರಿಗೆ ಬರೆಯುವ ಪತ್ರ.

ನಮ್ಮ ತಂದೆಯಾದ ದೇವರ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಕೃಪೆಯೂ ಶಾಂತಿಯೂ ನಿಮ್ಮೊಂದಿಗಿರಲಿ.

ಫಿಲೆಮೋನನ ಪ್ರೀತಿ ಮತ್ತು ನಂಬಿಕೆ

ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ನೆನಪು ಮಾಡಿಕೊಳ್ಳುತ್ತಿರುತ್ತೇನೆ. ಯಾವಾಗಲೂ ನಿನಗಾಗಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ದೇವರ ಪರಿಶುದ್ಧ ಜನರ ಮೇಲೆ ನಿನಗಿರುವ ಪ್ರೀತಿಯನ್ನು ಮತ್ತು ಪ್ರಭುವಾದ ಯೇಸುವಿನಲ್ಲಿ ನಿನಗಿರುವ ನಂಬಿಕೆಯನ್ನು ಕೇಳಿದ್ದರಿಂದ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ. ನೀನು ನಿನ್ನ ನಂಬಿಕೆಯನ್ನು ಹಂಚಿಕೊಳ್ಳುವುದರಲ್ಲಿ ಕಾರ್ಯ ನಿರತನಾಗಿರುವುದರ ಮೂಲಕ ಕ್ರಿಸ್ತನಲ್ಲಿ ನಮಗಿರುವ ಎಲ್ಲಾ ಸುವರಗಳನ್ನು ಅರ್ಥಮಾಡಿಕೊಳ್ಳುವಂತಾಗಲೆಂದು ಪ್ರಾರ್ಥಿಸುತ್ತೇನೆ. ನನ್ನ ಸಹೋದರನೇ, ದೇವಜನರಿಗೆ ನೀನು ಪ್ರೀತಿಯನ್ನು ತೋರಿಸಿ ಅವರ ಹೃದಯಗಳನ್ನು ಸಂತೈಸಿರುವೆ. ಇದು ನನಗೆ ಹೆಚ್ಚಿನ ಸಂತಸವನ್ನೂ ನೆಮ್ಮದಿಯನ್ನೂ ತಂದುಕೊಟ್ಟಿದೆ.

ಒನೇಸಿಮನನ್ನು ಸಹೋದರನಂತೆ ಸೇರಿಸಿಕೊ

ನೀನು ಮಾಡಬೇಕಾದ ಕಾರ್ಯವೊಂದಿದೆ. ಅದನ್ನು ಮಾಡಬೇಕೆಂದು ಆಜ್ಞಾಪಿಸಲು ನನಗೆ ಕ್ರಿಸ್ತನಲ್ಲಿ ಅಧಿಕಾರವಿದೆ. ಆದರೆ ನಾನು ನಿನಗೆ ಆಜ್ಞಾಪಿಸದೆ ಪ್ರೀತಿಯಿಂದ ನಿನ್ನನ್ನು ಕೇಳಿಕೊಳ್ಳುತ್ತಿದ್ದೇನೆ. ಪೌಲನಾದ ನಾನು ಈಗ ವೃದ್ಧನಾಗಿದ್ದೇನೆ ಮತ್ತು ಕ್ರಿಸ್ತ ಯೇಸುವಿನ ನಿಮಿತ್ತ ಸೆರೆಯಲ್ಲಿದ್ದೇನೆ. 10 ನನ್ನ ಮಗನಾದ ಒನೇಸಿಮನಿಗಾಗಿ ನಿನ್ನನ್ನು ಕೇಳಿಕೊಳ್ಳುತ್ತೇನೆ. ನಾನು ಸೆರೆಮನೆಯಲ್ಲಿರುವಾಗ ಅವನು ನನ್ನ ಮಗನಾದನು. 11 ಹಿಂದೆ ಅವನು ನಿನಗೆ ನಿಷ್ಪ್ರಯೋಜಕನಾಗಿದ್ದನು. ಆದರೆ ಈಗ ಅವನು ನಿನಗೂ ನನಗೂ ಪ್ರಯೋಜನ ಉಳ್ಳವನಾಗಿದ್ದಾನೆ.

12 ಅವನನ್ನು ನಿನ್ನ ಬಳಿಗೆ ಹಿಂದಕ್ಕೆ ಕಳುಹಿಸುತ್ತಿದ್ದೇನೆ. ಅವನೊಂದಿಗೆ ನನ್ನ ಹೃದಯವನ್ನೇ ಕಳುಹಿಸುತ್ತಿದ್ದೇನೆ. 13 ನಾನೀಗ ಸುವಾರ್ತೆಗೋಸ್ಕರ ಸೆರೆಯಲ್ಲಿರುವಾಗ ನನ್ನ ಸಹಾಯಕ್ಕೆ ಅವನನ್ನು ಇರಿಸಿಕೊಳ್ಳಬೇಕೆಂದಿದ್ದೆನು. ಇಲ್ಲಿ ಅವನು ನನಗೆ ಸಹಾಯ ಮಾಡುತ್ತಾ ನಿನ್ನ ಸೇವೆಯನ್ನೂ ಮಾಡಬಹುದಾಗಿತ್ತು. 14 ಆದರೆ ಈ ವಿಷಯದಲ್ಲಿ ನಿನ್ನ ಒಪ್ಪಿಗೆ ಪಡೆಯದೆ ನಿರ್ಧಾರ ತೆಗೆದುಕೊಳ್ಳಲು ನನಗೆ ಇಷ್ಟವಿಲ್ಲ. ಏಕೆಂದರೆ ನೀನು ಮಾಡುವ ಒಳ್ಳೆಕಾರ್ಯವು ಮನಃ ಪೂರ್ವಕವಾಗಿರಬೇಕೇ ಹೊರತು ಬಲತ್ಕಾರದಿಂದಾಗಕೂಡದು.

15 ಒನೇಸಿಮನು ಸ್ವಲ್ಪಕಾಲ ನಿನ್ನನ್ನು ಅಗಲಿದ್ದನು. ಬಹುಶಃ ಅವನು ಎಂದೆಂದಿಗೂ ನಿನ್ನವನಾಗಬೇಕೆಂದು ಹಾಗಾಯಿತೇನೊ! 16 ಇನ್ನು ಮೇಲೆ ಅವನು ನಿನಗೆ ಕೇವಲ ಗುಲಾಮನಾಗಿರದೆ ಗುಲಾಮನಿಗಿಂತಲೂ ಹೆಚ್ಚಿನ ಪ್ರಿಯ ಸಹೋದರನಾಗಿದ್ದಾನೆ. ಅವನನ್ನು ಬಹಳವಾಗಿ ಪ್ರೀತಿಸುತ್ತೇನೆ. ಆದರೆ ನೀನು ಅವನನ್ನು ಮತ್ತಷ್ಟು ಹೆಚ್ಚಾಗಿ ಪ್ರೀತಿಸುವೆ. ನೀನು ಅವನನ್ನು ಮನುಷ್ಯನೆಂದು ಮತ್ತು ಪ್ರಭುವಿನಲ್ಲಿ ಒಬ್ಬ ಸಹೋದರನೆಂದು ಪ್ರೀತಿಸುವೆ.

17 ನನ್ನನ್ನು ನಿನ್ನ ಸಹಭಾಗಿಯೆಂದು ನೀನು ಒಪ್ಪಿಕೊಳ್ಳುವುದಾದರೆ, ಒನೇಸಿಮನನ್ನು ಮತ್ತೆ ಸೇರಿಸಿಕೊ. ನೀನು ನನ್ನನ್ನು ಬರಮಾಡಿಕೊಂಡಂತೆ ಅವನನ್ನೂ ಬರಮಾಡಿಕೊ. 18 ಅವನು ನಿನಗೇನಾದರೂ ತಪ್ಪು ಮಾಡಿದ್ದರೆ ಅದನ್ನು ನನ್ನ ಮೇಲೆ ಹೊರಿಸು; ನಿನಗೇನಾದರೂ ಕೊಡಬೇಕಿದ್ದರೆ, ಅದನ್ನು ನನ್ನ ಲೆಕ್ಕಕ್ಕೆ ಹಾಕು. 19 ಪೌಲನಾದ ನಾನು ನನ್ನ ಸ್ವಂತ ಕೈಗಳಿಂದ ಇದನ್ನು ಬರೆಯುತ್ತಿದ್ದೇನೆ. ಒನೇಸಿಮನು ನಿನಗೆ ಏನಾದರೂ ಕೊಡಬೇಕಾಗಿದ್ದರೆ ನಾನು ಅದನ್ನು ಕೊಡುತ್ತೇನೆ. ನಿನ್ನ ಆತ್ಮಿಕ ಜೀವಿತದ ವಿಷಯದಲ್ಲಿ ನೀನು ನಿನಗೆ ನನಗೆಷ್ಟು ಋಣಿಯಾಗಿರುವೆ ಎಂದು ನಾನೇನೂ ಹೇಳುವುದಿಲ್ಲ. 20 ನನ್ನ ಸಹೋದರನೇ, ಪ್ರಭುವಿನಲ್ಲಿ ನಾನು ನಿನ್ನಿಂದ ಒಂದು ಸಹಾಯವನ್ನು ಹೊಂದಿಕೊಳ್ಳಬಹುದೇ? ಅದೇನೆಂದರೆ ನೀನು ನನ್ನ ಹೃದಯವನ್ನು ಕ್ರಿಸ್ತನಲ್ಲಿ ಸಂತೈಸು. 21 ನಾನು ಕೇಳಿಕೊಂಡದ್ದನ್ನು ನೀನು ಮಾಡುವೆ ಎಂದು ನನಗೆ ಗೊತ್ತಿರುವುದರಿಂದಲೇ ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ನಾನು ಕೇಳಿದ್ದಕ್ಕಿಂತಲೂ ಹೆಚ್ಚಿಗೆ ನೀನು ಮಾಡುವೆ ಎಂದು ನನಗೆ ತಿಳಿದಿದೆ.

22 ನಾನು ಇಳಿದುಕೊಳ್ಳಲು ಒಂದು ಕೊಠಡಿಯನ್ನು ದಯವಿಟ್ಟು ಸಿದ್ಧಗೊಳಿಸು. ದೇವರು ನಿನ್ನ ಪ್ರಾರ್ಥನೆಗಳನ್ನು ಕೇಳಿ ನನ್ನನ್ನು ನಿಮ್ಮ ಬಳಿಗೆ ಬರಲು ಅವಕಾಶ ನೀಡುವನೆಂಬ ಭರವಸೆ ನನಗಿದೆ.

ಅಂತಿಮ ವಂದನೆಗಳು

23 ಕ್ರಿಸ್ತಯೇಸುವಿನ ನಿಮಿತ್ತ ನನ್ನೊಂದಿಗೆ ಸೆರೆಮನೆಯಲ್ಲಿರುವ ಎಪಫ್ರನು ವಂದನೆ ತಿಳಿಸಿದ್ದಾನೆ. 24 ಮಾರ್ಕ, ಆರಿಸ್ತಾರ್ಕ, ದೇಮ, ಲೂಕ ಇವರುಗಳು ನಿನಗೆ ವಂದನೆ ತಿಳಿಸಿದ್ದಾರೆ. ಇವರೆಲ್ಲರೂ ನನ್ನ ಜೊತೆಕೆಲಸಗಾರರಾಗಿದ್ದಾರೆ.

25 ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮ ಆತ್ಮದೊಂದಿಗಿರಲಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International