Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
ಯೆಹೆಜ್ಕೇಲ 11-13

ನಾಯಕರ ವಿರುದ್ಧ ಪ್ರವಾದನೆಗಳು

11 ಆಗ ಆತ್ಮವು ನನ್ನನ್ನು ಯೆಹೋವನಾಲಯದ ಪೂರ್ವದ ಬಾಗಿಲಿಗೆ ಕೊಂಡೊಯ್ಯಿತು. ಬಾಗಿಲಿನ ಪ್ರವೇಶ ಸ್ಥಳದಲ್ಲಿ ನಾನು ಇಪ್ಪತ್ತೈದು ಮಂದಿ ಜನರನ್ನು ನೋಡಿದೆನು. ಅವರಲ್ಲಿ ಅಜ್ಜೂರನ ಮಗನಾದ ಯಾಜನ್ಯನನ್ನು, ಬೆನಾಯನ ಮಗನಾದ ಪೆಲತ್ಯನನ್ನು ನಾನು ನೋಡಿದೆನು. ಅವರಿಬ್ಬರು ಜನರಿಗೆ ನಾಯಕರಾಗಿದ್ದರು.

ಆದ ದೇವರು ನನ್ನೊಂದಿಗೆ ಮಾತನಾಡಿ ಹೇಳಿದ್ದೇನೆಂದರೆ, “ನರಪುತ್ರನೇ, ಈ ಪಟ್ಟಣದಲ್ಲಿ ದುಷ್ಟಯೋಜನೆಗಳನ್ನು ಮಾಡುವವರೂ ಕೆಡುಕಿನ ಸಲಹೆಗಳನ್ನು ನೀಡುವವರೂ ಇವರೇ. ‘ಮನೆಗಳನ್ನು ಕಟ್ಟುವ ಅಗತ್ಯ ಈಗಿಲ್ಲ. ಪಟ್ಟಣವು ಮಡಕೆಯಂತಿದೆ ಮತ್ತು ನಾವು ಮಾಂಸದಂತಿದ್ದೇವೆ’ ಎಂದು ಸುಳ್ಳು ಹೇಳುತ್ತಿದ್ದಾರೆ. ಆದ್ದರಿಂದ ನೀನು ನನ್ನ ಪರವಾಗಿ ಅವರೊಂದಿಗೆ ಮಾತನಾಡಬೇಕು. ನರಪುತ್ರನೇ, ನೀನು ಹೋಗಿ ಅವರಿಗೆ ದೈವವಾಣಿ ನುಡಿ.”

ಆಗ ಯೆಹೋವನ ಆತ್ಮನು ನನ್ನ ಮೇಲೆ ಬಂದನು. ಆತನು ಹೇಳಿದ್ದೇನೆಂದರೆ, “ಯೆಹೋವನು ಹೀಗೆ ಹೇಳುತ್ತಾನೆಂದು ಆ ಜನರಿಗೆ ತಿಳಿಸು: ಇಸ್ರೇಲ್ ಮನೆತನವೇ, ನೀನು ದೊಡ್ಡದೊಡ್ಡ ವಿಷಯಗಳನ್ನು ಆಲೋಚಿಸುತ್ತೀ. ನೀನು ಏನೂ ಯೋಚಿಸುತ್ತೀ ಎಂದು ನಾನು ಬಲ್ಲೆನು. ನೀನು ಈ ನಗರದಲ್ಲಿ ಅನೇಕ ಜನರನ್ನು ಕೊಲೆ ಮಾಡಿರುತ್ತೀ. ರಸ್ತೆಗಳನ್ನು ಹೆಣಗಳಿಂದ ತುಂಬಿಸಿರುತ್ತೀ. ಈಗ ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ, ‘ಆ ಹೆಣಗಳು ಮಾಂಸದಂತಿವೆ. ನಗರವು ಮಡಕೆಯಂತಿದೆ. ಆದರೆ ನಾನು ನಿಮ್ಮನ್ನು ಸುರಕ್ಷಿತವಾದ ಆ ಮಡಕೆಯಿಂದ ತೆಗೆದುಬಿಡುವೆನು. ನೀನು ಖಡ್ಗಕ್ಕೆ ಭಯಪಡುವವನಾದರೂ ನಾನು ನಿನ್ನ ಮೇಲೆ ಖಡ್ಗವನ್ನು ತರುವೆನು. ನಮ್ಮ ಒಡೆಯನಾದ ಯೆಹೋವನು ಈ ಮಾತುಗಳನ್ನು ನುಡಿದಿರುವದರಿಂದ ಇದು ನಡೆಯುವುದು.’”

ದೇವರು ಮುಂದುವರಿಸುತ್ತಾ, “ಈ ನಗರದೊಳಗಿಂದ ನಿಮ್ಮನ್ನು ಹೊರಡಿಸಿ ನಿಮ್ಮನ್ನು ಪರದೇಶಿಯರಿಗೆ ವಶಪಡಿಸುತ್ತೇನೆ; ಮತ್ತು ನಿಮ್ಮನ್ನು ದಂಡಿಸುತ್ತೇನೆ. 10 ನೀವು ಕತ್ತಿಯಿಂದಲೇ ಸಾಯುವಿರಿ. ನಾನು ನಿಮ್ಮನ್ನು ಇಸ್ರೇಲಿನಲ್ಲಿಯೇ ದಂಡಿಸುವೆನು. ನಾನೇ ಯೆಹೋವನೆಂಬುದು ಆಗ ನಿಮಗೆ ತಿಳಿಯುವುದು. 11 ಹೌದು, ಈ ಸ್ಥಳವು ಬೇಯಿಸುವ ಪಾತ್ರೆ ಮತ್ತು ನೀವು ಆ ಪಾತ್ರೆಯಲ್ಲಿ ಬೇಯಿಸಲ್ಪಡುವ ಮಾಂಸವಾಗಿರುತ್ತೀರಿ. ನಾನು ನಿಮ್ಮನ್ನು ಇಸ್ರೇಲಿನಲ್ಲಿಯೇ ಶಿಕ್ಷಿಸುವೆನು. 12 ಆಗ ನಾನು ಯೆಹೋವನು ಎಂದು ನೀವು ತಿಳಿಯುವಿರಿ. ನನ್ನ ಆಜ್ಞೆಗೆ ನೀವು ಅವಿಧೇಯರಾದಿರಿ. ನನ್ನ ಕಟ್ಟಳೆಗಳಿಗೆ ನೀವು ವಿಧೇಯರಾಗಲಿಲ್ಲ. ನಿಮ್ಮ ಸುತ್ತಲೂ ಇರುವ ಜನಾಂಗಗಳಂತೆ ಇರಲು ನೀವು ನಿರ್ಧರಿಸಿರುತ್ತೀರಿ.”

13 ನಾನು ದೇವರ ಪರವಾಗಿ ಮಾತನಾಡುವದನ್ನು ನಿಲ್ಲಿಸಿದ ಕೂಡಲೇ, ಬೆನಾಯನ ಮಗನಾದ ಪೆಲತ್ಯನು ಸತ್ತನು. ನಾನು ನೆಲದ ಮೇಲೆ ಬಗ್ಗಿ, “ನನ್ನ ಒಡೆಯನಾದ ಯೆಹೋವನೇ, ನೀನು ಇಸ್ರೇಲಿನಲ್ಲಿ ಅಳಿದುಳಿದವರನ್ನು ಸಂಪೂರ್ಣವಾಗಿ ನಾಶಮಾಡುವಿಯೋ?” ಎಂದು ಗಟ್ಟಿಯಾಗಿ ಕೂಗಿಕೊಂಡೆನು.

ಜೆರುಸಲೇಮಿನ ಚದರಿಸಲ್ಪಟ್ಟ ಜನರ ಕುರಿತು ಪ್ರವಾದನೆ

14 ಯೆಹೋವನ ಸಂದೇಶ ನನಗೆ ದೊರೆಯಿತು: 15 “ನರಪುತ್ರನೇ, ಜೆರುಸಲೇಮಿನಲ್ಲಿ ವಾಸವಾಗಿರುವ ಜನರು ನಿನ್ನ ಸಹೋದರರ, ನಿನ್ನ ಸ್ವಂತ ಸಂಬಂಧಿಕರ ಮತ್ತು ಇಡೀ ಇಸ್ರೇಲ್ ವಂಶದವರ ಬಗ್ಗೆ ಈಗ ಮಾತಾಡುತ್ತಿದ್ದಾರೆ. ‘ಅವರು, ಯೆಹೋವನಿಂದ ದೂರವಾಗಿದ್ದಾರೆ. ಈ ದೇಶವು ನಮಗೆ ನಮ್ಮ ಸ್ವಂತ ಆಸ್ತಿಯಾಗಿ ಕೊಡಲ್ಪಟ್ಟಿದೆ’ ಎಂದು ಅವರು ಹೇಳುತ್ತಾರೆ.

16 “ಆದ್ದರಿಂದ ಜನರಿಗೆ ಹೀಗೆ ಹೇಳು: ನಮ್ಮ ಒಡೆಯನಾದ ಯೆಹೋವನು ಹೇಳುವುದೇನೆಂದರೆ: ‘ನಾನು ನನ್ನ ಜನರನ್ನು ಬಹುದೂರದಲ್ಲಿರುವ ಜನಾಂಗಗಳ ಮಧ್ಯಕ್ಕೆ ಹೋಗುವಂತೆ ಮಾಡಿದ್ದು ನಿಜ. ನಾನು ಅನೇಕ ದೇಶಗಳಲ್ಲಿ ಅವರನ್ನು ಚದರಿಸಿರುತ್ತೇನೆ. ಅವರು ಪರದೇಶಗಳಲ್ಲಿರುವಾಗ ಸ್ವಲ್ಪಕಾಲ ನಾನೇ ಅವರಿಗೆ ದೇವಾಲಯವಾಗಿರುವೆನು. 17 ಆದ್ದರಿಂದ ಹೀಗೆ ಹೇಳು: ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಾನು ನಿಮ್ಮನ್ನು ಜನಾಂಗಗಳಿಂದ ಒಟ್ಟುಗೂಡಿಸುವೆನು; ನೀವು ಚದರಿಸಲ್ಪಟ್ಟಿರುವ ದೇಶಗಳಿಂದ ನಾನು ನಿಮ್ಮನ್ನು ಒಟ್ಟುಗೂಡಿಸುವೆನು; ಮತ್ತು ನಾನು ನಿಮಗೆ ಇಸ್ರೇಲ್ ದೇಶವನ್ನು ಕೊಡುವೆನು. 18 ನನ್ನ ಜನರು ಹಿಂದಕ್ಕೆ ಬಂದಾಗ ದೇಶದಲ್ಲಿರುವ ಎಲ್ಲಾ ಹೊಲಸು ವಿಗ್ರಹಗಳನ್ನು ತೆಗೆದುಹಾಕುವರು. 19 ಅವರನ್ನು ಹಿಂದಕ್ಕೆ ಬರಮಾಡಿ ಒಗ್ಗಟ್ಟಿನಲ್ಲಿರುವಂತೆ ಮಾಡುವೆನು. ಅವರಲ್ಲಿ ಹೊಸ ಆತ್ಮವನ್ನು ಇರಿಸುವೆನು. ಅವರಲ್ಲಿರುವ ಕಲ್ಲಿನ ಹೃದಯವನ್ನು ತೆಗೆದು ಮೃದುವಾದ ಹೃದಯವನ್ನಿಡುವೆನು. 20 ಆಗ ಅವರು ನನ್ನ ಆಜ್ಞಾವಿಧಿಗಳಿಗೆ ವಿಧೇಯರಾಗುವರು. ನಾನು ಹೇಳುವದನ್ನು ಅವರು ಮಾಡುವರು. ಅವರು ನಿಜವಾಗಿಯೂ ನನ್ನ ಜನರಾಗಿರುವರು. ನಾನು ಅವರ ದೇವರಾಗಿರುವೆನು.’”

ಯೆಹೋವನ ಮಹಿಮೆ ಜೆರುಸಲೇಮ್‌ನ್ನು ಬಿಟ್ಟಿದ್ದು

21 ಆಮೇಲೆ ದೇವರು ಹೇಳಿದ್ದೇನೆಂದರೆ: “ಆದರೆ ಈಗ ಅವರ ಹೃದಯವು ಆ ಹೊಲಸು ವಿಗ್ರಹಗಳಿಗೆ ಸೇರಿದ್ದಾಗಿದೆ. ಅವರು ಮಾಡಿದ ದುಷ್ಟತನಕ್ಕೆ ನಾನು ಅವರನ್ನು ಶಿಕ್ಷಿಸಲೇಬೇಕಾಗಿದೆ.” ನನ್ನ ಒಡೆಯನಾದ ಯೆಹೋವನು ಈ ಸಂಗತಿಗಳನ್ನು ತಿಳಿಸಿದನು. 22 ಆಗ ಕೆರೂಬಿದೂತರು ತಮ್ಮ ರೆಕ್ಕೆಗಳನ್ನು ಚಾಚಿ ಆಕಾಶದಲ್ಲಿ ಹಾರಿಹೋದರು. ಚಕ್ರಗಳು ಅವುಗಳೊಂದಿಗೆ ಹೋದವು. ಮತ್ತು ಇಸ್ರೇಲಿನ ದೇವರ ಮಹಿಮೆಯು ಅವರ ಮೇಲ್ಗಡೆ ಇತ್ತು. 23 ಯೆಹೋವನ ಮಹಿಮೆಯು ಆಕಾಶಕ್ಕೆ ಎತ್ತಲ್ಪಟ್ಟು ಜೆರುಸಲೇಮಿಗೆ ಪೂರ್ವದಲ್ಲಿರುವ ಬೆಟ್ಟದ ಮೇಲೆ ನಿಂತಿತು. 24 ಆಗ ಆತ್ಮವು ನನ್ನನ್ನು ಆಕಾಶಕ್ಕೆ ಎತ್ತಿ ಬಾಬಿಲೋನ್ ದೇಶಕ್ಕೆ ಮರಳಿ ತಂದಿತು. ಸೆರೆ ಒಯ್ಯಲ್ಪಟ್ಟಿದ್ದ ಜನರ ಮಧ್ಯೆ ನಾನು ಬಂದೆನು. ದೇವಾರಾತ್ಮವು ಕೊಟ್ಟ ದರ್ಶನದಲ್ಲಿ ನಾನು ಆ ಎಲ್ಲಾ ವಿಷಯಗಳನ್ನು ಕಂಡೆನು. ಬಳಿಕ, ನಾನು ಕಂಡ ಆ ದರ್ಶನವು ನನ್ನನ್ನು ಬಿಟ್ಟುಹೋಯಿತು. 25 ನನ್ನೊಂದಿಗೆ ಸೆರೆವಾಸದಲ್ಲಿದ್ದ ಜನರಿಗೆ, ಯೆಹೋವನು ನನಗೆ ತೋರಿಸಿದ ಎಲ್ಲಾ ಸಂಗತಿಗಳ ಬಗ್ಗೆ ಹೇಳಿದೆನು.

ಯೆಹೆಜ್ಕೇಲನು ಸೆರೆಯಾಳಿನಂತೆ ಜೀವಿಸಿದ್ದು

12 ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ: “ನರಪುತ್ರನೇ, ನೀನು ದಂಗೆಕೋರರ ಮಧ್ಯೆ ವಾಸಿಸುತ್ತೀ. ಅವರಿಗೆ ಕಣ್ಣಿದ್ದರೂ ನೋಡುವದಿಲ್ಲ; ಅವರಿಗೆ ಕಿವಿಗಳಿದ್ದರೂ ಕೇಳುವದಿಲ್ಲ; ಯಾಕೆಂದರೆ ಅವರು ದಂಗೆಕೋರರಾಗಿದ್ದಾರೆ. ಆದ್ದರಿಂದ ನರಪುತ್ರನೇ, ನಿನ್ನ ಚೀಲಗಳನ್ನು ತುಂಬಿಸಿ ಸೆರೆಯಾಳಾಗಿ ಹೋಗುವವನಂತೆ ನಟಿಸು. ನೀನು ಹಗಲಲ್ಲಿ ಹೋಗುವುದನ್ನು ಜನರು ನೋಡಲಿ. ಸೆರೆಯಾಳಿನಂತೆ ಅವರ ಕಣ್ಣೆದುರಿನಲ್ಲೆ ನಿನ್ನ ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗು. ಒಂದುವೇಳೆ ಅವರು ತಾವು ದಂಗೆಕೋರರೆಂದು ತಿಳಿದುಕೊಳ್ಳಬಹುದು.

“ಸೆರೆಯಾಳಾಗಿ ಹೋಗುವವನಂತೆ ಹಗಲಲ್ಲಿ ನಿನ್ನ ಚೀಲಗಳನ್ನು ಹೊರಗೆ ತೆಗೆದುಕೊಂಡು ಬಾ. ಸಾಯಂಕಾಲವಾದಾಗ ಅವರ ಕಣ್ಣೆದುರಿನಲ್ಲಿಯೇ ನೀನು ದೂರದೇಶಕ್ಕೆ ಸೆರೆಯವನಾಗಿ ಹೋಗುವವನಂತೆ ನಟನೆ ಮಾಡು. ಜನರು ನಿನ್ನನ್ನು ನೋಡುತ್ತಿರುವಾಗ ಗೋಡೆಯಲ್ಲಿ ರಂಧ್ರ ಮಾಡಿ ಅದರಿಂದ ನುಸುಳಿ ಹೊರಗೆ ಹೋಗು. ರಾತ್ರಿಕಾಲದಲ್ಲಿ ಚೀಲವನ್ನು ಹೆಗಲಿಗೇರಿಸಿ ಹೊರಗೆ ನಡಿ. ನೀನು ನೆಲವನ್ನು ನೋಡಲಾಗದಂತೆ ನಿನ್ನ ಮುಖವನ್ನು ಮುಚ್ಚಿಕೋ. ಇದೆಲ್ಲಾ ಮಾಡುವಾಗ ಜನರು ನಿನ್ನನ್ನು ನೋಡುತ್ತಿರಬೇಕು. ಯಾಕೆಂದರೆ ನಿನ್ನನ್ನು ನಾನು ಇಸ್ರೇಲರಿಗೆ ಒಂದು ನಿದರ್ಶನವಾಗಿ ಉಪಯೋಗಿಸುತ್ತಿದ್ದೇನೆ.”

ಹೀಗೆ ನನಗೆ ಆಜ್ಞಾಪಿಸಿದ ಪ್ರಕಾರ ಮಾಡಿದೆನು. ನಾನು ಸೆರೆಯಾಳಿನಂತೆ ಹಗಲಲ್ಲಿ ಚೀಲಗಳನ್ನು ತಂದು ಹೊರಗಿಟ್ಟೆನು. ಸಾಯಂಕಾಲ ನನ್ನ ಕೈಗಳಿಂದ ಗೋಡೆಯಲ್ಲಿ ರಂಧ್ರ ಮಾಡಿ, ರಾತ್ರಿಕಾಲದಲ್ಲಿ ಆ ಚೀಲಗಳನ್ನು ಹೆಗಲ ಮೇಲೆ ಹೊತ್ತು ಹೊರಟೆನು. ಜನರು ನನ್ನನ್ನು ಗಮನಿಸುತ್ತಿರುವಾಗಲೇ ನಾನೆಲ್ಲಾ ಮಾಡಿದೆನು.

ಮರುದಿನ ಬೆಳಿಗ್ಗೆ ಯೆಹೋವನ ಸಂದೇಶವು ನನಗೆ ಬಂತು. ಆತನು ಹೀಗೆ ಅಂದನು: “ನರಪುತ್ರನೇ, ನೀನು ಏನು ಮಾಡುತ್ತಿರುವೆ ಎಂದು ಇಸ್ರೇಲಿನ ಈ ದಂಗೆಕೋರರು ನಿನ್ನನ್ನು ಕೇಳಲಿಲ್ಲವೇ? 10 ಅವರ ಒಡೆಯನಾದ ಯೆಹೋವನು ಇದನ್ನೆಲ್ಲಾ ಹೇಳಿದನು ಎಂದು ಅವರಿಗೆ ತಿಳಿಸು. ಈ ಸಂದೇಶವು ಜೆರುಸಲೇಮಿನ ನಾಯಕರ ಮತ್ತು ಅಲ್ಲಿ ವಾಸಿಸುವ ಇಸ್ರೇಲ್ ಜನರೆಲ್ಲರ ಕುರಿತಾಗಿದೆ. 11 ‘ನೀನು ಅವರಿಗೆ ಹೀಗೆ ಹೇಳು: ನಾನು ನಿಮಗೆ ಒಂದು ಸೂಚನೆಯಾಗಿದ್ದೇನೆ. ನಾನು ಮಾಡಿದ ಸೂಚಕಕಾರ್ಯ ಖಂಡಿತವಾಗಿ ನಿಮಗೆ ಸಂಭವಿಸುವುದು. ನೀವು ದೂರದೇಶಕ್ಕೆ ಸೆರೆಯಾಳುಗಳಾಗಿ ಹೋಗುವಿರಿ.’ 12 ನಿಮ್ಮ ನಾಯಕನು ಗೋಡೆಯಲ್ಲಿ ರಂಧ್ರ ಮಾಡಿ ರಾತ್ರಿ ಕಾಲದಲ್ಲಿ ಅದರಲ್ಲಿ ನುಸುಳಿ ಪಾರಾಗುವನು. ಜನರು ತನ್ನನ್ನು ಗುರುತಿಸದಂತೆ ತನ್ನ ಮುಖವನ್ನು ಮುಚ್ಚಿಕೊಳ್ಳುವನು. ಅವನು ಯಾವ ಕಡೆಗೆ ಹೋಗುತ್ತಿದ್ದಾನೆಂದು ಅವನ ಕಣ್ಣುಗಳಿಗೆ ಕಾಣಿಸದು. 13 ಅವನು ತಪ್ಪಿಸಿಕೊಳ್ಳಲು ಪ್ರಯತ್ನ ಮಾಡುವನು. ಆದರೆ, ನಾನು (ಯೆಹೋವನು) ಅವನನ್ನು ಹಿಡಿಯುವೆನು. ಅವನು ನನ್ನ ಬಲೆಯೊಳಗೆ ಬೀಳುವನು. ನಾನು ಅವನನ್ನು ಕಸ್ದೀಯರ ದೇಶವಾದ ಬಾಬಿಲೋನಿಗೆ ತರುವೆನು. ಅವನು ಆ ದೇಶವನ್ನು ನೋಡುವುದಿಲ್ಲ; ಅಲ್ಲದೆ ಅವನು ಅಲ್ಲಿ ಸಾಯುವನು. 14 ಅವನ ಸುತ್ತಲೂ ಇರುವವರನ್ನೆಲ್ಲ ನಾನು ಸುತ್ತಮುತ್ತಲಿನ ದೇಶಗಳಿಗೆ ಓಡಿಸಿಬಿಡುವೆನು. ಅವನ ಕೆಲಸಗಾರರನ್ನು ಮತ್ತು ಅವನ ಸೈನ್ಯವನ್ನು ಗಾಳಿಗೆ ತೂರಿಬಿಡುವೆನು. ಮತ್ತು ಅವರನ್ನು ಖಡ್ಗದೊಡನೆ ಬೆನ್ನಟ್ಟುವೆನು. 15 ನಾನೇ ಯೆಹೋವನೆಂದು ಆಗ ಜನರು ತಿಳಿದುಕೊಳ್ಳುವರು; ಯಾಕೆಂದರೆ ನಾನು ಅವರನ್ನು ಜನಾಂಗಗಳ ಮಧ್ಯದಲ್ಲಿ ಚದರಿಸಿದ್ದೇನೆ ಮತ್ತು ಬೇರೆ ದೇಶಗಳಿಗೆ ಓಡಿಸಿದ್ದೇನೆ.

16 “ಆದರೆ ನಾನು ಅವರಲ್ಲಿ ಕೆಲವರನ್ನು ಯುದ್ಧಗಳಿಂದ, ಬರಗಾಲಗಳಿಂದ ಮತ್ತು ರೋಗಗಳಿಂದ ಉಳಿಸುವೆನು. ಅವರು ತಾವು ಹೋಗುವ ದೇಶಗಳಲ್ಲಿನ ಜನರಿಗೆ ತಮ್ಮ ಅಸಹ್ಯವಾದ ಆಚರಣೆಗಳ ಕುರಿತು ಹೇಳಲಾಗುವಂತೆ ನಾನು ಇದನ್ನು ಮಾಡುತ್ತೇನೆ. ನಾನೇ ಯೆಹೋವನೆಂದು ಆಗ ಅವರು ತಿಳಿದುಕೊಳ್ಳುವರು.”

ಜನರು ಭಯಭೀತರಾಗಿ ನಡುಗುವರು

17 ಆಗ ಯೆಹೋವನ ವಾಕ್ಯವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 18 “ನರಪುತ್ರನೇ, ನೀನು ಭೀತಿಯಲ್ಲಿರುವವನಂತೆ ನಟನೆ ಮಾಡಬೇಕು. ನೀನು ಆಹಾರ ತೆಗೆದುಕೊಳ್ಳುವಾಗ ನಡುಗಬೇಕು. ನೀರು ಕುಡಿಯುವಾಗ ಭಯಪಡಬೇಕು ಮತ್ತು ಚಿಂತಿಸಬೇಕು. 19 ಇದನ್ನು ನೀನು ಸಾಮಾನ್ಯ ಜನರಿಗೆ ತಿಳಿಸಬೇಕು. ನೀನು ಹೀಗೆ ಹೇಳಬೇಕು, ‘ಇನ್ನೂ ಇಸ್ರೇಲ್ ದೇಶದಲ್ಲಿರುವ ಜೆರುಸಲೇಮಿನ ನಿವಾಸಿಗಳ ಬಗ್ಗೆ ನಮ್ಮ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ಅವರು ಊಟಮಾಡುವಾಗ ಉದ್ವೇಗದಿಂದಿರುವರು; ಅವರು ಕುಡಿಯುವಾಗ ಭಯದಿಂದಿರುವರು. ಯಾಕೆಂದರೆ ಅವರ ದೇಶದಲ್ಲಿರುವ ಸಮಸ್ತವು ನಾಶವಾಗುತ್ತದೆ, ಯಾಕೆಂದರೆ ಅಲ್ಲಿ ವಾಸಿಸುವವರೆಲ್ಲರೂ ಹಿಂಸಕರಾಗಿದ್ದಾರೆ. 20 ಜನರು ವಾಸವಾಗಿರುವ ಪಟ್ಟಣಗಳು ನಾಶವಾಗುತ್ತವೆ; ಇಡೀ ದೇಶವೇ ನಾಶವಾಗುತ್ತದೆ. ನಾನೇ ಯೆಹೋವನೆಂದು ಆಗ ನಿಮಗೆ ತಿಳಿಯುವುದು.’”

ಇಸ್ರೇಲಿಗೆ ಬರುವ ದುರ್ಗತಿ

21 ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ, 22 “ನರಪುತ್ರನೇ,

‘ಸಂಕಷ್ಟದ ದಿನಗಳು ಉರುಳುತ್ತಿವೆ;
    ಎಲ್ಲಾ ದರ್ಶನಗಳು ನೆರವೇರುವುದಿಲ್ಲ’

ಎಂಬ ಈ ಗಾದೆಯನ್ನು ಇಸ್ರೇಲ್ ದೇಶದಲ್ಲಿರುವ ನೀವೆಲ್ಲರೂ ಹೇಗೆ ಅರ್ಥಮಾಡಿಕೊಳ್ಳುವಿರಿ?

23 “ಆ ಜನರಿಗೆ ಹೀಗೆ ಹೇಳು: ಅವರ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ನಾನು ಈ ಗಾದೆಗೆ ಅಂತ್ಯವನ್ನು ಬರಮಾಡುವೆನು. ಇಸ್ರೇಲಿನಲ್ಲಿ ಆ ಗಾದೆಯನ್ನು ಅವರು ಇನ್ನೆಂದಿಗೂ ಬಳಸುವುದಿಲ್ಲ. ಅದರ ಬದಲಾಗಿ ಅವರಿಗೆ ಹೀಗೆ ಹೇಳು:

‘ಸಂಕಷ್ಟದ ದಿನಗಳು ಸಮೀಪಿಸಿವೆ;
    ಪ್ರತಿಯೊಂದು ದರ್ಶನವೂ ನೆರವೇರುವುದು.’

24 “ಇಸ್ರೇಲಿನಲ್ಲಿ ಇನ್ನು ಮೇಲೆ ಸುಳ್ಳುದರ್ಶನಗಳಿರುವುದಿಲ್ಲ; ಮುಖಸ್ತುತಿಯ ಕಣಿಯೂ ಇರುವುದಿಲ್ಲ. 25 ಯಾಕೆಂದರೆ ನಾನೇ ಯೆಹೋವನು. ನನಗೆ ಇಷ್ಟಬಂದದ್ದನ್ನು ನಾನು ಹೇಳುವೆನು ಮತ್ತು ಆ ಸಂಗತಿಯು ನೆರವೇರುವುದು. ಅದಕ್ಕೆ ಹೆಚ್ಚು ಸಮಯಬೇಕಾಗದು. ಆ ಸಂಕಟಗಳು ಬೇಗನೇ ಬರುವವು; ನಿಮ್ಮ ಜೀವಮಾನ ಕಾಲದಲ್ಲಿಯೇ ಬರುವವು. ಓ ದಂಗೆಕೋರರಾದ ಜನರೇ, ನಾನು ಒಂದು ವಿಷಯದಲ್ಲಿ ಏನಾದರೂ ಹೇಳಿದರೆ ಆ ವಿಷಯವು ಸಂಭವಿಸುವಂತೆ ಮಾಡುವೆನು.” ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು.

26 ಆಗ ಯೆಹೋವನ ಸಂದೇಶವು ನನಗೆ ಬಂದಿತು. ಆತನು ಹೇಳಿದ್ದೇನೆಂದರೆ, 27 “ನರಪುತ್ರನೇ, ನಿನಗೆ ನಾನು ಕೊಟ್ಟ ದರ್ಶನಗಳ ಕುರಿತು ಬಹಳ ಕಾಲದ ನಂತರ ಅದು ನೆರವೇರುವುದು ಎಂದು ಇಸ್ರೇಲರ ಜನರು ನೆನೆಸುತ್ತಿದ್ದಾರೆ. 28 ಆದ್ದರಿಂದ ಅವರಿಗೆ ನೀನು ಈ ವಿಷಯವನ್ನು ತಿಳಿಸು, ‘ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ: ಏನೆಂದರೆ ನಾನು ಇನ್ನು ಹೆಚ್ಚು ತಡಮಾಡುವುದಿಲ್ಲ. ನಾನೊಂದು ವಿಷಯವು ನೆರವೇರುವುದು ಎಂದು ಹೇಳಿದರೆ ಅದು ಖಂಡಿತ ನೆರವೇರುವುದು.’” ಇವು ನನ್ನ ಒಡೆಯನಾದ ಯೆಹೋವನ ನುಡಿಗಳು.

ಸುಳ್ಳುಪ್ರವಾದಿಗಳ ವಿರುದ್ಧ ಎಚ್ಚರಿಕೆ

13 ಯೆಹೋವನ ನುಡಿಯು ನನಗೆ ಬಂತು. ಆತನು ಹೇಳಿದ್ದೇನೆಂದರೆ, “ನರಪುತ್ರನೇ, ನೀನು ಇಸ್ರೇಲಿನ ಪ್ರವಾದಿಗಳಿಗೆ ನನ್ನ ಪರವಾಗಿ ಹೇಳಬೇಕು. ಅವರು ನಿಜವಾಗಿ ನನ್ನ ಪರವಾಗಿ ಮಾತನಾಡುವುದಿಲ್ಲ. ಅವರು ಏನು ಹೇಳಬೇಕೆಂದು ಇಷ್ಟಪಡುತ್ತಾರೋ ಅದನ್ನೇ ಹೇಳುತ್ತಾರೆ. ಅದಕ್ಕಾಗಿ ನೀನು ಅವರ ಕೂಡ ಮಾತನಾಡಿ ಇಂತೆನ್ನಬೇಕು, ‘ಯೆಹೋವನ ಸಂದೇಶವನ್ನು ಕೇಳಿರಿ. ನನ್ನ ಒಡೆಯನಾದ ಯೆಹೋವನು ಹೀಗೆನ್ನುತ್ತಾನೆ: ಬುದ್ಧಿಯಿಲ್ಲದ ಪ್ರವಾದಿಗಳೇ, ನಿಮಗೆ ಸಂಕಟಗಳು ಬರುವವು. ನೀವು ನಿಮ್ಮ ಸ್ವಂತ ಆತ್ಮವನ್ನು ಅನುಸರಿಸುತ್ತೀರಿ. ನೀವು ದರ್ಶನಗಳಲ್ಲಿ ಏನನ್ನೂ ಕಂಡಿಲ್ಲ.

“‘ಇಸ್ರೇಲರೇ, ನಿಮ್ಮ ಪ್ರವಾದಿಗಳು ಪಾಳುಬಿದ್ದ ಮನೆಗಳಲ್ಲಿ ಓಡಾಡುವ ನರಿಗಳಂತಿದ್ದಾರೆ. ಗೋಡೆಗಳು ಬಿದ್ದುಹೋದ ಸ್ಥಳಗಳನ್ನು ನೀವು (ಪ್ರವಾದಿಗಳು) ಕಾವಲು ಕಾಯುವದಿಲ್ಲ. ಇಸ್ರೇಲ್ ಜನರಿಗೋಸ್ಕರ ನೀವು ಗೋಡೆಗಳನ್ನು ಕಟ್ಟುವುದಿಲ್ಲ. ಆದ್ದರಿಂದ ಯೆಹೋವನಿಂದ ದಂಡನೆಯ ದಿನವು ಬಂದಾಗ ಜನರು ಯುದ್ಧದಲ್ಲಿ ಸೋತು ಹೋಗುವರು.

“‘ಅವರನ್ನು ಯೆಹೋವನು ಕಳುಹಿಸಿಲ್ಲದಿದ್ದರೂ ಅವರು, “ಯೆಹೋವನು ಇದನ್ನು ಹೇಳಿದ್ದಾನೆ” ಎನ್ನುತ್ತಾರೆ. ಅವರು ಮಾಟಮಂತ್ರ ಮಾಡಿ ಇಂತಿಂಥದ್ದು ಸಂಭವಿಸುವುದು ಎಂದು ಸುಳ್ಳು ಹೇಳುತ್ತಾರೆ. ದೇವರು ನಮ್ಮನ್ನು ಕಳುಹಿಸಿದ್ದು ಎಂದು ಸುಳ್ಳು ಹೇಳುವರು. ಅವರು ತಮ್ಮ ಸುಳ್ಳು ನಿಜವಾಗುತ್ತಿರುವದನ್ನು ನೋಡಲು ಕಾಯುತ್ತಿದ್ದಾರೆ.

“‘ಎಲೈ ಸುಳ್ಳುಪ್ರವಾದಿಗಳೇ, ನೀವು ನೋಡಿದ ದರ್ಶನಗಳು ಸತ್ಯವಾದವುಗಳಲ್ಲ. ನೀವು ಮಂತ್ರತಂತ್ರ ಮಾಡಿ ಇಂತಿಂಥದ್ದು ಸಂಭವಿಸುವುದು ಎಂದು ಸುಳ್ಳು ಹೇಳಿದ್ದೀರಿ. ನಾನು ಮಾತಾಡಿಲ್ಲದಿದ್ದರೂ ಯೆಹೋವನೇ ಇದನ್ನು ಹೇಳಿದನೆಂದು ನೀವು ಹೇಳುತ್ತೀರಿ.’”

ಆದ್ದರಿಂದ ಈಗ ನನ್ನ ಒಡೆಯನಾದ ಯೆಹೋವನು ನಿಜವಾಗಿಯೂ ಮಾತನಾಡುವನು. ಆತನು ಹೇಳುವುದೇನೆಂದರೆ, “ನೀವು ಸುಳ್ಳು ಹೇಳಿದ್ದೀರಿ, ನೀವು ಸುಳ್ಳುದರ್ಶನಗಳನ್ನು ನೋಡಿದ್ದೀರಿ. ಆದ್ದರಿಂದ ನಾನು ನಿಮಗೆ ವಿರುದ್ಧವಾಗಿದ್ದೇನೆ.” ಇದು ನನ್ನ ಒಡೆಯನಾದ ಯೆಹೋವನು ಹೇಳಿದ್ದು. ಯೆಹೋವನು ಹೇಳುವುದೇನೆಂದರೆ, “ಯಾವ ಪ್ರವಾದಿಗಳು ಸುಳ್ಳುದರ್ಶನವನ್ನು ನೋಡಿ ಸುಳ್ಳನ್ನು ಹೇಳಿದ್ದಾರೋ, ಅವರನ್ನು ಶಿಕ್ಷಿಸುವೆನು. ನನ್ನ ಜನರ ಮಧ್ಯೆಯಿಂದ ಅವರನ್ನು ತೆಗೆದುಬಿಡುವೆನು. ಅವರ ಹೆಸರುಗಳು ಇಸ್ರೇಲರ ವಂಶಾವಳಿ ಪಟ್ಟಿಯಲ್ಲಿ ಇರುವುದಿಲ್ಲ. ಅವರು ಇಸ್ರೇಲ್ ದೇಶಕ್ಕೆ ಹಿಂದಿರುಗಿ ಬರುವುದಿಲ್ಲ. ನಾನೇ ಒಡೆಯನಾದ ಯೆಹೋವನೆಂದು ಆಗ ನಿಮಗೆ ಗೊತ್ತಾಗುವುದು.

10 “ಮತ್ತೆಮತ್ತೆ ಆ ಸುಳ್ಳು ಪ್ರವಾದಿಗಳು ನನ್ನ ಜನರಿಗೆ ಸುಳ್ಳು ಹೇಳಿದರು. ಅವರು ಶಾಂತಿ ಇರುವದೆಂದು ಹೇಳಿದರು. ಆದರೆ ಶಾಂತಿ ಇರಲಿಲ್ಲ. ಅದು ಈ ರೀತಿಯಲ್ಲಿದೆ: ಜನರು ಬಲಹೀನವಾದ ಗೋಡೆಯನ್ನು ಕಟ್ಟುತ್ತಾರೆ; ಅದು ಬಲವಾಗಿ ಕಾಣುವಂತೆ ಮಾಡಲು ಪ್ರವಾದಿಗಳು ಅದಕ್ಕೆ ತೆಳುವಾದ ಮಡ್ಡಿ ಮಾಡುತ್ತಾರೆ. 11 ಗೋಡೆಗೆ ಮಡ್ಡಿ ಮಾಡುವವರಿಗೆ ಹೀಗೆ ಹೇಳು: ನಾನು ಆಲಿಕಲ್ಲು ಮತ್ತು ಬಲವಾದ ಮಳೆಯನ್ನು ಕಳುಹಿಸುವೆನು. ಗಾಳಿಯು ಬಲವಾಗಿ ಬೀಸಿ ಸುಂಟರಗಾಳಿಯು ಬರುವುದು. ಆಗ ಗೋಡೆಯು ಮುರಿದುಬೀಳುವುದು. 12 ಗೋಡೆಯು ಬಿದ್ದಾಗ ಜನರು ಪ್ರವಾದಿಗಳಾದ ನಿಮ್ಮನ್ನು, ‘ನೀವು ಗೋಡೆಗೆ ಹಾಕಿದ ಗಾರೆ ಏನಾಯಿತು?’” ಎಂದು ಪ್ರಶ್ನಿಸುವರು. 13 ನನ್ನ ಒಡೆಯನಾದ ಯೆಹೋವನು ಹೀಗೆ ಹೇಳುತ್ತಾನೆ, “ನಾನು ಸಿಟ್ಟುಗೊಂಡಿದ್ದೇನೆ. ಮತ್ತು ನಿಮಗೆ ವಿರುದ್ಧವಾಗಿ ಬಿರುಗಾಳಿಯನ್ನು ಕಳುಹಿಸುತ್ತೇನೆ. ನಾನು ಕೋಪಗೊಂಡಿದ್ದೇನೆ. ಆದ್ದರಿಂದ ಭಾರೀ ಮಳೆಯು ಬೀಳುವಂತೆ ಮಾಡುವೆನು. ನಾನು ಕೋಪಗೊಂಡಿದ್ದರಿಂದ ನಾಶಕರವಾದ ಆಲಿಕಲ್ಲು ಆಕಾಶದಿಂದ ಬೀಳುವಂತೆ ಮಾಡುವೆನು. 14 ನೀವು ಗೋಡೆಗೆ ಗಾರೆ ಹಾಕಿದಿರಿ. ಆದರೆ ನಾನು ಇಡೀ ಗೋಡೆಯನ್ನೆ ನಾಶಮಾಡುವೆನು. ಅದನ್ನು ನೆಲಸಮ ಮಾಡುವೆನು. ಆ ಗೋಡೆಯು ನಿಮ್ಮ ಮೇಲೆ ಬಿದ್ದು ನಿಮ್ಮನ್ನು ಕೊಲ್ಲುವುದು. ಆಗ ನಾನು ಯೆಹೋವನೆಂದು ಗೊತ್ತಾಗುವುದು. 15 ಗೋಡೆಗೆ ಗಾರೆ ಬಳಿಯುವವರ ಮೇಲೂ, ಗೋಡೆಯ ಮೇಲೂ ನನ್ನ ಕೋಪವನ್ನು ತೀರಿಸಿಕೊಳ್ಳುವೆನು. ಆಗ ನಾನು, ‘ಈಗ ಗೋಡೆ ಇಲ್ಲ. ಅದಕ್ಕೆ ಗಾರೆ ಹಾಕುವವರೂ ಇಲ್ಲ’ ಎಂದು ಹೇಳುವೆನು.

16 “ಇವೆಲ್ಲಾ ಇಸ್ರೇಲಿನ ಸುಳ್ಳು ಪ್ರವಾದಿಗಳಿಗಾಗುವದು. ಆ ಪ್ರವಾದಿಗಳು ಜೆರುಸಲೇಮಿನ ಬಗ್ಗೆ ಪ್ರವಾದಿಸಿದರು ಮತ್ತು ಶಾಂತಿಯಿಲ್ಲದಿರುವಾಗಲೂ ಶಾಂತಿಯ ದರ್ಶನಗಳನ್ನು ಕಂಡರು.” ನನ್ನ ಒಡೆಯನಾದ ಯೆಹೋವನು ಇದನ್ನು ಹೇಳಿದನು.

17 ದೇವರು ಹೀಗೆ ನುಡಿದನು: “ನರಪುತ್ರನೇ, ಇಸ್ರೇಲಿನ ಪ್ರವಾದಿನಿಯರನ್ನು ನೋಡು. ಆ ಪ್ರವಾದಿನಿಯರು ನನ್ನ ಪರವಾಗಿ ಮಾತಾಡುತ್ತಿಲ್ಲ. ಅವರು ತಮ್ಮ ಇಚ್ಛೆಯ ಪ್ರಕಾರ ಮಾತನಾಡುತ್ತಾರೆ. ಆದ್ದರಿಂದ ನೀನು ನನ್ನ ಪರವಾಗಿ ಅವರ ವಿರುದ್ಧವಾಗಿ ಮಾತನಾಡಬೇಕು. ಅವರಿಗೆ ಈ ಮಾತುಗಳನ್ನು ಹೇಳಬೇಕು. 18 ನನ್ನ ಒಡೆಯನಾದ ಯೆಹೋವನು ಹೇಳುವುದೇನೆಂದರೆ: ಪ್ರವಾದಿನಿಯರೇ, ನಿಮಗೆ ಕೇಡಾಗುವುದು. ಜನರು ತಮ್ಮ ತೋಳುಗಳಲ್ಲಿ ಕಟ್ಟಿಕೊಳ್ಳುವದಕ್ಕಾಗಿ ನೀವು ತಾಯಿತಿಗಳನ್ನು ಹೊಲಿದಿರಿ. ಜನರು ತಮ್ಮ ತಲೆಯ ಮೇಲೆ ಹಾಕಿಕೊಳ್ಳಲು ಮಂತ್ರದ ವಿವಿಧ ಅಳತೆಯ ಮುಸುಕುಗಳನ್ನು ನೀವು ತಯಾರಿಸುತ್ತೀರಿ. ನನ್ನ ಜನರ ಪ್ರಾಣಗಳನ್ನು ಬೇಟೆಯಾಡುವದಕ್ಕೂ ನಿಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವುದಕ್ಕೂ ನೀವು ಇದನ್ನು ಮಾಡುತ್ತೀರಿ. 19 ಜನರೆದುರಿನಲ್ಲಿ ನನಗೆ ನೀವು ಮಹತ್ವವನ್ನು ಕೊಡುವದಿಲ್ಲ. ಸ್ವಲ್ಪ ಬಾರ್ಲಿಗಾಗಿಯೂ ಕೆಲವು ತುಂಡು ರೊಟ್ಟಿಗಾಗಿಯೂ ನೀವು ನನಗೆ ವಿರುದ್ಧವಾಗಿ ವರ್ತಿಸುತ್ತೀರಿ. ನನ್ನ ಜನರಿಗೆ ನೀವು ಸುಳ್ಳನ್ನು ಆಡುತ್ತೀರಿ. ಅವರಿಗೆ ಸುಳ್ಳೆಂದರೆ ಬಹಳ ಪ್ರೀತಿ. ನೀವು ಸಾಯತಕ್ಕಲ್ಲದವರನ್ನು ಸಾವಿಗೀಡು ಮಾಡುತ್ತೀರಿ. ಬದುಕತಕ್ಕಲ್ಲದವರನ್ನು ಜೀವಂತವಾಗಿಡುತ್ತೀರಿ. 20 ಆದ್ದರಿಂದ ಒಡೆಯನಾದ ಯೆಹೋವನು ಹೇಳುವುದೇನೆಂದರೆ: ನೀವು ಆ ಬಟ್ಟೆಯ ತೋಳುಪಟ್ಟಿಯನ್ನು ಜನರು ಬೋನಿನಲ್ಲಿ ಸಿಲುಕಿಕೊಳ್ಳುವಂತೆ ಮಾಡುತ್ತೀರಿ. ಆದರೆ ನಾನು ಅವರನ್ನು ಸ್ವತಂತ್ರರಾಗುವಂತೆ ಮಾಡುವೆನು. ನಿಮ್ಮ ತೋಳಿನಿಂದ ಆ ಪಟ್ಟಿಯನ್ನು ಹರಿದುಹಾಕುವೆನು. ಆಗ ಜನರು ನಿಮ್ಮ ಬಂಧನದಿಂದ ವಿಮುಕ್ತರಾಗುವರು. ಬೋನಿನಲ್ಲಿ ಸಿಕ್ಕಿಕೊಂಡ ಪಕ್ಷಿಯು ಬಿಡಿಸಿದ ಕೂಡಲೇ ಹಾರಾಡುವಂತೆ ಅವರೂ ಹಾರಾಡುವರು. 21 ನಾನು ನಿಮ್ಮ ಮುಸುಕುಗಳನ್ನು ಹರಿದುಹಾಕುವೆನು. ಮತ್ತು ನಿಮ್ಮ ಹಿಡಿತದಿಂದ ಅವರನ್ನು ಬಿಡಿಸುವೆನು. ಆ ಜನರು ನಿಮ್ಮ ಉರುಲಿನಿಂದ ತಪ್ಪಿಸಿಕೊಳ್ಳುವರು. ಆಗ ನಾನೇ ಒಡೆಯನಾದ ಯೆಹೋವನು ಎಂದು ಗೊತ್ತಾಗುವುದು.

22 “‘ಪ್ರವಾದಿನಿಯರೇ, ನೀವು ಸುಳ್ಳುಗಾರ್ತಿಯರಾಗಿದ್ದೀರಿ. ನಿಮ್ಮ ಸುಳ್ಳುಗಳು ಒಳ್ಳೆಯವರಿಗೆ ದುಃಖವನ್ನು ಬರಮಾಡುವವು. ಒಳ್ಳೆಯ ವ್ಯಕ್ತಿಗಳಿಗೆ ನೋವು ಮಾಡಲು ನನಗೆ ಮನಸ್ಸಿಲ್ಲ. ದುಷ್ಟ ಜನರು ತಮ್ಮ ದುರ್ಮಾರ್ಗಗಳನ್ನು ತೊರೆದುಬಿಡದಂತೆಯೂ ತಮ್ಮ ಪ್ರಾಣಗಳನ್ನು ರಕ್ಷಿಸಿಕೊಳ್ಳದಂತೆಯೂ ನೀವು ಪ್ರೋತ್ಸಾಹಿಸುತ್ತೀರಿ. 23 ಆದ್ದರಿಂದ ನೀವು ಪ್ರಯೋಜನವಿಲ್ಲದ ದರ್ಶನವನ್ನು ಇನ್ನು ಮೇಲೆ ನೋಡುವುದಿಲ್ಲ. ನೀವು ನಿಮ್ಮ ಮಂತ್ರತಂತ್ರಗಳನ್ನು ಇನ್ನು ಮಾಡುವುದಿಲ್ಲ. ನನ್ನ ಶಕ್ತಿಯಿಂದ ನಾನು ನನ್ನ ಜನರನ್ನು ಕಾಪಾಡುತ್ತೇನೆ. ಆಗ ನಾನು ಯೆಹೋವನು ಎಂದು ನೀವು ತಿಳಿಯುವಿರಿ.’”

ಯಾಕೋಬನು 1

ದೇವರ ಮತ್ತು ಪ್ರಭುವಾದ ಯೇಸು ಕ್ರಿಸ್ತನ ಸೇವಕನಾದ ಯಾಕೋಬನು ಲೋಕದಲ್ಲೆಲ್ಲಾ ಚದರಿಹೋಗಿರುವ (ಇಸ್ರೇಲಿನ) ಹನ್ನೆರಡು ಕುಲದವರಿಗೆ ಬರೆದ ಪತ್ರ. ನಿಮಗೆ ಶುಭವಾಗಲಿ.

ನಂಬಿಕೆ ಮತ್ತು ಜ್ಞಾನ

ನನ್ನ ಸಹೋದರ ಸಹೋದರಿಯರೇ, ನಿಮಗೆ ಅನೇಕ ತೊಂದರೆಗಳು ಬರುತ್ತವೆ. ಆದರೆ ಅವುಗಳು ಬಂದಾಗ ನೀವು ಬಹಳ ಸಂತೋಷಪಡಬೇಕು. ಏಕೆಂದರೆ ಅವುಗಳು ನಿಮ್ಮ ನಂಬಿಕೆಯನ್ನು ಪರಿಶೋಧಿಸಲು ಬಂದಿವೆ ಎಂಬುದು ನಿಮಗೆ ತಿಳಿದದೆ. ಅವು ನಿಮ್ಮಲ್ಲಿ ತಾಳ್ಮೆಯನ್ನು ಉಂಟುಮಾಡುತ್ತವೆ. ತಾಳ್ಮೆಯು ತನ್ನ ಕಾರ್ಯವನ್ನು ಪೂರೈಸಲಿ. ಆಗ ನೀವು ನಿಷ್ಕಳಂಕರೂ ಮತ್ತು ಪರಿಪೂರ್ಣರೂ ಆಗುವಿರಿ ಮತ್ತು ನಿಮಗೆ ಬೇಕಾದುದೆಲ್ಲವೂ ದೊರೆಯುವುದು.

ಆದರೆ ನಿಮ್ಮಲ್ಲಿ ಯಾರಿಗಾದರೂ ಜ್ಞಾನವು ಬೇಕಾಗಿದ್ದರೆ ಅಂಥವರು ದೇವರಲ್ಲಿ ಕೇಳಿಕೊಳ್ಳಲಿ. ದೇವರು ಉದಾರಿಯಾಗಿರುವುದರಿಂದ ಮತ್ತು ಎಲ್ಲಾ ಜನರಿಗೆ ಸಂತೋಷದಿಂದ ಕೊಡುವುದರಿಂದ ನಿಮಗೆ ಜ್ಞಾನವನ್ನು ದಯಪಾಲಿಸುತ್ತಾನೆ. ಆದರೆ ನೀವು ದೇವರನ್ನು ಕೇಳಿಕೊಳ್ಳುವಾಗ ಆತನಲ್ಲಿ ನಿಮಗೆ ನಂಬಿಕೆಯಿರಬೇಕು. ದೇವರ ಬಗ್ಗೆ ಸಂದೇಹಪಡದಿರಿ. ಸಂದೇಹಪಡುವವನು ಸಾಗರದಲ್ಲಿನ ಅಲೆಯಂತಿದ್ದಾನೆ. ಗಾಳಿಯು ಬೀಸಿದಾಗ ಅಲೆಯು ಮೇಲೆದ್ದು ಬೀಳುತ್ತದೆ. ಸಂದೇಹಪಡುವವನು ಆ ಅಲೆಯಂತಿರುವನು. 7-8 ಅವನು ಒಂದೇ ಕಾಲದಲ್ಲಿ ಎರಡು ರೀತಿಯ ಸಂಗತಿಗಳನ್ನು ಯೋಚಿಸುತ್ತಾನೆ. ಅವನು ತಾನು ಮಾಡುವ ಯಾವುದೇ ಕಾರ್ಯದಲ್ಲಾಗಲಿ ಒಂದು ತೀರ್ಮಾನಕ್ಕೆ ಬರಲಾರನು. ಅಂಥವನು ತನಗೆ ಪ್ರಭುವಿನಿಂದ ಏನಾದರೂ ದೊರೆಯುತ್ತದೆ ಎಂದು ಯೋಚಿಸದಿರಲಿ.

ನಿಜ ಶ್ರೀಮಂತಿಕೆ

ಬಡವನಾಗಿರುವ ವಿಶ್ವಾಸಿಯು ಹೆಮ್ಮೆಪಡಲಿ, ಏಕೆಂದರೆ ದೇವರು ಅವನನ್ನು ಆತ್ಮಿಕ ವಿಷಯದಲ್ಲಿ ಐಶ್ವರ್ಯವಂತನನ್ನಾಗಿ ಮಾಡಿದ್ದಾನೆ. 10 ಐಶ್ವರ್ಯವಂತನಾಗಿರುವ ವಿಶ್ವಾಸಿಯೂ ಹೆಮ್ಮೆಪಡಬೇಕು. ಏಕೆಂದರೆ ಆತ್ಮಿಕ ವಿಷಯದಲ್ಲಿ ಅವನಿಗಿರುವ ಬಡತನವನ್ನು ದೇವರು ಅವನಿಗೆ ತೋರಿಸಿಕೊಟ್ಟಿದ್ದಾನೆ. ಐಶ್ವರ್ಯವಂತನು ಹುಲ್ಲಿನ ಹೂವಿನಂತೆ ಗತಿಸುವನು. 11 ಸೂರ್ಯನು ಮೇಲೇರಿದಂತೆ ಬಿಸಿಲು ಹೆಚ್ಚಾಗುವುದು. ಸೂರ್ಯನ ತಾಪದಿಂದ ಗಿಡಗಳು ಒಣಗಿಹೋಗುವವು; ಹೂವುಗಳು ಉದುರಿ ಹೋಗುವವು. ಹೂವು ಸುಂದರವಾಗಿತ್ತು, ಆದರೆ ಈಗ ಅದು ಒಣಗಿಹೋಯಿತು. ಐಶ್ವರ್ಯವಂತನಿಗೂ ಇದೇ ರೀತಿಯಾಗುವುದು. ಅವನು ತನ್ನ ವ್ಯಾಪಾರದ ಬಗ್ಗೆ ಯೋಜನೆಗಳನ್ನು ಮಾಡುತ್ತಿರುವಾಗಲೇ ಸತ್ತುಹೋಗುವನು.

ಶೋಧನೆಯು ದೇವರಿಂದ ಬರುವುದಿಲ್ಲ

12 ಶೋಧನೆಯನ್ನು ಎದುರಿಸುತ್ತಿದ್ದರೂ ದೃಢವಾಗಿರುವವನೇ ಧನ್ಯನು. ಏಕೆಂದರೆ ಅವನು ತನ್ನ ನಂಬಿಕೆಯನ್ನು ನಿರೂಪಿಸಿದಾಗ, ಜೀವವೆಂಬ ಜಯಮಾಲೆಯನ್ನು ಹೊಂದುವನು. ದೇವರು ತನ್ನನ್ನು ಪ್ರೀತಿಸುವ ಜನರಿಗೆಲ್ಲರಿಗೂ ಇದನ್ನು ವಾಗ್ದಾನ ಮಾಡಿದ್ದಾನೆ. 13 ಶೋಧನೆಗೆ ಗುರಿಯಾಗಿರುವ ವ್ಯಕ್ತಿಯು, “ದೇವರು ನನ್ನನ್ನು ಶೋಧಿಸುತ್ತಿದ್ದಾನೆ” ಎಂದು ಹೇಳಬಾರದು. ಕೆಟ್ಟದ್ದು ದೇವರನ್ನು ಶೋಧಿಸಲಾರದು. ದೇವರು ತಾನಾಗಿಯೇ ಯಾರನ್ನೂ ಶೋಧಿಸುವುದಿಲ್ಲ. 14 ಶೋಧನೆಗೆ ಗುರಿಯಾಗಿರುವವನು ತಾನು ಇಷ್ಟಪಡುವ ಕೆಟ್ಟಕಾರ್ಯಗಳಿಂದಲೇ ಶೋಧನೆಗೆ ಒಳಗಾಗಿದ್ದಾನೆ. ಅವನ ಕೆಟ್ಟ ಆಸೆಗಳೇ ಅವನನ್ನು ದೂರ ಸೆಳೆದು, ಬಿಡದೆ ಹಿಡಿದುಕೊಳ್ಳುತ್ತವೆ. 15 ಈ ಆಸೆಗಳು ಅವನಿಂದ ಪಾಪವನ್ನು ಮಾಡಿಸುತ್ತದೆ. ನಂತರ ಪಾಪವು ಬೆಳೆದು ಸಾವನ್ನು ತರುತ್ತದೆ.

16 ನನ್ನ ಪ್ರಿಯ ಸಹೋದರ ಸಹೋದರಿಯರೇ, ಈ ವಿಷಯದಲ್ಲಿ ನೀವು ಮೋಸಹೋಗಬೇಡಿರಿ. 17 ಎಲ್ಲಾ ಒಳ್ಳೆಯ ದಾನಗಳೂ ಕುಂದಿಲ್ಲದ ವರಗಳೂ, ಎಲ್ಲಾ ಬೆಳಕುಗಳಿಗೆ (ಸೂರ್ಯ, ಚಂದ್ರ, ನಕ್ಷತ್ರಗಳು) ಮೂಲ ಕಾರಣನಾದ ಸೃಷ್ಟಿ ಕರ್ತನಿಂದ ಬರುತ್ತವೆ. ದೇವರು ಬದಲಾಗುವುದಿಲ್ಲ. ಆತನು ಎಲ್ಲಾ ಕಾಲದಲ್ಲಿಯೂ ಒಂದೇ ರೀತಿಯಲ್ಲಿರುತ್ತಾನೆ. 18 ದೇವರು ಸತ್ಯವಾಕ್ಯದ ಮೂಲಕ ನಮಗೆ ಜೀವವನ್ನು ದಯಪಾಲಿಸಲು ತೀರ್ಮಾನಿಸಿದ್ದಾನೆ. ತನ್ನಿಂದ ಸೃಷ್ಟಿಸಲ್ಪಟ್ಟ ಎಲ್ಲಾ ವಸ್ತುಗಳಲ್ಲಿಯೂ ನಾವು ಅತ್ಯಂತ ಮುಖ್ಯರಾಗಬೇಕೆಂಬುದೇ ಆತನ ಅಪೇಕ್ಷೆ.

ಕೇಳುವಿಕೆ ಮತ್ತು ವಿಧೇಯತೆ

19 ನನ್ನ ಸಹೋದರ ಸಹೋದರಿಯರೇ, ಯಾವಾಗಲೂ ಮಾತನಾಡುವುದಕ್ಕಿಂತ ಕೇಳುವುದರಲ್ಲಿ ಆಸಕ್ತರಾಗಿರಿ. ಸುಲಭವಾಗಿ ಕೋಪಗೊಳ್ಳದಿರಿ. 20 ಒಬ್ಬ ವ್ಯಕ್ತಿಯ ಕೋಪವು ದೇವರು ಅಪೇಕ್ಷಿಸಿದಂತೆ ಯೋಗ್ಯ ಜೀವನವನ್ನು ನಡೆಸಲು ಅವನಿಗೆ ಸಹಾಯಕವಾಗುವುದಿಲ್ಲ. 21 ಆದ್ದರಿಂದ ಎಲ್ಲಾ ನೀಚತನವನ್ನೂ ದುಷ್ಟತನವನ್ನೂ ನಿಮ್ಮ ಜೀವನದಿಂದ ದೂರತಳ್ಳಿರಿ. ನಿಮ್ಮ ಹೃದಯದಲ್ಲಿ ಬೇರೂರಿರುವ ದೇವರ ವಾಕ್ಯವನ್ನು ದೀನತೆಯಿಂದ ಒಪ್ಪಿಕೊಳ್ಳಿರಿ. ಅದು ನಿಮ್ಮ ಆತ್ಮಗಳನ್ನು ರಕ್ಷಿಸುತ್ತದೆ.

22 ದೇವರ ವಾಕ್ಯವನ್ನು ಕೇವಲ ಕೇಳುವವರಾಗಿರದೆ ಅದನ್ನು ಕಾರ್ಯರೂಪಕ್ಕೆ ತನ್ನಿರಿ. ಇಲ್ಲವಾದರೆ ನಿಮ್ಮನ್ನು ನೀವೇ ಮೋಸಗೊಳಿಸಿಕೊಳ್ಳುವಿರಿ. 23 ದೇವರ ವಾಕ್ಯವನ್ನು ಕೇಳಿಯೂ ಅದರಂತೆ ನಡೆಯದವನು ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿಕೊಂಡವನಂತಿರುವನು. 24 ಅವನು ಅಲ್ಲಿಂದ ಹೊರಟು ಹೋಗಿ, ತಾನು ಹೇಗಿದ್ದೇನೆಂಬುದನ್ನು ಬೇಗನೆ ಮರೆತುಬಿಡುತ್ತಾನೆ. 25 ಜನರನ್ನು ಬಿಡುಗಡೆ ಮಾಡುವ ದೇವರ ಪರಿಪೂರ್ಣ ನಿಯಮವನ್ನು ಎಚ್ಚರಿಕೆಯಿಂದ ಅಭ್ಯಾಸ ಮಾಡುವವನು ನಿಜವಾಗಿಯೂ ಸಂತೋಷಭರಿತನಾಗಿದ್ದಾನೆ. ಅವನು ಅದನ್ನು ಅಭ್ಯಾಸ ಮಾಡುತ್ತಲೇ ಇರುತ್ತಾನೆ. ಅವನು ದೇವರ ವಾಕ್ಯವನ್ನು ಕೇಳುತ್ತಾನೆ ಮತ್ತು ತಾನು ಕೇಳಿದ್ದನ್ನು ಮರೆತುಬಿಡುವುದಿಲ್ಲ. ಅವನು ದೇವರ ವಾಕ್ಯಕ್ಕೆ ವಿಧೇಯನಾಗಿರುತ್ತಾನೆ. ಆದ್ದರಿಂದಲೇ ಅವನು ಸಂತೋಷಭರಿತನಾಗಿರುತ್ತಾನೆ.

ದೇವರನ್ನು ಆರಾಧಿಸತಕ್ಕ ನಿಜವಾದ ಮಾರ್ಗ

26 ಸದ್ಭಕ್ತನೆಂದು ತನ್ನ ಬಗ್ಗೆ ಹೇಳಿಕೊಳ್ಳುವವನು ತನ್ನ ನಾಲಿಗೆಗೆ ಕಡಿವಾಣವನ್ನು ಹಾಕದೆಹೋದರೆ ಅವನು ತನ್ನನ್ನು ತಾನೇ ಮೋಸಗೊಳಿಸಿಕೊಂಡಂತಾಗುವುದು. ಅವನ “ಭಕ್ತಿ”ಗೆ ಬೆಲೆಯಿಲ್ಲ. 27 ದೇವರು ಒಪ್ಪಿಕೊಳ್ಳುವ ಭಕ್ತಿಯು ಹೀಗಿದೆ: ಕೊರತೆಯಲ್ಲಿರುವ ಅನಾಥರನ್ನೂ ವಿಧವೆಯರನ್ನೂ ನೋಡಿಕೊಳ್ಳುವುದು ಮತ್ತು ಲೋಕದ ಕೆಟ್ಟತನದಿಂದ ಪ್ರಭಾವಿತರಾಗದಂತೆ ಅದರಿಂದ ದೂರವಿರುವುದು. ದೇವರು ಇಂಥ ಭಕ್ತಿಯನ್ನು ಪರಿಶುದ್ಧವಾದದ್ದೆಂದೂ ಒಳಿತಾದದ್ದೆಂದೂ ಪರಿಗಣಿಸಿ ಸ್ವೀಕರಿಸಿಕೊಳ್ಳುವನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International