Old/New Testament
43 ಯೆರೆಮೀಯನು ದೇವರಾದ ಯೆಹೋವನ ಸಂದೇಶವನ್ನು ಜನರಿಗೆ ಹೇಳಿ ಮುಗಿಸಿದನು. ಯೆಹೋವನು ತನ್ನ ಮೂಲಕ ಹೇಳಿ ಕಳುಹಿಸಿದ ಮಾತುಗಳನ್ನೆಲ್ಲ ಯೆರೆಮೀಯನು ಅವರಿಗೆ ತಿಳಿಸಿದನು.
2 ಹೋಷಾಯನ ಮಗನಾದ ಅಜರ್ಯನೂ ಕಾರೇಹನ ಮಗನಾದ ಯೋಹಾನಾನನೂ ಮತ್ತು ಇನ್ನೂ ಕೆಲವರು ದುರಹಂಕಾರಿಗಳಾಗಿದ್ದರು ಮತ್ತು ಹಟಮಾರಿಗಳಾಗಿದ್ದರು. ಈ ಜನರು ಯೆರೆಮೀಯನ ಮೇಲೆ ಕೋಪಗೊಂಡು, “ಯೆರೆಮೀಯನೇ, ನೀನು ಸುಳ್ಳು ಹೇಳುತ್ತಿರುವೆ. ನಮ್ಮ ದೇವರಾದ ಯೆಹೋವನು ನಮಗೆ, ‘ನೀವು ಈಜಿಪ್ಟಿಗೆ ವಾಸಮಾಡಲು ಹೋಗಬಾರದು’ ಎಂದು ಹೇಳುವದಕ್ಕಾಗಿ ನಿನ್ನನ್ನು ಕಳುಹಿಸಿಲ್ಲ. 3 ಯೆರೆಮೀಯನೇ, ನೀನು ನಮ್ಮ ವಿರುದ್ಧವಾಗಿರುವಂತೆ ನೇರೀಯನ ಮಗನಾದ ಬಾರೂಕನು ಪ್ರೋತ್ಸಾಹಿಸುತ್ತಿದ್ದಾನೆ ಎಂಬುದು ನಮ್ಮ ಆಲೋಚನೆ. ಅವನು ನಮ್ಮನ್ನು ಬಾಬಿಲೋನಿನ ಜನರ ಕೈಗೆ ಕೊಟ್ಟು ಅವರಿಂದ ಕೊಲ್ಲಿಸಬಯಸುತ್ತಾನೆ ಅಥವಾ ಅವರು ನಮ್ಮನ್ನು ಸೆರೆಹಿಡಿದು ಬಾಬಿಲೋನಿಗೆ ಕೊಂಡೊಯ್ಯುವಂತೆ ಮಾಡಬಯಸುತ್ತಾನೆಂದು ತೋರುತ್ತದೆ” ಎಂದು ಹೇಳಿದರು.
4 ಯೋಹಾನಾನನು, ಸೇನಾಧಿಪತಿಗಳು ಮತ್ತು ಎಲ್ಲಾ ಜನರು ಯೆಹೋವನ ಆಜ್ಞೆಯನ್ನು ಮೀರಿದರು. ಯೆಹೂದದಲ್ಲಿ ಇರಬೇಕೆಂದು ಯೆಹೋವನು ಅವರಿಗೆ ಆಜ್ಞಾಪಿಸಿದನು. 5 ಆದರೆ ಯೆಹೋವನ ಆಜ್ಞೆಯನ್ನು ಉಲ್ಲಂಘಿಸಿ ಯೋಹಾನಾನನು ಮತ್ತು ಸೇನಾಧಿಪತಿಗಳು ಅಳಿದುಳಿದ ಜನರನ್ನು ಯೆಹೂದದಿಂದ ಈಜಿಪ್ಟಿಗೆ ಕರೆದುಕೊಂಡು ಹೋದರು. ಈ ಮುಂಚೆ ಶತ್ರುಗಳು ಆ ಜನರನ್ನು ಬೇರೆ ದೇಶಗಳಿಗೆ ತೆಗೆದುಕೊಂಡು ಹೋಗಿದ್ದರು. ಆದರೆ ಅವರು ಯೆಹೂದಕ್ಕೆ ತಿರುಗಿ ಬಂದಿದ್ದರು. 6 ಈಗ ಯೋಹಾನಾನ ಮತ್ತು ಎಲ್ಲಾ ಸೈನ್ಯಾಧಿಕಾರಿಗಳು, ಎಲ್ಲಾ ಗಂಡಸರು, ಹೆಂಗಸರು ಮತ್ತು ಮಕ್ಕಳನ್ನು ಈಜಿಪ್ಟಿಗೆ ತೆಗೆದುಕೊಂಡು ಹೋದರು. ಆ ಜನಗಳಲ್ಲಿ ರಾಜನ ಹೆಣ್ಣುಮಕ್ಕಳಿದ್ದರು. (ನೆಬೂಜರದಾನನು ಗೆದಲ್ಯನನ್ನು ಆ ಜನರ ಮೇಲ್ವಿಚಾರಕನನ್ನಾಗಿ ನೇಮಿಸಿದ್ದನು. ನೆಬೂಜರದಾನನು ಬಾಬಿಲೋನಿನ ರಾಜನ ವಿಶೇಷ ರಕ್ಷಕದಳದ ಅಧಿಪತಿಯಾಗಿದ್ದನು). ಯೋಹಾನಾನನು ಪ್ರವಾದಿಯಾದ ಯೆರೆಮೀಯನನ್ನು ಮತ್ತು ನೇರೀಯನ ಮಗನಾದ ಬಾರೂಕನನ್ನು ತೆಗೆದುಕೊಂಡು ಹೋದನು. 7 ಆ ಜನರು ಯೆಹೋವನ ಮಾತುಗಳನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಆ ಎಲ್ಲಾ ಜನರು ಈಜಿಪ್ಟಿಗೆ ಹೋದರು. ಅವರು ತಹಪನೇಸ್ ಎಂಬ ಊರಿಗೆ ಸೇರಿದರು.
8 ತಹಪನೇಸ್ ಊರಿನಲ್ಲಿ ಯೆರೆಮೀಯನಿಗೆ ಯೆಹೋವನಿಂದ ಈ ಸಂದೇಶ ಬಂದಿತು: 9 “ಯೆರೆಮೀಯನೇ, ನೀನು ನಿನ್ನ ಕೈಯಲ್ಲಿ ದೊಡ್ಡ ಕಲ್ಲುಗಳನ್ನು ತೆಗೆದುಕೊಂಡು ಹೋಗಿ ತಹಪನೇಸಿನಲ್ಲಿರುವ ಫರೋಹನ ಮನೆಯ ಬಾಗಿಲ ಮುಂದೆ ಹೂಳಿ ಗಾರೆಯಿಂದ ಮುಚ್ಚಿಬಿಡು. ಯೆಹೂದದ ಜನರ ಎದುರಿನಲ್ಲಿಯೇ ಹೀಗೆ ಮಾಡು. 10 ನಿನ್ನನ್ನು ನೋಡುತ್ತಿದ್ದ ಆ ಯೆಹೂದ್ಯರಿಗೆ ಹೀಗೆ ಹೇಳು: ‘ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುತ್ತಾನೆ: ನಾನು ಬಾಬಿಲೋನಿನ ರಾಜನಾದ ನೆಬೂಕದ್ನೆಚ್ಚರನನ್ನು ಇಲ್ಲಿಗೆ ಕರೆಸುತ್ತೇನೆ. ಅವನು ನನ್ನ ಸೇವಕನಾಗಿದ್ದಾನೆ. ನಾನು ಈ ಸ್ಥಳದಲ್ಲಿ ಹೂಳಿದ ಕಲ್ಲುಗಳ ಮೇಲೆ ಅವನ ಸಿಂಹಾಸನವನ್ನು ಸ್ಥಾಪಿಸುತ್ತೇನೆ. ನೆಬೂಕದ್ನೆಚ್ಚರನು ಈ ಕಲ್ಲುಗಳ ಮೇಲೆ ತನ್ನ ಗುಡಾರವನ್ನು ಹಾಕುವನು. 11 ನೆಬೂಕದ್ನೆಚ್ಚರನು ಇಲ್ಲಿಗೆ ಬಂದು ಈಜಿಪ್ಟಿನ ಮೇಲೆ ಧಾಳಿ ಮಾಡುವನು. ಕೊಲ್ಲಬೇಕೆಂದು ಗೊತ್ತುಮಾಡಿದವರನ್ನು ಕೊಂದುಹಾಕುವನು; ಸೆರೆಹಿಡಿಯಬೇಕೆಂದು ಗೊತ್ತು ಮಾಡಿಕೊಂಡವರನ್ನು ಸೆರೆಹಿಡಿಯುವನು; ಖಡ್ಗದಿಂದ ಕೊಲೆಯಾಗಬೇಕೆಂದು ಗೊತ್ತುಪಡಿಸಿದವರ ಸಲುವಾಗಿ ಅವನು ಖಡ್ಗವನ್ನು ತರುವನು. 12 ಈಜಿಪ್ಟಿನ ಸುಳ್ಳುದೇವರುಗಳ ಆಲಯದಲ್ಲಿ ನೆಬೂಕದ್ನೆಚ್ಚರನು ಬೆಂಕಿಯನ್ನು ಹೊತ್ತಿಸುವನು, ಅವನು ಆಲಯಗಳನ್ನು ಸುಟ್ಟು ಆ ವಿಗ್ರಹಗಳನ್ನು ತೆಗೆದುಕೊಂಡು ಹೋಗುವನು. ಕುರುಬನು ತನ್ನ ಬಟ್ಟೆಗಳಿಂದ ತಿಗಣೆ ಮತ್ತು ಹೇನುಗಳನ್ನು ತೆಗೆದುಹಾಕಿ ಸ್ವಚ್ಛಗೊಳಿಸುವಂತೆ ನೆಬೂಕದ್ನೆಚ್ಚರನು ಈಜಿಪ್ಟನ್ನು ಬಿಟ್ಟು ಹೋಗುವನು. 13 ನೆಬೂಕದ್ನೆಚ್ಚರನು ಈಜಿಪ್ಟಿನ ಸೂರ್ಯ ದೇವಾಲಯದಲ್ಲಿದ್ದ ಸ್ಮಾರಕಸ್ತಂಭಗಳನ್ನು ನಾಶಪಡಿಸುವನು. ಅವನು ಈಜಿಪ್ಟಿನ ಸುಳ್ಳುದೇವರುಗಳ ಆಲಯಗಳನ್ನು ಸುಟ್ಟುಹಾಕುವನು.’”
ಈಜಿಪ್ಟಿನಲ್ಲಿದ್ದ ಯೆಹೂದ್ಯರಿಗೆ ಯೆಹೋವನ ಸಂದೇಶ
44 ಯೆರೆಮೀಯನಿಗೆ ಯೆಹೋವನಿಂದ ಒಂದು ಸಂದೇಶ ಬಂದಿತು. ಈ ಸಂದೇಶವನ್ನು ಈಜಿಪ್ಟಿನಲ್ಲಿ ವಾಸಿಸಿದ ಎಲ್ಲಾ ಯೆಹೂದ್ಯರಿಗಾಗಿ ಕೊಡಲಾಗಿತ್ತು. ಈ ಸಂದೇಶವು ಮಿಗ್ದೋಲ್, ತಹಪನೇಸ್, ನೋಫ್ ಪಟ್ಟಣಗಳಲ್ಲಿ ಮತ್ತು ಈಜಿಪ್ಟಿನ ದಕ್ಷಿಣ ಭಾಗದಲ್ಲಿ ವಾಸಮಾಡುತ್ತಿದ್ದ ಯೆಹೂದ್ಯರಿಗಾಗಿ ಇತ್ತು. ಆ ಸಂದೇಶವೇನೆಂದರೆ: 2 ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೇಳುತ್ತಾನೆ, “ನಾನು ಜೆರುಸಲೇಮ್ ನಗರಕ್ಕೂ ಮತ್ತು ಯೆಹೂದದ ಎಲ್ಲಾ ಪಟ್ಟಣಗಳಿಗೂ ತಂದ ಭಯಂಕರವಾದ ಕೇಡನ್ನು ನೀವು ನೋಡಿದ್ದೀರಿ. ಆ ಪಟ್ಟಣಗಳು ಇಂದು ಕೇವಲ ಕಲ್ಲಿನ ಗುಡ್ಡೆಗಳಾಗಿವೆ. 3 ಅಲ್ಲಿ ವಾಸಿಸುವ ಜನರು ದುಷ್ಕೃತ್ಯಗಳನ್ನು ಮಾಡಿದ್ದರಿಂದ ಸ್ಥಳಗಳನ್ನು ನಾಶಮಾಡಲಾಯಿತು. ಆ ಜನರು ಬೇರೆ ದೇವರುಗಳಿಗೆ ಬಲಿಯನ್ನು ಅರ್ಪಿಸಿದ್ದಾರೆ. ಆದ್ದರಿಂದ ನನಗೆ ಕೋಪ ಬಂದಿದೆ. ಹಿಂದೆ ನಿಮ್ಮ ಜನರು ಮತ್ತು ನಿಮ್ಮ ಪೂರ್ವಿಕರು ಆ ದೇವರುಗಳನ್ನು ಪೂಜಿಸಿರಲಿಲ್ಲ. 4 ನಾನು ಮತ್ತೆಮತ್ತೆ ನನ್ನ ಪ್ರವಾದಿಗಳನ್ನು ಆ ಜನರಲ್ಲಿಗೆ ಕಳಿಸಿಕೊಟ್ಟೆ. ಆ ಪ್ರವಾದಿಗಳು ನನ್ನ ಸೇವಕರಾಗಿದ್ದರು. ಆ ಪ್ರವಾದಿಗಳು ನನ್ನ ಸಂದೇಶವನ್ನು ಜನರಿಗೆ ತಿಳಿಸಿ ‘ಈ ದುಷ್ಕೃತ್ಯವನ್ನು ಮಾಡಬೇಡಿರಿ, ನೀವು ಈ ವಿಗ್ರಹಗಳ ಪೂಜೆಮಾಡುವದನ್ನು ನಾನು ದ್ವೇಷಿಸುತ್ತೇನೆ’ ಎಂದು ಹೇಳಿದರು. 5 ಆದರೆ ಆ ಜನರು ಪ್ರವಾದಿಗಳ ಮಾತನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಅವರು ಆ ಪ್ರವಾದಿಗಳ ಕಡೆಗೆ ಗಮನ ಕೊಡಲಿಲ್ಲ. ಆ ಜನರು ತಮ್ಮ ದುಷ್ಟತನವನ್ನು ನಿಲ್ಲಿಸಲಿಲ್ಲ. ಅವರು ಬೇರೆ ದೇವರುಗಳಿಗೆ ಬಲಿ ಕೊಡುವುದನ್ನು ನಿಲ್ಲಿಸಲಿಲ್ಲ. 6 ಆದ್ದರಿಂದ ಆ ಜನರ ಮೇಲೆ ನಾನು ನನ್ನ ಕೋಪವನ್ನು ವ್ಯಕ್ತಪಡಿಸಿದೆ. ನಾನು ಯೆಹೂದದ ಪಟ್ಟಣಗಳನ್ನು ಮತ್ತು ಜೆರುಸಲೇಮಿನ ಬೀದಿಗಳನ್ನು ದಂಡಿಸಿದೆ. ನನ್ನ ಕೋಪವು ಜೆರುಸಲೇಮ್ ನಗರವನ್ನು ಮತ್ತು ಯೆಹೂದದ ಪಟ್ಟಣಗಳನ್ನು ಈಗಿದ್ದ ಕಲ್ಲಿನ ದಿಬ್ಬಗಳನ್ನಾಗಿ ಮಾಡಿತು.
7 “ಇಸ್ರೇಲಿನ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುವನು: ವಿಗ್ರಹಗಳ ಪೂಜೆಮಾಡಿ ನಿಮ್ಮನ್ನು ನೀವೇ ಏಕೆ ತೊಂದರೆಗೀಡು ಮಾಡಿಕೊಳ್ಳುವಿರಿ? ಈ ದುರಾಚಾರದ ನಿಮಿತ್ತ ನೀವು ಯೆಹೂದ ಕುಟುಂಬದಿಂದ ಗಂಡಸರನ್ನು, ಹೆಂಗಸರನ್ನು, ಮಕ್ಕಳನ್ನು ಮತ್ತು ಕೂಸುಗಳನ್ನು ಅಗಲಿಸುತ್ತಿದ್ದೀರಿ. ಯೆಹೂದ ಕುಲದಿಂದ ಯಾರೂ ಉಳಿಯದಂತೆ ಮಾಡುತ್ತಿದ್ದೀರಿ. 8 ನೀವು ವಿಗ್ರಹಗಳನ್ನು ಮಾಡಿ ನನ್ನನ್ನು ಏಕೆ ಸಿಟ್ಟಿಗೆಬ್ಬಿಸುವಿರಿ? ಈಗ ನೀವು ಈಜಿಪ್ಟಿನಲ್ಲಿ ವಾಸಮಾಡುತ್ತಿರುವಿರಿ. ಈಗ ಈಜಿಪ್ಟಿನ ಸುಳ್ಳುದೇವರುಗಳಿಗೆ ನೈವೇದ್ಯವನ್ನು ಅರ್ಪಿಸಿ ನನಗೆ ಕೋಪ ಬರುವಂತೆ ಮಾಡುತ್ತಿರುವಿರಿ. ನೀವೇ ನಿಮ್ಮನ್ನು ನಾಶಮಾಡಿಕೊಳ್ಳುವಿರಿ. ಅದು ನಿಮ್ಮ ತಪ್ಪೇ ಆಗುವುದು. ಬೇರೆ ಜನಾಂಗದವರು ನಿಂದಿಸುವಂತೆ ನಿಮ್ಮನ್ನು ನೀವು ಮಾಡಿಕೊಳ್ಳುತ್ತಿದ್ದೀರಿ. ಭೂಮಂಡಲದ ಎಲ್ಲಾ ಜನಾಂಗಗಳು ನಿಮ್ಮನ್ನು ತಮಾಷೆ ಮಾಡುವಂತಾಗುವುದು. 9 ನಿಮ್ಮ ಪೂರ್ವಿಕರು ಮಾಡಿದ್ದ ದುಷ್ಟತನವನ್ನು ನೀವು ಮರೆತುಬಿಟ್ಟಿರಾ? ಯೆಹೂದದ ರಾಜರು ಮತ್ತು ರಾಣಿಯರು ಮಾಡಿದ್ದ ದುಷ್ಟತನವನ್ನು ನೀವು ಮರೆತುಬಿಟ್ಟಿರುವಿರಾ? ನೀವು ಮತ್ತು ನಿಮ್ಮ ಪತ್ನಿಯರು ಯೆಹೂದದಲ್ಲಿ ಮತ್ತು ಜೆರುಸಲೇಮಿನ ಬೀದಿಗಳಲ್ಲಿ ಮಾಡಿದ ದುಷ್ಟತನವನ್ನು ಮರೆತುಬಿಟ್ಟಿರಾ? 10 ಇಂದಿನವರೆಗೂ ಯೆಹೂದದ ಜನ ತಮ್ಮನ್ನು ವಿನೀತರನ್ನಾಗಿ ಮಾಡಿಕೊಂಡಿಲ್ಲ. ಅವರು ನನ್ನ ಬಗ್ಗೆ ಎಳ್ಳಷ್ಟು ಗೌರವವನ್ನು ತೋರಿಸಿಲ್ಲ. ಆ ಜನರು ನನ್ನ ಉಪದೇಶಗಳಂತೆ ನಡೆದುಕೊಂಡಿಲ್ಲ. ನಾನು ನಿಮಗೂ ಮತ್ತು ನಿಮ್ಮ ಪೂರ್ವಿಕರಿಗೂ ಕೊಟ್ಟ ಧರ್ಮೋಪದೇಶಗಳನ್ನು ಅವರು ಪಾಲಿಸಲಿಲ್ಲ.”
11 “ಆದ್ದರಿಂದ ಇಸ್ರೇಲರ ದೇವರೂ ಸರ್ವಶಕ್ತನೂ ಆಗಿರುವ ಯೆಹೋವನು ಹೀಗೆ ಹೇಳುವನು: ನಿಮಗೆ ಭಯಾನಕವಾದ ಕೇಡನ್ನು ಉಂಟುಮಾಡಬೇಕೆಂದು ನಾನು ನಿಶ್ಚಯ ಮಾಡಿದ್ದೇನೆ. ನಾನು ಯೆಹೂದದ ಇಡೀ ಕುಲವನ್ನು ನಾಶಮಾಡುವೆನು. 12 ಯೆಹೂದದಲ್ಲಿ ಅಳಿದುಳಿದ ಕೆಲವು ಜನರಿದ್ದರು. ಆ ಜನರು ಈಜಿಪ್ಟಿನಲ್ಲಿ ನೆಲೆಸಲು ಬಂದರು. ಆದರೆ ನಾನು ಯೆಹೂದಕುಲದ ಆ ಕೆಲವು ಅಳಿದುಳಿದವರನ್ನು ನಾಶಮಾಡುವೆನು. ಅವರು ಕತ್ತಿಗಳಿಂದ ಕೊಲ್ಲಲ್ಪಡುವರು; ಹಸಿವಿನಿಂದ ಸತ್ತುಹೋಗುವರು. ಬೇರೆ ಜನಾಂಗಗಳ ಜನರು ಅವರ ಬಗ್ಗೆ ನಿಂದಿಸುವಂತೆ ಅವರ ಸ್ಥಿತಿ ಆಗುವುದು. ಅವರಿಗೆ ಉಂಟಾದ ದುರ್ಗತಿಯನ್ನು ನೋಡಿ ಬೇರೆ ಜನಾಂಗದ ಜನರು ಭಯಪಡುವರು. ಆ ಜನರು ಶಾಪದ ಶಬ್ಧವಾಗುವರು. ಬೇರೆ ಜನಾಂಗದವರು ಯೆಹೂದದ ಆ ಜನರಿಗೆ ಅಪಮಾನ ಮಾಡುವರು. 13 ಈಜಿಪ್ಟಿನಲ್ಲಿ ವಾಸಿಸಲು ಹೋದ ಜನರನ್ನು ನಾನು ದಂಡಿಸುವೆನು. ಅವರನ್ನು ದಂಡಿಸಲು ನಾನು ಖಡ್ಗಗಳನ್ನು, ಹಸಿವನ್ನು ಮತ್ತು ಭಯಂಕರವಾದ ವ್ಯಾಧಿಗಳನ್ನು ಬಳಸುವೆನು. ನಾನು ಜೆರುಸಲೇಮ್ ನಗರವನ್ನು ದಂಡಿಸಿದಂತೆಯೇ ಅವರನ್ನು ದಂಡಿಸುವೆನು. 14 ಈಜಿಪ್ಟಿಗೆ ವಲಸೆ ಹೋದ ಕೆಲವೇ ಯೆಹೂದದ ಜನರು ಅಳಿದುಳಿದವರಾಗಿದ್ದಾರೆ. ಒಬ್ಬನೂ ಕೂಡ ನನ್ನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾರನು. ಅವರಲ್ಲಿ ಒಬ್ಬನೂ ಜೀವಂತವಾಗಿ ಯೆಹೂದಕ್ಕೆ ಹಿಂತಿರುಗಿ ಬರಲಾರನು. ಆ ಜನರು ಯೆಹೂದಕ್ಕೆ ಹಿಂತಿರುಗಿ ಬಂದು ಅಲ್ಲಿ ವಾಸಮಾಡಬಯಸುವರು, ಆದರೆ ತಪ್ಪಿಸಿಕೊಂಡ ಸ್ವಲ್ಪ ಜನರನ್ನು ಬಿಟ್ಟು ಮಿಕ್ಕವರಾರೂ ಯೆಹೂದಕ್ಕೆ ಹಿಂತಿರುಗುವದಿಲ್ಲ.”
15 ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಅನೇಕ ಯೆಹೂದಿ ಸ್ತ್ರೀಯರು ಬೇರೆ ದೇವರುಗಳಿಗೆ ನೈವೇದ್ಯಗಳನ್ನು ಅರ್ಪಿಸುತ್ತಿದ್ದರು. ಅವರ ಗಂಡಂದಿರಿಗೆ ಅದು ಗೊತ್ತಿತ್ತು. ಆದರೆ ಅವರು ಅದನ್ನು ತಡೆಯಲಿಲ್ಲ. ಯೆಹೂದದ ಜನರ ಒಂದು ದೊಡ್ಡ ಗುಂಪು ಸೇರಿತ್ತು. ಅವರು ಈಜಿಪ್ಟಿನ ದಕ್ಷಿಣಭಾಗದಲ್ಲಿ ವಾಸಿಸುವ ಯೆಹೂದಿಗಳಾಗಿದ್ದರು. ಅನ್ಯದೇವರುಗಳಿಗೆ ನೈವೇದ್ಯವನ್ನು ಅರ್ಪಿಸುತ್ತಿದ್ದ ಸ್ತ್ರೀಯರ ಗಂಡಂದಿರು ಯೆರೆಮೀಯನಿಗೆ ಹೀಗೆಂದರು: 16 “ನೀನು ನಮಗೆ ತಿಳಿಸಿದ ಯೆಹೋವನ ಸಂದೇಶವನ್ನು ಕೇಳಿಸಿಕೊಳ್ಳುವದಿಲ್ಲ. 17 ನಾವು ಸ್ವರ್ಗದ ರಾಣಿಗೆ ನೈವೇದ್ಯವನ್ನು ಅರ್ಪಿಸುವದಾಗಿ ಹರಕೆ ಮಾಡಿದ್ದೇವೆ ಮತ್ತು ನಮ್ಮ ಹರಕೆಗಳನ್ನೆಲ್ಲ ಪೂರೈಸುತ್ತೇವೆ. ನಾವು ನೈವೇದ್ಯವನ್ನು ಕೊಡುತ್ತೇವೆ ಮತ್ತು ಅವಳ ಪೂಜೆಗಾಗಿ ಪಾನನೈವೇದ್ಯವನ್ನು ಅರ್ಪಿಸುತ್ತೇವೆ. ನಾವು ಮೊದಲು ಹಾಗೆಯೇ ಮಾಡಿದ್ದೇವೆ. ನಮ್ಮ ಪೂರ್ವಿಕರು, ನಮ್ಮ ರಾಜರು, ನಮ್ಮ ಅಧಿಕಾರಿಗಳು ಮೊದಲು ಮಾಡಿದಂತೆಯೇ ನಾವೆಲ್ಲರೂ ಜೆರುಸಲೇಮಿನ ಬೀದಿಗಳಲ್ಲಿ ಮತ್ತು ಯೆಹೂದದ ಪಟ್ಟಣಗಳಲ್ಲಿ ಮಾಡಿದ್ದೆವು. ನಾವು ಸ್ವರ್ಗದ ರಾಣಿಯನ್ನು ಪೂಜಿಸುವ ಕಾಲದಲ್ಲಿ ನಮ್ಮಲ್ಲಿ ಸಾಕಷ್ಟು ಆಹಾರವಿತ್ತು. ನಾವು ಜಯಶೀಲರಾಗಿದ್ದೆವು. ನಮಗೆ ಕೆಟ್ಟದ್ದೇನೂ ಆಗಿರಲಿಲ್ಲ. 18 ಆಮೇಲೆ ನಾವು ಸ್ವರ್ಗದ ರಾಣಿಗೆ ನೈವೇದ್ಯ ಅರ್ಪಿಸುವದನ್ನು ಮತ್ತು ಪಾನನೈವೇದ್ಯವನ್ನು ನಿಲ್ಲಿಸಿದೆವು. ಅವಳನ್ನು ಪೂಜಿಸದೆ ಹಾಗೆಲ್ಲ ಮಾಡುವದನ್ನು ನಿಲ್ಲಿಸಿದಂದಿನಿಂದ ನಮಗೆ ಸಮಸ್ಯೆಗಳುಂಟಾದವು. ನಮ್ಮ ಜನರು ಖಡ್ಗ ಮತ್ತು ಹಸಿವುಗಳಿಗೆ ಬಲಿಯಾದರು.”
19 ಆಮೇಲೆ ಹೆಂಗಸರು ಮಾತನಾಡಿದರು. ಅವರು ಯೆರೆಮೀಯನಿಗೆ ಹೀಗೆ ಹೇಳಿದರು, “ನಾವು ಏನು ಮಾಡುತ್ತಿದ್ದೆವೆಂಬುದು ನಮ್ಮ ಗಂಡಂದಿರಿಗೆ ಗೊತ್ತಿತ್ತು. ಸ್ವರ್ಗದ ರಾಣಿಗೆ ನೈವೇದ್ಯವನ್ನು ಮಾಡುವದಕ್ಕೆ ನಾವು ಅವರ ಅಪ್ಪಣೆಯನ್ನು ಪಡೆದಿದ್ದೆವು. ಅವಳಿಗೆ ಪಾನನೈವೇದ್ಯವನ್ನು ಮಾಡುವದಕ್ಕೂ ಅವರ ಅಪ್ಪಣೆಯನ್ನು ಪಡೆದಿದ್ದೆವು. ನಾವು ಅವಳ ಆಕಾರದ ಹೋಳಿಗೆಯನ್ನು ಮಾಡುತ್ತಿದ್ದೆವೆಂಬುದೂ ನಮ್ಮ ಗಂಡಂದಿರಿಗೆ ಗೊತ್ತಿತ್ತು.”
20 ಆಗ ಯೆರೆಮೀಯನು ತನಗೆ ಉತ್ತರ ಕೊಟ್ಟ ಆ ಎಲ್ಲಾ ಸ್ತ್ರೀಪುರುಷರೊಂದಿಗೆ ಮಾತನಾಡಿ ಹೀಗೆ ಹೇಳಿದನು: 21 “ನೀವು ಯೆಹೂದದ ಪಟ್ಟಣಗಳಲ್ಲಿ ಮತ್ತು ಜೆರುಸಲೇಮಿನ ಬೀದಿಗಳಲ್ಲಿ ನೈವೇದ್ಯಗಳನ್ನು ಅರ್ಪಿಸಿದ ಸಂಗತಿ ಯೆಹೋವನ ಜ್ಞಾಪಕದಲ್ಲಿದೆ. ಅದನ್ನು ಮಾಡಿದ್ದೇ ನೀವು ಮತ್ತು ನಿಮ್ಮ ಪೂರ್ವಿಕರು, ನಿಮ್ಮ ರಾಜರು, ನಿಮ್ಮ ಅಧಿಕಾರಿಗಳು ಮತ್ತು ನಿಮ್ಮ ಪ್ರದೇಶದ ಜನರು. ನೀವು ಮಾಡಿದ್ದನ್ನೆಲ್ಲಾ ಆತನು ಜ್ಞಾಪಿಸಿಕೊಂಡನು; ತನ್ನ ನೆನಪಿಗೆ ತಂದುಕೊಂಡನು. 22 ಯೆಹೋವನು ಇನ್ನು ಮುಂದೆ ತಾಳ್ಮೆಯಿಂದ ಇರಲಾರನು. ನೀವು ಮಾಡಿದ ಅಸಹ್ಯಕೃತ್ಯಗಳನ್ನು ಯೆಹೋವನು ದ್ವೇಷಿಸುತ್ತಾನೆ. ಆದ್ದರಿಂದ ಆತನು ನಿಮ್ಮ ದೇಶವನ್ನು ಬರಿದಾದ ಮರುಭೂಮಿಯನ್ನಾಗಿ ಮಾಡಿದ್ದಾನೆ, ಈಗ ಅಲ್ಲಿ ಯಾರೂ ವಾಸಿಸುವದಿಲ್ಲ. ಬೇರೆಯವರು ಆ ದೇಶದ ಬಗ್ಗೆ ಕೆಟ್ಟ ಮಾತುಗಳನ್ನಾಡುತ್ತಾರೆ. 23 ನೀವು ಬೇರೆ ದೇವರುಗಳಿಗೆ ನೈವೇದ್ಯವನ್ನು ಅರ್ಪಿಸಿದ್ದಕ್ಕಾಗಿ ಆ ಕೇಡುಗಳೆಲ್ಲಾ ಸಂಭವಿಸಿದವು. ನೀವು ಯೆಹೋವನ ವಿರುದ್ಧ ಪಾಪಮಾಡಿದಿರಿ. ನೀವು ಯೆಹೋವನ ಆಜ್ಞಾಪಾಲನೆ ಮಾಡಲಿಲ್ಲ. ನೀವು ಆತನ ಉಪದೇಶಗಳನ್ನಾಗಲಿ ಅಥವಾ ಆತನು ಬೋಧಿಸಿದ ಧರ್ಮೋಪದೇಶಗಳನ್ನಾಗಲಿ ಅನುಸರಿಸಲಿಲ್ಲ. ನೀವು ಮಾಡಿಕೊಂಡ ಒಡಂಬಡಿಕೆಯಂತೆ[a] ನಡೆಯಲಿಲ್ಲ.”
24 ಆಮೇಲೆ ಯೆರೆಮೀಯನು ಆ ಎಲ್ಲಾ ಸ್ತ್ರೀಪುರುಷರೊಂದಿಗೆ ಮಾತನಾಡಿದನು. ಯೆರೆಮೀಯನು ಹೀಗೆ ಹೇಳಿದನು: “ಈಗ ಈಜಿಪ್ಟಿನಲ್ಲಿರುವ ಎಲ್ಲಾ ಯೆಹೂದ್ಯರೇ, ಯೆಹೋವನ ಸಂದೇಶವನ್ನು ಕೇಳಿರಿ: 25 ಇಸ್ರೇಲರ ಸರ್ವಶಕ್ತನಾದ ಯೆಹೋವನು ಹೀಗೆ ಹೇಳುತ್ತಾನೆ: ‘ಸ್ತ್ರೀಯರೇ[b] “ಹರಕೆ ಹೊತ್ತಂತೆ ನಡೆದುಕೊಳ್ಳುವೆವು. ನಾವು ಮಾಡಿದ ಹರಕೆಗಳನ್ನು ಈಡೇರಿಸುವೆವು. ನಾವು ಸ್ವರ್ಗದ ರಾಣಿಗೆ ನೈವೇದ್ಯವನ್ನು ಮತ್ತು ಪಾನನೈವೇದ್ಯವನ್ನು ಮಾಡುತ್ತೇವೆಂದು ಹರಕೆ ಹೊತ್ತಿದ್ದೆವು” ಎಂದು ನೀವು ಹೇಳಿದ ಹಾಗೆ ಮಾಡಿರಿ. ನೀವು ಹರಕೆ ಹೊತ್ತ ಹಾಗೆ ಮಾಡಿರಿ. ನಿಮ್ಮ ಹರಕೆಗಳನ್ನು ಪೂರ್ಣಗೊಳಿಸಿರಿ.’ 26 ಆದರೆ, ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಎಲ್ಲಾ ಯೆಹೂದ್ಯರೇ, ಯೆಹೋವನ ಸಂದೇಶವನ್ನು ಕೇಳಿರಿ. ‘ನಾನು ಆಣೆಮಾಡಿ ಹೀಗೆ ಹೇಳುತ್ತೇನೆ. ಈಜಿಪ್ಟಿನಲ್ಲಿ ವಾಸಮಾಡುತ್ತಿರುವ ಯೆಹೂದಿಯರಲ್ಲಿ ಯಾರೊಬ್ಬರೂ ಇನ್ನು ಮುಂದೆ ನನ್ನ ಹೆಸರಿನ ಮೇಲೆ ಆಣೆಯಿಟ್ಟು ಹೇಳಲಾರರು ಎಂದು ನಾನು ನನ್ನ ಮಹತ್ತಾದ ನಾಮದ ಮೇಲೆ ಆಣೆಯಿಟ್ಟುಕೊಂಡು ಹೇಳುತ್ತೇನೆ. ಇನ್ನು ಮುಂದೆ ಎಂದೂ ಅವರು “ದೇವರ ಆಣೆಯಾಗಿ” ಎಂದು ಹೇಳಲಾರರು. 27 ನಾನು ಯೆಹೂದದ ಜನರನ್ನು ಗಮನಿಸುತ್ತಿರುವುದು ಅವರನ್ನು ಕಾಪಾಡುವುದಕ್ಕಲ್ಲ. ನಾನು ಅವರನ್ನು ಗಮನಿಸುತ್ತಿರುವುದು ಅವರಿಗೆ ಕೇಡುಮಾಡುವುದಕ್ಕಾಗಿ. ಈಜಿಪ್ಟಿನಲ್ಲಿ ವಾಸಿಸುವ ಯೆಹೂದಿಯರು ಹಸಿವಿನಿಂದ ಸತ್ತುಹೋಗುವರು ಮತ್ತು ಖಡ್ಗಕ್ಕೆ ಬಲಿಯಾಗುವರು. ಅವರು ನಿರ್ನಾಮವಾಗುವವರೆಗೆ ಸಾಯುತ್ತಿರುವರು. 28 ಕೆಲವು ಯೆಹೂದಿಯರು ಖಡ್ಗದಿಂದ ತಪ್ಪಿಸಿಕೊಳ್ಳುವರು. ಅವರು ಈಜಿಪ್ಟಿನಿಂದ ಯೆಹೂದಕ್ಕೆ ಹಿಂದಿರುಗಿ ಬರುವರು. ಆದರೆ ಹಾಗೆ ತಪ್ಪಿಸಿಕೊಳ್ಳುವ ಯೆಹೂದಿಯರು ಬಹು ಕಡಿಮೆ. ಆಗ ಈಜಿಪ್ಟಿಗೆ ವಲಸೆ ಬಂದ ಆ ಅಳಿದುಳಿದ ಯೆಹೂದಿಯರಿಗೆ ಯಾರ ಮಾತು ನಿಜವೆಂಬುದು ತಿಳಿದು ಬರುತ್ತದೆ. ನನ್ನ ಮಾತು ನಿಜವಾಯಿತೋ ಅಥವಾ ಅವರ ಮಾತು ನಿಜವಾಯಿತೋ ಎಂಬುದು ಅವರಿಗೆ ಗೊತ್ತಾಗುತ್ತದೆ. 29 ನಾನು ನಿಮ್ಮನ್ನು ಇಲ್ಲಿ ಈಜಿಪ್ಟಿನಲ್ಲಿ ದಂಡಿಸುತ್ತೇನೆಂದು ಪ್ರಮಾಣ ಮಾಡುತ್ತೇನೆ. ಆಗ ನಾನು ನಿಮ್ಮನ್ನು ದಂಡಿಸುವೆನೆಂದು ಮಾಡಿದ ಪ್ರತಿಜ್ಞೆ ಈಡೇರುವದೆಂದು ನಿಮಗೆ ತಿಳಿಯುವುದು.’ ಇದು ಯೆಹೋವನ ನುಡಿ. 30 ನಾನು ಹೇಳಿದಂತೆ ಮಾಡುವೆನೆಂಬುದಕ್ಕೆ ಪ್ರಮಾಣ ಇದು. ಯೆಹೋವನು ಹೀಗೆ ಹೇಳಿದನು: ‘ಫರೋಹ ಹೊಫ್ರನೆಂಬುವನು ಈಜಿಪ್ಟಿನ ರಾಜನಾಗಿದ್ದಾನೆ. ಅವನ ಶತ್ರುಗಳು ಅವನನ್ನು ಕೊಲ್ಲಬಯಸುತ್ತಾರೆ. ನಾನು ಫರೋಹ ಹೊಫ್ರನನ್ನು ಅವನ ಶತ್ರುಗಳಿಗೆ ಒಪ್ಪಿಸುತ್ತೇನೆ. ಚಿದ್ಕೀಯನು ಯೆಹೂದದ ರಾಜನಾಗಿದ್ದನು. ನೆಬೂಕದ್ನೆಚ್ಚರನು ಚಿದ್ಕೀಯನ ವೈರಿಯಾಗಿದ್ದನು. ನಾನು ಚಿದ್ಕೀಯನನ್ನು ಅವನ ಶತ್ರುವಿನ ಕೈಗೆ ಒಪ್ಪಿಸಿದೆ. ಅದೇ ರೀತಿ ನಾನು ಫರೋಹ ಹೊಫ್ರನನ್ನು ಅವನ ವೈರಿಯ ಕೈಗೆ ಒಪ್ಪಿಸುತ್ತೇನೆ.’”
ಬಾರೂಕನಿಗೆ ಒಂದು ಸಂದೇಶ
45 ಯೆಹೋಯಾಕೀಮನು ಯೋಷೀಯನ ಮಗ. ಯೆಹೋಯಾಕೀಮನು ಯೆಹೂದದ ರಾಜನಾದ ನಾಲ್ಕನೇ ವರ್ಷದಲ್ಲಿ ಪ್ರವಾದಿಯಾದ ಯೆರೆಮೀಯನು ನೇರೀಯನ ಮಗನಾದ ಬಾರೂಕನಿಗೆ ಹೀಗೆ ಹೇಳಿದನು. ಬಾರೂಕನು ಅದನ್ನು ಒಂದು ಸುರುಳಿಯ ಮೇಲೆ ಬರೆದನು. ಯೆರೆಮೀಯನು ಬಾರೂಕನಿಗೆ ಹೇಳಿದ್ದು ಹೀಗೆ: 2 “ಇಸ್ರೇಲಿನ ದೇವರಾದ ನಮ್ಮ ಯೆಹೋವನು ಹೀಗೆ ಹೇಳುತ್ತಾನೆ: 3 ‘“ಬಾರೂಕನೇ, ನನಗೆ ತುಂಬ ತೊಂದರೆಯಾಗಿದೆ. ನನ್ನ ನೋವಿನೊಂದಿಗೆ ಯೆಹೋವನು ನನಗೆ ದುಃಖವನ್ನು ಕೊಟ್ಟಿದ್ದಾನೆ. ನಾನು ಬಹಳ ದಣಿದಿದ್ದೇನೆ. ನನ್ನ ಸಂಕಟಗಳಿಂದ ಸೊರಗಿ ಹೋಗಿದ್ದೇನೆ. ವಿಶ್ರಾಂತಿಯನ್ನು ಕಾಣಲೂ ನನಗೆ ಸಾಧ್ಯವಿಲ್ಲ” ಎಂದು ಹೇಳಿರುವೆ. 4 ಯೆರೆಮೀಯನೇ, “ಯೆಹೋವನು ಹೀಗೆ ಹೇಳುತ್ತಾನೆಂದು ಬಾರೂಕನಿಗೆ ತಿಳಿಸು. ನಾನು ಕಟ್ಟಿದ್ದನ್ನು ಕೆಡಿಸುತ್ತೇನೆ. ನಾನು ನೆಟ್ಟಿದ್ದನ್ನು ಕಿತ್ತು ಎಸೆಯುತ್ತೇನೆ. ನಾನು ಈ ರೀತಿ ಯೆಹೂದದಲ್ಲಿ ಎಲ್ಲಾ ಕಡೆಗೂ ಮಾಡುತ್ತೇನೆ. 5 ಬಾರೂಕನೇ, ನೀನು ದೊಡ್ಡ ಪದವಿಯನ್ನು ನಿರೀಕ್ಷಿಸುತ್ತಿರುವೆ. ಆದರೆ ನೀನು ಅದನ್ನು ನಿರೀಕ್ಷಿಸಬೇಡ. ಏಕೆಂದರೆ ನಾನು ಎಲ್ಲರಿಗೆ ಭಯಂಕರವಾದ ಸಂಗತಿಗಳನ್ನು ಬರಮಾಡುವೆನು.”’ ಯೆಹೋವನು ಹೀಗೆ ಹೇಳಿದನು, ‘ನೀನು ಅನೇಕ ಸ್ಥಳಗಳಿಗೆ ಹೋಗಬೇಕಾಗಬಹುದು. ಅದರೆ ನೀನು ಎಲ್ಲಿ ಹೋದರೂ ಪ್ರಾಣ ಉಳಿಸಿಕೊಂಡು ಪಾರಾಗುವಂತೆ ನಾನು ಮಾಡುತ್ತೇನೆ.’”
5 ಪ್ರತಿಯೊಬ್ಬ ಯೆಹೂದ್ಯ ಪ್ರಧಾನಯಾಜಕನೂ ಮನುಷ್ಯರೊಳಗಿಂದ ಆರಿಸಲ್ಪಟ್ಟು ದೇವರಿಗೆ ಸಂಬಂಧಿಸಿದ ಕಾರ್ಯಗಳನ್ನು ಮನುಷ್ಯರಿಗೋಸ್ಕರ ಮಾಡಲು ನೇಮಿಸಲ್ಪಡುತ್ತಾನೆ. ಆ ಯಾಜಕನು ಪಾಪಗಳಿಗಾಗಿ ದೇವರಿಗೆ ಕಾಣಿಕೆಗಳನ್ನೂ ಯಜ್ಞಗಳನ್ನೂ ಅರ್ಪಿಸಬೇಕು. 2 ಅವನು ಜನರೆಲ್ಲರಂತೆ ದುರ್ಬಲನಾಗಿರುವುದರಿಂದ ಅರ್ಥಮಾಡಿಕೊಳ್ಳದ ಮತ್ತು ದಾರಿತಪ್ಪಿದ ಜನರ ವಿಷಯದಲ್ಲಿ ತಾಳ್ಮೆಯಿಂದ ಸಹಿಸಿಕೊಳ್ಳಲು ಶಕ್ತನಾಗಿದ್ದಾನೆ. 3 ತಾನೂ ಬಲಹೀನನಾಗಿರುವುದರಿಂದ ಅವನು ಮನುಷ್ಯರ ಪಾಪಗಳಿಗಾಗಿಯೂ ತನ್ನ ಸ್ವಂತ ಪಾಪಗಳಿಗಾಗಿಯೂ ಯಜ್ಞಗಳನ್ನು ಅರ್ಪಿಸುತ್ತಾನೆ.
4 ಪ್ರಧಾನಯಾಜಕನಾಗಿ ನೇಮಿಸಲ್ಪಡುವುದು ಒಂದು ಗೌರವ. ಆದರೆ ಯಾರೂ ತಮ್ಮನ್ನು ತಾವೇ ಈ ಕಾರ್ಯಕ್ಕೆ ಆರಿಸಿಕೊಳ್ಳುವುದಿಲ್ಲ. ದೇವರು ಆರೋನನನ್ನು ಕರೆದಂತೆ, ಆ ವ್ಯಕ್ತಿಯನ್ನು ಕರೆಯಬೇಕು. 5 ಕ್ರಿಸ್ತನೂ ಇದೇ ರೀತಿ ನೇಮಿಸಲ್ಪಟ್ಟನು. ಆತನು ಪ್ರಭಾವದ ಪ್ರಧಾನಯಾಜಕನಾಗಿ ತನ್ನನ್ನು ತಾನೇ ಆರಿಸಿಕೊಳ್ಳಲಿಲ್ಲ. ಆದರೆ ದೇವರು ಆತನನ್ನು ಆರಿಸಿದನು. ದೇವರು ಕ್ರಿಸ್ತನಿಗೆ ಹೀಗೆ ಹೇಳಿದನು:
“ನೀನು ನನ್ನ ಮಗನು.
ಈ ದಿನ ನಾನು ನಿನ್ನ ತಂದೆಯಾದೆನು.”(A)
6 ಪವಿತ್ರ ಗ್ರಂಥದ ಮತ್ತೊಂದು ಕಡೆಯಲ್ಲಿ ದೇವರು ಹೀಗೆನ್ನುತ್ತಾನೆ:
“ನೀನು ಮೆಲ್ಕಿಜೆದೇಕನಂತೆ ಸದಾಕಾಲವೂ
ಪ್ರಧಾನಯಾಜಕನಾಗಿರುವೆ.”(B)
7 ಕ್ರಿಸ್ತನು ಭೂಲೋಕದಲ್ಲಿ ಜೀವಿಸಿದ್ದಾಗ, ದೇವರಲ್ಲಿ ಪ್ರಾರ್ಥಿಸಿ, ಸಹಾಯವನ್ನು ಬೇಡಿದನು. ಆತನನ್ನು ಸಾವಿನಿಂದ ರಕ್ಷಿಸುವ ಶಕ್ತಿ ದೇವರೊಬ್ಬನಿಗೇ ಇತ್ತು. ಆದ್ದರಿಂದ ಆತನು ಗಟ್ಟಿಯಾಗಿ ರೋದಿಸುತ್ತಾ ಕಣ್ಣೀರು ಸುರಿಸುತ್ತಾ ದೇವರಲ್ಲಿ ಪ್ರಾರ್ಥಿಸಿದನು. ದೇವರ ಇಷ್ಟದಂತೆ ಆತನು ಎಲ್ಲವನ್ನೂ ಮಾಡಿದವನಾಗಿದ್ದನು ಮತ್ತು ದೀನಭಾವವನ್ನು ಹೊಂದಿದ್ದನು. ಆದ್ದರಿಂದ ದೇವರು ಆತನ ಪ್ರಾರ್ಥನೆಗಳಿಗೆ ಉತ್ತರಿಸಿದನು. 8 ಆತನು ದೇವರ ಮಗನಾಗಿದ್ದಾನೆ. ಆದರೂ ಹಿಂಸೆಗೊಳಗಾಗಿ, ತಾನು ಅನುಭವಿಸಿದ ಹಿಂಸೆಗಳಿಂದಲೇ ವಿಧೇಯನಾಗಿರುವುದನ್ನು ಕಲಿತುಕೊಂಡನು. 9 ಹೀಗಿರಲಾಗಿ ಆತನು ಪರಿಶುದ್ಧನಾಗಿದ್ದನು. ದೇವರಿಗೆ ವಿಧೇಯರಾಗುವ ಜನರೆಲ್ಲರೂ ಶಾಶ್ವತವಾದ ರಕ್ಷಣೆಯನ್ನು ಹೊಂದಿಕೊಳ್ಳಲು ಆತನೇ ಕಾರಣ. 10 ದೇವರು ಆತನನ್ನು ಮೆಲ್ಕಿಜೆದೇಕನಂತೆ ಪ್ರಧಾನ ಯಾಜಕನನ್ನಾಗಿ ಮಾಡಿದನು.
ಶೋಧನೆಗೆ ಸೋತುಹೋಗದಿರಲು ಎಚ್ಚರಿಕೆ
11 ಈ ವಿಷಯದಲ್ಲಿ ನಾವು ನಿಮಗೆ ಹೇಳಬೇಕಾದ ಅನೇಕ ಸಂಗತಿಗಳಿವೆ. ಆದರೆ ನೀವು ಇದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸದಿರುವುದರಿಂದ ವಿವರಿಸುವುದು ಕಷ್ಟಕರವಾಗಿದೆ. 12 ನಿಮಗೆ ಕಾಲವು ಬೇಕಾದಷ್ಟಿದ್ದುದರಿಂದ ಈಗಾಗಲೇ ನೀವು ಉಪದೇಶಕರಾಗಿರಬೇಕಿತ್ತು. (ಆದರೆ ನೀವಿನ್ನೂ ಆಗಿಲ್ಲ.) ಹೀಗಿರಲು ದೇವರ ಉಪದೇಶಗಳನ್ನು ಮೊದಲ ಪಾಠದಿಂದ ಮತ್ತೆ ಉಪದೇಶಿಸಲು ನಿಮಗೆ ಮತ್ತೊಬ್ಬ ವ್ಯಕ್ತಿಯ ಅಗತ್ಯವಿದೆ. ಹಾಲಿನಂತಿರುವ ಉಪದೇಶವನ್ನು ನಾವು ನಿಮಗೆ ಮಾಡಬೇಕಾಗಿದೆ. ನೀವು ಗಟ್ಟಿ ಆಹಾರವನ್ನು ತಿನ್ನುವವರಾಗಿಲ್ಲ. 13 ನೀವು ಹಾಲು ಕುಡಿಯುವ ಮಕ್ಕಳಂತಿರುವಿರಿ. ನಿಮಗೆ ಯೋಗ್ಯ ಬೋಧನೆಗಳ ಬಗ್ಗೆ ಏನೂ ತಿಳಿದಿಲ್ಲ. 14 ಆದರೆ ಗಟ್ಟಿಯಾದ ಆಹಾರವು ಜ್ಞಾನದಲ್ಲಿ ಬೆಳವಣಿಗೆ ಹೊಂದಿರುವವರಿಗೇ ಹೊರತು ಮಕ್ಕಳಿಗಲ್ಲ. ಇವರು ಅನುಭವದಿಂದ ತಮ್ಮ ಮನಸ್ಸುಗಳನ್ನು ಹಿಡಿತದಲ್ಲಿ ಇಟ್ಟುಕೊಂಡಿರುವುದರಿಂದ ಒಳಿತು ಕೆಡುಕುಗಳಿಗಿರುವ ಭೇದವನ್ನು ತಿಳಿದುಕೊಳ್ಳಬಲ್ಲವರಾಗಿದ್ದಾರೆ.
Kannada Holy Bible: Easy-to-Read Version. All rights reserved. © 1997 Bible League International