Old/New Testament
ವಷ್ಟಿ ರಾಣಿಯು ರಾಜಾಜ್ಞೆಯನ್ನು ತಿರಸ್ಕರಿಸಿದ್ದು
1 ಅಹಷ್ವೇರೋಷನು ರಾಜನಾಗಿದ್ದಾಗ ನಡೆದ ಘಟನೆ. ಹಿಂದೂಸ್ಥಾನದಿಂದ ಇಥಿಯೋಪ್ಯದ ತನಕ ನೂರಿಪ್ಪತ್ತೇಳು ಸಂಸ್ಥಾನಗಳನ್ನು ಅವನು ಆಳುತ್ತಿದ್ದನು. 2 ಅವನ ರಾಜ್ಯದ ರಾಜಧಾನಿ ನಗರವಾಗಿದ್ದ ಶೂಷನ್‌ನಲ್ಲಿಯ ಸಿಂಹಾಸನದಿಂದ ಅರಸನು ರಾಜ್ಯವಾಳುತ್ತಿದ್ದನು.
3 ತನ್ನ ಆಳ್ವಿಕೆಯ ಮೂರನೆ ವರ್ಷದಲ್ಲಿ ರಾಜ್ಯದ ಅಧಿಕಾರಿಗಳಿಗೂ ನಾಯಕರುಗಳಿಗೂ ಒಂದು ಔತಣವನ್ನು ಏರ್ಪಡಿಸಿದನು. ಮೇದ್ಯ. ಪರ್ಶಿಯದ ಎಲ್ಲಾ ಸೈನ್ಯಾಧಿಕಾರಿಗಳೂ ಪ್ರಧಾನರೂ ಔತಣದಲ್ಲಿ ಭಾಗವಹಿಸಿದ್ದರು. 4 ಔತಣ ಸಮಾರಂಭವು ನೂರೆಂಭತ್ತು ದಿವಸಗಳ ತನಕ ಮುಂದುವರೆಯಿತು. ಆ ಸಮಯದಲ್ಲಿ ತನ್ನ ರಾಜ್ಯದ ಸಕಲ ವೈಭವವನ್ನೂ ಅರಮನೆಯ ಐಶ್ವರ್ಯವನ್ನೂ ಅತಿಥಿಗಳಿಗೆ ಪ್ರದರ್ಶಿಸಿದನು. 5 ಆ ನೂರೆಂಭತ್ತು ದಿವಸಗಳು ಕಳೆದ ಬಳಿಕ ಅಹಷ್ವೇರೋಷನು ಮತ್ತೆ ಇನ್ನೊಂದು ಔತಣವನ್ನು ಒಂದು ವಾರದ ತನಕ ಮುಂದುವರಿಸಿದನು. ಇದು ಅರಮನೆಯ ಒಳ ಉದ್ಯಾನವನದಲ್ಲಿ ನಡೆಯಿತು. ಇದಕ್ಕೆ ಶೂಷನ್ ನಗರದಿಂದ ಗಣ್ಯರು, ಸಾಮಾನ್ಯರು ಎಂಬ ಭೇದಭಾವವಿಲ್ಲದೆ ಎಲ್ಲರೂ ಆಮಂತ್ರಿಸಲ್ಪಟ್ಟಿದ್ದರು. 6 ಆ ಒಳ ಉದ್ಯಾನವನವು ಬಿಳಿ ಮತು ನೀಲಿಬಣ್ಣಗಳ ಬಟ್ಟೆಗಳಿಂದ ಶೃಂಗರಿಸಲ್ಪಟ್ಟಿತ್ತು. ಅವುಗಳನ್ನು ಬಿಳಿ ಮತ್ತು ನೇರಳೆ ಬಣ್ಣದ ದಾರಗಳಿಂದ ಬೆಳ್ಳಿಯ ಉಂಗುರಗಳಲ್ಲಿ ಕಟ್ಟಲ್ಪಟ್ಟ ಅಮೃತಶಿಲೆಯ ಕಂಬಗಳಿಗೆ ತೂಗುಹಾಕಿದ್ದರು. ಬೆಲೆಬಾಳುವ ಕಲ್ಲುಗಳಿಂದಲೂ ಮುತ್ತು ಚಿಪ್ಪು, ರತ್ನಶಿಲೆಗಳಿಂದಲೂ ಅಲಂಕೃತವಾದ ನೆಲದ ಮೇಲೆ ಬೆಳ್ಳಿಬಂಗಾರಗಳಿಂದ ಮಾಡಿದ್ದ ಆಸನಗಳನ್ನಿಟ್ಟರು. 7 ಅತಿಥಿಗಳಿಗೆ ಬಂಗಾರದ ಪಾನಪಾತ್ರೆಯಲ್ಲಿ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟರು. ಬೇರೆಬೇರೆ ವಿಧದ ಪಾತ್ರೆಗಳನ್ನು ಉಪಯೋಗಿಸಲಾಗಿತ್ತು. ರಾಜನ ಔದಾರ್ಯಕ್ಕೆ ತಕ್ಕಂತೆ ದ್ರಾಕ್ಷಾರಸವು ಧಾರಾಳವಾಗಿ ಹಂಚಲ್ಪಡುತ್ತಿತ್ತು. 8 ತಮ್ಮ ಇಷ್ಟಾನುಸಾರವಾಗಿ ದ್ರಾಕ್ಷಾರಸವನ್ನು ಕುಡಿಯಲು ಅತಿಥಿಗಳಿಗೆ ಕೊಡಬೇಕೆಂದು ಸೇವಕರಿಗೆ ರಾಜಾಜ್ಞೆಯಾಗಿತ್ತು. ರಾಜಸೇವಕರು ಆ ಆಜ್ಞೆಯನ್ನು ಪಾಲಿಸಿದರು.
9 ರಾಜನ ಅರಮನೆಯಲ್ಲಿ ವಷ್ಟಿರಾಣಿಯೂ ಅದೇ ಪ್ರಕಾರ ಸ್ತ್ರೀಯರಿಗೂ ಔತಣವನ್ನು ಮಾಡಿಸಿದ್ದಳು.
10-11 ಔತಣದ ಏಳನೆಯ ದಿವಸದಲ್ಲಿ ರಾಜನು ದ್ರಾಕ್ಷಾರಸ ಕುಡಿದು ಆನಂದಲಹರಿಯಲ್ಲಿದ್ದಾಗ ತನ್ನ ಆಸ್ಥಾನ ಕಂಚುಕಿಯರಾದ ಮೆಹೂಮಾನ್, ಬಿಜತಾ, ಹರ್ಬೋನಾ, ಬಿಗೆತಾ, ಅಬಗೆತಾ, ಜೀತರ್, ಕರ್ಕಸ್ ಎಂಬ ಏಳು ಮಂದಿಗೆ ಹೋಗಿ ವಷ್ಟಿರಾಣಿಯನ್ನು ತನ್ನ ರಾಜಮುಕುಟವನ್ನು ಧರಿಸಿ ಕರೆತರಲು ಆಜ್ಞಾಪಿಸಿದನು. ವಷ್ಟಿರಾಣಿಯು ಅತ್ಯಂತ ಸುಂದರಿಯಾಗಿದ್ದಳು. ಆಕೆಯ ಸೌಂದರ್ಯವನ್ನು ತನ್ನ ರಾಜ್ಯದ ಅಧಿಕಾರಿಗಳಿಗೆ ತೋರಿಸಬೇಕೆಂಬುದು ಅವನ ಅಪೇಕ್ಷೆಯಾಗಿತ್ತು.
12 ಆಸ್ಥಾನಸೇವಕರು ವಷ್ಟಿರಾಣಿಗೆ ರಾಜಾಜ್ಞೆಯನ್ನು ತಿಳಿಸಿದಾಗ ಆಕೆಯು ಬರಲು ನಿರಾಕರಿಸಿದಳು. ಇದರಿಂದ ರಾಜನು ಕೋಪೋದ್ರಿಕ್ತನಾದನು. 13-14 ಕಾನೂನು ಮತ್ತು ದಂಡನೆಗಳ ಬಗ್ಗೆ ಪರಿಣಿತರಾಗಿದ್ದ ಮಂತ್ರಿಗಳ ಸಲಹೆ ಕೇಳುವುದು ರಾಜನ ವಾಡಿಕೆಯಾಗಿತ್ತು. ಅದೇ ಪ್ರಕಾರ ರಾಜನು ತನ್ನ ಸಲಹೆಗಾರರೊಂದಿಗೆ ಈ ವಿಷಯವನ್ನು ಆಲೋಚಿಸಿದನು. ಇವರು ರಾಜನಿಗೆ ನಿಕಟವರ್ತಿಗಳಾಗಿದ್ದರು. ಅವರು ಯಾರೆಂದರೆ ಕರ್ಷೆನಾ, ಶೇತಾರ್, ಅದ್ಮಾತಾ, ತರ್ಷಿಷ್, ಮೆರೆಸ್, ಮರ್ಸೆನಾ, ಮೆಮೂಕಾನ್ ಎಂಬ ಏಳು ಮಂದಿ ಮೇದ್ಯ, ಪಾರಸಿಯ ಪ್ರಮುಖ ಅಧಿಕಾರಿಗಳು. 15 “ಆಸ್ಥಾನ ಸೇವಕರ ಮೂಲಕ ಹೇಳಿ ಕಳುಹಿಸಿದ ರಾಜಾಜ್ಞೆಯನ್ನು ವಷ್ಟಿ ರಾಣಿಯು ನಿರಾಕರಿಸಿದ್ದಾಳೆ. ಇಂಥಾ ತಪ್ಪಿಗೆ ಯಾವ ಶಿಕ್ಷೆಯನ್ನು ವಿಧಿಸಬೇಕು?” ಎಂದು ವಿಚಾರಿಸಿದನು.
16 ಇತರ ಅಧಿಕಾರಿಗಳು ಆಲಿಸುತ್ತಿದ್ದಾಗ ಮೆಮೂಕಾನ್ ಎದ್ದುನಿಂತು, “ರಾಣಿ ವಷ್ಟಿಯು ತಪ್ಪು ಮಾಡಿದಳು. ಇದು ರಾಜನಿಗೆ ವಿರುದ್ಧವಾಗಿ ಮಾತ್ರವೇ ಅಲ್ಲ, ರಾಜ್ಯದ ಸಕಲ ನಾಯಕರಿಗೂ ಸಂಸ್ಥಾನಗಳ ಎಲ್ಲಾ ಜನರಿಗೂ ವಿರುದ್ಧವಾದದ್ದು. 17 ಹೇಗೆಂದರೆ: ರಾಣಿಯು ಮಾಡಿದ್ದನ್ನು ರಾಜ್ಯದ ಇತರ ಸ್ತ್ರೀಯರು ಕೇಳಿ ತಾವೂ ತಮ್ಮ ಗಂಡಂದಿರಿಗೆ ಅವಿಧೇಯರಾಗುವರು. ಅವರು ತಮ್ಮ ಗಂಡಂದಿರಿಗೆ, ‘ರಾಜ ಅಹಷ್ವೇರೋಷನು ವಷ್ಟಿರಾಣಿಯನ್ನು ಕರೆದುಕೊಂಡು ಬರಬೇಕೆಂದು ಆಜ್ಞಾಪಿಸಿದನು, ಆದರೆ ಆಕೆ ಬರಲಿಲ್ಲ’ ಎಂದು ಹೇಳುವರು.
18 “ಪರ್ಶಿಯ ಮತ್ತು ಮೇದ್ಯ ನಾಯಕರುಗಳ ಹೆಂಡತಿಯರು ಸಹ ವಷ್ಟಿರಾಣಿ ಈ ಹೊತ್ತು ಮಾಡಿದ್ದನ್ನು ಕೇಳಿದ್ದಾರೆ. ಅವರು ಸಹ ವಷ್ಟಿರಾಣಿಯ ನಡತೆಯಿಂದ ಪ್ರೋತ್ಸಾಹಿತರಾಗಿ ರಾಜನ ಮುಖ್ಯ ನಾಯಕರುಗಳೊಡನೆ ಅದೇರೀತಿ ವರ್ತಿಸುವರು. ಇದರಿಂದಾಗಿ ಅಗೌರವವೂ ಕೋಪವೂ ತುಂಬಿಕೊಳ್ಳುತ್ತವೆ.
19 “ಆದ್ದರಿಂದ ರಾಜನು ಒಪ್ಪುವುದಾದರೆ ನನ್ನ ಸಲಹೆ ಏನೆಂದರೆ, ಅರಸನು ಒಂದು ರಾಜಾಜ್ಞೆಯನ್ನು ಹೊರಡಿಸಬೇಕು. ಆ ಆಜ್ಞೆಯು ಪರ್ಶಿಯ ಮತ್ತು ಮೇದ್ಯ ರಾಜಶಾಸನಗಳಲ್ಲಿ ಬರೆಯಲ್ಪಡಬೇಕು. ಪರ್ಶಿಯ ಮತ್ತು ಮೇದ್ಯ ರಾಜಶಾಸನಗಳು ಎಂದಿಗೂ ಬದಲಾಗುವದಿಲ್ಲ. ರಾಜಾಜ್ಞೆಯು ಏನೆಂದರೆ, ಅರಸನಾದ ಅಹಷ್ವೇರೋಷನ ಸನ್ನಿಧಿಗೆ ರಾಣಿಯು ಪ್ರವೇಶಿಸಲೇ ಕೂಡದು. ಮಾತ್ರವಲ್ಲ ರಾಜನು ವಷ್ಟಿ ರಾಣಿಯ ಸ್ಥಾನವನ್ನು ಆಕೆಗಿಂತ ಉತ್ತಮಳಾದ ಇನ್ನೊಬ್ಬಾಕೆಗೆ ಕೊಡಲಿ. 20 ಈ ರಾಜಶಾಸನವು ವಿಶಾಲ ಸಾಮ್ರಾಜ್ಯದ ಎಲ್ಲಾ ಕಡೆಗಳಲ್ಲಿ ಪ್ರಕಟಿಸಲ್ಪಟ್ಟಾಗ ಎಲ್ಲಾ ಹೆಂಡತಿಯರು ತಮ್ಮ ಗಂಡಂದಿರಿಗೆ ಗೌರವವನ್ನು ಸಲ್ಲಿಸುವರು. ಶ್ರೇಷ್ಠರೂ ಕನಿಷ್ಠರೂ ಆದ ಎಲ್ಲಾ ಸ್ತ್ರೀಯರು ತಮ್ಮ ಗಂಡಂದಿರಿಗೆ ಗೌರವವನ್ನು ಸಲ್ಲಿಸುವರು.”
21 ಅರಸನೂ ಅವನ ಪ್ರಮುಖ ಅಧಿಕಾರಿಗಳೂ ಈ ಸಲಹೆಯನ್ನು ಕೇಳಿ ಸಂತೋಷಪಟ್ಟರು ಮತ್ತು ಅಹಷ್ವೇರೋಷ ರಾಜನು ಮೆಮೂಕಾನ್ ಹೇಳಿದ ಹಾಗೆ ಮಾಡಿದನು. 22 ಅಹಷ್ವೇರೋಷನು ತನ್ನ ರಾಜ್ಯದ ಎಲ್ಲಾ ಕಡೆಗಳಿಗೆ, ಎಲ್ಲಾ ಸಂಸ್ಥಾನಗಳಿಗೆ ಅವರವರ ಭಾಷೆಯಲ್ಲಿ ಪತ್ರಗಳನ್ನು ಬರೆಯಿಸಿ ರವಾನಿಸಿದನು. ಅವರವರ ಭಾಷೆಯಲ್ಲಿ ಬರೆದ ಪತ್ರದಲ್ಲಿ ಪ್ರತಿಯೊಬ್ಬ ಗಂಡಸು ತನ್ನ ಸಂಸಾರವನ್ನು ಆಳಬೇಕು ಎಂಬುದಾಗಿ ಬರೆಯಲ್ಪಟ್ಟಿತ್ತು.
ಎಸ್ತೇರಳನ್ನು ರಾಣಿಯಾಗಿ ಮಾಡಿದ್ದು
2 ಸ್ವಲ್ಪಕಾಲವಾದನಂತರ ಅರಸನ ಕೋಪವು ಇಳಿಯಿತು. ಆಗ ವಷ್ಟಿಯನ್ನೂ ಆಕೆ ಮಾಡಿದ್ದನ್ನೂ ಅವಳಿಂದಾಗಿ ತಾನು ಹೊರಡಿಸಿದ ರಾಜಾಜ್ಞೆಯನ್ನೂ ನೆನಪಿಗೆ ತಂದುಕೊಂಡನು. 2 ಆಗ ರಾಜನ ಸನ್ನಿಧಿಸೇವಕರು ಈ ಸಲಹೆಕೊಟ್ಟರು: “ರಾಜನಿಗೋಸ್ಕರ ರೂಪವತಿಯರಾದ ಕನ್ಯೆಯರನ್ನು ಹುಡುಕಿರಿ. 3 ರಾಜನು ತನ್ನ ಸಾಮ್ರಾಜ್ಯದ ಪ್ರತಿಯೊಂದು ಪ್ರಾಂತ್ಯದಲ್ಲೂ ನಾಯಕರುಗಳನ್ನು ಆರಿಸಲಿ. ಆ ನಾಯಕರು ಅತ್ಯಂತ ರೂಪವತಿಯರಾದ ಕನ್ನಿಕೆಯರನ್ನು ಶೂಷನ್ ರಾಜಧಾನಿಗೆ ಕರೆದುಕೊಂಡು ಬಂದು ಅವರನ್ನು ರಾಜನ ಸ್ತ್ರೀಯರೊಡನೆ ಇರಿಸಲಿ. ಆ ಸ್ತ್ರೀಯರು ಮೇಲ್ವಿಚಾರಕನಾದ ರಾಜನ ಕಂಚುಕಿ ಹೇಗೈಯ ಪರಿಪಾಲನೆಯಲ್ಲಿರಲಿ. ಬಳಿಕ ಅವರಿಗೆ ಸೌಂದರ್ಯವರ್ಧಕ ಚಿಕಿತ್ಸೆ ಕೊಡಲಿ. 4 ಅನಂತರ ರಾಜನಿಗೆ ಇಷ್ಟವಾದ ಕನ್ನಿಕೆಯನ್ನು ವಷ್ಟಿಯ ಬದಲಾಗಿ ರಾಣಿಯನ್ನಾಗಿ ಮಾಡಲಿ” ಎಂದು ಹೇಳಿದರು. ಅವರ ಸಲಹೆ ರಾಜನಿಗೆ ಸರಿಯೆನಿಸಿದ್ದರಿಂದ ಅವನು ಅದಕ್ಕೆ ಒಪ್ಪಿಕೊಂಡನು.
5 ಆ ಸಮಯದಲ್ಲಿ ಬೆನ್ಯಾಮೀನ್ ಕುಲಕ್ಕೆ ಸೇರಿದ ಮೊರ್ದೆಕೈ ಎಂಬ ಹೆಸರಿನ ಒಬ್ಬ ಯೊಹೂದ್ಯನಿದ್ದನು. ಇವನು ಯಾಯೀರನ ಮಗನೂ ಕೀಷನ ಮೊಮ್ಮಗನೂ ಆಗಿದ್ದು ರಾಜಧಾನಿಯಾದ ಶೂಷನ್‌ನಲ್ಲಿಯೇ ವಾಸಮಾಡುತ್ತಿದ್ದನು. 6 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಜೆರುಸಲೇಮಿನಿಂದ ಮೊರ್ದೆಕೈಯನ್ನು ಸೆರೆಹಿಡಿದು ತಂದಿದ್ದನು. ಯೆಹೂದದ ಅರಸನಾದ ಯೆಹೋಯಾಕೀನನೊಂದಿಗೆ ಸೆರೆಒಯ್ಯಲ್ಪಟ್ಟ ಗುಂಪಿನೊಂದಿಗೆ ಇವನೂ ಇದ್ದನು. 7 ಇವನ ಬಳಿಯಲ್ಲಿ ಇವನ ಚಿಕ್ಕಪ್ಪನ ಮಗಳಾದ ಹದೆಸ್ಸಾ ಎಂಬ ಕನ್ನಿಕೆ ಇದ್ದಳು. ಈಕೆ ತಂದೆಯೂ ತಾಯಿಯೂ ಇಲ್ಲದ ತಬ್ಬಲಿಯಾಗಿದ್ದಳು. ಈಕೆಯ ತಂದೆತಾಯಿಗಳು ಸತ್ತಂದಿನಿಂದ ಈಕೆಯನ್ನು ಮೊರ್ದೆಕೈಯು ತನ್ನ ಮಗಳನ್ನಾಗಿ ಸ್ವೀಕರಿಸಿ ಸಾಕುತ್ತಿದ್ದನು. ಹದೆಸ್ಸಾಳನ್ನು ಎಸ್ತೇರ್ ಎಂಬ ಹೆಸರಿನಿಂದಲೂ ಕರೆಯುತ್ತಿದ್ದರು. ತುಂಬಾ ಸೌಂದರ್ಯವತಿಯಾಗಿದ್ದ ಈಕೆ ಆಕರ್ಷಕಳಾಗಿದ್ದಳು.
8 ರಾಜಾಜ್ಞೆಯು ರಾಜ್ಯದ ಎಲ್ಲಾ ಭಾಗಗಳಲ್ಲಿ ಪ್ರಕಟಿಸಲ್ಪಟ್ಟಾಗ ಅನೇಕ ಕನ್ಯೆಯರನ್ನು ರಾಜಧಾನಿಯಾದ ಶೂಷನ್‌ಗೆ ಕರೆದುಕೊಂಡು ಬಂದರು. ಇವರನ್ನೆಲ್ಲಾ ಹೇಗೈಯ ವಶಕ್ಕೆಕೊಟ್ಟರು. ಆ ಕನ್ಯೆಯರಲ್ಲಿ ಎಸ್ತೇರಳು ಸಹ ಒಬ್ಬಳಾಗಿದ್ದಳು. ಎಸ್ತೇರಳನ್ನೂ ಅರಮನೆಗೆ ಕರೆದುಕೊಂಡು ಹೋಗಿ ಹೇಗೈಯ ವಶಕ್ಕೆ ಕೊಟ್ಟರು. 9 ಹೇಗೈ ಎಸ್ತೇರಳನ್ನು ಇಷ್ಟಪಟ್ಟನು. ಆಕೆ ಅವನ ಮೆಚ್ಚಿಗೆಗೆ ಪಾತ್ರಳಾದಳು. ಆಕೆಗೆ ಅರಮನೆಯಿಂದ ಏಳು ಮಂದಿ ಸೇವಕಿಯರನ್ನು ಕೊಟ್ಟು ಆಕೆಯ ಊಟೋಪಚಾರಗಳಲ್ಲಿ ಅಥವಾ ಸೌಂದರ್ಯ ಅಭಿವೃದ್ಧಿಗಾಗಿ ಲೇಪನ ವಸ್ತುಗಳ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದನು. ಇದಾದ ಬಳಿಕ ಎಸ್ತೇರ್ ಮತ್ತು ಆಕೆಯ ಸೇವಕಿಯರನ್ನು ಅಂತಃಪುರದ ಉತ್ತಮ ಭಾಗದಲ್ಲಿ ಇಳಿದುಕೊಳ್ಳುವ ವ್ಯವಸ್ಥೆ ಮಾಡಿದನು. 10 ತಾನು ಯೆಹೂದ್ಯಳು ಎಂದು ಎಸ್ತೇರಳು ಯಾರಿಗೂ ಹೇಳಲಿಲ್ಲ. ತನ್ನ ವಂಶ, ಮನೆತನದ ವಿಚಾರವಾಗಿಯೂ ಯಾರಿಗೂ ತಿಳಿಸಲಿಲ್ಲ. ಯಾಕೆಂದರೆ ಮೊರ್ದೆಕೈ ಆಕೆಗೆ ತನ್ನ ವಿಷಯವಾಗಿ ಯಾರಿಗೂ ಹೇಳಬಾರದೆಂದೂ ಕಟ್ಟಪ್ಪಣೆ ಮಾಡಿದ್ದನು. 11 ಪ್ರತಿದಿನ ಮೊರ್ದೆಕೈ ಅಂತಃಪುರದ ಎದುರಿನಿಂದ ಹೋಗುತ್ತಾ ಬರುತ್ತಾ ಎಸ್ತೇರಳು ಹೇಗಿದ್ದಾಳೆಂದೂ ಅವಳಿಗೆ ಮುಂದೆ ಸಂಭವಿಸುವುದನ್ನೂ ವಿಚಾರಿಸುತ್ತಿದ್ದನು.
12 ಸರದಿಯ ಪ್ರಕಾರ ಒಬ್ಬ ಕನ್ಯೆಯನ್ನು ಅರಸನ ಬಳಿಗೆ ಕರೆದೊಯ್ಯುವ ಮೊದಲು ಆಕೆಯು ಹನ್ನೆರಡು ತಿಂಗಳು ಕಾಲ ಸೌಂದರ್ಯೋಪಾಸನದ ವಿಧಿಕ್ರಮಗಳನ್ನೆಲ್ಲಾ ನೆರವೇರಿಸಿರಬೇಕು. ಆರುತಿಂಗಳ ಕಾಲ ರಕ್ತಬೋಳದ ಎಣ್ಣೆಯ ಅಭ್ಯಂಜನದಿಂದಲೂ ನಂತರದ ಆರುತಿಂಗಳು ಕಾಂತಿವರ್ಧಕ ಲೇಪನ, ಸುಗಂಧವಸ್ತುಗಳಿಂದ ಆಕೆಯು ಸೌಂದರ್ಯದ ಆರೈಕೆ ಮಾಡಿಸಿಕೊಳ್ಳಬೇಕಾಗಿತ್ತು. 13 ರಾಜನ ಬಳಿಗೆ ಹೋಗುವಾಗ ಆಕೆಗೆ ಏನುಬೇಕೋ ಅದನ್ನು ಅಂತಃಪುರದಿಂದ ಕೊಡಲ್ಪಡುತ್ತಿತ್ತು. 14 ಮುಸ್ಸಂಜೆಯ ಸಮಯದಲ್ಲಿ ಕನ್ಯೆಯು ರಾಜನಿವಾಸವನ್ನು ಪ್ರವೇಶಿಸುವಳು. ಮರುದಿವಸ ಮುಂಜಾನೆ ಆಕೆಯು ಅಲ್ಲಿಂದ ಹಿಂತಿರುಗಿ ರಾಜನ ಉಪಪತ್ನಿಯರು ಉಳಿದುಕೊಳ್ಳುವ ಅಂತಃಪುರದ ಇನ್ನೊಂದು ಭಾಗದಲ್ಲಿ ನೆಲೆಸುವಳು. ಅಲ್ಲಿ ಆಕೆ ರಾಜನ ಕಂಚುಕಿ ಶವಷ್ಗಜನ ಮೇಲ್ವಿಚಾರಣೆಯಲ್ಲಿರುವಳು. ಶವಷ್ಗಜನು ರಾಜನ ಉಪಪತ್ನಿಗಳ ಮೇಲ್ವಿಚಾರಕನಾಗಿದ್ದನು. ರಾಜನು ಆಕೆಯ ಹೆಸರೆತ್ತಿ ಕರೆದಾಗ ಮಾತ್ರವೇ ಆಕೆಯು ತಿರುಗಿ ರಾಜನ ಬಳಿಗೆ ಹೋಗುವಳು. ಕರೆಯದಿದ್ದಲ್ಲಿ ಆಕೆಯು ಅಲ್ಲಿಯೇ ಇರುವಳು.
15 ರಾಜನ ಬಳಿಗೆ ಹೋಗಲು ಎಸ್ತೇರಳ ಸರದಿ ಬಂದಾಗ ಆಕೆ ಏನನ್ನೂ ಕೇಳಿಕೊಳ್ಳಲಿಲ್ಲ. ತಾನು ಏನನ್ನು ತೆಗೆದುಕೊಂಡು ಹೋಗಬೇಕೆಂದು ರಾಜನ ಸ್ತ್ರೀಯರ ಮೇಲ್ವಿಚಾರಕನಾಗಿದ್ದ ರಾಜಕಂಚುಕಿ ಹೇಗೈನನ್ನು ಮಾತ್ರ ಕೇಳಿದಳು. (ಎಸ್ತೇರಳು ಮೊರ್ದೆಕೈಯ ಚಿಕ್ಕಪ್ಪ ಅಭೀಹೈಲನ ಮಗಳೂ ತನ್ನ ಸಾಕು ಮಗಳೂ ಆಗಿದ್ದಳು.) ಎಸ್ತೇರಳನ್ನು ನೋಡಿದವರೆಲ್ಲರೂ ಆಕೆಯನ್ನು ಮೆಚ್ಚುತ್ತಿದ್ದರು. 16 ಹೀಗೆ ಹತ್ತನೇ ತಿಂಗಳಾದ ಟೆಬೇತ್ ಮಾಸದಲ್ಲಿ ರಾಜನ ಏಳನೇ ವರ್ಷದಲ್ಲಿ ಎಸ್ತೇರಳು ಅಹಷ್ವೇರೋಷನ ರಾಜನಿವಾಸಕ್ಕೆ ಕರೆದೊಯ್ಯಲ್ಪಟ್ಟಳು.
17 ಎಲ್ಲಾ ಕನ್ಯೆಯರಿಗಿಂತ ರಾಜನು ಎಸ್ತೇರಳನ್ನು ಬಹಳವಾಗಿ ಪ್ರೀತಿಸಿದನು. ಆಕೆ ಅವನ ಮೆಚ್ಚಿಕೆಗೆ ಪಾತ್ರಳಾದಳು. ಎಲ್ಲಾ ಕನ್ಯೆಯರಲ್ಲಿ ಅವಳನ್ನು ಮಾತ್ರ ರಾಜನು ಹೆಚ್ಚಾಗಿ ಇಷ್ಟಪಟ್ಟನು. ಅರಸನಾದ ಅಹಷ್ವೇರೋಷನು ರಾಜ ಕಿರೀಟವನ್ನು ಆಕೆಯ ತಲೆಯ ಮೇಲಿರಿಸಿ ವಷ್ಟಿಯ ಬದಲಾಗಿ ಎಸ್ತೇರಳನ್ನು ತನ್ನ ರಾಣಿಯನ್ನಾಗಿ ಮಾಡಿದನು. 18 ಎಸ್ತೇರಳಿಗೆ ರಾಜನು ಒಂದು ದೊಡ್ಡ ಔತಣವನ್ನೇರ್ಪಡಿಸಿ ಅದಕ್ಕೆ ರಾಜ್ಯದ ಮುಖ್ಯ ಅಧಿಕಾರಿಗಳನ್ನೂ ನಾಯಕರನ್ನೂ ಆಮಂತ್ರಿಸಿ, ರಾಜ್ಯದಲ್ಲೆಲ್ಲಾ ಒಂದು ದಿವಸದ ರಜೆಯನ್ನು ಘೋಷಿಸಿದನು; ಮತ್ತು ಜನರಿಗೆ ಉದಾರವಾಗಿ ದಾನಧರ್ಮಗಳನ್ನು ಮಾಡಿದನು.
ರಾಜಹತ್ಯೆಯ ಒಳಸಂಚನ್ನು ಮೊರ್ದೆಕೈ ಬಯಲುಪಡಿಸಿದ್ದು
19 ಕನ್ಯೆಯರು ಎರಡನೆ ಸಲ ಸಭೆ ಸೇರಿದ್ದಾಗ ಮೊರ್ದೆಕೈಯು ಅರಮನೆಯ ಹೆಬ್ಬಾಗಿಲಲ್ಲಿ ಕುಳಿತುಕೊಂಡಿದ್ದನು. 20 ಮೊರ್ದೆಕೈ ಎಸ್ತೇರಳಿಗೆ ಹೇಳಿದ ಮೇರೆಗೆ ಆಕೆ ತನ್ನ ಪೂರ್ವಿಕರ ದೇಶದ ಬಗ್ಗೆಯಾಗಲಿ ತನ್ನ ಕುಟುಂಬದ ಹಿನ್ನಲೆಯ ಬಗ್ಗೆಯಾಗಲಿ ಯಾರಿಗೂ ಹೇಳಲಿಲ್ಲ. ಹಿಂದೆ ಆಕೆ ಹೇಗೆ ಮೊರ್ದೆಕೈ ಹೇಳಿದ ಪ್ರಕಾರ ನಡೆದುಕೊಳ್ಳುತ್ತಿದ್ದಳೋ ಹಾಗೆಯೇ ಈಗಲೂ ನಡೆದುಕೊಳ್ಳುತ್ತಿದ್ದಳು.
21 ಮೊರ್ದೆಕೈ ಅರಮನೆಯ ಹೆಬ್ಬಾಗಿಲ ಬಳಿ ಕುಳಿತುಕೊಂಡಿದ್ದ ಸಮಯದಲ್ಲಿ ಒಂದು ವಿಷಯ ನಡೆಯಿತು. ಬಿಗೆತಾನ್ ಮತ್ತು ತೆರೆಷ್ ಎಂಬ ಇಬ್ಬರು ದ್ವಾರಪಾಲಕರು ಅರಸನ ಮೇಲೆ ಕೋಪಗೊಂಡು ಅವನನ್ನು ಕೊಲ್ಲಲು ಒಳಸಂಚು ಮಾಡುತ್ತಿದ್ದರು. 22 ಮೊರ್ದೆಕೈಗೆ ಈ ವಿಷಯ ಗೊತ್ತಾದಾಗ ಅವನು ಅದನ್ನು ಎಸ್ತೇರಳಿಗೆ ತಿಳಿಸಿದನು. ಎಸ್ತೇರ್ ರಾಣಿಯು ಇದನ್ನು ಕೊಡಲೇ ಅರಸನಿಗೆ ತಿಳಿಸಿದಳು. ಅಷ್ಟೇ ಅಲ್ಲ, ಮೊರ್ದೆಕೈ ಎಂಬವನು ಈ ಒಳಸಂಚನ್ನು ಕಂಡುಹಿಡಿದು ತನಗೆ ತಿಳಿಸಿದನು ಎಂಬದಾಗಿಯೂ ಅರಸನಿಗೆ ವರದಿ ಮಾಡಿದಳು. 23 ಕೂಡಲೇ ವಿಚಾರಣೆ ನಡೆಸಿದಾಗ ಮೊರ್ದೆಕೈಯು ಹೇಳಿದ ವಿಷಯವು ಸತ್ಯ ಎಂದು ಗೊತ್ತಾಯಿತು. ಆ ಎರಡು ದ್ವಾರಪಾಲಕರನ್ನು ಹಿಡಿದು ಗಲ್ಲಿಗೇರಿಸಿದರು. ಈ ಎಲ್ಲಾ ಸಮಾಚಾರವನ್ನು ರಾಜನ ಬಳಿಯಲ್ಲಿರುವ ರಾಜಕಾಲ ವೃತ್ತಾಂತ ಪುಸ್ತಕದಲ್ಲಿ ಬರೆಯಲ್ಪಟ್ಟವು.
ಅನನೀಯ ಮತ್ತು ಸಫೈರ
5 ಅನನೀಯ ಎಂಬ ಒಬ್ಬನಿದ್ದನು. ಅವನ ಹೆಂಡತಿಯ ಹೆಸರು ಸಫೈರ. ಅನನೀಯ ತನ್ನಲ್ಲಿದ್ದ ಸ್ವಲ್ಪ ಜಮೀನನ್ನು ಮಾರಿದನು. 2 ಆದರೆ, ಬಂದ ಹಣದಲ್ಲಿ ಒಂದು ಭಾಗವನ್ನು ಮಾತ್ರ ಅವನು ಅಪೊಸ್ತಲರ ಪಾದಗಳ ಬಳಿ ಇಟ್ಟನು. ಅವನು ಸ್ವಲ್ಪ ಹಣವನ್ನು ತನಗೋಸ್ಕರ ರಹಸ್ಯವಾಗಿಟ್ಟುಕೊಂಡನು. ಅವನ ಹೆಂಡತಿಗೆ ಇದು ತಿಳಿದಿತ್ತು. ಆಕೆಯೂ ಅದಕ್ಕೆ ಒಪ್ಪಿಕೊಂಡಿದ್ದಳು.
3 ಪೇತ್ರನು, “ಅನನೀಯನೇ, ನಿನ್ನ ಹೃದಯವನ್ನು ಆಳಲು ನೀನು ಸೈತಾನನಿಗೆ ಒಪ್ಪಿಸಿಕೊಟ್ಟದ್ದೇಕೆ? ನೀನು ಸುಳ್ಳು ಹೇಳಿ, ಪವಿತ್ರಾತ್ಮನನ್ನು ಮೋಸಪಡಿಸಲು ಪ್ರಯತ್ನಿಸಿದೆ. ನೀನು ನಿನ್ನ ಜಮೀನನ್ನು ಮಾರಿದೆ, ಆದರೆ ಬಂದ ಹಣದಲ್ಲಿ ಒಂದು ಭಾಗವನ್ನು ನೀನು ನಿನಗೋಸ್ಕರ ಇಟ್ಟುಕೊಂಡದ್ದೇಕೆ? 4 ನೀನು ಜಮೀನನ್ನು ಮಾರುವುದಕ್ಕಿಂತ ಮೊದಲು ಅದು ನಿನ್ನದೇ ಆಗಿತ್ತು. ನೀನು ಮಾರಿದ ಮೇಲೆಯೂ ಬಂದ ಹಣ ನಿನ್ನದೇ ಆಗಿತ್ತು. ಈ ಕೆಟ್ಟಕಾರ್ಯವನ್ನು ಮಾಡಲು ನೀನು ಯಾಕೆ ಯೋಚಿಸಿಕೊಂಡೆ? ನೀನು ಸುಳ್ಳು ಹೇಳಿದ್ದು ದೇವರಿಗೆ, ಮನುಷ್ಯರಿಗಲ್ಲ!” ಎಂದು ಹೇಳಿದನು.
5-6 ಅನನೀಯನು ಇದನ್ನು ಕೇಳಿದ ಕೂಡಲೇ ಕೆಳಗೆ ಬಿದ್ದು ಸತ್ತುಹೋದನು. ಕೆಲವು ಯೌವನಸ್ಥರು ಬಂದು ಅವನ ದೇಹವನ್ನು ಬಟ್ಟೆಯಲ್ಲಿ ಸುತ್ತಿದರು. ಅವರು ಅದನ್ನು ಹೊತ್ತುಕೊಂಡು ಹೋಗಿ ಸಮಾಧಿಮಾಡಿದರು. ಇದರ ಬಗ್ಗೆ ಕೇಳಿದ ಪ್ರತಿಯೊಬ್ಬರೂ ಭಯಭ್ರಾಂತರಾದರು.
7 ಸುಮಾರು ಮೂರು ಗಂಟೆಗಳಾದ ನಂತರ ಅವನ ಹೆಂಡತಿಯಾದ ಸಫೈರ ಒಳಗೆ ಬಂದಳು. ನಡೆದ ಸಂಗತಿಯ ಬಗ್ಗೆ ಸಫೈರಳಿಗೆ ಗೊತ್ತಿರಲಿಲ್ಲ. 8 ಪೇತ್ರನು ಆಕೆಗೆ, “ನಿಮ್ಮ ಜಮೀನಿನಿಂದ ನಿಮಗೆ ಎಷ್ಟು ಹಣ ಬಂತೆಂದು ನನಗೆ ಹೇಳು. ಇಷ್ಟೇ ಹಣವೋ?” ಎಂದು ಕೇಳಿದನು.
ಸಫೈರಳು, “ಹೌದು, ಅಷ್ಟೇ!” ಎಂದು ಹೇಳಿದಳು.
9 ಪೇತ್ರನು ಆಕೆಗೆ, “ನೀನು ಮತ್ತು ನಿನ್ನ ಗಂಡನು ಪ್ರಭುವಿನ ಆತ್ಮನನ್ನು ಪರೀಕ್ಷಿಸಲು ಒಪ್ಪಿಕೊಂಡಿದ್ದೇಕೆ? ಅಗೋ, ನಿನ್ನ ಗಂಡನನ್ನು ಹೂಳಿಟ್ಟ ಜನರು ಬಾಗಿಲ ಬಳಿಗೆ ಬಂದಿದ್ದಾರೆ! ಅವರು ನಿನ್ನನ್ನೂ ಅದೇರೀತಿ ಹೊತ್ತುಕೊಂಡು ಹೋಗುವರು” ಎಂದು ಹೇಳಿದನು. 10 ತಕ್ಷಣವೇ ಸಫೈರಳು ಅವನ ಪಾದಗಳ ಮುಂದೆ ಬಿದ್ದು ಸತ್ತುಹೋದಳು. ಆ ಯೌವನಸ್ಥರು ಒಳಗೆ ಬಂದು ನೋಡಿದಾಗ ಆಕೆ ಸತ್ತುಹೋಗಿದ್ದಳು. ಅವರು ಆಕೆಯನ್ನು ಹೊತ್ತುಕೊಂಡು ಹೋಗಿ, ಆಕೆಯ ಗಂಡನ ಪಕ್ಕದಲ್ಲಿ ಹೂಳಿಟ್ಟರು. 11 ಈ ಸಂಗತಿಗಳ ಬಗ್ಗೆ ಕೇಳಿದ ವಿಶ್ವಾಸಿಗಳೆಲ್ಲರೂ ಮತ್ತು ಜನರೆಲ್ಲರೂ ಭಯಗ್ರಸ್ತರಾದರು.
ದೇವರ ಸೂಚಕಕಾರ್ಯಗಳು
12 ಅಪೊಸ್ತಲರು ಅನೇಕ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿದರು. ಜನರೆಲ್ಲರೂ ಆ ಕಾರ್ಯಗಳನ್ನು ನೋಡಿದರು. ಅಪೊಸ್ತಲರು ಒಟ್ಟಾಗಿ ಸೊಲೊಮೋನನ ಮಂಟಪದಲ್ಲಿರುತ್ತಿದ್ದರು. ಅವರೆಲ್ಲರ ಉದ್ದೇಶ ಒಂದೇ ಆಗಿತ್ತು. 13 ಅವರೊಂದಿಗೆ ನಿಂತುಕೊಳ್ಳಲು ತಮಗೂ ಯೋಗ್ಯತೆ ಇದೆಯೆಂದು ಬೇರೆ ಯಾರಿಗೂ ಅನ್ನಿಸಲಿಲ್ಲ. ಜನರೆಲ್ಲರೂ ಅಪೊಸ್ತಲರ ಬಗ್ಗೆ ಒಳ್ಳೆಯ ಸಂಗತಿಗಳನ್ನು ಹೇಳುತ್ತಿದ್ದರು. 14 ಮತ್ತು ಹೆಚ್ಚುಹೆಚ್ಚು ಜನರು ಪ್ರಭುವನ್ನು ನಂಬಿಕೊಂಡರು. ಅನೇಕ ಸ್ತ್ರೀಯರೂ ಪುರುಷರೂ ವಿಶ್ವಾಸಿಗಳ ಸಮುದಾಯಕ್ಕೆ ಸೇರುತ್ತಿದ್ದರು. 15 ಹೀಗಿರಲು, ಪೇತ್ರನು ದಾರಿಯಲ್ಲಿ ಹೋಗುತ್ತಾನೆಂಬ ಸುದ್ದಿಯನ್ನು ಕೇಳಿದ ಜನರು ಕಾಯಿಲೆಯವರನ್ನು ಬೀದಿಗಳಿಗೆ ಹೊತ್ತುಕೊಂಡು ಬಂದು ಹಾಸಿಗೆ ಮತ್ತು ಡೋಲಿಗಳ ಮೇಲೆ ಮಲಗಿಸುತ್ತಿದ್ದರು. ಪೇತ್ರನ ನೆರಳು ಬಿದ್ದರೆ ಸಾಕು, ಕಾಯಿಲೆಯವರು ಗುಣಮುಖರಾಗುತ್ತಾರೆಂದು ಜನರು ಯೋಚಿಸಿಕೊಂಡಿದ್ದರು. 16 ಜೆರುಸಲೇಮಿನ ಸುತ್ತಮುತ್ತಲಿನ ಊರುಗಳಿಂದೆಲ್ಲಾ ಜನರು ಬರುತ್ತಿದ್ದರು. ಅವರು ಕಾಯಿಲೆಯವರನ್ನೂ ದೆವ್ವಪೀಡಿತರಾಗಿದ್ದವರನ್ನೂ ಹೊತ್ತುಕೊಂಡು ಬರುತ್ತಿದ್ದರು. ಈ ಜನರೆಲ್ಲರಿಗೂ ಗುಣವಾಯಿತು.
ಅಪೊಸ್ತಲರನ್ನು ತಡೆಯಲು ಯೆಹೂದ್ಯರ ಪ್ರಯತ್ನ
17 ಪ್ರಧಾನಯಾಜಕನು ಮತ್ತು ಅವನ ಸ್ನೇಹಿತರೆಲ್ಲರೂ (ಸದ್ದುಕಾಯರು) ಬಹು ಅಸೂಯೆಗೊಂಡರು. 18 ಅವರು ಅಪೊಸ್ತಲರನ್ನು ಬಂಧಿಸಿ ರಾಜ್ಯಮಟ್ಟದ ಸೆರೆಮನೆಗೆ ಹಾಕಿದರು. 19 ಆದರೆ ರಾತ್ರಿಯಲ್ಲಿ ಪ್ರಭುವಿನ ದೂತನೊಬ್ಬನು ಸೆರೆಮನೆಯ ಬಾಗಿಲುಗಳನ್ನು ತೆರೆದನು. ದೇವದೂತನು ಅಪೊಸ್ತಲರನ್ನು ಕರೆದುಕೊಂಡು ಹೊರಗೆ ಬಂದು ಅವರಿಗೆ, 20 “ಹೋಗಿ ದೇವಾಲಯದಲ್ಲಿ ನಿಂತುಕೊಳ್ಳಿರಿ. ಯೇಸುವಿನಲ್ಲಿರುವ ಈ ಹೊಸ ಜೀವಿತದ ಬಗ್ಗೆ ಪ್ರತಿಯೊಂದನ್ನೂ ಜನರಿಗೆ ಹೇಳಿರಿ” ಎಂದನು. 21 ಆದ್ದರಿಂದ ಅವರು ಮರುದಿನ ಮುಂಜಾನೆ ದೇವಾಲಯಕ್ಕೆ ಹೋಗಿ ಉಪದೇಶ ಮಾಡತೊಡಗಿದರು.
ಪ್ರಧಾನಯಾಜಕನು ಮತ್ತು ಅವನ ಸ್ನೇಹಿತರು ದೇವಾಲಯಕ್ಕೆ ಬಂದರು. ಅವರು ಯೆಹೂದ್ಯನಾಯಕರ ಮತ್ತು ಇಸ್ರೇಲರಲ್ಲಿ ಪ್ರಮುಖರಾಗಿದ್ದವರ ಸಭೆಯನ್ನು ಸೇರಿಸಿದರು. ಬಳಿಕ ಅಪೊಸ್ತಲರನ್ನು ತಮ್ಮ ಬಳಿಗೆ ಕರೆದುಕೊಂಡು ಬರಲು ಕೆಲವರನ್ನು ಸೆರೆಮನೆಗೆ ಕಳುಹಿಸಿದರು.
Kannada Holy Bible: Easy-to-Read Version. All rights reserved. © 1997 Bible League International