Old/New Testament
ಯಾಜಕರು ಮತ್ತು ಲೇವಿಯರು
12 ಯೆಹೂದ ಪ್ರಾಂತಕ್ಕೆ ಹಿಂತಿರುಗಿದ ಯಾಜಕರ ಮತ್ತು ಲೇವಿಯರ ಪಟ್ಟಿ: ಅವರು ಶೆಯಲ್ತಿಯೇಲನ ಮಗನಾದ ಜೆರುಬ್ಬಾಬೆಲ್ ಮತ್ತು ಯೇಷೂವನೊಡನೆ ಹಿಂದಿರುಗಿದರು. ಅವರು ಯಾರೆಂದರೆ:
ಸೆರಾಯ, ಯೆರೆಮೀಯ, ಎಜ್ರ,
2 ಅಮರ್ಯ, ಮಲ್ಲೂಕ್, ಹಟ್ಟೂಷ್,
3 ಶೆಕನ್ಯ, ರೆಹುಮ್, ಮೆರೇಮೋತ್,
4 ಇದ್ದೋ, ಗಿನ್ನೆತೋನ್, ಅಬೀಯ,
5 ಮಿಯ್ಯಾ-ಮೀನ್, ಮಾದ್ಯ, ಬಿಲ್ಗ,
6 ಶೆಮಾಯ, ಯೋಯಾರೀಬ್, ಯೆದಾಯ,
7 ಸಲ್ಲೂ, ಅಮೋಕ್, ಹಿಲ್ಕೀಯ ಮತ್ತು ಯೆದಾಯ.
ಇವರೆಲ್ಲಾ ಯಾಜಕರ ನಾಯಕರು. ಇವರು ಯೇಷೂವನ ಕಾಲದಲ್ಲಿದ್ದವರು.
8 ಲೇವಿಯವರು ಯಾರೆಂದರೆ: ಯೇಷೂವ, ಬಿನ್ನೂಯ, ಕದ್ಮೀಯೇಲ್, ಶೆರೇಬ್ಯ, ಯೆಹೂದ ಮತ್ತು ಮತ್ತನ್ಯ. ಇವರು ಮತ್ತನ್ಯನಿಗೆ ಸಂಬಂಧಿಕರೂ ಗಾಯಕರಿಗೆ ಮುಖ್ಯಸ್ತರೂ ಆಗಿದ್ದರು. 9 ಬಕ್ಬುಕ್ಯ ಮತ್ತು ಉನ್ನೀ ಆ ಲೇವಿಯರ ಸಂಬಂಧಿಕರಾಗಿದ್ದರು. ಕಾರ್ಯಕ್ರಮಗಳಲ್ಲಿ ಇವರು ತಮ್ಮ ಸಂಬಂಧಿಕರ ಎದುರು ನಿಲ್ಲುತ್ತಿದ್ದರು. 10 ಯೇಷೂವನು ಯೋಯಾಕೀಮನ ತಂದೆ; ಯೋಯಾಕೀಮನು ಎಲ್ಯಾಷೀಬನ ತಂದೆ; ಎಲ್ಯಾಷೀಬನು ಯೋಯಾದನ ತಂದೆ; 11 ಯೋಯಾದನು ಯೋನಾತಾನನ ತಂದೆ; ಯೋನಾತಾನನು ಯದ್ದೂವನ ತಂದೆ.
12 ಯೋಯಾಕೀಮನ ಕಾಲದಲ್ಲಿ ಇವರು ಯಾಜಕರ ಕುಟುಂಬಗಳ ನಾಯಕರಾಗಿದ್ದರು.
ಸೆರಾಯ ಕುಟುಂಬದ ನಾಯಕ ಮೆರಾಯ,
ಯೆರೆಮೀಯನ ಕುಟುಂಬದ ನಾಯಕ ಹನನ್ಯ.
13 ಎಜ್ರನ ಕುಟುಂಬದ ನಾಯಕ ಮೆಷುಲ್ಲಾಮ್,
ಅಮರ್ಯನ ಕುಟುಂಬದ ನಾಯಕ ಯೆಹೋಹಾನಾನ್.
14 ಮಲ್ಲೂಕ್ ಕುಟುಂಬದ ನಾಯಕ ಯೋನಾತಾನ್,
ಶೆಬನ್ಯ ಕುಟುಂಬದ ನಾಯಕ ಯೋಸೇಫ.
15 ಹಾರಿಮ್ ಕುಟುಂಬದ ನಾಯಕ ಅದ್ನ,
ಮೆರೇಮೋತ್ ಕುಟುಂಬದ ನಾಯಕ ಹಲೈ.
16 ಇದ್ದೋವಿನ ಕುಟುಂಬದ ನಾಯಕ ಜೆಕರ್ಯ,
ಗಿನ್ನೆತೋನನ ಕುಟುಂಬದ ನಾಯಕ ಮೆಷುಲ್ಲಾಮ್.
17 ಅಬೀಯ ಕುಟುಂಬದ ನಾಯಕ ಜಿಕ್ರೀ,
ಮಿನ್ಯಾಮೀನನ ಮತ್ತು ಮಾದ್ಯಾನ ಕುಟುಂಬದ ನಾಯಕ ಪಿಲ್ಲೈ.
18 ಬಿಲ್ಗಾ ಕುಟುಂಬದ ನಾಯಕ ಶಮ್ಮೂವ,
ಶೆಮಾಯನ ಕುಟುಂಬದ ನಾಯಕ ಯೆಹೋನಾತಾನ್.
19 ಯೋಯಾರೀಬ್ ಕುಟುಂಬದ ನಾಯಕ ಮತ್ತೆನೈ,
ಯೆದಾಯನ ಕುಟುಂಬದ ನಾಯಕ ಉಜ್ಜೀ.
20 ಕಲ್ಲೈಯು ಸಲ್ಲೂ ಕುಟುಂಬದ ನಾಯಕ.
ಏಬೆರನು ಆಮೋಕ್ ಕುಟುಂಬದ ನಾಯಕ.
21 ಹಷಬ್ಯನು ಹಿಲ್ಕೀಯ ಕುಟುಂಬದ ನಾಯಕ.
ನೆತನೇಲನು ಯೆದಾಯನ ಕುಟುಂಬದ ನಾಯಕ.
22 ಎಲ್ಯಾಷೀಬ್, ಯೋಯಾದ, ಯೋಹಾನಾನ್ ಮತ್ತು ಯದ್ದೂವ ಇವರ ಕಾಲಗಳಲ್ಲಿದ್ದ ಲೇವಿಯರ ಮತ್ತು ಯಾಜಕರ ಕುಟುಂಬನಾಯಕರ ಹೆಸರುಗಳನ್ನು ಪರ್ಶಿಯ ರಾಜನಾದ ದಾರ್ಯವೇಷನ ಆಳ್ವಿಕೆಯಲ್ಲಿ ಬರೆಯಲಾಯಿತು. 23 ಎಲ್ಯಾಷೀಬನ ಮಗನಾದ ಯೋಹಾನಾನನ ತನಕ ಲೇವಿಕುಲದ ಕುಟುಂಬನಾಯಕರ ಹೆಸರುಗಳನ್ನು ಚರಿತ್ರಾಪುಸ್ತಕದಲ್ಲಿ ದಾಖಲು ಮಾಡಿಯದೆ. 24 ಲೇವಿಯರಲ್ಲಿ ಇವರು ಮುಖಂಡರು: ಹಷಬ್ಯ, ಶೇರೇಬ್ಯ, ಕದ್ಮೀಯೇಲನ ಮಗನಾದ ಯೇಷೂವ ಮತ್ತು ಅವನ ಸಹೋದರರು. ಇವರು ತಮ್ಮ ಸಹೋದರರ ಎದುರು ನಿಂತು ಸ್ತೋತ್ರಗೀತೆ ಹಾಡುವರು. ಹೀಗೆ ಪರಸ್ಪರ ಹಾಡುವುದು ದೇವರ ಮನುಷ್ಯನಾದ ದಾವೀದನ ಆಜ್ಞೆಯಾಗಿತ್ತು.
25 ಬಾಗಿಲುಗಳ ಬಳಿಯಲ್ಲಿದ್ದ ಉಗ್ರಾಣದ ಕೋಣಿಗಳನ್ನು ಕಾಯುತ್ತಿದ್ದವರು ಯಾರೆಂದರೆ: ಮತ್ತನ್ಯ, ಬಕ್ಬುಕ್ಯ, ಓಬದ್ಯ, ಮೆಷುಲ್ಲಾಮ್, ಟಲ್ಮೋನ್ ಮತ್ತು ಅಕ್ಕೂಬ್. 26 ಈ ದ್ವಾರಪಾಲಕರು ಯೋಯಾಕೀಮನ ಕಾಲದಲ್ಲಿ ಸೇವೆ ಮಾಡಿದರು. ಯೋಯಾಕೀಮನು ಯೇಷೂವನ ಮಗ. ಯೇಷೂವನು ಯೋಚಾದಾಕನ ಮಗ. ನೆಹೆಮೀಯನು ರಾಜ್ಯಪಾಲನಾಗಿದ್ದ ದಿನಗಳಲ್ಲಿ ಮತ್ತು ಎಜ್ರನು ಯಾಜಕನೂ ಉಪದೇಶಕನೂ ಆಗಿದ್ದ ದಿನಗಳಲ್ಲಿ ಸಹ ಈ ದ್ವಾರಪಾಲಕರು ಸೇವೆ ಸಲ್ಲಿಸಿದರು.
ಜೆರುಸಲೇಮಿನ ಪೌಳಿಗೋಡೆಯ ಪ್ರತಿಷ್ಠೆ
27 ಜನರು ಜೆರುಸಲೇಮಿನ ಪೌಳಿಗೋಡೆಯನ್ನು ಪ್ರತಿಷ್ಠಿಸಿದರು. ಅವರು ಎಲ್ಲಾ ಲೇವಿಯರನ್ನು ನಗರಕ್ಕೆ ಕರೆತಂದು ಪ್ರತಿಷ್ಠೆ ಮಾಡಿದರು. ಅವರು ದೇವರಿಗೆ ಸ್ತುತಿಪದಗಳನ್ನು, ತಾಳ, ಸ್ವರಮಂಡಲ, ಕಿನ್ನರಿಗಳನ್ನು ಬಾರಿಸುತ್ತಾ ಹಾಡಿದರು.
28-29 ಜೆರುಸಲೇಮಿನ ಸುತ್ತ ಮುತ್ತಲಿದ್ದ ಗಾಯಕರೂ ಒಟ್ಟಾಗಿ ಸೇರುತ್ತಿದ್ದರು. ಅವರು ನೆಟೋಫ, ಬೇತ್ಹ, ಗಿಲ್ಗಾಲ್, ಗೆಬ ಮತ್ತು ಅಜ್ಮಾವೇತ್ ಎಂಬ ಪಟ್ಟಣಗಳಿಂದ ಬಂದವರಾಗಿದ್ದರು. ಜೆರುಸಲೇಮಿನ ಸುತ್ತಲೂ ಗಾಯಕರು ಸಣ್ಣಸಣ್ಣ ಗ್ರಾಮಗಳನ್ನು ಕಟ್ಟಿಕೊಂಡು ವಾಸವಾಗಿದ್ದರು.
30 ಆದ್ದರಿಂದ ಯಾಜಕರೂ ಲೇವಿಯರೂ ಶಾಸ್ತ್ರೋಕ್ತವಾಗಿ ತಮ್ಮನ್ನು ಶುದ್ಧಪಡಿಸಿಕೊಂಡರು. ಅನಂತರ ಜನರನ್ನೂ ಜೆರುಸಲೇಮಿನ ಗೋಡೆಯನ್ನೂ ಬಾಗಿಲುಗಳನ್ನೂ ಶಾಸ್ತ್ರೋಕ್ತವಾಗಿ ಶುದ್ಧಿಮಾಡಿದರು.
31 ನಾನು ಯೆಹೂದದ ನಾಯಕರಿಗೆ ಗೋಡೆಯ ಮೇಲೆ ನಿಂತುಕೊಳ್ಳಲು ಹೇಳಿದೆನು. ಅಲ್ಲದೆ ದೇವರಿಗೆ ಕೃತಜ್ಞತಾಸ್ತುತಿ ಮಾಡಲು ಗಾಯಕರ ಎರಡು ದೊಡ್ಡ ಗುಂಪುಗಳನ್ನು ಆರಿಸಿಕೊಂಡೆನು. ಒಂದು ಗುಂಪಿನವರು ಮೆರವಣಿಗೆಯಿಂದ ಬಲಗಡೆಯಿದ್ದ ತಿಪ್ಪೆಬಾಗಿಲಿನ ಕಡೆಹೋದರು. 32 ಹೋಷಾಯ ಮತ್ತು ಯೆಹೂದ್ಯರ ನಾಯಕರಲ್ಲಿ ಅರ್ಧ ಮಂದಿ ಗಾಯಕರನ್ನು ಹಿಂಬಾಲಿಸುತ್ತಾ ಹೋದರು. 33 ಅಜರ್ಯ, ಎಜ್ರ, ಮೆಷುಲ್ಲಾಮ್, 34 ಯೆಹೂದ, ಬೆನ್ಯಾಮೀನ್, ಶೆಮಾಯ ಮತ್ತು ಯೆರಮೀಯ ಸಹ ಗಾಯಕರನ್ನು ಹಿಂಬಾಲಿಸಿದರು. 35 ತುತ್ತೂರಿಗಳನ್ನು ಹಿಡಿದುಕೊಂಡಿದ್ದ ಕೆಲವು ಯಾಜಕರೂ ಅವರನ್ನು ಹಿಂಬಾಲಿಸುತ್ತಾ ಗೋಡೆಯ ತನಕ ಬಂದರು. ಜೆಕರ್ಯನೂ ಅವರನ್ನು ಹಿಂಬಾಲಿಸಿದನು. (ಜೆಕರ್ಯನು ಯೋನಾತಾನನ ಮಗ; ಯೋನಾತನನು ಶೆಮಾಯನ ಮಗ; ಶೆಮಾಯನು ಮತ್ತನ್ಯನ ಮಗ; ಮತ್ತನ್ಯನು ಮೀಕಾಯನ ಮಗ; ಮೀಕಾಯನು ಜಕ್ಕೂರನ ಮಗ; ಜಕ್ಕೂರನು ಆಸಾಫನ ಮಗ.) 36 ಅಲ್ಲಿ ಆಸಾಫನ ಸಹೋದರರಾದ ಶೆಮಾಯ, ಅಜರೇಲ್, ಮಿಲಲೈ, ಗಿಲಲೈ, ಮಾಯೈ, ನೆತನೇಲ್, ಯೆಹೂದ ಮತ್ತು ಹನಾನೀ ಇದ್ದರು. ದೇವಮನುಷ್ಯನಾದ ದಾವೀದನು ತಯಾರಿಸಿದ್ದ ವಾದ್ಯಗಳು ಅವರ ಬಳಿಯಲ್ಲಿದ್ದವು. ಎಜ್ರನು ಗೋಡೆಯನ್ನು ಪ್ರತಿಷ್ಠೆ ಮಾಡಲು ಒಂದು ತಂಡದ ಜನರನ್ನು ತನ್ನೊಂದಿಗೆ ಕರೆದುಕೊಂಡು ಹೋದನು. 37 ಅವರು ಬುಗ್ಗೆ ಬಾಗಿಲಿನೊಳಗೆ ಪ್ರವೇಶಿಸಿ, ಮೆಟ್ಟಲುಗಳನ್ನು ಹತ್ತಿ ದಾವೀದ ನಗರದ ತನಕ ಹೋದರು. ಈಗ ಅವರು ನಗರದ ಗೋಡೆಯನ್ನು ಹತ್ತಿ ದಾವೀದನ ಮನೆಯ ಮೇಲ್ಗಡೆಯಿಂದ, “ನೀರು” ಎಂಬ ದ್ವಾರದ ಕಡೆಗೆ ಹೋದರು.
38 ಗಾಯಕರ ಇನ್ನೊಂದು ಗುಂಪು ಮೊದಲಿನವರನ್ನು ಎದುರುಗೊಳ್ಳುವಂತೆ ಎಡಗಡೆಗೆ ತಿರುಗಿದರು. ನಾನು ಅವರನ್ನು ಹಿಂಬಾಲಿಸುತ್ತಾ ಗೋಡೆಯ ಮೇಲೆ ಬಂದೆನು. ಅರ್ಧಜನರು ಅವರನ್ನು ಹಿಂಬಾಲಿಸಿ ಕುಲುಮೆಯ ಬುರುಜು ದಾಟಿ ಅಗಲದ ಗೋಡೆಗೆ ಬಂದರು. 39 ಆಮೇಲೆ ಅವರು ಎಫ್ರಾಯಿಮನ ದ್ವಾರ, ಹಳೇ ದ್ವಾರ ಮತ್ತು “ಮೀನು” ಎಂಬ ದ್ವಾರ ಇವುಗಳ ಮೇಲೆ ಹಾದುಹೋದರು. ಅವರು ಹನನೇಲ್ ಬುರುಜು ಮತ್ತು “ನೂರು” ಎಂಬ ಬುರುಜುಗಳ ಮೇಲೆ ಹಾದುಹೋಗಿ “ಕುರಿ” ಎಂಬ ದ್ವಾರದವರೆಗೂ ಹೋದರು. ಅವರು “ಕಾವಲು ದ್ವಾರ”ದ ಬಳಿ ನಿಂತರು. 40 ಅನಂತರ ಈ ಎರಡು ಗಾಯನ ವೃಂದದವರು ದೇವಾಲಯದಲ್ಲಿ ತಮಗೆ ನೇಮಕವಾದ ಸ್ಥಳದಲ್ಲಿ ನಿಂತರು. ನಾನು ನನ್ನ ಸ್ಥಳದಲ್ಲಿ ನಿಂತೆನು. ಅರ್ಧಭಾಗ ಅಧಿಕಾರಿಗಳು ದೇವಾಲಯದೊಳಗೆ ತಮ್ಮತಮ್ಮ ಸ್ಥಳಗಳಲ್ಲಿ ನಿಂತರು. 41 ಯಾಜಕರಾದ ಎಲ್ಯಾಕೀಮ್, ಮಾಸೇಯ, ಮಿನ್ಯಾಮೀನ್, ಮೀಕಾಯ, ಎಲ್ಯೋವೇನೈ, ಜೆಕರ್ಯ ಮತ್ತು ಹನನ್ಯ ತುತ್ತೂರಿಗಳನ್ನು ಹಿಡಿದುಕೊಂಡು ತಮ್ಮ ತಮ್ಮ ಸ್ಥಳಗಳಲ್ಲಿ ನಿಂತರು. 42 ಆಮೇಲೆ ಮಾಸೇಯ, ಶೆಮಾಯ, ಎಲ್ಯಾಜಾರ್, ಉಜ್ಜೇ, ಯೆಹೋಹಾನಾನ್, ಮಲ್ಕೀಯ, ಏಲಾಮ್ ಮತ್ತು ಏಜೆರ್ ಯಾಜಕರು ತಮ್ಮ ತಮ್ಮ ಸ್ಥಳಗಳಲ್ಲಿ ನಿಂತರು.
ಆಮೇಲೆ ಇಜ್ರಹ್ಯನ ನಾಯಕತ್ವದಲ್ಲಿ ಎರಡುಗುಂಪು ಗಾಯಕರು ಹಾಡಲು ಪ್ರಾರಂಭಿಸಿದರು. 43 ಆ ವಿಶೇಷ ದಿನದಲ್ಲಿ ಯಾಜಕರು ಹೆಚ್ಚಿನ ಸಂಖ್ಯೆಯಲ್ಲಿ ಯಜ್ಞವನ್ನರ್ಪಿಸಿದರು. ಜನರೆಲ್ಲಾ ಸಂತೋಷಪಟ್ಟರು. ದೇವರು ಅವರಿಗೆಲ್ಲಾ ಅತ್ಯಾನಂದವನ್ನು ಉಂಟುಮಾಡಿದನು; ಹೆಂಗಸರೂ ಮಕ್ಕಳೂ ಉತ್ಸಾಹದಿಂದ ಆನಂದಿಸಿದರು; ಜೆರುಸಲೇಮಿನಿಂದ ಹೊರಟ ಅವರ ಹರ್ಷಧ್ವನಿಯು ಬಹುದೂರದವರೆಗೆ ಕೇಳಿಸಿತು.
44 ಉಗ್ರಾಣಕ್ಕೆ ಮುಖ್ಯಸ್ತರನ್ನು ಆ ದಿನ ಆರಿಸಿದರು. ಜನರು ತಮ್ಮ ಪ್ರಥಮಫಲಗಳನ್ನು, ಪೈರಿನ ಹತ್ತನೆಯ ಒಂದಂಶವನ್ನು ತಂದರು. ಉಗ್ರಾಣದ ಮುಖ್ಯಸ್ತರು ಅವುಗಳನ್ನು ಕೋಣೆಯೊಳಗೆ ಶೇಖರಿಸಿಟ್ಟರು. ಎಲ್ಲರೂ ಅಚ್ಚುಕಟ್ಟಾಗಿ ತಮ್ಮತಮ್ಮ ಕೆಲಸಕಾರ್ಯಗಳನ್ನು ಮಾಡುವುದನ್ನು ನೋಡಿ ಜನರು ಸಂತೋಷಪಟ್ಟರು; ಹೆಚ್ಚಾದ ವಸ್ತುಗಳನ್ನು ಉಗ್ರಾಣದೊಳಕ್ಕೆ ತಂದರು. 45 ಯಾಜಕರೂ ಲೇವಿಯರೂ ತಮ್ಮ ದೇವರಿಗೋಸ್ಕರ ತಮ್ಮ ಕೆಲಸಗಳನ್ನು ಮಾಡಿದರು. ಶುದ್ಧೀಕರಣ ಆಚರಣೆಯ ಮೂಲಕ ಜನರನ್ನು ಶುದ್ಧರನ್ನಾಗಿ ಮಾಡಿದರು. ಗಾಯಕರೂ ದ್ವಾರಪಾಲಕರೂ ತಮ್ಮತಮ್ಮ ಕೆಲಸಗಳನ್ನು ಮಾಡಿದರು. ದಾವೀದನು ಮತ್ತು ಸೊಲೊಮೋನನು ಆಜ್ಞಾಪಿಸಿದ್ದ ಪ್ರಕಾರವೇ ಅವರು ಎಲ್ಲವನ್ನು ಮಾಡಿದರು. 46 (ಬಹುಕಾಲದ ಹಿಂದೆ, ದಾವೀದನು ಆಳುತ್ತಿದ್ದಾಗ ಆಸಾಫನು ಗಾಯಕರಿಗೆ ನಿರ್ದೇಶಕನಾಗಿದ್ದನು. ಅವನು ದೇವರಿಗಾಗಿ ಅನೇಕ ಕೃತಜ್ಞತಾಗೀತೆಗಳನ್ನೂ ಸ್ತುತಿಗೀತೆಗಳನ್ನೂ ರಚಿಸಿದ್ದನು.)
47 ಜೆರುಬ್ಬಾಬೆಲ್ ಮತ್ತು ನೆಹೆಮೀಯನ ಕಾಲದಲ್ಲಿ ಇಸ್ರೇಲರೆಲ್ಲರೂ ಗಾಯಕರಿಗೆ ಮತ್ತು ದ್ವಾರಪಾಲಕರಿಗೆ ಅನುದಿನ ಅಗತ್ಯವಾದವುಗಳನ್ನು ಒದಗಿಸಿಕೊಟ್ಟರು. ಇತರ ಲೇವಿಯರಿಗೋಸ್ಕರವಾಗಿಯೂ ಜನರು ಹಣವನ್ನು ಪ್ರತ್ಯೇಕವಾಗಿಟ್ಟರು. ಲೇವಿಯರೂ ಸಹ ಆರೋನನ ವಂಶದ ಯಾಜಕರಿಗಾಗಿ ಹಣವನ್ನು ಪ್ರತ್ಯೇಕವಾಗಿಟ್ಟರು.
ನೆಹೆಮೀಯನ ಕಡೇ ಆಜ್ಞೆಗಳು
13 ಆ ದಿವಸ ಎಲ್ಲಾ ಜನರಿಗೆ ಕೇಳಿಸುವಂತೆ ಮೋಶೆಯ ಗ್ರಂಥಗಳನ್ನು ಓದಲಾಯಿತು. ಅದರಲ್ಲಿ ಈ ಆಜ್ಞೆಯು ಬರೆಯಲ್ಪಟ್ಟಿದ್ದನ್ನು ಕಂಡುಕೊಂಡರು. ಅದೇನೆಂದರೆ: ದೇವರ ಸಭೆಯಲ್ಲಿ ಯಾವ ಅಮ್ಮೋನ್ಯನಾಗಲಿ ಮೋವಾಬ್ಯನಾಗಲಿ ಇರಕೂಡದು. 2 ಯಾಕೆಂದರೆ ಅವರು ಇಸ್ರೇಲರಿಗೆ ಆಹಾರವನ್ನಾಗಲಿ ನೀರನ್ನಾಗಲಿ ಕೊಟ್ಟಿರಲಿಲ್ಲ. ಅಲ್ಲದೆ ಅವರು ಬಿಳಾಮನಿಗೆ ಹಣಕೊಟ್ಟು ಇಸ್ರೇಲರನ್ನು ಶಪಿಸುವಂತೆ ಮಾಡಿದರು. ಆದರೆ ನಮ್ಮ ದೇವರು ಆ ಶಾಪವನ್ನು ನಮಗೆ ಆಶೀರ್ವಾದವಾಗುವಂತೆ ಮಾಡಿದರು. 3 ಇಸ್ರೇಲರು ದೇವರ ಕಟ್ಟಳೆಯನ್ನು ಕೇಳಿ ಅದಕ್ಕೆ ವಿಧೇಯರಾದರು. ಅನ್ಯರ ಸಂತತಿಯವರಿಂದ ತಮ್ಮನ್ನು ಪ್ರತ್ಯೇಕಿಸಿಕೊಂಡರು.
4-5 ಆದರೆ ಅದಕ್ಕಿಂತ ಮೊದಲು ಎಲ್ಯಾಷೀಬನು ದೇವಾಲಯದ ಒಂದು ಕೋಣೆಯನ್ನು ಟೋಬೀಯನಿಗೆ ಕೊಟ್ಟಿದ್ದನು. ಎಲ್ಯಾಷೀಬನು ದೇವಾಲಯದ ಉಗ್ರಾಣದ ಮುಖ್ಯಸ್ಥನಾಗಿದ್ದನು ಮತ್ತು ಟೋಬೀಯನ ಪ್ರಾಣಸ್ನೇಹಿತನಾಗಿದ್ದನು. ಆ ಕೋಣೆಯಲ್ಲಿ ಧಾನ್ಯಸಮರ್ಪಣೆಯ ಉಳಿದ ಭಾಗ, ಧೂಪ, ದೇವಾಲಯದ ಪಾತ್ರೆಗಳು, ದಶಮಾಂಶ, ದವಸಧಾನ್ಯಗಳು, ಹೊಸ ದ್ರಾಕ್ಷಾರಸ, ಎಣ್ಣೆ ಇವುಗಳನ್ನೆಲ್ಲಾ ಗಾಯಕರಿಗೂ ಲೇವಿಯರಿಗೂ ಮತ್ತು ದ್ವಾರಪಾಲಕರಿಗೂ ಕೊಡುವುದಕ್ಕಾಗಿ ಅಲ್ಲಿಟ್ಟಿದ್ದರು. ಅಲ್ಲಿ ಯಾಜಕರಿಗೆ ಉಡುಗೊರೆಗಳನ್ನು ಸಹ ಇಟ್ಟಿದ್ದರು. ಅದೇ ಕೋಣೆಯನ್ನು ಎಲ್ಯಾಷೀಬನು ಟೋಬೀಯನಿಗೆ ಕೊಟ್ಟಿದ್ದನು.
6 ಇದೆಲ್ಲಾ ನಡೆಯುತ್ತಿರುವಾಗ ನಾನು ಜೆರುಸಲೇಮಿನಲ್ಲಿರಲಿಲ್ಲ. ನಾನು ಬಾಬಿಲೋನಿನ ಅರಸನ ಬಳಿಗೆ ಹಿಂತಿರುಗಿದ್ದೆನು. ಅರ್ತಷಸ್ತನ ಮೂವತ್ತೆರಡನೆಯ ವರ್ಷದಲ್ಲಿ ನಾನು ಅವನ ಬಳಿಗೆ ಹೋದೆನು. ಸ್ವಲ್ಪಕಾಲವಾದ ಬಳಿಕ ಅರಸನ ಅಪ್ಪಣೆಯೊಂದಿಗೆ ನಾನು ಹಿಂತಿರುಗಿ ಜೆರುಸಲೇಮಿಗೆ ಬಂದೆನು. 7 ಎಲ್ಯಾಷೀಬನು ಟೋಬೀಯನಿಗೆ ನಮ್ಮ ದೇವರ ಆಲಯದ ಒಂದು ಕೋಣೆಯನ್ನು ಕೊಟ್ಟನೆಂಬ ದುಃಖದ ವಿಷಯವು ನನಗೆ ಜೆರುಸಲೇಮಿನಲ್ಲಿದ್ದಾಗ ತಿಳಿಯಿತು. 8 ಆಗ ನಾನು ಎಲ್ಯಾಷೀಬನು ಮಾಡಿದ ಬಗ್ಗೆ ಬಹಳವಾಗಿ ಸಿಟ್ಟುಗೊಂಡೆನು. ಟೋಬೀಯನು ಉಪಯೋಗಿಸುತ್ತಿದ್ದ ಕೋಣೆಯೊಳಗಿದ್ದ ಅವನ ಸಾಮಾನುಗಳನ್ನೆಲ್ಲಾ ಹೊರಕ್ಕೆಳೆದು ಬಿಸಾಕಿದೆನು. 9 ಆ ಕೋಣೆಗಳನ್ನು ಶುದ್ಧಮಾಡಲು ನಾನು ಆಜ್ಞೆ ಮಾಡಿದೆನು. ಆಮೇಲೆ ದೇವಾಲಯದ ಪಾತ್ರೆಗಳನ್ನು, ವಸ್ತುಗಳನ್ನು, ಧಾನ್ಯಸಮರ್ಪಣೆಗಳನ್ನು ಮತ್ತು ಧೂಪವನ್ನು ಆ ಕೋಣೆಯೊಳಗೆ ತಂದಿಟ್ಟೆನು.
10 ಲೇವಿಯರಿಗೆ ಸಲ್ಲತಕ್ಕ ಪಾಲನ್ನು ಜನರು ಕೊಡಲಿಲ್ಲವೆಂಬ ಕಾರಣದಿಂದಾಗಿ ಲೇವಿಯರೂ ಗಾಯಕರೂ ಹೊಲದಲ್ಲಿ ಕೆಲಸ ಮಾಡಲು ತಮ್ಮ ಊರುಗಳಿಗೆ ಹೊರಟುಹೋದರೆಂಬ ವಿಷಯ ನನಗೆ ತಿಳಿಯಿತು. 11 ಆಗ ನಾನು ಅಧಿಕಾರಿಗಳಿಗೆ, “ನೀವು ದೇವರ ಆಲಯವನ್ನು ನಿರ್ಲಕ್ಷಿಸಿದ್ದೇನು?” ಎಂದು ಪ್ರಶ್ನಿಸಿದೆನು. ಅನಂತರ ನಾನು ಲೇವಿಯರನ್ನು ಒಟ್ಟಾಗಿ ಸೇರಿಸಿ ತಮ್ಮತಮ್ಮ ಸ್ಥಳಗಳಿಗೆ ಹೋಗಿ ತಮಗೆ ನೇಮಕವಾದ ಕರ್ತವ್ಯ ಪಾಲಿಸುವಂತೆ ಹೇಳಿದೆನು. 12 ಆಗ ಯೆಹೂದ ಪ್ರಾಂತ್ಯದ ಪ್ರತಿಯೊಬ್ಬರೂ ತಮ್ಮ ದಶಮಾಂಶ, ಧಾನ್ಯ, ದ್ರಾಕ್ಷಾರಸ, ಎಣ್ಣೆ ಮುಂತಾದವುಗಳನ್ನು ತಂದುಕೊಟ್ಟರು. ಅವುಗಳನ್ನು ಉಗ್ರಾಣಗಳಲ್ಲಿ ಶೇಖರಿಸಿಡಲಾಯಿತು.
13 ಯಾಜಕನಾದ ಶೆಲೆಮ್ಯನನ್ನೂ ಬೋಧಕನಾದ ಚಾದೋಕನನ್ನೂ ಪೆದಾಯ ಎಂಬ ಲೇವಿಯನನ್ನೂ ಉಗ್ರಾಣಗಳಿಗೆ ಮುಖ್ಯಸ್ತರನ್ನಾಗಿ ಮಾಡಿದೆನು. ಮತ್ತನ್ಯನ ಮೊಮ್ಮಗನೂ ಜಕ್ಕೂರನ ಮಗನೂ ಆಗಿರುವ ಹಾನಾನನನ್ನು ಅವರಿಗೆ ಸಹಾಯಕನನ್ನಾಗಿ ನೇಮಿಸಿದೆನು. ಇವರು ನಂಬಿಗಸ್ತರಾಗಿದ್ದರು. ತಮ್ಮ ಜನರಿಗೆ ಬೇಕಾದ ದವಸವನ್ನು, ಆಹಾರಸಾಮಾಗ್ರಿಗಳನ್ನು ಒದಗಿಸುವ ಕಾರ್ಯಕ್ಕೆ ಅವರು ಜವಾಬ್ದಾರರಾಗಿದ್ದರು.
14 ದೇವರೇ, ನಾನು ಮಾಡಿದ ಈ ಕಾರ್ಯಗಳು ನಿನ್ನ ನೆನಪಿನಲ್ಲಿರಲಿ. ನಿನ್ನ ಆಲಯಕ್ಕೂ ಅದರ ಸೇವೆಗಳಿಗಾಗಿಯೂ ನಾನು ನಂಬಿಗಸ್ತಿಕೆಯಿಂದ ಮಾಡಿರುವ ಸೇವೆಯನ್ನೂ ಮರೆಯದಿರು.
15 ಆ ದಿವಸಗಳಲ್ಲಿ ಯೆಹೂದದ ಜನರು ಸಬ್ಬತ್ ದಿನದಲ್ಲಿ ಕೆಲಸ ಮಾಡುವುದನ್ನು ನೋಡಿದೆನು. ಅವರು ದ್ರಾಕ್ಷಿಯನ್ನು ತುಳಿದು ದ್ರಾಕ್ಷಾರಸ ತಯಾರಿಸುತ್ತಿದ್ದರು. ದವಸಧಾನ್ಯಗಳನ್ನು ಕತ್ತೆಗಳ ಮೇಲೆ ಹೇರಿಸಿಕೊಂಡು ಹೋಗುತ್ತಿದ್ದರು. ಬೆಳೆಯನ್ನು ಮಾರಲು ಜೆರುಸಲೇಮಿಗೆ ಬರುತ್ತಿದ್ದರು. ನಾನು ಅವರನ್ನು ಕಟುವಾಗಿ ಎಚ್ಚರಿಸಿ ಇನ್ನು ಮುಂದೆ ಸಬ್ಬತ್ ದಿನದಲ್ಲಿ ಪಟ್ಟಣದೊಳಗೆ ಏನನ್ನೂ ತರಬಾರದೆಂದು ಆಜ್ಞಾಪಿಸಿದೆನು.
16 ಜೆರುಸಲೇಮ್ ನಗರದಲ್ಲಿ ತೂರ್ ದೇಶದ ಕೆಲವರು ವಾಸಿಸುತ್ತಿದ್ದರು. ಅವರು ಸಬ್ಬತ್ ದಿನದಲ್ಲಿ ಮೀನು ಮತ್ತು ಇತರ ವಸ್ತುಗಳನ್ನು ನಗರದೊಳಕ್ಕೆ ತಂದು ಮಾರುತ್ತಿದ್ದರು. ಯೆಹೂದ್ಯರು ಅವರಿಂದ ಕೊಂಡುಕೊಳ್ಳುತ್ತಿದ್ದರು. 17 ನಾನು ಯೆಹೂದ ಪ್ರಾಂತದ ಗೌರವಸ್ಥ ಜನರಿಗೆ, “ಇದು ತಪ್ಪು, ನೀವು ತಪ್ಪು ಕೆಲಸ ಮಾಡುತ್ತಿದ್ದೀರಿ. ನೀವು ಸಬ್ಬತ್ ದಿನವನ್ನು ಅಶುದ್ಧವನ್ನಾಗಿ ಮಾಡುತ್ತಿದ್ದೀರಿ. ಅದನ್ನು ಸಾಮಾನ್ಯ ದಿನದಂತೆ ಮಾಡುತ್ತಿದ್ದೀರಿ. 18 ನಮ್ಮ ಪೂರ್ವಿಕರೂ ಇದೇ ರೀತಿ ಮಾಡಿದರು. ಆ ಕಾರಣದಿಂದ ನಮ್ಮ ದೇವರು ಇಂಥಾ ತೊಂದರೆಗಳನ್ನು ನಮ್ಮ ನಗರಕ್ಕೆ ತಂದೊಡ್ಡಿದನು. ನೀವು ಸಬ್ಬತ್ ದಿನವನ್ನು ಅಶುದ್ಧಮಾಡಿ ನಿಮ್ಮ ಮೇಲೆ ಇನ್ನೂ ಹೆಚ್ಚಿನ ಕೋಪವನ್ನು ಬರಮಾಡಿಕೊಳ್ಳುತ್ತಿದ್ದೀರಿ. ದೇವರು ಇದಕ್ಕಾಗಿ ಭಯಂಕರ ಶಿಕ್ಷೆಯನ್ನು ಕೊಡುವವನಾಗಿದ್ದಾನೆ” ಎಂದು ಹೇಳಿದೆನು.
19 ಅಲ್ಲದೆ ಶುಕ್ರವಾರ ಸೂರ್ಯಸ್ತಮಾನಕ್ಕಿಂತ ಮುಂಚೆ ಜೆರುಸಲೇಮಿನ ಬಾಗಿಲ ಕದಗಳನ್ನು ಮುಚ್ಚಲು ಆಜ್ಞೆಯಿತ್ತೆನು. ಸಬ್ಬತ್‌ದಿನ ಮುಗಿದ ಬಳಿಕವೇ ಅವುಗಳನ್ನು ತೆರೆಯಲು ಅಪ್ಪಣೆಕೊಟ್ಟೆನು. ದ್ವಾರಗಳ ಬಳಿ ನನ್ನ ಕೆಲವು ಜನರನ್ನು ನಿಲ್ಲಿಸಿ, ಸಬ್ಬತ್ ದಿನದಲ್ಲಿ ಯಾವ ಮೂಟೆಯನ್ನೂ ನಗರದೊಳಗೆ ತರಲು ಬಿಡಬಾರದು ಎಂದು ಅವರಿಗೆ ಆಜ್ಞಾಪಿಸಿದೆನು.
20 ಒಂದೆರಡು ಬಾರಿ ವ್ಯಾಪಾರಸ್ತರು ನಗರದ ಹೊರಗಡೆಯೇ ರಾತ್ರಿಯಲ್ಲಿ ಉಳಿದುಕೊಳ್ಳಬೇಕಾಯಿತು. 21 ನಾನು ಆ ವ್ಯಾಪಾರಸ್ತರಿಗೆ, “ನೀವು ಬಾಗಿಲಿಗೆದುರಾಗಿ ನಗರದ ಹೊರಗೆ ರಾತ್ರಿ ಉಳಿದುಕೊಳ್ಳಬಾರದು. ಹಾಗೆ ಮಾಡಿದ್ದಲ್ಲಿ ನಿಮ್ಮನ್ನು ದಸ್ತಗಿರಿ ಮಾಡಬೇಕಾಗುವದು” ಎಂದು ಎಚ್ಚರಿಸಿದೆನು. ಅಂದಿನಿಂದ ಅವರು ಸಬ್ಬತ್ ದಿನದಲ್ಲಿ ನಗರಕ್ಕೆ ವ್ಯಾಪಾರಕ್ಕಾಗಿ ಬರುವುದನ್ನು ನಿಲ್ಲಿಸಿದರು.
22 ಇದಾದ ಬಳಿಕ ತಮ್ಮನ್ನು ಶುದ್ಧಪಡಿಸಿಕೊಳ್ಳಲು ಲೇವಿಯರಿಗೆ ಆಜ್ಞಾಪಿಸಿದೆನು. ಅವರು ಶುದ್ಧಪಡಿಸಿಕೊಂಡ ಬಳಿಕ ಬಾಗಿಲುಗಳನ್ನು ಕಾಯಲು ಅವರನ್ನು ಕಳುಹಿಸಿದೆನು. ಯಾಕೆಂದರೆ ಸಬ್ಬತ್‌ದಿನವು ಪವಿತ್ರ ದಿನವೆಂದು ಎಲ್ಲರೂ ಆಚರಿಸುವಂತೆ ಹೀಗೆ ಮಾಡಿದೆನು.
ದೇವರೇ, ನನ್ನ ಈ ಕಾರ್ಯವನ್ನು ನಿನ್ನ ನೆನಪಿನಲ್ಲಿಟ್ಟುಕೋ. ನನ್ನ ಮೇಲೆ ದಯವಿಟ್ಟು ನಿನ್ನ ಪ್ರೀತಿಯನ್ನು ತೋರಿಸು.
23 ಆ ದಿನಗಳಲ್ಲಿ ಕೆಲವು ಮಂದಿ ಯೆಹೂದ್ಯರು ಅಷ್ಡೋದ್, ಅಮ್ಮೋನ್, ಮೋವಾಬ್ ಊರುಗಳಿಂದ ಹೆಣ್ಣನ್ನು ತಂದು ಮದುವೆ ಮಾಡಿಕೊಂಡದ್ದು ನನ್ನ ನೆನಪಿಗೆ ಬಂತು. 24 ಅವರಿಗೆ ಹುಟ್ಟಿದ ಮಕ್ಕಳಲ್ಲಿ ಅರ್ಧದಷ್ಟು ಮಂದಿಗೆ ಯೆಹೂದ್ಯರ ಭಾಷೆಯ ಜ್ಞಾನವೇ ಇರಲಿಲ್ಲ. ಅವರು ಅಷ್ಡೋದ್, ಅಮ್ಮೋನ್, ಮೋವಾಬ್, ದೇಶಗಳ ಭಾಷೆಗಳನ್ನಾಡುತ್ತಿದ್ದರು. 25 “ನೀವು ತಪ್ಪು ಕೆಲಸಮಾಡಿದಿರಿ” ಎಂದು ಅವರನ್ನು ಶಪಿಸಿದೆನು. ಕೆಲವರಿಗೆ ಹೊಡೆದೆನು; ಕೆಲವರ ಕೂದಲು ಎಳೆದು ಕಿತ್ತುಬಿಟ್ಟೆನು. ದೇವರ ಹೆಸರಿನಲ್ಲಿ ಪ್ರತಿಜ್ಞೆ ಮಾಡಲು ಅವರನ್ನು ಒತ್ತಾಯಪಡಿಸಿ, “ನೀವು ಆ ಜನರ ಹೆಣ್ಣುಮಕ್ಕಳನ್ನು ಮದುವೆಯಾಗಬಾರದು. ಅನ್ಯರ ಹೆಣ್ಣುಮಕ್ಕಳು ನಿಮ್ಮ ಗಂಡುಮಕ್ಕಳನ್ನು ಮದುವೆಯಾಗದಂತೆ ನೋಡಿಕೊಳ್ಳಿರಿ. 26 ಇಂಥ ಮದುವೆಗಳಿಂದಾಗಿ ಸೊಲೊಮೋನನು ಪಾಪಕ್ಕೆ ಒಳಗಾದನು ಎಂಬುದು ನಿಮಗೆ ತಿಳಿಯದೋ? ಅವನಂಥ ವೈಭವಶಾಲಿ ಅರಸನು ಯಾವ ರಾಜ್ಯದಲ್ಲಿಯೂ ಇರಲಿಲ್ಲ. ದೇವರು ಸೊಲೊಮೋನನನ್ನು ಪ್ರೀತಿಸಿದನು. ಇಡೀ ಇಸ್ರೇಲಿಗೆ ಅವನನ್ನು ಅರಸನನ್ನಾಗಿ ಮಾಡಿದನು. ಅಂಥವನೂ ಅನ್ಯಸ್ತ್ರೀಯರಿಂದಾಗಿ ಪಾಪ ಮಾಡಿದನು. 27 ಈಗ ನೀವು ಸಹ ಅನ್ಯಸ್ತ್ರೀಯರನ್ನು ಮದುವೆಯಾಗಿ ಭಯಂಕರವಾದ ಪಾಪಗಳನ್ನು ಮಾಡುತ್ತಿದ್ದೀರಿ. ನೀವು ದೇವರಿಗೆ ವಿಧೇಯರಾಗಲಿಲ್ಲ” ಎಂದು ಹೇಳಿದೆನು.
28 ಪ್ರಧಾನ ಯಾಜಕನಾದ ಎಲ್ಯಾಷೀಬನ ಮಗನಾದ ಯೋಯಾದನ ಮಕ್ಕಳಲ್ಲಿ ಒಬ್ಬನು ಹೊರೋನಿನ ಸನ್ಬಲ್ಲಟನಿಗೆ ಅಳಿಯನಾದನು. ನಾನು ಅವನನ್ನು ಆ ಸ್ಥಳದಿಂದ ಹೊರಗೆ ಓಡಿಸಿಬಿಟ್ಟೆನು.
29 ನನ್ನ ದೇವರೇ, ಆ ಮನುಷ್ಯರನ್ನು ಶಿಕ್ಷಿಸು. ಅವರು ಯಾಜಕತ್ವವನ್ನು ಹೊಲಸು ಮಾಡಿದ್ದಾರೆ. ಅದನ್ನು ಅವರು ಸಾಮಾನ್ಯವೆಂದೆಣಿಸಿದ್ದಾರೆ. ಯಾಜಕರೊಂದಿಗೆ ಮತ್ತು ಲೇವಿಯರೊಂದಿಗೆ ನೀನು ಮಾಡಿದ ಒಡಂಬಡಿಕೆಯನ್ನು ಅವರು ತಿರಸ್ಕರಿಸಿದ್ದಾರೆ. 30 ನಾನು ಯಾಜಕರನ್ನೂ ಲೇವಿಯರನ್ನೂ ಶುದ್ಧರನ್ನಾಗಿ ಮಾಡಿಕೊಳ್ಳುವಂತೆ ಆಜ್ಞಾಪಿಸಿದೆನು. ಅವರಲ್ಲಿದ್ದ ಅನ್ಯರನ್ನು, ಪರರ ಬೋಧನೆಗಳನ್ನು ನಾನು ಅವರಿಂದ ತೆಗೆದುಹಾಕಿದೆನು. ಲೇವಿಯರಿಗೂ ಯಾಜಕರಿಗೂ ಅವರವರ ಕರ್ತವ್ಯಗಳನ್ನೂ ಜವಾಬ್ದಾರಿಕೆಗಳನ್ನೂ ತಿಳಿಸಿದೆನು. 31 ಜನರು ಕಟ್ಟಿಗೆಯನ್ನೂ ಪ್ರಥಮಫಲಗಳನ್ನೂ ಸರಿಯಾದ ಸಮಯದಲ್ಲಿ ತರುವಂತೆ ನಾನು ಆಜ್ಞಾಪಿಸಿದೆನು.
ನನ್ನ ದೇವರೇ, ಈ ಒಳ್ಳೆಯ ಕಾರ್ಯಗಳನ್ನೆಲ್ಲಾ ಮಾಡಿದ ನನ್ನನ್ನು ಮರೆಯಬೇಡ.
ಪೇತ್ರ ಮತ್ತು ಯೋಹಾನರು ಹಿಂತಿರುಗಿದರು
23 ಪೇತ್ರ ಮತ್ತು ಯೋಹಾನರು ಯೆಹೂದ್ಯನಾಯಕರ ಸಭೆಯಿಂದ ಹೊರಟು ತಮ್ಮ ಸಮುದಾಯಕ್ಕೆ ಹೋದರು. ಮಹಾಯಾಜಕರು ಮತ್ತು ಯೆಹೂದ್ಯರ ಹಿರಿಯ ನಾಯಕರು ತಮಗೆ ಹೇಳಿದ ಪ್ರತಿಯೊಂದನ್ನು ಅವರು ತಮ್ಮ ಸಮುದಾಯದವರಿಗೆ ತಿಳಿಸಿದರು. 24 ಇದನ್ನು ಕೇಳಿದಾಗ ವಿಶ್ವಾಸಿಗಳು ಏಕಮನಸ್ಸಿನಿಂದ ದೇವರಲ್ಲಿ ಪ್ರಾರ್ಥಿಸಿದರು: ಅವರೆಲ್ಲರಲ್ಲಿ ಒಂದೇ ಮನಸ್ಸಿತ್ತು. “ಒಡೆಯನೇ, ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಮತ್ತು ಲೋಕದಲ್ಲಿರುವ ಪ್ರತಿಯೊಂದನ್ನೂ ನಿರ್ಮಿಸಿದಾತನು ನೀನೇ. 25 ನಮ್ಮ ಪಿತೃವಾದ ದಾವೀದನು ನಿನ್ನ ಸೇವಕನಾಗಿದ್ದನು. ಅವನು ಪವಿತ್ರಾತ್ಮನ ಸಹಾಯದಿಂದ ಈ ಮಾತುಗಳನ್ನು ಬರೆದನು:
‘ಜನಾಂಗಗಳು ಕೂಗಾಡುವುದೇಕೆ?
ಈ ಲೋಕದ ಜನರು ದೇವರಿಗೆ ವಿರೋಧವಾಗಿ ಕಾರ್ಯಗಳನ್ನು ಯೋಚಿಸುತ್ತಿರುವುದೇಕೆ? ಇದರಿಂದ ಪ್ರಯೋಜನವೇನೂ ಇಲ್ಲ!
26 ‘ಭೂಲೋಕದ ರಾಜರು ಹೋರಾಡಲು ಸಿದ್ಧರಾಗಿದ್ದಾರೆ;
ಪ್ರಭುವಿಗೂ ಆತನ ಕ್ರಿಸ್ತನಿಗೂ ವಿರೋಧವಾಗಿ ಅಧಿಪತಿಗಳೆಲ್ಲರೂ ಒಟ್ಟಾಗಿ ಸೇರಿದ್ದಾರೆ.’(A)
27 ಹೆರೋದರಾಜನು, ಪೊಂತಿಯಸ್ ಪಿಲಾತನು, ಜನಾಂಗಗಳು ಮತ್ತು ಯೆಹೂದ್ಯರು ಈ ಪಟ್ಟಣದಲ್ಲಿ ಒಟ್ಟಾಗಿ ಸೇರಿಕೊಂಡು ಯೇಸುವನ್ನು ವಿರೋಧಿಸಿದಾಗ ಈ ಸಂಗತಿಗಳು ನಿಜವಾಗಿಯೂ ನೆರವೇರಿದವು. ಯೇಸು ನಿನ್ನ ಪವಿತ್ರ ಸೇವಕನಾಗಿದ್ದಾನೆ. ನೀನು ಆತನನ್ನು ಅಭಿಷೇಕಿಸಿದೆ. 28 ಯೇಸುವಿನ ವಿರುದ್ಧ ಒಟ್ಟಾಗಿ ಬಂದ ಈ ಜನರು ನಿನ್ನ ಯೋಜನೆ ನೆರವೇರುವಂತೆ ಮಾಡಿದರು. ನಿನ್ನ ಶಕ್ತಿಯಿಂದಲೂ ನಿನ್ನ ಚಿತ್ತದಿಂದಲೂ ಇದು ನೆರವೇರಿತು. 29 ಪ್ರಭುವೇ, ಈಗ ಅವರು ಹೇಳುತ್ತಿರುವುದನ್ನು ಕೇಳು. ಅವರು ನಮ್ಮನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ! ಪ್ರಭುವೇ ನಾವು ನಿನ್ನ ಸೇವಕರು. ನಿನ್ನ ವಾಕ್ಯವನ್ನು ಭಯವಿಲ್ಲದೆ ಹೇಳಲು ನೀನೇ ಸಹಾಯ ಮಾಡು. 30 ನಿನ್ನ ಕೈಚಾಚಿ ಯೇಸುವಿನ ಹೆಸರಿನ ಮೂಲಕ ರೋಗಿಗಳನ್ನು ಗುಣಪಡಿಸು; ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡು” ಎಂದು ಅವರು ಪ್ರಾರ್ಥಿಸಿದರು.
31 ಹೀಗೆ ವಿಶ್ವಾಸಿಗಳು ಪ್ರಾರ್ಥಿಸುತ್ತಿದ್ದಾಗ, ಅವರು ಸಭೆ ಸೇರಿದ್ದ ಸ್ಥಳವು ನಡುಗಿತು. ಅವರೆಲ್ಲರೂ ಪವಿತ್ರಾತ್ಮಭರಿತರಾದರು ಮತ್ತು ದೇವರ ವಾಕ್ಯವನ್ನು ಭಯವಿಲ್ಲದೆ ಪ್ರಕಟಿಸಿದರು.
ವಿಶ್ವಾಸಿಗಳ ಅನ್ಯೋನ್ಯ ಜೀವನ
32 ವಿಶ್ವಾಸಿಗಳ ಹೃದಯವೂ ಪ್ರಾಣವೂ ಒಂದೇ ಆಗಿತ್ತು. ಸಮುದಾಯದಲ್ಲಿದ್ದ ಯಾವನಾಗಲಿ ತನ್ನಲ್ಲಿರುವವುಗಳನ್ನು ತನ್ನದೆಂದು ಹೇಳುತ್ತಿರಲಿಲ್ಲ. ಬದಲಾಗಿ, ಅವರು ಪ್ರತಿಯೊಂದನ್ನು ಹಂಚಿಕೊಳ್ಳುತ್ತಿದ್ದರು. 33 ಪ್ರಭುವಾದ ಯೇಸು ನಿಜವಾಗಿಯೂ ಸತ್ತವರೊಳಗಿಂದ ಜೀವಂತವಾಗಿ ಎದ್ದುಬಂದನೆಂದು ಅಪೊಸ್ತಲರು ಬಹುಬಲವಾಗಿ ಜನರಿಗೆ ಹೇಳುತ್ತಿದ್ದರು. ದೇವರು ವಿಶ್ವಾಸಿಗಳೆಲ್ಲರನ್ನು ಬಹಳವಾಗಿ ಆಶೀರ್ವದಿಸಿದನು. 34 ಅವರೆಲ್ಲರ ಅವಶ್ಯಕತೆಗಳನ್ನು ಪೂರೈಸಲಾಗುತ್ತಿತ್ತು. ಜಮೀನುಗಳನ್ನು ಮತ್ತು ಮನೆಗಳನ್ನು ಹೊಂದಿದ್ದ ಪ್ರತಿಯೊಬ್ಬರು ಅವುಗಳನ್ನು ಮಾರಿ, 35 ಬಂದ ಹಣವನ್ನು ಅಪೊಸ್ತಲರ ಪಾದಗಳ ಬಳಿ ಇಡುತ್ತಿದ್ದರು. ಬಳಿಕ ಅದನ್ನು ಪ್ರತಿಯೊಬ್ಬರಿಗೂ ಅವರವರ ಅಗತ್ಯತೆಗಳಿಗನುಸಾರವಾಗಿ ಹಂಚಲಾಗುತ್ತಿತ್ತು.
36 ಆ ವಿಶ್ವಾಸಿಗಳಲ್ಲಿ ಯೋಸೇಫ ಎಂಬವನೂ ಇದ್ದನು. ಅಪೊಸ್ತಲರು ಅವನನ್ನು ಬಾರ್ನಬ ಎಂದು ಕರೆಯುತ್ತಿದ್ದರು. (ಬಾರ್ನಬ ಅಂದರೆ “ಧೈರ್ಯದಾಯಕ.”) ಸೈಪ್ರಸ್‌ನಲ್ಲಿ ಹುಟ್ಟಿದ ಇವನು ಲೇವಿಯನಾಗಿದ್ದನು.[a] 37 ಯೋಸೇಫನಿಗೆ ಒಂದು ಹೊಲವಿತ್ತು. ಅವನು ಅದನ್ನು ಮಾರಿ ಬಂದ ಹಣವನ್ನು ಅಪೊಸ್ತಲರ ಪಾದಗಳ ಬಳಿ ಇಟ್ಟನು.
Kannada Holy Bible: Easy-to-Read Version. All rights reserved. © 1997 Bible League International