Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 23-24

ಯಾಜಕನಾದ ಯೆಹೋಯಾದ ಮತ್ತು ಅರಸನಾದ ಯೆಹೋವಾಷ

23 ಆರು ವರ್ಷದ ನಂತರ ಯೆಹೋಯಾದನು ತನ್ನ ಬಲವನ್ನು ಪ್ರದರ್ಶಿಸಿದನು. ಅವನು ಸೇನಾಪತಿಗಳೊಂದಿಗೆ ಒಪ್ಪಂದ ಮಾಡಿಕೊಂಡನು. ಅವರು ಯಾರೆಂದರೆ: ಯೆರೋಹಾಮನ ಮಗನಾದ ಅಜರ್ಯ, ಯೆಹೋಹಾನಾನನ ಮಗನಾದ ಇಷ್ಮಾಯೇಲ್, ಓಬೇದನ ಮಗನಾದ ಅಜರ್ಯ, ಅದಾಯನ ಮಗನಾದ ಮಾಸೇಯ ಮತ್ತು ಜಿಕ್ರಿಯ ಮಗನಾದ ಎಲೀಷಾಫಾಟ್. ಅವರು ಯೆಹೂದ ರಾಜ್ಯದಲ್ಲೆಲ್ಲಾ ಸಂಚರಿಸಿ ಅಲ್ಲಿದ್ದ ಲೇವಿಯರನ್ನು ಒಟ್ಟಾಗಿ ಸೇರಿಸಿದರು. ಅಲ್ಲದೆ ಗೋತ್ರಪ್ರಧಾನರನ್ನೂ ಒಟ್ಟಾಗಿ ಸೇರಿಸಿ, ಅವರನ್ನು ಜೆರುಸಲೇಮಿಗೆ ಕರೆದುಕೊಂಡು ಬಂದರು. ಇವರೆಲ್ಲಾ ದೇವಾಲಯದಲ್ಲಿ ರಾಜನೊಂದಿಗೆ ಒಪ್ಪಂದವನ್ನು ಮಾಡಿಕೊಂಡರು.

ಯೆಹೋಯಾದನು ಅವರಿಗೆ, “ಇಗೋ, ರಾಜಪುತ್ರನು! ಯೆಹೋವನು ದಾವೀದನ ಸಂತತಿಯವರಿಗೆ ಮಾಡಿದ ವಾಗ್ದಾನದ ಪ್ರಕಾರ ಅರಸನಾಗತಕ್ಕವನು ಇವನೇ. ಈಗ ನೀವು ಮಾಡಬೇಕಾದದ್ದೇನೆಂದರೆ: ಸಬ್ಬತ್ ದಿವಸದಲ್ಲಿ ದೇವಾಲಯಕ್ಕೆ ಬರತಕ್ಕ ಯಾಜಕರಲ್ಲೂ ಲೇವಿಯರಲ್ಲೂ ಮೂರರಲ್ಲೊಂದು ಭಾಗವು ದೇವಾಲಯದ ದ್ವಾರಗಳನ್ನು ಕಾಯಬೇಕು. ಇನ್ನೊಂದು ಭಾಗವು ಅರಮನೆಯನ್ನು ಕಾಯಬೇಕು; ಇತರ ಜನರೆಲ್ಲರೂ ಯೆಹೋವನ ಆಲಯದ ಪ್ರಾಕಾರದಲ್ಲಿರಬೇಕು; ಯಾರನ್ನೂ ದೇವಾಲಯದೊಳಕ್ಕೆ ಬಿಡಬಾರದು. ಶುದ್ಧಮಾಡಲ್ಪಟ್ಟ ಯಾಜಕರು ಮತ್ತು ಲೇವಿಯರು ಮಾತ್ರ ದೇವರ ಸೇವೆಮಾಡುವದಕ್ಕಾಗಿ ಆಲಯದೊಳಗೆ ಬರುವರು. ಉಳಿದವರು ಯೆಹೋವನು ತಮಗೆ ಕೊಟ್ಟ ಕೆಲಸಗಳನ್ನು ಮಾಡಬೇಕು. ಲೇವಿಯರು ಅರಸನ ಸುತ್ತಲೂ ನಿಂತಿರಬೇಕು. ಪ್ರತಿಯೊಬ್ಬರು ತಮ್ಮ ಖಡ್ಗವನ್ನು ಹಿಡಿದವರಾಗಿರಬೇಕು. ಯಾರಾದರೂ ಆಲಯದೊಳಕ್ಕೆ ಪ್ರವೇಶಿಸಿದರೆ ಅವನನ್ನು ಸಾಯಿಸಿರಿ. ರಾಜನು ಹೋಗುವ ಸ್ಥಳಗಳಲ್ಲಿ ನೀವು ಅವನೊಂದಿಗೆಯೇ ಇರಬೇಕು.”

ಯಾಜಕನಾದ ಯೆಹೋಯಾದನು ಆಜ್ಞಾಪಿಸಿದಂತೆ ಲೇವಿಯರೂ ಯೆಹೂದದ ಜನರೂ ಮಾಡಿದರು. ಆದ್ದರಿಂದ ಪ್ರತಿಯೊಬ್ಬ ಸೇನಾಧಿಪತಿಯು ತನ್ನ ಕೈ ಕೆಳಗೆ ಸಬ್ಬತ್‌ದಿನದಲ್ಲಿ ಕೆಲಸಮಾಡಲು ಹೋಗುತ್ತಿದ್ದವರನ್ನು ಮತ್ತು ಸಬ್ಬತ್ ದಿನದ ಕೆಲಸ ಮುಗಿಸಿಕೊಂಡು ಬರುತ್ತಿದ್ದವರನ್ನು ಕೂಡಿಸಿಕೊಂಡನು. ಯಾಜಕನಾದ ಯೆಹೋಯಾದನು ಅವರಿಗೆ ಬರ್ಜಿಯನ್ನೂ ದೊಡ್ಡ ಮತ್ತು ಚಿಕ್ಕ ಗುರಾಣಿಗಳನ್ನೂ ಕೊಟ್ಟನು. ಅವು ರಾಜನಾದ ದಾವೀದನಿಗೆ ಸೇರಿದವುಗಳಾಗಿದ್ದವು. ಅವು ದೇವಾಲಯದೊಳಗೆ ಇಡಲ್ಪಟ್ಟಿದ್ದವು. 10 ಸೇರಿಬಂದವರು ಎಲ್ಲೆಲ್ಲಿ ನಿಲ್ಲಬೇಕೆಂದು ಯೆಹೋಯಾದನು ಸೂಚಿಸಿದನು. ಪ್ರತಿಯೊಬ್ಬರ ಕೈಯಲ್ಲಿ ಆಯುಧಗಳಿದ್ದವು. ದೇವಾಲಯದ ಎಡಬಲಗಳಲ್ಲಿ ಜನರು ನಿಂತಿದ್ದರು. ಯಜ್ಞವೇದಿಕೆಯ ಬಳಿ, ದೇವಾಲಯದ ಬಳಿ ಮತ್ತು ಅರಸನ ಬಳಿಯಲ್ಲಿ ಅವರು ನಿಂತರು. 11 ಅವರು ರಾಜಕುಮಾರನನ್ನು ಹೊರತಂದು ಅವನ ತಲೆಯ ಮೇಲೆ ಕಿರೀಟವನ್ನಿಟ್ಟರು. ಅವನ ಕೈಗೆ ಧರ್ಮಶಾಸ್ತ್ರದ ಪ್ರತಿಯನ್ನು ಕೊಟ್ಟು ಅವನನ್ನು ತಮ್ಮ ರಾಜನನ್ನಾಗಿ ಮಾಡಿದರು. ಯೆಹೋಯಾದನೂ ಅವನ ಗಂಡುಮಕ್ಕಳೂ ಯೆಹೋವಾಷನನ್ನು ಅಭಿಷೇಕಿಸಿದರು. “ಅರಸನು ಚಿರಂಜೀವಿಯಾಗಿರಲಿ” ಎಂದು ಹರಸಿದರು.

12 ಜನರು ದೇವಾಲಯದಲ್ಲಿ ಅತ್ತಿತ್ತಾ ಓಡಾಡುತ್ತಾ ರಾಜನನ್ನು ಕೊಂಡಾಡುತ್ತಾ ಇರುವ ಶಬ್ದವನ್ನು ಅತಲ್ಯಳು ಕೇಳಿ ದೇವಾಲಯದೊಳಕ್ಕೆ ಬಂದಳು. ಅಲ್ಲಿ ಅರಸನು ನಿಂತದ್ದನ್ನು ಕಂಡಳು. 13 ಅವನು ಮುಂಭಾಗದ ಪ್ರವೇಶ ದ್ವಾರದಲ್ಲಿದ್ದ ರಾಜಸ್ತಂಭದ ಬಳಿ ನಿಂತಿದ್ದನು. ಸೇನಾಧಿಪತಿಗಳೂ ಅವರ ಜನರೂ ತುತ್ತೂರಿಯನ್ನು ಊದಿ ರಾಜನ ಬಳಿಯಲ್ಲಿಯೇ ನಿಂತಿದ್ದರು. ದೇಶದ ಪ್ರಜೆಗಳು ಸಂತೋಷದಿಂದ ತುತ್ತೂರಿಯನ್ನೂದಿದರು. ಗಾಯಕರು ವಾದ್ಯಗಳನ್ನು ಬಾರಿಸುತ್ತಿದ್ದರು. ಅವರು ಜನರನ್ನು ಸ್ತೋತ್ರಗೀತೆಯಲ್ಲಿ ನಡಿಸುತ್ತಿದ್ದರು. ಇದೆಲ್ಲವನ್ನು ಅತಲ್ಯಳು ನೋಡಿ ತನ್ನ ಬಟ್ಟೆಯನ್ನು ಹರಿದು, “ದ್ರೋಹ, ದ್ರೋಹ” ಎಂದು ಕಿರುಚಿದಳು.

14 ಯಾಜಕನಾದ ಯೆಹೋಯಾದನು ಸೈನ್ಯಾಧಿಕಾರಿಗಳನ್ನು ಹೊರತಂದು, “ಅತಲ್ಯಳನ್ನು ಹೊರಗೆ ಎಳೆದುಕೊಂಡು ಹೋಗಿ, ಯಾರಾದರೂ ಆಕೆಯನ್ನು ಹಿಂಬಾಲಿಸಿದರೆ ಖಡ್ಗದಿಂದ ಅವರನ್ನು ಸಂಹರಿಸಿರಿ” ಎಂದು ಹೇಳಿದನು. ಆಗ ಯಾಜಕರು ಸಿಪಾಯಿಗಳಿಗೆ, “ಅತಲ್ಯಳನ್ನು ದೇವಾಲಯದೊಳಗೆ ಕೊಲ್ಲಬೇಡಿ” ಎಂದು ಎಚ್ಚರಿಸಿದರು. 15 ಅರಮನೆಗೆ ಹೋಗುವ ದಾರಿಯಲ್ಲಿ ಕುದುರೆ ಬಾಗಿಲಿನ ಹತ್ತಿರ ಸಿಪಾಯಿಗಳು ಆಕೆಯನ್ನು ಸಂಹರಿಸಿದರು.

16 ಅನಂತರ ಯೆಹೋಯಾದನು ಅರಸನೊಂದಿಗೂ ನೆರೆದು ಬಂದಿದ್ದ ಎಲ್ಲಾ ಜನರೊಂದಿಗೂ ಒಪ್ಪಂದವನ್ನು ಮಾಡಿಕೊಂಡನು. ಅವರೆಲ್ಲರೂ ಯೆಹೋವನ ಜನರಾಗಿ ಜೀವಿಸುವದಕ್ಕೆ ಒಪ್ಪಿಕೊಂಡರು. 17 ಆಗ ಜನರೆಲ್ಲರು ಬಾಳನ ಗುಡಿಯೊಳಗೆ ನುಗ್ಗಿ ಅದನ್ನು ಹಾಳು ಮಾಡಿದರು. ಅದರ ಯಜ್ಞವೇದಿಕೆಗಳನ್ನೂ ವಿಗ್ರಹಗಳನ್ನೂ ಪುಡಿಪುಡಿ ಮಾಡಿದರು. ಬಾಳನ ಅರ್ಚಕನಾದ ಮತ್ತಾನನನ್ನು ಬಾಳನ ವೇದಿಕೆಯ ಮುಂದೆಯೇ ಕೊಂದುಹಾಕಿದರು.

18 ಆ ಬಳಿಕ ಯೆಹೋಯಾದನು ದೇವಾಲಯದೊಳಗೆ ಸೇವೆಮಾಡುವ ಜವಾಬ್ದಾರಿಕೆಯನ್ನು ಕೆಲವು ಯಾಜಕರಿಗೆ ವಹಿಸಿದನು. ಅವರೆಲ್ಲಾ ಲೇವಿಯರಾಗಿದ್ದರು. ದಾವೀದನು ಅವರಿಗೆ ದೇವಾಲಯದ ಜವಾಬ್ದಾರಿಕೆಯನ್ನು ಕೊಟ್ಟಿದ್ದನು. ಮೋಶೆಯು ಕೊಟ್ಟಿದ್ದ ನಿಯಮಕ್ಕನುಸಾರವಾಗಿ ಅವರು ಸರ್ವಾಂಗಹೋಮವನ್ನು ಅರ್ಪಿಸಿದರು. ದಾವೀದನು ಆಜ್ಞಾಪಿಸಿದಂತೆ ಅವರು ಹೋಮಗಳನ್ನೂ ಯಜ್ಞಗಳನ್ನೂ ಅರ್ಪಿಸುವಾಗ ಹಾಡುತ್ತಾ ಸಂತೋಷದಿಂದ ತಮ್ಮ ಕೆಲಸವನ್ನು ಮಾಡಿದರು. 19 ಅಶುದ್ಧರಾದವರು ದೇವಾಲಯದೊಳಗೆ ಪ್ರವೇಶಿಸದಂತೆ ಯೆಹೋಯಾದನು ಆಯಾ ಬಾಗಿಲುಗಳಲ್ಲಿ ದ್ವಾರಪಾಲಕರನ್ನು ನೇಮಿಸಿದನು.

20 ಯೆಹೋಯಾದನು ಸೇನಾಧಿಪತಿಗಳಿಗೂ ಅಧಿಪತಿಗಳಿಗೂ ಎಲ್ಲಾ ಜನರಿಗೂ ತನ್ನನ್ನು ಹಿಂಬಾಲಿಸುವಂತೆ ಹೇಳಿ, ಅರಸನನ್ನು ದೇವಾಲಯದೊಳಗಿಂದ ಹೊರತಂದನು. ಅವರೆಲ್ಲಾ ಮೇಲಿನ ಬಾಗಿಲಿನ ಮೂಲಕ ರಾಜನಿವಾಸಕ್ಕೆ ಹೋದರು. ಅಲ್ಲಿ ರಾಜನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದರು. 21 ದೇಶದ ಎಲ್ಲಾ ಜನರು ಸಂತೋಷಭರಿತರಾದರು. ಅತಲ್ಯಳನ್ನು ಸಾಯಿಸಿದ್ದರಿಂದ ದೇಶದಲ್ಲಿ ಶಾಂತಿ ನೆಲೆಸಿತು.

ಯೆಹೋವಾಷನು ದೇವಾಲಯವನ್ನು ತಿರಿಗಿ ಕಟ್ಟಿದ್ದು

24 ಯೆಹೋವಾಷನು ಪಟ್ಟಕ್ಕೆ ಬಂದಾಗ ಏಳು ವರ್ಷದವನಾಗಿದ್ದನು. ಅವನು ನಲವತ್ತು ವರ್ಷಗಳ ಕಾಲ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಚಿಬ್ಯ. ಆಕೆ ಬೇರ್ಷೆಬದವಳಾಗಿದ್ದಳು. ಯಾಜಕನಾದ ಯೆಹೋಯಾದನು ಜೀವದಿಂದಿರುವ ತನಕ ಯೆಹೋವಾಷನು ಯೆಹೋವನಿಗೆ ಯೋಗ್ಯವಾಗಿ ನಡೆದುಕೊಂಡನು. ಯೆಹೋಯಾದನು ಅವನಿಗೆ ಇಬ್ಬರು ಕನ್ನಿಕೆಯರನ್ನು ಮದುವೆ ಮಾಡಿಸಿದನು. ಅವನು ಗಂಡು ಮತ್ತು ಹೆಣ್ಣುಮಕ್ಕಳನ್ನು ಪಡೆದನು.

ಸ್ವಲ್ಪಕಾಲವಾದ ಬಳಿಕ ಯೆಹೋವಾಷನು ದೇವಾಲಯವನ್ನು ಸರಿಪಡಿಸಲು ಆಲೋಚಿಸಿದನು. ಅವನು ಯಾಜಕರನ್ನೂ ಲೇವಿಯರನ್ನೂ ಒಟ್ಟಾಗಿ ಕರೆದು, “ಯೆಹೂದ ದೇಶದ ಊರುಗಳಿಗೆ ಹೋಗಿ ಜನರು ಪ್ರತಿ ವರ್ಷ ದೇವಾಲಯಕ್ಕೆ ಕೊಡಬೇಕಾದ ಹಣವನ್ನು ಸಂಗ್ರಹಿಸಿರಿ. ದೇವಾಲಯನ್ನು ಸರಿಪಡಿಸಲು ಆ ಹಣವನ್ನು ಉಪಯೋಗಿಸಿರಿ. ಇದನ್ನು ಬೇಗನೆ ಮಾಡಿರಿ” ಎಂದು ಹೇಳಿದನು. ಆದರೆ ಲೇವಿಯರು ಅವಸರ ಮಾಡಲಿಲ್ಲ.

ಆಗ ಅರಸನಾದ ಯೆಹೋವಾಷನು ಮಹಾಯಾಜಕನಾದ ಯೆಹೋಯಾದನನ್ನು ಕರೆದು, “ದೇವಾಲಯಕ್ಕೆ ಕೊಡಬೇಕಾದ ಹಣವನ್ನು ಯೆಹೂದ ಮತ್ತು ಜೆರುಸಲೇಮಿನ ಜನರಿಂದ ಲೇವಿಯರು ಸಂಗ್ರಹಿಸಿಕೊಂಡು ಬರಲು ನೀನೇಕೆ ಅವರನ್ನು ಒತ್ತಾಯಿಸಲಿಲ್ಲ? ಮೋಶೆಯೂ ಇಸ್ರೇಲರೂ ಆ ಹಣವನ್ನು ಪವಿತ್ರ ಗುಡಾರಕ್ಕಾಗಿ ಉಪಯೋಗಿಸುತ್ತಿರಲಿಲ್ಲವೇ?” ಎಂದು ಕೇಳಿದನು.

ಗತಿಸಿದ ವರ್ಷಗಳಲ್ಲಿ ಅತಲ್ಯಳ ಮಕ್ಕಳು ದೇವಾಲಯದೊಳಗೆ ಬಲಾತ್ಕಾರದಿಂದ ನುಗ್ಗಿ ಅಲ್ಲಿದ್ದ ಪವಿತ್ರ ವಸ್ತುಗಳನ್ನು ತೆಗೆದು ಬಾಳ್ ದೇವರ ಪೂಜೆಗಾಗಿ ಉಪಯೋಗಿಸಿದ್ದರು. ಅತಲ್ಯಳು ಬಹಳ ದುಷ್ಟಳಾಗಿದ್ದಳು.

ಅರಸನಾದ ಯೆಹೋವಾಷನು ಒಂದು ಪೆಟ್ಟಿಗೆಯನ್ನು ಮಾಡಿಸಿ ಅದನ್ನು ದೇವಾಲಯದ ಬಾಗಿಲಲ್ಲಿ ಇರಿಸಿದನು. ಯೆಹೂದ ಮತ್ತು ಜೆರುಸಲೇಮಿನಲ್ಲಿ ಲೇವಿಯರು ಜನರಿಗೆಲ್ಲಾ ತಮ್ಮ ತಮ್ಮ ತೆರಿಗೆ ಹಣವನ್ನು ತಂದು ದೇವರಿಗೆ ಸಮರ್ಪಿಸುವಂತೆ ಪ್ರಕಟಿಸಿದರು. ಇಸ್ರೇಲರು ಅರಣ್ಯಮಾರ್ಗವಾಗಿ ಪ್ರಯಾಣ ಮಾಡುತ್ತಿರುವಾಗ ದೇವರ ಸೇವಕನಾದ ಮೋಶೆಯು ಜನರಿಗೆ ಇದನ್ನು ಆಜ್ಞಾಪಿಸಿದ್ದನು. 10 ಎಲ್ಲಾ ನಾಯಕರೂ ಜನರೂ ಸಂತೋಷದಿಂದ ತಮ್ಮ ಹಣವನ್ನು ತಂದು ಪೆಟ್ಟಿಗೆಯಲ್ಲಿ ಹಾಕತೊಡಗಿದರು. ಆ ಪೆಟ್ಟಿಗೆ ತುಂಬಿದ ಮೇಲೆ 11 ಲೇವಿಯರು ಅದನ್ನು ಅರಸನ ಅಧಿಕಾರಿಗಳ ಬಳಿಗೆ ತೆಗೆದುಕೊಂಡು ಹೋಗುತ್ತಿದ್ದರು; ರಾಜನ ಕಾರ್ಯದರ್ಶಿ ಮತ್ತು ಯಾಜಕರ ಮುಖಂಡನು ಬಂದು ಅದರಲ್ಲಿದ್ದ ಹಣವನ್ನು ತೆಗೆದುಕೊಂಡು ಮತ್ತೆ ಆ ಪೆಟ್ಟಿಗೆಯನ್ನು ಮುಂಚಿನ ಸ್ಥಳದಲ್ಲಿ ಇಡುತ್ತಿದ್ದರು. ಹೀಗೆ ಅವರು ಮಾಡುತ್ತಾ ಬಂದಕಾರಣ ಬಹಳ ಹಣ ಸಂಗ್ರಹಿಸಲ್ಪಟ್ಟಿತು. 12 ಯೆಹೋಯಾದನು ಮತ್ತು ರಾಜನು ದೇವಾಲಯವನ್ನು ದುರಸ್ತಿ ಮಾಡುವವರ ಕೈಗೆ ಅದನ್ನು ಕೊಟ್ಟರು. ಅವರು ಮರದ ಕುಶಲಕರ್ಮಿಗಳನ್ನೂ ಬಡಗಿಗಳನ್ನೂ ದೇವಾಲಯವನ್ನು ಸರಿಪಡಿಸಲು ನೇಮಿಸಿದರು. ಅಲ್ಲದೆ ತಾಮ್ರಕಬ್ಬಿಣಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನೂ ಕೆಲಸಕ್ಕೆ ನೇಮಿಸಿದರು. 13 ಕೆಲಸಗಳ ಮೇಲ್ವಿಚಾರಣೆ ಮಾಡುವವರು ನಂಬಿಗಸ್ತರಾಗಿದ್ದರು. ದೇವಾಲಯವನ್ನು ಸರಿಪಡಿಸುವ ಯೋಜನೆಯು ಪೂರ್ಣಗೊಂಡಿತು. ಅವರು ಅದನ್ನು ಮುಂಚೆ ಹೇಗಿತ್ತೋ ಹಾಗೆಯೇ ಮಾಡಿದರು; ಅಲ್ಲದೆ ಅದಕ್ಕಿಂತಲೂ ಹೆಚ್ಚು ಭದ್ರಪಡಿಸಿದರು. 14 ಕೆಲಸಗಾರರು ತಮ್ಮ ಕೆಲಸವು ಮುಗಿದ ಬಳಿಕ ಉಳಿದ ಹಣವನ್ನು ಅರಸನಾದ ಯೆಹೋವಾಷನಿಗೆ ಮತ್ತು ಯೆಹೋಯಾದನಿಗೆ ತಂದುಕೊಟ್ಟರು. ಆ ಹಣವನ್ನು ದೇವಾಲಯದ ಉಪಕರಣಗಳನ್ನು ಮಾಡಿಸಲು ಉಪಯೋಗಿಸಿದರು. ಅವು ದೇವಾಲಯದೊಳಗಿನ ಸೇವೆಗೂ ಸರ್ವಾಂಗಹೋಮಕ್ಕೂ ಉಪಯುಕ್ತವಾಗಿದ್ದವು. ಮಾತ್ರವಲ್ಲದೆ ಬೆಳ್ಳಿಬಂಗಾರಗಳಿಂದ ಬೋಗುಣಿ ಮತ್ತು ಇತರ ವಸ್ತುಗಳನ್ನು ಮಾಡಿದರು. ಯೆಹೋಯಾದನು ಜೀವದಿಂದಿರುವ ತನಕ ಪ್ರತೀ ದಿವಸ ಸರ್ವಾಂಗಹೋಮವನ್ನರ್ಪಿಸುತ್ತಿದ್ದನು.

15 ಯೆಹೋಯಾದನು ವೃದ್ಧನಾದನು. ಅವನು ದೀರ್ಘಕಾಲ ಬಾಳಿ ತೀರಿಹೋದನು. ಅವನು ಸಾಯುವಾಗ ಅವನಿಗೆ ನೂರ ಮೂವತ್ತು ವರ್ಷವಾಗಿತ್ತು. 16 ಅವನ ದೇಹವನ್ನು ದಾವೀದ ನಗರದಲ್ಲಿ ಅರಸುಗಳ ಸಮಾಧಿಯ ಬಳಿಯಲ್ಲಿ ಸಮಾಧಿ ಮಾಡಿದರು. ಯಾಕೆಂದರೆ ಅವನು ಜೀವಂತನಾಗಿದ್ದಾಗ ಇಸ್ರೇಲಿನ ದೇವರಿಗೂ ಆತನ ಆಲಯಕ್ಕೂ ಒಳ್ಳೆಯದನ್ನೇ ಮಾಡಿದ್ದನು.

17 ಯೆಹೋಯಾದನು ಸತ್ತ ಬಳಿಕ ಯೆಹೂದದೇಶದ ಪ್ರಮುಖರು ಅರಸನಾದ ಯೆಹೋವಾಷನ ಬಳಿಗೆ ಬಂದು ನಮಸ್ಕರಿಸಿದರು. ಅರಸನು ಅವರ ಮಾತುಗಳನ್ನು ಕೇಳಿದನು. 18 ಅರಸನೂ ಆ ನಾಯಕರುಗಳೂ ದೇವಾಲಯವನ್ನು ನಿರಾಕರಿಸಿ ಅಶೇರ ಸ್ತಂಭಗಳನ್ನೂ ಇತರ ವಿಗ್ರಹಗಳನ್ನೂ ಆರಾಧಿಸಿದರು. ಯೆಹೋವನು ಜೆರುಸಲೇಮಿನ ಮತ್ತು ಯೆಹೂದದ ಜನರ ಮೇಲೆ ಕೋಪಗೊಂಡನು. ಯಾಕೆಂದರೆ ಅರಸನೂ ಆ ನಾಯಕರುಗಳೂ ಯೆಹೋವನ ಮುಂದೆ ದೋಷಿಗಳಾಗಿದ್ದರು. 19 ಆತನು ಅವರನ್ನು ತನ್ನ ಕಡೆಗೆ ತಿರುಗಿಕೊಳ್ಳುವಂತೆ ಪ್ರವಾದಿಗಳನ್ನು ಅವರ ಬಳಿಗೆ ಕಳುಹಿಸಿದನು. ಪ್ರವಾದಿಗಳು ಜನರನ್ನು ಎಚ್ಚರಿಸಿದರೂ ಅವರ ಮಾತುಗಳಿಗೆ ಅವರು ಗಮನಕೊಡಲಿಲ್ಲ.

20 ಜೆಕರ್ಯನ ಮೇಲೆ ದೇವರಾತ್ಮನು ಬಂದನು. ಅವನು ಯಾಜಕನಾದ ಯೆಹೋಯಾದನ ಮಗ. ಜೆಕರ್ಯನು ಜನರ ಮುಂದೆ ನಿಂತು, “ಯೆಹೋವನು ಹೀಗೆನ್ನುತ್ತಾನೆ: ‘ಯೆಹೋವನ ಆಜ್ಞೆಗಳಿಗೆ ವಿಧೇಯರಾಗಲು ನೀವು ಏಕೆ ನಿರಾಕರಿಸುತ್ತೀರಿ? ಏತಕ್ಕೆ? ನೀವು ಉದ್ಧಾರವಾಗುವುದಿಲ್ಲ. ನೀವು ಯೆಹೋವನನ್ನು ತೊರೆದದ್ದರಿಂದ ಆತನು ನಿಮ್ಮನ್ನೂ ತೊರೆದುಬಿಟ್ಟಿರುತ್ತಾನೆ’” ಎಂದು ಹೇಳಿದನು.

21 ಆದರೆ ಅವರು ಜೆಕರ್ಯನ ವಿರೋಧವಾಗಿ ಒಳಸಂಚು ಮಾಡಿದರು. ಅವನನ್ನು ಕೊಲ್ಲಲು ಅರಸನು ಅವರಿಗೆ ಆಜ್ಞಾಪಿಸಿದನು. ಆಗ ಅವರು ಅವನನ್ನು ದೇವಾಲಯದ ಅಂಗಳದಲ್ಲಿಯೇ ಕಲ್ಲೆಸೆದು ಕೊಂದರು. 22 ಯೆಹೋವಾಷನು ಯೆಹೋಯಾದನ ಉಪಕಾರವನ್ನು ನೆನಸಲಿಲ್ಲ. ಯೆಹೋಯಾದನು ಜೆಕರ್ಯನ ತಂದೆ. ಯೆಹೋಯಾದನ ಮಗನನ್ನು ಯೆಹೋವಾಷನು ಕೊಂದನು. ಜೆಕರ್ಯನು ಸಾಯುವಾಗ, ಹೇಳಿದ್ದೇನೆಂದರೆ, “ನೀನು ಮಾಡುತ್ತಿರುವದನ್ನು ಯೆಹೋವನೇ ನೋಡಿ ನ್ಯಾಯ ತೀರಿಸಲಿ” ಎಂದು ಹೇಳಿದನು.

23 ಆ ವರ್ಷಾಂತ್ಯದಲ್ಲಿ ಅರಾಮ್ಯರ ಸೈನ್ಯವು ಯೆಹೋವಾಷನಿಗೆ ವಿರುದ್ಧವಾಗಿ ಬಂತು. ಅವರು ಯೆಹೂದದೇಶ ಮತ್ತು ಜೆರುಸಲೇಮಿನ ಮೇಲೆ ದಾಳಿ ಮಾಡಿ ಎಲ್ಲಾ ನಾಯಕರನ್ನು ಸಂಹರಿಸಿದರು. ಅಲ್ಲಿದ್ದ ಬೆಲೆಬಾಳುವ ಎಲ್ಲಾ ವಸ್ತುಗಳನ್ನು ದಮಸ್ಕದ ಅರಸನಿಗೆ ಕಳುಹಿಸಿದರು. 24 ಅರಾಮ್ಯರ ಸೈನ್ಯವು ಸ್ವಲ್ಪ ಮಂದಿಯಿಂದ ಕೂಡಿದ್ದರೂ ಯೆಹೂದದ ದೊಡ್ಡ ಸೈನ್ಯವನ್ನು ಸೋಲಿಸಿಬಿಟ್ಟಿತು. ಯೆಹೂದ್ಯರು ತಮ್ಮ ಪೂರ್ವಿಕರ ದೇವರಾದ ಯೆಹೋವನನ್ನು ತೊರೆದುದರಿಂದ ದೇವರಾದ ಯೆಹೋವನು ಹಾಗೆ ಮಾಡಿದನು. ಈ ರೀತಿಯಾಗಿ ಯೆಹೋವಾಷನು ಶಿಕ್ಷಿಸಲ್ಪಟ್ಟನು. 25 ಅರಾಮ್ಯರು ಯೆಹೋವಾಷನನ್ನು ಬಿಟ್ಟುಹೋಗುವಾಗ ಅವನು ರೋಗದಿಂದ ಬಹಳ ಅಸ್ವಸ್ಥನಾಗಿದ್ದನು. ಅವನ ಸ್ವಂತ ಸೇವಕರೇ ಅವನಿಗೆ ವಿರೋಧವಾಗಿ ಸಂಚು ಮಾಡಿದರು. ಯಾಕೆಂದರೆ ಅವನು ಯೆಹೋಯಾದನ ಮಗನಾದ ಜೆಕರ್ಯನನ್ನು ಕೊಂದದ್ದರಿಂದ ಸೇವಕರು ಯೆಹೋವಾಷನನ್ನು ಅವನ ಮಂಚದ ಮೇಲೆಯೇ ಕೊಂದುಹಾಕಿದರು. ಜನರು ಅವನನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ಆದರೆ ಅರಸರುಗಳ ಸಮಾಧಿಯಲ್ಲಿ ಹೂಳಿಡಲಿಲ್ಲ.

26 ಯೆಹೋವಾಷನನ್ನು ಕೊಲ್ಲಲು ಸಂಚುಮಾಡಿದ ಸೇವಕರು ಯಾರೆಂದರೆ: ಜಾಬಾದ್ ಮತ್ತು ಯೆಹೋಜಾಬಾದ್, ಜಾಬಾದನ ತಾಯಿಯ ಹೆಸರು ಶಿಮ್ಗಾತ್, ಈಕೆ ಅಮ್ಮೋನಿಯಳು. ಯೆಹೋಜಾಬಾದನ ತಾಯಿಯು ಶಿಮ್ರೀತ್ ಎಂಬಾಕೆ, ಈಕೆ ಮೋವಾಬ್ಯಳು. 27 ಯೆಹೋವಾಷನ ಮಕ್ಕಳ ಚರಿತ್ರೆ, ಅವನ ವಿರುದ್ಧವಾಗಿ ಹೇಳಿದ ಪ್ರವಾದನೆಗಳು, ಅವನು ದೇವಾಲಯವನ್ನು ಸರಿಪಡಿಸಿದ ವಿಷಯಗಳು ರಾಜರ ಗ್ರಂಥದ ವ್ಯಾಖ್ಯಾನದಲ್ಲಿ ಬರೆಯಲ್ಪಟ್ಟಿದೆ. ಯೆಹೋವಾಷನ ನಂತರ ಅವನ ಮಗನಾದ ಅಮಚ್ಯನು ರಾಜನಾದನು.

ಯೋಹಾನ 15

ಯೇಸು ದ್ರಾಕ್ಷಿಬಳ್ಳಿಯಂತಿದ್ದಾನೆ

15 “ನಾನು ನಿಜವಾದ ದ್ರಾಕ್ಷಿಬಳ್ಳಿ. ನನ್ನ ತಂದೆ ತೋಟಗಾರನು. ಫಲಕೊಡದಿರುವ ಪ್ರತಿಯೊಂದು ಕವಲನ್ನು ಆತನು ಕತ್ತರಿಸಿಹಾಕುವನು. ಫಲಕೊಡುವ ಕವಲು ಇನ್ನೂ ಹೆಚ್ಚು ಫಲಕೊಡುವಂತೆ ಅದನ್ನು ಶುದ್ಧಗೊಳಿಸುವನು. ನಾನು ನಿಮಗೆ ಹೇಳಿದ ಉಪದೇಶದಿಂದ ನೀವು ಈಗಾಗಲೇ ಶುದ್ಧರಾಗಿದ್ದೀರಿ. ನೀವು ನನ್ನಲ್ಲಿ ನೆಲೆಗೊಂಡಿರಿ, ಆಗ ನಾನೂ ನಿಮ್ಮಲ್ಲಿ ನೆಲೆಗೊಂಡಿರುವೆನು. ಯಾವ ಕವಲೂ ತನ್ನಷ್ಟಕ್ಕೆ ತಾನೇ ಫಲಕೊಡಲಾರದು. ಅದು ದ್ರಾಕ್ಷಿಬಳ್ಳಿಯಲ್ಲಿ ನೆಲೆಗೊಂಡಿರಬೇಕು. ಇದು ನಿಮಗೂ ಅನ್ವಯಿಸುತ್ತದೆ. ನೀವು ನಿಮ್ಮಷ್ಟಕ್ಕೇ ಫಲಕೊಡಲಾರಿರಿ. ನೀವು ನನ್ನಲ್ಲಿ ನೆಲೆಗೊಂಡಿರಬೇಕು.

“ನಾನೇ ದ್ರಾಕ್ಷಿಬಳ್ಳಿ; ನೀವೇ ಕವಲುಗಳು. ಒಬ್ಬನು ನನ್ನಲ್ಲಿ ನೆಲೆಗೊಂಡಿದ್ದರೆ ಮತ್ತು ನಾನು ಅವನಲ್ಲಿ ನೆಲೆಗೊಂಡಿದ್ದರೆ, ಆಗ ಅವನು ಹೆಚ್ಚು ಫಲಕೊಡುವನು. ಆದರೆ ಅವನು ನನ್ನನ್ನು ಬಿಟ್ಟು ಏನೂ ಮಾಡಲಾರನು. ನನ್ನಲ್ಲಿ ನೆಲೆಗೊಂಡಿಲ್ಲದವನು ಹೊರಗೆ ಬಿಸಾಡಲ್ಪಟ್ಟ ಕವಲಿನಂತಿರುವನು. ಆ ಕವಲು ಸತ್ತುಹೋಗುವುದು. ಸತ್ತ ಕವಲುಗಳನ್ನು ಜನರು ಒಟ್ಟುಗೂಡಿಸಿ ಬೆಂಕಿಯೊಳಕ್ಕೆ ಎಸೆದು ಸುಟ್ಟುಹಾಕುವರು. ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ಏನು ಬೇಕಾದರೂ ಕೇಳಿಕೊಳ್ಳಿರಿ, ಅದು ನಿಮಗೆ ದೊರೆಯುವುದು. ನೀವು ಬಹಳ ಫಲಕೊಟ್ಟು, ನೀವೇ ನನ್ನ ಶಿಷ್ಯರೆಂಬುದನ್ನು ತೋರಿಸಬೇಕು. ಇದರಿಂದ ನನ್ನ ತಂದೆಗೆ ಮಹಿಮೆ ಆಗುವುದು.

“ತಂದೆಯು ನನ್ನನ್ನು ಪ್ರೀತಿಸಿದಂತೆ ನಾನೂ ನಿಮ್ಮನ್ನು ಪ್ರೀತಿಸಿದೆನು. ಈಗ ನನ್ನ ಪ್ರೀತಿಯಲ್ಲಿ ನೆಲೆಗೊಂಡಿರಿ. 10 ನಾನು ನನ್ನ ತಂದೆಯ ಆಜ್ಞೆಗಳಿಗೆ ವಿಧೇಯನಾಗಿದ್ದು ಆತನ ಪ್ರೀತಿಯಲ್ಲಿ ನೆಲೆಗೊಂಡಿದ್ದೇನೆ. ಅದೇ ರೀತಿಯಲ್ಲಿ, ನೀವು ನನ್ನ ಆಜ್ಞೆಗಳಿಗೆ ವಿಧೇಯರಾದರೆ, ನೀವು ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ. 11 ನನಗಿರುವ ಆನಂದವನ್ನು ನೀವೂ ಹೊಂದಿಕೊಳ್ಳಬೇಕೆಂದು ನಾನು ನಿಮಗೆ ಈ ಸಂಗತಿಗಳನ್ನು ಹೇಳಿದ್ದೇನೆ. ನಿಮ್ಮ ಆನಂದವು ಪರಿಪೂರ್ಣವಾದ ಆನಂದವಾಗಿರಬೇಕೆಂದು ನಾನು ಬಯಸುತ್ತೇನೆ. 12 ನಾನು ನಿಮ್ಮನ್ನು ಪ್ರೀತಿಸಿದಂತೆ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆಯಾಗಿದೆ. 13 ಗೆಳೆಯರಿಗಾಗಿ ಸ್ವಂತ ಪ್ರಾಣವನ್ನೇ ಕೊಡುವ ಪ್ರೀತಿಗಿಂತ ಮಿಗಿಲಾದ ಪ್ರೀತಿ ಯಾರಲ್ಲೂ ಇಲ್ಲ. 14 ನಾನು ಹೇಳುವ ಕಾರ್ಯಗಳನ್ನು ನೀವು ಮಾಡಿದರೆ, ನೀವು ನನ್ನ ಸ್ನೇಹಿತರು. 15 ಈಗ ನಾನು ನಿಮ್ಮನ್ನು ನನ್ನ ಸೇವಕರುಗಳೆಂದು ಕರೆಯುವುದಿಲ್ಲ. ಯಜಮಾನನ ಕೆಲಸಕಾರ್ಯಗಳು ಸೇವಕನಿಗೆ ತಿಳಿದಿರುವುದಿಲ್ಲ. ಆದರೆ ಈಗ ನಾನು ನಿಮ್ಮನ್ನು ನನ್ನ ಗೆಳೆಯರೆಂದು ಕರೆಯುತ್ತೇನೆ. ಏಕೆಂದರೆ ನನ್ನ ತಂದೆಯಿಂದ ಕೇಳಿದ ಪ್ರತಿಯೊಂದನ್ನೂ ನಾನು ನಿಮಗೆ ಹೇಳಿದ್ದೇನೆ.

16 “ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ; ನಾನು ನಿಮ್ಮನ್ನು ಆರಿಸಿಕೊಂಡೆನು. ನೀವು ಹೊರಟುಹೋಗಿ ಫಲಕೊಡಬೇಕು. ಇದೇ ನಾನು ನಿಮಗೆ ಕೊಟ್ಟಿರುವ ಕೆಲಸ. ಈ ಫಲವು ನಿಮ್ಮ ಜೀವನದಲ್ಲಿ ಶಾಶ್ವತವಾಗಿರಲಿ ಎಂಬುದೇ ನನ್ನ ಬಯಕೆ. ಹೀಗಿರಲಾಗಿ, ನೀವು ನನ್ನ ಹೆಸರಿನಲ್ಲಿ ಏನು ಕೇಳಿಕೊಂಡರೂ ತಂದೆಯು ಅದನ್ನು ನಿಮಗೆ ಕೊಡುವನು. 17 ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನನ್ನ ಆಜ್ಞೆ.

ಯೇಸು ತನ್ನ ಶಿಷ್ಯರಿಗೆ ನೀಡಿದ ಎಚ್ಚರಿಕೆ

18 “ಈ ಲೋಕವು ನಿಮ್ಮನ್ನು ದ್ವೇಷ ಮಾಡಿದರೆ, ಅದು ಮೊದಲು ನನ್ನನ್ನೇ ದ್ವೇಷ ಮಾಡಿದ್ದನ್ನು ನೆನಪಿಗೆ ತಂದುಕೊಳ್ಳಿರಿ. 19 ನೀವು ಈ ಲೋಕಕ್ಕೆ ಸೇರಿದವರಾಗಿದ್ದರೆ, ಈ ಲೋಕವು ತನ್ನ ಸ್ವಂತ ಜನರನ್ನು ಪ್ರೀತಿಸುವಂತೆ ನಿಮ್ಮನ್ನೂ ಪ್ರೀತಿಸುತ್ತಿತ್ತು. ಆದರೆ ನಾನು ನಿಮ್ಮನ್ನು ಈ ಲೋಕದೊಳಗಿಂದ ಆರಿಸಿಕೊಂಡಿದ್ದೇನೆ. ಆದ್ದರಿಂದ ನೀವು ಈ ಲೋಕಕ್ಕೆ ಸೇರಿದವರಲ್ಲ. ಆದಕಾರಣ ಈ ಲೋಕವು ನಿಮ್ಮನ್ನು ದ್ವೇಷಿಸುತ್ತದೆ.

20 “ಸೇವಕನು ತನ್ನ ಒಡೆಯನಿಗಿಂತ ದೊಡ್ಡವನಲ್ಲ ಎಂದು ನಾನು ನಿಮಗೆ ಹೇಳಿದ ಮಾತನ್ನು ಜ್ಞಾಪಿಸಿಕೊಳ್ಳಿ. ಜನರು ನನ್ನನ್ನು ಹಿಂಸಿಸಿದಂತೆ ನಿಮ್ಮನ್ನೂ ಹಿಂಸಿಸುವರು ಮತ್ತು ನನ್ನ ಉಪದೇಶಕ್ಕೆ ವಿಧೇಯರಾದರೆ ನಿಮ್ಮ ಉಪದೇಶಕ್ಕೂ ವಿಧೇಯರಾಗುವರು. 21 ಜನರು ನನ್ನ ದೆಸೆಯಿಂದ ಇದನ್ನೆಲ್ಲಾ ನಿಮಗೆ ಮಾಡುವರು. ನನ್ನನ್ನು ಕಳುಹಿಸಿದಾತನನ್ನು ಅವರು ತಿಳಿದಿಲ್ಲ. 22 ನಾನು ಬಂದು ಈ ಲೋಕದ ಜನರೊಂದಿಗೆ ಮಾತಾಡಿಲ್ಲದಿದ್ದರೆ, ಅವರನ್ನು ಪಾಪದೋಷಿಗಳೆಂದು ಹೇಳಲಾಗುತ್ತಿರಲಿಲ್ಲ. ಆದರೆ ಈಗ ನಾನು ಅವರೊಂದಿಗೆ ಮಾತಾಡಿದ್ದೇನೆ. ಆದ್ದರಿಂದ ತಮ್ಮ ಪಾಪಕ್ಕೆ ಅವರಿಗೆ ಯಾವ ನೆವವೂ ಇಲ್ಲ.

23 “ನನ್ನನ್ನು ದ್ವೇಷಿಸುವವನು ನನ್ನ ತಂದೆಯನ್ನೂ ದ್ವೇಷಿಸುವವನಾಗಿದ್ದಾನೆ. 24 ಬೇರೆ ಯಾವ ವ್ಯಕ್ತಿಯೂ ಹಿಂದೆಂದೂ ಮಾಡಿಲ್ಲದ ಕಾರ್ಯಗಳನ್ನು ಮಾಡಿಲ್ಲದಿದ್ದರೆ, ಅವರನ್ನು ಪಾಪದೋಷಿಗಳೆಂದು ಹೇಳಲಾಗುತ್ತಿರಲಿಲ್ಲ. ಆದರೆ ನಾನು ಮಾಡಿದ ಆ ಕಾರ್ಯಗಳನ್ನು ಅವರು ನೋಡಿದ್ದಾರೆ. ಹೀಗಿದ್ದರೂ ಅವರು ನನ್ನನ್ನೂ ನನ್ನ ತಂದೆಯನ್ನೂ ದ್ವೇಷಿಸುತ್ತಾರೆ. 25 ‘ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷಿಸಿದರು’[a] ಎಂದು ಅವರ ಧರ್ಮಶಾಸ್ತ್ರದಲ್ಲಿ ಬರೆದಿರುವ ಮಾತು ನಿಜವಾಗಲೆಂದು ಹೀಗಾಯಿತು.

26 “ನಾನು ತಂದೆಯ ಬಳಿಯಿಂದ ಸಹಾಯಕನನ್ನು ನಿಮಗೆ ಕಳುಹಿಸಿಕೊಡುವೆನು. ತಂದೆಯ ಬಳಿಯಿಂದ ಬರುವ ಆ ಸಹಾಯಕನು ಸತ್ಯದ ಆತ್ಮನಾಗಿದ್ದಾನೆ. ಆತನು ಬಂದಾಗ ನನ್ನ ಬಗ್ಗೆ ನಿಮಗೆ ತಿಳಿಸುವನು. 27 ಮತ್ತು ನೀವು ಮೊದಲಿಂದಲೂ ನನ್ನೊಂದಿಗೆ ಇದ್ದಕಾರಣ ನೀವು ಸಹ ನನ್ನ ಬಗ್ಗೆ ಜನರಿಗೆ ಹೇಳುವಿರಿ.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International