Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
2 ಪೂರ್ವಕಾಲವೃತ್ತಾಂತ 21-22

21 ಯೆಹೋಷಾಫಾಟನು ಸತ್ತನು. ಅವನನ್ನು ಅವನ ಪೂರ್ವಿಕರೊಂದಿಗೆ ದಾವೀದನಗರದಲ್ಲಿ ಸಮಾಧಿಮಾಡಿದರು. ಅವನ ಮಗನಾದ ಯೆಹೋರಾಮನು ಪಟ್ಟಕ್ಕೆ ಬಂದನು. ಯೆಹೋರಾಮನ ತಮ್ಮಂದಿರು ಯಾರೆಂದರೆ: ಅಜರ್ಯ, ಯೆಹೀಯೇಲ್, ಜೆಕರ್ಯ, ಅಜರ್ಯ, ಮೀಕಾಯೇಲ್ ಮತ್ತು ಶೆಫಟ್ಯ. ಇವರೆಲ್ಲಾ ಯೆಹೂದದ ರಾಜನಾಗಿದ್ದ ಯೆಹೋಷಾಫಾಟನ ಮಕ್ಕಳು. ಯೆಹೋಷಾಫಾಟನು ತನ್ನ ಮಕ್ಕಳಿಗೆ ಅನೇಕ ಬೆಳ್ಳಿಬಂಗಾರದ ಮತ್ತು ಬೆಲೆಬಾಳುವ ವಸ್ತುಗಳನ್ನು ಉಡುಗೊರೆಯಾಗಿ ಕೊಟ್ಟನು. ಮಾತ್ರವಲ್ಲದೆ ಕೋಟೆಯಿಂದ ಭದ್ರಪಡಿಸಲ್ಪಟ್ಟ ಪಟ್ಟಣಗಳನ್ನು ಕೊಟ್ಟನು. ಆದರೆ ಯೆಹೂದ ರಾಜ್ಯವನ್ನು ತನ್ನ ಚೊಚ್ಚಲ ಮಗನಾದ ಯೆಹೋರಾಮನಿಗೆ ಕೊಟ್ಟನು.

ಯೆಹೂದ ರಾಜ್ಯದ ಅರಸನಾದ ಯೆಹೋರಾಮ

ಯೆಹೋರಾಮನು ತನ್ನ ತಂದೆಯ ರಾಜ್ಯವನ್ನು ಪಡೆದುಕೊಂಡು ತನ್ನನ್ನು ಬಲಪಡಿಸಿಕೊಂಡನು. ನಂತರ ತನ್ನ ತಮ್ಮಂದಿರನ್ನೆಲ್ಲಾ ಖಡ್ಗದಿಂದ ಹತಿಸಿದನು. ಮಾತ್ರವಲ್ಲದೆ ಇಸ್ರೇಲಿನ ಕೆಲವು ಪ್ರಧಾನರನ್ನು ಕೊಲ್ಲಿಸಿದನು. ಅವನು ಮೂವತ್ತೆರಡು ವರ್ಷದವನಾಗಿದ್ದಾಗ ಆಳಲು ಪ್ರಾರಂಭಿಸಿದನು. ಅವನು ಜೆರುಸಲೇಮಿನಲ್ಲಿ ಒಟ್ಟು ಎಂಟು ವರ್ಷ ಆಳಿದನು. ಅವನು ಇಸ್ರೇಲಿನ ರಾಜರುಗಳು ವರ್ತಿಸಿದ ರೀತಿಯಲ್ಲಿ ಜೀವಿಸಿದನು. ಅಹಾಬನ ಕುಟುಂಬದವರು ಹೇಗೆ ಜೀವಿಸಿದರೋ ಹಾಗೆಯೇ ಜೀವಿಸಿದನು. ಯಾಕೆಂದರೆ ಅವನು ಅಹಾಬನ ಮಗಳನ್ನು ಮದುವೆಯಾಗಿದ್ದನು. ಯೆಹೋರಾಮನು ಯೆಹೋವನ ದೃಷ್ಟಿಯಲ್ಲಿ ಕೆಟ್ಟವನಾಗಿ ಜೀವಿಸಿದನು. ಆದರೆ ಯೆಹೋವನು ದಾವೀದನೊಂದಿಗೆ ಮಾಡಿದ ಒಡಂಬಡಿಕೆಯ ನಿಮಿತ್ತ ಅವನನ್ನು ನಾಶಮಾಡಲಿಲ್ಲ. ಯೆಹೋವನು, “ದಾವೀದನ ಸಂತತಿಯವರ ಬೆಳಕು ಉರಿಯುತ್ತಲೇ ಇರುವದು” ಎಂದು ವಾಗ್ದಾನ ಮಾಡಿದ್ದನು.

ಯೆಹೋರಾಮನ ಆಳ್ವಿಕೆಯ ಸಮಯದಲ್ಲಿ ಎದೋಮ್ ಯೆಹೂದದ ಹಿಡಿತದಿಂದ ಬಿಡಿಸಿಕೊಂಡಿತು. ಎದೋಮಿನ ಪ್ರಜೆಗಳು ತಮ್ಮ ರಾಜನನ್ನು ತಾವೇ ಆರಿಸಿಕೊಂಡರು. ಇದನ್ನರಿತ ಯೆಹೋರಾಮನು ತನ್ನ ರಥಬಲದೊಡನೆ ಎದೋಮಿಗೆ ಹೋದನು. ಅಲ್ಲಿ ಎದೋಮ್ಯರ ಸೈನ್ಯ ಇವರಿಗೆ ಮುತ್ತಿಗೆ ಹಾಕಿತು. ಆದರೆ ರಾತ್ರಿ ಸಮಯದಲ್ಲಿಯೇ ಯೆಹೋರಾಮನು ಅವರನ್ನು ಸೋಲಿಸಿದನು. 10 ಅಂದಿನಿಂದ ಇಂದಿನ ತನಕವೂ ಎದೋಮ್ ರಾಜ್ಯವು ಯೆಹೂದರಾಜ್ಯಕ್ಕೆ ಒಳಗಾಗಲೇ ಇಲ್ಲ. ಲಿಬ್ನ ಪಟ್ಟಣದ ಜನರೂ ಯೆಹೋರಾಮನಿಗೆ ಎದುರುನಿಂತರು. ತನ್ನ ಪೂರ್ವಿಕರು ಆರಾಧಿಸುತ್ತಿದ್ದ ದೇವರಾದ ಯೆಹೋವನನ್ನು ಯೆಹೋರಾಮನು ತೊರೆದುಬಿಟ್ಟಿದ್ದರಿಂದ ಇವೆಲ್ಲಾ ಅವನಿಗೆ ಸಂಭವಿಸಿದವು. 11 ಯೆಹೋರಾಮನು ಯೆಹೂದ ರಾಜ್ಯದ ಬೆಟ್ಟಗಳ ಮೇಲೆ ಪೂಜಾಸ್ಥಳಗಳನ್ನು ಕಟ್ಟಿಸಿದನು. ಪ್ರಜೆಗಳು ದೇವರ ಚಿತ್ತಕ್ಕನುಸಾರವಾಗಿ ನಡೆಯದಂತೆ ಅವರನ್ನು ಯೆಹೋವನಿಂದ ದೂರಕ್ಕೆ ನಡೆಸಿದನು.

12 ಪ್ರವಾದಿಯಾದ ಎಲೀಯನು ಯೆಹೋರಾಮನಿಗೆ ಈ ಸಂದೇಶವನ್ನು ಕಳುಹಿಸಿದನು:

“ನಿನ್ನ ಪೂರ್ವಿಕನಾದ ದಾವೀದನ ದೇವರಾದ ಯೆಹೋವನ ಮಾತಿದು. ಆತನು ಹೇಳುವುದೇನೆಂದರೆ, ‘ಯೆಹೋರಾಮನೇ, ನೀನು ನಿನ್ನ ತಂದೆಯಾದ ಯೆಹೋಷಾಫಾಟನು ಜೀವಿಸಿದ್ದ ರೀತಿಯಲ್ಲಿ ಜೀವಿಸುತ್ತಿಲ್ಲ. ಯೆಹೂದದೇಶದ ಅರಸನಾದ ಆಸನು ಜೀವಿಸಿದ್ದ ರೀತಿಯಲ್ಲಿಯೂ ನೀನು ಜೀವಿಸುತ್ತಿಲ್ಲ. 13 ಇಸ್ರೇಲರ ರಾಜರುಗಳು ಜೀವಿಸಿದ್ದ ರೀತಿಯಲ್ಲಿ ನೀನು ಜೀವಿಸುತ್ತಿರುವೆ. ಯೆಹೂದ ದೇಶದಲ್ಲಿಯೂ ಜೆರುಸಲೇಮಿನಲ್ಲಿಯೂ ವಾಸಿಸುವ ಜನರು ನನ್ನ ಚಿತ್ತಕ್ಕನುಸಾರವಾಗಿ ಜೀವಿಸದಂತೆ ನೀನು ಮಾಡುತ್ತಿರುವೆ. ಅಹಾಬನೂ ಅವನ ಕುಟುಂಬದವರೂ ಹೀಗೆಯೇ ಮಾಡಿದರು. ಅವರು ದೇವರಿಗೆ ಅಪನಂಬಿಗಸ್ತರಾಗಿದ್ದರು. ನೀನು ನಿನ್ನ ತಮ್ಮಂದಿರನ್ನು ಕೊಂದುಹಾಕಿದೆ. ಅವರು ನಿನಗಿಂತಲೂ ಉತ್ತಮರಾಗಿದ್ದರು. 14 ಆದ್ದರಿಂದ ಯೆಹೋವನು ನಿನ್ನ ಜನರನ್ನು ಭಯಂಕರವಾದ ರೋಗದಿಂದ ದಂಡಿಸುವನು. ಆತನು ನಿನ್ನನ್ನೂ ನಿನ್ನ ಹೆಂಡತಿಮಕ್ಕಳನ್ನೂ ಆಸ್ತಿಪಾಸ್ತಿಯನ್ನೂ ಶಿಕ್ಷಿಸುವನು. 15 ನಿನ್ನ ಹೊಟ್ಟೆಯೊಳಗೆ ಭಯಂಕರವಾದ ಕಾಯಿಲೆ ಬರುವದು. ಅದು ದಿನದಿಂದ ದಿನಕ್ಕೆ ಹೆಚ್ಚುವುದು. ಆ ರೋಗದ ನಿಮಿತ್ತ ನಿನ್ನ ಕರುಳು ನಿನ್ನ ಹೊಟ್ಟೆಯಿಂದ ಹೊರಬೀಳುವದು.’”

16 ಫಿಲಿಷ್ಟಿಯರೂ ಇಥಿಯೋಪಿಯದವರ ಬಳಿಯಲ್ಲಿ ವಾಸವಾಗಿದ್ದ ಅರಬಿಯರೂ ಯೆಹೋರಾಮನ ಮೇಲೆ ಕೋಪಗೊಳ್ಳುವಂತೆ ಯೆಹೋವನು ಮಾಡಿದನು. 17 ಅವರು ಬಂದು ಯೆಹೂದದೇಶದ ಮೇಲೆ ಆಕ್ರಮಣ ಮಾಡಿದರು; ರಾಜನಿವಾಸದಲ್ಲಿದ್ದ ನಿಕ್ಷೇಪವನ್ನೆಲ್ಲಾ ಸೂರೆಮಾಡಿದರು. ಅಲ್ಲದೆ ಯೆಹೋರಾಮನ ಪತ್ನಿ, ಮಕ್ಕಳನ್ನೂ ಕೊಂಡೊಯ್ದರು. ಯೆಹೋರಾಮನ ಕೊನೆಯ ಮಗನು ಮಾತ್ರ ಉಳಿದನು. ಅವನ ಹೆಸರು ಯೆಹೋವಾಹಾಜ.

18 ಇದಾದ ಬಳಿಕ ಯೆಹೋವನು ಅವನ ಕರುಳಿನಲ್ಲಿ ಗುಣವಾಗದ ರೋಗ ಬರಮಾಡಿದನು. 19 ಎರಡು ವರ್ಷಗಳ ನಂತರ ಆ ರೋಗದ ನಿಮಿತ್ತ ಅವನ ಕರುಳುಗಳು ಹೊರಬಿದ್ದವು. ಅವನು ಬಹಳ ನೋವನ್ನು ಅನುಭವಿಸಿ ಸತ್ತನು. ಅವನು ಸತ್ತಾಗ ಅವನ ತಂದೆಗೆ ಧೂಪಹಾಕಿ ಗೌರವಿಸಿದಂತೆ ಯೆಹೋರಾಮನಿಗೆ ಮಾಡಲಿಲ್ಲ. 20 ಯೆಹೋರಾಮನು ಪಟ್ಟಕ್ಕೆ ಬಂದಾಗ ಮೂವತ್ತೆರಡು ವರ್ಷದವನಾಗಿದ್ದನು. ಅವನು ಎಂಟು ವರ್ಷ ಕಾಲ ಜೆರುಸಲೇಮಿನಲ್ಲಿ ಆಳಿದನು. ಅವನು ಸತ್ತಾಗ ಅವನಿಗೋಸ್ಕರ ಯಾರೂ ದುಃಖಪಡಲಿಲ್ಲ. ಜನರು ಅವನನ್ನು ದಾವೀದನಗರದಲ್ಲಿ ಸಮಾಧಿಮಾಡಿದರು. ಆದರೆ ರಾಜರ ಸಮಾಧಿ ಸ್ಥಳದಲ್ಲಿ ಅವನನ್ನು ಹೂಳಿಡಲಿಲ್ಲ.

ಯೆಹೂದ ದೇಶದ ಅರಸನಾದ ಅಹಜ್ಯ

22 ಜೆರುಸಲೇಮಿನ ಜನರು ಯೆಹೋರಾಮನ ಕೊನೆಯ ಮಗನಾದ ಅಹಜ್ಯನನ್ನು ತಮ್ಮ ರಾಜನನ್ನಾಗಿ ಆರಿಸಿಕೊಂಡರು. ಯೆಹೋರಾಮನೊಂದಿಗೆ ಯುದ್ಧಕ್ಕೆ ಬಂದಿದ್ದ ಅರಬ್ಬಿಯರು ಅವನ ಮಕ್ಕಳನ್ನೆಲ್ಲಾ ಕೊಂದಿದ್ದರು. ಹೀಗಾಗಿ ಉಳಿದುಕೊಂಡಿದ್ದ ಅಹಜ್ಯನು ಜೆರುಸಲೇಮಿನಲ್ಲಿ ಯೆಹೂದ ರಾಜ್ಯವನ್ನು ಆಳತೊಡಗಿದನು. ಆಗ ಅವನಿಗೆ ಇಪ್ಪತ್ತೆರಡು ವರ್ಷ ಪ್ರಾಯ. ಅವನು ಜೆರುಸಲೇಮಿನಲ್ಲಿ ಒಂದು ವರ್ಷ ಆಳಿದನು. ಅವನ ತಾಯಿ ಒಮ್ರಿಯ ಮಗಳಾದ ಅತಲ್ಯಳು. ಅಹಾಬನು ಮತ್ತು ಅವನ ಕುಟುಂಬದವರು ಜೀವಿಸಿದ ಪ್ರಕಾರವೇ ಅಹಜ್ಯನೂ ಜೀವಿಸಿದನು. ದುಷ್ಕೃತ್ಯಗಳನ್ನು ಮಾಡಲು ಅವನ ತಾಯಿಯೇ ಅವನನ್ನು ಪ್ರೋತ್ಸಾಹಿಸಿದಳು. ಯೆಹೋವನ ದೃಷ್ಟಿಯಲ್ಲಿ ಅಹಜ್ಯನು ದುಷ್ಕೃತ್ಯಗಳನ್ನು ಮಾಡಿದನು. ಅಹಜ್ಯನ ತಂದೆಯು ಸತ್ತುಹೋದ ಬಳಿಕ ಅಹಾಬನ ಕುಟುಂಬದವರು ಅಹಜ್ಯನಿಗೆ ಕೆಟ್ಟ ಸಲಹೆಗಳನ್ನು ಕೊಟ್ಟರು. ಆ ಕೆಟ್ಟ ಸಲಹೆಗಳು ಅವನನ್ನು ಮರಣಕ್ಕೆ ನಡೆಸಿದವು. ಅಹಾಬನ ಕುಟುಂಬದವರ ಸಲಹೆಯ ಮೇರೆಗೆ ಅಹಜ್ಯನು ರಾಜನಾದ ಯೋರಾಮನ ಜೊತೆಯಲ್ಲಿ ಅರಾಮ್ಯರ ಅರಸನಾದ ಹಜಾಯೇಲನೊಂದಿಗೆ ಯುದ್ಧಮಾಡಲು ರಾಮೋತ್‌ಗಿಲ್ಯಾದ್ ಎಂಬ ಪಟ್ಟಣಕ್ಕೆ ಹೋದನು. ಯೋರಾಮನು ಇಸ್ರೇಲರ ಅರಸನಾದ ಅಹಾಬನ ಮಗನು. ಅರಾಮ್ಯರು ಯುದ್ಧದಲ್ಲಿ ಯೋರಾಮನನ್ನು ಗಾಯಗೊಳಿಸಿದರು. ಗಾಯವನ್ನು ವಾಸಿಮಾಡಿಸಿಕೊಳ್ಳಲು ಯೋರಾಮನು ಇಜ್ರೇಲಿಗೆ ಹೋದನು. ಅರಾಮ್ಯರ ರಾಜನಾದ ಹಜಾಯೇಲನೊಡನೆ ಯುದ್ಧಮಾಡುತ್ತಿರುವಾಗ ಯೋರಾಮನು ಗಾಯಗೊಂಡಿದ್ದನು. ಇಜ್ರೇಲಿನಲ್ಲಿ ಅಸ್ವಸ್ಥನಾಗಿದ್ದ ಯೋರಾಮನನ್ನು ಸಂಧಿಸಲು ಯೆಹೂದ್ಯರ ಅರಸನೂ ಯೆಹೋರಾಮನ ಮಗನೂ ಆಗಿರುವ ಅಹಜ್ಯನು ಹೋದನು.

ಯೋರಾಮನನ್ನು ಸಂಧಿಸಲು ಹೋದಾಗ ಅಹಜ್ಯನು ಕೊಲ್ಲಲ್ಪಡುವಂತೆ ಯೆಹೋವನು ಮಾಡಿದನು. ಅಹಜ್ಯನು ಯೇಹುವನ್ನು ಭೇಟಿಯಾಗಲು ಯೋರಾಮನೊಂದಿಗೆ ಹೋದನು. ಯೇಹುವಿನ ತಂದೆ ನಿಂಷಿ. ಅಹಾಬನ ಕುಟುಂಬವನ್ನು ನಾಶಗೊಳಿಸಲು ಯೆಹೋವನು ಯೇಹುವನ್ನು ಆರಿಸಿಕೊಂಡನು. ಯೇಹುವು ಅಹಾಬನ ವಂಶದವರನ್ನು ಹತಿಸುತ್ತಿದ್ದಾಗ ಯೆಹೂದದ ರಾಜನಾದ ಅಹಜ್ಯನ ಕುಟುಂಬದವರನ್ನೂ ಯೆಹೂದದ ಮುಖಂಡರನ್ನೂ ಅಲ್ಲಿ ಕಂಡನು. ಯೇಹು ಆ ಮುಖಂಡರನ್ನೂ ಅಹಜ್ಯನ ಕುಟುಂಬದವರನ್ನೂ ಕೊಂದನು. ಆ ಬಳಿಕ ಯೇಹು ಅಹಜ್ಯನಿಗಾಗಿ ಹುಡುಕಿದನು. ಅಹಜ್ಯನು ಸಮಾರ್ಯದಲ್ಲಿ ಅವಿತುಕೊಂಡಿರುವದನ್ನು ಕಂಡ ಯೇಹುವಿನ ಸಂಗಡಿಗರು ಅವನನ್ನು ಹಿಡಿದು ಯೇಹುವಿನ ಬಳಿಗೆ ತಂದರು. ಅಲ್ಲಿ ಅಹಜ್ಯನನ್ನು ಕೊಂದು ಅವನ ದೇಹವನ್ನು ಹೂಳಿಟ್ಟರು. ಅವರು, “ಅಹಜ್ಯನು ಯೆಹೋಷಾಫಾಟನ ಸಂತತಿಯವನಾಗಿದ್ದನು. ಯೆಹೋಷಾಫಾಟನು ತನ್ನ ಪೂರ್ಣಹೃದಯದಿಂದ ಯೆಹೋವನನ್ನು ಹಿಂಬಾಲಿಸಿದನಲ್ಲವೇ?” ಎಂದು ಹೇಳಿದರು. ಯೆಹೂದ ಸಾಮ್ರಾಜ್ಯವನ್ನು ಒಂದಾಗಿಡಲು ಅಹಜ್ಯನ ಕುಟುಂಬಕ್ಕೆ ಶಕ್ತಿಯಿರಲಿಲ್ಲ.

ರಾಣಿ ಅತಲ್ಯ

10 ಅತಲ್ಯಳು ಅಹಜ್ಯನ ತಾಯಿ. ತನ್ನ ಮಗನು ಸತ್ತನೆಂಬ ವರ್ತಮಾನ ಸಿಕ್ಕದ ಕೂಡಲೇ ಆಕೆ ಯೆಹೂದದಲ್ಲಿದ್ದ ಎಲ್ಲಾ ರಾಜಕುಮಾರರನ್ನು ಕೊಲ್ಲಿಸಿದಳು. 11 ಆದರೆ ಅರಸನಾದ ಯೋರಾಮನ ಮಗಳಾದ ಯೆಹೋಷಬತಳು ಅಹಜ್ಯನ ಮಗನಾದ ಯೆಹೋವಾಷನನ್ನು ಅಡಗಿಸಿಟ್ಟಳು. ಆಕೆಯು ಅವನನ್ನೂ ಅವನ ದಾದಿಯನ್ನೂ ಒಳಗಿನ ಕೋಣೆಯಲ್ಲಿ ಅಡಗಿಸಿಟ್ಟಳು. ಆಕೆಯು ಯಾಜಕನಾದ ಯೆಹೋಯಾದನ ಹೆಂಡತಿಯಾಗಿದ್ದಳು. ಆಕೆಯು ಸಹ ಅಹಜ್ಯನ ಸೋದರಿ. ಯೆಹೋವಾಷನು ಅತಲ್ಯಳಿಗೆ ಸಿಗದೆಹೋದುದರಿಂದ ಬದುಕಿಕೊಂಡನು. 12 ಯೆಹೋವಾಷನು ಆರು ವರ್ಷಗಳ ಕಾಲ ಯಾಜಕರೊಂದಿಗೆ ದೇವಾಲಯದೊಳಗೆ ಯಾರಿಗೂ ತಿಳಿಯದಂತೆ ಇದ್ದನು. ಆ ದಿನಗಳಲ್ಲಿ ಅತಲ್ಯಳು ರಾಣಿಯಾಗಿ ದೇಶವನ್ನು ಆಳಿದಳು.

ಯೋಹಾನ 14

ಶಿಷ್ಯರಿಗೆ ಯೇಸುವಿನ ಆದರಣೆ ಮಾತುಗಳು

14 ಯೇಸು, “ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ದೇವರಲ್ಲಿ ವಿಶ್ವಾಸವಿಡಿರಿ. ನನ್ನಲ್ಲಿಯೂ ವಿಶ್ವಾಸವಿಡಿರಿ. ನನ್ನ ತಂದೆಯ ಮನೆಯಲ್ಲಿ ಅನೇಕ ಕೋಣೆಗಳಿವೆ. ಅದು ಸತ್ಯವಲ್ಲದಿದ್ದರೆ, ನಾನು ನಿಮಗೆ ಹೇಳುತ್ತಿರಲಿಲ್ಲ. ನಾನು ನಿಮಗೋಸ್ಕರ ಸ್ಥಳವನ್ನು ಸಿದ್ಧಪಡಿಸಲು ಅಲ್ಲಿಗೆ ಹೋಗುತ್ತಿದ್ದೇನೆ. ನಾನು ಹೋಗಿ ನಿಮಗೋಸ್ಕರ ಸ್ಥಳವನ್ನು ಸಿದ್ಧಪಡಿಸಿದ ಮೇಲೆ ಹಿಂತಿರುಗಿ ಬಂದು, ನಿಮ್ಮನ್ನು ನನ್ನೊಂದಿಗೆ ಕರೆದುಕೊಂಡು ಹೋಗುವೆನು. ಏಕೆಂದರೆ ನಾನಿರುವಲ್ಲಿ ನೀವೂ ಇರಬೇಕು. ನಾನು ಹೋಗಲಿರುವ ಸ್ಥಳದ ದಾರಿಯು ನಿಮಗೆ ತಿಳಿದಿದೆ” ಎಂದು ಹೇಳಿದನು.

ತೋಮನು ಯೇಸುವಿಗೆ, “ಪ್ರಭುವೇ, ನೀನು ಹೋಗುತ್ತಿರುವುದು ಎಲ್ಲಿಗೆಂಬುದೇ ನಮಗೆ ಗೊತ್ತಿಲ್ಲ. ಹೀಗಿರಲು, ಆ ದಾರಿಯನ್ನು ನಾವು ಹೇಗೆ ತಿಳಿದುಕೊಳ್ಳಲಾದೀತು?” ಎಂದನು.

ಯೇಸು, “ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ. ತಂದೆಯ ಬಳಿಗೆ ಹೋಗಲು ನಾನೇ ಏಕೈಕ ಮಾರ್ಗ. ನೀವು ನನ್ನನ್ನು ನಿಜವಾಗಿಯೂ ತಿಳಿದಿದ್ದರೆ, ನನ್ನ ತಂದೆಯನ್ನು ಸಹ ತಿಳಿದುಕೊಳ್ಳುತ್ತಿದ್ದಿರಿ. ಆದರೆ ಈಗ ನೀವು ತಂದೆಯನ್ನು ತಿಳಿದಿದ್ದೀರಿ. ನೀವು ಆತನನ್ನು ನೋಡಿದ್ದೀರಿ” ಎಂದು ಹೇಳಿದನು.

ಫಿಲಿಪ್ಪನು ಯೇಸುವಿಗೆ, “ಪ್ರಭುವೇ, ನಮಗೆ ತಂದೆಯನ್ನು ತೋರಿಸು. ನಮಗೆ ಅಷ್ಟೇ ಸಾಕು” ಎಂದು ಹೇಳಿದನು.

ಯೇಸು, “ಫಿಲಿಪ್ಪನೇ, ನಾನು ಇಷ್ಟು ಕಾಲದಿಂದ ನಿನ್ನೊಂದಿಗಿದ್ದರೂ ನೀನು ನನ್ನನ್ನು ತಿಳಿದುಕೊಳ್ಳಲಿಲ್ಲವೇ? ನನ್ನನ್ನು ನೋಡಿದವನು ತಂದೆಯನ್ನು ಸಹ ನೋಡಿದವನಾಗಿದ್ದಾನೆ. ಆದ್ದರಿಂದ, ‘ತಂದೆಯನ್ನು ನಮಗೆ ತೋರಿಸು’ ಎಂದು ಏಕೆ ಕೇಳುವಿರಿ? 10 ನಾನು ತಂದೆಯಲ್ಲಿದ್ದೇನೆ ಮತ್ತು ತಂದೆಯು ನನ್ನಲ್ಲಿದ್ದಾನೆ ಎಂದು ನೀವು ನಿಜವಾಗಿಯೂ ನಂಬುವಿರಾ? ನಾನು ನಿಮಗೆ ಹೇಳುವ ಸಂಗತಿಗಳು ನನ್ನಿಂದಲೇ ಬಂದಂಥವುಗಳಲ್ಲ. ತಂದೆಯು ನನ್ನಲ್ಲಿ ವಾಸವಾಗಿದ್ದಾನೆ ಮತ್ತು ಆತನು ತನ್ನ ಕಾರ್ಯವನ್ನು ಮಾಡುತ್ತಿದ್ದಾನೆ. 11 ನಾನು ತಂದೆಯಲ್ಲಿದ್ದೇನೆ ಮತ್ತು ತಂದೆಯು ನನ್ನಲ್ಲಿದ್ದಾನೆ ಎಂಬ ನನ್ನ ಮಾತನ್ನು ನಂಬಿರಿ. ಇಲ್ಲದಿದ್ದರೆ ನಾನು ಮಾಡಿದ ಅದ್ಭುತಕಾರ್ಯಗಳ ನಿಮಿತ್ತವಾದರೂ ನಂಬಿರಿ.

12 “ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ. ನನ್ನಲ್ಲಿ ನಂಬಿಕೆ ಇಡುವ ವ್ಯಕ್ತಿಯು ನಾನು ಮಾಡಿದ ಕಾರ್ಯಗಳನ್ನೇ ಮಾಡುವನು. ಹೌದು ನಾನು ಮಾಡುವ ಕಾರ್ಯಗಳಿಗಿಂತಲೂ ದೊಡ್ಡಕಾರ್ಯಗಳನ್ನು ಅವನು ಮಾಡುವನು. ಏಕೆಂದರೆ ನಾನು ತಂದೆಯ ಬಳಿಗೆ ಹೋಗುತ್ತಿದ್ದೇನೆ. 13 ಮತ್ತು ನೀವು ನನ್ನ ಹೆಸರಿನಲ್ಲಿ ಏನಾದರೂ ಬೇಡಿಕೊಂಡರೆ, ನಾನು ನಿಮಗೋಸ್ಕರ ಅದನ್ನು ನೆರವೇರಿಸುವೆನು. ಆಗ ಮಗನ ಮೂಲಕವಾಗಿ ತಂದೆಗೆ ಮಹಿಮೆ ಆಗುವುದು. 14 ನೀವು ನನ್ನ ಹೆಸರಿನಲ್ಲಿ ಏನಾದರೂ ಬೇಡಿಕೊಂಡರೆ, ನಾನು ಅದನ್ನು ನೆರವೇರಿಸುವೆನು.

ಪವಿತ್ರಾತ್ಮನನ್ನು ಕೊಡುವುದಾಗಿ ವಾಗ್ದಾನ

15 “ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ, ನಾನು ಆಜ್ಞಾಪಿಸುವವುಗಳನ್ನು ಮಾಡುವಿರಿ. 16 ನಾನು ತಂದೆಯನ್ನು ಕೇಳಿಕೊಳ್ಳುವೆನು. ಆಗ ಆತನು ಬೇರೊಬ್ಬ ಸಹಾಯಕನನ್ನು ನಿಮಗೆ ಕೊಡುವನು. ಆ ಸಹಾಯಕನು ಸದಾಕಾಲ ನಿಮ್ಮೊಂದಿಗಿರುವನು. 17 ಸತ್ಯದ ಆತ್ಮನೇ ಈ ಸಹಾಯಕನು. ಈ ಲೋಕವು ಆತನನ್ನು ಸ್ವೀಕರಿಸಿಕೊಳ್ಳಲಾರದು. ಏಕೆಂದರೆ ಲೋಕವು ಆತನನ್ನು ಕಾಣುವುದೂ ಇಲ್ಲ, ತಿಳಿದುಕೊಳ್ಳುವುದೂ ಇಲ್ಲ. ಆದರೆ ನೀವು ಆತನನ್ನು ಬಲ್ಲಿರಿ. ಆತನು ನಿಮ್ಮೊಂದಿಗೆ ಮತ್ತು ನಿಮ್ಮೊಳಗೆ ವಾಸಿಸುವವನಾಗಿದ್ದಾನೆ.

18 “ನಾನು ನಿಮ್ಮನ್ನು ತಂದೆತಾಯಿಗಳಿಲ್ಲದ ಮಕ್ಕಳಂತೆ ಒಬ್ಬಂಟಿಗರನ್ನಾಗಿ ಬಿಟ್ಟುಹೋಗುವುದಿಲ್ಲ. ನಾನು ನಿಮ್ಮ ಬಳಿಗೆ ಬರುತ್ತೇನೆ. 19 ಇನ್ನು ಸ್ವಲ್ಪ ಕಾಲವಾದ ಮೇಲೆ ಈ ಲೋಕದ ಜನರು ನನ್ನನ್ನು ಇನ್ನೆಂದಿಗೂ ಕಾಣುವುದಿಲ್ಲ. ಆದರೆ ನೀವು ನನ್ನನ್ನು ನೋಡುವಿರಿ. ನಾನು ಜೀವಿಸುವುದರಿಂದ ನೀವೂ ಜೀವಿಸುವಿರಿ. 20 ನಾನು ನನ್ನ ತಂದೆಯಲ್ಲಿರುವುದನ್ನು ನೀವು ಆ ದಿನದಂದು ತಿಳಿದುಕೊಳ್ಳುವಿರಿ. ನೀವು ನನ್ನಲ್ಲಿರುವುದನ್ನೂ ನಾನು ನಿಮ್ಮಲ್ಲಿರುವುದನ್ನೂ ತಿಳಿದುಕೊಳ್ಳುವಿರಿ. 21 ಒಬ್ಬನು ನನ್ನ ಆಜ್ಞೆಗಳನ್ನು ಸ್ವೀಕರಿಸಿಕೊಂಡು ಅವುಗಳಿಗೆ ವಿಧೇಯನಾದರೆ ಅವನು ನನ್ನನ್ನು ನಿಜವಾಗಿಯೂ ಪ್ರೀತಿಸುವವನಾಗಿದ್ದಾನೆ. ಅಲ್ಲದೆ ನನ್ನನ್ನು ಪ್ರೀತಿಸುವವನನ್ನು ನನ್ನ ತಂದೆಯೂ ಪ್ರೀತಿಸುವನು ಮತ್ತು ನಾನೂ ಅವನನ್ನು ಪ್ರೀತಿಸುವೆನು. ನಾನು ಅವನಿಗೆ ನನ್ನನ್ನೇ ತೋರ್ಪಡಿಸಿಕೊಳ್ಳುವೆನು” ಎಂದು ಉತ್ತರಕೊಟ್ಟನು.

22 ಆಗ ಯೂದನು (ಇಸ್ಕರಿಯೋತ ಯೂದನಲ್ಲ), “ಪ್ರಭುವೇ, ನೀನು ನಿನ್ನನ್ನು ಈ ಲೋಕಕ್ಕೆ ತೋರ್ಪಡಿಸಿಕೊಳ್ಳದೆ ನಮಗೆ ಮಾತ್ರ ತೋರ್ಪಡಿಸಿಕೊಳ್ಳಬೇಕೆಂದಿರುವುದೇಕೆ?” ಎಂದು ಕೇಳಿದನು.

23 ಯೇಸು ಹೀಗೆ ಉತ್ತರಕೊಟ್ಟನು: “ನನ್ನನ್ನು ಪ್ರೀತಿಸುವವನು ನನ್ನ ಉಪದೇಶಕ್ಕೆ ವಿಧೇಯನಾಗುವನು. ನನ್ನ ತಂದೆಯು ಅವನನ್ನು ಪ್ರೀತಿಸುವನು. ನನ್ನ ತಂದೆ ಮತ್ತು ನಾನು ಅವನ ಬಳಿಗೆ ಬಂದು ಅವನೊಂದಿಗೆ ವಾಸಿಸುವೆವು. 24 ಆದರೆ ನನ್ನನ್ನು ಪ್ರೀತಿಸದವನು, ನನ್ನ ಉಪದೇಶಕ್ಕೆ ವಿಧೇಯನಾಗುವುದಿಲ್ಲ. ನೀವು ಕೇಳುತ್ತಿರುವ ಈ ಉಪದೇಶವು ನಿಜವಾಗಿಯೂ ನನ್ನದಲ್ಲ, ನನ್ನನ್ನು ಕಳುಹಿಸಿರುವ ನನ್ನ ತಂದೆಯದು.

25 “ನಾನು ನಿಮ್ಮೊಂದಿಗೆ ಇರುವಾಗಲೇ ಈ ಸಂಗತಿಗಳನ್ನೆಲ್ಲಾ ನಿಮಗೆ ಹೇಳಿದ್ದೇನೆ. 26 ಆದರೆ ಆ ಸಹಾಯಕನು ನಿಮಗೆ ಪ್ರತಿಯೊಂದನ್ನೂ ಉಪದೇಶಿಸುವನು. ನಾನು ನಿಮಗೆ ಹೇಳಿದ ಸಂಗತಿಗಳನ್ನೆಲ್ಲಾ ಆ ಸಹಾಯಕನು ನಿಮ್ಮ ನೆನಪಿಗೆ ತರುವನು. ತಂದೆಯು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪವಿತ್ರಾತ್ಮನೇ ಆ ಸಹಾಯಕನು.

27 “ನಾನು ನಿಮಗೆ ಶಾಂತಿಯನ್ನು ನೀಡುತ್ತೇನೆ. ಈ ಲೋಕವು ಕೊಡುವುದಕ್ಕಿಂತ ಭಿನ್ನವಾದ ರೀತಿಯಲ್ಲಿ ನಾನು ನಿಮಗೆ ಶಾಂತಿಯನ್ನು ಕೊಡುತ್ತೇನೆ. ಆದ್ದರಿಂದ ನಿಮ್ಮ ಹೃದಯವು ಕಳವಳಗೊಳ್ಳದಿರಲಿ. ಭಯಪಡಬೇಡಿರಿ. 28 ‘ನಾನು ಹೊರಟುಹೋಗುತ್ತೇನೆ. ಆದರೆ ನಿಮ್ಮ ಬಳಿಗೆ ಹಿಂತಿರುಗಿ ಬರುತ್ತೇನೆ’ ಎಂದು ನಾನು ನಿಮಗೆ ಹೇಳಿದ್ದನ್ನು ನೀವು ಕೇಳಿದ್ದೀರಿ. ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ, ನಾನು ತಂದೆಯ ಬಳಿಗೆ ಮರಳಿಹೋಗುವುದರ ಬಗ್ಗೆ ಸಂತೋಷಪಡುತ್ತಿದ್ದಿರಿ. ಏಕೆಂದರೆ ತಂದೆಯು ನನಗಿಂತಲೂ ದೊಡ್ಡವನು. 29 ಇದು ಸಂಭವಿಸುವುದಕ್ಕಿಂತ ಮೊದಲೇ ನಾನು ನಿಮಗೆ ಇದನ್ನು ಈಗಲೇ ತಿಳಿಸಿದ್ದೇನೆ. ಹೀಗಿರಲು, ಇದು ಸಂಭವಿಸುವಾಗ ನೀವು ನಂಬುವಿರಿ.

30 “ನಾನು ನಿಮ್ಮೊಂದಿಗೆ ಇನ್ನು ಬಹಳ ಹೊತ್ತು ಮಾತಾಡುವುದಿಲ್ಲ. ಈ ಲೋಕದ ಅಧಿಪತಿಯು (ಸೈತಾನನು) ಬರುತ್ತಿದ್ದಾನೆ. ಅವನಿಗೆ ನನ್ನ ಮೇಲೆ ಯಾವ ಅಧಿಕಾರವೂ ಇಲ್ಲ. 31 ಆದರೆ ನಾನು ತಂದೆಯನ್ನು ಪ್ರೀತಿಸುತ್ತೇನೆ ಎಂಬುದನ್ನು ಈ ಲೋಕವು ತಿಳಿದುಕೊಳ್ಳಬೇಕು. ಆದ್ದರಿಂದ ತಂದೆಯು ನನಗೆ ಹೇಳಿರುವುದನ್ನೇ ನಾನು ಮಾಡುತ್ತೇನೆ.

“ಬನ್ನಿ, ನಾವು ಇಲ್ಲಿಂದ ಹೋಗೋಣ.”

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International