Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
1 ಪೂರ್ವಕಾಲವೃತ್ತಾಂತ 28-29

ದೇವಾಲಯದ ನಕ್ಷೆ

28 ದಾವೀದನು ತನ್ನ ರಾಜ್ಯದಲ್ಲಿದ್ದ ಎಲ್ಲಾ ನಾಯಕರನ್ನು ಅಂದರೆ ಕುಲಪ್ರಧಾನರನ್ನು, ಪ್ರಧಾನಸೇನಾಧಿಪತಿಗಳನ್ನು, ಮಹಾಸೇನಾಧಿಪತಿಗಳನ್ನು ಮತ್ತು ಸೇನಾಧಿಪತಿಗಳನ್ನು, ರಾಜನಿಗೂ ಅವನ ಗಂಡುಮಕ್ಕಳಿಗೂ ಸೇರಿದ ಆಸ್ತಿಯನ್ನು ಮತ್ತು ಪಶುಗಳನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿಗಳನ್ನು; ರಾಜನ ಪ್ರಮುಖ ಅಧಿಕಾರಿಗಳನ್ನು; ಬಲಿಷ್ಠ ಯುದ್ಧವೀರರನ್ನು ಮತ್ತು ಧೈರ್ಯವಂತರಾದ ಸೈನಿಕರನ್ನು ಜೆರುಸಲೇಮಿಗೆ ಕರೆಸಿ ಸಭೆಸೇರಿಸಿದನು.

ಎಲ್ಲರೂ ಸೇರಿಬಂದಾಗ ದಾವೀದನು ನಿಂತು ಹೇಳಿದ್ದೇನೆಂದರೆ, “ನನ್ನ ಜನರೇ, ನನ್ನ ಸಹೋದರರೇ, ನನ್ನ ಮಾತುಗಳನ್ನು ಕೇಳಿರಿ. ನಮ್ಮ ದೇವರ ಒಡಂಬಡಿಕೆಯ ಪೆಟ್ಟಿಗೆಗೋಸ್ಕರ ಒಂದು ಯೋಗ್ಯಸ್ಥಳವನ್ನು ನಿರ್ಮಿಸಬೇಕೆಂದು ನನ್ನ ಮನಸ್ಸಿನಲ್ಲಿತ್ತು. ಆ ಸ್ಥಳವು ದೇವರ ಪಾದಪೀಠವಾಗಬೇಕು. ಅದಕ್ಕಾಗಿ ನಾನು ದೇವರಿಗೆ ಆಲಯವನ್ನು ಕಟ್ಟಿಸಲು ಯೋಜನೆಯನ್ನು ಹಾಕಿದೆನು. ಆದರೆ ದೇವರು ನನಗೆ, ‘ದಾವೀದನೇ, ನೀನು ನನ್ನ ಹೆಸರಿಗಾಗಿ ಆಲಯವನ್ನು ಕಟ್ಟಬಾರದು. ಯಾಕೆಂದರೆ ನೀನೊಬ್ಬ ರಣವೀರನಾಗಿದ್ದುದರಿಂದ ಎಷ್ಟೋ ಮಂದಿಯನ್ನು ಕೊಂದು ಅವರ ರಕ್ತಸುರಿಸಿರುವೆ’ ಎಂದು ಹೇಳಿದನು.

“ಇಸ್ರೇಲರ ದೇವರಾದ ಯೆಹೋವನು ಇಸ್ರೇಲರ ಹನ್ನೆರಡು ಕುಲಗಳನ್ನು ಮುನ್ನಡೆಸಲು ಯೆಹೂದ ಕುಲವನ್ನು ಆರಿಸಿಕೊಂಡಿದ್ದಾನೆ. ಆ ಕುಲದಿಂದ ದೇವರು ನನ್ನ ತಂದೆಯ ಕುಟುಂಬವನ್ನು ಆರಿಸಿದ್ದಾನೆ; ಆ ಕುಟುಂಬದಿಂದ ದೇವರು ಇಸ್ರೇಲರ ಅರಸನನ್ನಾಗಿ ನನ್ನನ್ನು ಆರಿಸಿಕೊಂಡಿದ್ದಾನೆ. ಯೆಹೋವನು ನನಗೆ ಅನೇಕ ಮಕ್ಕಳನ್ನು ಕೊಟ್ಟನು. ಆ ಮಕ್ಕಳಲ್ಲಿ ಯೆಹೋವನು ಸೊಲೊಮೋನನನ್ನು ನನ್ನ ನಂತರ ಇಸ್ರೇಲರ ಅರಸನನ್ನಾಗಿ ಆರಿಸಿಕೊಂಡಿದ್ದಾನೆ. ಆದರೆ ನಿಜವಾಗಿಯೂ, ಇಸ್ರೇಲ್, ದೇವರಾದ ಯೆಹೋವನ ರಾಜ್ಯವಾಗಿದೆ. ಯೆಹೋವನು ನನಗೆ, ‘ದಾವೀದನೇ, ನಿನ್ನ ಮಗನಾದ ಸೊಲೊಮೋನನು ದೇವಾಲಯವನ್ನು ಮತ್ತು ಅದರ ಸುತ್ತಮುತ್ತಲಿನ ಕಟ್ಟಡಗಳನ್ನು ಕಟ್ಟುವನು. ಯಾಕೆಂದರೆ ಸೊಲೊಮೋನನನ್ನು ನಾನು ಆರಿಸಿಕೊಂಡಿದ್ದೇನೆ. ಅವನು ನನಗೆ ಮಗನಾಗಿರುವನು; ನಾನು ಅವನಿಗೆ ತಂದೆಯಾಗಿರುವೆನು. ಸೊಲೊಮೋನನು ನನ್ನ ಕಟ್ಟಳೆಗಳಿಗೆ ಮತ್ತು ಆಜ್ಞೆಗಳಿಗೆ ವಿಧೇಯನಾಗಿದ್ದಾನೆ. ಅವನು ಹೀಗೆಯೇ ಮುಂದುವರಿದರೆ ನಾನು ಅವನ ರಾಜ್ಯವನ್ನು ಶಾಶ್ವತವಾಗಿ ಬಲಗೊಳಿಸುವೆನು’” ಎಂದು ಹೇಳಿದನು.

“ನಾನು ದೇವರ ಸನ್ನಿಧಾನದಲ್ಲಿಯೂ ಎಲ್ಲಾ ಇಸ್ರೇಲರ ಮುಂದೆಯೂ ನಿಮಗಿದನ್ನು ಹೇಳುತ್ತಿದ್ದೇನೆ. ನಿಮ್ಮ ದೇವರಾದ ಯೆಹೋವನ ಎಲ್ಲಾ ಆಜ್ಞೆಗಳಿಗೆ ವಿಧೇಯರಾಗಿರಿ. ಆಗ ನೀವು ಉತ್ತಮವಾದ ಈ ದೇಶವನ್ನು ಅನುಭವಿಸುವಿರಿ; ನಿಮ್ಮ ಸಂತತಿಯವರೂ ಇದರ ಸುಖವನ್ನು ಅನುಭವಿಸುವಂತೆ ಮಾಡುವಿರಿ.

“ನನ್ನ ಮಗನಾದ ಸೊಲೊಮೋನನೇ, ನಿನ್ನ ತಂದೆಯ ದೇವರನ್ನು ನೀನು ಚೆನ್ನಾಗಿ ಅರಿತುಕೋ. ನೀನು ಪೂರ್ಣಹೃದಯದಿಂದಲೂ ಪೂರ್ಣಮನಸ್ಸಿನಿಂದಲೂ ನಿನ್ನ ದೇವರನ್ನು ಸೇವಿಸು. ದೇವರು ಪ್ರತಿಯೊಬ್ಬನ ಹೃದಯ ಮನಸ್ಸುಗಳನ್ನು ನೋಡುತ್ತಾನೆ. ನೀನು ದೇವರ ಸಹಾಯವನ್ನು ಕೇಳಿದರೆ ಆತನು ನಿನ್ನ ಪ್ರಾರ್ಥನೆಯನ್ನು ಲಾಲಿಸುವನು. ಆದರೆ ನೀನು ದೇವರನ್ನು ಬಿಟ್ಟರೆ ಆತನು ನಿನ್ನನ್ನು ಬಿಟ್ಟುಹೋಗುವನು. 10 ಸೊಲೊಮೋನನೇ, ಆತನ ಪವಿತ್ರ ದೇವಾಲಯವನ್ನು ಕಟ್ಟಲು ದೇವರು ನಿನ್ನನ್ನು ಆರಿಸಿಕೊಂಡಿರುತ್ತಾನೆಂಬುದನ್ನು ನೀನು ತಿಳಿಯಬೇಕು. ಆದ್ದರಿಂದ ನೀನು ಬಲಗೊಂಡು ಕಾರ್ಯವನ್ನು ಸಂಪೂರ್ಣಗೊಳಿಸು.”

11 ಆ ಬಳಿಕ ದಾವೀದನು ತನ್ನ ಮಗನಾದ ಸೊಲೊಮೋನನಿಗೆ ದೇವಾಲಯದ ನಕ್ಷೆಯನ್ನು ಕೊಟ್ಟನು. ದೇವಾಲಯ ಮತ್ತು ಅದರ ಮಂಟಪ, ಉಗ್ರಾಣದ ಕೋಣೆಗಳು, ಮೇಲುಪ್ಪರಿಗೆ, ಒಳಗಿನ ಕೋಣೆಗಳು ಮತ್ತು ಕೃಪಾಸನದ ಮಂದಿರದ ನಕ್ಷೆಗಳನ್ನು ಕೊಟ್ಟನು. 12 ದೇವಾಲಯದ ಪ್ರತಿಯೊಂದು ಭಾಗದ ನಕ್ಷೆಯನ್ನು ದಾವೀದನು ತಯಾರಿಸಿದ್ದನು. ದೇವಾಲಯದ ಸುತ್ತಣ ಅಂಗಳಗಳ ನಕ್ಷೆ ಮತ್ತು ಸುತ್ತಲೂ ಇರುವ ಕೋಣೆಗಳ ನಕ್ಷೆಯನ್ನು ದೇವಾಲಯದ ಪವಿತ್ರ ವಸ್ತುಗಳನ್ನು ಇಡುವ ಕೋಣೆಗಳ ಯೋಜನೆಯನ್ನು ಮತ್ತು ನಕ್ಷೆಗಳನ್ನು ಸೊಲೊಮೋನನಿಗೆ ಕೊಟ್ಟನು. 13 ದಾವೀದನು ಸೊಲೊಮೋನನಿಗೆ ಲೇವಿಯರ ಮತ್ತು ಯಾಜಕರ ತಂಡದ ವಿಷಯವಾಗಿ ತಿಳಿಸಿದನು. ದೇವಾಲಯದ ಆರಾಧನಾ ಕ್ರಮಗಳನ್ನು ಅದಕ್ಕೆ ಸಂಬಂಧಪಟ್ಟ ವಿವಿಧ ವಿಷಯಗಳನ್ನು ಸೊಲೊಮೋನನಿಗೆ ದಾವೀದನು ವಿವರಿಸಿದನು. 14 ದೇವಾಲಯದಲ್ಲಿ ಎಲ್ಲಾ ಸಲಕರಣೆಗಳಿಗೆ ಎಷ್ಟು ಬೆಳ್ಳಿಬಂಗಾರಗಳು ಬೇಕಾಗುತ್ತವೆ ಎಂಬುದನ್ನು ದಾವೀದನು ಸೊಲೊಮೋನನಿಗೆ ತಿಳಿಸಿದನು. 15 ಬಂಗಾರದ ದೀಪಗಳಿಗೆ ಮತ್ತು ದೀಪಸ್ತಂಭಗಳಿಗೆ, ಬೆಳ್ಳಿಯ ದೀಪಗಳಿಗೆ ಮತ್ತು ದೀಪಸ್ತಂಭಗಳಿಗೆ ನಕ್ಷೆಗಳಿದ್ದವು. ಪ್ರತಿಯೊಂದು ದೀಪ ಮತ್ತು ದೀಪಸ್ತಂಭಗಳಿಗೆ ಬೇಕಾಗುವ ಬೆಳ್ಳಿಬಂಗಾರಗಳನ್ನು ಸಹ ದಾವೀದನು ಸೊಲೊಮೋನನಿಗೆ ತಿಳಿಸಿದನು. ಅವಶ್ಯಕತೆಗೆ ತಕ್ಕಂತೆ ಈ ದೀಪಸ್ತಂಭಗಳನ್ನು ಉಪಯೋಗಿಸಲಾಗುತ್ತಿತ್ತು. 16 ಪವಿತ್ರವಾದ ರೊಟ್ಟಿಯನ್ನು ಇಡುವ ಮೇಜನ್ನು ತಯಾರಿಸಲು ಎಷ್ಟು ಬಂಗಾರ ಬೇಕಾಗುತ್ತದೆ ಮತ್ತು ಬೆಳ್ಳಿಯಿಂದ ಮಾಡುವ ಮೇಜಿಗೆ ಎಷ್ಟು ಬೆಳ್ಳಿ ಬೇಕಾಗುತ್ತದೆ ಎಂಬುದನ್ನು ಸಹ ದಾವೀದನು ತಿಳಿಸಿದನು. 17 ಮುಳ್ಳುಚಮಚ, ಚಿಮಿಕಿಸುವ ಬೋಗುಣಿ ಮತ್ತು ಹೂಜೆಗಳಿಗೆ ಬೇಕಾಗುವ ಚೊಕ್ಕ ಬಂಗಾರವನ್ನು ದಾವೀದನು ತಿಳಿಸಿದನು; ಅಲ್ಲದೆ ಬೆಳ್ಳಿಬಂಗಾರಗಳಿಂದ ಮಾಡಬೇಕಾದ ಬೋಗುಣಿಗಳಿಗೆ ಎಷ್ಟು ಬೆಳ್ಳಿಬಂಗಾರಗಳು ಬೇಕಾಗುತ್ತದೆ ಎಂಬುದನ್ನು ತಿಳಿಸಿದನು. 18 ಧೂಪವೇದಿಗೆ ಎಷ್ಟು ಅಪ್ಪಟ ಬಂಗಾರ ಬೇಕೆಂಬುದನ್ನು ದಾವೀದನು ತಿಳಿಸಿದನು. ಇದಲ್ಲದೆ ದೇವರ ಕೃಪಾಸನವನ್ನು ಮತ್ತು ಯೆಹೋವನ ಒಡಂಬಡಿಕೆಯ ಪೆಟ್ಟಿಗೆಯ ಮೇಲೆ ರೆಕ್ಕೆಗಳನ್ನು ಚಾಚಿಕೊಂಡಿರುವ ಕೆರೂಬಿದೂತರನ್ನು ತಯಾರಿಸಲು ನಕ್ಷೆಗಳನ್ನು ದಾವೀದನು ಸೊಲೊಮೋನನಿಗೆ ಕೊಟ್ಟನು. ಕೆರೂಬಿದೂತರನ್ನು ಚಿನ್ನದಿಂದ ಮಾಡಲಾಗಿತ್ತು.

19 ಆಮೇಲೆ ದಾವೀದನು, “ನಕ್ಷೆಗಳನ್ನೆಲ್ಲ ಮಾಡಲು ಯೆಹೋವನೇ ನನ್ನನ್ನು ನಡಿಸಿ ಮಾರ್ಗದರ್ಶನ ಕೊಟ್ಟನು. ಈ ನಕ್ಷೆಗಳಲ್ಲಿರುವ ಸಕಲ ವಿಷಯಗಳನ್ನು ನಾನು ಅರಿತುಕೊಳ್ಳುವಂತೆ ಸಹಾಯ ಮಾಡಿದನು” ಎಂದು ಹೇಳಿದನು.

20 ದಾವೀದನು ತನ್ನ ಮಗನಾದ ಸೊಲೊಮೋನನಿಗೆ, “ಧೈರ್ಯವಾಗಿದ್ದು ಬಲಗೊಳ್ಳು ಮತ್ತು ಈ ಕಾರ್ಯವನ್ನು ಮಾಡಿ ಮುಗಿಸು. ನನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುವದರಿಂದ ನೀನು ಭಯಪಡುವ ಕಾರಣವೇ ಇಲ್ಲ. ಆತನು ನಿನ್ನೊಂದಿಗಿದ್ದು ಆಲಯವನ್ನು ಸಂಪೂರ್ಣ ಮಾಡುವಂತೆ ನಿನ್ನನ್ನು ನಡೆಸುತ್ತಾನೆ. ನೀನು ಯೆಹೋವನ ಆಲಯವನ್ನು ಕಟ್ಟುವೆ. 21 ನೇಮಿಸಲ್ಪಟ್ಟ ಯಾಜಕರ ಮತ್ತು ಲೇವಿಯರ ತಂಡಗಳು ದೇವಾಲಯದ ಸೇವೆಗಾಗಿ ಸಿದ್ಧರಾಗಿದ್ದಾರೆ; ಅನುಭವಸ್ಥರಾದ ಕಾರ್ಮಿಕರು ದೇವಾಲಯದ ಕೆಲಸಕ್ಕಾಗಿ ಸಿದ್ಧರಾಗಿದ್ದಾರೆ. ಕೆಲಸದ ಮೇಲ್ವಿಚಾರಣೆ ಮಾಡುವ ಅಧಿಕಾರಿಗಳು ನಿನ್ನ ಆಜ್ಞೆಯನ್ನು ಪರಿಪಾಲಿಸಲು ಸಿದ್ಧರಾಗಿದ್ದಾರೆ” ಎಂದು ದಾವೀದನು ಸೊಲೊಮೋನನಿಗೆ ಹೇಳಿದನು.

ದೇವಾಲಯ ಕಟ್ಟಲು ಕೊಟ್ಟ ಕಾಣಿಕೆ

29 ನೆರೆದುಬಂದಿದ್ದ ಇಸ್ರೇಲರೆಲ್ಲರಿಗೆ ದಾವೀದನು, “ದೇವರು ನನ್ನ ಮಗನಾದ ಸೊಲೊಮೋನನನ್ನು ಆರಿಸಿಕೊಂಡಿರುತ್ತಾನೆ. ಅವನು ಇನ್ನೂ ಎಳೆಪ್ರಾಯದವನಾಗಿರುವದರಿಂದ ಈ ಕಾರ್ಯವನ್ನು ಮಾಡಿಸಬೇಕಾದ ಜ್ಞಾನವು ಅವನಲ್ಲಿಲ್ಲ. ಆದರೆ ಕೆಲಸವು ಅತಿ ಘನವಾದದ್ದು. ಕಟ್ಟುವ ಆಲಯವು ಮನುಷ್ಯರಿಗಾಗಿಯಲ್ಲ. ದೇವರಾದ ಯೆಹೋವನಿಗಾಗಿಯಷ್ಟೇ. ದೇವಾಲಯವನ್ನು ಕಟ್ಟಲು ಅದಕ್ಕೆ ಬೇಕಾದ ಬೆಳ್ಳಿ, ಬಂಗಾರ, ತಾಮ್ರ ಮುಂತಾದವುಗಳನ್ನು ಬಹು ಪ್ರಯಾಸದಿಂದ ಶೇಖರಿಸಿದ್ದೇನೆ. ಬಂಗಾರದಿಂದ ಮಾಡಬೇಕಾದ ಸಾಮಗ್ರಿಗಳಿಗೆ ಬೇಕಾದ ಬಂಗಾರವನ್ನು ಕೊಟ್ಟಿರುತ್ತೇನೆ. ಬೆಳ್ಳಿಯಿಂದ ತಯಾರಿಸಬೇಕಾದ ಸಾಮಗ್ರಿಗಳಿಗೆ ತಗಲುವ ಬೆಳ್ಳಿಯನ್ನು ಕೊಟ್ಟಿರುತ್ತೇನೆ. ಹಾಗೆಯೇ ತಾಮ್ರದ ವಸ್ತುಗಳಿಗೆ ಬೇಕಾಗುವ ತಾಮ್ರವನ್ನು ಕೊಟ್ಟಿದ್ದೇನೆ; ಕಬ್ಬಿಣದ ವಸ್ತುಗಳಿಗೆ ಬೇಕಾಗುವ ಕಬ್ಬಿಣವನ್ನು ಕೊಟ್ಟಿದ್ದೇನೆ; ಮರದಿಂದ ಮಾಡುವ ಸಾಮಗ್ರಿಗಳಿಗೆ ಬೇಕಾಗುವ ಮರವನ್ನು ಕೊಟ್ಟಿದ್ದೇನೆ; ನೀಲಿ ಬಣ್ಣದ ರತ್ನಗಳನ್ನು, ಚೌಕಟ್ಟಿಗೆ ಬೇಕಾದ ರತ್ನಗಳನ್ನು, ಹೊಳೆಯುವ ನಾನಾಬಣ್ಣದ ಹರಳುಗಳನ್ನು, ಬಿಳಿಬಣ್ಣದ ಹಾಲುಗಲ್ಲುಗಳನ್ನು ಬೇಕಾದಷ್ಟು ಸಂಗ್ರಹಿಸಿಟ್ಟಿದ್ದೇನೆ. ಅಲ್ಲದೆ ದೇವಾಲಯಕ್ಕೆ ಬೇಕಾದ ಬೆಳ್ಳಿಬಂಗಾರಗಳ ಸಾಮಾನುಗಳನ್ನು ನಾನು ಕಾಣಿಕೆಯಾಗಿ ಕೊಟ್ಟಿರುತ್ತೇನೆ. ಯಾಕೆಂದರೆ ನನ್ನ ದೇವರ ಪರಿಶುದ್ಧಾಲಯವು ಕಟ್ಟಲ್ಪಡಬೇಕೆಂಬುದು ನಿಜವಾಗಿಯೂ ನನ್ನ ಬಯಕೆಯಾಗಿದೆ. ಈ ಪವಿತ್ರ ದೇವಾಲಯವನ್ನು ಕಟ್ಟಲು ನಾನು ಈ ವಸ್ತುಗಳನ್ನೆಲ್ಲಾ ಕೊಡುತ್ತಿದ್ದೇನೆ. ನಾನು ನೂರಹತ್ತು ಟನ್ ತೂಕದ ಓಫೀರಿನ ಅಪ್ಪಟ ಬಂಗಾರವನ್ನೂ ದೇವಾಲಯದ ಗೋಡೆಗಳನ್ನು ಮುಚ್ಚಲು ಬೇಕಾದ ಇನ್ನೂರರವತ್ತು ಟನ್ ತೂಕದ ಬೆಳ್ಳಿಯನ್ನೂ ಬೆಳ್ಳಿಬಂಗಾರಗಳಿಂದ ತಯಾರಿಸಬೇಕಾದ ಎಲ್ಲಾ ವಸ್ತುಗಳಿಗೆ ಬೇಕಾದ ಬೆಳ್ಳಿಬಂಗಾರಗಳನ್ನೂ ಇದರ ನಾಜೂಕು ಕೆಲಸ ಮಾಡುವ ಕುಶಲಕರ್ಮಿಗಳನ್ನೂ ಕೊಟ್ಟಿರುತ್ತೇನೆ. ಈಗ ನಿಮ್ಮಲ್ಲಿ ಎಷ್ಟು ಮಂದಿ ನಿಮ್ಮನ್ನೇ ಯೆಹೋವನಿಗಾಗಿ ಪ್ರತಿಷ್ಠಿಸಿಕೊಳ್ಳುವಿರಿ?” ಎಂದು ಹೇಳಿದನು.

ಆಗ ಇಸ್ರೇಲರ ಕುಲಪ್ರಧಾನರು, ಕುಟುಂಬಗಳ ನಾಯಕರು, ಪ್ರಧಾನಸೇನಾಧಿಪತಿಗಳು, ಸೇನಾಧಿಪತಿಗಳು, ರಾಜನ ಕೆಲಸಕ್ಕಾಗಿ ನೇಮಕಗೊಂಡಿದ್ದ ಅಧಿಕಾರಿಗಳು, ತಮ್ಮಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕೊಟ್ಟರು. ದೇವಾಲಯಕ್ಕಾಗಿ ಅವರು ಒಟ್ಟು ನೂರತೊಂಭತ್ತು ಟನ್ ತೂಕದ ಬಂಗಾರ, ಮುನ್ನೂರ ಎಪ್ಪತ್ತೈದು ಟನ್ ತೂಕದ ಬೆಳ್ಳಿ, ಆರನೂರ ಎಪ್ಪತ್ತೈದು ಟನ್ ತೂಕದ ತಾಮ್ರ ಮತ್ತು ಮೂರು ಸಾವಿರದ ಏಳುನೂರೈವತ್ತು ಟನ್ ತೂಕದ ಕಬ್ಬಿಣವನ್ನು ಕೊಟ್ಟರು. ಯಾರ ಬಳಿಯಲ್ಲಿ ಬೆಲೆಬಾಳುವ ರತ್ನಗಳಿದ್ದವೋ ಅವುಗಳನ್ನು ದೇವರ ಆಲಯಕ್ಕಾಗಿ ಸಮರ್ಪಿಸಿದರು. ಗೇರ್ಷೋನ್ ಸಂತತಿಯವನಾದ ಯೆಹೀಯೇಲನು ಅವುಗಳನ್ನು ತನ್ನ ವಶಕ್ಕೆ ತೆಗೆದುಕೊಂಡನು. ಇಸ್ರೇಲರ ನಾಯಕರುಗಳು ಪೂರ್ಣಹೃದಯದಿಂದಲೂ ಸ್ವಇಚ್ಛೆಯಿಂದಲೂ ಇಷ್ಟೆಲ್ಲಾ ಕಾಣಿಕೆಗಳನ್ನು ಕೊಟ್ಟಿದ್ದರಿಂದ ಇಸ್ರೇಲರು ಸಂತೋಷಗೊಂಡರು; ಅರಸನಾದ ದಾವೀದನೂ ತುಂಬ ಸಂತೋಷಗೊಂಡನು.

ದಾವೀದನ ವಿಶೇಷ ಪ್ರಾರ್ಥನೆ

10 ನೆರೆದುಬಂದಿದ್ದ ಎಲ್ಲಾ ಜನರ ಮುಂದೆ ದಾವೀದನು ದೇವರಾದ ಯೆಹೋವನನ್ನು ಸ್ತುತಿಸಿ ಹೀಗೆ ಪ್ರಾರ್ಥಿಸಿದನು:

“ಇಸ್ರೇಲರ ದೇವರಾದ ಯೆಹೋವನೇ, ನಮ್ಮ ತಂದೆಯೇ,
    ನಿನಗೆ ನಿರಂತರವಾಗಿ ಕೊಂಡಾಟವಾಗಲಿ.
11 ಯೆಹೋವನೇ, ಮಹತ್ವ, ಸಾಮರ್ಥ್ಯ, ಮಹಿಮೆ, ಜಯ ಮತ್ತು ಗೌರವಗಳು ನಿನ್ನವೇ ಆಗಿವೆ.
    ಭೂಮ್ಯಾಕಾಶಗಳಲ್ಲಿರುವುದೆಲ್ಲಾ ನಿನ್ನವೇ.
ಯೆಹೋವನೇ, ರಾಜ್ಯವು ನಿನ್ನದೇ.
    ನೀನೇ ಅದರ ಶಿರಸ್ಸು; ಅದನ್ನಾಳುವಾತನೂ ನೀನೇ.
12 ಗೌರವವೂ ಐಶ್ವರ್ಯವೂ ನಿನ್ನಿಂದಲೇ ಹೊರಡುವವು.
    ಎಲ್ಲವನ್ನು ಆಳುವಾತನು ನೀನೇ.
ನಿನ್ನ ಬಾಹುಗಳಲ್ಲಿ ಶಕ್ತಿಸಾಮರ್ಥ್ಯವು ತುಂಬಿವೆ.
    ಯಾರನ್ನೇ ಆಗಲಿ ಮಹಾಪುರುಷರನ್ನಾಗಿಯೂ ಪ್ರಬಲರನ್ನಾಗಿಯೂ ಮಾಡುವ ಶಕ್ತಿಯಿರುವುದು ನಿನ್ನ ಕೈಗಳಲ್ಲಿಯೇ.
13 ನಮ್ಮ ದೇವರೇ, ನಿನಗೆ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
    ನಿನ್ನ ಪ್ರಭಾವವುಳ್ಳ ನಾಮವನ್ನು ಸ್ತುತಿಸುತ್ತೇವೆ.
14 ನಾವು ಕಾಣಿಕೆಯಾಗಿ ಕೊಟ್ಟಿರುವ ವಸ್ತುಗಳು ನನ್ನಿಂದಾಗಲಿ ಮತ್ತು ನನ್ನ ಜನರಿಂದಾಗಲಿ ಬರಲಿಲ್ಲ.
    ಇವೆಲ್ಲವೂ ನಿನ್ನಿಂದಲೇ ಬಂದವುಗಳು.
    ನಿನ್ನಿಂದ ನಾವು ಹೊಂದಿದವುಗಳನ್ನೇ ನಿನಗೆ ಕೊಟ್ಟಿದ್ದೇವೆ.
15 ನಾವು ನಮ್ಮ ಪೂರ್ವಿಕರಂತೆ
    ಈ ಲೋಕದಲ್ಲಿ ಪ್ರವಾಸಿಗಳಾಗಿದ್ದೇವೆ;
ದಾಟಿಹೋಗುವ ನೆರಳಿನಂತೆ ನಾವು ಈ ಲೋಕದಲ್ಲಿರುತ್ತೇವೆ.
    ಅದನ್ನು ನಿಲ್ಲಿಸಲು ನಮಗೆ ಸಾಧ್ಯವಿಲ್ಲ.
16 ನಮ್ಮ ದೇವರಾದ ಯೆಹೋವನೇ, ನಿನ್ನ ಆಲಯವನ್ನು ಕಟ್ಟುವುದಕ್ಕಾಗಿ ನಾವು ಇವೆಲ್ಲವನ್ನೂ ಒಟ್ಟುಗೂಡಿಸಿದ್ದೇವೆ.
    ನಿನ್ನ ಪವಿತ್ರ ಹೆಸರನ್ನು ಪ್ರಸಿದ್ಧಿಪಡಿಸಲು ನಾವು ಆಲಯವನ್ನು ಕಟ್ಟುತ್ತೇವೆ.
ಆದರೆ ಇವೆಲ್ಲಾ ನಿನ್ನಿಂದಲೇ ಬಂದವುಗಳು;
    ಇವೆಲ್ಲಾ ನಿನಗೇ ಸಂಬಂಧಪಟ್ಟವುಗಳು.
17 ನನ್ನ ದೇವರೇ, ಜನರ ಹೃದಯಗಳನ್ನು ಪರೀಕ್ಷಿಸುವೆ.
    ಜನರು ಒಳ್ಳೆಯ ಕಾರ್ಯವನ್ನು ಯಥಾರ್ಥವಾದ ಹೃದಯದಿಂದ ಮಾಡುವಾಗ ನೀನು ಸಂತೋಷಪಡುವೆ.
ಈ ವಸ್ತುಗಳನ್ನೆಲ್ಲಾ
    ನಾನು ಶುದ್ಧಹೃದಯದಿಂದ ಕೊಡುತ್ತಿದ್ದೇನೆ.
ಇಲ್ಲಿ ನೆರೆದುಬಂದಿರುವವರೆಲ್ಲರೂ
    ನಿನಗೆ ಕಾಣಿಕೆಯನ್ನು ಸ್ವಯಿಚ್ಛೆಯಿಂದ ಕೊಟ್ಟಿದ್ದಾರೆ.
18 ಯೆಹೋವನೇ, ನಮ್ಮ ಪೂರ್ವಿಕರಾದ ಅಬ್ರಹಾಮ,
    ಇಸಾಕ ಮತ್ತು ಯಾಕೋಬರ ದೇವರು ನೀನೇ.
ನಿನ್ನ ಜನರು ಸರಿಯಾಗಿ ಯೋಜನೆ ಹಾಕುವಂತೆ ಸಹಾಯಿಸು.
    ನಿನ್ನನ್ನು ನಿಷ್ಠೆಯಿಂದಲೂ ಸತ್ಯದಿಂದಲೂ ಸೇವೆಮಾಡುವಂತೆ ಸಹಾಯಿಸು.
19 ನನ್ನ ಮಗನಾದ ಸೊಲೊಮೋನನೂ ನಿನಗೆ ನಂಬಿಗಸ್ತನಾಗಿರುವಂತೆ ಸಹಾಯಮಾಡು.
    ನಿನ್ನ ಆಜ್ಞೆ, ಕಟ್ಟಳೆ ಮತ್ತು ನಿಯಮಗಳನ್ನು ಅನುಸರಿಸಲು ಸಹಾಯಮಾಡು.
ನಿನ್ನ ಮಂದಿರಕ್ಕಾಗಿ ನಾನು ಇಷ್ಟೆಲ್ಲವನ್ನು ಸಿದ್ಧಮಾಡಿರುವೆನಲ್ಲಾ,
    ಅವನು ಅದನ್ನು ಕಟ್ಟಿ ಪೂರ್ಣಗೊಳಿಸಲು ಸಹಾಯಮಾಡು.”

20 ನೆರೆದು ಬಂದವರಿಗೆ ದಾವೀದನು, “ದೇವರಾದ ಯೆಹೋವನಿಗೆ ಸ್ತೋತ್ರಮಾಡಿರಿ” ಎಂದನು. ಆಗ ಎಲ್ಲರೂ ಅವರ ಪೂರ್ವಿಕರ ದೇವರಿಗೆ ಸ್ತುತಿಸುತ್ತಾ ತಲೆಬಾಗಿ ದೇವರನ್ನೂ ಅರಸನನ್ನೂ ನಮಸ್ಕರಿಸಿದರು.

ಸೊಲೊಮೋನನಿಗೆ ಪಟ್ಟಾಭಿಷೇಕ

21 ಮರುದಿವಸ ಜನರು ಯೆಹೋವನಿಗೆ ಯಜ್ಞಗಳನ್ನೂ ಸರ್ವಾಂಗಹೋಮಗಳನ್ನೂ ಅರ್ಪಿಸಿದರು. ಒಂದು ಸಾವಿರ ಹೋರಿಗಳು, ಒಂದುಸಾವಿರ ಟಗರುಗಳು, ಒಂದುಸಾವಿರ ಆಡುಗಳು ಮತ್ತು ಪಾನದ್ರವ್ಯಗಳನ್ನು ಅರ್ಪಿಸಿದರು. ಇಡೀ ಇಸ್ರೇಲ್ ಜನಾಂಗಕ್ಕಾಗಿ ಯಜ್ಞವನ್ನರ್ಪಿಸಿದರು. 22 ಆ ದಿವಸ ಸೇರಿಬಂದ ಜನರು ಯೆಹೋವನ ಸನ್ನಿಧಿಯಲ್ಲಿ ಅನ್ನಪಾನಗಳನ್ನು ತೆಗೆದುಕೊಂಡು ಉಲ್ಲಾಸಿಸಿದರು.

ಅವರು ದಾವೀದನ ಮಗನಾದ ಸೊಲೊಮೋನನನ್ನು ತಿರಿಗಿ ಅರಸನನ್ನಾಗಿಯೂ ಚಾದೋಕನನ್ನು ಮಹಾಯಾಜಕನನ್ನಾಗಿಯೂ ಯೆಹೋವನ ಸನ್ನಿಧಿಯಲ್ಲಿ ಅಭಿಷೇಕಿಸಿದರು.

23 ಆ ಬಳಿಕ ಸೊಲೊಮೋನನು ತನ್ನ ತಂದೆಯ ಬದಲಾಗಿ ರಾಜನಾಗಿ ಪ್ರಭುವಿನ ಸಿಂಹಾಸನದ ಮೇಲೆ ಕುಳಿತುಕೊಂಡನು. ಸೊಲೊಮೋನನನ್ನು ಎಲ್ಲಾ ಇಸ್ರೇಲರು ಗೌರವಿಸಿದರು ಮತ್ತು ವಿಧೇಯರಾದರು. 24 ಎಲ್ಲಾ ನಾಯಕರು, ಸೈನಿಕರು ಮತ್ತು ದಾವೀದನ ಗಂಡುಮಕ್ಕಳು ಸೊಲೊಮೋನನನ್ನು ತಮ್ಮ ಅರಸನನ್ನಾಗಿ ಸ್ವೀಕರಿಸಿ ಅವನಿಗೆ ವಿಧೇಯರಾದರು. 25 ಯೆಹೋವನು ಸೊಲೊಮೋನನನ್ನು ಆಶೀರ್ವದಿಸಿ ಅಭಿವೃದ್ಧಿಪಡಿಸಿದನು. ಇಸ್ರೇಲಿನಲ್ಲಿದ್ದ ಯಾವ ಅರಸನಿಗೂ ಸೊಲೊಮೋನನಿಗಿದ್ದಷ್ಟು ಗೌರವವೂ ವೈಭವವೂ ಇರಲಿಲ್ಲ.

ದಾವೀದನ ಮರಣ

26-27 ಇಷಯನ ಮಗನಾದ ದಾವೀದನು ಇಸ್ರೇಲರನ್ನು ನಲವತ್ತು ವರ್ಷ ಆಳಿದನು. ಅವನು ಹೆಬ್ರೋನಿನಲ್ಲಿ ಏಳು ವರ್ಷ ರಾಜ್ಯಪಾಲನೆ ಮಾಡಿದನು ಮತ್ತು ಜೆರುಸಲೇಮಿನಲ್ಲಿ ಮೂವತ್ತುಮೂರು ವರ್ಷ ಆಳಿದನು. 28 ಅವನು ಬಹಳ ಮುದುಕನಾಗಿ ಸತ್ತನು. ಅವನ ದೀರ್ಘಾಯುಷ್ಯದಲ್ಲಿ ಹೆಚ್ಚಾದ ಗೌರವ ಸನ್ಮಾನಗಳು ದೊರೆತವು. ಅವನ ನಂತರ ಮಗನಾದ ಸೊಲೊಮೋನನು ಅರಸನಾದನು.

29 ಪ್ರಾರಂಭದಿಂದ ಹಿಡಿದು ಕೊನೆಯತನಕ ದಾವೀದನು ಮಾಡಿದ ಎಲ್ಲಾ ಕಾರ್ಯಗಳನ್ನು ದರ್ಶಿಯಾದ ಸಮುವೇಲ, ಪ್ರವಾದಿಯಾದ ನಾತಾನ ಮತ್ತು ದರ್ಶಿಯಾದ ಗಾದ್ ಇವರ ಚರಿತ್ರೆಗಳಲ್ಲಿ ಬರೆಯಲ್ಪಟ್ಟಿವೆ. 30 ಇಸ್ರೇಲಿನ ರಾಜನಾಗಿದ್ದಾಗ ದಾವೀದನು ಮಾಡಿದ ಎಲ್ಲಾ ಸಾಹಸಕಾರ್ಯಗಳನ್ನೂ ಅವನ ಪರಾಕ್ರಮ ಮತ್ತು ಅವನಿಗೆ ಸಂಭವಿಸಿದೆಲ್ಲದ್ದರ ಕುರಿತಾಗಿ ಅವುಗಳಲ್ಲಿ ಬರೆಯಲಾಗಿದೆ. ಇಸ್ರೇಲಿನ ಮತ್ತು ಅದರ ಸಮೀಪದಲ್ಲಿ ಅನ್ಯಜನಾಂಗಗಳ ಕುರಿತಾದ ಸಂಗತಿಗಳನ್ನು ಅವುಗಳಲ್ಲಿ ಬರೆಯಲಾಗಿದೆ.

ಯೋಹಾನ 9:24-41

24 ಯೆಹೂದ್ಯನಾಯಕರು ಕುರುಡನಾಗಿದ್ದ ಆ ಮನುಷ್ಯನನ್ನು ಒಳಗೆ ಕರೆದು, “ನೀನು ದೇವರನ್ನು ಮಹಿಮೆಪಡಿಸಬೇಕು. ಈ ಮನುಷ್ಯನು (ಯೇಸು) ಪಾಪಿಯೆಂದು ನಮಗೆ ಗೊತ್ತಿದೆ” ಎಂದರು.

25 ಆ ಮನುಷ್ಯನು, “ಅವನು ಪಾಪಿಯೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ನಾನು ಕುರುಡನಾಗಿದ್ದೆನು; ಈಗ ನನಗೆ ದೃಷ್ಟಿ ಬಂದಿದೆ ಎಂಬುದಂತೂ ನನಗೆ ಗೊತ್ತಿದೆ” ಎಂದು ಉತ್ತರಕೊಟ್ಟನು.

26 ಯೆಹೂದ್ಯನಾಯಕರು, “ಅವನು (ಯೇಸು) ನಿನಗೇನು ಮಾಡಿದನು? ಅವನು ನಿನ್ನ ಕಣ್ಣುಗಳನ್ನು ಹೇಗೆ ಗುಣಪಡಿಸಿದನು?” ಎಂದು ಕೇಳಿದರು.

27 ಆ ಮನುಷ್ಯನು, “ಆಗಲೇ ನಿಮಗೆ ಅದನ್ನು ತಿಳಿಸಿದ್ದೇನೆ. ಆದರೆ ನೀವು ನನಗೆ ಕಿವಿಗೊಡಲಿಲ್ಲ. ಈಗ ಅದನ್ನು ಮತ್ತೆ ಏಕೆ ಕೇಳಬೇಕೆಂದಿದ್ದೀರಿ? ನೀವು ಸಹ ಆತನ ಹಿಂಬಾಲಕರಾಗಬೇಕೆಂದಿದ್ದೀರೋ?” ಎಂದು ಉತ್ತರಕೊಟ್ಟನು.

28 ಯೆಹೂದ್ಯನಾಯಕರು ಕೋಪಗೊಂಡು ಆ ಮನುಷ್ಯನನ್ನು ಅಪಹಾಸ್ಯಮಾಡಿ, “ನೀನು ಅವನ (ಯೇಸು) ಹಿಂಬಾಲಕನಾಗಿರುವೆ. ನಾವು ಮೋಶೆಯ ಹಿಂಬಾಲಕರಾಗಿದ್ದೇವೆ. 29 ದೇವರು ಮೋಶೆಯೊಂದಿಗೆ ಮಾತಾಡಿದನೆಂಬುದನ್ನು ನಾವು ಬಲ್ಲೆವು. ಆದರೆ ಆ ಮನುಷ್ಯನು (ಯೇಸು) ಎಲ್ಲಿಂದ ಬಂದನೆಂಬುದು ಸಹ ನಮಗೆ ಗೊತ್ತಿಲ್ಲ!” ಎಂದು ಹೇಳಿದರು.

30 ಆ ಮನುಷ್ಯನು, “ಇದು ಬಹು ಆಶ್ಚರ್ಯಕರವಾದ ಸಂಗತಿ. ಯೇಸು ಎಲ್ಲಿಂದ ಬಂದನೆಂಬುದು ನಿಮಗೆ ಗೊತ್ತಿಲ್ಲ. ಆದರೆ ಆತನು ನನ್ನ ಕಣ್ಣುಗಳನ್ನು ಗುಣಪಡಿಸಿದನು. 31 ದೇವರು ಪಾಪಿಗಳಿಗೆ ಕಿವಿಗೊಡುವುದಿಲ್ಲವೆಂಬುದು ನಮ್ಮೆಲರಿಗೂ ಗೊತ್ತಿದೆ. ಆದರೆ ದೇವರು ತನ್ನನ್ನು ಆರಾಧಿಸುವವನಿಗೂ ಮತ್ತು ತನಗೆ ವಿಧೇಯನಾಗುವವನಿಗೂ ಕಿವಿಗೊಡುತ್ತಾನೆ. 32 ಹುಟ್ಟುಕುರುಡನೊಬ್ಬನನ್ನು ಯಾರಾದರೂ ಎಂದಾದರೂ ಗುಣಪಡಿಸಿರುವುದು ಇದೇ ಮೊದಲನೆ ಸಲ. 33 ಆ ಮನುಷ್ಯನು (ಯೇಸು) ದೇವರಿಂದಲೇ ಬಂದಿರಬೇಕು. ಆತನು ದೇವರಿಂದ ಬಂದಿಲ್ಲದಿದ್ದರೆ, ಇಂಥ ಕಾರ್ಯಗಳನ್ನು ಮಾಡಲಾಗುತ್ತಿರಲಿಲ್ಲ” ಎಂದು ಉತ್ತರಕೊಟ್ಟನು.

34 ಯೆಹೂದ್ಯನಾಯಕರು, “ಪಾಪದಲ್ಲೇ ಹುಟ್ಟಿ ಬೆಳೆದವನು ನೀನು! ನಮಗೇ ಉಪದೇಶಮಾಡುವಿಯಾ?” ಎಂದು ಉತ್ತರಕೊಟ್ಟರು. ಅಲ್ಲದೆ ಅವರು ಅವನನ್ನು ಬಲವಂತವಾಗಿ ಹೊರಗಟ್ಟಿದರು.

ಆತ್ಮಿಕ ಅಂಧತೆ

35 ಯೆಹೂದ್ಯನಾಯಕರು ಆ ಮನುಷ್ಯನನ್ನು ಹೊರಗಟ್ಟಿದ್ದು ಯೇಸುವಿಗೆ ತಿಳಿಯಿತು. ಯೇಸು ಆ ಮನುಷ್ಯನನ್ನು ಕಂಡು, “ನೀನು ಮನುಷ್ಯಕುಮಾರನಲ್ಲಿ ನಂಬಿಕೆಯಿಡುವಿಯಾ?” ಎಂದು ಕೇಳಿದನು.

36 ಆ ಮನುಷ್ಯನು, “ಸ್ವಾಮೀ, ಆ ಮನುಷ್ಯಕುಮಾರನು ಯಾರು? ನನಗೆ ತಿಳಿಸು. ನಾನು ಆತನಲ್ಲಿ ನಂಬಿಕೆ ಇಡುತ್ತೇನೆ” ಎಂದು ಹೇಳಿದನು.

37 ಯೇಸು, “ನೀನು ಆತನನ್ನು ಈಗಾಗಲೇ ನೋಡಿರುವೆ. ಈಗ ನಿನ್ನೊಂದಿಗೆ ಮಾತಾಡುತ್ತಿರುವಾತನೇ ಮನುಷ್ಯಕುಮಾರನು” ಎಂದು ಹೇಳಿದನು.

38 ಆ ಮನುಷ್ಯನು, “ಹೌದು ಪ್ರಭುವೇ, ನಾನು ನಂಬುತ್ತೇನೆ!” ಎಂದು ಉತ್ತರಕೊಟ್ಟನು. ಬಳಿಕ ಅವನು ಯೇಸುವಿಗೆ ಅಡ್ಡಬಿದ್ದು ಆರಾಧಿಸಿದನು.

39 ಯೇಸು, “ಈ ಲೋಕಕ್ಕೆ ತೀರ್ಪಾಗಲೆಂದು ನಾನು ಈ ಲೋಕಕ್ಕೆ ಬಂದೆನು. ಕುರುಡರು ಕಾಣುವಂತಾಗಲೆಂದೂ ಕಣ್ಣುಳ್ಳವರು ಕುರುಡರಾಗಲೆಂದೂ ನಾನು ಬಂದೆನು” ಎಂದು ಹೇಳಿದನು.

40 ಅಲ್ಲಿದ್ದ ಫರಿಸಾಯರು ಇದನ್ನು ಕೇಳಿ, “ಏನು? ನಮ್ಮನ್ನು ಸಹ ಕುರುಡರೆಂದು ಹೇಳುತ್ತಿರುವೆಯಾ?” ಎಂದು ಪ್ರಶ್ನಿಸಿದರು.

41 ಯೇಸು, “ನೀವು ನಿಜವಾಗಿಯೂ ಕುರುಡರಾಗಿದ್ದರೆ ಪಾಪವೆಂಬ ಅಪರಾಧಕ್ಕೆ ಗುರಿಯಾಗುತ್ತಿರಲಿಲ್ಲ. ಆದರೆ ನೀವು, ‘ನಮಗೆ ಕಣ್ಣು ಕಾಣುತ್ತದೆ’ ಎಂದು ಹೇಳುತ್ತೀರಿ. ಆದ್ದರಿಂದ ನೀವು ಪಾಪಿಗಳೇ ಆಗಿದ್ದೀರಿ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International