Print Page Options
Previous Prev Day Next DayNext

Old/New Testament

Each day includes a passage from both the Old Testament and New Testament.
Duration: 365 days
Kannada Holy Bible: Easy-to-Read Version (KERV)
Version
1 ರಾಜರುಗಳು 14-15

ಯಾರೊಬ್ಬಾಮನ ಮಗನ ಮರಣ

14 ಆ ಸಮಯದಲ್ಲಿ, ಯಾರೊಬ್ಬಾಮನ ಮಗನಾದ ಅಬೀಯನು ಅಸ್ವಸ್ಥನಾದನು. ಯಾರೊಬ್ಬಾಮನು ತನ್ನ ಪತ್ನಿಗೆ, “ಶೀಲೋವಿಗೆ ಹೋಗು. ಅಲ್ಲಿಗೆ ಹೋಗಿ ಪ್ರವಾದಿಯಾದ ಅಹೀಯನನ್ನು ನೋಡು. ನಾನು ಇಸ್ರೇಲಿನ ರಾಜನಾಗುವೆನೆಂದು ತಿಳಿಸಿದ ಮನುಷ್ಯನೇ ಅಹೀಯನು. ನೀನು ನನ್ನ ಪತ್ನಿಯೆಂದು ಜನರಿಗೆ ತಿಳಿಯದ ರೀತಿಯಲ್ಲಿ ವಸ್ತ್ರಗಳನ್ನು ಧರಿಸಿಕೊ. ಪ್ರವಾದಿಗೆ ಹತ್ತು ರೊಟ್ಟಿಗಳನ್ನು, ಕೆಲವು ಸಿಹಿ ಪದಾರ್ಥಗಳನ್ನು ಮತ್ತು ಜೇನುತುಪ್ಪ ಜಾಡಿಯನ್ನು ಕೊಡು. ನಂತರ ನಮ್ಮ ಮಗನಿಗೆ ಏನಾಗುತ್ತದೆಂಬುದನ್ನು ಕೇಳು. ಪ್ರವಾದಿಯಾದ ಅಹೀಯನು ನಿನಗೆ ತಿಳಿಸುತ್ತಾನೆ” ಎಂದು ಹೇಳಿದನು.

ರಾಜನ ಪತ್ನಿಯು ಅವನು ಹೇಳಿದಂತೆ ಮಾಡಿದಳು. ಅವಳು ಶೀಲೋವಿಗೆ ಹೋದಳು. ಅವಳು ಪ್ರವಾದಿಯಾದ ಅಹೀಯನ ಮನೆಗೆ ಹೋದಳು. ಅಹೀಯನಿಗೆ ಬಹಳ ವಯಸ್ಸಾಗಿತ್ತು; ಅವನು ಕುರುಡನಾಗಿದ್ದನು. ಆದರೆ ಯೆಹೋವನು ಅವನಿಗೆ, “ಯಾರೊಬ್ಬಾಮನ ಪತ್ನಿಯು ಅಸ್ವಸ್ಥನಾಗಿರುವ ತನ್ನ ಮಗನ ಬಗ್ಗೆ ಕೇಳಲು ನಿನ್ನ ಬಳಿಗೆ ಬರುತ್ತಿದ್ದಾಳೆ” ಎಂದು ಹೇಳಿದ್ದನು. ಅಹೀಯನು ಏನು ಹೇಳಬೇಕೆಂಬುದನ್ನು ಯೆಹೋವನು ಅವನಿಗೆ ತಿಳಿಸಿದ್ದನು.

ಯಾರೊಬ್ಬಾಮನ ಪತ್ನಿಯು ಅಹೀಯನ ಮನೆಗೆ ಬಂದಳು. ತಾನಾರೆಂಬುದು ಜನರಿಗೆ ತಿಳಿಯಬಾರದೆಂದು ಅವಳು ಪ್ರಯತ್ನಿಸುತ್ತಿದ್ದಳು. ಅವಳು ಬಾಗಿಲಿನ ಬಳಿಗೆ ಬಂದಾಗಲೇ ಅಹೀಯನಿಗೆ ಆಕೆಯ ಪಾದಗಳ ಸಪ್ಪಳವು ಕೇಳಿಸಿತು. ಆಗ ಅಹೀಯನು, “ಯಾರೊಬ್ಬಾಮನ ಪತ್ನಿಯೇ, ಒಳಗೆ ಬಾ. ನೀನು ಯಾರೆಂಬುದು ಜನರಿಗೆ ತಿಳಿಯದಂತೆ ಮಾಡಲು ಯಾಕೆ ಪ್ರಯತ್ನಿಸುತ್ತಿರುವೆ? ನಾನು ನಿನಗೆ ಅಶುಭದ ಸುದ್ದಿಯನ್ನು ತಿಳಿಸುತ್ತೇನೆ. ಇಸ್ರೇಲಿನ ದೇವರಾದ ಯೆಹೋವನು ಹೀಗೆ ಹೇಳುತ್ತಾನೆಂದು ನೀನು ಹಿಂದಿರುಗಿ ಹೋಗಿ ಯಾರೊಬ್ಬಾಮನಿಗೆ ತಿಳಿಸು. ಯೆಹೋವನು ಹೀಗೆನ್ನುತ್ತಾನೆ: ‘ಯಾರೊಬ್ಬಾಮನೇ, ಇಸ್ರೇಲಿನ ಜನರಲ್ಲೆಲ್ಲಾ ನಾನು ನಿನ್ನನ್ನು ಆರಿಸಿಕೊಂಡೆ. ನನ್ನ ಜನರನ್ನು ಆಳಲು ನಾನು ನಿನ್ನನ್ನು ನೇಮಿಸಿದೆ. ದಾವೀದನ ಕುಲವು ಇಸ್ರೇಲ್ ರಾಜ್ಯವನ್ನು ಆಳುತ್ತಿತ್ತು. ಆದರೆ ನಾನು ಅವರಿಂದ ರಾಜ್ಯವನ್ನು ತೆಗೆದುಕೊಂಡು, ನಿನಗೆ ಅದನ್ನು ಕೊಟ್ಟೆ. ಆದರೆ ನೀನು ನನ್ನ ಸೇವಕನಾದ ದಾವೀದನಂತಲ್ಲ. ಅವನು ನನ್ನ ಆಜ್ಞೆಗಳಿಗೆ ಯಾವಾಗಲೂ ವಿಧೇಯನಾಗಿದ್ದನು. ಅವನು ಪೂರ್ಣಮನಸ್ಸಿನಿಂದ ನನ್ನನ್ನು ಅನುಸರಿಸುತ್ತಿದ್ದನು. ನಾನು ಒಪ್ಪಿಕೊಳ್ಳುವ ಸಂಗತಿಗಳನ್ನು ಮಾತ್ರ ಅವನು ಮಾಡಿದನು. ಆದರೆ ನೀನು ಅನೇಕ ಪಾಪಗಳನ್ನು ಮಾಡಿರುವೆ. ನಿನಗಿಂತಲೂ ಮೊದಲು ಆಳಿದವರ ಪಾಪಗಳಿಗಿಂತ ನಿನ್ನ ಪಾಪಗಳು ಹೆಚ್ಚು ಭಯಂಕರವಾಗಿವೆ. ನೀನು ನನ್ನನ್ನು ಅನುಸರಿಸುವುದನ್ನು ಬಿಟ್ಟುಬಿಟ್ಟೆ. ನೀನು ವಿಗ್ರಹಗಳನ್ನು ಮತ್ತು ಅನ್ಯದೇವರುಗಳನ್ನು ನಿರ್ಮಿಸಿದೆ. ಇದು ನನ್ನಲ್ಲಿ ಹೆಚ್ಚು ಕೋಪವುಂಟುಮಾಡಿತು. 10 ಆದ್ದರಿಂದ ಯಾರೊಬ್ಬಾಮನೇ, ನಾನು ನಿನ್ನ ಕುಟುಂಬಕ್ಕೆ ಕೇಡುಗಳನ್ನು ಬರಮಾಡುತ್ತೇನೆ. ನಿನ್ನ ಕುಟುಂಬದ ಗಂಡಸರೆಲ್ಲರನ್ನು ನಾನು ಕೊಲ್ಲುತ್ತೇನೆ. ಬೆಂಕಿಯು ಕಸವನ್ನು ಸುಟ್ಟುಹಾಕುವಂತೆ ನಾನು ನಿನ್ನ ಕುಟುಂಬವನ್ನು ಸಂಪೂರ್ಣವಾಗಿ ನಾಶಪಡಿಸುತ್ತೇನೆ. 11 ನಿನ್ನ ಕುಟುಂಬದಲ್ಲಿ ಯಾವನಾದರೂ ನಗರದಲ್ಲಿ ಸತ್ತರೆ, ಅವನನ್ನು ನಾಯಿಗಳು ಕಿತ್ತುತಿನ್ನುತ್ತವೆ. ನಿನ್ನ ಕುಟುಂಬದಲ್ಲಿ ಯಾವನಾದರೂ ಹೊಲಗಳಲ್ಲಿ ಸತ್ತರೆ, ಅವನನ್ನು ಪಕ್ಷಿಗಳು ಕಿತ್ತುತಿನ್ನುತ್ತವೆ. ಇದು ಯೆಹೋವನ ನುಡಿ’” ಎಂದು ಹೇಳಿದನು.

12 ನಂತರ ಪ್ರವಾದಿಯಾದ ಅಹೀಯನು ಯಾರೊಬ್ಬಾಮನ ಪತ್ನಿಯ ಸಂಗಡ ಮಾತನಾಡುವುದನ್ನು ಮುಂದುವರಿಸಿ, “ಈಗ ಮನೆಗೆ ಹೋಗು. ನೀನು ನಿನ್ನ ನಗರವನ್ನು ಪ್ರವೇಶಿಸಿದ ತಕ್ಷಣ, ನಿನ್ನ ಮಗನು ಸತ್ತುಹೋಗುತ್ತಾನೆ. 13 ಇಸ್ರೇಲರೆಲ್ಲರು ಅವನಿಗಾಗಿ ಗೋಳಾಡಿ ಸಮಾಧಿಮಾಡುತ್ತಾರೆ. ಯಾರೊಬ್ಬಾಮನ ಕುಟುಂಬದಲ್ಲಿ ನಿನ್ನ ಮಗನನೊಬ್ಬನನ್ನು ಮಾತ್ರ ಸಮಾಧಿ ಮಾಡುತ್ತಾರೆ. ಏಕೆಂದರೆ ಯಾರೊಬ್ಬಾಮನ ಕುಟುಂಬದಲ್ಲಿ ಇವನೊಬ್ಬನು ಮಾತ್ರ ಇಸ್ರೇಲಿನ ದೇವರಾದ ಯೆಹೋವನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದನು. 14 ಯೆಹೋವನು ಇಸ್ರೇಲಿಗೆ ಹೊಸ ರಾಜನನ್ನು ನೇಮಿಸುತ್ತಾನೆ. ಆ ಹೊಸ ರಾಜನು ಯಾರೊಬ್ಬಾಮನ ಕುಟುಂಬವನ್ನು ನಾಶಗೊಳಿಸುತ್ತಾನೆ. ಇದು ಬಹುಬೇಗನೆ ಸಂಭವಿಸುತ್ತದೆ. 15 ನಂತರ ಯೆಹೋವನು ಇಸ್ರೇಲರನ್ನು ಹೊಡೆಯುತ್ತಾನೆ. ಇಸ್ರೇಲಿನ ಜನರು ಬಹಳ ಭಯಗೊಳ್ಳುವರು. ಅವರು ನೀರಿನಲ್ಲಿ ಎತ್ತರವಾಗಿ ಬೆಳೆದಿರುವ ಹುಲ್ಲಿನಂತೆ ನಡುಗುವರು. ಯೆಹೋವನು ಇಸ್ರೇಲರನ್ನು ಈ ಶ್ರೇಷ್ಠವಾದ ದೇಶದಿಂದ ಚದರಿಸಿಬಿಡುವನು; ಆತನು ಈ ದೇಶವನ್ನು ಅವರ ಪೂರ್ವಿಕರಿಗೆ ಕೊಟ್ಟಿದ್ದನು. ಆತನು ಇಸ್ರೇಲರನ್ನು ಯೂಫ್ರೇಟೀಸ್ ನದಿಯ ಮತ್ತೊಂದು ಕಡೆಗೆ ಚದರಿಸಿಬಿಡುತ್ತಾನೆ. ಯೆಹೋವನು ಅವರ ಮೇಲೆ ಕೋಪಗೊಂಡಿರುವುದೇ ಅದಕ್ಕೆ ಕಾರಣ. ಅವರು ಅಶೇರ್ ವಿಗ್ರಹವನ್ನು ಆರಾಧಿಸಲು ವಿಶೇಷ ಸ್ತಂಭಗಳನ್ನು ಮಾಡಿಕೊಂಡಿದ್ದರಿಂದ ಆತನು ಅವರ ಮೇಲೆ ಕೋಪಗೊಂಡನು. 16 ಯಾರೊಬ್ಬಾಮನು ಪಾಪವನ್ನು ಮಾಡಿದನು. ನಂತರ ಇಸ್ರೇಲಿನ ಜನರೂ ಪಾಪ ಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದನು. ಆದ್ದರಿಂದ ಇಸ್ರೇಲಿನ ಜನರು ಸೋಲಿಸಲ್ಪಡುವಂತೆ ಯೆಹೋವನು ಅವಕಾಶ ಮಾಡುತ್ತಾನೆ” ಎಂದು ಹೇಳಿದನು.

17 ಯಾರೊಬ್ಬಾಮನ ಪತ್ನಿಯು ತಿರ್ಚಾಗೆ ಹಿಂದಿರುಗಿ ಹೋದಳು. ಆಕೆಯು ಮನೆಯೊಳಕ್ಕೆ ಕಾಲಿಟ್ಟಕೂಡಲೇ ಮಗನು ಸತ್ತುಹೋದನು. 18 ಇಸ್ರೇಲರೆಲ್ಲರು ಅವನಿಗಾಗಿ ಅತ್ತು, ಸಮಾಧಿಮಾಡಿದರು. ಯೆಹೋವನು ಹೇಳಿದಂತೆಯೇ ಇದು ಸಂಭವಿಸಿತು. ಯೆಹೋವನು ತನ್ನ ಸೇವಕನೂ ಪ್ರವಾದಿಯೂ ಆದ ಅಹೀಯನ ಮೂಲಕ ಈ ಸಂಗತಿಗಳನ್ನು ಹೇಳಿಸಿದ್ದನು.

19 ರಾಜನಾದ ಯಾರೊಬ್ಬಾಮನು ಇತರ ಅನೇಕ ಕಾರ್ಯಗಳನ್ನು ಮಾಡಿದನು. ಅವನು ಯುದ್ಧಗಳಲ್ಲಿ ಹೋರಾಡಿದನು ಮತ್ತು ಜನರನ್ನು ಆಳಿದನು. “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಅವನು ಮಾಡಿದ ಕಾರ್ಯಗಳೆಲ್ಲವನ್ನು ಬರೆಯಲಾಗಿದೆ. 20 ಯಾರೊಬ್ಬಾಮನು ರಾಜನಾಗಿ ಇಪ್ಪತ್ತೆರಡು ವರ್ಷ ಆಳಿದನು. ನಂತರ ಅವನು ಸತ್ತುಹೋದನು. ಅವನನ್ನು ಪೂರ್ವಿಕರ ಬಳಿ ಸಮಾಧಿಮಾಡಿದರು. ಅವನ ಮಗನಾದ ನಾದಾಬನು ಅವನ ನಂತರ ಹೊಸ ರಾಜನಾದನು.

ಯೆಹೂದದ ರಾಜನಾದ ರೆಹಬ್ಬಾಮ

21 ಆ ಕಾಲದಲ್ಲಿ ಸೊಲೊಮೋನನ ಮಗನಾದ ರೆಹಬ್ಬಾಮನು ಯೆಹೂದದ ರಾಜನಾಗಿದ್ದನು. ಅವನು ರಾಜನಾದಾಗ ಅವನಿಗೆ ನಲವತ್ತೊಂದು ವರ್ಷ ವಯಸ್ಸಾಗಿತ್ತು. ರೆಹಬ್ಬಾಮನು ಜೆರುಸಲೇಮ್ ನಗರದಲ್ಲಿ ಹದಿನೇಳು ವರ್ಷ ಆಳಿದನು. ಈ ನಗರದಲ್ಲಿ ತಾನು ಸನ್ಮಾನಿಸಲ್ಪಡಬೇಕೆಂದು ಯೆಹೋವನು ಈ ನಗರವನ್ನು ಆರಿಸಿಕೊಂಡಿದ್ದನು. ಇಸ್ರೇಲಿನ ಎಲ್ಲಾ ನಗರಗಳಲ್ಲಿ ಈ ನಗರವನ್ನು ಆತನು ಆರಿಸಿಕೊಂಡಿದ್ದನು. ಅಮ್ಮೋನಿಯಳಾದ ನಯಮಾ ಎಂಬವಳು ರೆಹಬ್ಬಾಮನ ತಾಯಿ.

22 ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನೆಲ್ಲ ಯೆಹೂದದ ಜನರು ಮಾಡಿ ಪಾಪಿಗಳಾದರು. ಯೆಹೋವನು ಅವರ ಮೇಲೆ ಹೆಚ್ಚು ಕೋಪಗೊಳ್ಳುವಂತೆ ಆತನಿಗೆ ವಿರುದ್ಧವಾದ ಅನೇಕ ಕಾರ್ಯಗಳನ್ನು ಮಾಡಿದರು. ಅವರಿಗಿಂತಲೂ ಮುಂಚೆ ಜೀವಿಸಿದ್ದ ಅವರ ಪೂರ್ವಿಕರಿಗಿಂತಲೂ ಈ ಜನರು ಹೆಚ್ಚು ಕೀಳಾಗಿದ್ದರು. 23 ಈ ಜನರು ಎತ್ತರವಾದ ಸ್ಥಳಗಳಲ್ಲಿ ಕಲ್ಲಿನ ಸ್ಮಾರಕಗಳನ್ನು, ಪವಿತ್ರ ಸ್ತಂಭಗಳನ್ನು ನಿರ್ಮಿಸಿದರು. ಅವರು ಅವುಗಳನ್ನು ಎತ್ತರವಾದ ಪ್ರತಿಯೊಂದು ಬೆಟ್ಟದ ಮೇಲೂ ಪ್ರತಿಯೊಂದು ಹಸಿರುಮರದ ಕೆಳಗಡೆಯೂ ನಿರ್ಮಿಸಿದರು. 24 ಇತರ ದೇವರುಗಳ ಸೇವೆಗಾಗಿ ತಮ್ಮ ದೇಹಗಳನ್ನು ಲೈಂಗಿಕ ಸಂಬಂಧಕ್ಕೆ ಮಾರಾಟ ಮಾಡುವ ಗಂಡಸರೂ ಅಲ್ಲಿದ್ದರು. ಯೆಹೂದದ ಜನರು ಅನೇಕ ಕೆಟ್ಟಕಾರ್ಯಗಳನ್ನು ಮಾಡಿದರು. ಆ ದೇಶದಲ್ಲಿ ಇವರಿಗಿಂತ ಮುಂಚೆ ನೆಲಸಿದ್ದ ಜನರು ಇಂತಹ ದುಷ್ಕೃತ್ಯಗಳನ್ನು ಮಾಡುತ್ತಿದ್ದರು. ದೇವರು ಆ ಜನರಿಂದ ಈ ದೇಶವನ್ನು ತೆಗೆದುಕೊಂಡು ಇಸ್ರೇಲರಿಗೆ ಕೊಟ್ಟಿದ್ದನು.

25 ರೆಹಬ್ಬಾಮನು ರಾಜನಾಗಿದ್ದ ಐದನೆಯ ವರ್ಷದಲ್ಲಿ ಈಜಿಪ್ಟಿನ ರಾಜನಾದ ಶೀಶಕನು ಜೆರುಸಲೇಮಿನ ವಿರುದ್ಧ ಹೋರಾಡಿದನು. 26 ಶೀಶಕನು ಯೆಹೋವನ ಆಲಯದ ಭಂಡಾರವನ್ನು ಮತ್ತು ರಾಜನ ಅರಮನೆಯ ಭಂಡಾರವನ್ನು ತೆಗೆದುಕೊಂಡು ಹೋದನು. ಅರಾಮದ ರಾಜನಾದ ಹದದೆಜರನ ಅಧಿಕಾರಿಗಳಿಂದ ದಾವೀದನು ತೆಗೆದುಕೊಂಡಿದ್ದ ಬಂಗಾರದ ಗುರಾಣಿಗಳನ್ನೂ ಅವನು ತೆಗೆದುಕೊಂಡು ಹೋದನು. ದಾವೀದನು ಈ ಗುರಾಣಿಗಳನ್ನು ಜೆರುಸಲೇಮಿಗೆ ತಂದಿದ್ದನು. ಆದರೆ ಶೀಶಕನು ಎಲ್ಲಾ ಬಂಗಾರದ ಗುರಾಣಿಗಳನ್ನು ತೆಗೆದುಕೊಂಡು ಹೋದನು. 27 ಆದ್ದರಿಂದ ರಾಜನಾದ ರೆಹಬ್ಬಾಮನು ಅವುಗಳ ಸ್ಥಾನದಲ್ಲಿಡಲು ಅನೇಕ ಗುರಾಣಿಗಳನ್ನು ಮಾಡಿಸಿದನು. ಆದರೆ ಈ ಗುರಾಣಿಗಳನ್ನು ಮಾಡಿಸಿದ್ದು ಹಿತ್ತಾಳೆಯಲ್ಲೇ ಹೊರತು ಬಂಗಾರದಿಂದಲ್ಲ. ಅರಮನೆಯ ಬಾಗಿಲಿನ ಕಾವಲುಗಾರರಿಗೆ ಈ ಗುರಾಣಿಗಳನ್ನು ಅವನು ಕೊಟ್ಟನು. 28 ರಾಜನು ಯೆಹೋವನ ಆಲಯಕ್ಕೆ ಹೋಗುವಾಗ ಪ್ರತಿಸಲವೂ ಮೈಗಾವಲಿನವರು ಅವನ ಜೊತೆಯಲ್ಲಿ ಹೋಗುತ್ತಿದ್ದರು. ಅವರು ಗುರಾಣಿಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ನಂತರ ಅವರು ರಕ್ಷಣಾಕೊಠಡಿಯ ಗೋಡೆಯ ಮೇಲೆ ಈ ಗುರಾಣಿಗಳನ್ನು ಇಡುತ್ತಿದ್ದರು.

29 ರಾಜನಾದ ರೆಹಬ್ಬಾಮನು ಮಾಡಿದ ಎಲ್ಲಾ ಕಾರ್ಯಗಳನ್ನು “ಯೆಹೂದದ ರಾಜರುಗಳ ಚರಿತ್ರೆ” ಎಂಬ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ. 30 ರೆಹಬ್ಬಾಮನ ಮತ್ತು ಯಾರೊಬ್ಬಾಮನ ನಡುವೆ ಯಾವಾಗಲೂ ಯುದ್ಧ ನಡೆಯುತ್ತಿತ್ತು.

31 ರೆಹಬ್ಬಾಮನು ಸತ್ತುಹೋದನು. ಅವನನ್ನು ಅವನ ಪೂರ್ವಿಕನಾದ ದಾವೀದನಗರದಲ್ಲಿ ಸಮಾಧಿಮಾಡಿದರು. (ಅಮ್ಮೋನಿಯಾದ ನಯಮಾಳು ಅವನ ತಾಯಿ) ಅವನ ನಂತರ ಅವನ ಮಗ ಅಬೀಯಾಮನು ರಾಜನಾದನು.

ಯೆಹೂದದ ರಾಜನಾದ ಅಬೀಯಾಮ

15 ನೆಬಾಟನ ಮಗನಾದ ಯಾರೊಬ್ಬಾಮನು ಇಸ್ರೇಲನ್ನು ಆಳುತ್ತಿದ್ದನು. ಯಾರೊಬ್ಬಾಮನು ರಾಜನಾಗಿದ್ದ ಹದಿನೆಂಟನೆಯ ವರ್ಷದಲ್ಲಿ ಅಬೀಯಾಮನು ಯೆಹೂದದ ಹೊಸ ರಾಜನಾದನು. ಅಬೀಯಾಮನು ಮೂರು ವರ್ಷ ಜೆರುಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಮಾಕಾ. ಅವಳು ಅಬೀಷಾಲೋಮನ ಮಗಳು.

ಅವನಿಗಿಂತಲೂ ಮುಂಚೆ ಅವನ ತಂದೆಯು ಮಾಡಿದ ಪಾಪಗಳನ್ನೇ ಅವನೂ ಮಾಡಿದನು. ಅವನ ಪಿತೃವಾದ ದಾವೀದನು ತನ್ನ ದೇವರಾದ ಯೆಹೋವನಿಗೆ ನಂಬಿಗಸ್ತನಾಗಿದ್ದಂತೆ ಅಬೀಯಾಮನು ನಂಬಿಗಸ್ತನಾಗಿರಲಿಲ್ಲ. ಯೆಹೋವನು ದಾವೀದನನ್ನು ಪ್ರೀತಿಸಿದ್ದರಿಂದ ಅವನಿಗೋಸ್ಕರ ಅಬೀಯಾಮನಿಗೆ ಜೆರುಸಲೇಮಿನಲ್ಲಿ ರಾಜ್ಯವನ್ನು ದಯಪಾಲಿಸಿದನು; ಅವನಿಗೆ ಮಗನನ್ನು ಅನುಗ್ರಹಿಸಿದನು; ಜೆರುಸಲೇಮ್ ಸುರಕ್ಷಿತವಾಗಿರುವಂತೆ ಮಾಡಿದನು. ಯೆಹೋವನು ಇಚ್ಛಿಸಿದ ಕಾರ್ಯಗಳನ್ನು ದಾವೀದನು ಯಾವಾಗಲೂ ಮಾಡುತ್ತಿದ್ದನು. ಯೆಹೋವನ ಆಜ್ಞೆಗಳಿಗೆ ಅವನು ಯಾವಾಗಲೂ ವಿಧೇಯತೆಯಿಂದಿದ್ದನು. ದಾವೀದನು ಹಿತ್ತಿಯನಾದ ಊರೀಯನ ವಿಷಯದಲ್ಲಿ ಮಾತ್ರ ಯೆಹೋವನಿಗೆ ಅವಿಧೇಯನಾದನು.

ರೆಹಬ್ಬಾಮನ ಮತ್ತು ಯಾರೊಬ್ಬಾಮನ ನಡುವೆ ಯುದ್ಧವು ನಡೆಯುತ್ತಲೇ ಇರುತ್ತಿತ್ತು. ಅಬೀಯಾಮನು ಮಾಡಿದ ಇತರ ಎಲ್ಲಾ ಕಾರ್ಯಗಳ ಬಗ್ಗೆ “ಯೆಹೂದದ ರಾಜರುಗಳ ಚರಿತ್ರೆಯಲ್ಲಿ” ಬರೆದಿದೆ.

ಅಬೀಯಾಮನು ರಾಜನಾಗಿದ್ದ ಎಲ್ಲಾ ಕಾಲದಲ್ಲೂ, ಯಾರೊಬ್ಬಾಮನ ಮತ್ತು ಅಬೀಯಾಮನ ನಡುವೆ ಯುದ್ಧ ನಡೆಯುತ್ತಲೇ ಇತ್ತು. ಅಬೀಯಾಮನು ಸತ್ತಾಗ, ಅವನನ್ನು ದಾವೀದ ನಗರದಲ್ಲಿ ಸಮಾಧಿಮಾಡಿದರು. ಅಬೀಯಾಮನ ನಂತರ ಅವನ ಮಗನಾದ ಆಸನು ಹೊಸ ರಾಜನಾದನು.

ಆಸನು ಯೆಹೂದದ ರಾಜ

ಯಾರೊಬ್ಬಾಮನು ಇಸ್ರೇಲಿನ ರಾಜನಾಗಿದ್ದ ಇಪ್ಪತ್ತನೆಯ ವರ್ಷದಲ್ಲಿ ಆಸನು ಯೆಹೂದದ ರಾಜನಾದನು. 10 ಆಸನು ಜೆರುಸಲೇಮಿನಲ್ಲಿ ನಲವತ್ತೊಂದು ವರ್ಷ ಆಳಿದನು. ಅವನ ಅಜ್ಜಿಯ ಹೆಸರು ಮಾಕಾ. ಈಕೆಯು ಅಬೀಷಾಲೋಮನ ಮಗಳು.

11 ಆಸನು ತನ್ನ ಪೂರ್ವಿಕನಾದ ದಾವೀದನು ಮಾಡಿದಂತೆ, ಯೆಹೋವನು ಇಚ್ಛಿಸಿದ ಕಾರ್ಯಗಳನ್ನೇ ಮಾಡಿದನು. 12 ಆ ಕಾಲದಲ್ಲಿ, ಇತರ ದೇವರುಗಳ ಸೇವೆಗೋಸ್ಕರ ತಮ್ಮ ದೇಹಗಳನ್ನು ಲೈಂಗಿಕವಾಗಿ ಮಾರಾಟ ಮಾಡುತ್ತಿದ್ದ ಜನರು ಅಲ್ಲಿದ್ದರು. ಆ ಜನರು ದೇಶವನ್ನು ಬಿಟ್ಟುಹೋಗುವಂತೆ ಅವನು ಬಲವಂತ ಮಾಡಿದನು. ಆಸನು ತನ್ನ ಪೂರ್ವಿಕರು ನಿರ್ಮಿಸಿದ ವಿಗ್ರಹಗಳನ್ನು ನಿರ್ಮೂಲಮಾಡಿದನು. 13 ಆಸನು ತನ್ನ ಅಜ್ಜಿ ಮಾಕಳನ್ನು ರಾಣಿಯ ಪಟ್ಟದಿಂದ ಕೆಳಗಿಳಿಸಿದನು. ಮಾಕಳು ಅಶೇರ ದೇವತೆಯ ಒಂದು ಭೀಕರ ಮೂರ್ತಿಯನ್ನು ಮಾಡಿಸಿದ್ದಳು. ಅವನು ಅದನ್ನು ಕಿದ್ರೋನ್ ಕಣಿವೆಯಲ್ಲಿ ಸುಟ್ಟುಹಾಕಿದನು. 14 ಆಸನು ಎತ್ತರವಾದ ಸ್ಥಳಗಳನ್ನು ನಾಶಪಡಿಸಲಿಲ್ಲ. ಆದರೆ ಅವನು ತನ್ನ ಜೀವಮಾನವೆಲ್ಲಾ ಯೆಹೋವನಿಗೆ ನಂಬಿಗಸ್ಥನಾಗಿದ್ದನು. 15 ಇದಲ್ಲದೆ ತಾನು ಮತ್ತು ತನ್ನ ತಂದೆಯು ಮೀಸಲಾಗಿಟ್ಟಿದ್ದ ಬೆಳ್ಳಿಬಂಗಾರವನ್ನೂ ಪಾತ್ರೆಗಳನ್ನೂ ದೇವಾಲಯದಲ್ಲಿಟ್ಟನು.

16 ರಾಜನಾದ ಆಸನು ಯೆಹೂದದ ಅರಸನಾಗಿದ್ದ ಕಾಲದಲ್ಲಿ ಅವನಿಗೆ ಮತ್ತು ಇಸ್ರೇಲಿನ ರಾಜನಾದ ಬಾಷನಿಗೆ ಯಾವಾಗಲೂ ಯುದ್ಧ ನಡೆಯುತ್ತಿತ್ತು. 17 ಯೆಹೂದದ ವಿರುದ್ಧವಾಗಿ ಬಾಷನು ಹೋರಾಡಿದನು. ಆಸನ ದೇಶವಾದ ಯೆಹೂದದಿಂದ ಜನರು ಬರುವುದನ್ನೂ ಹೋಗುವುದನ್ನೂ ನಿಲ್ಲಿಸಲು ಬಾಷನು ಇಚ್ಛಿಸಿದನು. ಆದ್ದರಿಂದ ಅವನು ರಾಮ ನಗರವನ್ನು ಬಲಪಡಿಸಿದನು. 18 ಆದ್ದರಿಂದ ಆಸನು ಯೆಹೋವನ ಆಲಯದ ಮತ್ತು ರಾಜನ ಅರಮನೆಯ ಭಂಡಾರದಲ್ಲಿ ಉಳಿದಿದ್ದ ಎಲ್ಲಾ ಬೆಳ್ಳಿಬಂಗಾರಗಳನ್ನು ತೆಗೆದುಕೊಂಡನು. ಅವನು ತನ್ನ ಸೇವಕರಿಗೆ ಬೆಳ್ಳಿಬಂಗಾರಗಳನ್ನು ಕೊಟ್ಟು, ಅವರನ್ನು ಅರಾಮ್ಯರ ರಾಜನಾದ ಬೆನ್ಹದದನ ಬಳಿಗೆ ಕಳುಹಿಸಿದನು. (ಬೆನ್ಹದದನು ಟಬ್ರಿಮ್ಮೋನನ ಮಗ. ಟಬ್ರಿಮ್ಮೋನನು ಹಜ್ಯೋನನ ಮಗ.) ದಮಸ್ಕ ನಗರವು ಅವನ ರಾಜಧಾನಿಯಾಗಿತ್ತು. 19 ಆಸನು ಈ ಸಂದೇಶವನ್ನು ಕಳುಹಿಸಿದನು: “ನನ್ನ ತಂದೆಯೂ ನಿನ್ನ ತಂದೆಯೂ ಶಾಂತಿಒಪ್ಪಂದವನ್ನು ಮಾಡಿಕೊಂಡಿದ್ದರು. ಈಗ ನಾನು ನಿನ್ನೊಂದಿಗೆ ಶಾಂತಿ ಒಪ್ಪಂದವನ್ನು ಮಾಡಿಕೊಳ್ಳಲು ಅಪೇಕ್ಷಿಸಿದ್ದೇನೆ. ನಾನು ನಿನಗೆ ಬೆಳ್ಳಿಬಂಗಾರಗಳನ್ನು ಕಾಣಿಕೆಯಾಗಿ ಕಳುಹಿಸುತ್ತಿದ್ದೇನೆ. ಇಸ್ರೇಲಿನ ರಾಜನಾದ ಬಾಷನೊಂದಿಗೆ ನಿನಗಿರುವ ಒಪ್ಪಂದವನ್ನು ಮುರಿದುಬಿಡು. ಆಗ ಬಾಷನು ನನ್ನ ದೇಶವನ್ನು ಬಿಟ್ಟುಹೋಗುತ್ತಾನೆ.”

20 ರಾಜನಾದ ಬೆನ್ಹದದನು ರಾಜನಾದ ಆಸನ ಜೊತೆ ಒಪ್ಪಂದ ಮಾಡಿಕೊಂಡನು. ಆದ್ದರಿಂದ ಅವನು ತನ್ನ ಸೈನ್ಯವನ್ನು ಇಸ್ರೇಲಿನ ಪಟ್ಟಣಗಳ ವಿರುದ್ದ ಹೋರಾಡಲು ಕಳುಹಿಸಿದನು. ಬೆನ್ಹದದನು ಇಯ್ಯೋನ್, ದಾನ್, ಅಬೇಲ್ಬೇತ್ಮಾಕಾ ಪಟ್ಟಣಗಳನ್ನು ಮತ್ತು ಗಲಿಲಾಯ ಸರೋವರದ ಸುತ್ತಲಿನ ಎಲ್ಲಾ ಪಟ್ಟಣಗಳನ್ನು ಸೋಲಿಸಿದನು. ಅವನು ನಫ್ತಾಲಿ ಪ್ರದೇಶವನ್ನೆಲ್ಲ ಸೋಲಿಸಿದನು. 21 ಈ ಆಕ್ರಮಣದ ಸುದ್ದಿಯು ಬಾಷನಿಗೆ ತಿಳಿಯಿತು. ಆದ್ದರಿಂದ ಅವನು ರಾಮ ನಗರವನ್ನು ಬಲಪಡಿಸಲು ತಾನು ಕೈಗೊಂಡಿದ್ದ ಕೆಲಸವನ್ನು ನಿಲ್ಲಿಸಿದನು. ಅವನು ಆ ಪಟ್ಟಣದಿಂದ ತಿರ್ಚಕ್ಕೆ ಹಿಂದಿರುಗಿದನು. 22 ಆಗ ರಾಜನಾದ ಆಸನು ಯೆಹೂದದ ಜನರಿಗೆಲ್ಲ ಒಂದು ಆಜ್ಞೆಯನ್ನು ಮಾಡಿದನು. ಆದ್ದರಿಂದ ಪ್ರತಿಯೊಬ್ಬ ವ್ಯಕ್ತಿಯೂ ಸಹಾಯಮಾಡಬೇಕಾಯಿತು. ಬಾಷನು ರಾಮ ನಗರವನ್ನು ಬಲಪಡಿಸಲೆಂದು ಉಪಯೋಗಿಸುತ್ತಿದ್ದ ಎಲ್ಲಾ ಕಲ್ಲುಗಳನ್ನು ಮತ್ತು ಮರಗಳನ್ನು ಅವರು ರಾಮಕ್ಕೆ ಹೋಗಿ ತೆಗೆದುಕೊಂಡು ಬಂದರು. ಅವರು ಆ ವಸ್ತುಗಳನ್ನು ಬೆನ್ಯಾಮೀನ್ ದೇಶದ ಗೆಬಕ್ಕೆ ಮತ್ತು ಮಿಚ್ಛೆಗಳಿಗೆ ತೆಗೆದುಕೊಂಡು ಹೋದರು. ನಂತರ ರಾಜನಾದ ಆಸನು ಆ ಪಟ್ಟಣಗಳನ್ನು ಮತ್ತಷ್ಟು ಬಲಪಡಿಸಿದನು.

23 ಆಸನು ಮಾಡಿದ ಮಹಾಕಾರ್ಯಗಳನ್ನೂ ಅವನು ಕಟ್ಟಿಸಿದ ನಗರಗಳನ್ನೂ ಮತ್ತು ಅವನನ್ನು ಕುರಿತ ಇತರ ಸಂಗತಿಗಳನ್ನೂ “ಯೆಹೂದದ ರಾಜರುಗಳ ಚರಿತ್ರೆ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಆಸನಿಗೆ ವಯಸ್ಸಾದಾಗ, ಅವನ ಕಾಲುಗಳಿಗೆ ರೋಗವಾಗಿತ್ತು. 24 ಆಸನು ಸತ್ತುಹೋದನು. ಅವನನ್ನು ಅವನ ಪೂರ್ವಿಕನಾದ ದಾವೀದ ನಗರದಲ್ಲಿ ಸಮಾಧಿಮಾಡಿದರು. ಆಸನ ಮಗನಾದ ಯೆಹೋಷಾಫಾಟನು ಅವನ ನಂತರ ಹೊಸ ರಾಜನಾದನು.

ನಾದಾಬ ಇಸ್ರೇಲಿನ ರಾಜ

25 ಆಸನು ಯೆಹೂದದ ರಾಜನಾಗಿದ್ದ ಎರಡನೆಯ ವರ್ಷದಲ್ಲಿ, ಯಾರೊಬ್ಬಾಮನ ಮಗನಾದ ನಾದಾಬನು ಇಸ್ರೇಲಿನ ರಾಜನಾದನು. ನಾದಾಬನು ಇಸ್ರೇಲನ್ನು ಎರಡು ವರ್ಷ ಆಳಿದನು. 26 ನಾದಾಬನು ಯೆಹೋವನ ವಿರುದ್ಧ ಕೆಟ್ಟಕಾರ್ಯಗಳನ್ನು ಮಾಡಿದನು. ತನ್ನ ತಂದೆಯಾದ ಯಾರೊಬ್ಬಾಮನು ಮಾಡಿದ ಪಾಪಗಳನ್ನೇ ಅವನೂ ಮಾಡಿದನು. ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು.

27 ಬಾಷನು ಅಹೀಯನ ಮಗ. ಅವನು ಇಸ್ಸಾಕಾರನ ಕುಲದವನಾಗಿದ್ದನು. ರಾಜನಾದ ನಾದಾಬನನ್ನು ಕೊಲ್ಲಲು ಬಾಷನು ಸಂಚು ಮಾಡಿದನು. ನಾದಾಬನು ಇಸ್ರೇಲರೊಡನೆ ಗಿಬ್ಬೆತೋನ್ ಪಟ್ಟಣದ ವಿರುದ್ಧ ಹೋರಾಟ ಮಾಡುತ್ತಿದ್ದ ಸಂದರ್ಭವಿದು. ಇದು ಫಿಲಿಷ್ಟಿಯ ಪಟ್ಟಣ. ಆ ಸ್ಥಳದಲ್ಲಿ ಬಾಷನು ನಾದಾಬನನ್ನು ಕೊಂದುಹಾಕಿದನು. 28 ಆಸನು ಯೆಹೂದದ ರಾಜನಾಗಿದ್ದ ಮೂರನೆಯ ವರ್ಷದಲ್ಲಿ ಇದು ಸಂಭವಿಸಿತು. ಅನಂತರ ಬಾಷನು ಇಸ್ರೇಲಿಗೆ ರಾಜನಾದನು.

ಇಸ್ರೇಲಿನ ರಾಜನಾದ ಬಾಷನು

29 ಬಾಷನು ಹೊಸರಾಜನಾದ ಸಮಯದಲ್ಲಿ ಅವನು ಯಾರೊಬ್ಬಾಮನ ವಂಶದಲ್ಲಿ ಎಲ್ಲರನ್ನೂ ಕೊಂದುಹಾಕಿದನು. ಯಾರೊಬ್ಬಾಮನ ವಂಶದಲ್ಲಿ ಯಾರೂ ಜೀವಸಹಿತ ಉಳಿಯಲು ಬಾಷನು ಬಿಡಲಿಲ್ಲ. ಯೆಹೋವನು ಹೇಳಿದ್ದಂತೆಯೇ ಇದು ಸಂಭವಿಸಿತು. ಯೆಹೋವನು ತನ್ನ ಸೇವಕನಾದ ಶೀಲೋವಿನ ಅಹೀಯನ ಮೂಲಕ ಇದನ್ನು ಹೇಳಿದ್ದನು. 30 ರಾಜನಾದ ಯಾರೊಬ್ಬಾಮನು ಅನೇಕ ಪಾಪಗಳನ್ನು ಮಾಡಿದ್ದರಿಂದ ಇದು ಸಂಭವಿಸಿತು. ಇಸ್ರೇಲಿನ ಜನರು ಅನೇಕ ಪಾಪಗಳನ್ನು ಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು. ಇಸ್ರೇಲಿನ ದೇವರಾದ ಯೆಹೋವನು ಹೆಚ್ಚು ಕೋಪಗೊಳ್ಳುವಂತೆ ಯಾರೊಬ್ಬಾಮನು ಮಾಡಿದ್ದನು.

31 ನಾದಾಬನು ಮಾಡಿದ ಇತರ ಕಾರ್ಯಗಳ ಬಗ್ಗೆ, “ಇಸ್ರೇಲಿನ ರಾಜರುಗಳ ಇತಿಹಾಸ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. 32 ಬಾಷನು ಇಸ್ರೇಲನ್ನು ಆಳುತ್ತಿದ್ದ ಕಾಲದಲ್ಲೆಲ್ಲಾ, ಯೆಹೂದದ ರಾಜನಾದ ಆಸನ ವಿರುದ್ಧವಾಗಿ ಯುದ್ಧ ಮಾಡುತ್ತಲೇ ಇದ್ದನು.

33 ಆಸನು ಯೆಹೂದದ ರಾಜನಾದ ಮೂರನೆಯ ವರ್ಷದಲ್ಲಿ, ಅಹೀಯನ ಮಗನಾದ ಬಾಷನು ಇಡೀ ಇಸ್ರೇಲಿಗೆ ರಾಜನಾದನು. ಅವನ ರಾಜಧಾನಿಯಾದ ತಿರ್ಚದಲ್ಲಿ, ಅವನು ಇಪ್ಪತ್ತನಾಲ್ಕು ವರ್ಷ ಆಳಿದನು. 34 ಯೆಹೋವನು ತಪ್ಪೆಂದು ಹೇಳಿದ ಕಾರ್ಯಗಳನ್ನು ಬಾಷನು ಮಾಡಿದನು. ತನಗಿಂತ ಮುಂಚೆ ಆಳಿದ ಇಸ್ರೇಲಿನ ರಾಜನಾದ ಯಾರೊಬ್ಬಾಮನು ಮಾಡಿದ ಪಾಪಗಳನ್ನೇ ಅವನು ಮಾಡಿದನು. ಇಸ್ರೇಲಿನ ಜನರು ಪಾಪಮಾಡುವಂತೆ ಯಾರೊಬ್ಬಾಮನು ಪ್ರೇರೇಪಿಸಿದ್ದನು.

ಲೂಕ 22:31-46

ನಿಮ್ಮ ನಂಬಿಕೆಯನ್ನು ಕಳೆದುಕೊಳ್ಳಬೇಡಿರಿ!

(ಮತ್ತಾಯ 26:31-35; ಮಾರ್ಕ 14:27-31; ಯೋಹಾನ 13:36-38)

31 “ಒಬ್ಬ ರೈತನು ತನ್ನ ಗೋಧಿಯನ್ನು ತೂರುವಂತೆ ಸೈತಾನನು ನಿಮ್ಮನ್ನು ಶೋಧಿಸಲು ಕೇಳಿಕೊಂಡನು. ಸೀಮೋನನೇ, ಸೀಮೋನನೇ (ಪೇತ್ರ) 32 ನಿನ್ನ ನಂಬಿಕೆಯು ಕುಂದಿಹೋಗಬಾರದೆಂದು ನಾನು ಪ್ರಾರ್ಥಿಸಿದೆನು! ನೀನು ಪರಿವರ್ತನೆಗೊಂಡ ನಂತರ ನಿನ್ನ ಸಹೋದರರನ್ನು ಬಲಪಡಿಸು” ಎಂದು ಹೇಳಿದನು.

33 ಅದಕ್ಕೆ ಪೇತ್ರನು ಯೇಸುವಿಗೆ, “ಪ್ರಭುವೇ, ನಿನ್ನ ಸಂಗಡ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ನಾನು ಸಿದ್ಧನಾಗಿದ್ದೇನೆ” ಎಂದು ಹೇಳಿದನು.

34 ಅದಕ್ಕೆ ಯೇಸು, “ಪೇತ್ರನೇ, ನಾಳೆ ಬೆಳಿಗ್ಗೆ ಕೋಳಿ ಕೂಗುವ ಮೊದಲು ನನ್ನನ್ನು ಅರಿಯೆನೆಂದು ನೀನು ಮೂರು ಸಾರಿ ಹೇಳುವೆ!” ಅಂದನು.

ಕಷ್ಟವನ್ನು ಎದುರಿಸಲು ಸಿದ್ಧರಾಗಿರಿ

35 ಬಳಿಕ ಯೇಸು ಅಪೊಸ್ತಲರಿಗೆ, “ಜನರಿಗೆ ಬೋಧಿಸುವುದಕ್ಕೆ ನಾನು ನಿಮ್ಮನ್ನು ಹಣವಿಲ್ಲದೆ, ಚೀಲವಿಲ್ಲದೆ ಮತ್ತು ಪಾದರಕ್ಷೆಗಳಿಲ್ಲದೆ ಕಳುಹಿಸಿದೆನು. ಆದರೆ ನಿಮಗೆ ಏನಾದರೂ ಕೊರತೆ ಆಯಿತೇ?” ಎಂದು ಕೇಳಿದನು.

ಅಪೊಸ್ತಲರು, “ಇಲ್ಲ” ಅಂದರು.

36 ಯೇಸು ಅವರಿಗೆ, “ಆದರೆ ಈಗ ನಿಮ್ಮಲ್ಲಿ ಹಣವಾಗಲಿ ಚೀಲವಾಗಲಿ ಇದ್ದರೆ ಅದನ್ನು ತೆಗೆದುಕೊಂಡು ಹೋಗಿರಿ. ನಿಮ್ಮಲ್ಲಿ ಖಡ್ಗವಿಲ್ಲದಿದ್ದರೆ, ನಿಮ್ಮ ಮೇಲಂಗಿಯನ್ನು ಮಾರಿ ಒಂದು ಖಡ್ಗವನ್ನು ಕೊಂಡುಕೊಳ್ಳಿರಿ.

37 ‘ಆತನು ಅಪರಾಧಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು’(A)

ಎಂದು ಪವಿತ್ರ ಗ್ರಂಥದಲ್ಲಿ ಬರೆದಿದೆ. ನನ್ನ ಬಗ್ಗೆ ಬರೆಯಲ್ಪಟ್ಟಿರುವ ಈ ಮಾತು ನೆರವೇರಬೇಕಾಗಿದೆ ಮತ್ತು ಈಗ ನೆರವೇರುತ್ತಿದೆ” ಎಂದು ಹೇಳಿದನು.

38 ಶಿಷ್ಯರು, “ಪ್ರಭುವೇ, ಇಲ್ಲಿ ನೋಡು, ಎರಡು ಖಡ್ಗಗಳಿವೆ” ಎಂದು ಹೇಳಿದರು.

ಯೇಸು “ಅಷ್ಟು ಸಾಕು” ಅಂದನು.

ಅಪೊಸ್ತಲರ ಪ್ರಾರ್ಥನೆಯ ಅಗತ್ಯತೆ

(ಮತ್ತಾಯ 26:36-46; ಮಾರ್ಕ 14:32-42)

39 ಯೇಸು ಪಟ್ಟಣದಿಂದ (ಜೆರುಸಲೇಮ್) ಆಲಿವ್ ಮರಗಳ ಗುಡ್ಡಕ್ಕೆ ಹೋದನು. 40 ಆತನ ಶಿಷ್ಯರೂ ಆತನೊಡನೆ ಹೋದರು. (ಯೇಸು ಆಗಾಗ್ಗೆ ಅಲ್ಲಿಗೆ ಹೋಗುತ್ತಿದ್ದನು.) ಯೇಸು ತನ್ನ ಶಿಷ್ಯರಿಗೆ, “ನೀವು ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.

41 ಬಳಿಕ ಯೇಸು ಅವರಿಂದ ಸುಮಾರು ನೂರೈವತ್ತು ಅಡಿ ದೂರ ಹೋದನು. ಆತನು ಮೊಣಕಾಲೂರಿ, 42 “ತಂದೆಯೇ, ನಿನಗೆ ಇಷ್ಟವಿದ್ದರೆ, ಈ ಶ್ರಮೆಯ ಪಾತ್ರೆಯನ್ನು ನನ್ನಿಂದ ತೊಲಗಿಸು. ಆದರೆ ನನ್ನ ಇಷ್ಟದಂತಾಗದೆ ನಿನ್ನ ಇಷ್ಟದಂತೆಯೇ ಮಾಡು” ಎಂದು ಪ್ರಾರ್ಥಿಸಿದನು. 43 ಆಗ ಪರಲೋಕದಿಂದ ಒಬ್ಬ ದೇವದೂತನು ಕಾಣಿಸಿಕೊಂಡನು. ಯೇಸುವನ್ನು ಬಲಪಡಿಸುವುದಕ್ಕಾಗಿ ಈ ದೇವದೂತನನ್ನು ಕಳುಹಿಸಲಾಗಿತ್ತು. 44 ಯೇಸುವಿಗೆ ತುಂಬಾ ವೇದನೆಯಿತ್ತು. ಆತನು ಪ್ರಾರ್ಥನೆಯಲ್ಲಿ ಕಷ್ಟಪಟ್ಟು ಹೋರಾಡಿದನು. ಆತನ ಮುಖದಲ್ಲಿ ಬೆವರು ರಕ್ತದೋಪಾದಿಯಲ್ಲಿ ತೊಟ್ಟಿಕ್ಕತೊಡಗಿತು. 45 ಯೇಸು ಪ್ರಾರ್ಥಿಸಿದ ಮೇಲೆ ತನ್ನ ಶಿಷ್ಯರ ಬಳಿ ಹೋದನು. ಅವರು ನಿದ್ರೆ ಮಾಡುತ್ತಿದ್ದರು. (ಅವರು ದುಃಖದಿಂದ ಆಯಾಸಗೊಂಡಿದ್ದರು.) 46 ಯೇಸು ಅವರಿಗೆ, “ನೀವು ಏಕೆ ನಿದ್ರಿಸುತ್ತಿದ್ದೀರಿ? ಎದ್ದೇಳಿರಿ! ಶೋಧನೆಗೆ ಒಳಗಾಗದಂತೆ ಪ್ರಾರ್ಥಿಸಿರಿ” ಎಂದು ಹೇಳಿದನು.

Kannada Holy Bible: Easy-to-Read Version (KERV)

Kannada Holy Bible: Easy-to-Read Version. All rights reserved. © 1997 Bible League International